ಬೆಂಗಳೂರು: ಮಾತಾ ಮಿನರಲ್ಸ್ ಗುತ್ತಿಗೆ ನವೀಕರಣ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಹಾಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಶಾಮೀಲಾಗಿದ್ದಾರೆ ಎಂದು ಆರೋಪಿತ ಪ್ರಕರಣದಲ್ಲಿ ಹಿರಿಯ ಐಎಎಸ್ ಅಧಿಕಾರಿಗಳಿಬ್ಬರ ವಿರುದ್ಧ ವಿಚಾರಣೆಗೆ ಪೂರ್ವಾನುಮತಿ ನೀಡುವುದಕ್ಕೆ ಸಂಬಂಧಿಸಿದಂತೆ ಮುಂದಡಿಯಿಟ್ಟಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು, ಸರ್ಕಾರದ ಹಂತದಲ್ಲಿ ಕ್ರಮ ಕೈಗೊಳ್ಳಲು ಪ್ರಸ್ತಾವ ಸಲ್ಲಿಸಿರುವುದು ಇದೀಗ ಬಹಿರಂಗವಾಗಿದೆ.
ಸಾಯಿ ವೆಂಕಟೇಶ್ವರ ಮಿನರಲ್ಸ್ ಪ್ರಕರಣದಲ್ಲಿಯೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ತನಿಖೆಗೆ ಪೂರ್ವಾನುಮತಿ ಕೋರಿರುವ ಪ್ರಸ್ತಾವವು ರಾಜಭವನದಲ್ಲಿದೆ. ರಾಜ್ಯಪಾಲರು ಇನ್ನೂ ಪೂರ್ವಾನುಮತಿ ನೀಡಿಲ್ಲ. ರಾಜಭವನ ಕಚೇರಿಯು ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರವೇ ರಾಜ್ಯಪಾಲರ ವಿರುದ್ಧ ತಿರುಗಿಬಿದ್ದಿತ್ತು.
ಈ ಮಧ್ಯೆ ಮಾತಾ ಮಿನರಲ್ಸ್ ಪ್ರಕರಣದಲ್ಲಿ ಅಧಿಕಾರಿಗಳಿಬ್ಬರ ಪ್ರಕರಣದಲ್ಲಿ ವಿಚಾರಣೆಗೆ ಪೂರ್ವಾನುಮತಿ ಪ್ರಸ್ತಾವವು ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಈ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಹಾಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಭಾಗಿಯಾಗಿದ್ದಾರೆ ಎಂಬ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಇಬ್ಬರು ಐಎಎಸ್ ಅಧಿಕಾರಿಗಳ ವಿರುದ್ಧ ವಿಚಾರಣೆಗೆ ಸಲ್ಲಿಕೆಯಾಗಿರುವ ಪೂರ್ವಾನುಮತಿ ಪ್ರಸ್ತಾವಕ್ಕೆ ಮಹತ್ವ ಬಂದಿದೆ.
ಒಂದೊಮ್ಮೆ ವಿಚಾರಣೆಗೆ ಪೂರ್ವಾನುಮತಿ ನೀಡಿದಲ್ಲಿ ರಾಜಕೀಯ ವಲಯದಲ್ಲಿ ಮತ್ತೊಂದು ಸುತ್ತಿನ ಸಂಚಲನಕ್ಕೆ ಕಾರಣವಾಗಲಿದೆ.
ಇಲಾಖೆಯ ಕಾನೂನು ವಿಭಾಗವು ನೀಡಿರುವ ಅಭಿಪ್ರಾಯವನ್ನಾಧರಿಸಿ ಆರೋಪಿತ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಲು ಪೂರ್ವಾನುಮತಿ ನೀಡಲು ಸರ್ಕಾರ ಹಂತದಲ್ಲಿ ಸೂಕ್ತ ಕ್ರಮ ವಹಿಸಬಹುದು ಎಂದು ಸರ್ಕಾರಕ್ಕೆ ಇಲಾಖೆಯು ಪ್ರಸ್ತಾವ ಸಲ್ಲಿಸಿದೆ.
ಈ ಸಂಬಂಧ ಇಲಾಖೆಯು ಸರ್ಕಾರಕ್ಕೆ 2025ರ ಆಗಸ್ಟ್ 1ರಂದೇ ಪ್ರಸ್ತಾವ ಸಲ್ಲಿಸಿದೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಅಲ್ಲದೇ ಮಾತಾ ಮಿನರಲ್ಸ್ ನಿಂದ 53.12 ಕೋಟಿ ದಂಡವನ್ನು ಭೂ ಕಂದಾಯ ಬಾಕಿಯೆಂದು ಪರಿಗಣಿಸಿ ವಸೂಲು ಮಾಡಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರು, ಬೆಂಗಳೂರು ನಗರ ಜಿಲ್ಲಾಧಿಕಾರಿಗೆ 2025ರ ಜುಲೈ 28ರಂದೇ ಪತ್ರ ಬರೆದಿದ್ದರು.
ಮಾತಾ ಮಿನರಲ್ಸ್‌ನಿಂದ 53.12 ಕೋಟಿ ದಂಡ ವಸೂಲಿಗೆ ಪತ್ರ; ‘ದಿ ಫೈಲ್’ ವರದಿ ಬೆನ್ನಲ್ಲೇ ಕ್ರಮಕೈಗೊಂಡ ಸರ್ಕಾರ
ಈ ಬೆಳವಣಿಗೆ ನಡುವೆಯೇ ಇದೀಗ ಈ ಕಂಪನಿಯ ಗುತ್ತಿಗೆ ನವೀಕರಣದಲ್ಲಿ ಆಗಿರುವ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಕ್ಕೆ ಗುರಿಯಾಗಿರುವ ಹಿರಿಯ ಐಎಎಸ್ ಅಧಿಕಾರಿಗಳಿಬ್ಬರ ವಿರುದ್ಧ ವಿಚಾರಣೆಗೆ ಅನುಮತಿ ನೀಡುವ ಪ್ರಸ್ತಾವವವು ಸರ್ಕಾರಕ್ಕೆ ಸಲ್ಲಿಕೆಯಾಗಿರುವುದು ಮಹತ್ವ ಪಡೆದುಕೊಂಡಿದೆ.
ಮಾಲಿಕತ್ವ ಪಡೆಯದೇ ತುಮಕೂರು ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ ಸರ್ಕಾರದ ಬೊಕ್ಕಸಕ್ಕೆ 187 ಕೋಟಿ ರು. ನಷ್ಟವನ್ನುಂಟುಮಾಡಿದ್ದಾರೆ ಎಂದು ಆರೋಪಿಸಿ ಟಿ ಜೆ ಅಬ್ರಾಹಂ ಅವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಿದ್ದರು. ಈ ದೂರಿನ ಮೇರೆಗೆ ಆರೋಪಿತ ಅಧಿಕಾರಿಗಳಿಬ್ಬರನ್ನು ವಿಚಾರಣೆಗೊಳಪಡಿಸಲು ಸರ್ಕಾರದಿಂದ ಅಭಿಯೋಜನಾ ಮಂಜೂರಾತಿಗೆ 20221ರಲ್ಲಿ ಅನುಮತಿ ಕೋರಿದ್ದರು.
ಈ ಮನವಿಯನ್ನು ಗಣಿ ಭೂ ವಿಜ್ಞಾನ ಇಲಾಖೆಯು ಕಳೆದ 4 ವರ್ಷಗಳಿಂದಲೂ ತನ್ನ ಬಳಿಯೇ ಇಟ್ಟುಕೊಂಡಿತ್ತು. ಹಾಗೆಯೇ ಈ ಮನವಿಯನ್ನು ಇಲಾಖೆಯ ಕಾನೂನು ವಿಭಾಗವು 4 ವರ್ಷಗಳಿಂದಲೂ ಪರಿಶೀಲನೆ ಹೆಸರಿನಲ್ಲಿ ಕಾಲಹರಣ ಮಾಡಿತ್ತು.
ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಸಚಿವ ವಿ.ಸೋಮಣ್ಣ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಐಎಎಸ್ ಅಧಿಕಾರಿಗಳಾಗಿದ್ದ ಮಹೇಂದ್ರ ಜೈನ್, ಗಂಗಾರಾಮ್ ಬಡೇರಿಯಾ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಈ ಹಿಂದೆ ನಿರ್ದೇಶಕರಾಗಿದ್ದ ಬಸಪ್ಪ ರೆಡ್ಡಿ, ಖಾಸಗಿ ವ್ಯಕ್ತಿಗಳಾದ ಬಿ.ಎಸ್.ಪುಟ್ಟರಾಜು, ಸೋಮಶೇಖರ್, ಬಿ.ಎಸ್.ನವೀನ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನಲ್ಲಿ ಅಮರ್‌ಸಿಂಗ್ ಎಂಬುವವರು ಮಾತಾ ಮಿನರಲ್ಸ್ ಮೈನಿಂಗ್ ಸಂಸ್ಥೆ ಮಾಲಿಕರಾಗಿದ್ದರು. ಆದರೆ, ಸಚಿವ ಸೋಮಣ್ಣ ಸೇರಿದಂತೆ ಇತರರು ಮಾಲಿಕತ್ವ ಪಡೆಯದೆ ಮಾತಾ ಮಿನರಲ್ಸ್ ಹೆಸರಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ ಸರ್ಕಾರದ ಬೊಕ್ಕಸಕ್ಕೆ 187 ಕೋಟಿ ರು. ನಷ್ಟಮಾಡಿದ್ದಾರೆ ಎಂದು ದೂರಿನಲ್ಲಿ ಆಪಾದಿಸಲಾಗಿತ್ತು.
ಅಕ್ರಮ ಗಣಿಗಾರಿಕೆ ಆರೋಪ ಇರುವ ಕಾರಣ ಮಾತಾ ಮಿನರಲ್ಸ್‌ಗೆ ಗಣಿಗಾರಿಕೆ ನಡೆಸಲು ಅನುಮತಿ ನೀಡಬಾರದು ಎಂದು ನ್ಯಾಯಾಲಯ ನಿರ್ದೇಶನ ನೀಡಿತ್ತು. ನ್ಯಾಯಾಲಯದ ಆದೇಶ ಇದ್ದರೂ ಅಕ್ರಮವಾಗಿ ಮೈನಿಂಗ್ ನಡೆಸಿರುವುದು ಲೋಕಾಯುಕ್ತ ಸಂಸ್ಥೆ ತನಿಖೆಯಲ್ಲಿ ಗೊತ್ತಾಗಿದೆ ಎಂದು ದೂರಿನಲ್ಲಿ ಟಿ.ಜೆ.ಅಬ್ರಾಹಂ ಆರೋಪಿಸಿದ್ದರು.
‘ಸರ್ಕಾರದ ಅಂದಿನ ಕಾರ್ಯದರ್ಶಿ ಮಹೇಂದ್ರ ಜೈನ್ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಂದಿನ ನಿರ್ದೇಶಕ ಗಂಗಾರಾಂ ಬಡೇರಿಯಾ ಅವರು ತುಮಕೂರು ಜಿಲ್ಲೆಯಲ್ಲಿ ಅಮರ್ ಸಿಂಗ್ ಅವರು ಹೊಂದಿದ್ದ ಗಣಿ ಗುತ್ತಿಗೆ (ಸಂಖ್ಯೆ 1975)ಯನ್ನು ನಿಯಮಬಾಹಿರವಾಗಿ ಮಾತಾ ಮಿನರಲ್ಸ್‌ಗೆ ವರ್ಗಾವಣೆ ಮಾಡಲಾಗಿದೆ. ಅಲ್ಲದೇ ಗಣಿ ಮಂತ್ರಾಲಯದ ತಡೆಯಾಜ್ಞೆ ಇದ್ದರೂ ಸಹ ಗಣಿ ಗುತ್ತಿಗೆಯನ್ನು ನವೀಕರಿಸಲಾಗಿದೆ. ಇವರುಗಳ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಅಭಿಯೋಜನಾ ಮಂಜೂರಾತಿ ನೀಡಬೇಕು,’ ಎಂದು ಟಿ ಜೆ ಅಬ್ರಾಹಂ ಅವರು 2022ರ ನವೆಂಬರ್ 21ರಂದೇ ಕೋರಿದ್ದರು.
ಈ ಕೋರಿಕೆಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಸತತವಾಗಿ ನಾಲ್ಕು ವರ್ಷಗಳವರೆಗೆ ತನ್ನ ಬಳಿಯೇ ಇಟ್ಟುಕೊಂಡಿತ್ತು.
ಕಾನೂನು ವಿಭಾಗವು ಸಹ ನಾಲ್ಕು ವರ್ಷಗಳವರೆಗೆ ಪರಿಶೀಲನೆ ಹೆಸರಿನಲ್ಲಿ ಕಾಲಹರಣ ಮಾಡಿತ್ತು.
ಈ ಪ್ರಕರಣದಲ್ಲಿ ಹಿರಿಯ ಐಎಎಸ್ ಅಧಿಕಾರಿ ಹಾಗೂ ಹಾಲಿ ರೇರಾದ ತಾಂತ್ರಿಕ ಮತ್ತು ಆಡಳಿತಾತ್ಮಕ ಸದಸ್ಯ ಮಹೇಂದ್ರ ಜೈನ್ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಗಂಗಾರಾಂ ಬಡೇರಿಯಾ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಾನೂನು ವಿಭಾಗವು ಅಭಿಪ್ರಾಯ ನೀಡಿದೆ.
ಈ ಅಭಿಪ್ರಾಯವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರು ಪರಿಶೀಲನೆ ನಡೆಸಿದ್ದರು.
ಇಲಾಖೆಯ ನಿವೃತ್ತ ನಿರ್ದೇಶಕ ಬಸಪ್ಪರೆಡ್ಡಿ ಅವರ ಪ್ರಕರಣದಲ್ಲಿ ಈ ಗಣಿ ಗುತ್ತಿಗೆಗೆ ಸಂಬಂಧಿಸಿದಂತೆ ಒಟ್ಟು 77,34,31,195 ರು.ಗಳ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ. ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ. ಮುಂದುವರೆದು ಮಾತಾ ಮಿನರಲ್ಸ್ ಅವರ ಗಣಿ ಗುತ್ತಿಗೆಗೆ ಸಂಬಂಧಿಸಿದಂತೆ ಮತ್ತೊಂದು ಪ್ರಕರಣವು ಲೋಕಾಯುಕ್ತ ವಿಶೇಷ ತನಿಖಾ ತಂಡದಲ್ಲಿ ತನಿಖೆ (ಅಪರಾಧ ಸಂಖ್ಯೆ 33/2015) ನಡೆಯುತ್ತಿರುವುದು ಕಂಡು ಬಂದಿದೆ.
‘ಆದ ಕಾರಣ ಮೇಲೆ ತಿಳಿಸಲಾದ ಎಲ್ಲಾ ಅಂಶಗಳನ್ನು ಸರ್ಕಾರಕ್ಕೆ ಸಲ್ಲಿಸುತತಾ ನಿವೃತ್ತ ಅಧಿಕಾರಿಗಳ ವಿರುದ್ಧ ತನಿಖೆ/ವಿಚಾರಣೆಗೆ ಅನುಮತಿ ನೀಡುವ ಕುರಿತು ಸರ್ಕಾರದ ಹಂತದಲ್ಲಿ ಸೂಕ್ತ ಕ್ರಮ ಕೈಗೊಳ್ಳಬಹುದಾಗಿದೆ. ಅದರಂತೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದೆ,’ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕ ಆರ್ ಗಿರೀಶ್ ಅವರು ಸರ್ಕಾರಕ್ಕೆ ಬರೆದ ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಕೊಂಡ್ಲಿ ಸಮೀಪದ ಗಣಿ ಪ್ರದೇಶದಲ್ಲಿ ಮಾತಾ ಮಿನರಲ್ಸ್ 320 ಎಕರೆಯಲ್ಲಿ ಗಣಿಗಾರಿಕೆ ನಡೆಸಬೇಕಿತ್ತು. ಆದರೆ, ಕೊಂಡ್ಲಿಗೆ ಹೊಂದಿಕೊಂಡಿರುವ ಮೂಡಲಪಾಳ್ಯದ ಸರ್ವೇ ನಂಬರ್ 9ರ 206 ಎಕರೆಯಲ್ಲಿ ಗಣಿಗಾರಿಕೆ ನಡೆಸಿತ್ತು. ಲೋಕಾಯುಕ್ತ ತನಿಖಾ ತಂಡದ ಮುಖ್ಯಸ್ಥ ಯು.ವಿ.ಸಿಂಗ್ ನೀಡಿದ್ದ ವರದಿಯಲ್ಲಿ ಇದು ಕಾನೂನುಬಾಹಿರ ಎಂದು ವಿವರಿಸಲಾಗಿತ್ತು.
ಗಣಿ ಗುತ್ತಿಗೆ ನವೀಕರಣ ಪ್ರಕರಣ ಟ್ರಿಬ್ಯೂನಲ್‍ನಲ್ಲಿ ವಿಚಾರಣೆಗೆ ಬಾಕಿ ಇದ್ದಾಗಲೂ ಗಣಿ ಗುತ್ತಿಗೆ ನವೀಕರಣಕ್ಕೆ ಆಗಿನ ಸರ್ಕಾರ ಅನುಮತಿ ನೀಡಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಅಕ್ರಮ ಗಣಿಗಾರಿಕೆ ನಡೆಸಿರುವ ಗಣಿ ಪ್ರದೇಶದಿಂದ ಸುಮಾರು 10 ಲಕ್ಷ ಮೆಟ್ರಿಕ್ ಟನ್ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರು ಸಾಗಿಸಿತ್ತು ಎಂಬ ಆರೋಪಕ್ಕೂ ಮಾತಾ ಮಿನರಲ್ಸ್ ಗಣಿ ಕಂಪನಿ ಗುರಿಯಾಗಿತ್ತು.
ಮಾತಾ ಮಿನರಲ್ಸ್ ಗಣಿ ಕಂಪನಿಯಲ್ಲಿ ಬಿಬಿಎಂಪಿ ಮಾಜಿ ಉಪಮೇಯರ್ ಪುಟ್ಟರಾಜು ಕೂಡ ಹಿಂದೆ ಈ ಕಂಪೆನಿ ಪಾಲುದಾರರಲ್ಲಿ ಒಬ್ಬರಾಗಿದ್ದರು.
ಕೇಂದ್ರ ರೈಲ್ವೆ ಖಾತೆಯ ಈಗಿನ ರಾಜ್ಯ ಸಚಿವ ವಿ ಸೋಮಣ್ಣ ಅವರ ಪುತ್ರರಿಬ್ಬರು ನಿರ್ದೇಶಕರಾಗಿದ್ದ ಮಾತಾ ಮಿನರಲ್ಸ್ ಕಂಪನಿಯು ಅನಧಿಕೃತ ಗಣಿಗಾರಿಕೆ ಮತ್ತು ಕಬ್ಬಿಣದ ಅದಿರು ಸಾಗಾಣಿಕೆ ಮಾಡಿರುವ ಪ್ರಕರಣದಲ್ಲಿ 53.12 ಕೋಟಿ ರು ದಂಡದ ಮೊತ್ತವನ್ನು ವಸೂಲು ಮಾಡಿಲ್ಲ ಎಂದು ‘ದಿ ಫೈಲ್’ ದಾಖಲೆ ಸಹಿತ ವರದಿ ಮಾಡಿದ್ದರ ಬೆನ್ನಲ್ಲೇ ಇದೀಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶರು ದಂಡವನ್ನು ಕಂದಾಯ ಬಾಕಿಯೆಂದು ಪರಿಗಣಿಸಿ ವಸೂಲು ಮಾಡಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು.
ಅನಧಿಕೃತ ಗಣಿಗಾರಿಕೆ ಮತ್ತು ಕಬ್ಬಿಣದ ಅದಿರು ಸಾಗಾಣಿಕೆ ಮಾಡಿರುವ ಪ್ರಕರಣದಲ್ಲಿ 53.12 ಕೋಟಿ ರು ದಂಡದ ಮೊತ್ತವನ್ನು ಕಳೆದ 12 ವರ್ಷಗಳಿಂದಲೂ ವಸೂಲು ಮಾಡಿರಲಿಲ್ಲ. ಈ ಕುರಿತು ‘ದಿ ಫೈಲ್’ 2025ರ ಜುಲೈ 21ರಂದು ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
6.33 ಲಕ್ಷ ಮೆಟ್ರಿಕ್ ಟನ್ ಅದಿರು ಸಾಗಾಣಿಕೆ; ಮಾತಾ ಮಿನರಲ್ಸ್‌ನಿಂದ ವಸೂಲಾಗದ 53.12 ಕೋಟಿ
ಈ ವರದಿ ಪ್ರಕಟಿಸಿದ ಒಂದು ವಾರದಲ್ಲಿ ಅಂದರೆ 2025ರ ಜುಲೈ 28ರಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕ ಗಿರೀಶ್ ಅವರು ದಂಡ ವಸೂಲಿಯನ್ನು ಕಂದಾಯ ಬಾಕಿಯೆಂದು ಪರಿಗಣಿಸಿ ವಸೂಲು ಮಾಡಬೇಕು ಎಂದು ಪತ್ರ ಬರೆದಿದ್ದರು.
ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಸರ್ಕಾರಕ್ಕೆ ಶಿಫಾರಸ್ಸಾಗಿತ್ತು. ಆದರೂ ಸಿದ್ದರಾಮಯ್ಯ ಅವರು ಈ ಶಿಫಾರಸ್ಸನ್ನು ಅನುಷ್ಠಾನಗೊಳಿಸಿರಲಿಲ್ಲ.
ಅಲ್ಲದೇ ಮಾತಾ ಮಿನರಲ್ಸ್ , ಅನಧಿಕೃತವಾಗಿ ಕಬ್ಬಿಣ ಅದಿರನ್ನು ರಫ್ತು ಮಾಡಿದ್ದ ಪ್ರಕರಣದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಂದಿನ ನಿರ್ದೇಶಕ ಡಾ ಎಂ ಬಸಪ್ಪ ರೆಡ್ಡಿ ಅವರಿಂದ 77.34 ಕೋಟಿ ರು. ವಸೂಲಿಗೆ ಸಂಬಂಧಿಸಿದಂತೆ ಬಿಗಿಯಾದ ಕ್ರಮ ವಹಿಸಿರಲಿಲ್ಲ. 1998ರ ಮೇ 5ರಿಂದ 2004ರ ಅಕ್ಟೋಬರ್ 31ರವರೆಗೆ ಡಾ ಬಸಪ್ಪ ರೆಡ್ಡಿ ಅವರು ಗಣಿ ಇಲಾಖೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲಿ ಭಾರತ ಸರ್ಕಾರದ ಪೂರ್ವಾನುಮೋದನೆ ಇಲ್ಲದೆ ಮಾತಾ ಮಿನರಲ್ಸ್ ಪರವಾಗಿ ಗಣಿ ಗುತ್ತಿಗೆ ನಕ್ಷೆಯನ್ನು 2000ರ ಅಕ್ಟೋಬರ್ 23ರಂದು ಬದಲಾಯಿಸಲಾಗಿತ್ತು.
ಅಕ್ರಮ ಅದಿರು ರಫ್ತು; ಮಾತಾ ಮಿನರಲ್ಸ್ ಪ್ರಕರಣದಲ್ಲಿ ದಾವೆ ಹೂಡದ ಸರ್ಕಾರ
ಮಾತಾ ಮಿನರಲ್ಸ್ ಗಣಿ ಪ್ರದೇಶದಿಂದ ರವಾನೆಯಾಗಿರುವ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರಿನ ಗುಣಮಟ್ಟಕ್ಕೆ ಅನುಗುಣವಾಗಿ ಸಾಗಿಸಿದ ಕಬ್ಬಿಣದ ಅದಿರಿಗೆ 66,70,72,434, ಮ್ಯಾಂಗನೀಸ್ ಅದಿರಿಗೆ 1,53,23,177 ಸೇರಿ ಒಟ್ಟು 68,23,95,611 ವೌಲ್ಯದ ಖನಿಜ ರವಾನೆಯಾಗಿದೆ ಎಂದು ಡಾ.ಬಸಪ್ಪ ರೆಡ್ಡಿ ಅವರ ವಿರುದ್ಧ ದೋಷಾರೋಪ ಹೊರಿಸಿತ್ತು.