ಬೆಂಗಳೂರು; ಬಳ್ಳಾರಿಯ ಸಂಡೂರಿನಲ್ಲಿರುವ ಆರ್‍ಪಿಸಿಪಿಎಲ್ ಕಂಪನಿಯು ತನ್ನ ಪರಿಧಿಯಲ್ಲಿ ಇತರೆ ಕೈಗಾರಿಕೆಗಳು ಬಾರದಂತೆ ತಡೆಯಲು ದೊಡ್ಡ ಭೂ ಪ್ರದೇಶವನ್ನು ನಿಯಂತ್ರಿಸುತ್ತಿದೆ. ಮತ್ತು ಈ ಕಂಪನಿಗೆ ಕಾನೂನುಬಾಹಿರವಾಗಿ ನೆರವು ನೀಡುವ ಮೂಲಕ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯ ಕೆಲ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಗುರುತರವಾದ ಆರೋಪವೊಂದು ಕೇಳಿ ಬಂದಿದೆ.
54,000 ಕೋಟಿ ರು ವೆಚ್ಚದಲ್ಲಿ ಕೊಪ್ಪಳದಲ್ಲಿ ಉಕ್ಕಿನ ಕಾರ್ಖಾನೆ ಸ್ಥಾಪಿಸಲಾಗುವುದು ಎಂದು ಬಲ್ದೋಟಾ ಸಮೂಹವು ಘೋಷಣೆ ಮಾಡಿರುವ ಬೆನ್ನಲ್ಲೇ ಅದೇ ಸಮೂಹವು ಮಾಡಿರುವ ಆರೋಪವು ಮುನ್ನೆಲೆಗೆ ಬಂದಿದೆ.
ಈ ಸಂಬಂಧ ಬಲ್ದೋಟಾ ಸಮೂಹದ ಎಂಎಸ್‌ಪಿಎಎಲ್ ಕಂಪನಿಯ ಅಧ್ಯಕ್ಷ ಹೆಚ್ ವೈ ದೇಸಾಯಿ ಎಂಬುವರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. 2024ರ ಡಿಸೆಂಬರ್ 10ರಂದು ಬರೆದಿರುವ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಕರ್ನಾಟಕ ಉದ್ಯೋಗ ಮಿತ್ರ ಮತ್ತು ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ದಿ ಮಂಡಳಿಯು ಆರ್‍ಪಿಸಿಪಿಎಲ್‌ಎಸ್‌ಗೆ ಅವೈಜ್ಞಾನಿಕವಾಗಿ ಬೆಂಬಲ ನೀಡಿದೆ. ಹೀಗಾಗಿ ಈ ಕಂಪನಿಯ ಭೂಸ್ವಾಧೀನದ ಪ್ರಮಾಣವು 961 ಎಕರೆಗಳಿಗೂ ಹೆಚ್ಚಾಗಿದೆ ಎಂದು ಆರೋಪಿಸಿರುವುದು ಪತ್ರದಿಂದ ಗೊತ್ತಾಗಿದೆ.
ಹಾಗೆಯೇ ಈ ಕಂಪನಿ ಬೆನ್ನಿಗೆ ನಿಂತಿರುವ ಕೆಐಎಡಿಬಿಯು ಹೇಗೆಲ್ಲಾ ಕಾನೂನುಬಾಹಿರವಾಗಿ ನೆರವು ನೀಡುತ್ತಿದೆ ಎಂಬುದನ್ನು ಎಂಎಸ್‌ಪಿಎಲ್, ಸಾಕ್ಷ್ಯಗಳ ಸಮೇತ ಎತ್ತಿಹಿಡಿದಿದೆ. ಈ ಪತ್ರ ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು 2025ರ ಜನವರಿ 6ರಂದು ಕೆಐಎಡಿಬಿಯ ಸಿಇಒಗೆ (ಸಂಖ್ಯೆ; ಸಿಐ 37 ಎಸ್‌ಪಿಕ್ಯೂ 2022) ಸೂಚಿಸಿದ್ದಾರೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಅಲ್ಲದೇ ವಿವಿಧ ಸರ್ವೆ ನಂಬರ್‍ಗಳಲ್ಲಿ ಎಂಎಸ್‌ಪಿಎಲ್‌ನ ಸ್ವಾಧೀನದಲ್ಲಿರುವ ಜಮೀನುಗಳನ್ನೂ ಆರ್‍ಪಿಸಿಪಿಎಲ್ ಗೆ ನೀಡಲು ಕೆಐಎಡಿಬಿಯು ಪರಿಗಣಿಸುತ್ತಿದೆ ಮತ್ತು ಪಕ್ಷಪಾತ ಎಸಗುತ್ತಿದೆ ಎಂದು ಆಪಾದಿಸಿದೆ. ಮತ್ತು ತಮ್ಮ ಒಪ್ಪಿಗೆ ಇಲ್ಲದಿದ್ದರೂ ಸಹ ಆರ್‍ಪಿಸಿಎಪಿಎಲ್‌ಗೆ ಕಾನೂನುಬಾಹಿರವಾಗಿ ಜಮೀನು ನೀಡಲು ಪರಿಗಣಿಸಿದೆ ಎಂದು ಪತ್ರದಲ್ಲಿ ಆರೋಪಿಸಿರುವುದು ತಿಳಿದು ಬಂದಿದೆ.
ಹೀಗಾಗಿ ಈ ಪ್ರಕರಣದಲ್ಲಿ ಸರ್ಕಾರವು ತಕ್ಷಣವೇ ಮಧ್ಯ ಪ್ರವೇಶಿಸಿ ಪಕ್ಷಪಾತವಿಲ್ಲದ ನಿರ್ಧಾರವನ್ನು ಕೈಗೊಳ್ಳಬೇಕು. ಯಾವುದೇ ವ್ಯಾಜ್ಯಗಳಿಗೆ ಅವಕಾಶ ನೀಡಬಾರದು. ಇದು ಸಾಧ್ಯವಾದರೆ ಹೂಡಿಕೆ ಆಕರ್ಷಿಸಬಹುದು ಎಂದು ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಆರ್‍ಸಿಪಿಎಲ್ ಕಂಪನಿಯು ತಮ್ಮ ಕಂಪನಿ ವಿರುದ್ಧ ಸರ್ಕಾರಕ್ಕೆ ಬರೆದಿರುವ ಪತ್ರವು ತರ್ಕಬದ್ಧವಾಗಿಲ್ಲ. ಈ ಕಂಪನಿಯು 2011ರಿಂದಲೂ ತನ್ನ ಯೋಜನೆಯನ್ನು ಕಾರ್ಯಗತಗೊಳಿಸಿಲ್ಲ. ಬದಲಿಗೆ ಭೂ ವಿಸ್ತೀರ್ಣವನ್ನು ಹೆಚ್ಚು ಮಾಡಿಕೊಳ್ಳುತ್ತಿದೆ. ಹಾಗೂ ಯೋಜನೆ ಕಾರ್ಯಾರಂಭ ಮಾಡಲು ರಾಜ್ಯ ಉನ್ನತಾಧಿಕಾರ ಸಮಿತಿಯಿಂದ ವಿಸ್ತರಣೆ ಪಡೆದುಕೊಳ್ಳುವುದು ಮತ್ತು ಯೋಜನೆಯನ್ನು ಮಾರ್ಪಾಡುಪಡಿಸಿಕೊಳ್ಳುವುದರಲ್ಲಿ ಚಾಣಾಕ್ಷತೆ ಮೆರೆದಿದೆ ಎಂದು ಎಂಎಸ್‌ಪಿಎಲ್ ತನ್ನ ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಈ ಕಂಪನಿಯು 2011ರಿಂದಲೂ 156.01 ಎಕರೆಎಗೂ ಹೆಚ್ಚು ಪ್ರದೇಶದಲ್ಲಿ ಸ್ವಾಧೀನದಲ್ಲಿದೆ. ಎಂಎಸ್‌ಪಿಎಲ್ ತನ್ನ ಯೋಜನೆಯಾದ ಗ್ರೀನ್ ಫೀಲ್ಡ್ ಮತ್ತು ಕಬ್ಬಿಣ ಅದಿರು ಸಂಸ್ಕರಣೆ ಘಟಕಕ್ಕಾಗಿ ರಾಜ್ಯ ಉನ್ನತಾಧಿಕಾರ ಸಮಿತಿಗೆ ಅರ್ಜಿ ಸಲ್ಲಿಸುವರೆಗೂ ಆರ್‍ಸಿಪಿಎಲ್ ತನ್ನ ಯೋಜನೆಯ ಚಟುವಟಿಕೆಗಳನ್ನು ಪ್ರಾರಂಭಿಸಿರಲಿಲ್ಲ. ಇದೀಗ ತಮ್ಮ ಯೋಜನೆಗೆ ಅಡ್ಡಗಾಲು ಹಾಕುತ್ತಿರುವ ಈ ಆರ್‍ಸಿಪಿಎಲ್, ತನ್ನ ಪರಿಧಿಯ್ಲಿ ಇತರೆ ಕೈಗಾರಿಕೆಗಳು ಬಾರದಂತೆ ತಡೆಯಲು ದೊಡ್ಡ ಭೂ ಪ್ರದೇಶವನ್ನೇ ನಿಯಂತ್ರಿಸುತ್ತಿದೆ ಎಂದು ಪತ್ರದಲ್ಲಿ ಆಪಾದಿಸಿರುವುದು ತಿಳಿದು ಬಂದಿದೆ.
ಎಂಎಸ್‌ಪಿಎಲ್ ಲಿಮಿಟೆಡ್ ಅನ್ನು ಯಶಸ್ವಿ ಬಿಡ್ಡರ್ ಎಂದು ಘೋಷಿಸಲಾಗಿದೆ. ಮತ್ತು ಕಂಪನಿಯು ಸಿ ಕೆಟಗರಿಯಲ್ಲಿ ಹರಾಜಿನಲ್ಲಿ ಭಾಗವಹಿಸಿ ಎಚ್‌ಜಿ ರಂಗನಗೌಡದ ಬ್ಲಾಕ್‌ನಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ಗುತ್ತಿಗೆಯನ್ನು ಕಾರ್ಯಗತಗೊಳಿಸಿದೆ. ಹಾಗೆಯೇ ಸುಪ್ರೀಂ ಕೋರ್ಟ್ ವಿಧಿಸಿದ್ದ ಷರತ್ತನ್ನೂ ಅನುಸರಿಸಲು ಸಂಡೂರು ತಾಲೂಕಿನ ಸೋಮಲಾಪುರ ಗ್ರಾಮದ ಸುತ್ತಮುತ್ತಲಿನ 65 ಎಕರೆ ಪ್ರದೇಶದಲ್ಲಿ ಕಬ್ಬಿಣ ಅದಿರು ಸಂಸ್ಕರಣ ಘಟಕವನ್ನು ಸ್ಥಾಪಿಸಲು ಈಗಾಗಲೇ ಹೂಡಿಕೆ ಮಾಡಿದೆ ಎಂದು ಗೊತ್ತಾಗಿದೆ.
900 ಎಕರೆಯಲ್ಲಿ ನೆಲೆಗೊಳ್ಳಲಿಲ್ಲ ಒಂದೇ ಒಂದು ಕೈಗಾರಿಕೆ; ಎಂಎಸ್‌ಪಿಎಲ್ ರಕ್ಷಣೆಗೆ ನಿಂತ ಬಿಜೆಪಿ ಸರ್ಕಾರ?
ಆದರೆ ರಾಜ್ಯ ಉನ್ನತಾಧಿಕಾರ ಸಮಿತಿಯು 51.69 ಎಕರೆಗೆ ಗೆ ಮಾತ್ರ ಅನುಮೋದನೆ ನೀಡಿದೆ. ಈ ಮೂಲಕ 13.67 ಎಕರೆ ವಿಸ್ತೀರ್ಣವನ್ನು ಕಡಿಮೆ ಮಾಡಿದೆ. ಆದರೆ ಸರ್ವೆ ನಂಬರ್ 136, 137, 118ರಲ್ಲಿನ ಜಮೀನುಗಳನ್ನು ಆರ್‍ಸಿಪಿಎಲ್ ಪರವಾಗಿ ನೀಡಲು ಮುಂದಾಗಿದೆ. ಈ ಮೂಲಕ ಕರ್ನಾಟಕ ಉದ್ಯೋಗ ಮಿತ್ರ ಮತ್ತು ಕೆಐಎಡಿಬಿಯು ಆರ್‌ಸಿಪಿಎಲ್ ಪರವಾಗಿ 268.70 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಉದಾರತೆ ತೋರಿದೆ ಎಂದು ಎಂಎಸ್‌ಪಿಎಲ್ ಪತ್ರದಲ್ಲಿ ವಿವರಿಸಿದೆ.
ಬಲ್ದೋಟಾದ 109 ಎಕರೆ ವಶಪಡಿಸಿಕೊಳ್ಳದ ಸರ್ಕಾರ, ಕೆಐಎಡಿಬಿ ಜಮೀನು ವಾಪಸ್ ಪಡೆಯುವುದೇ?
ಕರ್ನಾಟಕ ಉದ್ಯೋಗ ಮಿತ್ರ ಮತ್ತು ಕೆಐಎಡಿಬಿಯು ಈ ಕಂಪನಿಗೆ ಅವೈಜ್ಞಾನಿಕವಾಗಿ ಬೆಂಬಲ ನೀಡಿದೆ. ಹೀಗಾಗಿ ಆರ್‌ಪಿಸಿಪಿಎಲ್‌ಎಸ್ ಭೂಸ್ವಾಧೀನದ ಪ್ರಮಾಣ 961 ಎಕರೆಗಳಿಗೆ ಹೆಚ್ಚಾಗಿದೆ. ಇದಲ್ಲದೆ, ಆರ್‌ಪಿಸಿಪಿಎಲ್ ಪತ್ರದ 4ನೇ ಅಂಶದಲ್ಲಿ, ಆರ್‌ಪಿಸಿಪಿಎಲ್‌ನ ದೂರುಗಳು ತಿಳಿದ ನಂತರ ಮತ್ತೊಂದು ಕಂಪನಿ ಎಂಎಸ್‌ಪಿಎಲ್ ಲಿಮಿಟೆಡ್ ಭೂಮಿಯನ್ನು ಖರೀದಿಸಿದೆ ಎಂದು ಮಾಡಿರುವ ಆರೋಪ/ದೂರು ತಪ್ಪುದಾರಿಗೆಳೆಯುತ್ತಿದೆ. ಮತ್ತು ಸುಳ್ಳುಗಳಿಂದ ಕೂಡಿವೆ ಎಂದು ಆರೋಪಿಸಿರುವುದು ಎಂಎಸ್‌ಪಿಎಲ್ ಬರೆದಿರುವ ಪತ್ರದಿಂದ ತಿಳಿದು ಬಂದಿದೆ.
ಎಂಎಸ್‌ಪಿಎಲ್ ಲಿಮಿಟೆಡ್ ಸರ್ವೆ ನಂಬರ್ 118, 136, 137ರಲ್ಲಿ ಜಮೀನಿನ ಮಾಲೀಕತ್ವ ಹೊಂದಿದೆ ಮತ್ತು ಸ್ವಾಧೀನದಲ್ಲಿದೆ. ಆರ್‍ಸಿಪಿಎಲ್ ಪರವಾಗಿ ಕೆಎಐಡಿಬಿಯು ಅಧಿಸೂಚನೆ ಹೊರಡಿಸುವ ಮುನ್ನವೇ 2024ರ ಮೇ 31ರಂದು ಸಹಾಯಕ ಆಯುಕ್ತರು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರವನ್ನು ಬರೆದಿದ್ದರು.
ಬಲ್ದೋಟಾ ಕಂಪನಿಯಿಂದ ಕಾಯ್ದೆ ಉಲ್ಲಂಘನೆ; 109 ಎಕರೆ ಜಮೀನು ಮುಟ್ಟುಗೋಲು ಹಾಕಿಕೊಳ್ಳುವಲ್ಲಿ ಭಂಡ ನಿರ್ಲಕ್ಷ್ಯ
ಸಂಡೂರು ತಹಶೀಲ್ದಾರ್ ಮತ್ತು ಬಳ್ಳಾರಿ ಡಿಡಿಎಲ್ಆರ್ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರು. ಇದನ್ನಾಧರಿಸಿ ಬಳ್ಳಾರಿ ಉಪ ವಿಭಾಗಾಧಿಕಾರಿ ನ್ಯಾಯಾಲಯವು 10.34 ಎಕರೆ ಪ್ರದೇಶದ ಕೆಲವು ಭೂ ಮಂಜೂರಾತಿಗಳನ್ನು ರದ್ದುಗೊಳಿಸಿತ್ತು. ಇವುಗಳನ್ನು 110/b ಇತ್ಯರ್ಥವಾಗದ ಸರ್ಕಾರಿ ಸರ್ವೆ ಸಂಖ್ಯೆ ಎಂದು ಗುರುತಿಸಿತ್ತು. ಅಲ್ಲದೇ ಈ ನ್ಯಾಯಾಲಯವು ಈ ಸರ್ವೆ ಸಂಖ್ಯೆಗಳನ್ನು ವಿಲೀನಗೊಳಿಸಲು ಮತ್ತು ಅನುಷ್ಠಾನ ಹಂತದಲ್ಲಿದ್ದ 1-5 ಮತ್ತು 6-10 ಸರ್ವೆ ಇತ್ಯರ್ಥಕ್ಕೆ ಆದೇಶಿಸಿತ್ತು ಎಂದು ಪತ್ರದಲ್ಲಿ ವಿವರಿಸಿದೆ.
ಈ ಪತ್ರದ ಕುರಿತು ತೀರ್ಮಾನ ಕೈಗೊಳ್ಳುವ ಬಗ್ಗೆ ಅಧಿಕಾರಿಗಳು ಸಚಿವ ಎಂ ಬಿ ಪಾಟೀಲ್ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ. ಇಲಾಖೆಯು ಈ ಸಂಬಂಧ ಕಡತವನ್ನೂ ಸಚಿವರಿಗೆ ರವಾನಿಸಿದೆ ಎಂದು ತಿಳಿದು ಬಂದಿದೆ.