ಬೆಂಗಳೂರು; ರಾಜ್ಯ ಶಿಕ್ಷಣ ನೀತಿ ಆಯೋಗವು ಮಾಡಿರುವ ಒಟ್ಟು 72 ಪ್ರಮುಖ ಶಿಫಾರಸ್ಸುಗಳ ಪೈಕಿ 40 ಶಿಫಾರಸ್ಸುಗಳಗೆ ಹೆಚ್ಚಿನ ಆರ್ಥಿಕ ನೆರವು ಅಗತ್ಯವಿದೆ. ಅಲ್ಲದೇ ರಾಜ್ಯ ಶಿಕ್ಷಣ ನೀತಿ ಆಯೋಗವು ರಾಜ್ಯ ಶಿಕ್ಷಣ ನೀತಿ ಅನುಷ್ಟಾನಕ್ಕಾಗಿ ಹತ್ತು ಸಾವಿರ ಕೋಟಿ ರುಪಾಯಿಗಳ ಹೆಚ್ಚುವರಿ ಅನುದಾನಕ್ಕೆ ಶಿಫಾರಸ್ಸು ಮಾಡಿದೆ. 2027-28ನೇ ಸಾಲಿಗೆ ಒಟ್ಟು ಬಜೆಟ್‌ನಲ್ಲಿ ಈ ನೀತಿಗಾಗಿ ಒಟ್ಟಾರೆ 16,691 ಕೋಟಿ ರು ಅಗತ್ಯವಿದೆ.
ಪ್ರೊ.ಸುಖದೇವ್ ಥೋರಟ್ ನೇತೃತ್ವದ ರಾಜ್ಯ ಶಿಕ್ಷಣ ನೀತಿ ಆಯೋಗ ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿ ಎರಡು ಸಂಪುಟಗಳ 2,197 ಪುಟಗಳ ವರದಿಯನ್ನು 2025ರ ಆಗಸ್ಟ್ 8ರಂದು ಸಲ್ಲಿಸಿದೆ. ಮತ್ತು 2026ರ ಫೆಬ್ರುವರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಂತಿಮ ವರದಿ ಸಲ್ಲಿಸಿತ್ತು. ಈ ಅಂತಿಮ ವರದಿ ಮತ್ತು ವರದಿಯ ಶಿಫಾರಸ್ಸುಗಳ ಮೆಲೆ ಕೈಗೊಳ್ಳಬಹುದಾದ ಮುಂದಿನ ಕ್ರಮಗಳ ಕುರಿತು ನಿರ್ದೇಶನ ಕೋರಿರುವ ಉನ್ನತ ಶಿಕ್ಷಣ ಇಲಾಖೆಯು ಸಚಿವ ಸಂಪುಟಕ್ಕೆ ಕಡತ ಮಂಡಿಸಿದೆ.
ರಾಜ್ಯ ಶಿಕ್ಷಣ ನೀತಿ ಆಯೋಗವು ಅಂತಿಮ ವರದಿಯಲ್ಲಿ ಮಾಡಿರುವ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ಸಂಬಂಧ ಉನ್ನತ ಶಿಕ್ಷಣ ಇಲಾಖೆಯು ಸಚಿವ ಸಂಪುಟಕ್ಕೆ ಕಡತ ಮಂಡಿಸಿದೆ. ಸಚಿವ ಸಂಪುಟಕ್ಕೆ ಮಂಡಿಸಿರುವ ಕಡತದ ರಹಸ್ಯ ಹಾಳೆಗಳು ದಿ ಫೈಲ್ ಗೆ ಲಭ್ಯವಾಗಿವೆ.

ಉನ್ನತ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ರಾಜ್ಯ ಶಿಕ್ಷಣ ನೀತಿ ಆಯೊಗವು ಸಲ್ಲಿಸಿರುವ ಅಂತಿಮ ವರದಿಯಲ್ಲಿ 72 ಪ್ರಮುಖ ಶಿಫಾರಸ್ಸುಗಳಿವೆ. ಅದರಲ್ಲಿ 26 ಶಿಫಾರಸ್ಸುಗಳನ್ನು ಕೂಡಲೇ ಅನುಷ್ಠಾನಗೊಳಿಸಬೇಕು. ಮತ್ತು ಮಧ್ಯಮಾವಧಿಯಲ್ಲಿ 24 ಮತ್ತು ದೀರ್ಘಾವಧಿಯಲ್ಲಿ 22 ಶಿಫಾರಸ್ಸುಗಳಿವೆ. ಈ ಪೈಕಿ 40 ಶಿಫಾರಸ್ಸುಗಳಿಗೆ ಆರ್ಥಿಕ ನೆರವು ಅಗತ್ಯವಿದೆ ಎಂದು ಉನ್ನತ ಶಿಕ್ಷಣ ಇಲಾಖೆಯು ಸಚಿವ ಸಂಪುಟಕ್ಕೆ ಮಂಡಿಸಿರುವ ಟಿಪ್ಪಣಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

‘ರಾಜ್ಯ ಶಿಕ್ಷಣ ನೀತಿ ಆಯೋಗವು ರಾಜ್ಯ ಶಿಕ್ಷಣ ನೀತಿ ಅನುಷ್ಠಾನಕ್ಕಾಗಿ ಹತ್ತು ಸಾವಿರ ಕೋಟಿ ರುಪಾಯಿಗಳ ಹೆಚ್ಚುವರಿ ಅನುದಾನಕ್ಕೆ ಶಿಫಾರಸ್ಸು ಮಾಡಿದೆ. ತಜ್ಞರ ಸಮಿತಿಯು ಈ ವಿಷಯವನ್ನು ಪರಿಶೀಲಿಸಿ ಉನ್ನತ ಶಿಕ್ಷಣದ ಮೇಲೆ ಜಿಎಸ್‌ಡಿಪಿಯ ಶೇ 1ರಷ್ಟು 10 ವರ್ಷಗಳಲ್ಲಿ ಮತ್ತು 2025-26, 2026-27 ಮತ್ತು 2027-28ರಲ್ಲಿ ಕ್ರಮವಾಗಿ ಜಿಎಸ್‌ಡಿಪಿಯ ಶೆ. 0.38, 0.48 ಮತತು 0.58ರಷ್ಟು ಉನ್ನತ ಶಿಕ್ಷಣಕ್ಕೆ ಖರ್ಚಾಗಬಹುದು ಎಂದು ಅಂದಾಜಿಸಿದೆ. ಅಲ್ಲದೇ 2027-28ರಲ್ಲಿ ಒಟ್ಟು ಬಜೆಟ್ ಬೇಡಿಕೆ 16,691 ಕೋಟಿಗಳಷ್ಟು ಅಗತ್ಯವಿದೆ ಎಂದು ಶಿಫಾರಸ್ಸು ಮಾಡಿದೆ.,’ ಎಂದು ಟಿಪ್ಪಣಿಯಲ್ಲಿ ವಿವರಿಸಿದೆ.

ರಾಜ್ಯ ಶಿಕ್ಷಣ ನೀತಿ ಆಯೋಗವು 2025ರ ಆಗಸ್ಟ್ 8ರಂದು ಸರ್ಕಾರಕ್ಕೆ ಈಗಾಗಲೇ ಅಂತಿಮ ವರದಿ ಸಲ್ಲಿಸಿದೆ. ಅಲ್ಲದೇ 2026027ನೇ ಶೈಕ್ಷಣಿಕ ಸಾಲು ಸಹ ಆರಂಭವಾಗಿದೆ. ಹೀಗಾಗಿ ಆಯೋಗವು ನೀಡಿರುವ ಪ್ರಸ್ತಾಪಿತ ವರದಿ ಮೇಲೆ ರಾಜ್ಯ ಸರ್ಕಾರವು ಸೂಕ್ತ ನಿರ್ಣಯ ಕೈಗೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಶಿಕ್ಷಣ ನೀತಿ ಆಯೋಗದ ಅಂತಿಮ ವರದಿ ಮತ್ತು ಪ್ರಮುಖ ಶಿಫಾರಸ್ಸುಗಳ ಕುರಿತು ಮುಂದಿನ ಕ್ರಮ ಕೈಗೊಳ್ಳಬೇಕಿದೆ. ಈ ನೀತಿ ಅನುಷ್ಠಾನದ ಮೇಲೆ ಆರ್ಥಿಕ ಪರಿಣಾಮಗಳು ಬೀರುವುದರಿಂದ ಸಚಿವ ಸಂಪುಟದ ಅನುಮತಿ ಅಗತ್ಯವಿದೆ ಎಂದು ಟಿಪ್ಪಣಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

2024-25ನೇ ಸಾಲಿನಲ್ಲಿ ಶಿಕ್ಷಣ ವಲಯಕ್ಕೆ 42,361.74 ಕೋಟಿ ಬಜೆಟ್ ಬೇಡಿಕೆ ಇತ್ತು. ಇದರಲ್ಲಿ ಉನ್ನತ ಶಿಕ್ಷಣ ಇಲಾಖೆಗೆ 6,777.87 ಕೋಟಿ ರು ಬೇಡಿಕೆ ಇತ್ತು. 2025-26ರಲ್ಲಿ 47,601.43 ಕೋಟಿ ರು ನಲ್ಲಿ ಉನ್ನತ ಶಿಕ್ಷಣ ಇಲಾಖೆಗೆ 9,777.59 ಕೋಟಿ, 2026-27ರಲ್ಲಿ 55,871.27 ಕೋಟಿ ರು ನಲ್ಲಿ ಉನ್ನತ ಶಿಕ್ಷಣ ಇಲಾಖೆಗೆ 13,082.05 ಕೋಟಿ ರು, 2027-28ರಲ್ಲಿ 64,750.66 ಕೋಟಿ ರು ನಲ್ಲಿ ಉನ್ನತ ಶಿಕ್ಷಣ ಇಲಾಖೆಗೆ 16,691.28 ಕೋಟಿ ರು ಬೇಡಿಕೆ ಇರಲಿದೆ ಎಂದು ಉನ್ನತ ಶಿಕ್ಷಣ ಇಲಾಖೆಯು ಅಂಕಿ ಅಂಶಗಳನ್ನು ಮಂಡಿಸಿರುವುದು ತಿಳಿದು ಬಂದಿದೆ.

ಕಾಲೇಜು ಶಿಕ್ಷಣ ಇಲಾಖೆಯಡಿಯಲ್ಲಿ ಸ್ನಾತಕೋತ್ತರ ತರಗತಿಗಳ ಪ್ರತೀ ವರ್ಷ ತರಬೇತಿಗೆ 10,000 ರು ವೆಚ್ಚದಂತೆ ಒಟ್ಟಾರೆ 60,00,000 ರು ವೆಚ್ಚವಾಗಲಿದೆ. ಕಾರ್ಯಾಗಾರಗಳನ್ನು ನಡೆಸಲು ಶಿಕ್ಷಣ ಸಂಸ್ಥೆಗೆ ವರ್ಷವೊಂದಕ್ಕೆ 2 ಲಕ್ಷ ರು, ಸಮಾನ ಅವಕಾಶಗಳ ಕೋಶ ರಚಿಸಲು 1 ಲಕ್ಷ ರು ನಂತೆ 11.30 ಕೋಟಿ ರು ವೆಚ್ದ ಭರಿಸಬೇಕಿದೆ.

11,100 ಮಂದಿ ಅತಿಥಿ ಉಪನ್ಯಾಸಕರ ನೇಮಕಾತಿಗೆ 3,600 ರು ಘಟಕ ವೆಚ್ಚದಂತೆ ಒಟ್ಟಾರೆ 4,00,00,000 ರು ಮತ್ತು ಖಾಯಂ ಪ್ರಾಂಶುಪಾಲರಿಗೆ 25,000 ರು ರು ನಂತೆ 77,50,000 ರು ವೆಚ್ಚವಾಗಲಿದೆ ಎಂದು ತಿಳಿಸಿದೆ.

ಅದೇ ರೀತಿ 1,024 ಸಹಾಯಕ ಪ್ರಾಧ್ಯಾಪಕರ ವೇತನದ ವೆಚ್ಚದ ಕುರಿತೂ ಉನ್ನತ ಶಿಕ್ಷಣ ಇಲಾಖೆಯು ಮಾಹಿತಿ ಒದಗಿಸಿದೆ. ಮೊದಲ ವರ್ಷದಲ್ಲಿ 205 ಹುದ್ದೆಗಳಿಗೆ ನೇಮಕವಾಗುವ ಸಹಾಯಕ ಪ್ರಾಧ್ಯಾಪಕರಿಗೆ ಮೂಲ ವೇತನ 57,700 ರು., ಡಿ ಎ 33,466 ರು, ಎಚ್ ಆರ್ ಎ 13,848, ಸೇರಿ ಒಟ್ಟಾರೆ 1,05,014 ರು ನಂತೆ ಒಂದು ತಿಂಗಳ ವೇತನಕ್ಕೆ 2,15,27,870 ರು ವೆಚ್ಚವಾಗಲಿದೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಪ್ರತಿ ತಿಂಗಳಿಗೆ 1,05,014 ರು ಘಟಕ ವೆಚ್ಚದಂತೆ ವಾರ್ಷಿಕವಾಗಿ ಒಟ್ಟಾರೆ 12, 60,168 ರು, 5 ವರ್ಷಕ್ಕೆ ನೇಮಕಾತಿ, ಶಿಕ್ಷಕರ ಬಡ್ತಿ ಪ್ರಕ್ರಿಯೆ ಆರಂಭಿಸಬೇಕು.
ಒಂದು ವರ್ಷಕ್ಕೆ 25,83,34,440 ರು ವೆಚ್ಚವಾಗಲಿದೆ. ಎರಡು, ಮೂರು, ನಾಲ್ಕು ಮತ್ತು 5ನೇ ವರ್ಷದ ಹೊತ್ತಿಗೆ ತಿಂಗಳಿಗೆ 10,75,34,336 ರು ನಂತೆ ಒಂದು ವರ್ಷಕ್ಕೆ 1,29,04,12,032 ರು ವೆಚ್ಚವಾಗಲಿದೆ.

ಸರ್ಕಾರಿ ಮತ್ತು ಅನುದಾನಿತ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಬೋಧಕರಿಗೆ ಬಡ್ತಿ ನೀಡಲು ಹೆಚ್ಚುವರಿ ಅನುದಾನ ಬೇಕಿದೆ. 2026-27ರಿಂದ 2030-31ರವರೆಗೆ ಪ್ರತಿ ತಿಂಗಳು 3,000 ರು ನಂತೆ ವೇತನ ಹೆಚ್ಚಳದೊಂದಿಗೆ ಒಟ್ಟಾರೆ 79,050,000 ರು ಅನುದಾನ ಬೇಕಿದೆ ಎಂದು ಅಂದಾಜಿಸಿದೆ.

ಸರ್ಕಾರಿ ಕಾಲೇಜುಗಳಲ್ಲಿನ ಮೂಲಭೂತ ಸೌಕರ್ಯಗಳಿಗೆ (ವೈಫೈ, ಇಂಟರ್‍ನೆಟ್, ಕಂಪ್ಯೂಟರ್ ಕೇಂದ್ರಗಳ ಸ್ಥಾಪನೆಗೆ ಒಟ್ಟಾರೆ 2,56,81,50,000 ರು ಅನುದಾನ ಬೇಕಿದೆ. ಒಂದು ಕಾಲೇಜಿಗೆ ಕಂಪ್ಯೂಟರ್ ವೆಚ್ಚ 40,00,000 ರು ನಂತೆ 565 ಕಾಲೇಜುಗಳಿಗೆ 2,26,00,00,000 ರು ಅನುದಾನ ಅಗತ್ಯವಿದೆ.

10ಕೆವಿ ಸಾಮರ್ಥ್ಯದ ಯುಪಿಎಸ್‌ಗೆ ಕಾಲೇಜುವೊಂದಕ್ಕೆ 3,50,000 ರು., 565 ಕಾಲೇಜುಗಳಿಗೆ 19,77,50,000 ರು, ಇಂಟರ್‍ನೆಟ್ (10 ಎಂಬಿಪಿಎಸ್) 2,00,000 ರುನಂತೆ 565 ಕಾಲೇಜುಗಳಿಗೆ 2,00,00,000 ರು., ಇಂಟರ್‍ಯಾಕ್ವೀವ್ ಬೋರ್ಡ್ 1,60,000 ರು ನಂತೆ 565 ಕಾಲೇಜುಗಳಿಗೆ 9,04,00,000 ರು ಸೇರಿ ಒಟ್ಟಾರೆ 2,56,81,50,000 ರು ಅನುದಾನದ ಅವಶ್ಯಕತೆ ಇದೆ ಎಂದು ವಿವರಿಸಿದೆ.
ರಾಜ್ಯದ ಶಾಲೆಗಳಲ್ಲಿ ದ್ವಿಭಾಷಾ ನೀತಿಯನ್ನು (ಕನ್ನಡ ಮಾತೃಭಾಷೆ + ಇಂಗ್ಲಿಷ್) ಅನುಷ್ಠಾನಗೊಳಿಸಲು ಆಯೋಗವು ಶಿಫಾರಸು ಮಾಡಿದೆ. ವರದಿಯಲ್ಲಿ ದ್ವಿಭಾಷಾ ನೀತಿ ಅನುಷ್ಠಾನ, ಎಲ್ಲಾ ಬೋರ್ಡ್ ಶಾಲೆಗಳಲ್ಲಿ 5ನೇ ತರಗತಿಯ ವರೆಗೆ ಕನ್ನಡ ಮಾತೃಭಾಷೆಯನ್ನು ಬೋಧನಾ ಮಾಧ್ಯಮವನ್ನಾಗಿ ಕಡ್ಡಾಯಗೊಳಿಸುವುದು, ಶಾಲಾ ಶಿಕ್ಷಣದಲ್ಲಿ 2+8+4 ರಚನೆ (ಪೂರ್ವ ಪ್ರಾಥಮಿಕ- 2 ವರ್ಷ, ಪ್ರಾಥಮಿಕ- 8 ವರ್ಷ ಮತ್ತು ಮಾಧ್ಯಮಿಕ ಶಿಕ್ಷಣ- 4 ವರ್ಷ) ಅಳವಡಿಕೆ, ರಾಜ್ಯಾದ್ಯಂತ ಸ್ವಂತ ಮಾಧ್ಯಮಿಕ ಶಿಕ್ಷಣವನ್ನು ಸಾರ್ವತ್ರಿಕಗೊಳಿಸುವುದು, ವಲಸೆ ಹೋಗುವ ಮಕ್ಕಳಿಗಾಗಿ ವಸತಿ ಶಾಲೆಗಳ ಸ್ಥಾಪಿಸುವುದು ಹಾಗೂ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಪ್ರಾಥಮಿಕಶಾಲೆಗಳಲ್ಲಿ ನೀಡಬೇಕು ಎಂದು ಶಿಫಾರಸು ಮಾಡಿದೆ.

ಶಿಕ್ಷಣ ಬಜೆಟ್‌ನಲ್ಲಿ ಉನ್ನತ ಶಿಕ್ಷಣಕ್ಕೆ ಹಾಲಿ ಇರುವ ಅನುದಾನ ಪ್ರಮಾಣ ಶೇ.14ರಿಂದ ಶೇ.25-30ಕ್ಕೆ ಮರುಹಂಚಿಕೆ ಮಾಡಬೇಕು. ಕೆಲವು ಪರೋಕ್ಷ ತೆರಿಗೆಗಳ ಮೇಲೆ ಶಿಕ್ಷಣ ಸರ್ಚಾರ್ಜ ಪರಿಗಣಿಸಬೇಕು. ಪದವಿಪೂರ್ವ ಕಾರ್ಯಕ್ರಮಗಳಲ್ಲಿ ಸಮಗ್ರ ಲೈಂಗಿಕ ಶಿಕ್ಷಣವನ್ನು ಪರಿಚಯಿಸಬೇಕು. ಖಾಸಗಿ ಸಂಸ್ಥೆಗಳಲ್ಲಿ ಶುಲ್ಕ ನಿಯಂತ್ರಣಕ್ಕೆ ಶಾಶ್ವತ ನಿಯಂತ್ರಣ ವ್ಯವಸ್ಥೆ ಸ್ಥಾಪಿಸಬೇಕು ಎಂದು ಶಿಫಾರಸು ಮಾಡಲಾಗಿದೆ.
ಆಯೋಗವು ಶಾಲಾ ಶಿಕ್ಷಣಕ್ಕೆ 16 ಕಾರ್ಯಪಡೆ, ಉನ್ನತ ಶಿಕ್ಷಣಕ್ಕೆ 16, ಮತ್ತು ವೃತ್ತಿಪರ ಶಿಕ್ಷಣಕ್ಕೆ 3 ಸೇರಿದಂತೆ ಒಟ್ಟು 35 ಕಾರ್ಯಪಡೆಗಳನ್ನು ರಚಿಸಿತ್ತು. ಆಯೋಗದಲ್ಲಿ 379 ವಿಷಯ ತಜ್ಞರು ಇದ್ದರು. ಆಯೋಗದಿಂದ 42 ಸಭೆ ಹಾಗೂ ಕಾರ್ಯಪಡೆಯಿಂದ 132 ಸಭೆಗಳು ಹಾಗೂ 132 ಸಂವಾದಗಳನ್ನು ನಡೆಸಿತ್ತು.
ಆಯೋಗದ ಶಿಫಾರಸುಗಳು ವಾಸ್ತವ ಪರಿಸ್ಥಿತಿಯ ಸಮಗ್ರ ತಿಳಿವಳಿಕೆ ಆಧಾರದ ಮೇಲೆ ರೂಪಿಸಲಾಗಿದೆ. ವ್ಯಾಪಕ ಸಮಾಲೋಚನೆಗಳು, ಶಿಕ್ಷಣ ವಲಯದಿಂದ ಪರಿಶೀಲನೆ, ಪ್ರಾಯೋಗಿಕ ದತ್ತಾಂಶ, ಮಾಹಿತಿ ಮತ್ತು ದಶಕಗಳಿಂದ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಶಿಕ್ಷಣದಲ್ಲಿ ತೊಡಗಿಸಿಕೊಂಡವರ ಅನುಭವ ಆಧಾರದ ಮೇಲೆ ರಚಿಸಲಾಗಿದೆ ಎಂದು ಆಯೋಗವು ವಿವರಿಸಿತ್ತು.
2+8+4 ರಚನೆಯನ್ನು ಅಳವಡಿಸಿಕೊಳ್ಳಲು ಶಿಫಾರಸು: 2 ವರ್ಷ ಪೂರ್ವ-ಪ್ರಾಥಮಿಕ, 8 ವರ್ಷ ಪ್ರಾಥಮಿಕ, ಮತ್ತು 4 ವರ್ಷ ಮಾಧ್ಯಮಿಕ ಶಿಕ್ಷಣ. ವಲಸೆ ಹೋಗುವ ಮಕ್ಕಳಿಗಾಗಿ ವಸತಿ ಶಾಲೆಗಳನ್ನು ಸ್ಥಾಪಿಸಬೇಕು. ರಾಜ್ಯದಾದ್ಯಂತ ಮಾಧ್ಯಮಿಕ ಶಿಕ್ಷಣವನ್ನು ಸಾರ್ವತ್ರಿಕಗೊಳಿಸಬೇಕು. ಎಲ್ಲಾ ಬೋರ್ಡ್ ಶಾಲೆಗಳಲ್ಲಿ 5ನೇ ತರಗತಿಯವರೆಗೆ ಕನ್ನಡ/ಮಾತೃಭಾಷೆಯನ್ನು ಬೋಧನಾ ಮಾಧ್ಯಮವನ್ನಾಗಿ ಕಡ್ಡಾಯಗೊಳಿಸಬೇಕು. 2 ವರ್ಷಗಳ ಪೂರ್ವ-ಪ್ರಾಥಮಿಕ ಕಾರ್ಯಕ್ರಮಗಳನ್ನು ಪ್ರಾಥಮಿಕ ಶಾಲೆಗಳಿಗೆ ಲಗತ್ತಿಸಬೇಕು ಎಂದು ಹೇಳಿದೆ.
ಪ್ರತ್ಯೇಕ ನಿಯಂತ್ರಣ ಚೌಕಟ್ಟಿನ ಮೂಲಕ ಖಾಸಗಿ ಪೂರ್ವ-ಪ್ರಾಥಮಿಕ ಶಾಲೆಗಳನ್ನು ನಿಯಂತ್ರಿಸಬೇಕು. ಹಂತ-ಹಂತವಾಗಿ RTE ವ್ಯಾಪ್ತಿಯನ್ನು 4-18 ವಯಸ್ಸಿನವರಿಗೆ ವಿಸ್ತರಿಸಬೇಕು. ಸರ್ಕಾರಿ ಶಾಲಾ ಗುಣಮಟ್ಟವನ್ನು ಕೇಂದ್ರೀಯ ವಿದ್ಯಾಲಯಗಳಿಗೆ ಸಮನಾಗಿ ಹೆಚ್ಚಿಸಬೇಕು. ಶಾಲಾ ಶಿಕ್ಷಣಕ್ಕಾಗಿ ಸಮಗ್ರ ಪಠ್ಯಕ್ರಮವನ್ನು (CCSE) ಅಭಿವೃದ್ಧಿಪಡಿಸಬೇಕು ಎಂದು ಶಿಫಾರಸ್ಸು ಮಾಡಿದೆ.

ಎನ್‌ಸಿಇಆರ್‍ಟಿ ಪಠ್ಯಪುಸ್ತಕಗಳ ಅವಲಂಬನೆಯನ್ನು ಕೊನೆಗೊಳಿಸಿ, ವಿಷಯಗಳನ್ನು ಸ್ಥಳೀಯಗೊಳಿಸಬೇಕು. ಗುತ್ತಿಗೆ/ಅತಿಥಿ ಶಿಕ್ಷಕರ ನೇಮಕಾತಿಗಳನ್ನು ನಿಲ್ಲಿಸಬೇಕು. ಹೆಚ್ಚಿನ ಖಾಸಗೀಕರಣವನ್ನು ತಡೆಗಟ್ಟಬೇಕು. ಖಾಸಗಿ ಶಾಲೆಗಳಿಗಾಗಿ ಪ್ರತ್ಯೇಕ ನಿಯಂತ್ರಣ ಸಂಸ್ಥೆಯ ರಚನೆ. ಶೈಕ್ಷಣಿಕ ಪರಿಣಾಮಕ್ಕಾಗಿ ಬ್ಲಾಕ್ ಶಿಕ್ಷಣ ಕಚೇರಿಗಳಿಗೆ ಅಧಿಕಾರ ನೀಡಬೇಕು. ಭಾರತೀಯ ಜ್ಞಾನ ವ್ಯವಸ್ಥೆ ಕೋರ್ಸ್ ರಚನೆಗೆ ಒಂದು ಅಲಾಯದ ರಾಜ್ಯ ಸಮಿತಿ ರಚಿಸುವುದು. ಸಮಾನಾಂತರ ಏಜೆನ್ಸಿಗಳನ್ನು ಸಮಗ್ರ ಆಯುಕ್ತಾಲಯಕ್ಕೆ ವಿಲೀನಗೊಳಿಸಬೇಕು. DSERT ಅನ್ನು R&D ಗಾಗಿ ಸ್ವಾಯತ್ತ SCERT ಆಗಿ ಪರಿವರ್ತಿಸಬೇಕು. ಜೀವಮಾನ ಕಲಿಕೆ ನಿರ್ದೇಶನಾಲಯವನ್ನು ಪುನರುಜ್ಜಿವನಗೊಳಿಸಬೇಕು ಎಂದು ಶಿಫಾರಸ್ಸು ಮಾಡಿದೆ.
ಸಂವಿಧಾನ ಮತ್ತು ವೈಜ್ಞಾನಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಸಾರ್ವಜನಿಕ ಗ್ರಂಥಾಲಯಗಳನ್ನು ಬಳಸಿಕೊಳ್ಳುವ ಕುರಿತು ಪರಿಶೀಲಿಸಬೇಕು. ರಾಜ್ಯದ ಒಟ್ಟು ವೆಚ್ಚದಲ್ಲಿ ಶಿಕ್ಷಣದ ಪಾಲನ್ನು ಶೇ.30ಕ್ಕೆ ಹೆಚ್ಚಿಸಬೇಕು. ಪ್ರತಿ ವಿದ್ಯಾರ್ಥಿಗೆ ವಾರ್ಷಿಕವಾಗಿ 5-10%ರಷ್ಟು ವೆಚ್ಚ ಹೆಚ್ಚಳವನ್ನು ಖಚಿತಪಡಿಸಬೇಕು. ಸಮಾನತೆ, ಗುಣಮಟ್ಟ ಮತ್ತು ತರಬೇತಿಗಾಗಿ ಮೀಸಲು ಬಜೆಟ್ ಹಂಚಿಕೆ ಮಾಡಬೇಕು. ರಾಜ್ಯದ ಜವಾಬ್ದಾರಿಗಳನ್ನು ಬದಲಿಸದೆ, ರಾಜೇತರ ಸಂಸ್ಥೆಗಳಿಂದ ಹೆಚ್ಚುವರಿ ನಿಧಿಯನ್ನು ಸಂಗ್ರಹಿಸಬೇಕು. ಸಾಂವಿಧಾನಿಕ ಮೌಲ್ಯ ಶಿಕ್ಷಣ’ವನ್ನು ಕಡ್ಡಾಯ ವಿಷಯವನ್ನಾಗಿ ಮಾಡಬೇಕು. ಕರ್ನಾಟಕ ರಾಜ್ಯ ಮುಕ್ತ ಶಾಲಾ ವ್ಯವಸ್ಥೆಯನ್ನು ಸ್ಥಾಪಿಸಬೇಕು ಎಂದು ಹೇಳಿದೆ.
ಶಿಕ್ಷಣಕ್ಕಾಗಿ GSDPಯ 4% ಮತ್ತು 2034-35ರ ವೇಳೆಗೆ ಉನ್ನತ ಶಿಕ್ಷಣಕ್ಕಾಗಿ 1%ರಷ್ಟು ವೆಚ್ಚವನ್ನು ಹಂತ-ಹಂತವಾಗಿ ಹೆಚ್ಚಿಸಬೇಕು. ಶಿಕ್ಷಣ ಬಜೆಟ್‌ನ ಶೇ. 14 ರಿಂದ ಶೇ. 25-30ಕ್ಕೆ ಉನ್ನತ ಶಿಕ್ಷಣಕ್ಕಾಗಿ ಬಜೆಟ್ ಪಾಲನ್ನು ಮರುಹಂಚಿಕೆ ಮಾಡಬೇಕು. ಕೆಲವು ಪರೋಕ್ಷ ತೆರಿಗೆಗಳ ಮೇಲೆ ಶಿಕ್ಷಣ ಸರ್ಚಾರ್ಜ್ ಅನ್ನು ಪರಿಗಣಿಸಬೇಕು. ಹೆಚ್ಚಿದ ನಿಧಿಯ ಕನಿಷ್ಠ ಶೇ. 25ರಷ್ಟು ಮೂಲಸೌಕರ್ಯಕ್ಕಾಗಿ ಮೀಸಲಿಡಬೇಕು.
ಸಾಮಾನ್ಯ ಶಿಕ್ಷಣದಲ್ಲಿ ಪದವಿ ಮತ್ತು ಸ್ನಾತಕೋತ್ತರಕ್ಕಾಗಿ 3+2 ಮಾದರಿ ಮತ್ತು ವೃತ್ತಿಪರ ಕಾರ್ಯಕ್ರಮಗಳಿಗೆ 4+2 ಮಾದರಿ. NEP-2020 ಪೂರ್ವದ ಪುನಃ ಪ್ರವೇಶ ನೀತಿಯನ್ನು ಮುಂದುವರೆಸಬೇಕು. ಯಾವುದೇ ರಾಜ್ಯ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪ್ರವೇಶಕ್ಕೆ ಅವಕಾಶ (50% ಸೀಟುಗಳು ರೋಸ್ಟರ್ ನಿಯಮಗಳ ಪ್ರಕಾರ) ನೀಡಬೇಕು.
ಪದವಿ ಕ್ರೆಡಿಟ್ ಮಿತಿಯನ್ನು 160ಕ್ಕೆ ವಿಸ್ತರಿಸಿ ಮತ್ತು ಅಂತರ್-ಶಿಸ್ತಿನ ಮತ್ತು ಬಹು-ಶಿಸ್ತಿನ ಕೋರ್ಸ್‌ಗಳನ್ನು ಸೇರಿಸಬೇಕು. ಕನ್ನಡ/ಮಾತೃಭಾಷೆ/ಭಾರತೀಯ/ವಿದೇಶಿ ಭಾಷೆ ಸೇರಿದಂತೆ ಎರಡನೇ ಭಾಷಾ ಕೋರ್ಸ್ ಅನ್ನು ಕಡ್ಡಾಯಗೊಳಿಸಬೇಕು. ಸಾಂವಿಧಾನಿಕ ಮೌಲ್ಯ ಶಿಕ್ಷಣ ಮತ್ತು ಪರಿಸರ ಅಧ್ಯಯನಗಳ ಕುರಿತು ಕಡ್ಡಾಯ ಕೋರ್ಸ್‌ಗಳನ್ನು ಸೇರಿಸಬೇಕು ಎಂದು ಶಿಫಾರಸ್ಸು ಮಾಡಿತ್ತು.

2ನೇ ವರ್ಷದಲ್ಲಿ ಸಂಶೋಧನೆಗೆ ಒತ್ತು ನೀಡುವ 2 ವರ್ಷದ ಸ್ನಾತಕೋತ್ತರ ಪದವಿಯನ್ನು ನೀಡಬೇಕು. 5 ವರ್ಷಗಳ ಸಮಗ್ರ ಪದವಿ-ಸ್ನಾತಕೋತ್ತರ ಕಾರ್ಯಕ್ರಮಗಳನ್ನು ನೀಡಬೇಕು. ML, AI+X, ಆರೋಗ್ಯ, ಕೃಷಿ, ಕಾನೂನಿನಲ್ಲಿ ಸ್ನಾತಕೋತ್ತರ ಕಾರ್ಯಕ್ರಮಗಳನ್ನು ಪರಿಚಯಿಸಬೇಕು. ರಾಜ್ಯ ಪ್ರವೇಶ ಪರೀಕ್ಷೆಗಳ ಮೂಲಕ ಖಾಸಗಿ ವಿಶ್ವವಿದ್ಯಾಲಯಗಳಲ್ಲಿನ ಪದವಿ, ಸ್ನಾತಕೋತ್ತರ, ಪಿಎಚ್‌ಡಿ ಸೀಟುಗಳನ್ನು ಭರ್ತಿ ಮಾಡಬೇಕು.
1 ವರ್ಷ (ಕನಿಷ್ಠ ಅವಧಿ), 4 ವರ್ಷಗಳು (ಪೂರ್ಣ ಅವಧಿ). ಖಾಸಗಿ ಅನುದಾನರಹಿತ ಸಂಸ್ಥೆಗಳಲ್ಲಿ SC/ST/OBC ಮೀಸಲಾತಿ ನಿಯಮಗಳನ್ನು ಅನ್ವಯಿಸಬೇಕು. ಉನ್ನತ ವಿಶ್ವವಿದ್ಯಾಲಯಗಳು/ಕಾಲೇಜುಗಳನ್ನು “ರಾಜ್ಯ ಉತ್ಕೃಷ್ಟತಾ ಸಂಸ್ಥೆಗಳು” ಎಂದು ಗುರುತಿಸಬೇಕು. ಸಾಧ್ಯತೆಗಳ ಅಧ್ಯಯನದ ನಂತರವೇ ಹೊಸ ವಿಶ್ವವಿದ್ಯಾಲಯ/ಕಾಲೇಜುಗಳನ್ನು ತೆರೆಯಬೇಕು. ಹೊಸ ಶಿಕ್ಷಕರು ಬೋಧನೆ ಮಾಡುವ ಮೊದಲು 1-3 ತಿಂಗಳ ತರಬೇತಿಯನ್ನು ಪೂರ್ಣಗೊಳಿಸಬೇಕು. ಎಲ್ಲಾ ವಿಭಾಗಗಳಲ್ಲಿ “ಉನ್ನತ ಶಿಕ್ಷಣ ಶಿಕ್ಷಕರ ಅಕಾಡೆಮಿ ಕೇಂದ್ರ”ವನ್ನು ಸ್ಥಾಪಿಸಬೇಕು ಎಂದು ಹೇಳಿತ್ತು.
ಎಲ್ಲಾ ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಸ್ವತಂತ್ರ ಸಂಸ್ಥೆಗಳಲ್ಲಿ ಸಮಾನ ಅವಕಾಶಗಳ ಕೋಶಗಳನ್ನು ಸ್ಥಾಪಿಸಿ ಮತ್ತು ಬಲಪಡಿಸಬೇಕು. ಪದವಿಪೂರ್ವ ಕಾರ್ಯಕ್ರಮಗಳಲ್ಲಿ ಸಮಗ್ರ ಲೈಂಗಿಕ ಶಿಕ್ಷಣವನ್ನು ಪರಿಚಯಿಸಬೇಕು. ರಾಜ್ಯ ವಿಶ್ವವಿದ್ಯಾಲಯಗಳು, ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಸ್ವ-ಹಣಕಾಸು ಕೋರ್ಸ್‌ಗಳ ಶುಲ್ಕವನ್ನು ಕೈಗೆಟುಕುವಂತೆ ಇರಿಸಿ ಮತ್ತು ಸ್ವ-ಹಣಕಾಸು ಕೋರ್ಸ್‌ಗಳ ವೆಚ್ಚವನ್ನು ಭರಿಸಲು ಸಾರ್ವಜನಿಕ ಸಂಸ್ಥೆಗಳಿಗೆ ಅನುದಾನ ನೀಡಬೇಕು ಎಂದು ಶಿಫಾರಸ್ಸು ಮಾಡಿದೆ.
ಖಾಸಗಿ ಸಂಸ್ಥೆಗಳಲ್ಲಿ ಶುಲ್ಕವನ್ನು ನಿಯಂತ್ರಿಸಲು ಶಾಶ್ವತ ನಿಯಂತ್ರಣ ವ್ಯವಸ್ಥೆಯನ್ನು ರಚಿಸಬೇಕು. ವಿಶ್ವವಿದ್ಯಾಲಯಗಳು, ಕಾಲೇಜುಗಳು ಮತ್ತು ಸ್ವತಂತ್ರ ಸಂಸ್ಥೆಗಳು ಗುಣಮಟ್ಟ ಮತ್ತು ಶ್ರೇಷ್ಠತೆಯನ್ನು ಸುಧಾರಿಸಲು ಸಹಾಯ ಮಾಡಲು ಕರ್ನಾಟಕ ರಾಜ್ಯ ಗುಣಮಟ್ಟ ಮೌಲ್ಯಮಾಪನ ಮಂಡಳಿಯನ್ನು ಸ್ಥಾಪಿಸಬೇಕು. ಅವಶ್ಯಕತೆಗಳ ಆಧಾರದ ಮೇಲೆ 5 ವರ್ಷಗಳಲ್ಲಿ ಎಲ್ಲಾ ಖಾಯಂ ಬೋಧನಾ ಹುದ್ದೆಗಳನ್ನು ಭರ್ತಿ ಮಾಡಿ ಮತ್ತು ಅಗತ್ಯ ಬಜೆಟ್ ಹಂಚಿಕೆಯನ್ನು ಒದಗಿಸಬೇಕು.
ನಿವೃತ್ತಿ ಅಥವಾ ಹೊಸ ಹುದ್ದೆಗಳಿಂದಾಗಿ ಉಂಟಾಗುವ ಖಾಲಿ ಹುದ್ದೆಗಳನ್ನು ಸಮಯಕ್ಕೆ ಸರಿಯಾಗಿ ಭರ್ತಿ ಮಾಡಿ, ಇದರಿಂದ ಮಂಜೂರಾದ ಮತ್ತು ಭರ್ತಿಯಾದ ಹುದ್ದೆಗಳ ನಡುವಿನ ಅಂತರವು ಶೇ.5 ಮೀರುವುದಿಲ್ಲ. ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರನ್ನು KEA ಮೂಲಕ ಲಿಖಿತ ಪರೀಕ್ಷೆ + ವಿಶ್ವವಿದ್ಯಾಲಯದ ಸಂದರ್ಶನದ ಮೂಲಕ ಭರ್ತಿ ಮಾಡಬೇಕು ಎಂದು ಶಿಫಾರಸ್ಸು ಮಾಡಿದೆ.
ಸರ್ಕಾರಿ ಕಾಲೇಜುಗಳ ಅರ್ಹ UGC-ಅರ್ಹ ಶಿಕ್ಷಕರಿಂದ ಮಾತ್ರ ಅರ್ಜಿಗಳು. ಪಿಹೆಚ್‌ಡಿ ವಿದ್ಯಾರ್ಥಿಗಳಿಗೆ ರಾಜ್ಯದಿಂದ ಜೂನಿಯರ್ ರಿಸರ್ಚ್ ಫೆಲೋಶಿಪ್‌ಗಳನ್ನು ಒದಗಿಸಬೇಕು. ನಿರ್ದಿಷ್ಟವಾಗಿ ಉತ್ತರ ಕರ್ನಾಟಕ ಮತ್ತು ಕಡಿಮೆ ಸಾಧನೆ ಹೊಂದಿರುವ ಜಿಲ್ಲೆಗಳಲ್ಲಿನ ಗ್ರಾಮೀಣ ಮತ್ತು ಕಡಿಮೆ-ಸಾಧನೆಯ ಪ್ರದೇಶಗಳಲ್ಲಿ ದಾಖಲಾತಿಯನ್ನು ಸುಧಾರಿಸಲು ಮತ್ತು ಡ್ರಾಪ್‌ಔಟ್‌ಗಳನ್ನು ಕಡಿಮೆ ಮಾಡಲು ನೀತಿಗಳನ್ನು ಸುಧಾರಿಸಬೇಕು.
ಪೋಸ್ಟ್-ಮೆಟ್ರಿಕ್ ಸ್ಕಾಲರ್‌ಶಿಪ್‌ನಲ್ಲಿ ಕಡಿಮೆ ಆದಾಯದ ಗುಂಪುಗಳಿಗೆ ಸಂಪೂರ್ಣ ಉಚಿತ ಶಿಪ್ ಮತ್ತು ಸ್ಕಾಲರ್‌ಶಿಪ್ ವ್ಯಾಪ್ತಿಯನ್ನು ಖಚಿತಪಡಿಸಬೇಕು. ಪೋಸ್ಟ್-ಮೆಟ್ರಿಕ್ ಸ್ಕಾಲರ್‌ಶಿಪ್ ವ್ಯಾಪ್ತಿಯನ್ನು ವಿಸ್ತರಿಸಿ ಮತ್ತು ಆದಾಯ ಮಿತಿಯನ್ನು ವಾರ್ಷಿಕ ರೂ.10 ಲಕ್ಷಕ್ಕೆ ಹೆಚ್ಚಿಸಬೇಕು. ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಅನುದಾನರಹಿತ ಕಾಲೇಜುಗಳಲ್ಲಿ ಹೆಣ್ಣುಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣ, ದೇಶೀಯ/ಆರ್ಥಿಕ ಚಟುವಟಿಕೆಗಳಿಗಿಂತ ಶಿಕ್ಷಣಕ್ಕೆ ಆದ್ಯತೆ ನೀಡಲು ಹೆಣ್ಣುಮಕ್ಕಳಿಗೆ ಪ್ರೋತ್ಸಾಹ ಮತ್ತು ಬಾಲ್ಯ ವಿವಾಹವನ್ನು ತಡಮಾಡಲು ಆರ್ಥಿಕ ಪ್ರೋತ್ಸಾಹಗಳನನ್ನು ನೀಡಬೇಕು ಎಂದು ಹೇಳಿತ್ತು.
ಉದ್ಯೋಗ-ಸಂಬಂಧಿತ ಸಾಲ ಮರುಪಾವತಿ ವ್ಯವಸ್ಥೆಯೊಂದಿಗೆ ಶಿಕ್ಷಣಕ್ಕಾಗಿ ಸಾರ್ವಜನಿಕ-ಖಾಸಗಿ ನಿಧಿ ಪಾಲುದಾರಿಕೆ ಬೆಂಬಲದ ಅಡಿಯಲ್ಲಿ ಕರ್ನಾಟಕ ರಾಜ್ಯ ಶಿಕ್ಷಣ ಹಣಕಾಸು ನಿಗಮವನ್ನು (KSEFC) ಸ್ಥಾಪಿಸಬೇಕು. ಮೆರಿಟ್ ಆಧಾರದ ಮೇಲೆ ಖಾಸಗಿ ಅನುದಾನರಹಿತ ಸಂಸ್ಥೆಗಳಿಗೆ ಪ್ರವೇಶ ಪಡೆಯುವ ಎಲ್ಲಾ ಕಡಿಮೆ ಆದಾಯದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ಗಳನ್ನು ಒದಗಿಸಬೇಕು.
ಸಂವಿಧಾನದ ಅನುಚ್ಛೇದ 15(5) ರ ಪ್ರಕಾರ ಖಾಸಗಿ ಅನುದಾನರಹಿತ ವಿಶ್ವವಿದ್ಯಾಲಯಗಳು, ಡೀಮ್ಸ್ ವಿಶ್ವವಿದ್ಯಾಲಯಗಳು, ಕಾಲೇಜುಗಳು ಮತ್ತು ಸ್ವತಂತ್ರ ಸಂಸ್ಥೆಗಳಲ್ಲಿ SC/ST/OBC ಮೀಸಲಾತಿಯನ್ನು ಒದಗಿಸಲು ನಿಯಮಗಳನ್ನು ಜಾರಿಗೆ ತರಬೇಕು. ಖಾಸಗಿ ಅನುದಾನರಹಿತ ಕಾಲೇಜುಗಳಲ್ಲಿ ಮೂಲಸೌಕರ್ಯ, ಪ್ರವೇಶ, ಮೀಸಲಾತಿ, ಬೋಧನಾ ಗುಣಮಟ್ಟ, ಅಧ್ಯಾಪಕರ ಸಮಸ್ಯೆಗಳು, ಹೊಣೆಗಾರಿಕೆ ಮತ್ತು ಕುಂದುಕೊರತೆಗಳನ್ನು ಮೇಲ್ವಿಚಾರಣೆ ಮಾಡಲು ಕಾಲೇಜು ಶಿಕ್ಷಣ ಆಯುಕ್ತರ ಅಡಿಯಲ್ಲಿ ಪ್ರತ್ಯೇಕ ನಿರ್ದೇಶನಾಲಯವನ್ನು ರಚಿಸಬೇಕು ಎಂದು ಶಿಫಾರಸ್ಸು ಮಾಡಿತ್ತು.
ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿಗಳನ್ನು 6ರಿಂದ 4ಕ್ಕೆ ಇಳಿಸಿ, ಹೊಸ ಜಿಲ್ಲಾ ಮಟ್ಟದ ಕಚೇರಿಗಳನ್ನು ಶಿಕ್ಷಣ ತಜ್ಞರ ನೇತೃತ್ವದಲ್ಲಿ ಇರಿಸುವ ಮೂಲಕ ಆಡಳಿತವನ್ನು ಪುನರಚಿಸಬೇಕು. ಪ್ರತಿ ವಿಶ್ವವಿದ್ಯಾಲಯದಲ್ಲಿ ವಿದೇಶಿ ವಿದ್ಯಾರ್ಥಿಗಳ ಕೋಶವನ್ನು ಸ್ಥಾಪಿಸಬೇಕು. ಶಿಕ್ಷಣದ ಎಲ್ಲಾ ವಿಭಾಗಗಳಲ್ಲಿ ಉದ್ಯೋಗ ಆಧಾರಿತ ವೃತ್ತಿಪರ ಕೋರ್ಸ್‌ಗಳನ್ನು ಹೆಚ್ಚಿಸಬೇಕು.
ವಿವಿಧ ವೃತ್ತಿಪರ ವಿಭಾಗಗಳಲ್ಲಿ, ವಿಶೇಷವಾಗಿ ಗ್ರಾಮೀಣ ಮತ್ತು ಕೃಷಿ ಸಂಬಂಧಿತ ಕೋರ್ಸ್‌ಗಳಲ್ಲಿ ಅಲ್ಪಾವಧಿಯ ಡಿಪ್ಲೊಮಾ ಮತ್ತು ಪ್ರಮಾಣಪತ್ರ ಕೋರ್ಸ್‌ಗಳನ್ನು ಪ್ರೋತ್ಸಾಹಿಸಬೇಕು. ಸಾಮಾನ್ಯ ಪದವಿ ಕೋರ್ಸ್‌ಗಳು ಮತ್ತು ವೃತ್ತಿಪರ ಕೋರ್ಸ್‌ಗಳಲ್ಲಿ ದಾಖಲಾದ ವಿದ್ಯಾರ್ಥಿಗಳಿಗೆ ಸರ್ಕಾರವು ಪಾವತಿಸಿದ ಇಂಟರ್ನ್ ಶಿಪ್ ಸೌಲಭ್ಯಗಳನ್ನು ಪ್ರಾರಂಭಿಸಬೇಕು. ಕರ್ನಾಟಕದ ಪ್ರತಿ ವಿಭಾಗದಲ್ಲಿ ಸ್ಥಳೀಯ ಉದ್ಯಮದ ಮುಖಂಡರ ನೇತೃತ್ವದಲ್ಲಿ ವಿಭಾಗ-ನಿರ್ದಿಷ್ಟ ಕೌಶಲ್ಯ ಮಂಡಳಿಗಳನ್ನು ಸ್ಥಾಪಿಸಬೇಕು ಎಂದು ಶಿಫಾರಸ್ಸು ಮಾಡಿತ್ತು.
ಉದ್ಯಮಶೀಲತೆ ಮತ್ತು ಆವಿಷ್ಕಾರ ಕೇಂದ್ರಿತ ವಿಧಾನವನ್ನು ಪೋಷಿಸಬೇಕು. ಸುಸ್ಥಿರ ಮತ್ತು ಹಸಿರು ಕೌಶಲ್ಯಗಳ ಅಭಿವೃದ್ಧಿಗೆ ಅದ್ಯತೆ ನೀಡಬೇಕು. ಉದ್ಯಮ-ಶೈಕ್ಷಣಿಕ ಸಹಯೋಗವನ್ನು ಪ್ರಮುಖ ನೀತಿಯ ಆಧಾರಸ್ತಂಭವಾಗಿ ಸಂಯೋಜಿಸಬೇಕು. ತಂತ್ರಜ್ಞಾನ-ವರ್ಧಿತ ಕಲಿಕೆ ಮತ್ತು ಡಿಜಿಟಲ್ ಸಾಕ್ಷರತೆಗೆ ಆದ್ಯತೆ ನೀಡಬೇಕು. ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಶಿಕ್ಷಣ ಪಠ್ಯಕ್ರಮವು ರಾಷ್ಟ್ರೀಯ/ರಾಜ್ಯ ಗುರಿಗಳಿಗೆ ಅನುಗುಣವಾಗಿರಬೇಕು.
ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಶಿಕ್ಷಣದಲ್ಲಿ ಕ್ವಾಂಟಮ್ ಕಂಪ್ಯೂಟಿಂಗ್, AI, ML, DS, ಜೀವ ವಿಜ್ಞಾನ ಮತ್ತು ನ್ಯಾನೋ ವಿಜ್ಞಾನದಂತಹ ಟ್ರೆಂಡಿಂಗ್ ತಂತ್ರಜ್ಞಾನಗಳನ್ನು ಹೆಚ್ಚಿಸಬೇಕು. ಕೃಷಿಯಲ್ಲಿ ತಂತ್ರಜ್ಞಾನದ ಏಕೀಕರಣದೊಂದಿಗೆ ಹೊಸ ಕೋರ್ಸ್‌ಗಳನ್ನು ಪರಿಚಯಿಸುವುದು. ಕೃಷಿ ವಿಶ್ವವಿದ್ಯಾಲಯಗಳಿಂದ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಆಹಾರ ಸಂಸ್ಮರಣೆ ಮತ್ತು ನಿಖರ ಕೃಷಿಯಲ್ಲಿ ಡಿಪ್ಲೊಮಾವನ್ನು ಪ್ರೋತ್ಸಾಹಿಸಬೇಕು.
ಕೃಷಿ ವಿಶ್ವವಿದ್ಯಾಲಯಗಳಲ್ಲಿನ ಪದವಿಪೂರ್ವ ಅಧ್ಯಯನದ ಭಾಗವಾಗಿ ಸಾಂವಿಧಾನಿಕ ಮೌಲ್ಯ ಶಿಕ್ಷಣ ಇರಬೇಕು. ಶಾಲಾ ಮತ್ತು ಪದವಿಪೂರ್ವ ಶಿಕ್ಷಣದಿಂದಲೇ ಕೃಷಿ/ಕೃಷಿ ಅಧ್ಯಯನವನ್ನು ಪರಿಚಯಿಸುವುದು. ಖಾಸಗಿ ಕೃಷಿ ವಿಶ್ವವಿದ್ಯಾಲಯಗಳ ಸ್ಥಾಪನೆಯನ್ನು ನಿರ್ಬಂಧಿಸಿ. ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ NRI ಪ್ರವೇಶವನ್ನು (ಶೇ,10ಕ್ಕೆ ಹೆಚ್ಚಿಸಲಾಗಿದೆ) ಮುಂದುವರೆಸಬೇಕು.
ಕೃಷಿ ಕ್ಷೇತ್ರದಲ್ಲಿ ಡ್ಯುಯಲ್/ಜಂಟಿ ಪದವಿಗಳು, ವಿನಿಮಯ ಕಾರ್ಯಕ್ರಮಗಳು ಮತ್ತು ಅಂತರಾಷ್ಟ್ರೀಯ ಇಂಟರ್ನ್ ಶಿಪ್‌ಗಳನ್ನು ಉತ್ತೇಜಿಸಿ ಮತ್ತು PPP ಮಾದರಿಯಲ್ಲಿ ವಿದೇಶಿ ಸಂಸ್ಥೆಗಳು ಅಥವಾ ಕ್ಯಾಂಪಸ್‌ಗಳಿಗೆ ಅವಕಾಶ ನೀಡಬೇಕು. ಕೃಷಿ ಸಂದರ್ಭಕ್ಕಾಗಿ ಕನ್ನಡ ಭಾಷೆಯ ಪಠ್ಯಪುಸ್ತಕಗಳ ಅಭಿವೃದ್ಧಿಪಡಿಸಬೇಕು ಎಂದು ಶಿಫಾರಸು ಮಾಡಿರುವುದನ್ನು ಸ್ಮರಿಸಬಹುದು.







