ಬೆಂಗಳೂರು; ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಆಯುಕ್ತರಾಗಿದ್ದ ಕೆಎಎಸ್ ಅಧಿಕಾರಿ ಡಿ ಬಿ ನಟೇಶ್ ವಿರುದ್ಧ ಲೋಕಾಯುಕ್ತ ಅಧಿನಿಯಮ 17 ಎ ಅಡಿಯಲ್ಲಿ ಪೂರ್ವಾನುಮತಿ ನೀಡಲು ಹಲವು ಪ್ರಕರಣಗಳು ಬಾಕಿ ಇದ್ದರೂ ಹುದ್ದೆ ಉನ್ನತೀಕರಣ ಭಾಗ್ಯ ಕಲ್ಪಿಸಲು ರಾಜ್ಯ ಕಾಂಗ್ರೆಸ್ ಸರ್ಕಾರವು ಮುಂದಾಗಿದೆ.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಹಕರಿಸಿದ್ದಾರೆ ಎಂಬ ಗುರುತರವಾದ ಆರೋಪಕ್ಕೆ ಗುರಿಯಾಗಿರುವ ಡಿ ಬಿ ನಟೇಶ್ ಅವರಿಗೆ ಇನಾಮು ನೀಡಲು ತಯಾರಿ ನಡೆದಿದೆ.! ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿವೆ ಎಂದು ತಿಳಿದು ಬಂದಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಹಗರಣದಲ್ಲಿ ಆರೋಪಿಯಾಗಿರುವ ಕೆಎಎಸ್ ಅಧಿಕಾರಿ ನಟೇಶ್ ಅವರಿಗೆ ಅಕ್ರಮವಾಗಿ ಪದನ್ನೋತಿ ನೀಡಲಾಗುತ್ತಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿಯು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದೆ. ಇದರ ಬೆನ್ನಲ್ಲೇ ಡಿ ಬಿ ನಟೇಶ್ ಅವರ ವಿರುದ್ಧ ಇರುವ ಇಲಾಖೆ ವಿಚಾರಣೆಗಳ ಪಟ್ಟಿಯೂ ಸಹ ಮುನ್ನೆಲೆಗೆ ಬಂದಿದೆ.
ಇಲಾಖೆ ಮಟ್ಟದಲ್ಲಿ ಮತ್ತು ಲೋಕಾಯುಕ್ತ ತನಿಖೆ ನಡೆಸಲು ಪ್ರಕರಣಗಳು ಬಾಕಿ ಇದ್ದರೂ ಹುದ್ದೆ ಉನ್ನತೀಕರಣ ಮಾಡಲು ಹೊರಟಿರುವ ಸರ್ಕಾರದ ನಡೆಯು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.
‘ದಿ ಫೈಲ್’ ಗೆ ಲಭ್ಯವಿರುವ ಪಟ್ಟಿ ಪ್ರಕಾರ ಡಿ ಬಿ ನಟೇಶ್ ಅವರ ವಿರುದ್ಧ ಹಲವು ಪ್ರಕರಣಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಕ್ರಮವನ್ನೇ ಕೈಗೊಂಡಿಲ್ಲ. ಇವರ ವಿರುದ್ಧ ಕ್ರಮಕೈಗೊಳ್ಳಲು ಮೀನ ಮೇಷ ಎಣಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಡಿ ಬಿ ನಟೇಶ್ ಅವರ ವಿರುದ್ಧ ಇರುವ ಇಲಾಖೆ ವಿಚಾರಣೆಗಳ ಪಟ್ಟಿ
ಡಿ ಬಿ ನಟೇಶ್ ಕೆಎಎಸ್ (ಆ ಶ್ರೇ), ಇವರ ವಿರುದ್ಧ ಲೋಕಾಯುಕ್ತ ಪ್ರಕರಣದಲ್ಲಿ ತನಿಖೆ ನಡೆಸಲು 17 ಎ ಅಡಿಯಲ್ಲಿ ಪೂರ್ವಾನುಮತಿ ನೀಡಿಲ್ಲ. (ಡಿಪಿಎಆರ್ /201/ಕೆಇವಿ/-2024 (ಕಂಪ್ಯೂಟರ್ ನಂಬರ್ 1559399) ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ 2025 ಡಿಸೆಂಬರ್‍ನಿಂದಲೂ ಈ ಕಡತವು ಧೂಳು ತಿನ್ನುತ್ತಿದೆ. ಲೋಕಾಯುಕ್ತರ ಕೋರಿಕೆ ಸಂಬಂಧ ಇನ್ನೂ ಕ್ರಮವನ್ನು ಕೈಗೊಂಡಿಲ್ಲ.
ಸದ್ಯ ಈ ಕಡತವು 2026ರ ಜನವರಿ 15ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಶಾಖಾಧಿಕಾರಿ ಲಾಗಿನ್‌ನಲ್ಲಿದೆ. ಈ ಸಂಬಂಧ ಕ್ರಮ ಕೈಗೊಳ್ಳಲು ಬಾಕಿ ಇದೆ ಎಂದು ತಿಳಿದು ಬಂದಿದೆ.

ಅದೇ ರೀತಿ ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಆಯುಕ್ತರಾಗಿದ್ದ ಸಂದರ್ಭದಲ್ಲಿನ ಪ್ರಕರಣದಲ್ಲಿ ದೂರು ಸಲ್ಲಿಕೆಯಾಗಿತ್ತು. ಈ ಸಂಬಂಧ ಇಲಾಖೆ ವಿಚಾರಣೆಯೂ ಬಾಕಿ ಇದೆ. (ಡಿಪಿಎಆರ್/436/ಕೆಇವಿ/2024- ಕಂಪ್ಯೂಟರ್ ನಂಬರ್ 1590315) ಇದು ಸಹ 2025ರ ಡಿಸೆಂಬರ್ 21ರಿಂದ ಧೂಳು ಮೆತ್ತಿಕೊಂಡಿರುವುದು ಗೊತ್ತಾಗಿದೆ. ಸದ್ಯ ಈ ಕಡತವೂ 2026ರ ಜನವರಿ 15ರಂದು ಡಿಪಿಎಆರ್ ಶಾಖಾಧಿಕಾರಿ ಲಾಗಿನ್‌ನಲ್ಲಿರವುದು ತಿಳಿದು ಬಂದಿದೆ.

ಅಲ್ಲದೇ ನಟೇಶ್ ವಿರುದ್ಧ ಎಸಿಬಿ ಪ್ರಕರಣವೂ ಇದೆ.( ಡಿಪಿಎಆರ್/238/ಕೆಇವಿ/2024 ಕಂಪ್ಯೂಟರ್ ನಂಬರ್ 1577501) ಇದು ಸಹ 2025ರ ಡಿಸೆಂಬರ್ 21ರಿಂದಲೂ ಡಿಪಿಎಆರ್‍ನಲ್ಲಿದೆ. ಕ್ರಮವು ಬಾಕಿ ಇದೆ.
ಮುಡಾದಲ್ಲಿನ ಮತ್ತೊಂದು ಪ್ರಕರಣದಲ್ಲಿ ನಟೇಶ್ ಮತ್ತು ಜಿ ಟಿ ದಿನೇಶ್ ಕುಮಾರ್ ಅವರನ್ನು ಲೋಕಾಯುಕ್ತ 17 ಎ ಅಡಿಯಲ್ಲಿ ತನಿಖೆಗೆ ಒಳಪಡಿಸಲು ಇನ್ನೂ ಪೂರ್ವಾನುಮತಿ ನೀಡಿಲ್ಲ. ಈ ಕಡತವು ಸಹ (ಡಿಪಿಎಆರ್/19/ಕೆಇವಿ/2025, ಕಂಪ್ಯೂಟರ್ ನಂಬರ್ 1654240) 2025ರ ಡಿಸೆಂಬರ್ 21ರಿಂದಲೂ ತೆವಳುತ್ತಿದೆ.
ಹಾಗೆಯೇ ಕೆಎಟಿ (ಅರ್ಜಿ ಸಂಖ್ಯೆ 4378/2022) ಪ್ರಕರಣದಲ್ಲಿಯೂ ಸಹ (ಡಿಪಿಎಆರ್/112/ಕೆಇವಿ/2024 ಕಂಪ್ಯೂಟರ್ ನಂಬರ್ 1475008) ಕಡತವು 2025ರ ಡಿಸೆಂಬರ್ 15ರಿಂದಲೂ ಇದ್ದಲ್ಲೇ ಇದೆ. ಮತ್ತು ಸದ್ಯ ಕರ್ತವ್ಯದಲ್ಲಿರುವ ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಲ್ಲಿ ಎಸಗಿರುವ ಕರ್ತವ್ಯ ಲೋಪಕ್ಕೆ ಸಂಬಂಧಿಸಿದಂತೆ ಇಲಾಖೆ ವಿಚಾರಣೆ ನಡೆಸಲು ಆರೋಪ ಪಟ್ಟಿ ಕುರಿತು (ಕೆಆರ್‍ಐಡಿಇ/ಎಚ್‌ಅರ್/ಎಂಐಎಸ್‌ಸಿ/11/2025-ಹೆಚ್ ಆರ್ ಕಂಪ್ಯೂಟರ್ ನಂಬರ್ 1756185) ಇದು ಸಹ 2025ರ ಡಿಸೆಂಬರ್ 15ರಿಂದಲೂ ಬಾಕಿ ಇದೆ.
ಮುಡಾದಲ್ಲಿ ನಟೇಶ್ ಅವರು ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿಯೇ ಬೇರೊಂದು ಪ್ರಕರಣದಲ್ಲಿ ತನಿಖೆ ನಡೆಸುವ ಸಂಬಂಧ ಡಿಪಿಎಆರ್ ಅನುಮತಿ ನೀಡಬೇಕಿದೆ. ಈ ಕಡತವು (ಡಿಪಿಎಆರ್/18/ಕೆಇವಿ/2021, ಕಂಪ್ಯೂಟರ್ ನಂಬರ್ 455282) 2025ರ ನವೆಂಬರ್‍ನಿಂದಲೂ ಧೂಳು ತಿನ್ನುತ್ತಿದೆ. ಸದ್ಯ ಈ ಕಡತವು 2026ರ ಜನವರಿ 19ರಂದು ಡಿಪಿಎಆರ್‍ನ ಶಾಖಾಧಿಕಾರಿ ಲಾಗಿನ್‌ನಲ್ಲಿರುವುದು ತಿಳಿದು ಬಂದಿದೆ.

ಸುತ್ತೋಲೆಯಲ್ಲೇನಿದೆ?
ಸರ್ಕಾರ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸುವಲ್ಲಿ ಆಗುವ ವಿಳಂಬವನ್ನು ತಡೆಗಟ್ಟುವ ಕುರಿತು 2021ರ ಅಕ್ಟೋಬರ್ 4ರಲ್ಲೇ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುತ್ತೋಲೆ ಹೊರಡಿಸಿತ್ತು. ಇದರ ಪ್ರಕಾರ ಸರ್ಕಾರಿ ನೌಕರರ ಅಕ್ರಮಗಳು, ದುರ್ನಡತೆಗಳು, ಶಿಸ್ತಿನ ಪ್ರಾಧಿಕಾರದ ಗಮನಕ್ಕೆ ಬಂದ ದಿನಾಂಕದಿಂದ ದೋಷಾರೋಪಣೆ ಪಟ್ಟಿಯನ್ನು ತಯಾರಿಸುವ ಸಲುವಾಗಿ ದಾಖಲೆಗಳನ್ನು ಪಡೆಯಲು ಅಥವಾ ಪ್ರಾರಂಭಿಕ ತನಿಖೆ, ವಿಚಾರಣೆಯನ್ನು ಅಂತಿಮಗೊಳಿಸಲು ಹಾಗೂ ದೋಷಾರೋಪಣೆ ಪಟ್ಟಿಯನ್ನು ತಯಾರಿಸಿ ಜಾರಿಗೊಳಿಸಲು ಗರಿಷ್ಠ 1 ತಿಂಗಳು ಕಾಲಮಿತಿ ವಿಧಿಸಿದೆ.

ದೋಷಾರೋಪಣೆ ಪಟ್ಟಿಗೆ ಸರ್ಕಾರಿ ನೌಕರನ ವಿವರಣೆಯನ್ನು ಪಡೆಯಲು ಹಾಗೂ ವಿಚಾರಣೆ ಅಧಿಕಾರಿಯನ್ನು ನೇಮಿಸಲು ಗರಿಷ್ಠ 1 ತಿಂಗಳು ಕಾಲಾವಕಾಶವಿದೆ. ವಿಚಾರಣೆ ನಡೆಸಲು ಹಾಗೂ ವಿಚಾರಣೆ ವರದಿಯನ್ನು ಮಂಡಿಸಲು 4 ತಿಂಗಳು ಕಾಲಾವಕಾಶವಿದೆ. ವಿಚಾರಣೆ ವರದಿಯನ್ನು ಪರಿಶೀಲಿಸಲು ಹಾಗೂ ಅದನ್ನು ಸ್ವೀಕರಿಸುವ ಬಗ್ಗೆ ನಿಣರ್ಯಿಸಲು 1 ತಿಂಗಳು ಕಾಲಾವಕಾಶವಿದೆ.
ಕಾರಣ ಕೇಳುವ 2ನೇ ಸೂಚನಾ ಪತ್ರವನ್ನು ವಿಚಾರಣೆ ವರದಿಯ ಜೊತೆಗೆ ಆಪಾದಿತ ಸರ್ಕಾರಿ ನೌಕರನಿಗೆ ನೀಡಲು 1 ತಿಂಗಳು, ಈ ಬಗ್ಗೆ ಅಂತಿಮ ಆದೇಶ ಹೊರಡಿಸಲು ಗರಿಷ್ಠ 1 ತಿಂಗಳು ಕಾಲಮಿತಿ ಇದೆ. ಆದರೆ ನಟೇಶ್ ಪ್ರಕರಣದಲ್ಲಿ ಸುತ್ತೋಲೆಯಲ್ಲಿನ ಈ ಅಂಶಗಳೂ ಅನ್ವಯಿಸಿಲ್ಲ.
ಸಿಎಂಗೆ ನೀಡಿರುವ ದೂರಿನಲ್ಲೇನಿದೆ?
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಹಗರಣದಲ್ಲಿ ಆರೋಪಿಯಾಗಿರುವ ಕೆಎಎಸ್ ಅಧಿಕಾರಿ ನಟೇಶ್ ಅವರಿಗೆ ಅಕ್ರಮವಾಗಿ ಪದನ್ನೋತಿ ನೀಡಲಾಗುತ್ತಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿಯು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದೆ.
ನಟೇಶ್ ಅವರ ವಿರುದ್ಧ ಮೂಡಾ ಸೇರಿದಂತೆ ಹಲವು ಭ್ರಷ್ಟಾಚಾರದ ಆರೋಪಗಳಿವೆ. ಇವರು ಸರ್ಕಾರಿ ಸೇವೆಗೆ ನೇಮಕವಾದಾಗಿನಿಂದ ಅನ್ವಯವಾಗುವಂತೆ ಸಹಾಯಕ ಆಯುಕ್ತರ ಹುದ್ದೆಗೆ ಪದನ್ನೋತಿ ನೀಡಲು ಸಚಿವ ಸಂಪುಟಕ್ಕೆ ಕಡತ ಮಂಡಿಸಲಾಗುತ್ತಿದೆ ಎಂದು ಗಮನಸೆಳೆದಿದೆ. ಆದರೆ ಪದನ್ನೋತಿಗಿಂತಲೂ ಹುದ್ದೆ ಉನ್ನತೀಕರಣ ಭಾಗ್ಯವನ್ನು ಕರುಣಿಸುತ್ತಿದೆ ಎಂಬ ಮಾತುಗಳು ಅಧಿಕಾರಿ ವರ್ಗದಲ್ಲಿ ಕೇಳಿ ಬರುತ್ತಿವೆ.
2026ರ ಜನವರಿ 8ರಂದು ನೀಡಿರುವ ದೂರಿನ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಡಿ ಬಿ ನಟೇಶ್ ಅವರು ನೇಮಕವಾದ ವರ್ಷ ಮತ್ತು ನೇಮಕದಲ್ಲಿನ ಲೋಪಗಳು, ಮೀಸಲಾತಿ, ವ್ಯಕ್ತಿತ್ವ ಪರೀಕ್ಷೆಗೆ ಹಾಜರಾಗಿದ್ದ ವೇಳೆ ಸಲ್ಲಿಸಿದ್ದ ಹಲವು ದಾಖಲಾತಿಗಳು ಮತ್ತು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ನೀಡಿದ್ದ ಆದೇಶಗಳನ್ನೂ ದೂರಿನಲ್ಲಿ ಉಲ್ಲೇಖಿಸಿದೆ.
ಡಿ ಬಿ ನಟೇಶ್ ಅವರು 2005ನೇ ಸಾಲಿನಲ್ಲಿ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಗೆ ಅಭ್ಯರ್ಥಿಯಾಗಿದ್ದರು. 3 ಬಿ (ಗ್ರಾಮೀಣ-ಕೆಎಂಎಸ್) ಮೀಸಲಾತಿ ಅಡಿ ಅರ್ಜಿ ಸಲ್ಲಿಸಿದ್ದರು. ಮೀಸಲಾತಿಗೆ ಸಂಬಂಧ ಪಟ್ಟ ಎಲ್ಲಾ ಪ್ರಮಾಣ ಪತ್ರಗಳ ಮೂಲ ಪ್ರತಿಗಳನ್ನು ಹಾಜರುಪಡಿಸುವ ಷರತ್ತಿಗೊಳಪಟ್ಟು ವ್ಯಕ್ತಿತ್ವ ಪರೀಕ್ಷೆಗೆ ಹಾಜರಾತಿಗೆ ಕರೆ ಬಂದಿತ್ತು. 2006ರ ಮಾರ್ಚ್ 8ರಂದು ವ್ಯಕ್ತಿತ್ವ ಪರೀಕ್ಷೆಗೆ ಹಾಜರಾಗಿದ್ದ ನಟೇಶ್ ಅವರು ವಿದ್ಯಾಭ್ಯಾಸದ ಪ್ರಮಾಣಪತ್ರಗಳ ಮೂಲ ಪ್ರತಿಗಳನ್ನಷ್ಟೇ ಹಾಜರುಪಡಿಸಿದ್ದರು.

ಆದರೆ ಮೀಸಲಾತಿಗೆ ಸಂಬಂಧಪಟ್ಟ ಯಾವುದೇ ಪ್ರಮಾಣ ಪತ್ರದ ಮೂಲ ಪ್ರತಿಯನ್ನು ಹಾಜರುಪಡಿಸಿರಲಿಲ್ಲ. ಬದಲಿಗೆ ಬಸ್ಸಿನಲ್ಲಿ ಪ್ರಯಾಣಿಸುವಾಗ ಕಳೆದು ಹೋಗಿವೆ ಎಂದು ವ್ಯಕ್ತಿತ್ವ ಪರೀಕ್ಷೆಗೆ ಹಾಜರಾಗಿದ್ದ ಸಂದರ್ಭದಲ್ಲಿ ಹೇಳಿಕೆ ನೀಡಿದ್ದರು ಎಂಬ ಅಂಶವನ್ನು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಮೀಸಲಾತಿಗೆ ಸಂಬಂಧಪಟ್ಟ ಯಾವುದೇ ಪ್ರಮಾಣಪತ್ರದ ಮೂಲ ಪ್ರತಿ ಹಾಜರುಪಡಿಸದ ಕಾರಣಕ್ಕಾಗಿ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯ ನಿಯಮಗಳ ಪ್ರಕಾರ ನಟೇಶ್ ಅವರನ್ನು ಸಾಮಾನ್ಯ ವರ್ಗದಲ್ಲಿ ಪರಿಗಣಿಸಿ ವ್ಯಕ್ತಿತ್ವ ಪರೀಕ್ಷೆಗೆ ಅವಕಾಶ ಕಲ್ಪಿಸಿತ್ತು. ಹೀಗಾಗಿ ಸಾಮಾನ್ಯ ವಿಭಾಗದಲ್ಲಿ ತಹಶೀಲ್ದಾರ್ ಆಗಿ ಆಯ್ಕೆಯಾಗಿದ್ದರು.ಅಲ್ಲದೇ 3 ಬಿ (ಗ್ರಾಮೀಣ -ಕೆಎಂಎಸ್) ಮೀಸಲಾತಿ ಮೂಲ ಪ್ರಮಾಣ ಪತ್ರಗಳನ್ನು ನಿಗದಿತ ದಿನದಂದು ಹಾಜರುಪಡಿಸದ ಕಾರಣಕ್ಕಾಗಿ ಸಹಾಯಕ ಅಯುಕ್ತರ ಹುದ್ದೆ ನಟೇಶ್ ಅವರಿಗೆ ದೊರೆತಿರುವುದಿಲ್ಲ.

ಆದರೆ ನಟೇಶ್ ಅವರು ಆ ನಂತರ 2005ರ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯಲ್ಲಿ 3 ಬಿ (ಗ್ರಾಮೀಣ ಕೆಎಂಎಸ್) ಮೀಸಲಾತಿ ಅಡಿಯೇ ತನ್ನನ್ನು ಪರಿಗಣಿಸಬೇಕು ಮತ್ತು ಸಹಾಯಕ ಆಯುಕ್ತರ ಹುದ್ದೆ ನೀಡಬೇಕು ಎಂದು ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ದಾವೆ (ಅರ್ಜಿ ಸಂಖ್ಯೆ; 6419/06)ಹೂಡಿದ್ದರು. ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಕೆಎಟಿಯು ನಟೇಶ್ ಅವರು ವ್ಯಕ್ತಿತ್ವ ಪರೀಕ್ಷೆಯಂದು ಮೀಸಲಾತಿಗೆ ಸಂಬಂಧಪಟ್ಟ ಯಾವುದೇ ಪ್ರಮಾಣ ಪತ್ರದ ಮೂಲ ಪ್ರತಿ ಹಾಜರುಪಡಿಸದೇ ಇದ್ದ ಕಾರಣಕ್ಕಾಗಿ ಅವರನ್ನು ಸಾಮಾನ್ಯ ವಿಭಾಗದ ಮೀಸಲಾತಿಗೆ ಪರಿಗಣಿಸಿರುವ ಕೆಪಿಎಸ್‌ಸಿಯ ನಿರ್ಣಯ ಸರಿಯಿದೆ ಎಂದು ಕೆಎಟಿಯು ತೀರ್ಮಾನಿಸಿತ್ತು. ಅಲ್ಲದೇ ನಟೇಶ್ ಅವರ ಅರ್ಜಿಯನ್ನೂ ವಜಾಗೊಳಿಸಿತ್ತು.
ನಟೇಶ್ ಅವರು ಕೆಎಟಿಯ ಆದೇಶವನ್ನು ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ (ರಿಟ್ ಪಿಟಿಷನ್ 5559/2012) (ಎಸ್ -ಕೆಎಟಿ ) ಸಲ್ಲಿಸಿದ್ದರು. ಈ ದಾವೆಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಉಚ್ಛ ನ್ಯಾಯಾಲಯವು ಸಹ ನಟೇಶ್ ಅವರ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿತ್ತಲ್ಲದೇ ಕೆಪಿಎಸ್‌ಸಿ ನಿರ್ಣಯ ಮತ್ತು ಕೆಎಟಿ ನೀಡಿದ್ದ ಆದೇಶಗಳೂ ಸರಿ ಇವೆ ಎಂದು ಎತ್ತಿ ಹಿಡಿದಿತ್ತು.
ನಟೇಶ್ ಅವರು ಹೈಕೋರ್ಟ್ ಆದೇಶವನ್ನೂ ಸುಪ್ರೀಂ ಕೋರ್ಟ್‌ನಲ್ಲಿ (ಎಸ್‌ಎಲ್‌ಪಿ 4878/2013) ಪ್ರಶ್ನಿಸಿದ್ದರು. ವಿಶೇಷ ಮೇಲ್ಮನವಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್ ಸಹ ನಟೇಶ್ ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಹೈಕೋರ್ಟ್ ಆದೇಶ, ಕೆಎಟಿ ಆದೇಶ ಮತ್ತು ಕೆಪಿಎಸ್‌ಸಿ ನಿರ್ಧಾರವನ್ನು ಬೆಂಬಲಿಸಿತ್ತು.
ಹೀಗಾಗಿ ನಟೇಶ್ ಅವರು ಮಂಡಿಸಿದ್ದ ವಾದವನ್ನು ಸುಪ್ರೀಂ ಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳೂ ತಿರಸ್ಕರಿಸಿದ್ದವು. 2005ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯಲ್ಲಿ ನಟೇಶ್ ಅವರು 3 ಬಿ (ಗ್ರಾಮೀಣ ಕೆಎಂಎಸ್) ಮೀಸಲಾತಿ ಪಡೆಯಲು ಅರ್ಹರಿರುವುದಿಲ್ಲ ಎಂಬುದು ಹಲವಾರು ಬಾರಿ ಸಾಬೀತಾಗಿದೆ ಎಂದು ದೂರಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ನ್ಯಾಯಾಲಯಗಳಿಂದಲೇ ತಿರಸ್ಕೃತವಾಗಿರುವ ನಟೇಶ್ ಅವರ ಬೇಡಿಕೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರವು ವಿಶೇಷವಾಗಿ ಪರಿಗಣಿಸುತ್ತಿದೆ. ಪೂರ್ವಾನ್ವಯವಾಗುವಂತೆ ಪದನ್ನೋತಿ ನೀಡಲು ತಯಾರಿ ನಡೆಸಿದೆ. ಸರ್ಕಾರದ ಈ ನಡೆಯು ಹಲವು ಅನುಮಾನಗಳಿಗೆ ದಾರಿಮಾಡಿಕೊಡುತ್ತದೆ ಎಂದು ಕರ್ನಾಟಕ ರಾಷ್ಟ್ರಸಮಿತಿಯ ಕಾರ್ಯಾಧ್ಯಕ್ಷ ರಘು ಜಾಣಗೆರೆ ಅವರು ದೂರಿನಲ್ಲಿ ಶಂಕಿಸಿರುವುದು ಗೊತ್ತಾಗಿದೆ.
ಅಲ್ಲದೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಐಎಎಸ್ ಹುದ್ದೆಯವರನ್ನು ಮಾತ್ರ ಪರಿಗಣಿಸಬೇಕಿತ್ತು. ಆಧರೆ ಕೆಎಎಸ್ ಶ್ರೇಣಿಯ ನಟೇಶ್ ಅವರನ್ನು ಆಯುಕ್ತರನ್ನಾಗಿ ನೇಮಕ ಮಾಡಲಾಗಿತ್ತು. ನಟೇಶ್ ಅವರು ಮುಡಾ ಆಯುಕ್ತರಾಗಿದ್ದಾಗಲೇ ನೂರಾರು ಕೋಟಿ ರುಪಾಯಿಗಳ ಅಕ್ರಮ ನಡೆದಿದೆ. ಸರ್ಕಾರಕ್ಕೆ ಅಪಾರ ನಷ್ಟವೂ ಆಗಿದೆ. ಈ ಪ್ರಕರಣವು ಇನ್ನೂ ತನಿಖೆಯಲ್ಲಿದ್ದೂ ಸಹ ನಟೇಶ್ ಅವರಿಗೆ ಅಕ್ರಮವಾಗಿ ಮತ್ತು ನಿಯಮಬಾಹಿರವಾಗಿ ಪದನ್ನೋತಿ ನೀಡುತ್ತಿರುವುದು ಸರಿಯಲ್ಲಿ ಎಂದು ದೂರಿನಲ್ಲಿ ಹೇಳಲಾಗಿದೆ.
‘ಮುಡಾ ಪ್ರಕರಣದಲ್ಲಿ ತಮ್ಮ ಕುಟುಂಬವೂ ಫಲಾನುಭವಿಯಾಗಿದೆ. ನಿಮ್ಮ ಪತ್ನಿಗೆ ನೀಡಲಾಗಿದ್ದ 14 ನಿವೇಶನಗಳನ್ನೂ ಹಿಂತಿರುಗಿಸಲಾಗಿದೆ. ಇಷ್ಟೆಲ್ಲಾ ಅಕ್ರಮಗಳಲ್ಲಿ ಪ್ರಮುಖ ಪಾತ್ರಧಾರಿಯಾಘಿರುವ ಈ ಅಧಿಕಾರಿಗೆ ಯಾಕಾಗಿ ಪೂರ್ವಾನ್ವಯವಾಗುವಂತೆ ಸಹಾಯಕ ಆಯುಕ್ತರ ಹುದ್ದೆಗೆ ಪದನ್ನೋತಿ ನೀಡಲು ತಯಾರಿ ಮಾಡಲಾಗುತ್ತಿದೆ,’ ಎಂದು ಖುದ್ದು ಮುಖ್ಯಮಂತ್ರಿ ಅವರನ್ನು ಪ್ರಶ್ನಿಸಿರುವುದು ದೂರಿನಿಂದ ತಿಳಿದು ಬಂದಿದೆ.
ಅಲ್ಲದೇ ‘ನಿಮ್ಮ ಕುಟುಂಬಕ್ಕೆ ಅಕ್ರಮವಾಗಿ ನಿವೇಶನ ಪಡೆಯಲು ಸಹಾಯ ಮಾಡಿದ್ದಾರೆ ಎಂಬ ಕಾರಣಕ್ಕಾಗಿ ಋಣ ಸಂದಾಯ ಮಾಡಲಾಗುತ್ತಿದೆ ಎಂಬ ಅನುಮಾನ ಮೂಡುತ್ತಿದೆ. ಮತ್ತು ಈ ಪ್ರಕರಣದಲ್ಲಿ ಯಾವ ಸಾರ್ವಜನಿಕ ಹಿತಾಸಕ್ತಿ ಅಡಗಿದೆ,’ ಎಂದು ಸ್ಪಷ್ಟಪಡಿಸಬೇಕು ಎಂದು ರಘು ಜಾಣಗೆರೆ ಅವರು ದೂರಿನಲ್ಲಿ ಕೋರಿದ್ದಾರೆ.
ನ್ಯಾಯಾಲಯಗಳ ತೀರ್ಪುಗಳ ಬಗ್ಗೆ ಸರ್ಕಾರಕ್ಕೆ ಯಾವುದೇ ಗೌರವವೂ ಇಲ್ಲವಾಇದೆ. ನ್ಯಾಯಾಲಯಗಳು ತೀರ್ಪುಗಳನ್ನು ನೀಡಿದ ನಂತರವೂ ಅವುಗಳನ್ನು ಉಲ್ಲಂಘಿಸಲಾಗುತ್ತಿದೆ. ಅಥವಾ ಈ ತೀರ್ಪುಗಳನ್ನು ನಿಷ್ಫಲಗೊಳಿಸಲು ಸಚಿವ ಸಂಪುಟ ಮತ್ತು ವಿಧಾನಮಂಡಲಗಳನ್ನು ಬಳಸಲಾಗುತ್ತಿದೆ. ಈ ಹಿಂದೆಯೂ 2013ರ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯನ್ನು ಸಿದ್ದರಾಮಯ್ಯ ಅವರೇ ರದ್ದುಗೊಳಿಸಿದ್ದರು. ಆ ನಂತರ ನಿರ್ಣಯವು ಸರಿ ಎಂದು ನ್ಯಾಯಾಲಯಗಳೂ ತೀರ್ಪು ನೀಡಿದ್ದವು. ಆದರೆ ಅಕ್ರಮದಲ್ಲಿ ಭಾಗಿಯಾಗಿದ್ದವರ ರಕ್ಷಣೆಗೆ ನಿಂತಿತ್ತಲ್ಲದೇ ಕಾಯ್ದೆ ಮೂಲಕವೇ ಅವರಿಗೆ ನೇಮಕಾತಿ ಆದೇಶಗಳನ್ನು ನೀಡಲಾಗಿದೆ ಎಂದು ದೂರಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
1998,1999 ಮತ್ತು 2004ರ ನೇಮಕಾತಿಯಲ್ಲಿಯೂ ಅಕ್ರಮಗಳು ನಡೆದಿವೆ ಎಂದು ಸಿಐಡಿ ತನಿಖೆಯಲ್ಲಿಯೂ ಸಾಬೀತಾಗಿತ್ತು. ಆಗಲೂ ಸಹ ಸಹ ಅಕ್ರಮ ನೇಮಕಾತಿಗಳ ಫಲಾನುಭವಿಗಳನ್ನು ಇದೇ ರೀತಿ ಸಚಿವ ಸಂಪುಟದ ನಿರ್ಣಯದ ಮೂಲಕ ನ್ಯಾಯಾಲಯಗಳ ತೀರ್ಪಿನ ವಿರುದ್ಧ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಅಕ್ರಮ ಎಸಗಿದವರಿಗೆ ರಕ್ಷಣೆ ನೀಡಿ ಅಕ್ರಮವಾಗಿ ಪದನ್ನೋತಿ ನೀಡಲಾಗಿದೆ.
ಸಾವಿರಾರು ಆಕಾಂಕ್ಷಿಗಳು ತಮ್ಮ ಬಳಿ ನೈಜ ದಾಖಲೆಗಳಿದ್ದರೂ ಸಹ ಅವುಗಳನ್ನು ಸಕಾಲದಲ್ಲಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಥವಾ ನೇಮಕಾತಿ ಸಂದರ್ಭದಲ್ಲಿ ಸಕಾರಣಗಳಿಂದ ಸಲ್ಲಿಸಲು ಸಾಧ್ಯವಾಗದ ಕಾರಣ ಉದ್ಯೋಗವನ್ನೇ ಕಳೆದುಕೊಂಡಿದ್ದಾರೆ. ಮತ್ತು ನಟೇಶ್ ಅವರ ರೀತಿಯಲ್ಲಿಯೇ ನೂರಾರು ಜನರು ದಾಖಲೆಗಳನ್ನು ಸಲ್ಲಿಸಲಾಗದೇ ಸಾಮಾನ್ಯ ವರ್ಗದಲ್ಲಿ ಉದ್ಯೋಗ ಪಡೆದುಕೊಂಡವರಿದ್ದಾರೆ. ಇದೇ ಮಾನದಂಡವನ್ನು ಇತರರಿಗೂ ಅನ್ವಯಿಸಿ ಪದನ್ನೋತಿ ನೀಡಬಹುದಾಗಿದೆ ಎಂದು ದೂರಿನಲ್ಲಿ ವಿವರಿಸಿದೆ.

‘ಕೇವಲ ನಟೇಶ್ ಅವರನ್ನು ಮಾತ್ರ ಪೂರ್ವಾನ್ವಯವಾಗುವಂತೆ ಪದನ್ನೋತಿ ನೀಡಲು ಪ್ರಕ್ರಿಯೆ ನಡೆಯುತ್ತಿರುವುದು ಅನುಮಾನಸ್ಪದವಾಗಿದೆ. ಈ ರೀತಿಯ ಕ್ರಮಗಳು ಮುಂದಿನ ದಿನಗಳಲ್ಲಿ ಕೆಟ್ಟ ನಿದರ್ಶನವಾಗಿ ನಿರ್ಮಾಣವಾಗಲಿವೆ. ಅನವಶ್ಯಕ ನ್ಯಾಯಂಗದ ಹೋರಾಟಕ್ಕೂ ಕಾರಣವಾಗಲಿದೆ. ಅಲ್ಲದೇ ಸಾಮಾಜಿಕ ನ್ಯಾಯಕ್ಕೂ ಬೆಲೆಯಿಲ್ಲದಂತಾಗುತ್ತದೆ. ಹೀಗಾಗಿ ನಟೇಶ್ ಅವರಿಗೆ ಪೂರ್ವಾನ್ವಯವಾಗುವಂತೆ ಪದನ್ನೋತಿ ನೀಡುವ ವಿಚಾರವನ್ನು ಸಂಪೂರ್ಣವಾಗಿ ಕೈಬಿಡಬೇಕು,’ ಎಂದು ದೂರಿನಲ್ಲಿ ಕರ್ನಾಟಕ ರಾಷ್ಟ್ರ ಸಮಿತಿಯು ಕೋರಿರುವುದು ಗೊತ್ತಾಗಿದೆ.









