ಚಾರ್ಜ್‌ಶೀಟ್‌ ರದ್ದು; ಹೈಕೋರ್ಟ್‌ ಆದೇಶ, ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿಲ್ಲವೆಂದ ಇಲಾಖೆ

ಬೆಂಗಳೂರು; ಶ್ಯಾಮ್ ಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಆರೋಪಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಮತ್ತು ಮೂರನೇ ಆರೋಪಿ ಆರ್‍‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್‍‌ ಭಟ್‌ ವಿರುದ್ಧದ ದೋಷಾರೋಪಣೆ ಪಟ್ಟಿ  ರದ್ದುಪಡಿಸಿ ಹೈಕೋರ್ಟ್‌ ನೀಡಿರುವ ಆದೇಶವು ‘ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿಲ್ಲ’ ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರವು ಅಭಿಪ್ರಾಯಪಟ್ಟಿದೆ.

 

ಈ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್‌ ನೀಡಿದ್ದ ಆದೇಶದ ವಿರುದ್ಧ  ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ‘ಯೋಗ್ಯ ಪ್ರಕರಣವಲ್ಲ’ ಎಂದು ತೀರ್ಮಾನಿಸಿತ್ತು. ಇದರ  ಬೆನ್ನಲ್ಲೇ  ಹೈಕೋರ್ಟ್‌ನ ಆದೇಶವು ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿಲ್ಲ ಎಂದು ಪ್ರಾಸಿಕ್ಯೂಷನ್‌ ಇಲಾಖೆಯ ಉಪ ಕಾರ್ಯದರ್ಶಿಯು ಅಭಿಪ್ರಾಯಿಸಿರುವುದು ಇದೀಗ ಮುನ್ನೆಲೆಗೆ ಬಂದಿದೆ.

 

ಈ ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಯೋಗ್ಯ ಪ್ರಕರಣವಲ್ಲ ಎಂದು ತೀರ್ಮಾನಿಸುವ ಮುನ್ನ ಇಲಾಖೆ ಹಂತದಲ್ಲಿ ಏನೆಲ್ಲಾ ಚರ್ಚೆಗಳು ನಡೆದಿವೆ ಎಂಬ ಕುರಿತು ‘ದಿ ಫೈಲ್‌’ ಆರ್‍‌ಟಿಐ ಅಡಿಯಲ್ಲಿ ಸಮಗ್ರ ಕಡತವನ್ನು ಪಡೆದುಕೊಂಡಿದೆ.

 

ಕಡತದ ಟಿಪ್ಪಣಿ ಹಾಳೆಯಲ್ಲೇನಿದೆ?

 

ಕರ್ನಾಟಕ ಹೈಕೋರ್ಟ್‌ ನೀಡಿರುವ ಆದೇಶವನ್ನು ಪರಿಶೀಲಿಸಲಾಗಿದೆ. ಅದೇ ರೀತಿ ಸರ್ಕಾರಿ ವಕೀಲರ ಅಭಿಪ್ರಾಯವನ್ನೂ ಪರಿಶೀಲಿಸಲಾಗಿದೆ. ಉಚ್ಛ ನ್ಯಾಯಾಲಯವು ಸಕಾರಣಗಳನ್ನು ನೀಡಿ ಆದೇಶ ಹೊರಡಿಸಿರುವುದರಿಂದ ಈ ಪ್ರಕರಣದ ಆದೇಶವು ಅಪೀಲಿಗೆ ಯೋಗ್ಯವಲ್ಲ ಎಂದು ಅಭಿಪ್ರಾಯಪಟ್ಟಿರುತ್ತಾರೆ. ಉಚ್ಛ ನ್ಯಾಯಾಲಯವು ಉಭಯ ಪಕ್ಷಕಾರರ ವಾದ, ವಿವಾದಗಳನ್ನು ಆಳಿಸಿ ಅವರ ಮುಂದಿದ್ದ ಪ್ರಕರಣದ ದಾಖಲಾತಿಗಳ, ವಾಸ್ತವಾಂಶಗಳನ್ನು , ಅವುಗಳಿಗೆ ಅನ್ವಯವಾಗುವ ಕಾಯ್ದೆಯನ್ನು ಪರಿಶೀಲಿಸಲಾಗಿದೆ.

 

 

 

ಈ ಸಂಗತಿಗಳ ಗುಣಾವಣಗಳನ್ನು ಪರಾಮರ್ಶಿಸಿ, ದಂಡ ಪ್ರಕ್ರಿಯೆ ಸಂಹಿತೆ ಕಲಂ 482 (ಭಾರತ ದಂಡ ಸಂಹಿತೆ ಕಲಂ 506, 306, ಆರ್‍‌/ಡಬ್ಲ್ಯೂ 34 ಐಪಿಸಿ) ಅಡಿಯಲ್ಲಿ ಆದೇಶ ಹೊರಡಿಸಿರುವುದು ಕಂಡು ಬರುತ್ತದೆ. ಹೀಗಿರುವಾಗ ಉಚ್ಛ ನ್ಯಾಯಾಲಯದ ಈ ಆದೇಶವು ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿಲ್ಲ ಎಂದು ಹೇಳಬಹುದಾಗಿರುತ್ತದೆ.

 

ಆದ್ದರಿಂದ ಉಚ್ಛ ನ್ಯಾಯಾಲಯದ ಈ ಆದೇಶದ ವಿರುದ್ಧ ಮೇಲ್ಮನವಿ ಪರಿಶೀಲನೆ ಅರ್ಜಿಯನ್ನು ಸರ್ವೋಚ್ಛ ನ್ಯಾಯಾಲಯದ ಮುಂದೆ ಸಲ್ಲಿಸಲು ಪ್ರಕರಣವು ಯೋಗ್ಯವಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿರುವುದು ಸರಿ ಇದೆ ಎಂದು ನನ್ನ ಅಭಿಪ್ರಾಯ. ಅಂತೆಯೇ ನಾನೂ ಕಾನೂನು ತಜ್ಞರ ಅಭಿಪ್ರಾಯದೊಂದಿಗೆ ಸಹಮತ ಹೊಂದಿದ್ದೇನೆ.

 

 

‘ನನ್ನ ಅಭಿಪ್ರಾಯದಲ್ಲೂ ಸಹ ಉಚ್ಛ ನ್ಯಾಯಾಲಯದ ಆದೇಶವು ಮೇಲ್ಮನವಿಗೆ ಯೋಗ್ಯವಲ್ಲ ಎಂದು ತೀರ್ಮಾನಿಸಿದ್ದೇನೆ. ಆದೇಶವು ಮೇಲ್ಮನವಿಗೆ ಹೋಗ್ಯವಲ್ಲ ಎಂದು ಸರ್ಕಾರದ ಪತ್ರ ಹೊರಡಿಸಲು ಮತ್ತು ಕಡತವನ್ನು ಮುಕ್ತಾಯಗೊಳಿಸಲು ಆದೇಶಿಸಿದ್ದೇನೆ,’ ಎಂದು ಉಪ ಕಾರ್ಯದರ್ಶಿ ಅನಿತಾ ಹೆಚ್‌ ವಿ ಅವರು ಟಿಪ್ಪಣಿ ಹಾಳೆಯಲ್ಲಿ 2023ರ ಸೆ.20ರಂದೇ ಷರಾ ಬರೆದಿದ್ದಾರೆ.

 

ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ನಂತರ ನಾಲ್ಕೇ ನಾಲ್ಕು ತಿಂಗಳಲ್ಲಿ ಈ ಆದೇಶ ಹೊರಬಿದ್ದಿತ್ತು.   ಗೃಹ ಇಲಾಖೆಯಡಿಯಲ್ಲಿರುವ ಪ್ರಾಸಿಕ್ಯೂಷನ್‌ ಇಲಾಖೆಯು  2023ರ ಸೆ.22ರಂದು ಹೊರಡಿಸಿತ್ತು.

 

ಅಭಿಯೋಜನಾ ಇಲಾಖೆ ಮಾತ್ರವಲ್ಲ, ಸರ್ಕಾರಿ ವಕೀಲರು ಸಹ ಮೇಲ್ಮನವಿ ಸಲ್ಲಿಸಲು ಯೋಗ್ಯ ಪ್ರಕರಣವಲ್ಲ ಎಂದು ಅಭಿಪ್ರಾಯಿಸಿದ್ದರು. ಸರ್ಕಾರಿ ವಕೀಲರ ಅಭಿಪ್ರಾಯವನ್ನೇ ಎತ್ತಿ ಹಿಡಿದಿದ್ದ ಸರ್ಕಾರವು ಈ ಸಂಬಂಧ ಆದೇಶವನ್ನೂ (HD/11172/HCP1/2023 (COMPUTER NUMBER 1182854) (3571/AG-G-CRL/23-24- Letter Number 3110/AG-CRL/23/24) C/W 7760/2018 HKCK-Bengaluru Shreemad Jagadguru Shankaracharya v/s state and anr)  ಹೊರಡಿಸಿತ್ತು.

 

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜ ದೂರುದಾರರಾದ ಸಂಧ್ಯಾಲಕ್ಷ್ಮಿ ಎಂಬುವರು ಉಚ್ಛ ನ್ಯಾಯಾಲಯದ ಆದೇಶದ ವಿರುದ್ಧ ಸರ್ವೋಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ (ಎಸ್‌ಎಲ್‌ಪಿ ಕ್ರಿಮಿನಲ್‌ ಅರ್ಜಿ ಸಂಖ್ಯೆ 4309-4310/2024) ಸಲ್ಲಿಸಿದ್ದಾರೆ. ಇದರಲ್ಲಿ ಕರ್ನಾಟಕ ಸರ್ಕಾರವನ್ನು ಎರಡನೇ ಪ್ರತಿವಾದಿಯನ್ನಾಗಿಸಿದ್ದರು.

 

ಈ ಸಂಬಂಧ ಸುಪ್ರೀಂ ಕೋರ್ಟ್‌ ಕೂಡ ರಾಜ್ಯ ಸರ್ಕಾರಕ್ಕೆ 2024ರ ಮಾರ್ಚ್‌ 19ರಂದು ನೋಟೀಸ್‌ ಕೂಡ ಜಾರಿಗೊಳಿಸಿದೆ. ಈ ಪ್ರಕರಣವನ್ನು ಹಿರಿಯ ವಕೀಲ ಡಿ ಎಲ್‌ ಚಿದಾನಂದ ಅವರಿಗೆ ವಹಿಸಿ 2024ರ ಏಪ್ರಿಲ್‌ 5ರಂದು ಆದೇಶ ಹೊರಡಿಸಿತ್ತು.

 

ಹೀಗಾಗಿ 2023ರ ಸೆ.22ರಂದು ಹೊರಡಿಸಿರುವ ಆದೇಶವನ್ನು ಪುನರಾವಲೋಕಿಸಬೇಕು ಮತ್ತು 2023ರ ಏಪ್ರಿಲ್‌ 20ರಂದು ಹೈಕೋರ್ಟ್‌ ನೀಡಿರುವ ಆದೇಶದ ವಿರುದ್ಧ ಸರ್ವೋಚ್ಛ ನ್ಯಾಯಾಲಯಕ್ಕೆ ಎಸ್‌ಎಲ್‌ಪಿ ಪರ ವಹಿಸಿಕೊಳ್ಳುವುದು ನ್ಯಾಯಸಮ್ಮತವಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯ ಸಲ್ಲಿಸಿದ್ದರು.

 

ಆದರೆ ಅಭಿಯೋಜನಾ ಇಲಾಖೆಯು ಇದುವರೆಗೂ ಈ ಸಂಬಂಧ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಬದಲಿಗೆ 2023ರ ಏಪ್ರಿಲ್‌ 24ರಂದು ಹೈಕೋರ್ಟ್‌ ಹೊರಡಿಸಿರುವ ಆದೇಶದ ಪ್ರಕರಣದಲ್ಲಿ ಸೂಕ್ತ ಆದೇಶಕ್ಕಾಗಿ ಇಲಾಖೆಯು ಕಡತ ಮಂಡಿಸಿತ್ತು.

 

 

ಪ್ರಕರಣದ ಹಿನ್ನೆಲೆ

 

ರಾಮಕಥಾ ಗಾಯಕಿಯ ಪತಿಯ ಸಹೋದರ ಶ್ಯಾಮ್ ಪ್ರಸಾದ್ ಶಾಸ್ತ್ರಿ ಪುತ್ತೂರಿನ ಕೆದಿಲ ಗ್ರಾಮದಲ್ಲಿ 2014, ಸೆಪ್ಟೆಂಬರ್ 1 ರಂದು ತಮ್ಮ ಬಳಿಯಿದ್ದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

 

ಕಲ್ಲಡ್ಕ, ರಾಘವೇಶ್ವರ ವಿರುದ್ಧ ಚಾರ್ಜ್‌ಶೀಟ್‌ ರದ್ದು; ಮೇಲ್ಮನವಿಗೆ ‘ಯೋಗ್ಯ ಪ್ರಕರಣವಲ್ಲ’ವೆಂದ ಸರ್ಕಾರ

ರಾಘವೇಶ್ವರ ಶ್ರೀಗಳ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣವನ್ನು ಹಿಂಪಡೆಯುವಂತೆ ಸಂತ್ರಸ್ತೆಗೆ ಹೇಳಬೇಕು. ನೀವು ಸ್ವಾಮೀಜಿ ಪರ ನಿಲ್ಲಬೇಕು ಎಂದು ಸ್ವಾಮೀಜಿ ಕಡೆಯವರು ದೂರವಾಣಿ ಮೂಲಕ ಒತ್ತಡ ಹಾಕಿದ್ದರು ಮತ್ತು ಈ ಒತ್ತಡ ಹೇರುವ ಹಿಂದೆ ಕಲ್ಲಡ್ಕ ಪ್ರಭಾಕರ ಭಟ್ ಮತ್ತಿತರರು ಇದ್ದರು ಎಂದು ಆರೋಪಿಸಿದ್ದರು.

 

ಶ್ಯಾಮ್ ಪ್ರಸಾದ್ ಶಾಸ್ತ್ರಿ ಅವರ ಪತ್ನಿ ಸಂಧ್ಯಾಲಕ್ಷ್ಮಿ ಅವರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ, ಪುತ್ತೂರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಇದನ್ನು ಪ್ರಶ್ನಿಸಿ ರಾಘವೇಶ್ವರ ಶ್ರೀಗಳು ಮತ್ತು ಕಲ್ಲಡ್ಕ ಪ್ರಭಾಕರ ಭಟ್ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

 

ಪ್ರತ್ಯೇಕ ಕ್ರಿಮಿನಲ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರಿದ್ದ ಪೀಠವು ರಾಘವೇಶ್ವರ ಭಾರತೀ ಶ್ರೀಗಳು ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ದಾಖಲಿಸಲಾಗಿದ್ದ ದೋಷಾರೋಪ ಪಟ್ಟಿಯನ್ನು ಕೋರ್ಟ್​ ರದ್ದು ಮಾಡಿತ್ತು.

 

ವಿಚಾರಣೆ ವೇಳೆ ರಾಘವೇಶ್ವರ ಭಾರತೀ ಶ್ರೀಗಳ ಪರ ವಾದ ಮಂಡಿಸಿದ್ದ ವಕೀಲ ಪಿ.ಎನ್. ಮನಮೋಹನ್ ಮತ್ತು ಕಲ್ಲಡ್ಕ ಪ್ರಭಾಕರ ಭಟ್ ಪರ ಹಿರಿಯ ವಕೀಲ ಪಿ.ಪಿ. ಹೆಗ್ಡೆ ಅವರು ಅರ್ಜಿದಾರರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ. ಶಾಮ್ ಪ್ರಸಾದ್ ಶಾಸ್ತ್ರಿ ಹತಾಶ ಮನೋಭಾವದಿಂದ ಆತ್ಮಹತ್ಯೆಗೆ ಶರಣಾದಂತಿದೆ ಎಂದು ಪ್ರತಿಪಾದಿಸಿದ್ದರು.

 

ಅವರು ಬರೆದಿಟ್ಟಿದ್ದ ಮರಣ ಪತ್ರದಲ್ಲಿ ಅರ್ಜಿದಾರರ ಹೆಸರುಗಳ ಉಲ್ಲೇಖವೇ ಇಲ್ಲ. ಅಂತೆಯೇ, ತನಿಖಾಧಿಕಾರಿಗಳು ಶಾಮ್ ಪ್ರಸಾದ್ ಶಾಸ್ತ್ರಿ ಮೃತಪಟ್ಟ ಒಂದು ತಿಂಗಳ ಬಳಿಕ ಹೇಳಿಕೆ ತಯಾರಿಸಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ ಎಂದು ಆಕ್ಷೇಪಿಸಿದ್ದರು. ಈ ವಾದವನ್ನು ಪುರಸ್ಕರಿಸಿದ ನ್ಯಾಯಪೀಠ ಅರ್ಜಿದಾರರ ವಿರುದ್ಧದ ಆರೋಪ ಪಟ್ಟಿ ರದ್ದುಪಡಿಸಿ ಆದೇಶಿಸಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts