ಬೆಂಗಳೂರು: ರಾಜ್ಯದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಯಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆಯಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 1,552.94 ಕೋಟಿ ರು. ನಷ್ಟವಾಗಿತ್ತು. ಆದರೆ ಇದುವರೆಗೆ ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇವಲ 12.11 ಕೋಟಿ ಮೌಲ್ಯದ ಆಸ್ತಿಯನ್ನಷ್ಟೇ ಮುಟ್ಟುಗೋಲು ಹಾಕಿಕೊಂಡಿರುವುದು ಬಹಿರಂಗಗೊಂಡಿದೆ.
ವಿಧಾನ ಪರಿಷತ್‌ನಲ್ಲಿ ಸದಸ್ಯೆ ಉಮಾಶ್ರಿ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಗಣಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಈ ಮಾಹಿತಿಯನ್ನು ನೀಡಿದ್ದಾರೆ.
ಅಕ್ರಮ ಗಣಿಗಾರಿಕೆ ಮತ್ತು ಅಕ್ರಮವಾಗಿ ಅದಿರು ರಫ್ತು ಮಾಡಿರುವ ಪ್ರಕರಣಗಳಲ್ಲಿ ರಾಜ್ಯದ ಬೊಕ್ಕಸಕ್ಕೆ 1.50 ಲಕ್ಷ ಕೋಟಿಯಷ್ಟು ನಷ್ಟವಾಗಿದೆ ಎಂದು ಈ ಕುರಿತು ತನಿಖೆ ನಡೆಸಿದ್ದ ಸಚಿವ ಸಂಪುಟದ ಉಪ ಸಮಿತಿ ದಾಖಲಿಸಿತ್ತು. ಈ ಕುರಿತು ಯಾವುದೇ ಕ್ರಮ ಕೈಗೊಳ್ಳದೇ ಇರುವ ಕುರಿತು ಖುದ್ದು ಸಚಿವ ಹೆಚ್ ಕೆ ಪಾಟೀಲ್ ಅವರು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು.
ಈಗ ಈ ಕುರಿತು ಹೆಚ್ಚಿನ ತನಿಖೆ ನಡೆಸಲು ಸಚಿವ ಹೆಚ್ ಕೆ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿಯೇ ಮತ್ತೊಂದು ಸಚಿವ ಸಂಪುಟದ ಉಪ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ಈಗಾಗಲೇ ಮೂರ್ನಾಲ್ಕು ಸಭೆಗಳನ್ನು ನಡೆಸಿದೆ.
ಈ ಬೆಳವಣಿಗೆ ನಡುವೆಯೇ ಗಣಿ ಅಕ್ರಮದಲ್ಲಿ ಭಾಗಿಯಾಗಿದ್ದ ಮತ್ತು ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಿದ್ದವರ ಆಸ್ತಿ ಮುಟ್ಟುಗೋಲು ಹಾಕಿಕೊಂಡಿರುವ ಕುರಿತಾದ ವಿವರಗಳನ್ನು ಸದನದ ಗಮನಕ್ಕೆ ತರಲಾಗಿದೆ. ಇದರಿಂದಾಗಿ ಅಕ್ರಮ ಗಣಿಗಾರಿಕೆ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
ಅಕ್ರಮ ಗಣಿಗಾರಿಕೆಯ ಕುರಿತು ತನಿಖೆ ನಡೆಸಿದ್ದ ಲೋಕಾಯುಕ್ತರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಈ ಪ್ರಕರಣ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು. ಅಕ್ರಮ ಗಣಿಗಾರಿಕೆಯ ವಿರುದ್ಧ ಆಗ ಪ್ರತಿ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಕೈಗೊಂಡಿದ್ದರು. ನಂತರ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಗಣಿ ಅಕ್ರಮಗಳ ಕುರಿತು ತನಿಖೆ ನಡೆಸಲು ಲೋಕಾಯುಕ್ತದಲ್ಲಿ ವಿಶೇಷ ತನಿಖಾ ತಂಡ ರಚಿಸಿದ್ದರು. ಈ ವಿಶೇಷ ತನಿಖಾ ತಂಡ ರಚನೆಯಾದ ವರ್ಷದಿಂದ ಇದುವರೆಗೂ ಮಾಡಿರುವ ಪ್ರಗತಿಯು ನಿರೀಕ್ಷಿತ ಪ್ರಮಾಣದಲ್ಲಿಲ್ಲ ಎಂದು ಹಲವು ಆರೋಪಗಳು ಕೇಳಿ ಬಂದಿದ್ದವು.
2013ರಿಂದ 2018 ರವರೆಗೆ ಕಾಂಗ್ರೆಸ್ ಮತ್ತು 2018ರಿಂದ 2019ರವರೆಗೆ ಸಮ್ಮಿಶ್ರ ಸರ್ಕಾರವು ಅಧಿಕಾರದಲ್ಲಿತ್ತು. ನಂತರ 2020ರಿಂದ 2023ರವರೆಗೆ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬಂದಿತ್ತು. ಈ ಯಾವುದೇ ಅವಧಿಯಲ್ಲಿಯೂ ವಿಶೇಷ ತನಿಖಾ ತಂಡವು ಈ ಪ್ರಕರಣಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿದ್ದು ತೀರಾ ಕಡಿಮೆ. 2023ರ ಮೇ ತಿಂಗಳಿನಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರವೂ ಅಕ್ರಮ ಗಣಿಗಾರಿಕೆ ಪ್ರಕರಣಗಳ ತನಿಖೆಯನ್ನು ಚುರುಕುಗೊಳಿಸಿರಲಿಲ್ಲ.
ಒಟ್ಟಾರೆ ನಷ್ಟವೆಷ್ಟು?
ಅಕ್ರಮ ಗಣಿಗಾರಿಕೆ ಪ್ರಕರಣಗಳನ್ನು ತನಿಖೆ ನಡೆಸಿದ್ದ ʻವಿಶೇಷ ತನಿಖಾ ತಂಡʼ (ಎಸ್‌ಐಟಿ)ಯು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿತ್ತು. 62 ಪ್ರಕರಣಗಳಲ್ಲಿ 615.29 ಕೋಟಿ ಮತ್ತು 42 ಪ್ರಾಥಮಿಕ ವಿಚಾರಣೆಗಳಿಗೆ ಸಂಬಂಧಿಸಿದಂತೆ 937.54 ಕೋಟಿ ನಷ್ಟವಾಗಿದ್ದ ಪ್ರಕರಣಗಳು ಸೇರಿದಂತೆ ಒಟ್ಟಾರೆ 1,5552.94 ಕೋಟಿ ರು ನಷ್ಟವಾಗಿದ್ದ ಪ್ರಕರಣಗಳ ಸಂಬಂಧ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಸದನಕ್ಕೆ ನೀಡಿರುವ ಉತ್ತರದಲ್ಲಿ ತಿಳಿಸಿದ್ದಾರೆ.
ಕೇವಲ 12.11 ಕೋಟಿ ಆಸ್ತಿ ಮುಟ್ಟುಗೋಲು
1,552.94 ಕೋಟಿ ರು ನಷ್ಟವಾಗಿದ್ದ ಪ್ರಕರಣಗಳ ಸಂಬಂಧ ದೋಷಾರೋಪಣೆ ಪಟ್ಟಿ ಸಲ್ಲಿಸಿರುವ ಪೈಕಿ ವಿಶೇಷ ತನಿಖಾ ತಂಡವು ಕ್ರಿಮಿನಲ್ ಆರ್ಡಿನೆನ್ಸ್ ಆಕ್ಟ್ 1944ರಡಿಯಲ್ಲಿ ಕೇವಲ 5 ಪ್ರಕರಣಗಳಲ್ಲಷ್ಟೇ ಸರ್ಕಾರದಿಂದ ಆದೇಶ ಪಡೆದುಕೊಂಡಿದೆ. ಹಾಗೆಯೇ ಕೇವಲ ಒಂದು ಪ್ರಕರಣದಲ್ಲಿ 12.11 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಾಲಯದಿಂದ ಅಂತಿಮ ಆದೇಶ ಪಡೆದಿರುವುದು ಉತ್ತರದಿಂದ ಗೊತ್ತಾಗಿದೆ.
‘ಅಕ್ರಮ ಗಣಿಗಾರಿಕೆ ಪ್ರಕರಣಗಳನ್ನು ತನಿಖೆ ಮಾಡಲು ಈಗಾಗಲೇ ವಿಶೇಷ ತನಿಖಾ ತಂಡ ರಚಿಸಿ ಪ್ರಕರಣಗಳನ್ನು ವಹಿಸಲಾಗಿರುತ್ತದೆ. ಅಗತ್ಯವಿದ್ದಲ್ಲಿ ಶೀಘ್ರಗತಿ ನ್ಯಾಯಾಲಯ ಸ್ಥಾಪಿಸುವ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ,’ ಎಂದು ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರು ಉತ್ತರದಲ್ಲಿ ವಿವರಿಸಿದ್ದಾರೆ.
ರಾಜ್ಯದಲ್ಲಿ ಅಗಾಧ ಸಂಪತ್ತು ಲೂಟಿಯಾದ ಪ್ರಕರಣಗಳ ಕುರಿತು ಕರ್ನಾಟಕ ಲೋಕಾಯುಕ್ತ ವಿಶೇಷ ತನಿಖಾ ತಂಡದಲ್ಲಿ ಇದುವರೆಗೆ ಒಟ್ಟು 110 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 94 ಪ್ರಕರಣಗಳಲ್ಲಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಲಾಗಿದೆ. ಇನ್ನು 16 ಪ್ರಕರಣಗಳು ತನಿಖಾ ಹಂತದಲ್ಲಿದೆ. ಮೊಕದ್ದಮೆ ಸಂಖ್ಯೆ 20/2015ರ ಪ್ರಕರಣದಲ್ಲಿ ಆರೋಪಿಗಳಿಗೆ ಸಜೆ ಶಿಕ್ಷೆ ಆಗಿದೆ ಎಂದು ಉತ್ತರದಲ್ಲಿ ಮಾಹಿತಿ ಒದಗಿಸಲಾಗಿದೆ.
ಅಕ್ರಮ ಗಣಿಗಾರಿಕೆ ಪ್ರಕರಣಗಳ ತನಿಖೆ ನಡೆಸಲು ಸರ್ಕಾರವು 2008 ಮತ್ತು 2010ರಲ್ಲಿ ಲೋಕಾಯುಕ್ತವನ್ನು ಕೋರಿತ್ತು. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿಯ ಭಾಗ-1ನ್ನು 2008ರಲ್ಲಿ ಹಾಗೂ ಭಾಗ-2ನ್ನು 2011ರಲ್ಲಿ ಸರ್ಕಾರಕ್ಕೆ ನೀಡಿತ್ತು. ಈ ಪ್ರಕರಣದ ಸಮಗ್ರ ವರದಿಯನ್ನು ಆಗಿನ ಲೋಕಾಯುಕ್ತ ಸಂತೋಷ್ ಹೆಗ್ಡೆ ಸರ್ಕಾರಕ್ಕೆ ಸಲ್ಲಿಸಿದ್ದರು.
ವರದಿಯಲ್ಲಿನ ಅಧ್ಯಾಯ 1,2,3 ಮತ್ತಿತರೆ ಸಂಬಂಧಪಟ್ಟ ಅಧ್ಯಾಯಗಳನ್ನು ಒಳಗೊಂಡಂತೆ ಕಬ್ಬಿಣದ ಅದಿರನ್ನು ಬಂದರುಗಳ ಮೂಲಕ ರಫ್ತು ಮಾಡಿದ ಪ್ರಕರಣಗಳನ್ನು ಒಳಾಡಳಿತ ಇಲಾಖೆಯು ಸರ್ಕಾರಿ ಆದೇಶ ಸಂಖ್ಯೆ ಹೆಚ್ ಡಿ 98 ಸಿಐಡಿ 2013 ರಲ್ಲಿ ಕೇಂದ್ರ ತನಿಖಾ ದಳ (ಸಿಬಿಐ)ಕ್ಕೆ ವಹಿಸಲಾಗಿತ್ತು. ಅಲ್ಲದೇ ಹಲವು ಪ್ರಕರಣಗಳಲ್ಲಿ ಹೆಚ್ಚುವರಿ ತನಿಖೆ ಕೈಗೊಳ್ಳಲು ಲೋಕಾಯುಕ್ತದ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.
ಸಿಬಿಐ ಪ್ರಾಥಮಿಕ ತನಿಖೆ ನಡೆಸಿ ಮುಕ್ತಾಯಗೊಳಿಸಿರುವ ಪ್ರಕರಣಗಳು ಹಾಗೂ ಪ್ರಾಥಮಿಕ ತನಿಖೆ ನಡೆಸಿ ರಿಜಿಸ್ಟರ್ ಕೇಸ್‌ಗಳನ್ನಾಗಿ ಪರಿವರ್ತಿಸಲು ವಿಫಲವಾಗಿ ರಾಜ್ಯ ಸರ್ಕಾರಕ್ಕೆ ಹಿಂದಿರುಗಿಸಿರುವ ಪ್ರಕರಣಗಳನ್ನು 2018ರ ಮಾರ್ಚ್ 21ರಂದು ಲೋಕಾಯುಕ್ತ ವಿಶೇಷ ತನಿಖಾ ತಂಡಕ್ಕೆ ವಹಿಸಲಾಗಿತ್ತು. ಇದಾದ ನಂತರ 2024ರಲ್ಲಿ ನವೆಂಬರ್ 22ರಂದು 10 ಸಿ ವರ್ಗದ ಗಣಿ ಗುತ್ತಿಗೆಗಳ ಪ್ರಕರಣಗಳನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಲಾಗಿತ್ತು ಎಂದು ಈ ಉತ್ತರಲ್ಲಿ ವಿವರಿಸಲಾಗಿದೆ.
2006ರಿಂದ 2010ರವರೆಗೆ ರಾಜ್ಯದ ರೈಲ್ವೇ ಸೈಡಿಂಗ್‌ಗಳಿಂದ ಅಂದಾಜು 1.45 ಲಕ್ಷ ಕೋಟಿ ರು ಮೌಲ್ಯದ 35 ಕೋಟಿ ಟನ್ ಅದಿರನ್ನು ಅಕ್ರಮವಾಗಿ ಸಾಗಾಣಿಕೆಯಾಗಿದ್ದ ಪ್ರಕರಣದ ಕುರಿತು ಕಾನೂನು ಸಚಿವ ಹೆಚ್ ಕೆ ಪಾಟೀಲ್ ಅವರ ಸಚಿವ ಸಂಪುಟ ಸಮಿತಿ ನೀಡಿದ್ದ ವರದಿ ಮೂಲೆಗುಂಪಾಗಿತ್ತು. ಕಳೆದ ಜೂನ್ 18ರಂದು ಈ ಬಗ್ಗೆ ಸಚಿವ ಎಚ್ ಕೆ ಪಾಟೀಲ್ ಅವರೇ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 7 ಪುಟಗಳ ಪತ್ರವನ್ನು ಬರೆದಿದ್ದರು.
ಸಚಿವ ಎಚ್ ಕೆ ಪಾಟೀಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿದ್ದ 7 ಪುಟಗಳ ಪತ್ರವು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಹಾಗೆಯೇ ಲೋಕಾಯುಕ್ತ ಸಂಸ್ಥೆ ಅಂದಾಜಿಸಿದ್ದ ನಷ್ಟದ ಮೊತ್ತ ಆಧರಿಸಿ ಸಿಇಸಿ ನೀಡಿರುವ ವರದಿಯನ್ನು ಸುಪ್ರೀಂ ಕೋರ್ಟ್ ಒಪ್ಪಿತ್ತು. ಹೀಗಾಗಿ ಮತ್ತೊಮ್ಮೆ ನಷ್ಟ ಅಂದಾಜಿಸಬಹುದೇ ಎಂದು ಅರಣ್ಯ, ಕಾನೂನು ಇಲಾಖೆಯ ಅಧಿಕಾರಿಗಳು ಪ್ರಶ್ನಿಸಿದ್ದರು. ಆ ಮೂಲಕ ಅಕ್ರಮ ಗಣಿಗಾರಿಕೆಯಿಂದಾಗಿರುವ ನಷ್ಟವನ್ನೂ ಮರೆ ಮಾಚಲು ಯತ್ನಿಸಿದ್ದರು. ಅಧಿಕಾರಿವರ್ಗದ ಓಟಕ್ಕೆ, ಸಚಿವ ಎಚ್ ಕೆ ಪಾಟೀಲ್ ಅವರು ಬರೆದಿದ್ದ ಪತ್ರವು ತಡೆಯೊಡ್ಡಿತ್ತು.
ಅಕ್ರಮವಾಗಿ ಅದಿರನ್ನು ಸಾಗಾಣಿಕೆ ಮಾಡಿರುವವರು ದೊಡ್ಡ ಪ್ರಮಾಣದ ಲೂಟಿ ಮಾಡುವ ಮೂಲಕ ರಾಜ್ಯ ವಿದ್ರೋಹ ಎಸಗಿದ್ದಾರೆ. ಈ ಪ್ರಕರಣಗಳು ತನಿಖೆಗೆ ಒಳಪಡಬೇಕಾಗಿತ್ತು. ಅಪರಾಧಿಗಳು ಶಿಕ್ಷೆಗೆ ಗುರಿಯಾಗಬೇಕಿತ್ತು. ಆದರೆ ಅಡಳಿತ ಅನಾಸಕ್ತಿ, ಅಧಿಕಾರಶಾಹಿಯ ರಾಜ್ಯದ್ರೋಹಿ ಮನೋಭಾವದಿಂದ ಈ ಪ್ರಕರಣಗಳ ತನಿಖೆಯು ಆಗಲಿಲ್ಲ. ವಿಚಾರಣೆಗೂ ಗುರಿಯಾಗಿರಲಿಲ್ಲ. ತನಿಖೆಗೆ ವಹಿಸಿದ್ದ ಕೆಲವೇ ಕೆಲವು ಪ್ರಕರಣಗಳಲ್ಲಿ ಎಸ್‌ಐಟಿಯು ಯಾವುದೇ ಪ್ರಗತಿಯನ್ನು ಸಾಧಿಸಿರಲಿಲ್ಲ. ಈ ಅಕ್ರಮಗಳು ಸರ್ಕಾರಿ ಕಡತಗಳಲ್ಲಿ ಅಧಿಕಾರಿಗಳ ವಿಳಂಬ ದ್ರೋಹಗಳಲ್ಲಿ ಹೂತು ಹೋಗುತ್ತಿವೆ. ಪುಣ್ಯದ ಮೇಲೆ ಪಾಪದ ವಿಜಯ ಸಾಧಿಸಿದಂತಾಗಿದೆ ಎಂದು ಸಚಿವರು ತಮ್ಮ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದರು.
ಕ್ರಿಮಿನಲ್ ಲಾ ಅಮೆಂಡ್‌ಮೆಂಟ್ ಆರ್ಡಿನೆನ್ಸ್ ಮೂಲಕ ನಷ್ಟ ವಸೂಲಾತಿ ಮಾಡಲು ಅಪರಾಧಿಗಳ/ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಒಬ್ಬ ವಸೂಲಾತಿ ಆಯುಕ್ತರನ್ನು ತಕ್ಷಣ ನೇಮಿಸಬೇಕು. ಈ ಆಯುಕ್ತರಿಗೆ ಅಗತ್ಯದ ಬೆಂಬಲ ಮತ್ತು ಬಲ ಒದಗಿಸಬೇಕು. ವಸೂಲಾತಿ ಪರಿಣಾಮಕಾರಿಗೊಳಿಸಲು ದೃಢ ನಿಶ್ಚಯದಿಂದ ಹೆಜ್ಜೆಗಳನ್ನಿರಿಸಬೇಕು ಎಂದು ಪತ್ರದಲ್ಲಿ ಸಲಹೆ ನೀಡಿದ್ದರು.
‘ಈಗ ತನಿಖೆ ಪೂರ್ಣಗೊಂಡು ನ್ಯಾಯಾಲಯದ ವಿಚಾರಣೆ ಹಂತದಲ್ಲಿಲರುವ ಪ್ರಕರಣಗಳಿಗಿಂತ ಹತ್ತು ಪಟ್ಟು ಹೆಚ್ಚಿನ ಅಕ್ರಮ ಗಣಿಗಾರಿಕೆ ಪ್ರಕರಣಗಳು ತನಿಖೆಗೆ ಒಳಪಡಲೇ ಇಲ್ಲ. ಅಂತಹ ಪ್ರಕರಣಗಳ ತನಿಖೆ ಅಗತ್ಯವಿದೆ. ಅದಕ್ಕಾಗಿ ಇನ್ನೂ ಬಲಯುತವಾದ ಪೌಜದಾರಿ ವ್ಯಾಪ್ತಿ ಹೊಂದಿರುವ ಅಪರಾಧಿಗಳನ್ನು ಶಿಕ್ಷೆಗೆ ಒಳಪಡಿಸಬಹುದಾದ ವಿಶೇಷ ತನಿಖಾ ತಂಡವೊಂದನ್ನು ರಚಿಸಿ ಪೊಲೀಸ್ ವ್ಯವಸ್ಥೆಯನ್ನು ರೂಪಿಸಬೇಕು.
ಅಕ್ರಮ ಗಣಿಗಾರಿಕೆ ಪ್ರಕರಣಗಳ ಅಪರಾಧಿ ಉದ್ದೇಶದ ಪ್ರಕರಣಗಳನ್ನು ತನಿಖೆ ಮಾಡಲು ತಕ್ಷಣ ವಿಶೇಷ ನ್ಯಾಯಾಲಯ ಸ್ಥಾಪನೆಯಾಗಬೇಕು,’ ಎಂದು ಪತ್ರದಲ್ಲಿ ಕೋರಿದ್ದರು.
ಶಿಕ್ಷೆಯನ್ನು ತಾಂತ್ರಿಕ, ಕಾನೂನಿನ ದೌರ್ಬಲ್ಯ ವ್ಯವಸ್ಥೆ ಮೂಲಕ ಅನುಕೂಲತೆ ಮತ್ತು ಅನುಮಾನದ ಪ್ರಯೋಜನೆಗಳಿಂದ ವ್ಯಕ್ತಿ ಪಾರಾಗಬಹುದು. ಶಿಕ್ಷೆಯನ್ನು ತಪ್ಪಿಸಿಕೊಳ್ಳಬಹುದು. ಆದರೆ ಗುನ್ನೆಯಿಂದ ಅಪರಾಧಿಗಳು ಗಳಿಸಿದ ಸಂಪತ್ತು ರಾಜ್ಯದ ಖಜಾನೆಗೆ ಮರಳಿ ವಾಪಸ್ಸು ತರದಿದ್ದರೇ ಅದು ವ್ಯವಸ್ಥೆಯ ವಿಡಂಬನೆ, ಅಣಕ ಆದಂತಾಗುವುದು ಎಂದೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪತ್ರದ ಮೂಲಕ ಗಮನಸೆಳೆದಿದ್ದರು.
‘ನ್ಯಾಯಾಲಯದ ವಿಚಾರಣೆಗಳು, ಪೊಲೀಸ್ ತನಿಖೆಗಳು, ಕ್ರಮಗಳು, ಶಿಕ್ಷೆಗಳು ಅಂದು 2007ರಷ್ಟು ಹಿಂದಿನ ದೂರುಗಳನ್ನು ಮತ್ತು ಆರೋಪಗಳನ್ನು ಕೇವಲ ರಾಜಕೀಯ ಕಾರಣಕ್ಕಾಗಿ ಮಾಡಲಾದ ಆರೋಪಗಳು ಎಂದು ಹೀಗಳೆಯಲಾಗುತ್ತಿತ್ತು. ಆದರೆ 16-18 ವರ್ಷಗಳ ನಂತರ ನ್ಯಾಯಾಲಯಗಳು ಅಪರಾಧಿಗಳಿಗೆ ಶಿಕ್ಷೆ ವಿಧಿಸಿರುವುದರಿಂದ ಆರೊಪಗಳಲ್ಲಿ ತಥ್ಯವಿತ್ತೆಂಬುದು ಸಾಬೀತಾಗಿದೆ. ಎಷ್ಟು ದೊಡ್ಡ ಲೂಟಿ ಎಂದು ಎಲ್ಲರೂ ಆಶ್ಚರ್ಯಪಟ್ಟಿದ್ದಾರೆ,’ ಎಂದು ಪತ್ರದಲ್ಲಿ ವಿವರಿಸಿದ್ದರು.
ಆದರೆ ಇಷ್ಟು ದೊಡ್ಡ ಪ್ರಮಾಣದ ಲೂಟಿಕೋರತನಕ್ಕೆ ತಕ್ಕ ಪ್ರಮಾಣದ ಶಿಕ್ಷೆಯಾಗಲಿ ಅಥವಾ ಕಳುವಿನ ಸಂಪತ್ತು, ಸರ್ಕಾರದಿಂದ ಸರ್ಕಾರಕ್ಕೆ ವಾಪಸ್ಸು ಪಡೆಯುವ ಪ್ರಾಮಣಿಕತನ ಮತ್ತು ನಿಷ್ಠೆಯ ಪ್ರಯತ್ನ ಇಲ್ಲವಾಯಿತೆಂಬ ಆಕ್ರೋಶ ಜನರಲ್ಲಿದೆ. ನಡೆದ ಗಣಿ ಅಕ್ರಮದ ಕೇವಲ ಶೆ 7.6ರಷ್ಟು ಪ್ರಕರಣಗಳು ತನಿಖೆಗೆ ಒಳಪಟ್ಟಿವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.
ಒಟ್ಟು ಅಕ್ರಮದ ಬಾಕಿ ಉಳಿದ ಪ್ರಕರಣಗಳ ತನಿಖೆ ನಡೆಯದೇ ಇದ್ದುದ್ದರಿಂದ ಕೇವಲ ಶೇ.0.02ರಷ್ಟು ಪ್ರಕರಣಗಳಲ್ಲಿ ಅಕ್ರಮದ ತನಿಖೆಗೊಳಪೊಟ್ಟ ಪ್ರಕರಣಗಳಲ್ಲಿ ಕೇವಲ ಶೇ. 2ರಷ್ಟು ಪ್ರಕರಣಗಳಲ್ಲಿ ತೀರ್ಪು ಬಂದಿದೆ. ಕೆಲವೇ ಕೆಲವು ಅಪರಾಧಿಗಳಿಗೆ ಶಿಕ್ಷೆಯಾಗಿವೆ. ಕೆಲವು ಆರೋಪಿಗಳು ಅನುಮಾನದ ಲಾಭ ಪಡೆದು ತಾಂತ್ರಿಕ ಕಾರಣಗಳಿಂದ ಬಿಡುಗಡೆಗೊಂಡು ನ್ಯಾಯಾಲಯದಿಂದ ಖುಲಾಸೆಯಾಗಿದ್ದಾರೆ. ಅವರ ಪ್ರಕರಣಗಳು ಪ್ರಕರಣವಾರು ಮೇಲ್ಮನವಿ ತೀರ್ಮಾನಿಸದೇ ಅಲ್ಲಿಯೇ ಕೊಳೆಯುತ್ತಿವೆ ಎಂದೂ ಆತಂಕ ವ್ಯಕ್ತಪಡಿಸಿದ್ದರು.
ಅಕ್ರಮ ಗಣಿಗಾರಿಕೆ ಚಟುವಟಿಕೆಗಳ ಮತ್ತು ಈ ಚಟುವಟಿಕೆಗಳಿಗೆ ಶಾಮೀಲಾಗಿ ನಿಂತಿದ್ದ ಅಧಿಕಾರಶಾಹಿಯು ಒಂದು ಕಡೆ ವಿಳಂಬ ದ್ರೋಹ, ಇನ್ನೊಂದು ಕಡೆ ನಿಷ್ಕ್ರೀಯತೆ ಕರ್ನಾಟಕದ ನೈಸರ್ಗಿಕ ಸಂಪತ್ತು ಲೂಟಿಯಾಗುವುದನ್ನು ಅಟ್ಟಹಾಸದಿಂದ ಸ್ವಾರ್ಥ ಸಾಧನೆಗಾಗಿ ಕುಹಕ ನಗೆ ಬೀರುತ್ತಿತ್ತು. ಸಂಪೂರ್ಣ ವ್ಯವಸ್ಥೆ ಪಟ್ಟಭದ್ರ ಆಸಕ್ತ ಮೂಕ ಪ್ರೇಕ್ಷಕನಂತೆ ವರ್ತಿಸಿ ದೇಶದ್ರೋಹವನ್ನು ಎಸಗುತ್ತಿತ್ತು ಎಂದು ಸಚಿವ ಹೆಚ್ ಕೆ ಪಾಟೀಲ್ ಅವರು ಪತ್ರದಲ್ಲಿ ಕಿಡಿ ಕಾರಿದ್ದರು.
‘ನ್ಯಾಯಾಲಯದ ವಿಚಾರಣೆಗಳು, ಪೊಲೀಸ್ ತನಿಖೆಗಳು, ಕ್ರಮಗಳು, ಶಿಕ್ಷೆಗಳು ಅಂದು 2007ರಷ್ಟು ಹಿಂದಿನ ದೂರುಗಳನ್ನು ಮತ್ತು ಆರೋಪಗಳನ್ನು ಕೇವಲ ರಾಜಕೀಯ ಕಾರಣಕ್ಕಾಗಿ ಮಾಡಲಾದ ಆರೋಪಗಳು ಎಂದು ಹೀಗಳೆಯಲಾಗುತ್ತಿತ್ತು. ಆದರೆ 16-18 ವರ್ಷಗಳ ನಂತರ ನ್ಯಾಯಾಲಯಗಳು ಅಪರಾಧಿಗಳಿಗೆ ಶಿಕ್ಷೆ ವಿಧಿಸಿರುವುದರಿಂದ ಆರೊಪಗಳಲ್ಲಿ ತಥ್ಯವಿತ್ತೆಂಬುದು ಸಾಬೀತಾಗಿದೆ. ಎಷ್ಟು ದೊಡ್ಡ ಲೂಟಿ ಎಂದು ಎಲ್ಲರೂ ಆಶ್ಚರ್ಯಪಟ್ಟಿದ್ದಾರೆ,’ ಎಂದು ಪತ್ರದಲ್ಲಿ ವಿವರಿಸಿದ್ದರು.
ಗಣಿ ಅಕ್ರಮದ ಕೇವಲ ಶೇ 7.6ರಷ್ಟು ಪ್ರಕರಣಗಳು ತನಿಖೆಗೆ ಒಳಪಟ್ಟಿವೆ. ಒಟ್ಟು ಅಕ್ರಮದ ಬಾಕಿ ಉಳಿದ ಪ್ರಕರಣಗಳ ತನಿಖೆ ನಡೆಯದೇ ಇದ್ದುದ್ದರಿಂದ ಕೇವಲ ಶೇ.0.02ರಷ್ಟು ಪ್ರಕರಣಗಳಲ್ಲಿ ಅಕ್ರಮದ ತನಿಖೆಗೊಳಪಟ್ಟ ಪ್ರಕರಣಗಳಲ್ಲಿ ಕೇವಲ ಶೇ. 2ರಷ್ಟು ಪ್ರಕರಣಗಳಲ್ಲಿ ತೀರ್ಪು ಬಂದಿತ್ತು.
‘ಇನ್ನುಳಿದ ಶೇ. 92.4ರಷ್ಟು ಅಕ್ರಮ ಗಣಿಗಾರಿಕೆ ಪ್ರಕರಣಗಳು ತನಿಖೆಗೆ ಒಳಪಡಬೇಕಾಗಿತ್ತು. ಅಪರಾಧಿಗಳು ಶಿಕ್ಷೆಗೆ ಗುರಿಯಾಗಿಬೇಕಿತ್ತು. ಆದರೆ ಅಡಳಿತ ಅನಾಸಕ್ತಿ, ಅಧಿಕಾರಶಾಹಿಯ ರಾಜ್ಯದ್ರೋಹಿ ಮನೋಭಾವದಿಂದ ಈ ಪ್ರಕರಣಗಳ ತನಿಖೆಯು ಆಗಲಿಲ್ಲ. ವಿಚಾರಣೆಗೂ ಗುರಿಯಾಗಲಿಲ್ಲ. ತನಿಖೆಗೆ ವಹಿಸಿದ ಕೆಲವೇ ಕೆಲವು ಪ್ರಕರಣಗಳು ಎಸ್‌ಐಟಿಯು ಯಾವುದೇ ಪ್ರಗತಿಯು ಸಾಧಿಸಲಿಲ್ಲ. ಈ ಅಕ್ರಮಗಳು ಸರ್ಕಾರಿ ಕಡತಗಳಲ್ಲಿ ಅಧಿಕಾರಿಗಳ ವಿಳಂಬ ದ್ರೋಹಗಳಲ್ಲಿ ಹೂತು ಹೋಗುತ್ತಿವೆ,’ ಎಂದು ಸಚಿವ ಹೆಚ್ ಕೆ ಪಾಟೀಲ್ ಅವರು ಪತ್ರದಲ್ಲಿ ಗಮನಸೆಳೆದಿದ್ದರು.
ಶಿಕ್ಷೆಯನ್ನು ತಾಂತ್ರಿಕ, ಕಾನೂನಿನ ದೌರ್ಬಲ್ಯ ವ್ಯವಸ್ಥೆ ಮೂಲಕ ಅನುಕೂಲತೆ ಮತ್ತು ಅನುಮಾನದ ಪ್ರಯೋಜನೆಗಳಿಂದ ವ್ಯಕ್ತಿ ಪಾರಾಗಬಹುದು. ಶಿಕ್ಷೆಯನ್ನು ತಪ್ಪಿಸಿಕೊಳ್ಳಬಹುದು. ಆದರೆ ಗುನ್ನೆಯಿಂದ ಅಪರಾಧಿಗಳು ಗಳಿಸಿದ ಸಂಪತ್ತು ರಾಜ್ಯದ ಖಜಾನೆಗೆ ಮರಳಿ ವಾಪಸ್ಸು ತರದಿದ್ದರೇ ಅದು ವ್ಯವಸ್ಥೆಯ ವಿಡಂಬನೆ, ಅಣಕ ಆದಂತಾಗುವುದು. ಅಕ್ರಮದ ಬಗ್ಗೆ ಅನೇಕ ವಿಷಯಗಳು ಸಾಕಷ್ಟು ಬೆಳಕು ಚೆಲ್ಲುತ್ತವೆ.
ಗಂಭೀರತೆಯು ಎಲ್ಲರಿಗೂ ವಿಧಿತವಾಗಲಿ ಹಾಗೂ ಈಗಾಗಲೇ ನೀಡಿರುವ ಗಂಭೀರ ರೀತಿಯ ನಿರ್ದೇಶನಗಳು ಅಂದಿನ ಸಚಿವ ಸಂಪುಟ ಉಪ ಸಮಿತಿಗೆ ನೀಡಿರುವ ಪುರಾವೆ ತೋರಿಸಿದ ಕಾಗದಗಳು ಯಾವುದೇ ಕಾರಣಕ್ಕೆ ಮರೆಯಾಗುವ ಮೊದಲೇ ಅವುಗಳ ರಕ್ಷಣೆ ಮತ್ತು ಅಂತಿಮ ನಿರ್ಣಯ ಮಾಡಲೇಬೇಕು ಎಂದು ಸಚಿವ ಎಚ್ ಕೆ ಪಾಟೀಲ್ ಅವರು ಒತ್ತಾಯಿಸಿದ್ದರು.
ರೈಲ್ವೆ ವ್ಯಾಗನ್‌ಗಳಲ್ಲಿ 35 ಕೋಟಿ ಟನ್ ಅದಿರು ರಫ್ತು, 1.43 ಲಕ್ಷ ಕೋಟಿ ನಷ್ಟ!; ಹೆಚ್‌ಕೆಪಿ ವರದಿ ಮೂಲೆಗುಂಪು
ಸಚಿವ ಹೆಚ್ ಕೆ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ಸಚಿವ ಸಂಪುಟ ಉಪ ಸಮಿತಿಯು 2013ರ ಡಿಸೆಂಬರ್ 20ರಿಂದ 2017ರ ನವೆಂಬರ್ 14ವರೆಗೆ 11 ಸಭೆಗಳನ್ನು ನಡೆಸಿದೆ. ಸಚಿವ ಸಂಪುಟ ಉಪ ಸಮಿತಿಯು ನಡೆಸಿದ್ದ 11 ಸಭೆಗಳ ನಡವಳಿಗಳನ್ನಾಧರಿಸಿ ‘ದಿ ಫೈಲ್’, ಸರಣಿ ವರದಿಗಳನ್ನು ಪ್ರಕಟಿಸಿತ್ತು.
ಈ 11 ಸಭೆಗಳಲ್ಲಿ ತುಂಬಾ ಮುಖ್ಯವಾಗಿ 2015ರ ಅಕ್ಟೋಬರ್ 16ರಂದು ನಡೆದಿದ್ದ ಸಭೆಯಲ್ಲಿ ಆಘಾತಕಾರಿ ಅಂಶಗಳ ಕುರಿತು ಚರ್ಚೆಯಾಗಿದ್ದವು.
ಅಕ್ರಮ ಗಣಿಗಾರಿಕೆ ಪ್ರಕರಣಗಳ ಕುರಿತು ತನಿಖೆ ನಡೆಸಿದ್ದ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರ ವರದಿಯು ಅಂದಾಜಿಸಿದ್ದ ನಷ್ಟದ ಮೊತ್ತವನ್ನೂ ಹೆಚ್ ಕೆ ಪಾಟೀಲ್ ಅವರ ಅಧ್ಯಕ್ಷತೆಯ ಸಂಪುಟ ಉಪ ಸಮಿತಿಯ ವರದಿಯು ಊಹೆಗೂ ಮೀರಿ ಲೆಕ್ಕಚಾರ ಮಾಡಿತ್ತು.
ಕಬ್ಬಿಣ ಅದಿರು ಅಕ್ರಮ ಸಾಗಾಣಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ಆಗಿರುವ ನಷ್ಟದ ಕುರಿತು ಲೋಕಾಯುಕ್ತರಾಗಿದ್ದ ಸಂತೋಷ್ ಹೆಗ್ಡೆ ಅವರು ವರದಿಯಲ್ಲಿ ನೀಡಿದ್ದ ಅಂದಾಜು ಮೊತ್ತಕ್ಕೂ ರೈಲ್ವೆ ಇಲಾಖೆ ದಾಖಲೆಗಳಿಂದ ಅಂದಾಜಿಸಿರುವ ಮೊತ್ತಕ್ಕೂ ಅಜಗಜಾಂತರ ವ್ಯತ್ಯಾಸ ಇರುವ ಹೊಸ ಅಂಶವನ್ನು ಸಂಪುಟ ಉಪ ಸಮಿತಿಯು ಹೊರಗೆಡವಿತ್ತು.
ಗಣಿಗಾರಿಕೆ; ಬಿಜೆಪಿ ಸರ್ಕಾರದಲ್ಲೇ ಬೊಕ್ಕಸಕ್ಕೆ 1.43 ಲಕ್ಷ ಸಾವಿರ ಕೋಟಿ ರು ನಷ್ಟ
ಲೋಕಾಯುಕ್ತರು ಮಾಡಿದ್ದ ಎಲ್ಲಾ ಅಂದಾಜುಗಳನ್ನು ಪರಿಶೀಲಿಸಿದ್ದರಲ್ಲದೆ ಅವುಗಳನ್ನು ಒರೆಗೆ ಹಚ್ಚಿದ್ದರು. ಇದರ ನಡುವೆಯೇ ರೈಲ್ವೆ ಇಲಾಖೆ ದಾಖಲೆಗಳನ್ನಿಟ್ಟುಕೊಂಡು ಮಾಡಿದ್ದ ಹೊಸ ಲೆಕ್ಕಾಚಾರಗಳನ್ನು ಕಂಡು ಸ್ವತಃ ಎಚ್ ಕೆ ಪಾಟೀಲ್ ಅವರು ಆಘಾತ ವ್ಯಕ್ತಪಡಿಸಿದ್ದರು.
ಐದು ಗ್ಯಾರಂಟಿಗಳ ಅನುಷ್ಠಾನ; ಬೊಕ್ಕಸ ಬರಿದಾಗಿಸದೆಯೇ 1.43 ಲಕ್ಷ ಕೋಟಿ ಸಂಗ್ರಹಕ್ಕೆ ಇಲ್ಲಿದೆ ಮಾರ್ಗ
2015ರ ಅಕ್ಟೋಬರ್ 16ರಂದು ನಡೆದಿದ್ದ ಸಭೆಯಲ್ಲಿ ಹೊರಬಿದ್ದಿದ್ದ ದಾಖಲೆಗಳು ಲೋಕಾಯುಕ್ತರು ಮಾಡಿದ್ದ ನಷ್ಟದ ಅಂದಾಜನ್ನು ಹಲವು ಪಟ್ಟು ವಿಸ್ತರಿಸಿತ್ತು. 2006ರಿಂದ 2010ರ ಅವಧಿಯಲ್ಲಿ ಕರ್ನಾಟಕದ 10, ಗೋವಾ, ತಮಿಳುನಾಡು ಮತ್ತು ಆಂಧ್ರ ಪ್ರದೇಶದ ವಿವಿಧ ಬಂದರುಗಳ ಮೂಲಕ ಅಕ್ರಮವಾಗಿ 2.98 ಕೋಟಿ ಟನ್ ಅದಿರು ರಫ್ತಾಗಿತ್ತು. ಇದರಿಂದ ಸರ್ಕಾರದ ಬೊಕ್ಕಸಕ್ಕೆ 12,228 ಕೋಟಿ ರೂ.ನಷ್ಟವಾಗಿದೆ (ಟನ್ಗೆ 4,103 ರೂ.ಲೆಕ್ಕಚಾರದಲ್ಲಿ) ಎಂದು ಸುಂಕ ಇಲಾಖೆ ನೀಡಿದ್ದ ಅಂಕಿ ಸಂಖ್ಯೆ ಆಧರಿಸಿ ಅಂದಿನ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಈ ಮೊತ್ತವನ್ನು ಅಂದಾಜಿಸಿದ್ದರು. ಇದು ಸುಂಕ ಇಲಾಖೆ ನೀಡಿದ್ದ ಅಂಕಿ ಅಂಶಗಳ ಆಧರಿಸಿದ ಲೆಕ್ಕಾಚಾರಕ್ಕಷ್ಟೇ ಸೀಮಿತವಾಗಿತ್ತು ಎಂದು ವರದಿಯಲ್ಲಿ ಉಲ್ಲೇಖವಾಗಿತ್ತು.
ಬಳ್ಳಾರಿಯಿಂದ ಹೊರಗಡೆ 6 ರೈಲ್ವೆ ನಿಲ್ದಾಣಗಳಿಂದ ಮತ್ತು 14 ರೈಲ್ವೆ ಸೈಡಿಂಗ್‌ಗಳಿಂದ 2006ರಿಂದ 2010ರವರೆಗೆ ಒಟ್ಟು 20 ಕೋಟಿ ಟನ್ ಅಕ್ರಮ ಅದಿರು ರಫ್ತಾಗಿದೆ. ರೈಲ್ವೆ ಹಾಗೂ ಇತರೆ ಮೂಲಗಳ ಮೂಲಕ ಸಾಗಣೆ ಮಾಡಿರುವ ಒಟ್ಟು 35 ಕೋಟಿ ಟನ್ ಅಕ್ರಮ ಅದಿರು ರಫ್ತಾಗಿದೆ. 2009ರ ಸೆಪ್ಟಂಬರ್ನಿಂದ ಜೂನ್ 2010ರವರೆಗೆ ಕೇವಲ 9 ತಿಂಗಳ ಅವಧಿಯಲ್ಲಿ 14 ಕೋಟಿ ಟನ್ ಕಬ್ಬಿಣದ ಅದಿರು ಪ್ರತಿನಿತ್ಯ 20 ಸಾವಿರ ಟ್ರಕ್‌ಗಳ ಮೂಲಕ ಸಾಗಣೆಯಾಗಿದೆ ಎಂದು ರೈಲ್ವೆ ಇಲಾಖೆ ನೀಡಿದ್ದ ದಾಖಲೆಗಳು ಬಹಿರಂಗಪಡಿಸಿದ್ದವು. ಇವೆಲ್ಲವೂ ಕರ್ನಾಟಕಕ್ಕೆ ಆಘಾತಕಾರಿ ಘಟನೆಗಳು ಎಂದು ಸಚಿವ ಸಂಪುಟದ ಉಪ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಸಭೆಯಲ್ಲಿ ವಿವರಿಸಿದ್ದರು.
ಆದರೆ ರೈಲ್ವೆ ಇಲಾಖೆ ದಾಖಲೆಗಳನ್ನು ಪಡೆದು ಚರ್ಚಿಸಿದ್ದ ಸಚಿವ ಸಂಪುಟ ಉಪ ಸಮಿತಿಯು 2006ರಿಂದ 2010ರ ಅವಧಿಯಲ್ಲಿ ಒಟ್ಟು 35 ಕೋಟಿ ಟನ್ ಅಕ್ರಮವಾಗಿ ಅದಿರು ಸಾಗಣೆಯಾಗಿದೆ ಎಂದು ಹೇಳಿತ್ತು. ಆದರೆ ನಷ್ಟದ ಮೊತ್ತವನ್ನು ಉಪ ಸಮಿತಿ ಅಂದಾಜಿಸಿರಲಿಲ್ಲ. ಲೋಕಾಯುಕ್ತರು ಮಾಡಿದ್ದ ಸರಾಸರಿ ಅಂದಾಜು 4,103 ರೂ.ಗಳನ್ನು 35 ಕೋಟಿ ಟನ್ಗೆ ಅನ್ವಯಿಸಿ ಅಂದಾಜಿಸಿದಲ್ಲಿ ನಷ್ಟದ ಮೊತ್ತ 1 ಲಕ್ಷ 43 ಸಾವಿರ ಕೋಟಿ ರೂಪಾಯಿ ಆಗಲಿತ್ತು.
‘ರೈಲ್ವೆಯ ವ್ಯಾಗನ್ಗಳು ಮತ್ತು ಟ್ರಕ್‌ಗಳ ಮೂಲಕ ರಾಜಕಾರಣಿಗಳು ತೋಳ್ಬಲದ ಮೂಲಕ ಇಷ್ಟೊಂದು ಪ್ರಮಾಣದಲ್ಲಿ ಅಕ್ರಮವಾಗಿ ಅದಿರು ಸಾಗಣೆ ಆಗಿದೆ. ಸುಪ್ರೀಂ ಕೋರ್ಟ್ ನೇರ ಉಸ್ತುವಾರಿಯಲ್ಲಿ ಈ ಪ್ರಕರಣದ ಮೇಲ್ವಿಚಾರಣೆ ಆಗುತ್ತಿದೆ. ಸಾರ್ವಜನಿಕ ಆಸ್ತಿ ರಕ್ಷಣೆಯಂತಹ ಕ್ರಮಗಳಿಗೆ ಅಧಿಕಾರಿಗಳು ಮುಂದಾಗದಿರುವುದು ಆತಂಕ ಸೃಷ್ಟಿಸುತ್ತಿದೆ,’ ಎಂದು ಸಚಿವ ಸಂಪುಟ ಉಪ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಅವರು ಹೇಳಿದ್ದರು. ಆದರೆ ಇವರ ಮಾತನ್ನು ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.
ಭಾರತ್ ಮೈನ್ಸ್ ಎಂಬ ಕಂಪನಿಯನ್ನು ಉದಾಹರಿಸಿರುವ ಎಚ್.ಕೆ.ಪಾಟೀಲ್ ಅವರು, 2009ರಿಂದ 2010ರ ಅವಧಿಯಲ್ಲಿ 2,11,422 ಮೆ.ಟನ್ ಅದಿರು ರಫ್ತು ಮಾಡಿತ್ತು. ಈ ಪ್ರಕರಣದಲ್ಲಿ ಅದಿರಿನ ರಫ್ತು ಪ್ರಮಾಣ ತಿಳಿದಿರುವ ಕಾರಣ ಇಂತಹ ಕಂಪನಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಇದರ ಅಧಾರದ ಮೇಲೆ ವಸೂಲಾತಿಗೆ ಕ್ರಮ ಕೈಗೊಂಡಿರಲಿಲ್ಲ.
‘ರೈಲ್ವೆಯ ವ್ಯಾಗನ್‌ಗಳ ಮೂಲಕ ಮತ್ತು ಟ್ರಕ್‌ಗಳ ಮೂಲಕ ಅಧಿಕಾರಸ್ತ ರಾಜಕಾರಿಣಿಗಳ ತೋಳ್ಬಲದ ಹಿನ್ನೆಲೆಯಲ್ಲಿ ಸಾಗಣೆಯಾಗಿದೆ ಎಂಬ ವಿಷಯವು ಬಹಿರಂಗಕ್ಕೆ ಬಂದಿದ್ದರಿಮದ ಮತ್ತು ಡಜನ್‌ಗಟ್ಟಲೇ ಪ್ರಮುಖ ರಾಜಕಾರಣಿಗಳು, ಶಾಸಕರು ಮತ್ತು ಸಚಿವರು ಬಂಧನಕ್ಕೊಳಗಾಗಿ ಸರ್ವೋಚ್ಛ ನ್ಯಾಯಾಲಯವೇ ನೇರ ಉಸ್ತುವಾರಿಯಲ್ಲಿ ಪ್ರಕರಣವನ್ನು ಮೇಲ್ವಿಚಾರಣೆ ಮಾಡುತ್ತಿರುವಾಗ ಸಾರ್ವಜನಿಕ ಆಸ್ತಿಯ ರಕ್ಷಣೆಯಂತಹ ಕ್ರಮಗಳಿಗೆ ಮುಂದಾಗದ ವಿಷಯವು ಆತಂಕ ಸೃಷ್ಟಿಸುತ್ತಿದೆ,’ ಎಂದು ಹೇಳಿದ್ದರು.
ರಾಷ್ಟ್ರದ ಸಂಪತ್ತು ಕೆಲವು ಬಲಾಢ್ಯ ವ್ಯಕ್ತಿಗಳ ಪಾಲಾಗಿದ್ದು, ಈ ನಷ್ಟವನ್ನು ವಸೂಲು ಮಾಡಲು ಹಾಗೂ ಸ್ಥಿರಾಸ್ತಿ-ಚರಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳದೇ ಸುಮ್ಮನೆ ಕುಳಿತು ಕೊಳ್ಳಲು ಸಾಧ್ಯವೇ ಇಲ್ಲ. ಅಂತಹ ಹಣದಿಂದ ಗಳಿಸಿದ ಅಕ್ರಮ ಆಸ್ತಿಯನ್ನು ಮನಿ ಲ್ಯಾಂಡ್ರಿಂಗ್ ಕಾಯ್ದೆ ಅಥವಾ ಸೂಕ್ತ ಕಾಯ್ದೆ ಅಡಿಯಲ್ಲಿ ವಸೂಲು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಎಚ್.ಕೆ.ಪಾಟೀಲ್ ಅವರು ಹೇಳಿದ್ದ ಮಾತುಗಳನ್ನು ಸಿದ್ದರಾಮಯ್ಯ ಅವರು ಕಿವಿ ಮೇಲೆ ಹಾಕಿಕೊಂಡಿರಲಿಲ್ಲ.