ಮರಪ್ಪ ಪ್ರಕರಣ; ದಾಖಲೆಗಳ ನೈಜತೆಯನ್ನು ಪರಿಶೀಲಿಸಲಿಲ್ಲವೇ ಸಿದ್ದರಾಮಯ್ಯ?

ಬೆಂಗಳೂರು: ಮೈಸೂರಿನ ವರುಣ ಹೋಬಳಿಯ ಮರೆಪ್ಪ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದು ಉಪ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ದಾಖಲೆಗಳನ್ನೇ ಪರಿಶೀಲಿಸಿರಲಿಲ್ಲ ಮತ್ತು ಮರೆಪ್ಪ ಎಂಬುವರಿಗೆ ಬೇರೆಡೆ ಜಮೀನು ಇದ್ದರೂ ಸಹ ಯಾವುದೇ ಆದಾಯವಿಲ್ಲ ಎಂದು ಸಿದ್ದರಾಮಯ್ಯ ಅವರು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿರುವುದು ಸಹ ಪ್ರಶ್ನಾರ್ಹವಾಗಿದೆ.

 

ದಾಖಲೆಗಳ ನೈಜತೆಯನ್ನು ಪರಿಶೀಲಿಸಲಿಲ್ಲವೇ?

 

ಮರಪ್ಪ ಎಂಬುವರು ನೀಡಿದ್ದ ದಾಖಲೆಗಳನ್ನು ಪರಿಶೀಲಿಸದೆಯೇ ನೇರವಾಗಿ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಬೇಕು ಎಂದು ಸಿದ್ದರಾಮಯ್ಯ ಅವರು ಟಿಪ್ಪಣಿಯಲ್ಲಿ ಸೂಚಿಸಿದ್ದರು.

 

ಇದನ್ನು ಪ್ರಶ್ನಿಸಿರುವ ಕೃಷ್ಣ ಅವರು ‘ಮರಪ್ಪನವರು ನೀಡಿರುವ ಮಾಹಿತಿ ಮತ್ತು ದಾಖಲಾತಿಗಳು ನೈಜತೆಯಿಂದ ಕೂಡಿವೆಯೇ ಎಂಬುದನ್ನು ಪರಿಶೀಲಿಸಿದ ನಂತರ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿಲ್ಲ. ನೇರವಾಗಿ ಭೂ ಸ್ವಾಧೀನದಿಂದ ಕೈಬಿಡುವಂತೆ ತಿಳಿಸಿದ್ದಾರೆ. ಇದರಿಂದ ಸಂಬಂಧಪಟ್ಟ ಅಧಿಕಾರಿಗಳು ನಿಮ್ಮ ಪ್ರಭಾವಕ್ಕೆ ಒಳಗಾಗಿದ್ದಾರೆ. ದಾಖಲಾತಿಗಳನ್ನು ಪರಿಶೀಲಿಸುವ ಪ್ರಯತ್ನ ಮಾಡಿಲ್ಲ. ಬದಲಿಗೆ ನೇರವಾಗಿ ಭೂ ಸ್ವಾಧೀನದಿಂದ ಕೈಬಿಡುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರುವ ಸಲುವಾಗಿ ಈ ರೀತಿ ಪತ್ರವನ್ನು ಬರೆದಿರುತ್ತಿಲ್ಲವೇ ಎಂದು ಕೃಷ್ಣ ಅವರು ಪ್ರಶ್ನಿಸಿರುವುದು ತಿಳಿದು ಬಂದಿದೆ.

 

ಮತ್ತೊಂದು ವಿಶೇಷವೆಂದರೇ ಸಿದ್ದರಾಮಯ್ಯ ಅವರ ಟಿಪ್ಪಣಿಯಲ್ಲಿ ಮರಪ್ಪನವರ ತಂದೆಯ ಹೆಸರನ್ನು ಉಲ್ಲೇಖಿಸಿಲ್ಲ. ಬದಲಿಗೆ ಬೀರಮ್ಮ ಎಂಬುವರ ಹೆಸರನ್ನು ಉಲ್ಲೇಖಿಸಿದ್ದಾರೆ. ಇದಕ್ಕೂ ಹಲವು ಅನುಮಾನಗಳನ್ನು ವ್ಯಕ್ತಪಡಿಸಿರುವ ಕೃಷ್ಣ ಅವರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಸುಳ್ಳು ದಾಖಲೆಗಳಿಗೆ ಮನ್ನಣೆ, ಡಿ-ನೋಟಿಫಿಕೇಷನ್‌ಗೆ ಸೂಚನೆ; ಸಿದ್ದರಾಮಯ್ಯರ ಟಿಪ್ಪಣಿ ಬಹಿರಂಗ

‘ಬೀರಮ್ಮ ಮರಪ್ಪನವರ ತಾಯಿಯಾಗಿರುತ್ತಾರೆಯೇ, ಸರ್ವೆ ನಂಬರ್‍‌ 205/2 1.31 ಎಕರೆ ಜಮೀನಿನ ಮೂಲ ಮಾಲೀಕರು ಯಾರು, ಅವರಿಗೂ ಮರಪ್ಪನವರಿಗೂ ಯಾವ ಸಂಬಂಧ ಇದೆ ಎಂಬುದನ್ನು ತಿಳಿದುಕೊಂಡು ಪತ್ರ ವ್ಯವಹಾರವನ್ನು ನಡೆಸಿರುತ್ತೀರ, 1979ರ ನವೆಂಬರ್‍‌ 24ರಂದು ಹೊರಡಿಸಿರುವ ರಾಜ್ಯಪತ್ರವನ್ನು ಗಮನಿಸಿದಾಗ ಸರ್ವೆ ನಂಬರ್‍‌ 205/2ರಲ್ಲಿನ 1.39 ಎಕರೆ ಜಮೀನು ಕುಂಡ ಬೀರಯ್ಯ ಮತ್ತು ಕಾಳಯ್ಯ ಎಂಬ ಇಬ್ಬರು ವ್ಯಕ್ತಿಗಳಿಗೆ ಸೇರಿದೆ ಎಂಬ ಉಲ್ಲೇಖ ಇರುವುದು ಕಂಡು ಬರುತ್ತದೆ ಅಲ್ಲವೇ,’ ಎಂದು ರಾಜ್ಯಪಾಲರಿಗೆ ಸಲ್ಲಿಸಿರುವ ಪತ್ರದಲ್ಲಿ ಪ್ರಶ್ನಿಸಿದ್ದಾರೆ.

 

ಹೀಗಿರುವಾಗ ಸದರಿ ಜಮೀನು ಮರಪ್ಪನವರೊಬ್ಬರಿಗೇ ಸೇರಬೇಕು ಎಂಬಂತೆ ಪತ್ರ ವ್ಯವಹಾರ ನಡೆಸಲು ಕಾರಣವೇನು ಮತ್ತು ಇದಕ್ಕೆ ಪೂರಕವಾಗಿ ತಾವು ಪರಿಶೀಲನೆ ನಡೆಸಿದ ಅಥವಾ ಮರಪ್ಪನವರಿಂದ ಪಡೆದುಕೊಂಡ ದಾಖಲೆಗಳೇನು ಎಂದು ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

 

ಮರಪ್ಪ ಎಂಬುವರಿಗೆ ಸಂಬಂಧಿಸಿದ ದಾಖಲಾತಿಗಳು ಎಂದು ಹೇಳುವ 2009ರ ಮೇ 23ರ ರಾಜಿ ಪತ್ರದ ಬಗ್ಗೆಯೂ ಹಲವು ಅನುಮಾನಗಳಿವೆ.

 

ಮಾರಶೆಟ್ಟಿಹಳ್ಳಿ ಸರ್ವೆ ನಂಬರ್‍‌ 22/2ರ 0.34 ಗುಂಟೆ ಜಮೀನಿನ ದಾಖಲೆ, ಅಸಲು ದಾವೆ (ಸಂಖ್ಯೆ 1734/2007ರಲ್ಲಿ) ಸಲ್ಲಿಸಿರುವ ಪ್ರಮಾಣ ಪತ್ರ, 2008ರ ಮಾರ್ಚ್‌ 25ರಲ್ಲಿ ಸಲ್ಲಿಸಿರುವ ಪ್ರಮಾಣ ಪತ್ರ, 2008ರ ಮಾರ್ಚ್‌ 25ರಲ್ಲಿ ನೊಂದಾಯಿಸಿಕೊಟ್ಟಿರುವ ಶುದ್ಧ ಕ್ರಯಪತ್ರ, ಇವುಗಳನ್ನು ಆಧರಿಸಿ ಮರಪ್ಪನವರ ಕುಟುಂಬದವರನ್ನು ಅವರ ಮಗ ಶಿವಬೀರರನ್ನು ವಿಚಾರಣೆಗೆ ಒಳಪಡಿಸಬೇಕು,’ ಎಂದು ಕೃಷ್ಣ ಅವರು ದೂರಿನಲ್ಲಿ ಒತ್ತಾಯಿಸಿರುವುದು ಕಂಡುಬಂದಿದೆ.

 

ಉದ್ದೂರು ಗ್ರಾಮಕ್ಕೆ ಸೇರಿದ ಸರ್ವೇ ನಂಬರ್‍‌ 58/2ರಲ್ಲಿ 1.07 ಎಕರೆ, ಮಾರಶೆಟ್ಟಿಹಳ್ಳಿ ಗ್ರಾಮದ ಸರ್ವೆ ನಂಬರ್‍‌ 22/2ರಲ್ಲಿ 0.34 ಗುಂಟೆ ಜಮೀನು ಇರುವಾಗ ಬೇರೆ ಯಾವುದೇ ಜಮೀನು ಇಲ್ಲ ಎಂಬಂತೆ ದಾಖಲೆಗಳನ್ನು ಸಲ್ಲಿಸಲಾಗಿದೆ. ಸರ್ಕಾರಿ ಉತ್ತನಹಳ್ಳಿ ಗ್ರಾಮದ ಸರ್ವೇ ನಂಬರ್ 205/2ರಲ್ಲಿನ 1.39 ಎಕರೆ ಜಮೀನನ್ನು ಭೂ ಸ್ವಾಧೀನದಿಂದ ಕೈಬಿಡಲು ಕಾರಣವೇನು ಎಂದು ಪ್ರಶ್ನಿಸಿರುವುದು ಗೊತ್ತಾಗಿದೆ.

 

‘ಬಡ ಕುಟುಂಬಗಳಿಗೆ ಸೇರಬೇಕಾದ ಸ್ವತ್ತನ್ನು ಅಂದರೇ ಮೈಸೂರು ಜಿಲ್ಲೆ ಮತ್ತು ತಾಲೂಕು ವರುಣ ಹೋಬಳಿ ಸರ್ಕಾರಿ ಉತ್ತನಹಳ್ಳಿ ಗ್ರಾಮದ ಸರ್ವೆ ನಂಬರ್‍‌ 205/2ರಲ್ಲಿನ 1.39 ಎಕರೆ ಜಮೀನನ್ನು (ಜಮೀನಲ್ಲಿನ ನಿವೇಶನಗಳನ್ನು) ಸಿದ್ದರಾಮಯ್ಯ ಅವರು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಅಧಿಕಾರಿಗಳ ಮೇಲೆ ತಮ್ಮ ಪ್ರಭಾವವನ್ನು ಬೀರಿ ಮರಪ್ಪ ಎಂಬುವರು ಮತ್ತು ಕೆಲವು ಅಧಿಕಾರಿಗಳು ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡು ಭೂ ಸ್ವಾಧಿನದಿಂದ ಕೈ ಬಿಡಲಾಗಿದೆ ಎಂಬಂತೆ ಕಾನೂನುಬಾಹಿರ ಅದೇಶ ಮಾಡಲಾಗಿದೆ,’ ಎಂದು ಕೃಷ್ಣ ಅವರು ಪ್ರಸ್ತಾಪಿಸಿರುವುದು ತಿಳಿದು ಬಂದಿದೆ.

 

ಸರ್ವೆ ನಂಬರ್‍‌ 205/2ರಲ್ಲಿನ 1.39 ಎಕರೆ ಜಮೀನಿನ ಮಹಜರ್‍‌ ಎಂಬ ದಾಖಲೆ ಕುರಿತೂ ಹಲವು ಅನುಮಾನಗಳಿವೆ. ಈ ಜಮೀನಿಗೆ ಸಂಬಂಧಿಸಿದಂತೆ ಯಾವ ದಿನಾಂಕದದಂದು ಮಹಜರ್‍‌ ಮಾಡಲಾಗಿದೆ ಎಂಬ ಉಲ್ಲೇಖವಿಲ್ಲ.

 

‘ಜಮೀನಿನ ಉತ್ತರಕ್ಕೆ ತಮ್ಮಣ್ಣ, ಕುಂಡಬೀರೇಗೌಡ, ಕಾಳಯ್ಯ, ಚನ್ನಮ್ಮ, ಜವರೇಗೌಡರ ಹಿತ್ತಲು ಎಂಬ ಉಲ್ಲೇಖವಿದೆ. ಹೀಗಾಗಿ ಮರಪ್ಪ ಕುಂಡ ಬೀರೇಗೌಡರ ವಾರಸುದಾರರಾಗಿದ್ದರೆ ಸದರಿ ಹಿತ್ತಲು ಜಾಗದ ಮಾಲೀಕರಾಗಿರಬೇಕಿತ್ತಲ್ಲವೇ, ಆದ್ದರಿಂದ ಈ ಬಗ್ಗೆ ತನೀಖೆ ನಡೆಸಿ ಸದರಿ ಮರಪ್ಪ ನಿಜವಾಗಿಯೂ ಕುಂಡ ಬೀರೇಗೌಡ (ಕುಂಡ ಬೀರಯ್ಯ) ಅವರ ಮಗನಾಗಿರುತ್ತಾರೆಯೇ’ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಬೇಕಿದೆ ಎಂದು ದೂರಿನಲ್ಲಿ ಪ್ರಸ್ತಾಪಿಸಿರುವುದು ಗೊತ್ತಾಗಿದೆ.

 

ಈ ಹಿಂದೆ ಸುಮಾರು 23 ವರ್ಷಗಳ ಹಿಂದೆ ಬ್ಲಾಕ್‌ ಡೆವಲೆಪ್‌ಮೆಂಟ್‌ ಆಫೀಸರ್‍‌ ಕಚೇರಿಯಿಂದ ನಿವೇಶನ ರಚಿಸಿ ನಿವೇಶನ ಹಂಚಿದ್ದು ಎಂದು ಉಲ್ಲೇಖಿಸಿದ ನಂತರ ಹಕ್ಕು ಪತ್ರ ನೀಡಿರುವುದಿಲ್ಲ ಎಂಬ ವಿಚಾರವನ್ನು ಅನುಮಾನ ಬರುವ ರೀತಿಯಲ್ಲಿ ನಮೂದಿಸಿರುವುದು ಕಂಡು ಬರುತ್ತದೆ.

 

ನಿವೇಶನ ಹಂಚಿದ್ದು ಎಂಬುದರ ಅರ್ಥ ಹಕ್ಕುಪತ್ರಗಳನ್ನು ನೀಡಲಾಗಿರುತ್ತದೆ. ಆದರೆ ಉದ್ದೇಶಪೂರ್ವಕವಾಗಿ ಹಕ್ಕು ಪತ್ರ ನೀಡಿರುವುದಿಲ್ಲ ಎಂಬ ವಿಚಾರವನ್ನು ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಲಾಗಿದೆ. ಈ ಬಗ್ಗೆ ಸದರಿ ಮಹಜರ್‍‌ ಮಾಡಿದ ಅಧಿಕಾರಿಯನ್ನು ವಿಚಾರಣೆಗೆ ಒಳಪಡಿಸಬೇಕು. ನಿವೇಶನ ಹಂಚಿಕೆಗೆ ಒಳಪಡಿಸಿದ ಮಾಹಿತಿ ಮತ್ತು ದಾಖಲಾತಿಗಳನ್ನು ಪಡೆದುಕೊಂಡು ಪರಿಶೀಲನೆ ನಡೆಸಬೇಕು ಎಂದು ದೂರಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts