ಬೆಂಗಳೂರು; ಅಲೆಮಾರಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯಲ್ಲಿದ್ದ ಖಜಾನೆ ಇಲಾಖೆಯ ಹೆಚ್ಚುವರಿ ನಿರ್ದೇಶಕಿ ಡಾ ವಿ ಭಾಗ್ಯಲಕ್ಷ್ಮಿ ಅವರಿಗೆ ಮಾನಸಿಕ ತೊಂದರೆ ನೀಡಿರುವುದು ಇದೀಗ ಬಹಿರಂಗವಾಗಿದೆ.
ಮಾನಸಿಕ ತೊಂದರೆ ನೀಡಿರುವುದು ಮತ್ತು ಎಂಡಿ ಹುದ್ದೆಗೆ ವರದಿ ಮಾಡಿಕೊಳ್ಳದಂತೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಮೌಖಿಕವಾಗಿ ತಡೆಯೊಡ್ಡಿದ್ದರು ಎಂಬ ಸಂಗತಿಯನ್ನು ಖುದ್ದು ಭಾಗ್ಯಲಕ್ಷ್ಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಮುಖೇನ ಅಳಲು ತೋಡಿಕೊಂಡಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಪ್ರಾಮಾಣಿಕ ಅಧಿಕಾರಿಗಳಿಗೆ ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಬೆಲೆಯಿಲ್ಲ, ರಕ್ಷಣೆಯಿಲ್ಲ ಎಂದು ಪ್ರತಿಪಕ್ಷಗಳು ಆರೋಪ ಮಾಡುತ್ತಿರುವ ಬೆನ್ನಲ್ಲೇ ಡಾ ವಿ ಭಾಗ್ಯಲಕ್ಷ್ಮಿ ಅವರು ಮುಖ್ಯಮಂತ್ರಿಗೆ ಬರೆದಿರುವ ಪತ್ರವು ಮುನ್ನೆಲೆಗೆ ಬಂದಿದೆ.
ಎಂ ಡಿ ಹುದ್ದೆಯಲ್ಲಿ 17 ದಿನಗಳ ಹಿಂದೆಯಷ್ಟೇ ಭಾಗ್ಯಲಕ್ಷ್ಮಿ ಅವರು ಅಧಿಕಾರ ವಹಿಸಿಕೊಂಡಿದ್ದರು. ಆದರೆ 2024ರ ಜುಲೈ 23ರಂದು ಏಕಾಏಕೀ ಎತ್ತಂಗಡಿ ಮಾಡಿ ಆದೇಶ ಹೊರಡಿಸಲಾಗಿತ್ತು. ಈ ಅಧಿಸೂಚನೆಗೆ ಸಚಿವ ಡಾ ಹೆಚ್ ಸಿ ಮಹದೇವಪ್ಪ ಅವರು ಅನುಮೋದಿಸಿದ್ದರು.
ಈ ಅಧಿಸೂಚನೆ ಬೆನ್ನಲ್ಲೇ ಭಾಗ್ಯಲಕ್ಷ್ಮಿ ಅವರಿಗೆ ಕೆಲ ಹಿತಾಸಕ್ತಿಗಳು ಮಾನಸಿಕ ತೊಂದರೆ ನೀಡಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಗೊಂಡಿರುವುದು ಅಧಿಕಾರಿಗಳ ವಲಯದಲ್ಲಿ ಕಳವಳಕ್ಕೆ ಕಾರಣವಾಗಿದೆ. ಮತ್ತು ಪ್ರಾಮಾಣಿಕ ಅಧಿಕಾರಿಗಳಿಗೆ ಯಾವುದೇ ರಕ್ಷಣೆಯಿಲ್ಲ ಎಂದು ಪ್ರತಿಪಕ್ಷಗಳು ಮಾಡುತ್ತಿರುವ ಆರೋಪಗಳಿಗೆ ಮತ್ತಷ್ಟು ಬಲ ಬಂದಂತಾಗಿದೆ.
ಪತ್ರದಲ್ಲೇನಿದೆ?
ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿನ ಡಾ ಬಿ ಆರ್ ಅಂಬೇಡ್ಕರ್ ಸಂಶೋಧನಾ ಸಂಸ್ಥೆಗೆ ನಿರ್ದೇಶಕರನ್ನಾಗಿ 2024ರ ಜೂನ್ 29ರಂದು ನೇಮಿಸಿ ಅಧಿಸೂಚನೆ (ಸಂಖ್ಯೆ;ಆಇ 112, 2024) ಹೊರಡಿಸಲಾಗಿತ್ತು.
ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವಾಗಲೇ ನಿಯೋಜನೆ ಮೇರೆಗೆ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಲು ಇವರ ಸೇವೆಯನ್ನು ಸಮಾಜ ಕಲ್ಯಾಣ ಇಲಾಖೆಯ ವಶದಲ್ಲಿಯೇ ಮುಂದುವರೆಸಲು ಆದೇಶಿಸಲಾಗಿತ್ತು ಎಂಬ ಅಂಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿರುವುದು ಗೊತ್ತಾಗಿದೆ.
ಅದರಂತೆ ಅಲೆಮಾರಿ ಅಭಿವೃದ್ಧಿ ನಿಗಮದ ಎಂ ಡಿ ಹುದ್ದೆಗೆ ಕಾರ್ಯವರದಿ ಮಾಡಿಕೊಳ್ಳಲು 2024ರ ಜುಲೈ 6ರಂದು ಕೋರಿದ್ದರು. ಹಾಗೂ ಅಂಬೇಡ್ಕರ್ ಸಂಶೋಧನಾ ಸಂಸ್ಥೆಯ ನಿರ್ದೇಶಕರ ಹುದ್ದೆಯ ಪ್ರಭಾರ ನೀಡುವಂತೆ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಸೂಕ್ತ ನಿರ್ದೇಶನ ನೀಡಲು ಇದೇ ಪತ್ರದಲ್ಲಿ ಕೋರಿದ್ದರು ಎಂಬುದು ಪತ್ರದಿಂದ ತಿಳಿದು ಬಂದಿದೆ.
ಆದರೆ ಸರ್ಕಾರವು ಭಾಗ್ಯಲಕ್ಷ್ಮಿ ಅವರನ್ನು ಡಾ ಬಿ ಆರ್ ಅಂಬೇಡ್ಕರ್ ಸಂಶೋಧನಾ ಸಂಸ್ಥೆಯ ನಿರ್ದೇಶಕರ ಹುದ್ದೆಯ ಕರ್ತವ್ಯದಿಂದ ಬಿಡುಗಡೆಗೊಳಿಸಿತ್ತು. ಡಾ ಸಾಬೀರ್ ಅಹ್ಮದ್ ಮುಲ್ಲಾ ಅವರನ್ನು ಹೆಚ್ಚುವರಿ ಪ್ರಭಾರದಲ್ಲಿರಿಸಿ (ಸಕಇ44ಪಕಸೇ 2024 06.07.2024) ಆದೇಶಿಸಿತ್ತು.
ಅಲ್ಲದೇ ಈ ಆದೇಶದಲ್ಲಿ ಆರ್ಥಿಕ ಇಲಾಖೆಯ ಆದೇಶವನನ್ನು ಮತ್ತು ಕರ್ನಾಟಕ ಪರಿಶಿಷ್ಟ ಜಾರಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ಕಾರ್ಯವರದಿ ಮಾಡಿಕೊಳ್ಳುವುದರ ಬಗ್ಗೆ ನಮೂದಿಸಿರಲಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ಸರ್ಕಾರದ ಆದೇಶದಂತೆ ಡಾ ವಿ ಭಾಗ್ಯಲಕ್ಷ್ಮಿ ಅವರು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಶಕರ ಹುದ್ದೆಯಲ್ಲಿ ಕಾರ್ಯವರದಿ ಮಾಡಿಕೊಳ್ಳಲು ತೆರಳಿದ್ದರು.
ಆದರೆ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರು ತಾವು ಪ್ರಭಾರವನ್ನು ವಹಿಸಿಕೊಳ್ಳಲು ಬರುವುದಿಲ್ಲ. ಮತ್ತು ಸಮಾಜ ಕಲ್ಯಾಣ ಸಚಿವರು ಅನುಮೋದನೆ ನೀಡಿದರೇ ಮಾತ್ರ ಪ್ರಭಾರವನ್ನು ವಹಿಸಿಕೊಳ್ಳಬೇಕು ಮತ್ತು ಅವರು ಅನುಮೋದನೆ ಬರುವವರೆಗೂ ಕಾಯಬೇಕು ಎಂದು ದೂರವಾಣಿ ಮತ್ತು ಮೆಸೇಜ್ ಮುಖಾಂತರ ಸೂಚಿಸಿದ್ದರು ಎಂದು ಪತ್ರದಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
‘ಒಬ್ಬ ಪ್ರಾಮಾಣಿಕ ಅಧಿಕಾರಿಯೆಂದು ತಾವು ಅತ್ಯಂತ ಕಾಳಜಿಯಿಂದ ಈ ಕರ್ತವ್ಯವನ್ನು ನಿರ್ವಹಿಸಲು ನೇಮಿಸಿರುತ್ತೀರಿ. ಆದರೆ ಕೆಲವು ಹಿತಾಸಕ್ತಿಗಳು ಇಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವಂತಹ ಅಧಿಕಾರಿಗಳನ್ನು ಮುಂದುವರೆಸದೇ ಮಾನಸಿಕವಾಗಿ ತೊಂದರೆ ನೀಡಿದ್ದು ಪ್ರಸ್ತುತ ಸಂದರ್ಭದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಯಾವುದೇ ರಕ್ಷಣೆ ಇಲ್ಲದಿರುವುದು ಕಂಡುಬಂದಿರುತ್ತದೆ. ಈ ಎಲ್ಲಾ ಇವರಗಳನ್ನು ತಮ್ಮ ಗಮನಕ್ಕೆ ತರುತ್ತಾ ಮುಂದಿನ ಕ್ರಮಕ್ಕಾಗಿ ಸಲ್ಲಿಸಿದೆ,’ ಎಂದು ಪತ್ರದಲ್ಲಿ ಅಳಲು ತೋಡಿಕೊಂಡಿರುವುದು ತಿಳಿದು ಬಂದಿದೆ.
ಭಾಗ್ಯಲಕ್ಷ್ಮಿ ಅವರು ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ಸರ್ಕಾರ ಮಾಡಿದ್ದ ವರ್ಗಾವಣೆ ಆದೇಶಕ್ಕೆ ಸಚಿವ ಡಾ ಹೆಚ್ ಸಿ ಮಹದೇವಪ್ಪ ಅವರ ಅನುಮೋದನೆ ಇರಲಿಲ್ಲ. ಹೀಗಾಗಿ ಅವರ ಅನುಮೋದನೆ ಪಡೆದ ನಂತರ ಕಾರ್ಯವರದಿ ಮಾಡಿಕೊಳ್ಳಬೇಕು ಎಂದು ಮೇಜರ್ ಮಣಿವಣ್ಣನ್ ಅವರು ಮೌಖಿಕವಾಗಿ ಸೂಚಿಸಿದ್ದರು ಎಂದು ಗೊತ್ತಾಗಿದೆ.
ಹೀಗಾಗಿ ಡಾ ವಿ ಭಾಗ್ಯಲಕ್ಷ್ಮಿ ಅವರು ಸಚಿವರ ಅನುಮೋದನೆಗಾಗಿ 10 ದಿನಗಳ ಕಾಲ ಕಾದಿದ್ದರು. ಆದರೂ ಸಚಿವರ ಅನುಮೋದನೆ ಬಗ್ಗೆ ಯಾವುದೇ ಮಾಹಿತಿ ಮತ್ತು ಪ್ರತಿಕ್ರಿಯೆ ಬಂದಿರಲಿಲ್ಲ. ನಿರೀಕ್ಷಣಾ ಅವಧಿಯಲ್ಲೇ ಇದ್ದಲ್ಲಿ ವೇತನಕ್ಕೆ ಸಮಸ್ಯೆ ಆಗುವ ಕಾರಣದಿಂದ ಭಾಗ್ಯಲಕ್ಷ್ಮಿ ಅವರು ನಿಗಮದ ಎಂಡಿ ಹುದ್ದೆಗೆ ಕಾರ್ಯವರದಿ ಮಾಡಿಕೊಂಡಿದ್ದರು.
ಈ ಅಂಶವನ್ನು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್ ಅವರ ಗಮನಕ್ಕೆ ತಂದಿದ್ದರು ಎಂದು ತಿಳಿದು ಬಂದಿದೆ.