ಪ್ರವಾಹ; ಕೇಂದ್ರದಿಂದ ಪರಿಹಾರ ಮೊತ್ತ ಇಳಿಕೆ, ರಾಜ್ಯ ಸರ್ಕಾರದ ಮೇಲೆ ಹೆಚ್ಚುವರಿ ದರದ ಹೊರೆ

ಬೆಂಗಳೂರು; ರಾಜ್ಯದ ಹಲವೆಡೆ ಆಗಸ್ಟ್‌ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಇದರ ಬೆನ್ನಲ್ಲೇ ಪ್ರವಾಹದಿಂದ ಉಂಟಾದ ಮನೆಹಾನಿ ಪ್ರಕರಣಗಳಿಗೆ ನೀಡುತ್ತಿದ್ದ ಪರಿಹಾರ ಮೊತ್ತದಲ್ಲಿ ಕೇಂದ್ರ ಸರ್ಕಾರವು ಪ್ರಸಕ್ತ ಸಾಲಿನಿಂದಲೇ ಗಣನೀಯವಾಗಿ ಇಳಿಕೆ ಮಾಡಿರುವುದು ಇದೀಗ ಬಹಿರಂಗವಾಗಿದೆ.

ಕಳೆದ ಸಾಲಿನಲ್ಲಿ ಸಂಭವಿಸಿದ ಪ್ರವಾಹದಿಂದ ಸಂಪೂರ್ಣ ಮನೆ ಹಾನಿ, ಭಾಗಶಃ ಮನೆಹಾನಿ, ಅಲ್ಪಸ್ವಲ್ಪ ಮನೆಹಾನಿಗೆ ನೀಡುತ್ತಿದ್ದ ಪರಿಹಾರ ಮೊತ್ತವವನ್ನು ಕಡಿತಗೊಳಿಸಿರುವ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಮೇಲೆ ಇನ್ನಷ್ಟು ಹೊರೆ ಹೊರಿಸಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್‌ ಅಧ್ಯಕ್ಷತೆಯಲ್ಲಿ 2020ರ ಜುಲೈ 27ರಂದು ನಡೆದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪರಿಹಾರ ಮೊತ್ತ ಇಳಿಕೆಯಾಗಿರುವ ಸಂಗತಿ ಬಯಲಾಗಿದೆ.
‘ಪ್ರಸಕ್ತ ಸಾಲಿನ ಪ್ರವಾಹದಿಂದ ಉಂಟಾದ ಮನೆಹಾನಿ ಪ್ರಕರಣಗಳಿಗೆ ಕೇಂದ್ರ ಸರ್ಕಾರದ ಎಸ್‌ಡಿಆರ್‌ಎಫ್‌/ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಂತೆ ಪೂರ್ಣ/ಭಾಗಶಃ ಮನೆಹಾನಿಗೆ 95,100 ರು., ಹಾಗೂ ಅಲ್ಪಸ್ವಲ್ಪ ಮನೆಹಾನಿಗೆ 5,200 ರು. ದರದಲ್ಲಿ ಪರಿಹಾರ ಪಾವತಿಸಬೇಕಾಗಿದೆ. ಹಾಗೆಯೇ ಮಾರ್ಗಸೂಚಿಗಿಂತ ಹೆಚ್ಚುವರಿ ದರವನ್ನು ರಾಜ್ಯ ಸರ್ಕಾರದಿಂದ ಭರಿಸಬೇಕು,’ ಎಂದು ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯ ವಿಪತ್ತು ಪ್ರಾಧಿಕಾರದ ಆಯುಕ್ತರು ಮಾಹಿತಿ ಒದಗಿಸಿರುವುದು ಸಭೆಯ ನಡವಳಿಯಿಂದ ತಿಳಿದು ಬಂದಿದೆ.

ಕಳೆದ ಸಾಲಿನಂತೆ ಹೆಚ್ಚುವರಿ ದರದಲ್ಲಿ ಮನೆಹಾನಿ ಪರಿಹಾರ ಪಾವತಿಸುವ ಕುರಿತು ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರ ಅನುಮೋದನೆ ಪಡೆಯಲು ರಾಜ್ಯ ಕಾರ್ಯಕಾರಿ ಸಮಿತಿ ತೀರ್ಮಾನಿಸಿತ್ತು.

ಕಳೆದ ಸಾಲಿನಲ್ಲಿ ಸಂಭವಿಸಿದ್ದ ಪ್ರವಾಹದಿಂದ ಸಂಪೂರ್ಣ ಮನೆಹಾನಿಗೆ 5.00 ಲಕ್ಷ ರು., ಭಾಗಶಃ ಮನೆಹಾನಿಗೆ 3.00 ಲಕ್ಷ ರು., ಅಲ್ಪಸ್ವಲ್ಪ ಮನೆಹಾನಿಗೆ 50,000 ರು.ನಂತೆ ವಿಶೇಷ ಪರಿಹಾರ ಪ್ಯಾಕೇಜ್‌ ಅಡಿ ಪರಿಹಾರ ಪಾವತಿಸಲಾಗಿತ್ತು. ಆದರೆ ಈ ಬಾರಿ ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಪ್ರಕಾರ ಈ ಮೊತ್ತದಲ್ಲಿ ಇಳಿಕೆಯಾಗಿದೆ.

ರಾಜ್ಯದಾದ್ಯಂತ ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಹಿಂದಿನ ರೀತಿಯ ಪ್ರಕಾರ ಸಂಪೂರ್ಣ ಮನೆಹಾನಿಗೆ 5.00 ಲಕ್ಷ ಪರಿಹಾರ ನೀಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರಾದರೂ ಕೇಂದ್ರ ಸರ್ಕಾರದ ಮಾರ್ಗಸೂಚಿಗಿಂತ ಹೆಚ್ಚುವರಿ ದರವನ್ನು ರಾಜ್ಯ ಸರ್ಕಾರವೇ ಭರಿಸುವುದು ಅನಿವಾರ್ಯವಾಗಿದೆ.

ಪ್ರಸಕ್ತ ಸಾಲಿನಲ್ಲಿ ಸಂಭವಿಸಿರುವ ಪ್ರವಾಹದಿಂದ 67 ಮಾನವ ಜೀವಹಾನಿ, 3,695 ಮನೆಹಾನಿ, 271 ಜಾನುವಾರ ಹಾನಿಯಾಗಿದೆ. ದಕ್ಷಿಣ ಒಳನಾಡು ಪ್ರದೇಶದಲ್ಲಿ ವಾಡಿಕೆಗಿಂತ ಶೇ.34ರಷ್ಟು ಹೆಚ್ಚು ಮಳೆಯಾಗಿದೆ. ಮಲೆನಾಡು ಪ್ರದೇಶದಲ್ಲಿ ವಾಡಿಕೆಗಿಂತ ಶೇ.33ರಷ್ಟು ಕಡಿಮೆ ಮಳೆಯಾಗಿದ್ದರೆ, ಕರಾವಳಿ ಪ್ರದೇಶದಲ್ಲಿಯೂ ವಾಡಿಕೆಗಿಂತ ಶೇ.13ರಷ್ಟು ಕಡಿಮೆ ಮಳೆಯಾಗಿದೆ. ಒಟ್ಟಾರೆಯಾಗಿ 25 ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಆಗಸ್ಟ್‌ ತಿಂಗಳಲ್ಲಿ ರಾಜ್ಯದಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದು ಗೊತ್ತಾಗಿದೆ.

ಕಳೆದ ಬಾರಿ ಮಹಾರಾಷ್ಟ್ರ ರಾಜ್ಯದ ಜಲಾಶಯಗಳಿಂದ ಹೊರಬಿಟ್ಟಿದ್ದ ನೀರಿನಿಂದಾಗಿ ಉತ್ತರ, ಹೈದರಬಾದ್‌ ಕರ್ನಾಟಕ ಸಂಪೂರ್ಣ ಮುಳುಗಿ ಹೋಗಿತ್ತು. ಹೀಗಾಗಿ ಈ ಬಾರಿ ರಾಜ್ಯದ ಅಧಿಕಾರಿಗಳು ಮಹಾರಾಷ್ಟ್ರದ ಜಲಾಶಯಗಳಿಂದ ಹೊರಬರುತ್ತಿರುವ ನೀರಿನ ಮಾಹಿತಿಯನ್ನು ಸೂಕ್ಷ್ಮವಾಗಿ ಗಮನಿಸದೇ ಇದ್ದಲ್ಲಿ ಇನ್ನಷ್ಟು ಅನಾಹುತಗಳು ಸಂಭವಿಸಬಹುದು ಎಂದು ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ತಿಳಿಸಿದರು.

ಮಹಾರಾಷ್ಟ್ರ ಮತ್ತು ಚಿಕ್ಕಮಗಳೂರಿನಲ್ಲಿ ಸತತವಾಗಿ ಮಳೆ ಸುರಿಯುತ್ತಿರುವ ಕಾರಣ ರಾಯಚೂರು ಸೇರಿದಂತೆ ಇದರ ಆಸುಪಾಸು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಬಿಗಡಾಯಿಸಲಿದೆ. ಈಗಾಗಲೇ ಕೃಷ್ಣಾ ನದಿ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಮುಂದಿನ ದಿನಗಳಲ್ಲಿ ಹೊರಹರಿವು ಹೆಚ್ಚಲಿದೆ. ಅದೇ ರೀತಿ ನಾರಾಯಣಪುರ ಜಲಾಶಯದಿಂದ ಈಗಾಗಲೇ 70 ಸಾವಿರ ಕ್ಯುಸೆಕ್‌ ಅಡಿ ಹೊರಬಿಡಲಾಗಿದೆ.

ಸದ್ಯ ಮುಂಬೈನಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆ, ಉತ್ತರ ಕರ್ನಾಟಕದ ಬಹುತೇಕ ಪ್ರದೇಶಗಳಲ್ಲಿ ಪ್ರವಾಹದ ಮಟ್ಟದಲ್ಲಿಯೂ ಭಾರೀ ಏರಿಕೆ ಆಗಬಹುದು ಎಂದು ಹೇಳಲಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿದ್ದ ವಾಹನ ಸಂಪರ್ಕ ಸೇತುವೆಗಳು ಈಗಾಗಲೇ ನೀರಿನಲ್ಲಿ ಮುಳುಗಿ ಹೋಗಿವೆ.

ಹಾಗೆಯೇ ತುಂಗಭದ್ರಾ ಬದಿಯಲ್ಲಿ ಪ್ರವಾಹ ಅರಂಭವಾಗಿದೆಯಲ್ಲದೆ ತುಂಗಭದ್ರಾ ಜಲಾಶಯದಿಂದ 8 ಸಾವಿರ ಕ್ಯುಸೆಕ್‌ ಅಡಿ ನೀರು ಹೊರಬಿಡಲಾಗುತ್ತಿದೆ. ಒಂದೂವರೆ ಲಕ್ಷ ಕ್ಯುಸೆಕ್‌ ದಾಟಿದರೆ ಸಿಂಧನೂರು, ಮಾನ್ವಿ ತಾಲೂಕಿನ ಹಲವು ಗ್ರಾಮಗಳಿಗೆ ನೀರು ನುಗ್ಗಲಿದೆ.

the fil favicon

SUPPORT THE FILE

Latest News

Related Posts