ಬೆಂಗಳೂರು: ಕೋವಿಡ್-19ರ ನಿರ್ವಹಣೆಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ಒಟ್ಟು 14 ಇಲಾಖೆಗಳು ವೈದ್ಯಕೀಯ ಪರಿಕರ ಖರೀದಿ, ಪರಿಹಾರ ಸೇರಿದಂತೆ ಇನ್ನಿತರೆ ಚಟುವಟಿಕೆಗಳಿಗೆ ಬಿಡುಗಡೆಯಾಗಿದ್ದ ಒಟ್ಟು 2,462.18 ಕೋಟಿ ರು. ಅನುದಾನದಲ್ಲಿ 2020ರ ಜುಲೈ 15ರ ಅಂತ್ಯಕ್ಕೆ ಒಟ್ಟು 2,118.02 ಕೋಟಿ ರು. ಖರ್ಚು ಮಾಡಿದೆ. ಬಿಡುಗಡೆಯಾಗಿದ್ದ ಒಟ್ಟು ಅನುದಾನವನ್ನು ಖರ್ಚು ಮಾಡಿರುವ 14 ಇಲಾಖೆಗಳಲ್ಲಿ 344.16 ಕೋಟಿ ರು.ಉಳಿದಿದೆ.
ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳು ಮತ್ತು ಕೋವಿಡ್ ಸೋಂಕಿತರಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯದಿರುವ ಕುರಿತು ಪ್ರಶ್ನಿಸಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಲೀಗಲ್ ನೋಟೀಸ್ ನೀಡಿರುವ ಹೊತ್ತಿನಲ್ಲೇ 2,118.02 ಕೋಟಿ ರು. ಖರ್ಚು ಮಾಡಿರುವ ಅಂಕಿ ಅಂಶಗಳು ಮುನ್ನೆಲೆಗೆ ಬಂದಿವೆ.
ಕೋವಿಡ್-19ರ ನಿರ್ವಹಣೆಗಾಗಿ ಮಾಡಿರುವ ಒಟ್ಟಾರೆ ಖರ್ಚಿನ ಮಾಹಿತಿ ಮತ್ತು ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿರುವ ಸಾಧನೆಗಳ ಪುಸ್ತಕದಲ್ಲಿಯೂ ಖರ್ಚಿನ ವಿವರ ನೀಡದೇ ಮುಚ್ಚಿಟ್ಟಿದೆ ಎಂಬ ಬಲವಾದ ಆರೋಪಕ್ಕೆ ರಾಜ್ಯ ಬಿಜೆಪಿ ಸರ್ಕಾರ ಗುರಿಯಾಗಿದೆ.
ಪಿಎಂ ಕೇರ್ಸ್‌ನಿಂದ ರಾಜ್ಯಕ್ಕೆ ಬಿಡುಗಡೆಯಾಗಿದ್ದ 34.80 ಕೋಟಿ ರು.ನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಈಗಾಗಲೇ 15.86 ಕೋಟಿ ರು. ಖರ್ಚು ಮಾಡಿದೆ. ಉಳಿದಂತೆ ಈಗಾಗಲೇ ಖರ್ಚಾಗಿರುವ 2,118.02 ಕೋಟಿ ರು.ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅತಿ ಹೆಚ್ಚು ಎಂದರೆ 316.43 ಕೋಟಿ ರು. ಖರ್ಚು ಮಾಡಿರುವುದು ದಾಖಲೆಯಿಂದ ತಿಳಿದು ಬಂದಿದೆ.
ಇಲಾಖಾವಾರು ಖರ್ಚಿನ ವಿವರ
ಕಂದಾಯ ಇಲಾಖೆ(ವಿಪತ್ತು ನಿರ್ವಹಣೆ)ಯು ಜಿಲ್ಲಾ ವಿಪತ್ತು ನಿಧಿಯಡಿ ಬಿಡುಗಡೆ ಮಾಡಿದ್ದ 364.20 ಕೋಟಿ ರು.ನಲ್ಲಿ ಈಗಾಗಲೇ 245.96 ಕೋಟಿ ರು. ಖರ್ಚಾಗಿದೆ. ಬಿಡುಗಡೆಯಾಗಿದ್ದ 364.20 ಕೋಟಿ ರು.ನಲ್ಲಿ ಜಿಲ್ಲಾಧಿಕಾರಿಗಳಿಗೆ 232.20 ಕೋಟಿ ರು. ಒದಗಿಸಲಾಗಿದೆ. ಇದರಲ್ಲಿ 159.19 ಕೋಟಿ ರು. ವೆಚ್ಚವಾಗಿರುವುದು ಗೊತ್ತಾಗಿದೆ.
ಅದೇ ರೀತಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜಿಲ್ಲೆಗಳಿಗೆ ಬಿಡುಗಡೆ ಮಾಡಿದ್ದ 70.00 ಕೋಟಿ ರು.ನಲ್ಲಿ 60.10 ಕೋಟಿ ರು. ಖರ್ಚಾಗಿದ್ದರೆ ಬಿಬಿಎಂಪಿಗೆ ಬಿಡುಗಡೆಯಾಗಿದ್ದ 50.00 ಕೋಟಿಯಲ್ಲಿ 20.00 ಕೋಟಿ ಖರ್ಚಾಗಿದೆ. ಇದೇ ನಿಧಿಯಡಿ ಪೊಲೀಸ್ ಇಲಾಖೆಗೆ ನೀಡಿದ್ದ 10.00 ಕೋಟಿಯಲ್ಲಿ 5.62 ಕೋಟಿ ಖರ್ಚಾಗಿದ್ದರೆ ಕಾರಾಗೃಹ ಇಲಾಖೆಗೆ ಒದಗಿಸಿದ್ದ 2.00 ಕೋಟಿಯಲ್ಲಿ 1.05 ಕೋಟಿ ಖರ್ಚಾಗಿರುವುದು ಸೇರಿದಂತೆ ಒಟ್ಟು 245.96 ಕೋಟಿ ರು. ವೆಚ್ಚ ಮಾಡಿರುವುದು ದಾಖಲೆಯಿಂದ ತಿಳಿದು ಬಂದಿದೆ.
ಮಾರ್ಗಸೂಚಿಯಂತೆ ವೆಚ್ಚ ಭರಿಸಲು ಕೇಂದ್ರ ಸರ್ಕಾರವು 295.12 ಕೋಟಿ ಬಿಡುಗಡೆ ಮಾಡಿತ್ತು. ಈ ಅನುದಾನವನ್ನು ಸಂಬಂಧಿಸಿದ ಇಲಾಖೆ/ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಅನುದಾನ ಹೊರತುಪಡಿಸಿ ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ 69.08 ಕೋಟಿ ಬಿಡುಗಡೆ ಮಾಡಿದೆ.
ವಲಸೆ ಕಾರ್ಮಿಕರ ಸ್ಥಳಾಂತರಕ್ಕೆ 15.86 ಕೋಟಿ ಖರ್ಚು
ಅದೇ ರೀತಿ ಕೋವಿಡ್-19ರ ಆಸ್ಪತ್ರೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲಾ ಖನಿಜ ನಿಧಿ(ಡಿಸ್ಟ್ರಿಕ್ ಮಿನರಲ್ ಫಂಡ್) ಅಡಿಯಲ್ಲಿ 23.97 ಕೋಟಿ ರು. ಬಿಡುಗಡೆಯಾಗಿದೆ. ಇದಲ್ಲದೆ ಕೇಂದ್ರ ಸರ್ಕಾರದಿಂದ ಪಿ ಎಂ ಕೇರ್ಸ್ ಅಡಿ ಬಿಡುಗಡೆಯಾಗಿದ್ದ 34.80 ಕೋಟಿ ರು.ಗಳನ್ನು ರೈಲ್ವೇ ಮೂಲಕ ವಲಸೆ ಕಾರ್ಮಿಕರ ಸ್ಥಳಾಂತರಕ್ಕೆ ಹಾಗೂ ಸಾರಿಗೆ ಬಸ್‌ಗಳ ಮೂಲಕ ಸ್ಥಳಾಂತರಿಸಲು ಒಟ್ಟು 15.86 ಕೋಟಿ ರು. ವೆಚ್ಚವಾಗಿದೆ.
ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯು ವೈದ್ಯಕೀಯ ಸಲಕರಣೆ ವೆಚ್ಚ/ವೈದ್ಯಕೀಯ ಸಾಮಗ್ರಿಗಳಿಗೆ ಸಂಬಂಧಿಸಿದಂತೆ ಒಟ್ಟು 316.43 ಕೋಟಿ ರು ಖರ್ಚು ಮಾಡಿದೆ. ಇದರಲ್ಲಿ ರಾಷ್ಟ್ರೀಯ ಅರೋಗ್ಯ ಅಭಿಯಾನದಡಿ 103.27 ಕೋಟಿ, ಎಸ್‌ಡಿಆರ್‌ಎಫ್ ಅಡಿ 50.00 ಕೋಟಿ, ವೈದ್ಯಕೀಯ ಸೇವೆ, ಟೆಲಿ ಮೆಡಿಸಿನ್‌ಗಾಗಿ ಎಸ್‌ಡಿಆರ್‌ಎಫ್ ಅಡಿ 20.00 ಕೋಟಿ, ಮುಖ್ಯಮಂತ್ರಿಗಳ ಪರಿಹಾರ ನಿಧಿಯಡಿ 109.10 ಕೋಟಿ, ಕೆಡಿಎಲ್‌ಡಬ್ಲ್ಯಎಸ್ ಅಡಿ 104.33 ಕೋಟಿಯೂ ಒಳಗೊಂಡಿದೆ.
ಬಿಬಿಎಂಪಿಯಿಂದ 61 ಕೋಟಿ ಖರ್ಚು
ವೈದ್ಯಕೀಯ ಪರಿಕರಗಳ ಖರೀದಿಗಾಗಿ ವೈದ್ಯಕೀಯ ಶಿಕ್ಷಣ ಇಲಾಖೆಯು 33.00 ಕೋಟಿ ರು. ಖರ್ಚು ಮಾಡಿದೆ. ಹಾಗೆಯೇ ಕೋವಿಡ್-19 ನಿರ್ಮೂಲನ ಕಾರ್ಯ ಚಟುವಟಿಕೆಗಳಿಗಾಗಿ ಸರ್ಕಾರದಿಂದ 20 ಕೋಟಿ, ಕಾರ್ಮಿಕ ಕಲ್ಯಾಣ ವಿಭಾಗದಿಂದ 0.51 ಕೋಟಿ ಬಿಡುಗಡೆ ಆಗಿದೆ. ಅಲ್ಲದೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗುವುದನ್ನು ನಿರೀಕ್ಷಿಸಿ ಪಾಲಿಕೆಯು ಈಗಾಗಲೇ 40.25 ಕೋಟಿ ವೆಚ್ಚ ಮಾಡಿರುವುದು ಸೇರಿದಂತೆ ಒಟ್ಟಾರೆಯಾಗಿ 61.03 ಕೋಟಿ ರು. ಖರ್ಚು ಮಾಡಿರುವುದು ತಿಳಿದು ಬಂದಿದೆ.
ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ವಲಸಿಗರಿಗೆ ಆಶ್ರಯ, ಕ್ವಾರಂಟೈನ್ ಕೇಂದ್ರಗಳ ನಿರ್ವಹಣೆ, ಕಾಳಜಿ ಕೇಂದ್ರ ನಿರ್ವಹಣೆ, ಪಿಪಿಇ ಕಿಟ್ ಖರೀದಿ, ಆಹಾರ ಸಾಮಗ್ರಿ ಕಿಟ್ ವಿತರಣೆ, ಕಂಟೈನ್‌ಮೆಂಟ್ ವಲಯಗಳ ನಿರ್ವಹಣೆ, ಆಹಾರ ಸಾಮಗ್ರಿ, ಹಾಲು ವಿತರಣೆ, ಔಷಧ ಸಿಂಪಡಣೆ, ಪೂರಕ ಸೇವೆಗಳಿಗಾಗಿ ಖರ್ಚು ಮಾಡಿದೆ. ಅಲ್ಲದೆ ಕಾರ್ಮಿಕ ವೆಚ್ಚ, ಸ್ಯಾನಿಟೈಸರ್, ಕ್ಲಾತ್ ಮಾಸ್ಕ್, ಕ್ವಾರಂಟೈನ್ ಕೇಂದ್ರಗಳ ಕಸ ವಿಲೇವಾರಿ, ಇಂದಿರಾ ಕ್ಯಾಂಟೀನ್ ನಿರ್ವಹಣೆಗೂ ಇದೇ ಅನುದಾನವನ್ನು ಬಿಬಿಎಂಪಿ ಬಳಕೆ ಮಾಡಿಕೊಂಡಿರುವುದು ಗೊತ್ತಾಗಿದೆ.
20.62 ಕೋಟಿ ಖರ್ಚು ಮಾಡಿದ ಸಾರಿಗೆ ಇಲಾಖೆ
ಸಾರಿಗೆ ಇಲಾಖೆಯು ಬಿಡುಗಡೆಯಾಗಿದ್ದ 20.62 ಕೋಟಿಯನ್ನು ಸಂಪೂರ್ಣವಾಗಿ ಖರ್ಚು ಮಾಡಿದೆ. ಸಾರಿಗೆ ಬಸ್ ನಿಲ್ದಾಣಗಳಲ್ಲಿ ಹಾಗೂ ಸಾರಿಗೆ ಬಸ್‌ಗಳಲ್ಲಿ ಸಾಂಕ್ರಾಮಿಕ ರೋಗ ನಿಯಂತ್ರಿಸುವ ಔಷಧ ಸಿಂಪಡಣೆಗಾಗಿ 8.35 ಕೋಟಿ ರು. ಬಿಡುಗಡೆಯಾಗಿದೆ. ವಲಸೆ ಕಾರ್ಮಿಕರನ್ನು ಸ್ಥಳಾಂತರಿಸಲು ಬಿಎಂಟಿಸಿಗೆ 3.48 ಕೋಟಿ ಹಾಗೂ ಕೆಎಸ್‌ಆರ್‌ಟಿಸಿಯಿಂದ 14.78 ಕೋಟಿ ಸೇರಿದಂತೆ ಒಟ್ಟು 18.26 ಕೋಟಿ ಖರ್ಚಾಗಿದೆ. ಇದಲ್ಲದೆ ವೈದ್ಯಕೀಯ ಸಲಕರಣೆಗಳಿಗೆ 2.36 ಕೋಟಿ ರು.ವೆಚ್ಚ ಮಾಡಿದೆ ಎಂದು ತಿಳಿದು ಬಂದಿದೆ.
ಬಂದೋಬಸ್ತ್ ಕರ್ತವ್ಯಗಳ ನಿರ್ವಹಣೆಯಲ್ಲಿ ತೊಡಗಿಸಿಕೊಂಡ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಯಾವುದೇ ರೀತಿಯಲ್ಲೂ ಸೋಂಕು ತಗುಲದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯವಿರುವ ರಕ್ಷಣಾ ಸಾಮಾಗ್ರಿಗಳ ಖರೀದಿಗೆ ಎಸ್‌ಡಿಆರ್‌ಎಫ್ ಅಡಿ ಒಟ್ಟು 10.00 ಕೋಟಿ ಅನುದಾನ ಪೊಲೀಸ್ ಇಲಾಖೆಗೆ ಬಿಡುಗಡೆಯಾಗಿದೆ. ಇದರಲ್ಲಿ ಈವರೆವಿಗೂ 5.62 ಕೋಟಿ ವೆಚ್ಚವಾಗಿದೆ ಎಂದು ಗೊತ್ತಾಗಿದೆ.
ಅದೇ ರೀತಿ ರಾಜ್ಯದ ಕಾರಾಗೃಹಗಳಲ್ಲಿ ವೈರಾಣು ಸೋಂಕು ತಡೆಗಟ್ಟುವುದು, ಮುಂಜಾಗ್ರತಾ ಕ್ರಮ ಕೈಗೊಳ್ಳುವುದು, ಅಗತ್ಯವಿರುವ ವೈದ್ಯಕೀಯ ತಪಾಸಣೆ, ಸುರಕ್ಷತಾ ಉಪಕರಣ ಖರೀದಿ, ಕಾರಾಗೃಹಗಳಲ್ಲಿ ಔಷಧ ಸಿಂಪಡಣೆಗಾಗಿ ಕಂದಾಯ ಇಲಾಖೆಯಿಂದ ಬಿಡುಗಡೆಯಾಗಿದ್ದ ಒಟ್ಟು 2.00 ಕೋಟಿಯಲ್ಲಿ 1.05 ಕೋಟಿ ಖರ್ಚಾಗಿದೆ.
ಆಹಾರ ನಾಗರಿಕ ಸರಬರಾಜು ಇಲಾಖೆಗೆ ಬಿಡುಗಡೆಯಾಗಿದ್ದ 198.85 ಕೋಟಿ ರು.ಗಳನ್ನು ಸಂಪೂರ್ಣವಾಗಿ ಖರ್ಚು ಮಾಡಿದೆ. ಇಷ್ಟೂ ಹಣವನ್ನು ಆಹಾರ ಪೂರೈಕೆಗಾಗಿ ಖರ್ಚು ಮಾಡಿದೆ ಎಂದು ಇಲಾಖೆ ವರದಿ ನೀಡಿದೆ.
ಇಂಧನ ಇಲಾಖೆ ಮತ್ತು ಇಲಾಖೆ ವ್ಯಾಪ್ತಿಯ ವಿದ್ಯುತ್ ವಿತರಣಾ ಕಂಪನಿ, ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ, ಕರ್ನಾಟಕ ವಿದ್ಯುತ್ ನಿಗಮ, ಪಿಕೆಸಿಎಲ್‌ನ ಕಚೇರಿ ವೆಚ್ಚ, ಸ್ಯಾನಿಟೈಸರ್, ಹ್ಯಾಂಡ್ ವಾಷ್, ಮಾಸ್ಕ್, ಸಾಬೂನು ಖರೀದಿಗಾಗಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ವ್ಯಾಪ್ತಿಯಲ್ಲಿ 44.01 ಲಕ್ಷ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದಿಂದ 1.31 ಲಕ್ಷ ವೆಚ್ಚವಾಗಿದೆ.
ಸಮಾಜ ಕಲ್ಯಾಣ ಇಲಾಖೆಯು ಲಾಕ್‌ಡೌನ್ ಸಮಯದಲ್ಲಿ ಗುರುತಿಸಿದ್ದ ನಿರಾಶ್ರಿತ ಕೇಂದ್ರ/ಕ್ವಾರಂಟೈನ್ ಕೇಂದ್ರಗಳಲ್ಲಿ ವಲಸೆ ಕಾರ್ಮಿಕರಿಗೆ, ನಿರಾಶ್ರಿತರಿಗೆ, ಹೊರ ರಾಜ್ಯಗಳಿಂದ ಬಂದವರನ್ನು ಕ್ವಾರಂಟೈನ್ ಮಾಡಲು ವಿದ್ಯಾರ್ಥಿ ನಿಲಯಗಳನ್ನು ಬಳಕೆ ಮಾಡಿಕೊಂಡಿತ್ತು. ಇದಲ್ಲದೆ ಇಲಾಖೇಯು ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಕ್ಲಾತ್ ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನರ್‌ಗಳಿಗಾಗಿ ಒಟ್ಟು 9.41 ಕೋಟಿ ವೆಚ್ಚ ಮಾಡಿದೆ ಎಂದು ಲೆಕ್ಕ ತೋರಿಸಿದೆ.
ಮಾಸ್ಕ್, ಸ್ಯಾನಿಟೈಸರ್‌ಗೆ 65.28 ಲಕ್ಷ ಖರ್ಚು
ಇದರಲ್ಲಿ ಕ್ಲಾತ್ ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನರ್ ಖರೀದಿಗೆಂದು 65.28 ಲಕ್ಷ ಮಾತ್ರ ಖರ್ಚಾಗಿದೆ ಎಂದು ಲೆಕ್ಕ ತೋರಿಸಿದೆ. ನಿರಾಶ್ರಿತ ಕೇಂದ್ರ, ಕ್ವಾರಂಟೈನ್ ಕೇಂದ್ರಗಳಿಗೆ 124.64 ಲಕ್ಷ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಿರಾಶ್ರಿತ ಕೇಂದ್ರ, ಕ್ವಾರಂಟೈನ್ ಕೇಂದ್ರಗಳಿಗೆ 53.43 ಲಕ್ಷ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ನಿರಾಶ್ರಿತ ಕೇಂದ್ರ, ಕ್ವಾರಂಟೈನ್ ಕೇಂದ್ರಗಳಿಗೆ 127.66 ಲಕ್ಷ, ಡಾ ಬಾಬು ಜಗಜೀವನರಾಮ್ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದಿಂದ 11,4221 ಚರ್ಮ ಕುಶಲ ಕರ್ಮಿಕಗಳಿಗೆ 5,000 ರು. ಸಹಾಯಧನ ರೂಪದಲ್ಲಿ ಒಟ್ಟು 570.75 ಲಕ್ಷ ರು.ಗಳನ್ನು ವೆಚ್ಚ ಮಾಡಿದೆ ಎಂದು ವರದಿ ನೀಡಿರುವುದು ತಿಳಿದು ಬಂದಿದೆ.
ಕಾರ್ಮಿಕ ಇಲಾಖೆ ಮತ್ತು ಇದರ ವ್ಯಾಪ್ತಿಯಲ್ಲಿರುವ ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗೆ ಬಿಡುಗಡೆಯಾಗಿದ್ದ 884.04 ಕೋಟಿ ರು.ಗಳನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಂಡಿದೆ. ಸಿದ್ಧಪಡಿಸಿದ ಅಹಾರ ವಿತರಣೆ, ಆಹಾರ ಸಾಮಗ್ರಿಗಳ ಕಿಟ್ ವಿತರಣೆಗೆ 72.18 ಕೋಟಿ ರು. ಖರ್ಚು ಮಾಡಿದೆ.
ಕನ್ನಡ ಸಂಸ್ಕೃತಿ ಇಲಾಖೆಯು ಸಂಕಷ್ಟದಲ್ಲಿರುವ ಕಲಾವಿದರು, ಸಾಹಿತಿಗಳಿಗೆ ಸಹಾಯ ಮಾಡುವುದು ಮತ್ತು ಅಗತ್ಯ ವಸ್ತುಗಳನ್ನು ಖರೀದಿಸಲು ತಲಾ 2,000 ರು.ನಂತೆ ಒಟ್ಟಾರೆ ಬಿಡುಗಡೆಯಾಗಿದ್ದ 4.00 ಕೋಟಿ ರು.ನಲ್ಲಿ 3.38 ಕೋಟಿ ವೆಚ್ಚ ಮಾಡಿರುವುದು ತಿಳಿದು ಬಂದಿದೆ.
ಕೃಷಿ ಇಲಾಖೆಯು ಸಂಕಷ್ಟದಲ್ಲಿರುವ ರೈತರಿಗೆ, ಬೆಳೆಗಾರರಿಗೆ ತಾತ್ಕಾಲಿಕ ಪರಿಹಾರ ಒದಗಿಸಲು ತಲಾ 5,000 ರು.ನಂತೆ ಬಿಡುಗಡೆಯಾಗಿದ್ದ ಒಟ್ಟು 500 ಕೋಟಿಯಲ್ಲಿ 310.98 ಕೋಟಿ ಖರ್ಚು ಮಾಡಿದೆ. 6,21,970 ರೈತರ ಖಾತೆಗೆ ಈ ಹಣ ಜಮೆ ಆಗಿದೆ ಎಂದು ವರದಿ ನೀಡಿರುವುದು ಗೊತ್ತಾಗಿದೆ.
ತೋಟಗಾರಿಕೆ ಇಲಾಖೆಯು ಹಣ್ಣು, ತರಕಾರಿ ಬೆಳೆಗಾರರು ಸೇರಿದಂತೆ ಇನ್ನಿತರೆ ರೈತರಿಗೆ ನೆರವಾಗಲು ಬಿಡುಗಡೆಯಾಗಿದ್ದ ಒಟ್ಟು 31.83 ಕೋಟಿ ರು.ಪೈಕಿ 14.49 ಕೋಟಿ ವೆಚ್ಚ ಮಾಡಿದೆ.