ಬೆಂಗಳೂರು; ಸಕ್ಕರೆ ಕಾರ್ಖಾನೆಗಳಿಗೆ ಅಂದಾಜು ಎರಡು ಸಾವಿರ ಕೋಟಿ ರುಪಾಯಿ ಸಾಲ ಮಂಜೂರಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾಗಿರುವ ಅವ್ಯವಹಾರಗಳ ಆರೋಪಗಳಡಿಯಲ್ಲಿ ಅಪೆಕ್ಸ್ ಬ್ಯಾಂಕ್‌ನ ಹಿಂದಿನ ಅಧ್ಯಕ್ಷ ಹಾಗೂ ಮಾಜಿ ಸಚಿವ ಕೆ ಎನ್ ರಾಜಣ್ಣ ಹಾಗೂ ಸಿ ಎನ್ ದೇವರಾಜ್ ಅವರ ವಿರುದ್ಧ ಲೋಕಾಯುಕ್ತದಲ್ಲಿ ಖಾಸಗಿ ದೂರು ದಾಖಲಿಸಲು ಕೋರಿದ್ದ ಮನವಿಯು ಕಳೆದ 4 ವರ್ಷಗಳಿಂದಲೂ ತೆವಳುತ್ತಲೇ ಇದೆ.
ಖಾಸಗಿ ದೂರು ದಾಖಲಿಸಲು ಮುಂದಾಗಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಂಬುವರು ರಾಜ್ಯಪಾಲರ ಪೂರ್ವಾನುಮತಿ ಕೋರಿ ಮನವಿ ಸಲ್ಲಿಸಿದ್ದರು. ಈ ಮನವಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಪಾಲರು, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ರವಾನಿಸಿದ್ದರು. ಈ ಮನವಿಗೆ ಸಂಬಂಧಿಸಿದಂತೆ ಸಹಕಾರ ಇಲಾಖೆಯು ಕಾನೂನು ಸಚಿವರು ಮತ್ತು ಕಾನೂನು ಇಲಾಖೆ ಅಭಿಪ್ರಾಯ ಕೋರಿತ್ತು.
ಈ ಸಂಬಂಧ ಕಾನೂನು ಸಚಿವ ಎಚ್ ಕೆ ಪಾಟೀಲ್ ಅವರು ನೀಡಿರುವ ಅಭಿಪ್ರಾಯವನ್ನು ಅವರ ಕಚೇರಿಯೂ ಬಹಿರಂಗಪಡಿಸಿಲ್ಲ. ಆರ್‍ಟಿಐ ಅಡಿ ಸಲ್ಲಿಸಿದ್ದ ಅರ್ಜಿಗೆ ಕಡತದ ಚಲನವಲನ ಮಾಹಿತಿ ನೀಡಿ ಕೈತೊಳೆದುಕೊಂಡಿದೆ. ಹೀಗಾಗಿ ಸಚಿವ ಎಚ್ ಕೆ ಪಾಟೀಲ್ ಅವರ ಕಚೇರಿಯು, ಸಚಿವರು ಏನು ಅಭಿಪ್ರಾಯ ನೀಡಿದ್ದಾರೆ ಎಂಬ ಮಾಹಿತಿಯೂ ಬಹಿರಂಗವಾಗಿಲ್ಲ.
ಈ ಬೆಳವಣಿಗೆಗಳು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ. ಅಪೆಕ್ಸ್ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾಗಿರುವ 2 ಸಾವಿರ ಕೋಟಿ ರುಪಾಯಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಒಳಪಡಿಸದಿರಲು ಹಿಂದಿನ ಬಿಜೆಪಿ ಸರ್ಕಾರವೂ ನಿಲುವು ತಳೆದಿತ್ತು. ಈಗಿನ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವೂ ಸಹ ಲೋಕಾಯುಕ್ತದಲ್ಲಿ ಖಾಸಗಿ ದೂರು ದಾಖಲಿಸಲು ಪೂರ್ವಾನುಮತಿ ನೀಡಲು ಹಿಂದೇಟು ಹಾಕುತ್ತಿದೆ. ಕಾನೂನು ಸಚಿವರ ಅಭಿಪ್ರಾಯವನ್ನೂ ಮುಚ್ಚಿಡಲಾಗುತ್ತಿದೆ!
ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಕೆ ಎನ್ ರಾಜಣ್ಣ ಮತ್ತು ಸಿ ಎನ್ ದೇವರಾಜ್ ಅವರ ವಿರುದ್ಧ ಖಾಸಗಿ ದೂರು ದಾಖಲಿಸಲು 2023ರ ಆಗಸ್ಟ್ 23ರಂದೇ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಈ ಮನವಿ ಆಧರಿಸಿ ಕ್ರಮಕೈಗೊಳ್ಳಬೇಕು ಎಂದು ರಾಜ್ಯಪಾಲರ ಕಚೇರಿಯು ಸರ್ಕಾರಕ್ಕೆ ಸೂಚಿಸಿತ್ತು.

ರಾಜ್ಯಪಾಲರಿಗೆ ಸಲ್ಲಿಸಿದ ಮನವಿಯಲ್ಲೇನಿದೆ?
ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಾದ ಸಿ ಎನ್ ದೇವರಾಜ್ ಅವರು ಖಾಸಗಿ ವ್ಯಕ್ತಿಗಳು, ವಾಣೀಜ್ಯ ಸಂಸ್ಥೆಗಳು ಮತ್ತು ಟ್ರಸ್ಟ್‌ಗಳಿಗೆ ಯಾವುದೇ ಜಾಮೀನು ಮತ್ತು ಭದ್ರತೆ ಪಡೆಯದೇ ಕಟ್ಟಡ ನಿರ್ಮಾಣ ಕಂಪನಿ, ಸಕ್ಕರೆ ಕಾರ್ಖಾನೆ, ಚಿನ್ನದ ಅಂಗಡಿಗಳಿಗೆ ಬೇಕಾಬಿಟ್ಟಿಯಾಗಿ ನೂರಾರು ಕೋಟಿ ರು ಸಾಲ ನೀಡಿ ಅವ್ಯವಹಾರ ನಡೆಸಿದ್ದಾರೆ. ಇದು ತನಿಖೆಯಿಂದಲೂ ಸಾಬೀತಾಗಿದೆ. ಉನ್ನತ ತನಿಖೆ ನಡೆಸಲು ಶಿಫಾರಸ್ಸು ಮಾಡಲಾಗಿದೆ.

ಸಿ ಎನ್ ದೇವರಾಜ್ ಮತ್ತು ಬ್ಯಾಂಕ್ ಅಧ್ಯಕ್ಷರಾದ ಕೆ ಎನ್ ರಾಜಣ್ಣ ಅವರ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿ ತನಿಖೆಗೊಳಪಡಿಸಲು ಭ್ರಷ್ಟಾಚಾರ ತಡೆ ಅಧಿನಿಯಮ 1988ರ ಪ್ರಕರಣ 19 ಮತ್ತು ದಂಡ ಪ್ರಕ್ರಿಯೆ ಸಂಹಿತೆ 1973ರ ಪ್ರಕರಣ 197ರ ಅಡಿ ಮಂಜೂರಾತಿ ನೀಡಬೇಕು ಎಂದು ಕೋರಿದ್ದರು.
ಸಹಕಾರ ಮತ್ತು ಸಹಕಾರೇತರ ಸಕ್ಕರೆ ಕಾರ್ಖಾನೆಗಳು ಅಪೆಕ್ಸ್ ಬ್ಯಾಂಕ್‌ನಿಂದ ಒಂದು ಸಾವಿರ ಕೋಟಿ ರುಪಾಯಿಗಳಿಗೂ ಅಧಿಕ ಸಾಲ ಪಡೆದಿವೆ. ಅದರೆ ನಿಗದಿತ ಸಮಯಕ್ಕೆ ಸಾಲವನ್ನು ಮರುಪಾವತಿಸಿಲ್ಲ. ಸಕ್ಕರೆ ಕಾರ್ಖಾನೆಗಳಿಗೆ ಸಾಲ ನೀಡುವ ಮುನ್ನ ಕಾರ್ಖಾನೆಗಳ ಸ್ಥಿರಾಸ್ತಿ, ಚರಾಸ್ತಿ ಮೌಲ್ಯವನ್ನು ಪರಿಗಣಿಸಿಲ್ಲ. ಭಾರೀ ಪ್ರಮಾಣದ ಅಕ್ರಮ ನಡೆಸುವ ಮೂಲಕ ಸಾಲ ನೀಡಲು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿದ್ದ ಕೆ ಎನ್ ರಾಜಣ್ಣ ಅವರು ಮಂಜೂರಾತಿ ನೀಡಿದ್ದಾರೆ ಎಂದು ದಿನೇಶ್ ಕಲ್ಲಹಳ್ಳಿ ಅವರು ಮನವಿಯಲ್ಲಿ ವಿವರಿಸಿದ್ದರು.
ಈ ಕುರಿತು ಅಗತ್ಯ ಕ್ರಮ ವಹಿಸಬೇಕು ಎಂದು ರಾಜ್ಯಪಾಲರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ 2023ರ ನವೆಂಬರ್ 3ರಂದು ಹಿಂಬರಹ ನೀಡಿದ್ದರು. 3 ವರ್ಷಗಳಾದರೂ ಯಾವುದೇ ಕ್ರಮವಹಿಸಿಲ್ಲ.
ಇದಕ್ಕೆ ಸಂಬಂಧಿಸಿದ ಕಡತವು (ಸಂಖ್ಯೆ; ಸಿಒ 253 ಇಸಿಎ 2022 (ಗಣಕ ಸಂಖ್ಯೆ 897675) 2024ರ ಸೆ.27ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ರವಾನೆಯಾಗಿತ್ತು. ಆ ನಂತರ ಈ ಕಡತವು ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಅವರ ಪರಿಶೀಲನೆಯಲ್ಲಿತ್ತು ಎಂದು ಸಹಕಾರ ಇಲಾಖೆಯು ದಿನೇಶ್ ಕಲ್ಲಹಳ್ಳಿ ಅವರಿಗೆ 2025ರ ಮೇ 6ರಂದು ಹಿಂಬರಹ ನೀಡಿತ್ತು.

ಅಲ್ಲದೇ 2025ರ ನವೆಂಬರ್ 7ರಂದೂ ಮತ್ತೊಂದು ಹಿಂಬರಹ ನೀಡಿತ್ತು.

ಕಾನೂನು ಸಚಿವರ ಅಭಿಪ್ರಾಯವನ್ನೇಕೆ ಬಹಿರಂಗಪಡಿಸಿಲ್ಲ?
ಈ ಕುರಿತು ‘ದಿ ಫೈಲ್’, ಅರ್ ಟಿ ಐ ಅಡಿ ಕಾನೂನು ಸಚಿವ ಎಚ್ ಕೆ ಪಾಟೀಲ್ ಅವರ ಕಚೇರಿಗೆ ಅರ್ಜಿ ಸಲ್ಲಿಸಿತ್ತು. ಇದಕ್ಕೆ ಮಾಹಿತಿ ನೀಡಿರುವ ಸಚಿವರ ಕಚೇರಿಯು, ಕಾನೂನು ಸಚಿವರು ನೀಡಿರುವ ಅಭಿಪ್ರಾಯವನ್ನು ಒದಗಿಸಿಲ್ಲ. ಬದಲಿಗೆ ಕಡತದ ಚಲನವಲನದ ಮಾಹಿತಿಯನ್ನಷ್ಟೇ ನೀಡಿ ಕೈ ತೊಳೆದುಕೊಂಡಿದೆ.

ಸಚಿವರ ಕಚೇರಿಯು ನೀಡಿರುವ ಕಡತದ ಚಲನವಲನ ಮಾಹಿತಿ ಪ್ರಕಾರ ಈ ಕಡತವನ್ನು ಸಚಿವ ಎಚ್ ಕೆ ಪಾಟೀಲ್ ಅವರು ಪರಿಶೀಲಿಸಿದ್ದಾರೆ. 2025ರ ಮೇ 22ರ ಬೆಳಿಗ್ಗೆ 11.44ಕ್ಕೆ ಕಾನೂನು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ರವಾನಿಸಿದ್ದರು.

ಇದಕ್ಕೂ ಮೊದಲು ಇದೇ ಕಡತವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯಾಗಿದ್ದ ಮೇಜರ್ ಮಣಿವಣ್ಣನ್, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಎಲ್ ಕೆ ಅತೀಕ್, ಮತ್ತೊಬ್ಬ ಕಾರ್ಯದರ್ಶಿ ಜಿಯಾವುಲ್ಲಾ ಅವರ ಪರಿಶೀಲನೆಗೆ ಒಳಪಟ್ಟಿರುವುದು ಆರ್‍ಟಿಐನಿಂದ ತಿಳಿದು ಬಂದಿದೆ.
ಸಿಬಿಐ ತನಿಖೆ ನಡೆಸುತ್ತಿಲ್ಲವೇಕೆ?
ಬ್ಯಾಂಕ್‌ನ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಕೇಂದ್ರದ ಗೃಹ ಮತ್ತು ಸಹಕಾರ ಸಚಿವಾಲಯದ ಕೇಂದ್ರ ಸಹಕಾರ ಸಂಘಗಳ ನಿಬಂಧಕರು 2022ರ ಫೆ.21ರಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು. ಬೆನ್ನಲ್ಲೇ ಸಿಬಿಐ ತನಿಖೆಗೆ ಒಳಪಡಿಸದಿರಲು ನಿಲುವು ತಳೆದಿತ್ತು.
ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾಗಿರುವ ಸಾಲದ ಹಗರಣದ ತನಿಖೆಗೆ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಬೇಕು ಎಂದು ಉದ್ಯೋಗಿಗಳು ಮತ್ತು ಅಧಿಕಾರಿಗಳ ಒಕ್ಕೂಟವು 2019ರ ಫೆ.4ರಂದು ಕೇಂದ್ರ ಹಣಕಾಸು ಸಚಿವರಿಗೆ ಸಲ್ಲಿಸಿದ್ದ ದೂರು ಸಲ್ಲಿಸಿತ್ತು. ಆದರೆ ಅದೊಂದು ಅನಾಮಧೇಯ ದೂರು ಅರ್ಜಿ ಎಂದು ಅಪೆಕ್ಸ್ ಬ್ಯಾಂಕ್ ನೀಡಿದ್ದ ಉತ್ತರಕ್ಕೆ ಸಹಕಾರ ಇಲಾಖೆಯು ಮಣೆ ಹಾಕಿತ್ತು.

ಈ ಕುರಿತು ಜೆಡಿಎಸ್ ಶಾಸಕ ಸಾ ರಾ ಮಹೇಶ್ ಅವರು ನೀಡಿದ್ದ ನಿಯಮ 351ರ ಅಡಿ ಸೂಚನೆಗೆ ಸಂಬಂಧಿಸಿದಂತೆ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಅವರು ಸಿಬಿಐ ತನಿಖೆಗೆ ಒಳಪಡಿಸುವ ಅಗತ್ಯತೆ ಕಂಡು ಬರುವುದಿಲ್ಲ ಎಂದು ಮಾಹಿತಿ ಒದಗಿಸಿದ್ದರು.

ಮಾಜಿ ಶಾಸಕ ಕೆ ಎನ್ ರಾಜಣ್ಣ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಶಾಸಕರು ಮತ್ತು ರಾಜಕಾರಣಿಗಳ ಒಡೆತನದ ಸಕ್ಕರೆ ಕಾರ್ಖಾನೆಗಳಿಗೆ ಅಪೆಕ್ಸ್ ಬ್ಯಾಂಕ್ ಮೂಲಕ ಸಾಲ ಮಂಜೂರಾತಿಯಲ್ಲಿ ನಡೆದಿದೆ ಎನ್ನಲಾಗಿರುವ 2 ಸಾವಿರ ಕೋಟಿ ರು. ಹಗರಣ ತನಿಖೆ ನಡೆಸಬೇಕು ಸಹಕಾರ ಸಂಘಗಳ ರಿಜಿಸ್ಟ್ರಾರ್ ಎನ್ ಎಸ್ ಪ್ರಸನ್ನಕುಮಾರ್ ಅವರು 3 ವರ್ಷದ ಹಿಂದೆ ಗೌಪ್ಯ ಪತ್ರ ಬರೆದಿದ್ದರು.
ದೂರಿನಲ್ಲಿ ಹೇಳಿರುವ ಅಂಶಗಳು ಗಂಭೀರ ಸ್ವರೂಪದಲ್ಲಿವೆ. ಶಾಸಕರ ಒಡೆತನದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಸೂಕ್ತ ದಾಖಲೆಗಳಿಲ್ಲದೆಯೇ 2,000 ಕೋಟಿ ರು.ಮೊತ್ತದ ಸಾಲ ನೀಡಲಾಗಿದೆ. ನೀಡಿರುವ ಸಾಲ ವಸೂಲಿಯಾಗಿಲ್ಲ. ಬ್ಯಾಂಕ್‌ನ ಹಾಲಿ ಅಧ್ಯಕ್ಷ ರಾಜಣ್ಣ, ಬ್ಯಾಂಕ್‌ನ ಹಿಂದಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೇವರಾಜ್, ಮುಖ್ಯ ವ್ಯವಸ್ಥಾಪಕ ಜಂಗಮಪ್ಪ ಮತ್ತು ಇತರ ನಿರ್ದೇಶಕರು ಇದರಲ್ಲಿ ಭಾಗಿ ಆಗಿದ್ದಾರೆ ಸಹಕಾರ ಸಂಘಗಳ ನಿಬಂಧಕರಾಗಿದ್ದ ಐಎಎಸ್ ಅಧಿಕಾರಿ ಎನ್ ಎಸ್ ಪ್ರಸನ್ನಕುಮಾರ್ ಗೌಪ್ಯ ಪತ್ರ ಬರೆದಿದ್ದರು.
ಹೀಗಾಗಿ ಈ ಪ್ರಕರಣದ ತನಿಖೆಯನ್ನು ವಿಸ್ತೃತವಾಗಿ ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಲೆಕ್ಕಪರಿಶೋಧಕರು, ಸಹಕಾರ ಸಂಘಗಳ ಹೆಚ್ಚುವರಿ ನಿಬಂಧಕರು ನಬಾರ್ಡ್ ಪ್ರತಿನಿಧಿಯನ್ನೊಳಗೊಂಡ ಸಮಿತಿ ರಚಿಸಿ ನವೆಂಬರ್30ರೊಳಗೆ ವರದಿ ಸಲ್ಲಿಸಲು ಸೂಚಿಸಬೇಕು,’ ಎಂದು ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ ಎನ್‌ನಾಗಾಂಬಿಕಾದೇವಿ ಅವರಿಗೆ ಪತ್ರದಲ್ಲಿ ಕೋರಿದ್ದನ್ನು ಸ್ಮರಿಸಬಹುದು.

ಬ್ಯಾಂಕ್‌ನ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ದೂರು ಅರ್ಜಿಗಳಲ್ಲಿನ ಅಂಶಗಳನ್ನು ಬ್ಯಾಂಕ್‌ನ ದಾಖಲಾತಿಗಳೊಂದಿಗೆ ಪರಿಶೀಲಿಸಲು ಅಧಿಕಾರಿಗಳ ತಂಡ ನಿಯೋಜಿಸಲಾಗಿತ್ತು. ದೂರು ಅರ್ಜಿಯಲ್ಲಿನ ಅಂಶಗಳನ್ನು ಪರಿಶೀಲಿಸಿದ್ದ ಈ ಪರಿಶೀಲನಾ ತಂಡವು ಕೆಲವೊಂದು ಅಂಶಗಳನ್ನು ಸಾಬೀತುಗೊಳಿಸಿತ್ತು.
ಹೀಗಾಗಿ ಹೆಚ್ಚಿನ ತನಿಖೆಯು ಅವಶ್ಯವಿರುವುದದರಿಂದ ಸಹಕಾರ ಸಂಘಗಳ ಕಾಯ್ದೆ 1959ರಕಲಂ 64ರ ವಿಚಾರಣೆ/65 ರಡಿಯಲ್ಲಿ ಪರಿವೀಕ್ಷಣೆ ಅಥವಾ ಉನ್ನತ ಸಂಸ್ಥೆಯ ತನಿಖೆ ಅಗತ್ಯವಿದೆ ಎಂದು ವರದಿಯು ಅಭಿಪ್ರಾಯಪಟ್ಟಿತ್ತು. ಆದರೂ ಸಿಬಿಐ ತನಿಖೆಗೆ ಒಳಪಡಿಸುವ ಅಗತ್ಯತೆ ಕಂಡು ಬರುವುದಿಲ್ಲ ಎಂದು ಸಚಿವ ಎಸ್ ಟಿ ಸೋಮಶೇಖರ್ ಅವರು ಉತ್ತರಿಸಿದ್ದು 2 ಸಾವಿರ ಕೋಟಿ ಹಗರಣವನ್ನು ಮುಚ್ಚಿ ಹಾಕುವ ಉದ್ದೇಶವಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿತ್ತು.
ಪರಿಶೀಲನಾ ತಂಡದ ವರದಿಯನ್ನಾಧರಿಸಿ ಉನ್ನತ ಸಂಸ್ಥೆಯ ತನಿಖೆಗೆ ಆದೇಶಿಸಬೇಕಿತ್ತಾದರೂ ಪರಿಶೀಲನಾ ವರದಿ ಆಧರಿಸಿ ವಿಚಾರಣೆಗೆ ಒಳಪಡಿಸಬೇಕಾದ 10 ಅಂಶಗಳ ಬಗ್ಗೆ 64 ಅಡಿಯಲ್ಲಿ ವಿಚಾರಣೆ ನಡೆದಿತ್ತು.
ಅಪೆಕ್ಸ್ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸಿದ ಅವಧಿಯ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಂದ ಪ್ರಮಾಣೀಕರಿಸಿದ ಲಿಖಿತ ಹೇಳಿಕೆ, ಪ್ರಕರಣವಾರು ಸಂಬಂಧಪಟ್ಟ ದಾಖಲೆಗಳನ್ನು ಪಡೆದಿರುವುದು ಕಂಡು ಬರುವುದಿಲ್ಲ. ನಬಾರ್ಡ್ ಸುತ್ತೋಲೆ, ಸಾಲ ನಿಯಮಗಳು, ಸಕ್ಕರೆ ಸಾಲದ ನಿಯಮಗಳು, ಪಡೆದಿರುವ ಭದ್ರತೆ, ಸಾಲ ವಸೂಲಾತಿ, ಬ್ಯಾಂಕ್‌ನ ಬೈಲಾ, ಆಡಳಿತ ಮಂಡಳಿ ಠರಾವುಗಳನ್ನು ಮತ್ತು ಸಂಬಂಧಪಟ್ಟ ಎಲ್ಲಾ ದಾಖಲಾತಿಗಳನ್ನು ಪುನಃ ಪರಿಶೀಲಿಸಿ ಸಾಲ ಸಾಲ ಪಡೆದಿರುವ ಎಲ್ಲಾ ಸಕ್ಕರೆ ಕಾರ್ಖಾನೆಗಳ ಎಲ್ಲಾ ಪ್ರಕರಣಗಳನ್ನೂ ಪರಿಶೀಲಿಸಿತ್ತು.
ಹಾಗೆಯೇ ಈ ಎಲ್ಲಾ ಪ್ರಕರಣಗಳನ್ನು ಪರಿಶೀಲಿಸಿ ದಾಖಲಾತಿಗಳೊಂದಿಗೆ ಸ್ಪಷ್ಟವಾಗಿ ಆರೋಪ ದೃಢಪಟ್ಟಿರುವ ಅಥವಾ ದೃಢಪಡದಿರುವ ಬಗ್ಗೆ ವಿಚಾರಣಾಧಿಕಾರಿ ನಮೂದಿಸಿ ಜವಾಬ್ದಾರಿ ನಿಗದಿಪಡಿಸಿ ಮುಂದುವರೆದ ವಿಚಾರಣೆಗೆ ಆದೇಶಿಸುವುದು ಸೂಕ್ತವೆಂದು 2020ರ ಅಕ್ಟೋಬರ್ 17ರಂದು ಆದೇಶಿಸಲಾಗಿತ್ತು. ಈ ಸಂಬಂಧ 2021ರ ಡಿಸೆಂಬರ್ 31ರಂದು ಬ್ಯಾಂಕ್ ಅನುಪಾಲನಾ ವರದಿ ಸಲ್ಲಿಸಿತ್ತು.
ದೂರರ್ಜಿಯೇ ಅನಾಮಧೇಯವೆಂದಿದ್ದ ಬ್ಯಾಂಕ್
ಸಕ್ಕರೆ ಕಾರ್ಖಾನೆಗಳಿಗೆ ನಿಯಮಬಾಹಿರವಾಗಿ ಸಾಲ ನೀಡಿದೆ ಎಂದು ಅಪೆಕ್ಸ್ ಬ್ಯಾಂಕ್ ಉದ್ಯೋಗಿಗಳು ಮತ್ತು ಅಧಿಕಾರಿಗಳ ಒಕ್ಕೂಟವು ಕೇಂದ್ರ ಹಣಕಾಸು ಸಚಿವಾಲಯ, ನಬಾರ್ಡ್ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ಗೆ 2019ರ ಫೆ. 4ರಂದು ದೂರು ಸಲ್ಲಿಸಿತ್ತು. ಈ ದೂರು ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಿಸರ್ವ್‌ಬ್ಯಾಂಕ್, ನಬಾರ್ಡ್‌ನ ಮುಖ್ಯ ವ್ಯವಸ್ಥಾಪಕರಿಗೆ 2019ರ ಏಪ್ರಿಲ್8 ರಂದು ಪತ್ರ ಮುಖೇನ ಸೂಚಿಸಿದ್ದರು.

ಆದರೆ ಅಪೆಕ್ಸ್ ಬ್ಯಾಂಕ್‌ನ ಆಡಳಿತ ಮಂಡಳಿಯು ತನ್ನ ಅನುಪಾಲನಾ ವರದಿಯಲ್ಲಿ ಬ್ಯಾಂಕ್‌ನ ವಿರುದ್ಧ ಅನಾಮಧೇಯ ಅರ್ಜಿ ಆಧಾರದ ಮೇಲೆ ಒತ್ತಡಕ್ಕೆ ಒಳಗಾಗಿ ಕಲಂ 64ರ ವಿಚಾರಣೆಗೆ ಆದೇಶಿಸಿತ್ತು ಎಂದು ಸಮಜಾಯಿಷಿ ನೀಡಿರುವುದು ಸೋಮಶೇಖರ್ ಅವರು ನೀಡಿರುವ ಮಾಹಿತಿಯಿಂದ ಗೊತ್ತಾಗಿದೆ. ‘ಯಾವುದೇ ಅನಾಮಧೇಯ ದೂರು ಅರ್ಜಿ ಅಥವಾ ಪತ್ರಗಳ ಮೇಲೆ ಯಾವುದೇ ಕ್ರಮ ಅಗತ್ಯವಿರುವುದಿಲ್ಲ ಎಂಬ ಅಂಶವನ್ನು ಉಲ್ಲೇಖಿಸಿರುತ್ತಾರೆ. ಹೀಗಾಗಿ ಕಲಂ 64ರ ಅಡಿ ವಿಚಾರಣೆಯು ಕಾನೂನು ದೃಷ್ಟಿಯಲ್ಲಿ ಊರ್ಜಿತವಾಗುವುದಿಲ್ಲ,’ ಎಂದು ಬ್ಯಾಂಕ್ ತಿಳಿಸಿತ್ತು.

ಕೆ ಎನ್ ರಾಜಣ್ಣ ಅಧ್ಯಕ್ಷರಾಗಿದ್ದ ಅವಧಿಯಲ್ಲಿಯೇ ಅಪೆಕ್ಸ್ ಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ಮತ್ತು ರಮೇಶ್ ಜಾರಕಿಹೊಳಿ ಸೇರಿದಂತೆ ಹಲವು ಪ್ರಭಾವಿಗಳ ಒಡೆತನದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳ ಮೂಲಕ ನೂರಾರು ಕೋಟಿ ರು.ಮೊತ್ತದಲ್ಲಿ ಸಾಲ ವಿತರಣೆಯಾಗಿತ್ತು.
ಅದರಲ್ಲೂ ತುಂಬಾ ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ವೊಂದೇ 1 ಸಾವಿರ ಕೋಟಿ ರು.ಗೂ ಅಧಿಕ ಮೊತ್ತದಲ್ಲಿ ಸಾಲ ಮಂಜೂರು ಮಾಡಿದೆ. ಮಂಜೂರಾಗಿದ್ದ ಒಟ್ಟು ಸಾಲ ಮೊತ್ತದ ಪೈಕಿ ಶೇ.50ರಷ್ಟು ಮೊತ್ತ ಅಪೆಕ್ಸ್ ಬ್ಯಾಂಕ್‌ಮಧ್ಯಸ್ಥಿಕೆ ಮತ್ತು ಖಾತರಿ ಮೇರೆಗೆ ನೀಡಿತ್ತು.









