ಬೆಂಗಳೂರು; ಕೋವಿಡ್-19 ನಿರ್ವಹಣೆಗಾಗಿ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳು ಮತ್ತು ಸೋಂಕನ್ನು ತಡೆಗಟ್ಟುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಬಲವಾಗಿ ಆರೋಪಿಸುತ್ತಿರುವ ಬೆನ್ನಲ್ಲೇ ಮುಂಗಾರು ಅಧಿವೇಶನ ನಡೆಸುವ ಸಂಬಂಧ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸಭೆ ಸಚಿವಾಲಯದ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ್ದಾರೆ. ಈ ಕುರಿತು ಸಿದ್ಧತೆ ನಡೆಸಲು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ ಅಧಿವೇಶನ ನಡೆಸುವುದು ಸೂಕ್ತವೇ ಎಂಬ ಬಗ್ಗೆ ವಿಧಾನಸಭೆ ಸಚಿವಾಲಯದ ಅಧಿಕಾರಿಗಳು ಜಿಜ್ಞಾಸೆಯಲ್ಲಿ ಮುಳುಗಿದ್ದಾರೆ. ಅಲ್ಲದೆ ಅಧಿವೇಶನ ನಡೆಯುವ ಜಾಗದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ವಿಚಾರ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಿಮಿಸಿದೆ.
ಹೊರಾಂಗಣವೋ…ಒಳಾಂಗಣವೋ…
ವಿಧಾನಸೌಧದ ಮೊದಲ ಮಹಡಿಯಲ್ಲಿರುವ ವಿಧಾನಸಭೆಯಲ್ಲಿ ಅಧಿವೇಶನ ನಡೆಸಿದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟಕರ. ಹೀಗಾಗಿ ವಿಧಾನಸೌಧದಲ್ಲಿ ಅಧಿವೇಶನ ನಡೆಸುವ ಬದಲು ವಿಧಾನಸೌಧದಿಂದ ಹೊರಗೆ ಅಧಿವೇಶನ ನಡೆಸಲು ಹಲವು ಅಧಿಕಾರಿಗಳು ಒಲವು ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ವಿಧಾನಸಭೆ ಸಚಿವಾಲಯದ ಅಧಿಕಾರಿಗಳು ಈಗಾಗಲೇ ಬೆಂಗಳೂರಿನ ಮುಖ್ಯ ಅರಮನೆ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಸಭಾಂಗಣ, ಕೃಷಿ ಮೇಳ, ವಸ್ತು ಪ್ರದರ್ಶನ ನಡೆಯುವ ಜಾಗ, ಜ್ಞಾನಭಾರತಿಯಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯ ಸೇರಿದಂತೆ ಇನ್ನಿತರೆಡೆ ಸ್ಥಳ ತಪಾಸಣೆ ನಡೆಸಿ ಸೂಕ್ತ ಜಾಗವನ್ನು ಗುರುತಿಸಿದ್ದಾರೆ ಎಂದು ಗೊತ್ತಾಗಿದೆ. ಆದರೆ ಯಾವ ಸ್ಥಳದಲ್ಲಿ ಅಧಿವೇಶನ ನಡೆಸಬೇಕು ಎಂಬ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ಗೊತ್ತಾಗಿದೆ.
ಸೆಪ್ಟಂಬರ್ ಅಂತ್ಯದೊಳಗೆ ಅಧಿವೇಶನ ನಡೆಸಬೇಕು ಎಂದು ಸ್ಪೀಕರ್ ಕಾಗೇರಿ ಅವರು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಈಗಾಗಲೇ ಕೋವಿಡ್ ಪಾಸಿಟಿವ್ ದೃಢಪಟ್ಟಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಗೊಂಡ ನಂತರ ಅಧಿವೇಶನ ನಡೆಸುವ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಬಹುದು ಎನ್ನಲಾಗಿದೆ.
ಇನ್ನು, ಹೊರಾಂಗಣದಲ್ಲಿ ಅಧಿವೇಶನ ನಡೆಸುವ ಬಗ್ಗೆ ಸಚಿವಾಲಯದ ಅಧಿಕಾರಿಗಳಲ್ಲೂ ಒಮ್ಮತ ಮೂಡಿಲ್ಲ. ಹಲವು ಅಧಿಕಾರಿಗಳು ವಿಧಾನಸೌಧದ ಮೊದಲ ಮಹಡಿಯಲ್ಲಿರುವ ವಿಧಾನಸಭೆಯಲ್ಲಿ ಅಧಿವೇಶನ ನಡೆಯುವ ಜಾಗ, ಪ್ರೇಕ್ಷಕರ ಗ್ಯಾಲರಿ, ಅಧಿಕಾರಿಗಳ ಗ್ಯಾಲರಿಯಲ್ಲಿ ಆಸನ ವ್ಯವಸ್ಥೆ ಮಾಡುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳಬಹುದು ಎಂದು ಅಭಿಪ್ರಾಯ ನೀಡಿದ್ದರೆ, ಕೆಲ ಅಧಿಕಾರಿಗಳು ವಿಧಾನಸಭೆ ಅಧಿವೇಶನ ನಡೆಯುವ ಜಾಗದಲ್ಲಿ 300 ಆಸನಗಳು ಮಾತ್ರ ಇರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗದು. ಹೀಗಾಗಿ ಹೊರಾಂಗಣದಲ್ಲಿ ಅಧಿವೇಶನ ನಡೆಸುವುದು ಸೂಕ್ತ ಎಂಬ ಅಭಿಪ್ರಾಯ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಅದೇ ರೀತಿ ವಿಧಾನಸಭೆ ಅಧಿವೇಶನವನ್ನು ಹೊರಾಂಗಣದಲ್ಲಿ ನಡೆಸಿ, ವಿಧಾನಪರಿಷತ್ತಿನ ಅಧಿವೇಶನವನ್ನು ವಿಧಾನಸಭೆ ನಡೆಯುವ ಜಾಗದಲ್ಲಿ ನಡೆಸಬಹುದು. ವಿಧಾನಪರಿಷತ್ತಿನಲ್ಲಿ 75 ಮಂದಿ ಸದಸ್ಯರಿರುವ ಕಾರಣ, 300 ಆಸನಗಳು ಇರುವ ವಿಧಾನಸಭೆಯಲ್ಲೇ ಅಧಿವೇಶನ ನಡೆಸಬಹುದು ಎಂಬ ಸಲಹೆಯನ್ನೂ ಅಧಿಕಾರಿಗಳು ನೀಡಿದ್ದಾರೆ ಎಂದು ಗೊತ್ತಾಗಿದೆ.
ಹೊರಾಂಗಣದಲ್ಲಿ ಅಧಿವೇಶನ ನಡೆಸಿದರೆ ದುಂದು ವೆಚ್ಚಕ್ಕೆ ದಾರಿಯಾಗಲಿದೆ ಎಂದೂ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿನ ಸುವರ್ಣ ವಿಧಾನಸೌಧದಲ್ಲಿ ಈ ಹಿಂದೆ ಅಧಿವೇಶನ ನಡೆದಿದ್ದ ಸಂದರ್ಭದಲ್ಲಿ ದುಂದು ವೆಚ್ಚವಾಗಿತ್ತು ಎಂಬ ಆರೋಪಗಳು ಕೇಳಿ ಬಂದಿತ್ತು. ಅಲ್ಲದೆ, ತಾತ್ಕಾಲಿಕ ಶೌಚಾಲಯ ಸೇರಿದಂತೆ ಇನ್ನಿತರೆ ಮೂಲ ಸೌಕರ್ಯಗಳ ಹೆಸರಿನಲ್ಲಿ ಅಕ್ರಮಗಳು ನಡೆದಿದ್ದವು.
ವಿಧಾನ ಮಂಡಲದ ಅಧಿವೇಶನಕ್ಕೆ ಒಂದು ದಿನಕ್ಕೆ 1.5 ಕೋಟಿ ರೂ. ಅಂದಾಜು ವೆಚ್ಚವಾಗುತ್ತದೆ. 2018 ರ ಡಿಸೆಂಬರ್ 19 ರಿಂದ 22ರವರೆಗೆ ಬೆಳಗಾವಿಯಲ್ಲಿ ನಡೆದಿದ್ದ ಚಳಿಗಾಲದ ಅಧಿವೇಶನಕ್ಕೆ ಸರ್ಕಾರ 13.85 ಕೋಟಿ ಖರ್ಚಾಗಿತ್ತು. ಬೆಂಗಳೂರಿನಲ್ಲಿ 10 ದಿನಗಳ ವಿಧಾನಸಭೆ ಅಧಿವೇಶನ ನಡೆಸಲು ದಿನಕ್ಕೆ 55 ಲಕ್ಷದಿಂದ 60 ಲಕ್ಷ ರೂ.ಖರ್ಚು ತಗಲುತ್ತದೆ.
ಅದೇ ರೀತಿ ಬೆಳಗಾವಿ ನಗರದಲ್ಲಿರುವ 67 ಹೋಟೆಲ್ ಐಷಾರಾಮಿ ಹೋಟೆಲ್‌ಗಳಲ್ಲಿ ಶಾಸಕರ ವಾಸ್ತವ್ಯಕ್ಕೆ 4.42 ಕೋಟಿ ವೆಚ್ಚವಾಗಿತ್ತು. ಪ್ರತಿ ಒಂದು ಗಂಟೆ ಅಧಿವೇಶನಕ್ಕೆ ಸರ್ಕಾರ 3.37 ಲಕ್ಷ ಹಣ ಖರ್ಚು ಮಾಡಿತ್ತು. ಅಲ್ಲದೆ ವರ್ಷದಿಂದ ವರ್ಷಕ್ಕೆ ಅಧಿವೇಶನದ ವೆಚ್ಚ ಹೆಚ್ಚಾಗುತ್ತಲೇ ಇದೆ. 2013ರಲ್ಲಿ ಸುಮಾರು 8 ಕೋಟಿ, 2014 ರಲ್ಲಿ 14 ಕೋಟಿ, 2015ರಲ್ಲಿ 13 ಕೋಟಿ, 2016ರ ಡಿಸೆಂಬರ್‌ನಲ್ಲಿ 16.00 ಕೋಟಿ (10 ದಿನ) 2017ರಲ್ಲಿ ಸುಮಾರು 31 ಕೋಟಿ ವೆಚ್ಚವಾಗಿತ್ತು.