ಅರ್ಕಾವತಿ ಬಡಾವಣೆಯ ಥಣಿಸಂದ್ರದಲ್ಲಿ ಮತ್ತೊಂದು ಡಿ-ನೋಟಿಫಿಕೇಷನ್‌!; ಬಿಡಿಎಗೆ ಪತ್ರ ಬರೆದ ಸರ್ಕಾರ

ಬೆಂಗಳೂರು;  ಅರ್ಕಾವತಿ ಬಡಾವಣೆಗೆ ಸಂಬಂಧಿಸಿದಂತೆ ಸ್ವಾಧೀನಪಡಿಸಿಕೊಂಡಿದ್ದ ಜಮೀನುಗಳನ್ನು ಭೂ ಸ್ವಾಧೀನದಿಂದಲೇ ಕೈಬಿಟ್ಟು ಡಿ-ನೋಟಿಫಿಕೇಷನ್‌ ಮಾಡಿ ಹೊರಡಿಸಿದ್ದ  ಅಧಿಸೂಚನೆಯು ಕಾಂಗ್ರೆಸ್‌ ಸರ್ಕಾರವನ್ನು  ಸುತ್ತಿಕೊಳ್ಳುತ್ತಿರುವ  ಸಂದರ್ಭದಲ್ಲೇ ಇದೀಗ ಇದೇ ಅರ್ಕಾವತಿ ಬಡಾವಣೆಯ ಥಣಿಸಂದ್ರ ಗ್ರಾಮಕ್ಕೆ ಸೇರಿದ 2.38 ಎಕರೆ ಜಮೀನನ್ನು ಭೂ ಸ್ವಾಧೀನದಿಂದ ಕೈಬಿಡಲು ಮುಂದಾಗಿದೆ.

 

ಅರ್ಕಾವತಿ ಬಡಾವಣೆಗೆ ಸಂಬಂಧಿಸಿದಂತೆ ನಿವೃತ್ತ  ನ್ಯಾಯಮೂರ್ತಿ ಹೆಚ್‌  ಎಸ್‌  ಕೆಂಪಣ್ಣ ಆಯೋಗವು ನೀಡಿದ್ದ ವರದಿ ಸಲ್ಲಿಸಲು ರಾಜ್ಯಪಾಲ ಥಾವರ್‍‌ ಚಂದ್‌ ಗೆಹ್ಲೋಟ್‌ ಅವರು ಇತ್ತೀಚೆಗಷ್ಟೇ ನಿರ್ದೇಶನ ನೀಡಿದ್ದರು. ಈ ನಿರ್ದೇಶನವನ್ನು ಪಾಲಿಸದಂತೆ ಮುಖ್ಯ ಕಾರ್ಯದರ್ಶಿಗೆ ಸಚಿವ ಸಂಪುಟವು  ಸೂಚಿಸಿತ್ತು. ಅಲ್ಲದೇ ಖುದ್ದು ಉಪ ಮುಖ್ಯಮಂತ್ರಿ  ಡಿ ಕೆ ಶಿವಕುಮಾರ್‍‌ ಅವರು ಸದ್ಯಕ್ಕೆ ಯಾವುದೇ ಜಮೀನುಗಳನ್ನು  ಭೂ ಸ್ವಾಧೀನದಿಂದ ಕೈಬಿಡುವ ಪ್ರಸ್ತಾವನೆ ಸಲ್ಲಿಸಬಾರದು ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಿದ್ದರು.

 

ಈ ಬೆಳವಣಿಗೆಳ ನಡುವೆಯೇ  ಅರ್ಕಾವತಿ ಬಡಾವಣೆಯ ಥಣಿಸಂದ್ರ ಗ್ರಾಮದ ಸರ್ವೇ ನಂಬರ್‍‌ 94/1ರಲ್ಲಿನ 2.38 ಎಕರೆ ಜಮೀನನ್ನು ಭೂ ಸ್ವಾಧೀನದಿಂದ ಕೈಬಿಡುವ ಸಂಬಂಧ ನಗರಾಭಿವೃದ್ಧಿ ಇಲಾಖೆಯು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ವರದಿ ಕೇಳಿದೆ. ಈ ಸಂಬಂಧ 2023ರ ನವೆಂಬರ್‍‌ 21ರಲ್ಲೇ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿಡಿಎ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಈ ಪತ್ರದ (ಸಂಖ್ಯೆ; ನಅಇ 214 ಬೆಂಭೂಸ್ವಾ 2023 )  ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಅರ್ಕಾವತಿ ಬಡಾವಣೆಯ ಥಣಿಸಂದ್ರ ಗ್ರಾಮದ ಸರ್ವೆ ನಂಬರ್‍‌ 94/1ರ 02 ಎಕರೆ 38 ಗುಂಟೆ ಜಮೀನನ್ನು ಭೂ ಸ್ವಾಧೀನದಿಂದ ಕೈಬಿಡುವ ಬಗ್ಗೆ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರವು 2023ರ ಫೆ.27ರಂದು ನಿರ್ಣಯ (ಸಂಖ್ಯೆ 51/23 )  ಕೈಗೊಂಡಿತ್ತು. ನಂತರ ಈ ಸಂಬಂಧ  2023ರ ಜುಲೈ 27ರಂದೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಪ್ರಸ್ತಾವನೆಯನ್ನು ಪರಿಶೀಲಿಸುವ ಸಂಬಂಧ ನಗರಾಭಿವೃದ್ದಿ ಇಲಾಖೆಯು ಮಾಹಿತಿ ಮತ್ತು ದಾಖಲೆಗಳನ್ನು ಕೋರಿರುವುದು ಪತ್ರದಿಂದ ತಿಳಿದು ಬಂದಿದೆ.

 

 

ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿದ್ದ ಜಮೀನುಗಳ ಡಿ ನೋಟಿ)ಫಿಕೇಷನ್‌ ಪ್ರಕರಣದಲ್ಲಿ ನಡೆದಿರುವ ರೀ-ಡೂ ಪ್ರಕ್ರಿಯೆ ಬಗ್ಗೆ ಪರಿಶೀಲನೆ ನಡೆಸಲು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ  ನಿವೃತ್ತ ನ್ಯಾಯಮೂರ್ತಿ  ಕೆ ಎನ್‌ ಕೇಶವನಾರಾಯಣ ಅವರ ನೇತೃತ್ವದಲ್ಲಿ  ಸಮಿತಿ ರಚಿಸಿತ್ತು.

 

ಈ ಸಮಿತಿಯು ಸಲ್ಲಿಸಿದ್ದ ವರದಿ (ಸಂಖ್ಯೆ ಕೆಎನ್‌ಕೆಸಿ 28/2022) ಆಧರಿಸಿ   ಈ ಸರ್ವೇ ನಂಬರ್‍‌ನಲ್ಲಿನ 2 ಎಕರೆ 38 ಗುಂಟೆ ಜಮೀನನ್ನು ಭೂ ಸ್ವಾಧೀನದಿಂದ ಕೈಬಿಡಲು ಮಾಹಿತಿ ಮತ್ತು ದಾಖಲೆಗಳನ್ನು ಕೋರಿರುವುದು ಗೊತ್ತಾಗಿದೆ.

 

ಥಣಿಸಂದ್ರದ ಸರ್ವೆ ನಂಬರ್‍‌ 94/1ರಲ್ಲಿನ 2 ಎಕರೆ 38 ಗುಂಟೆ ಜಮೀನನ್ನು 2004ರ ಫೆ.21ರಂದೇ ಬಿಡಿಎಗೆ ಭೂ ಸ್ವಾಧೀನ ಆಗಿತ್ತು.

 

 

ಈ ಜಮೀನಿನಲ್ಲಿ ರತ್ನಮ್ಮ, ಸಿ ಗಿರೀಶ್‌, ಟಿ ಹೆಚ್‌ ಬೈರೇಗೌಡ, ಟಿ ಸಿ ಹೇಮಣ್ಣ ಅವರು ಸ್ವಾಧೀನದಲ್ಲಿರುವುದು ಭೂಮಿ ದಾಖಲೆಗಳಿಂದ ಗೊತ್ತಾಗಿದೆ.

 

ಸಾರ್ವಜನಿಕ ಉದ್ದೇಶಕ್ಕಾಗಿ ಅಧಿಸೂಚನೆ ಹೊರಡಿಸಿರುವ ಜಮೀನನ್ನು ಭೂ ಸ್ವಾಧೀನದಿಂದ ಕೈಬಿಡಲು ಅವಕಾಶವಿಲ್ಲ.   ‘ಕಲಂ 16(2)ರ ಭೂ ಸ್ವಾಧೀನ ಕಾಯ್ದೆಯಡಿಯಲ್ಲಿ ಅಧಿಸೂಚನೆ ಹೊರಡಿಸಿ ಸ್ವಾಧೀನಪಡಿಸಿಕೊಂಡ ಜಮೀನನ್ನು ಯಾವುದೇ ಕಾರಣದಿಂದ ಮರಳಿ ನೀಡಲು ಬರುವುದಿಲ್ಲ.

 

ಭೂ ಸ್ವಾಧೀನ ಕಾಯ್ದೆಯ ಕಲಂ 16(2)ರಡಿಯಲ್ಲಿ ಅಧಿಸೂಚನೆಯನ್ನು ಹೊರಡಿಸಿದ ತಕ್ಷಣವೇ ಈ ಜಮೀನು ನಿರೂಪಾದಕವಾಗಿ ಸರ್ಕಾರಕ್ಕೆ ನಿಹಿತವಾಗಿರುತ್ತದೆ. ಈ ರೀತಿ ಒಂದು ಬಾರಿ ಸಂಪೂರ್ಣ ಮುಕ್ತಾಯಗೊಂಡಿರುವುದರಿಂದ ಪ್ರಸ್ತುತ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲು ಬರುವುದಿಲ್ಲ,’ ಎಂದು ಕಾನೂನು ಇಲಾಖೆಯು ಬೇರೊಂದು ಪ್ರಕರಣದಲ್ಲಿ ಅಭಿಪ್ರಾಯ ನೀಡಿತ್ತು.

 

ಭೂ ಸ್ವಾಧೀನ ಕಾಯ್ದೆಯಡಿಯಲ್ಲಿ ಸ್ವಾಧೀನಪಡಿಸಿಕೊಂಡು ಭೂ ಸ್ವಾಧೀನ ಕಾಯ್ದೆಯ ಕಲಂ 16(2)ರ ಅನ್ವಯ ಅಧಿಸೂಚನೆ ಹೊರಡಿಸಿದ ನಂತರ  ಭೂ ಸ್ವಾಧೀನದಿಂದ ಜಮೀನನ್ನು ಕೈಬಿಡಲು ಯಾವುದೇ ನಿರ್ಣಯ ತೆಗೆದುಕೊಳ್ಳಲು ಅಧಿಕಾರವು   ಪ್ರಾಧಿಕಾರಕ್ಕೂ ಸಹ ಇರುವುದಿಲ್ಲ.

 

ಆದರೂ  ಕೇಶವನಾರಾಯಣ ವರದಿಯನ್ನು ಮುಂದಿರಿಸಿರುವ ಬಿಡಿಎಯು   ಅರ್ಕಾವತಿ ಬಡಾವಣೆಯ ಥಣಿಸಂದ್ರ ಗ್ರಾಮದಲ್ಲಿನ 2.38 ಎಕರೆ ಜಮೀನನ್ನು ಭೂ ಸ್ವಾಧೀನದಿಂದ ಕೈಬಿಡಲು ಪ್ರಸ್ತಾವನೆ ಸಲ್ಲಿಸಿರುವುದು  ಅಚ್ಚರಿ ಮೂಡಿಸಿದೆ.

 

ಅರ್ಕಾವತಿ ಡಿ ನೋಟಿಫಿಕೇಷನ್‌ ಪ್ರಕರಣದಲ್ಲಿ ಭೂ ಸ್ವಾಧೀನಾಧಿಕಾರಿಗಳು ನ್ಯಾಯಾಲಯದ ಮಾರ್ಗಸೂಚಿ, ಆದೇಶಗಳನ್ನು ಉಲ್ಲಂಘಿಸಿ ಒಟ್ಟು ಜಮೀನಿನ ಪೈಕಿ 325.62 ಎಕರೆ ವಿಸ್ತೀರ್ಣದ ಜಮೀನುಗಳನ್ನು ಭೂ ಸ್ವಾಧೀನದಿಂದ ಕೈ ಬಿಡಲಾಗಿದೆ ಎಂದು   ನಿವೃತ್ತ ನ್ಯಾಯಮೂರ್ತಿ ಹೆಚ್‌ ಎಸ್‌ ಕೆಂಪಣ್ಣ ನೇತೃತ್ವದ ವಿಚಾರಣೆ ಆಯೋಗವು ಈಗಾಗಲೇ  ದೃಢಪಡಿಸಿದೆ.

 

ಈ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ್ದ ಬಿಡಿಎ ಸೇರಿದಂತೆ ಇನ್ನಿತರೆ ಇಲಾಖೆಗಳ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ವಹಿಸಬೇಕು ಎಂದು ಆಯೋಗ ಶಿಫಾರಸ್ಸುಮಾಡಿತ್ತು. ಆಯೋಗವು ಮಾಡಿದ್ದ ಶಿಫಾರಸ್ಸುಗಳನ್ನು ಸಿದ್ದರಾಮಯ್ಯ ಆದಿಯಾಗಿ ಆ ನಂತರ ಅಧಿಕಾರ ಹಿಡಿದಿದ್ದ ಯಾವ ಮುಖ್ಯಮಂತ್ರಿಗಳೂ ಜಾರಿಗೆ ತಂದಿರಲಿಲ್ಲ.

 

ಪ್ರವರ್ಗ-ಬಿ ಅಡಿಯಲ್ಲಿ 111.20 ಎಕರೆ ಮತ್ತು ಪ್ರವರ್ಗ-ಸಿ ಅಡಿಯಲ್ಲಿ 16.22 ಎಕರೆ, ಪ್ರವರ್ಗ ಡಿ ಅಡಿಯಲ್ಲಿ 198.20 ಎಕರೆ  ವಿಸ್ತೀರ್ಣದ ಜಮೀನುಗಳನ್ನು ಕೈ ಬಿಟ್ಟಿರುವುದು ನ್ಯಾಯಾಲಯದ ಮಾರ್ಗಸೂಚಿಗಳ ಪ್ರಕಾರ ಇರಲಿಲ್ಲ ಎಂದು ಆಯೋಗವು ತನಿಖೆ ವೇಳೆ ಸಾಬೀತುಪಡಿಸಿತ್ತು.

 

ಅರ್ಕಾವತಿ ಡಿ ನೋಟಿಫಿಕೇಷನ್‌ ಕುರಿತಂತೆ ವಿಚಾರಣೆ ನಡೆಸಿದ್ದ ಕೆಂಪಣ್ಣ ನೇತೃತ್ವದ ಆಯೋಗವು ನೀಡಿದ್ದ ವರದಿ ಆಧರಿಸಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಆಗಿದ್ದ ಮಹೇಂದ್ರ ಜೈನ್‌ ಅವರು 2017ರಲ್ಲಿ ಹಲವು ಅಂಶಗಳು, ವಿವರಣೆಗಳು ಮತ್ತು ಅವಲೋಕನ ಮಾಡಿದ್ದರು.

 

ಅರ್ಕಾವತಿ ರೀಡೂ; ಮಾರ್ಗಸೂಚಿ, ಆದೇಶಕ್ಕೆ ವಿರುದ್ಧವಾಗಿ 325.62 ಎಕರೆ ಕೈಬಿಟ್ಟಿದ್ದ ಸರ್ಕಾರ, ಜೈನ್‌ ಟಿಪ್ಪಣಿ ಬಹಿರಂಗ

 

 

ಅರ್ಕಾವತಿ ರಿ-ಡೂ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರ್‍‌ ಚಂದ್ ಗೆಹ್ಲೋಟ್‌ ಅವರು ವರದಿ ಕೇಳಿ ಸರ್ಕಾರಕ್ಕೆ ಬರೆದಿದ್ದ ಪತ್ರವು ಸರ್ಕಾರವನ್ನು ಸಿಟ್ಟಿಗೆಬ್ಬಿಸಿತ್ತು.

 

ಅರ್ಕಾವತಿ ಡಿ ನೋಟಿಫಿಕೇಷನ್‌; ಕೆಂಪಣ್ಣ ವರದಿಗೆ ಕೈ ಹಾಕಿದ ರಾಜ್ಯಪಾಲ, ಡಿಸಿಎಂಗೆ ದಾಖಲೆ ಸಲ್ಲಿಸಿದ ಇಲಾಖೆ

 

ಈ ವಿಷಯವೂ ಸೇರಿದಂತೆ ಮತ್ತಿತರೆ ವಿಷಯಗಳ ಕುರಿತು ರಾಜ್ಯಪಾಲರು ಕೋರುವ ಯಾವುದೇ ವಿವರಣೆ, ಮಾಹಿತಿ, ವರದಿಯನ್ನು ಸಚಿವ ಸಂಪುಟ ಗಮನಕ್ಕೆ ತರದೆಯೇ ನೀಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸಚಿವ ಸಂಪುಟವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕಟ್ಟಪ್ಪಣೆ ಮಾಡಿತ್ತು.

Your generous support will help us remain independent and work without fear.

Latest News

Related Posts