ಐದು ಗ್ಯಾರಂಟಿಗಳ ಅನುಷ್ಠಾನ; ಬೊಕ್ಕಸ ಬರಿದಾಗಿಸದೆಯೇ 1.43 ಲಕ್ಷ ಕೋಟಿ ಸಂಗ್ರಹಕ್ಕೆ ಇಲ್ಲಿದೆ ಮಾರ್ಗ

ಬೆಂಗಳೂರು: ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಯುವ ನಿಧಿ, ಅನ್ನಭಾಗ್ಯ, ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಅನುಷ್ಠಾನಗೊಂಡ ನಂತರ ಎದುರಾಗುವ ಆರ್ಥಿಕ ಪರಿಣಾಮಗಳ ಕುರಿತು ಇಲಾಖೆಗಳ ಸಚಿವರು, ಉನ್ನತ ಅಧಿಕಾರಿಗಳ ಜತೆ ಪ್ರತ್ಯೇಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರಂತರವಾಗಿ ಸಭೆ ನಡೆಸುತ್ತಿದ್ದಾರೆ.

 

ಪ್ರಣಾಳಿಕೆಯಲ್ಲಿ ಘೋಷಿಸಿರುವ ಎಲ್ಲಾ 5 ಗ್ಯಾರಂಟಿಗಳನ್ನು ಈಡೇರಿಸಲು ಹಣಕಾಸನ್ನು ಹೊಂದಾಣಿಕೆ ಮಾಡಲು ಈಗಾಗಲೇ ವಿದ್ಯುತ್‌ ದರದಲ್ಲಿ ಪರಿಷ್ಕರಣೆ ಮಾಡುವ ಮೂಲಕ ಗ್ರಾಹಕರ ವಿರೋಧಕ್ಕೂ ಕಾರಣವಾಗುತ್ತಿದೆ. ಬೊಕ್ಕಸಕ್ಕೆ ಕೈ ಹಾಕದೇ ಮತ್ತು ಯಾವುದೇ ಆರ್ಥಿಕ ಪರಿಣಾಮಗಳಿಲ್ಲದೆಯೂ ಈ ಎಲ್ಲಾ 5 ಗ್ಯಾರಂಟಿಗಳನ್ನೂ ಈಡೇರಿಸಬಹುದು.

 

 

ಕಾಂಗ್ರೆಸ್‌ ಸರ್ಕಾರ ಈ ಹಿಂದಿನ ತನ್ನ 5 ವರ್ಷಗಳ ಅಧಿಕಾರದಲ್ಲಿ ಎಚ್‌ ಕೆ ಪಾಟೀಲ್‌ ಅವರ ಅಧ್ಯಕ್ಷತೆಯಲ್ಲಿದ್ದ ಸಚಿವ ಸಂಪುಟ ಉಪ ಸಮಿತಿಯು ಅವಲೋಕಿಸಿದ್ದ ಅಂಶಗಳತ್ತ ಕಣ್ಣಾಡಿಸಿದ್ದರೆ ಬೊಕ್ಕಸವೂ ತುಂಬುತ್ತಿತ್ತು. ಅಕ್ರಮ ಗಣಿಗಾರಿಕೆ ನಡೆಸಿ ರಾಜ್ಯದ ಸಂಪತ್ತನ್ನು ಲೂಟಿಗೈದ ಗಣಿ ದಂಧೆಕೋರರನ್ನು ಮಟ್ಟಹಾಕಲು ಮತ್ತು ಲಕ್ಷ ಕೋಟಿಗೂ ಹೆಚ್ಚಿನ ಮೊತ್ತವನ್ನು ವಸೂಲು ಮಾಡುವ ಎಲ್ಲಾ ಅವಕಾಶಗಳಿದ್ದರೂ ಅದನ್ನು ಕೈಚೆಲ್ಲಿ ಕುಳಿತಿದ್ದ ಕಾಂಗ್ರೆಸ್‌ ಸರ್ಕಾರ ಇದೀಗ ಮತ್ತೊಮ್ಮೆ ಸಚಿವ ಸಂಪುಟ ಉಪ ಸಮಿತಿಯು ಅವಲೋಕಿಸಿರುವ ಅಂಶಗಳನ್ನೇ ಬಳಸಿಕೊಂಡಲ್ಲಿ 1.43 ಲಕ್ಷ ಕೋಟಿ ರು.ಗಳನ್ನು ವಸೂಲು ಮಾಡಬಹುದು. ಆ ಮೂಲಕ ಎಲ್ಲಾ 5 ಗ್ಯಾರಂಟಿಗಳನ್ನು  ಒಂದು ವರ್ಷದ ತನಕ ಅತ್ಯಂತ ಸುಲಭವಾಗಿ  ಅನುಷ್ಠಾನಗೊಳಿಸಬಹುದು ಎಂಬ ಪ್ರತಿಪಾದನೆಯೂ ಮುನ್ನೆಲೆಗೆ ಬಂದಿದೆ.

 

ಈ ಕುರಿತು ಆಂಗ್ಲ ದಿನಪತ್ರಿಕೆ ಇಂಡಿಯನ್‌ ಎಕ್ಸ್‌ಪ್ರೆಸ್‌ನಲ್ಲಿ ಖ್ಯಾತ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು 5 ಗ್ಯಾರಂಟಿಗಳ ಅನುಷ್ಠಾನ ಮತ್ತು ಇದರಿಂದಾಗುವ ಆರ್ಥಿಕ ಹೊರೆ ಕುರಿತು ಚರ್ಚಿಸಿದ್ದಾರೆ. ಇದೇ ಚರ್ಚೆಯಲ್ಲಿಯೇ ಹೆಚ್‌ ಕೆ ಪಾಟೀಲ್‌ ಅವರು ಈ ಹಿಂದೆ ನೀಡಿದ್ದ ವರದಿ ಮೇಲೂ ಬೆಳಕು ಚೆಲ್ಲಿದ್ದಾರೆ. 1. 43 ಲಕ್ಷ ಕೋಟಿ ರು.ಗಳನ್ನು ಅದಿರು ಕಂಪನಿಗಳಿಂದ ವಸೂಲು ಮಾಡಿದರೆ ಎಲ್ಲಾ 5 ಗ್ಯಾರಂಟಿಗಳನ್ನೂ ಈಡೇರಿಸಬಹುದು ಎಂದಿದ್ದಾರೆ.

 

ಅಕ್ರಮ ಗಣಿಗಾರಿಕೆ ಕುರಿತಂತೆ ಲೋಕಾಯುಕ್ತರು ನೀಡಿರುವ ವರದಿಗಳಲ್ಲಿನ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ಕುರಿತು ಸುದೀರ್ಘವಾಗಿ ಪರಿಶೀಲನೆ ಮತ್ತು ವಿವಿಧ ಇಲಾಖೆಗಳು ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಸತತವಾಗಿ ಮೇಲುಸ್ತುವಾರಿ ಮಾಡಲು ಹೆಚ್‌ ಕೆ ಪಾಟೀಲ್‌ ಅವರ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಚಿವ ಸಂಪುಟ ಉಪ ಸಮಿತಿಯು ಅವಲೋಕಿಸಿದ್ದ ಅಂಶಗಳೇ ಈ ಎಲ್ಲಾ ಗ್ಯಾರಂಟಿಗಳಿಗೂ ಸುಲಭವಾಗಿ ಪರಿಹಾರ ಒದಗಿಸಲಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಸಚಿವ ಸಂಪುಟ ಉಪ ಸಮಿತಿಯು ನಡೆಸಿದ್ದ ಎಲ್ಲಾ ಸಭೆಗಳ ನಡವಳಿಗಳೂ ‘ದಿ ಫೈಲ್‌’ ಲಭ್ಯವಾಗಿವೆ.

 

ಲೋಕಾಯುಕ್ತರು ಮಾಡಿದ್ದ ಎಲ್ಲಾ ಅಂದಾಜುಗಳನ್ನು ಪರಿಶೀಲಿಸಿದ್ದರಲ್ಲದೆ ಅವುಗಳನ್ನು ಒರೆಗೆ ಹಚ್ಚಿದ್ದರು. ಇದರ ನಡುವೆಯೇ ರೈಲ್ವೆ ಇಲಾಖೆ ದಾಖಲೆಗಳನ್ನಿಟ್ಟುಕೊಂಡು ಮಾಡಿದ್ದ ಹೊಸ ಲೆಕ್ಕಾಚಾರಗಳನ್ನು ಕಂಡು ಸ್ವತಃ ಎಚ್‌ ಕೆ ಪಾಟೀಲ್‌ ಅವರು ಆಘಾತ ವ್ಯಕ್ತಪಡಿಸಿದ್ದರು. ಹಾಗಾದರೆ ಸಚಿವ ಸಂಪುಟದ ಉಪ ಸಮಿತಿ ನೀಡಿದ್ದ ವರದಿಯಲ್ಲೇನಿತ್ತು, ಲೋಕಾಯುಕ್ತರಾಗಿದ್ದ ಸಂತೋಷ್‌ ಹೆಗ್ಡೆ ಮತ್ತು ಅವರ ತಂಡ ಮಾಡಿದ್ದ ನಷ್ಟದ ಲೆಕ್ಕಾಚಾರಕ್ಕೂ ಸಚಿವ ಸಂಪುಟ ಉಪ ಸಮಿತಿ ಮಾಡಿದ್ದ ಲೆಕ್ಕಾಚಾರಗಳ ಮಧ್ಯೆ ಎಷ್ಟೊಂದು ವ್ಯತ್ಯಾಸವಿದೆ ಎಂಬ ಅಂಶಗಳತ್ತ ಕಣ್ಣಾಡಿಸೋಣ.

 

ಲೋಕಾಯುಕ್ತರ ವರದಿಯನ್ನು ವಿಸ್ತರಿಸಿದ್ದ ಉಪ ಸಮಿತಿ

 

ಹೆಚ್‌ ಕೆ ಪಾಟೀಲ್‌ ಅವರ ಅಧ್ಯಕ್ಷತೆಯಲ್ಲಿದ್ದ ಸಚಿವ ಸಂಪುಟದ ಉಪ ಸಮಿತಿಯು ಅವಲೋಕಿಸಿರುವ ಅಂಶಗಳು ಲೋಕಾಯುಕ್ತ ಸಂತೋಷ್‌ ಹೆಗ್ಡೆ ಅವರು ನೀಡಿದ್ದ ವರದಿಯನ್ನು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಿದೆ. ಸಚಿವ ಸಂಪುಟ ಉಪ ಸಮಿತಿಯು ಲೋಕಾಯುಕ್ತ ವರದಿಯನ್ನು ಯಾರ ಅಂದಾಜಿಗೂ ಸಿಗದಂತೆ ವಿಸ್ತರಿಸಿತ್ತು.

 

ಅಕ್ರಮವಾಗಿ ಕಬ್ಬಿಣ ಅದಿರಿನ ಸಾಗಾಣಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ಆಗಿರುವ ನಷ್ಟದ ಕುರಿತು ಲೋಕಾಯುಕ್ತರಾಗಿದ್ದ ಸಂತೋಷ್​​ ಹೆಗ್ಡೆ ಅವರು ವರದಿಯಲ್ಲಿ ನೀಡಿದ್ದ ಅಂದಾಜು ಮೊತ್ತಕ್ಕೂ ಸಚಿವ ಸಂಪುಟ ಉಪ ಸಮಿತಿಯು ತರಿಸಿಕೊಂಡಿದ್ದ ರೈಲ್ವೆ ಇಲಾಖೆ ದಾಖಲೆಗಳಿಂದ ಅಂದಾಜಿಸಿರುವ ಮೊತ್ತಕ್ಕೂ ಅಜಗಜಾಂತರ ವ್ಯತ್ಯಾಸ ಇರುವ ಹೊಸ ಅಂಶವೊಂದನ್ನು ಹೊರಗೆಡವಿತ್ತು.

 

ಲೋಕಾಯುಕ್ತ ಸಂತೋಷ್‌ ಹೆಗ್ಡೆ ಅವರು ನೀಡಿದ್ದ ವರದಿ ಪ್ರಕಾರ ರಾಜ್ಯದಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆಯಿಂದ 2.98 ಕೋಟಿ ಮೆಟ್ರಿಕ್ ಟನ್‌ ಅಕ್ರಮವಾಗಿ ಅದಿರು ರಫ್ತಾಗಿತ್ತು. ಇದರಿಂದ 12,228 ಕೋಟಿ ರು. ನಷ್ಟವಾಗಿದೆ ಎಂದು ಹೇಳಿತ್ತು. ಆದರೆ ಹೆಚ್‌ ಕೆ ಪಾಟೀಲ್‌ ಅವರ ನೇತೃತ್ವದ ಸಚಿವ ಸಂಪುಟ ಉಪ ಸಮಿತಿ ಪ್ರಕಾರ 35 ಕೋಟಿ ಟನ್‌ ಅದಿರು ಅಕ್ರಮವಾಗಿ ಸಾಗಾಣಿಕೆ ಮಾಡಲಾಗಿತ್ತು.

 

2015ರ ಅಕ್ಟೋಬರ್​ 16ರಂದು ನಡೆದಿದ್ದ ಸಭೆಯಲ್ಲಿ ಹೊರಬಿದ್ದಿದ್ದ ದಾಖಲೆಗಳು ಲೋಕಾಯುಕ್ತರು ಮಾಡಿದ್ದ ನಷ್ಟದ ಅಂದಾಜನ್ನು ಹಲವು ಪಟ್ಟು ವಿಸ್ತರಿಸಿದೆ. 2006ರಿಂದ 2010ರ ಅವಧಿಯಲ್ಲಿ ಕರ್ನಾಟಕದ 10, ಗೋವಾ, ತಮಿಳುನಾಡು ಮತ್ತು ಆಂಧ್ರ ಪ್ರದೇಶದ ವಿವಿಧ ಬಂದರುಗಳ ಮೂಲಕ ಅಕ್ರಮವಾಗಿ 2.98 ಕೋಟಿ ಟನ್ ಅದಿರು ರಫ್ತಾಗಿತ್ತು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ​​ 12,228 ಕೋಟಿ ರೂ.ನಷ್ಟವಾಗಿದೆ (ಟನ್​​ಗೆ 4,103 ರೂ.ಲೆಕ್ಕಚಾರದಲ್ಲಿ) ಎಂದು ಸುಂಕ ಇಲಾಖೆ ನೀಡಿದ್ದ ಅಂಕಿ ಸಂಖ್ಯೆ ಆಧರಿಸಿ ಅಂದಿನ ಲೋಕಾಯುಕ್ತ ಸಂತೋಷ್​ ಹೆಗ್ಡೆ ಅವರು ಈ ಮೊತ್ತವನ್ನು ಅಂದಾಜಿಸಿದ್ದರು. ಇದು ಸುಂಕ ಇಲಾಖೆ ನೀಡಿದ್ದ ಅಂಕಿ ಅಂಶಗಳ ಆಧರಿಸಿದ ಲೆಕ್ಕಾಚಾರಕ್ಕಷ್ಟೇ ಸೀಮಿತವಾಗಿತ್ತು.

 

 

ಆದರೆ ರೈಲ್ವೆ ಇಲಾಖೆ ದಾಖಲೆಗಳನ್ನು ಪಡೆದು ಚರ್ಚಿಸಿದ್ದ ಸಚಿವ ಸಂಪುಟ ಉಪ ಸಮಿತಿಯು 2006ರಿಂದ 2010ರ ಅವಧಿಯಲ್ಲಿ ಒಟ್ಟು 35 ಕೋಟಿ ಟನ್​​ ಅಕ್ರಮವಾಗಿ ಅದಿರು ಸಾಗಣೆಯಾಗಿದೆ ಎಂದು ಹೇಳಿತ್ತು. ಆದರೆ ನಷ್ಟದ ಮೊತ್ತವನ್ನು ಉಪ ಸಮಿತಿ ಅಂದಾಜಿಸಿರಲಿಲ್ಲ. ಲೋಕಾಯುಕ್ತರು ಮಾಡಿದ್ದ ಸರಾಸರಿ ಅಂದಾಜು 4,103 ರೂ.ಗಳನ್ನು 35 ಕೋಟಿ ಟನ್​​ಗೆ ಅಂದಾಜಿಸಿದಲ್ಲಿ ನಷ್ಟದ ಮೊತ್ತ 12,228 ಕೋಟಿ ಇದ್ದದ್ದು 1 ಲಕ್ಷ 43 ಸಾವಿರ ಕೋಟಿ ರೂಪಾಯಿಗೆ ತಂದು ನಿಲ್ಲಿಸುತ್ತದೆ.

 

 

ಬಳ್ಳಾರಿಯಿಂದ ಹೊರಗಡೆ 6 ರೈಲ್ವೆ ನಿಲ್ದಾಣಗಳಿಂದ ಮತ್ತು 14 ರೈಲ್ವೆ ಸೈಡಿಂಗ್​​ಗಳಿಂದ 2006ರಿಂದ 2010ರವರೆಗೆ ಒಟ್ಟು 20 ಕೋಟಿ ಟನ್​ ಅಕ್ರಮ ಅದಿರು ರಫ್ತಾಗಿದೆ. ರೈಲ್ವೆ ಹಾಗೂ ಇತರೆ ಮೂಲಗಳ ಮೂಲಕ ಸಾಗಣೆ ಮಾಡಿರುವ ಒಟ್ಟು 35 ಕೋಟಿ ಟನ್​ ಅಕ್ರಮ ಅದಿರು ರಫ್ತಾಗಿದೆ. 2009ರ ಸೆಪ್ಟಂಬರ್​ನಿಂದ ಜೂನ್​ 2010ರವರೆಗೆ ಕೇವಲ 9 ತಿಂಗಳ ಅವಧಿಯಲ್ಲಿ 14 ಕೋಟಿ ಟನ್​ ಕಬ್ಬಿಣದ ಅದಿರು ಪ್ರತಿನಿತ್ಯ 20 ಸಾವಿರ ಟ್ರಕ್​​ಗಳ ಮೂಲಕ ಸಾಗಣೆಯಾಗಿದೆ ಎಂದು ರೈಲ್ವೆ ಇಲಾಖೆ ನೀಡಿದ್ದ ದಾಖಲೆಗಳು ಬಹಿರಂಗಪಡಿಸಿದ್ದವು. ಇವೆಲ್ಲವೂ ಕರ್ನಾಟಕಕ್ಕೆ ಆಘಾತಕಾರಿ ಘಟನೆಗಳು ಎಂದು ಸಚಿವ ಸಂಪುಟದ ಉಪ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್​ ಬಣ್ಣಿಸಿದ್ದರು.

 

 

ರೈಲ್ವೆಯ ವ್ಯಾಗನ್​ಗಳು ಮತ್ತು ಟ್ರಕ್​ಗಳ ಮೂಲಕ ರಾಜಕಾರಣಿಗಳು ತೋಳ್ಬಲದ ಮೂಲಕ ಇಷ್ಟೊಂದು ಪ್ರಮಾಣದಲ್ಲಿ ಅಕ್ರಮವಾಗಿ ಅದಿರು ಸಾಗಣೆ ಆಗಿದೆ. ಸುಪ್ರೀಂ ಕೋರ್ಟ್​ ನೇರ ಉಸ್ತುವಾರಿಯಲ್ಲಿ ಈ ಪ್ರಕರಣದ ಮೇಲ್ವಿಚಾರಣೆ ಆಗುತ್ತಿದೆ. ಸಾರ್ವಜನಿಕ ಆಸ್ತಿ ರಕ್ಷಣೆಯಂತಹ ಕ್ರಮಗಳಿಗೆ ಅಧಿಕಾರಿಗಳು ಮುಂದಾಗದಿರುವುದು ಆತಂಕ ಸೃಷ್ಟಿಸುತ್ತಿದೆ ಎಂದು ಸಚಿವ ಸಂಪುಟ ಉಪ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್​ ಅವರು ಹೇಳಿದ್ದರು. ಆದರೆ ಇವರ ಮಾತನ್ನು ಅಂದಿನ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.

 

 

ಭಾರತ್​ ಮೈನ್ಸ್​ ಎಂಬ ಕಂಪನಿಯನ್ನು ಉದಾಹರಿಸಿರುವ ಎಚ್.ಕೆ.ಪಾಟೀಲ್ ಅವರು, 2009ರಿಂದ 2010ರ ಅವಧಿಯಲ್ಲಿ 2,11,422 ಮೆ.ಟನ್​ ಅದಿರು ರಫ್ತು ಮಾಡಿದೆ. ಈ ಪ್ರಕರಣದಲ್ಲಿ ಅದಿರಿನ ರಫ್ತು ಪ್ರಮಾಣ ತಿಳಿದಿರುವ ಕಾರಣ ಇಂತಹ ಕಂಪನಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಇದರ ಅಧಾರದ ಮೇಲೆ ವಸೂಲಾತಿಗೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ. ರಾಷ್ಟ್ರದ ಸಂಪತ್ತು ಕೆಲವು ಬಲಾಢ್ಯ ವ್ಯಕ್ತಿಗಳ ಪಾಲಾಗಿದ್ದು, ಈ ನಷ್ಟವನ್ನು ವಸೂಲು ಮಾಡಲು ಹಾಗೂ ಸ್ಥಿರಾಸ್ತಿ-ಚರಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳದೇ ಸುಮ್ಮನೆ ಕುಳಿತು ಕೊಳ್ಳಲು ಸಾಧ್ಯವೇ ಇಲ್ಲ. ಅಂತಹ ಹಣದಿಂದ ಗಳಿಸಿದ ಅಕ್ರಮ ಆಸ್ತಿಯನ್ನು ಮನಿ ಲ್ಯಾಂಡ್ರಿಂಗ್​ ಕಾಯ್ದೆ ಅಥವಾ ಸೂಕ್ತ ಕಾಯ್ದೆ ಅಡಿಯಲ್ಲಿ ವಸೂಲು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಎಚ್.ಕೆ.ಪಾಟೀಲ್​ ಅವರು ಹೇಳಿದ್ದ ಮಾತುಗಳನ್ನು ಅಂದಿನ ಕಾಂಗ್ರೆಸ್‌ ಸರ್ಕಾರವು ನಿರ್ಲಕ್ಷ್ಯಿಸಿತ್ತು.

 

 

ಲೋಕಾಯುಕ್ತ ಸಂಸ್ಥೆ ಮಾಡಿದ್ದ ಎಲ್ಲಾ ಅಂದಾಜುಗಳನ್ನು ಪರಿಗಣಿಸಲಾಗದು ಎಂದು ಸಂಸದೀಯ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ನೀಡಿದ್ದ ಅಭಿಪ್ರಾಯಕ್ಕೆ ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ಕಾನೂನು ಇಲಾಖೆಯ ಉಪ ಕಾರ್ಯದರ್ಶಿ, ಇದೇ ಸಭೆಯಲ್ಲಿ ಆಕ್ಷೇಪ ಎತ್ತಿದ್ದರು. ಲೋಕಾಯುಕ್ತ ಸಂಸ್ಥೆ ಅಂದಾಜಿಸಿರುವ ನಷ್ಟದ ಮೊತ್ತ ಆಧರಿಸಿ ಸಿಇಸಿ ನೀಡಿರುವ ವರದಿಯನ್ನು ಸುಪ್ರೀಂ ಕೋರ್ಟ್​ ಒಪ್ಪಿದೆ. ಹೀಗಾಗಿ ಮತ್ತೊಮ್ಮೆ ನಷ್ಟ ಅಂದಾಜಿಸಬಹುದೇ ಎಂದು ಅರಣ್ಯ, ಕಾನೂನು ಇಲಾಖೆಯ ಅಧಿಕಾರಿಗಳು ಪ್ರಶ್ನಿಸುವ ಮೂಲಕ ಅಕ್ರಮ ಗಣಿಗಾರಿಕೆಯಿಂದಾಗಿರುವ ನಷ್ಟವನ್ನೂ ಮರೆ ಮಾಚಲು ಯತ್ನಿಸಿದ್ದರು.

 

 

ಅಕ್ರಮವಾಗಿ ಅದಿರು ಸಾಗಿಸಿದ ಕಂಪನಿಗಳಿಂದ ನಿರ್ದಾಕ್ಷ್ಯಿಣ್ಯವಾಗಿ 1.43 ಲಕ್ಷ ಕೋಟಿ ರು.ಗಳನ್ನು ವಸೂಲು ಮಾಡಿದರೆ ರಾಜ್ಯವನ್ನು ಆರ್ಥಿಕ ದಿವಾಳಿಯತ್ತ ದೂಡದೆಯೇ ಯಾವುದೇ ಗಂಭೀರ ಆರ್ಥಿಕ ಪರಿಣಾಮಗಳಿಲ್ಲದೆಯೇ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವ ಮೂಲಕ ನಿಜಾರ್ಥದಲ್ಲಿ ಕಲ್ಯಾಣ ರಾಜ್ಯವನ್ನು ನಿರ್ಮಿಸಲು ಅವಕಾಶಗಳಿವೆ.

 

ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲು  ವಾರ್ಷಿಕ 59,000 ಕೋಟಿ ರೂ. ಹಣಕಾಸಿನ ಅಗತ್ಯವಿದ್ದು, ಪ್ರಸಕ್ತ ವರ್ಷದ ಬಾಕಿ ಉಳಿದ ತಿಂಗಳುಗಳಿಗೆ ಯೋಜನೆ ಅನುಷ್ಠಾನಗೊಳಿಸಲು 41,000 ಕೋಟಿ ರೂ. ಗಳ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts