ಬೆಂಗಳೂರು; ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿವಿಧ ಹಿಂದುಳಿದ ವರ್ಗಗಳ ಸಂಘ ಸಂಸ್ಥೆಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಮಂಜೂರು ಮಾಡಿದ್ದ ಒಟ್ಟು ಅನುದಾನದಲ್ಲಿ ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್ ಸೇರಿದಂತೆ ಕುರುಬ ಸಮುದಾಯದ ಗುರುಪೀಠ ಮತ್ತು ಕುರುಬ ಸಮುದಾಯದ ಸಂಘ ಸಂಸ್ಥೆಗಳ ಸಿಂಹಪಾಲು ದೊರೆತಿದೆ ಎಂದು ದಿ ಫೈಲ್ ಪ್ರಕಟಿಸಿದ್ದ ವರದಿಯು ಭಾರೀ ಸಂಚಲನವನ್ನು ಸೃಷ್ಟಿಸಿದೆ.
ಈ ವರದಿಯು ವೈರಲ್ ಆಗುತ್ತಿದ್ದಂತೆ ಖುದ್ದು ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡಿದ್ದಾರೆ. ಆದರೆ ಅವರು ನೀಡಿರುವ ಸ್ಪಷ್ಟನೆಯಲ್ಲಿ ತಮ್ಮ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರ ಹೆಸರಿನಲ್ಲಿರುವ ಟ್ರಸ್ಟ್ ಕುರಿತು ಎಲ್ಲಿಯೂ ಪ್ರಸ್ತಾಪಿಸಿಲ್ಲ. ಸಿದ್ದರಾಮಯ್ಯ ಅವರು ಎಕ್ಸ್‌ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಕುರುಬ ಸಮುದಾಯಕ್ಕೆ ಸೇರಿರುವ ಮನವಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣಕ್ಕೆ ಆ ಸಮುದಾಯಕ್ಕೆ ಹೆಚ್ಚಿನ ಅನುದಾನ ಸಂದಾಯವಾಗಿದೆಯೇ ಹೊರತು ಉದ್ದೇಶಪೂರ್ವಕವಾಗಿ ಯಾವುದೇ ಬಗೆಯ ತಾರತಮ್ಯ ಮಾಡಲಾಗಿಲ್ಲ ಸ್ಪಷ್ಟನೆ ನೀಡಿದ್ದಾರೆ.
ಸ್ಪಷ್ಟನೆಯಲ್ಲೇನಿದೆ?
ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿವಿಧ ಹಿಂದುಳಿದ ವರ್ಗಗಳ ಸಂಘ ಸಂಸ್ಥೆಗಳು ನೀಡಿರುವ ಮನವಿಗಳನ್ನು ಪರಿಶೀಲಿಸಿ ಸುಮಾರು 155 ಹಿಂದುಳಿದ ವರ್ಗಗಳ ಸಂಘ – ಸಂಸ್ಥೆಗಳಿಗೆ ರೂ. 71.85 ಕೋಟಿ ವೆಚ್ಚದಲ್ಲಿ ಸಮುದಾಯ ಭವನ ಮತ್ತು ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ಪೂರ್ವಭಾವಿ ಮಂಜೂರಾತಿ ನೀಡಿದೆ.
ಇದೇನು ಫಲಾನುಭವಿಗಳ ಅಂತಿಮ ಪಟ್ಟಿ ಅಲ್ಲ. ಬೇರೆ ಬೇರೆ ಹಿಂದುಳಿದ ಜಾತಿಗಳು ನೀಡಿರುವ ಮನವಿಗಳನ್ನು ಕೂಡಾ ಪರಿಶೀಲಿಸಿ, ಅವುಗಳಿಗೆ ಮುಂದಿನ ದಿನಗಳಲ್ಲಿ ಅನುದಾನವನ್ನು ಬಿಡುಗಡೆ ಮಾಡಲಾಗುವುದು. ಇಲಾಖೆಗೆ ಸಲ್ಲಿಸಲಾಗಿರುವ ಮನವಿಗಳಲ್ಲಿ ಕುರುಬ ಸಮುದಾಯಕ್ಕೆ ಸೇರಿರುವ ಮನವಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣಕ್ಕೆ ಆ ಸಮುದಾಯಕ್ಕೆ ಹೆಚ್ಚಿನ ಅನುದಾನ ಸಂದಾಯವಾಗಿದೆಯೇ ಹೊರತು ಉದ್ದೇಶಪೂರ್ವಕವಾಗಿ ಯಾವುದೇ ಬಗೆಯ ತಾರತಮ್ಯ ಮಾಡಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕುರುಬ ಜನಾಂಗದ ಜೊತೆಗೆ ಮಡಿವಾಳ, ಲಿಂಗಾಯಿತ, ಒಕ್ಕಲಿಗ, ಬೆಸ್ತ, ಬಲಿಜ, ಗೊಲ್ಲ, ಜೆಟ್ಟಿ, ಕುಂಬಾರ, ಅರಸು, ಹೆಳವ, ಸವಿತಾ ಸಮಾಜ, ಉಪ್ಪಾರ, ಗಾಣಿಗ, ಕುರುಹಿನ ಶೆಟ್ಟಿ, ಹಾಲಕ್ಕಿ, ರೆಡ್ಡಿ ಈ ಜನಾಂಗದವರ ಸಮುದಾಯ ಭವನ ಮತ್ತು ವಿದ್ಯಾರ್ಥಿ ನಿಲಯಗಳ ಕಟ್ಟಡಗಳ ನಿರ್ಮಾಣಕ್ಕೆ ಪೂರ್ವಭಾವಿ ಆದೇಶವನ್ನು ಹೊರಡಿಸಲಾಗಿದೆ.
ಈ ಆದೇಶವು ಅನುದಾನದ ಬಿಡುಗಡೆಯ ಆದೇಶ ಅಲ್ಲ. ಅನುದಾನ ಬಿಡುಗಡೆಗೆ ಸಂಘ ಸಂಸ್ಥೆಗಳು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಮುಖಾಂತರ ಜಮೀನು /ನಿವೇಶನ ಅವರ ಹೆಸರಿನಲ್ಲಿ ಇರುವ ಬಗ್ಗೆ ಸ್ಥಳೀಯ ಪುರಸಭೆ / ಪಂಚಾಯತಿಯಿಂದ ಕಟ್ಟಡ ಲೈಸೆನ್ಸ್, ಸಂಘ ಸಂಸ್ಥೆಯ 3 ವರ್ಷದ ಆಡಿಟ್ ವರದಿ ಇತ್ಯಾದಿ ದಾಖಲಾತಿಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಕಳುಹಿಸಬೇಕಾಗುತ್ತದೆ ಎಂದು ಸಮಜಾಯಿಷಿ ನೀಡಿದ್ದಾರೆ.
ಅನುದಾನ ಬಿಡುಗಡೆ ಮಾಡಲು ಸರ್ಕಾರದಿಂದ ಮಾರ್ಗ ಸೂಚಿಗಳನ್ನು ಹೊರಡಿಸಲಾಗಿದೆ. ಈ ಮಾರ್ಗಸೂಚಿಗಳ ಅನುಸಾರ ಅನುದಾನವನ್ನು 3 ಹಂತದಲ್ಲಿ ಪ್ರಗತಿಯನ್ನು ಪರಿಶೀಲನೆ ಮಾಡಿ ಅನುದಾನ ಬಿಡುಗಡೆ ಮಾಡಲಾಗುವುದು. ಕಾಮಗಾರಿಯ ಪ್ರಗತಿಯನ್ನು ಪ್ರತಿವರ್ಷ ಪರಿಶೀಲಿಸಿ ಅದರ ಆಧಾರದಲ್ಲಿ ಮಂಜೂರಾಗಿರುವ ಹಣವನ್ನು ಬಿಡುಗಡೆ ಮಾಡಲಾಗುವುದು.
ಇದು ನಿರಂತರವಾಗಿ ನಡೆಯುತ್ತಿರುವ ಪ್ರಕ್ರಿಯೆಯಾಗಿದೆ. ಈ ರೀತಿ ಅನುದಾನವನ್ನು ಬಿಡುಗಡೆ ಮಾಡುವಾಗ ಸರ್ಕಾರದ ಆದೇಶಕ್ಕೆ ಪ್ರವರ್ಗ 1 ಮತ್ತು ಪ್ರವರ್ಗ 2A ನಲ್ಲಿ ಬರುವ ಜಾತಿಗಳಿಗೆ ಶೇ.70% ರಷ್ಟು ಮತ್ತು ಪ್ರವರ್ಗ 3A ಮತ್ತು 3Bನಲ್ಲಿ ಬರುವ ಜಾತಿಗಳಿಗೆ ಶೇ.30% ರಷ್ಟು ಅನುದಾನವನ್ನು ಮಂಜೂರು ಮಾಡಲಾಗುವುದು. ಪ್ರವರ್ಗ 1 ಮತ್ತು 2A ಹೆಚ್ಚಿನ ಸಂಖ್ಯೆಯಲ್ಲಿ ಜಾತಿಗಳು ಇರುವ ಕಾರಣಕ್ಕಾಗಿ ಕೆಲವು ಸಮುದಾಯಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಗದಗ್‌ನಲ್ಲಿರುವ ಶ್ರೀ ರಾಕೇಶ ಸಿದ್ದರಾಮಯ್ಯ ಟ್ರಸ್ಟ್, ಕಾಗಿನೆಲೆ ಕನಕ ಗುರುಪೀಠ, ಕರ್ನಾಟಕ ಪ್ರದೇಶ ಕುರುಬರ ಸಂಘ, ಕನಕ ಸಮದಾಯ ಭವನಗಳ ಕಾಮಗಾರಿ ಸೇರಿದಂತೆ ಹಿಂದುಳಿದ ವರ್ಗಕ್ಕೆ ಸೇರಿರುವ ವಿವಿಧ ಸಮುದಾಯ, ಸಂಘ, ಸಂಸ್ಥೆಗಳಿಗೆ ಒಟ್ಟಾರೆ 71.85 ಕೋಟಿ ರು ಅನುದಾನವನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡಿತ್ತು.
ಡಿ ಕೆ ಶಿವಕುಮಾರ್ ಅವರು ನೂತನ ಮಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಂದೇ ಮಂಜೂರಾತಿ ಆದೇಶ ಹೊರಬಿದ್ದಿದೆ. ವಿಶೇಷವೆಂದರೇ ಮಂಜೂರಾಗಿರುವ 71.85 ಕೋಟಿ ರುಪಾಯಿ ಪೈಕಿ ಗದಗ್‌ನಲ್ಲಿರುವ ಶ್ರೀ ರಾಕೇಶ ಸಿದ್ದರಾಮಯ್ಯ ಟ್ರಸ್ಟ್, ಕಾಗಿನೆಲೆ ಕನಕ ಗುರುಪೀಠ, ಕರ್ನಾಟಕ ಪ್ರದೇಶ ಕುರುಬರ ಸಂಘ, ಕನಕ ಸಮದಾಯ ಭವನಗಳ ಕಾಮಗಾರಿಗೆ 41.25 ಕೋಟಿ ರುಪಾಯಿ ಮಂಜೂರಾಗಿತ್ತು.
ಮತ್ತೊಂದು ವಿಶೇಷವೆಂದರೇ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರ ಹೆಸರಿನಲ್ಲಿರುವ ಟ್ರಸ್ಟ್ ನಡೆಸುತ್ತಿರುವ ವೃತ್ತಿಪರ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿ ನಿಲಯಗಳ ವಸತಿ ನಿಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ 2024ರಲ್ಲಿ 2.00 ಕೋಟಿ ರು ಮಂಜೂರು ಮಾಡಿತ್ತು. 2024ರ ಆರ್ಥಿಕ ವರ್ಷದಲ್ಲಿ 66 ಲಕ್ಷ ರು ಅನುದಾನ ಬಿಡುಗಡೆ ಮಾಡಲು 2024ರ ಡಿಸೆಂಬರ್ 12ರಂದೇ ಆದೇಶ ಹೊರಡಿಸಿತ್ತು.


2026ರಲ್ಲಿಯೂ ಇದೇ ಶ್ರೀ ರಾಕೇಶ ಸಿದ್ದರಾಮಯ್ಯ ಟ್ರಸ್ಟ್ ಗೆ 50.00 ಲಕ್ಷ ರು ಅನುದಾನ ಮಂಜೂರು ಮಾಡಿದೆ.
ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಸೇರಿರುವ ಮಡಿವಾಳ, ಒಕ್ಕಲಿಗರ ಸಂಘ, ಗೊಲ್ಲರ ಸಂಘ, ವೀರಶೈವ ವಿದ್ಯಾವರ್ಧಕ ಸಂಘ, ಗಾಣಿಗ ಸಮುದಾಯ, ಉಪ್ಪಾರ ಸಮುದಾಯ, ಕುರುಹಿನ ಶೆಟ್ಟಿ ಸಂಘಕ್ಕೆ ಸೇರಿದ ದೇವಸ್ಥಾನ, ಸಮುದಾಯ ಭವನಗಳಿಗೂ ಅನುದಾನ ಮಂಜೂರಾಗಿದೆ. ಆದರೆ 155 ಸಂಘ ಸಂಸ್ಥೆಗಳಿಗೆ ಮಂಜೂರಾಗಿರುವ ಒಟ್ಟು ಅನುದಾನದಲ್ಲಿ ಕುರುಬ ಸಮುದಾಯಕ್ಕೆ ಸೇರಿದ ಸಂಘ ಸಂಸ್ಥೆಗಳದ್ದು ಸಿಂಹಪಾಲು ದೊರೆತಿತ್ತು.

ವಿವಿಧ ಸಮುದಾಯಗಳ ಅಭಿವೃದ್ದಿ ಕಾರ್ಯಕ್ರಮದಡಿ ರಾಜ್ಯ ವಲಯ ಯೋಜನೆ (ಲೆಕ್ಕ ಶೀರ್ಷಿಕೆ; 2225-03-001-0-05) ಅಡಿ ಸಮುದಾಯ ಭವನ, ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣಕ್ಕೆ ಪಟ್ಟಣ ಪಂಚಾಯ್ತಿ, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 20.00 ಲಕ್ಷ ರು., ತಾಲೂಕು ಕೇಂದ್ರ ಸ್ಥಾನಗಳಿಗೆ 50.00 ಲಕ್ಷ ರು., ಹಾಗೂ ಜಿಲ್ಲಾ ಕೇಂದ್ರ ಸ್ಥಾನಕ್ಕೆ 100.00 ಲಕ್ಷ ರು ಗರಿಷ್ಟ ಮಿತಿಗೊಳಪಟ್ಟು ಸಹಾಯ ಧನ ಮಂಜೂರು ಮಾಡಲು 2024ರ ಸೆ.27ರಂದೇ ಆದೇಶ ಹೊರಡಿಸಿತ್ತು.
ಅಲ್ಲದೇ 2026ರ ಏಪ್ರಿಲ್ 10ರಂದು ಆರ್ಥಿಕ ಇಲಾಖೆಯ ಸಲಹಾ ಟಿಪ್ಪಣಿಯಲ್ಲಿ ಆರ್ಥಿಕ ಇಲಾಖೆಯು 2026-27ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿರುವ ಕಾರ್ಯಕ್ರಮಗಳು ಹಾಗೂ ಆಯವ್ಯಯದಲ್ಲಿ ಒದಗಿಸಿರುವ ಅನುದಾನ ಹಂಚಿಕೆ ಮಾಡಿತ್ತು. ಈ ಪೈಕಿ 2026-27ನೇ ಸಾಲಿಗೆ ವಿವಿಧ ಸಮುದಾಯಗಳ ಸಮುದಾಯ ಭವನ, ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ 136.24 ಕೋಟಿ ರು ಉಪಯೋಗಿಸಲು ಸೂಚಿಸಿತ್ತು.
ಹಾಗೆಯೇ ಆರ್ಥಿಕ ಇಲಾಖೆಯು 2026ರ ಜೂನ್ 2ರಂದು ಹೊರಡಿಸಿದ್ದ ಅನಧಿಕೃತ ಟಿಪ್ಪಣಿ ಪ್ರಕಾರ ವಿವಿಧ ಸಂಘ ಸಂಸ್ಥೆಗಳು ನಿರ್ಮಿಸುತ್ತಿರುವ ಸಮುದಾಯ ಭವನ, ವಿದ್ಯಾರ್ಥಿ ನಿಲಯಗಳ ಹೊಸ ಮುಂದುವರೆದ ಕಾಮಗಾರಿಗಳಿಗೆ 71.85 ಕೋಟಿ ರು ಅನುದಾನವನ್ನು ಮಂಜೂರು ಮಾಡಲು ಮುಖ್ಯಮಂತ್ರಿ ಅವರು ಅನುಮೋದಿಸಿದ್ದರು. ಅನುಮೋದನೆ ದೊರೆತ ಒಂದೇ ದಿನದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2026ರ ಜೂನ್ 3ರಂದು ಅನುದಾನ ಮಂಜೂರು ಮಾಡಿ ಆದೇಶವನ್ನು ಹೊರಡಿಸಿತ್ತು.
ಒಟ್ಟು ಮಂಜೂರಾಗಿರುವ 71.85 ಕೋಟಿ ರುಪಾಯಿ ಮೊತ್ತದಲ್ಲಿ ಜಿಲ್ಲಾ, ತಾಲೂಕು ಕುರುಬರ ಸಂಘಗಳ ಉದ್ದೇಶಿತ ಸಮುದಾಯ ಭವನ, ವಿದ್ಯಾರ್ಥಿ ನಿಲಯ, ವಸತಿ ನಿಲಯಗಳ ನಿರ್ಮಾಣಕ್ಕೆ 14.45 ಕೋಟಿ ರುಪಾಯಿ, ರಾಜ್ಯದ ವಿವಿಧೆಡೆ ಕನಕ ಸಮುದಾಯ ಭವನಗಳ ನಿರ್ಮಾಣ ಕಾಮಗಾರಿಗಳಿಗೆ 16.85 ಕೋಟಿ ರುಪಾಯಿ, ಕಾಗಿನೆಲೆ ಕನಕ ಗುರುಪೀಠಕ್ಕೆ 5 ಕೋಟಿ, ರಾಜ್ಯದ ವಿವಿಧ ಜಿಲ್ಲೆ, ತಾಲೂಕು, ಪಟ್ಟಣ ಪ್ರದೇಶಗಳಲ್ಲಿರುವ ಬೀರಲಿಂಗೇಶ್ವರ ದೇವಸ್ಥಾನಗಳ ಹಲವು ಉದ್ದೇಶಗಳಿಗೆ 4.95 ಕೋಟಿ ರು ಅನುದಾನ ಮಂಜೂರಾಗಿತ್ತು.
71.85 ಕೋಟಿ ರು ಮಂಜೂರಾತಿ ವಿವರ
ಕರ್ನಾಟಕ ರಾಜ್ಯ ಮಡಿವಾಳ ಸಂಘದ ವಿದ್ಯಾರ್ಥಿ ನಿಲಯಕ್ಕೆ 1 ಕೋಟಿ, ಹಾಸನ ಜಿಲ್ಲಾ ಮಡಿವಾಳ ಸಂಘದ ಸಮುದಾಯ ಭವನಕ್ಕೆ 1 ಕೋಟಿ, ಚಿಕ್ಕಮಗಳೂರು ಜಿಲ್ಲಾ ಮಡಿವಾಳ ಸಂಘದ ಸಮುದಾಯ ಭವನದ ಮುಂದುವರೆದ ಕಾಮಗಾರಿಗೆ 50 ಲಕ್ಷ, ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಕರ್ನಾಟಕ ಪ್ರದೇಶ ಕುರುಬರ ಸಂಘದ ಉದ್ದೇಶಿತ ಕನಕ ಭವನದ ಮುಂದುವರೆದ ಕಾಮಗಾರಿಗೆ 1 ಕೋಟಿ ರು., ಕೆ ಆರ್ ಪೇಟೆ ಕಿಕ್ಕೇರಿ ಹೋಬಳಿಯ ಕೋಡಿಮಾರನಹಳ್ಳಿಯ ಲಕ್ಷ್ಮಿದೇವಿ ಸಮುದಾಯ ಭವನದ ಮುಂದುವರೆದ ಕಾಮಗಾರಿಗೆ 25 ಲಕ್ಷ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಬಿ ಕೆ ಮರಿಯಪ್ಪ ಟ್ರಸ್ಟ್ ನ ವಸತಿ ನಿಲಯ ಕಟ್ಟಡ ನಿರ್ಮಾಣಕ್ಕೆ 1.50 ಕೋಟಿ ರು, ಆನೇಕಲ್ ತಾಲೂಕಿನ ಸುರಗಜಕ್ಕನಹಳ್ಳಿ ಗ್ರಾಮ ಪಂಚಾಯ್ತಿ ಸಿಡಿಹೊಸಕೋಟೆ ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ 20 ಲಕ್ಷ ರು ಅನುದಾನ ಮಂಜೂರಾಗಿತ್ತು.

ಬಸವನಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿ ಬಿ ಗ್ರಾಮದಲ್ಲಿರುವ ಬೀರಲಿಂಗೇಶ್ವರ ದೇವಸ್ಥಾನದ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ 25 ಲಕ್ಷ, ಕಲ್ಬುರ್ಗಿ ಜಿಲ್ಲೆಯ ವರವಿ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನ ಸಮಿತಿಯ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ 25 ಲಕ್ಷ, ಮಂಡ್ಯ ತಾಲೂಕಿನ ಹೆಚ್ ಕೋಡಿಹಳ್ಳಿ ಗ್ರಾಮದ ಬಸವೇಶ್ವರ ಗ್ರಾಮಾಭಿವೃದ್ಧಿ ಟ್ರಸ್ಟ್‌ನ ಸಮುದಾಯ ಭವನ ನಿರ್ಮಾಣಕಕೆ 25 ಲಕ್ಷ, ಜಯಪುರ ಹೋಬಳಿಯ ದೊಡ್ಡ ಹುಂಡಿ ಗ್ರಾಮದ ಚಿಕ್ಕದೇವಮ್ಮ ಸೇವಾ ಸಮಿತಿ ಟ್ರಸ್ಟ್‌ನ ಸಮುದಾಯ ಭವನ ನಿರ್ಮಾಣಕ್ಕೆ 30 ಲಕ್ಷ, ಹಾವೇರಿಯಲ್ಲಿರುವ ನಿಜ ಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಸಮುದಾಯ ಭವನ ನಿರ್ಮಾಣಕ್ಕೆ 30 ಲಕ್ಷ, ಮೈಸೂರು ತಾಲೂಕು ಒಕ್ಕಲಿಗರ ಸಂಘವು ವಿಜಯನಗರ 3ನೇ ಹಂತದಲ್ಲಿ ನಿರ್ಮಾಣ ಮಾಡುತ್ತಿರುವ ಸಮುದಾಯ ಭವನಕ್ಕೆ 50 ಲಕ್ಷ,

ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಮಲ್ಲೇಗೌಡನ ಕೊಪ್ಪಲು ಗ್ರಾಮದಲ್ಲಿ ಕನಕ ಸಮುದಾಯ ಭವನ ಮುಂದುವರೆದ ಕಾಮಗಾರಿಗೆ 20 ಲಕ್ಷ, ಹುಣಸೂರು ತಾಲೂಕು ಉಯಿಗೊಂಡನಹಳ್ಳಿ ಕನಕ ಸಮುದಾಯ ಭವನ ಮುಂದುವರೆದ ಕಾಮಗಾರಿಗೆ 15 ಲಕ್ಷ, ಹುಣಸೂರು ತಾಲೂಕಿನ ಕಲ್ಕುಣಿಕೆಯ 3ನೇ ವಾರ್ಡ್‌ನಲ್ಲಿ ಹಾಲುಮತದ ಹತ್ತು ಜನಗಳ ಒಟ್ಟಿನ ಸಮುದಾಯ ಭವನದ ಮುಂದುವರೆದ ಕಾಮಗಾರಿಗೆ 10 ಲಕ್ಷ, ಹೊನ್ನಾಳಿಯ ನ್ಯಾಮತಿ ತಾಲೂಕಿನ ದೊಡ್ಡಕಲ್ಲುಕಟ್ಟೆಯ ಗವಿ ಸಿದ್ದೇಶ್ವರ ಸೇವಾ ಸಮಿತಿ ಟ್ರಸ್ಟ್‌ನ ಕನಕ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ 50 ಲಕ್ಷ ರು ಅನುದಾನ ಮಂಜೂರಾಗಿತ್ತು.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಅಂಕಿತ ವಿದ್ಯಾಸಂಸ್ಥೆ ವಸತಿ ನಿಲಯ ಕಟ್ಟಡ ನಿರ್ಮಾಣಕ್ಕೆ 1 ಕೋಟಿ, ಹೆಬ್ಬೂರು ತೊಂಡಗೆರೆ ಗ್ರಾಮದಲ್ಲಿನ ಅರವಿತ್ತಮ್ಮ ದೇವಾಲಯ ಸೇವಾ ಟ್ರಸ್ಟ್‌ನ ಸಮುದಾಯ ಭವನ ನಿರ್ಮಾಣಕ್ಕೆ 25 ಲಕ್ಷ ರು ಅನುದಾನ ಮಂಜೂರಾಗಿದೆ. ಅದೇ ರೀತಿ ಧಾರವಾಡದ ಕುಂದುಗೋಳ ತಾಲೂಕಿನ ಬು.ಕೊಪ್ಪ ಗ್ರಾಮದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಸಮುದಾಯ ಭವ ನಿರ್ಮಾಣಕ್ಕೆ 25 ಲಕ್ಷ,

ಚಿತ್ರದುರ್ಗ ಜಿಲ್ಲೆಯ ರಂಗಯ್ಯನಬಾಗಿಲು ಬಳಿ ಇರುವ ಜಿಲ್ಲಾ ಗೊಲ್ಲರ ಸಂಘದ ವಿದ್ಯಾರ್ಥಿ ನಿಲಯ, ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ 50 ಲಕ್ಷ, ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಕೃಷ್ಣಮ್ಮನ ಹೊಸಹಳ್ಳಿ ಗ್ರಾಮದ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ 50 ಲಕ್ಷ, ಚಾಮರಾಜನಗರ ಟೌನ್ ದೇವಮಲ್ಲು ಜೆಟ್ಟಿ ಸಂಘದ ನಿಂಬುಜದೇವಿ ದೇವಸ್ಥಾನದ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ 75 ಲಕ್ಷ, ಅನುದಾನ ಮಂಜೂರಾಗಿತ್ತು.
ತುಮಕೂರು ಜಿಲ್ಲಾ ಮಡಿವಾಳ ಸಂಘದ ಸಮುದಾಯ ಭವನ ನಿರ್ಮಾಣಕ್ಕೆ 1 ಕೋಟಿ, ಶಿವಮೊಗ್ಗ ಜಿಲ್ಲಾ ಮಡಿವಾಳ ಸಂಘದ ಸಮುದಾಯ ಭವನದ ಮುಂದುವರೆದ ಕಾಮಗಾರಿಗೆ 1 ಕೋಟಿ, ರಾಯಚೂರು ಜಿಲ್ಲೆಯ ಮಡಿವಾಳ ಸಮುದಾಯದ ವಿದ್ಯಾರ್ಥಿ ನಿಲಯದ ಮುಂದುವರೆದ ಕಾಮಗಾರಿಗೆ 50 ಲಕ್ಷ, ಬಾಗಲಕೋಟೆ ಜಿಲ್ಲೆಯ ಮಡಿವಾಳ ಸಮಾಜದ ಮುಂದುವರೆದ ಕಾಮಗಾರಿಗೆ 50 ಲಕ್ಷ, ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಜಿಲ್ಲಾ ಕುರುಬರ ಸಂಘದ ಉದ್ದೇಶಿತ ಕನಕ ಭವನ ನಿರ್ಮಾಣಕ್ಕೆ 1 ಕೋಟಿ, ಬ್ಯಾಡಗಿ ಪಟ್ಟಣದಲ್ಲಿ ಕನಕ ಭವನ ನಿರ್ಮಾಣಕ್ಕೆ 1 ಕೋಟಿ, ರಾಯಚೂರಿನ ಮಸ್ಕಿಯ ವಿಶ್ವಚೇತನ ಕನಕದಾಸ ಟ್ರಸ್ಟ್ ನ ಕನಕ ಭವನ ನಿರ್ಮಾಣಕ್ಕೆ 50 ಲಕ್ಷ, ದಾವಣಗೆರೆ ಹರಿಹರ ತಾಲೂಕಿನ ಕಮಲಾಪುರದ ಬೀರೇಶ್ವರ ಸಾಂಸ್ಕೃತಿಕ ಸಂಘಕ್ಕೆ 25 ಲಕ್ಷ ರು ಅನುದಾನ ನೀಡಿತ್ತು.

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ನವಚೇತನಾ ಟ್ರಸ್ಟ್‌ನ ಸಮುದಾಯ ಭವನ ನಿರ್ಮಾಣಕ್ಕೆ 20 ಲಕ್ಷ, ಬಂಟ್ವಾಳ ತಾಲೂಕಿನ ಕುಲಾಲ ಸುಧಾರಕ ಸಂಘದ ಸಮುದಾಯ ಭವನ ನಿರ್ಮಾಣಕ್ಕೆ 1 ಕೋಟಿ, ಮಂಡ್ಯ ಜಿಲ್ಲೆ ಗಂಗಾಮತಸ್ಥ ಸಂಘದ ಸಮುದಾಯ ಭವನ ನಿರ್ಮಾಣಕ್ಕೆ 1 ಕೋಟಿ, ಗಂಗಾವತಿ ಸಿಂಧನೂರು ನಗರದ ಚಂದ್ರಮೌಳೇಶ್ವರ ಸಮುದಾಯ ಭವನ ನಿರ್ಮಾಣಕ್ಕೆ 1 ಕೋಟಿ, ಲಿಂಗಸುಗೂರಿನ ಹಂಪ್ಪ ವೆಂಕಟರಾವ್ ಬಾದರ್ಲಿ ಸ್ಮಾರಕ ಪ್ರೌಢಶಾಲೆಯ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ 50 ಲಕ್ಷ, ರಾಮನಗರ ಚನ್ನಪಟ್ಟಣದ ಹೊಂಗನೂರು ಗ್ರಾಮದ ವಿಜಯನಗರ ಅರಸು ಅಭಿವೃದ್ಧಿ ಸಂಗದ ವಿದ್ಯಾರ್ಥಿ ನಿಲಯದ ಮುಂದುವರೆದ ಕಾಮಗಾರಿಗೆ 50 ಲಕ್ಷ ರು, ಅಫಜಲಪುರದ ಕಾಶಿಲಿಂಗೇಶ್ವರ ಸೇವಾ ಸಂಘದ ವಿದ್ಯಾರ್ಥಿ ನಿಲಯ ಕಾಮಗಾರಿಗೆ 50 ಲಕ್ಷ ರು ಅನುದಾನ ಮಂಜೂರಾಗಿತ್ತು.







ಅಫಜಲಪುರದ ದತ್ತ ಕನಕಲಿಂಗೇಶ್ವರ ಸಮಗ್ರ ಗ್ರಾಮೀಣಾಭಿವೃದ್ಧಿ ಹಾಗೂ ವಿವಿದೊದ್ದೇಶ ಟ್ರಸ್ಟ್ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ 50 ಲಕ್ಷ, ಬಾಗಲಕೋಟೆಯ ಬೀಳಗಿ ತಾಲೂಕಿನ ಬೀರಲಿಂಗೇಶ್ವರ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ 20 ಲಕ್ಷ, ಬಳ್ಳಾರಿ ಕಂಪ್ಲಿ ತಾಲೂಕಿನ ಎಮ್ಮಿಗನೂರು ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠದ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣಕ್ಕೆ 50 ಲಕ್ಷ , ಯಾದಗಿರಿ ವಡಗೇರಾ ತಾಲೂಕಿನ ಬಸಯ್ಯ ತಾತಯ್ಯ ಶಿಕ್ಷಣ ಟ್ರಸ್ಟ್ ನ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣಕ್ಕೆ 25 ಲಕ್ಷ, ಮುಧೋಳ ತಾಲೂಖಿನ ಸೋರಗಾಂವದ ಪಾಂಡುರಂಗ ದೇವಸ್ಥಾನದ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣಕ್ಕೆ 30 ಲಕ್ಷ ರು ಅನುದಾನ ಮಂಜೂರು ಮಾಡಿತ್ತು.

ಗದಗಿನ ರಾಕೇಶ ಸಿದ್ದರಾಮಯ್ಯ ಟ್ರಸ್ಟ್ ನಿರ್ಮಾಣ ಮಾಡುತ್ತಿರುವ ವಿದ್ಯಾರ್ಥಿ ನಿಲಯದ ಕಾಮಗಾರಿಗೆ 50 ಲಕ್ಷ ರು ಸೇರಿ ಒಟ್ಟಾರೆ 71.85 ಕೋಟಿ ರುಪಾಯಿ ಅನುದಾನ ಮಂಜೂರು ಮಾಡಿರುವುದನ್ನು ಸ್ಮರಿಸಬಹುದು.




