ಬೆಂಗಳೂರು; ವಿಶ್ವವಿದ್ಯಾಲಯಗಳ ಉಪ ಕುಲಪತಿಗಳ ವಿರುದ್ಧ ವಿಚಾರಣೆ ನಡೆಸುವುದಕ್ಕೆ ಸಂಬಂಧಿಸಿದಂತೆ ಕಾಯ್ದೆ ಪ್ರಕಾರ ಲೋಕಾಯುಕ್ತ ಸಂಸ್ಥೆಗೆ ಯಾವುದೇ ಅಧಿಕಾರವಿಲ್ಲ. ವಿಶ್ವವಿದ್ಯಾಲಯದ ಕಾಯ್ದೆ ಸೆಕ್ಷನ್ 14ರ ಅಡಿಯಲ್ಲಿ ಲೋಕಾಯುಕ್ತರು ತನಿಖೆ ನಡೆಸುವ ಯಾವುದೇ ಅಧಿಕಾರವನ್ನು ಹೊಂದಿಲ್ಲ ಎಂದು ನೃಪತುಂಗ ವಿಶ್ವವಿದ್ಯಾಲಯದ ಪ್ರಕರಣದಲ್ಲಿ ಲೋಕಾಯುಕ್ತ ಬಿ ಎಸ್ ಪಾಟೀಲ್ ಅವರು ತನಿಖೆಯಿಂದ ಹಿಂದೆ ಸರಿದಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಡಾ ಸಿ ಎನ್ ಅಶ್ವತ್ ನಾರಾಯಣ್, ನೃಪತುಂಗ ವಿ ವಿ ಉಪ ಕುಲಪತಿ ಶ್ರೀನಿವಾಸ ಎಸ್.ಬಳ್ಳಿ, ಕುಲಸಚಿವರಾದ ಡಾ.ಕವಿತಾ ಕೆ ಆರ್ ಅವರ ವಿರುದ್ಧ ಕರ್ನಾಟಕ ರಾಷ್ಟ್ರಸಮಿತಿಯು ದೂರು ಸಲ್ಲಿಸಿತ್ತು.
ಈ ದೂರಿನ ಪ್ರಕರಣದಲ್ಲಿ ತನಿಖೆಯಿಂದ ಹಿಂದೆ ಸರಿದಿರುವ ಲೋಕಾಯುಕ್ತರು ಹೊರಡಿಸಿರುವ ಆದೇಶವು ಚರ್ಚೆಗೆ ಗ್ರಾಸವಾಗಿದೆ.
ಈ ಆದೇಶದಂತೆ ಇನ್ನು ಮುಂದೆ ಕುಲಪತಿ ಮತ್ತು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ , ಸಹ ಕುಲಾಧಿಪತಿ ಅಂದರೆ ಉನ್ನತ ಶಿಕ್ಷಣ ಸಚಿವರ ವಿರುದ್ಧ ಸಲ್ಲಿಕೆಯಾಗುವ ದೂರುಗಳಿಗೆ ಲೋಕಾಯುಕ್ತದಲ್ಲಿ ಯಾವುದೇ ಮಹತ್ವವಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.
ಈ ಯಾವುದೇ ದೂರುಗಳನ್ನು ತನಿಖೆ ನಡೆಸವ ಅಧಿಕಾರವನ್ನೇ ಹೊಂದಿಲ್ಲ ಮತ್ತು ಇದಕ್ಕೆ ವಿಶ್ವವಿದ್ಯಾಲಯದ ಕಾಯ್ದೆ ಸೆಕ್ಷನ್ 14ರ ಅಡಿಯಲ್ಲಿ ನಿಷೇಧಿಸಿದೆ ಎಂಬ ಅಂಶವನ್ನು ಲೋಕಾಯುಕ್ತರು ಮುಂದಿರಿಸಿದ್ದಾರೆ. ಈ ಅಂಶಗಳನ್ನಾಧರಿಸಿ ನೃಪತುಂಗ ವಿ ವಿ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಸಹಕುಲಾಧಿಪತಿ, ಉಪ ಕುಲಪತಿ, ಕುಲಸಚಿವರ ವಿರುದ್ಧದ ದೂರನ್ನು ಲೋಕಾಯುಕ್ತರು ವಿಲೇ ಮಾಡಿದ್ದಾರೆ.
ನ್ಯಾಯಾಲಯದ ಮುಂದೆ ಅಥವಾ ಸಕ್ಷಮ ಪ್ರಾಧಿಕಾರವು ಈ ವಿಷಯವನ್ನು ನಿರ್ಧರಿಸುವ ಅಧಿಕಾರ ಹೊಂದಿದೆ. ಇದು ಕೇವಲ ವ್ಯಾಪ್ತಿ ಹೊಂದಿರುವುದು ಮಾತ್ರವೇ ಅಲ್ಲ ತನಿಖೆಯನ್ನೂ ಕೈಗೊಳ್ಳುವ ಅಧಿಕಾರವನ್ನು ಹೊಂದಿದೆ. ಜೊತೆಗೆ ಅಗತ್ಯವಾದ ಆದೇಶಗಳನ್ನು ಹೊರಡಿಸುವ ಅಧಿಕಾರವನ್ನೂ ಹೊಂದಿವೆ. ಈ ಪ್ರಾಧಿಕಾರಗಳು ಆದೇಶಗಳನ್ನು ನೀಡುವ ಮತ್ತು ಪ್ರಶ್ನೆ ಮಾಡುವ ಅಧಿಕಾರವನ್ನು ಹೊಂದಿವೆ ಎಂದು ಆದೇಶದಲ್ಲಿ ವಿವರಿಸಿದ್ದಾರೆ.
ಒಂದು ವೇಳೆ ಲೋಕಾಯುಕ್ತ ಸಲ್ಲಿಸಿದ ವರದಿ ಆಧಾರದಲ್ಲಿ ಉಪ-ಕುಲಪತಿ ವಿರುದ್ಧ ತನಿಖೆ ಆರಂಭಿಸಿದಲ್ಲಿ ಮತ್ತು ಲೋಕಾಯುಕ್ತ ಅವರ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದಲ್ಲಿ ಲೋಕಾಯುಕ್ತ ವರದಿ ತನ್ನ ಕಿಮ್ಮತ್ತು ಕಳೆದುಕೊಳ್ಳಲಿದೆ. ವಿವಿ ಕಾಯ್ದೆ ಅಡಿಯಲ್ಲಿ ಕೈಗೊಂಡಿರುವ ತನಿಖೆ ಮಾತ್ರ ಲೋಕಾಯುಕ್ತಕ್ಕಿಂತಲೂ ಉನ್ನತ ಮಟ್ಟದ್ದಾಗಿರಲಿದೆ ಎಂದು ಬಿ ಎಸ್ ಪಾಟೀಲ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ವಿಶ್ವವಿದ್ಯಾಲಯದ ಕಾಯ್ದೆಯ ಅವಕಾಶಗಳಲ್ಲಿ ಉಪ-ಕುಲಪತಿ ಅವರನ್ನು ತನಿಖೆ ಮಾಡುವ ಅಧಿಕಾರ ವ್ಯಾಪ್ತಿ ಲೋಕಾಯುಕ್ತರು ಹೊಂದಿಲ್ಲ. ಇದರಿಂದ ಲೋಕಾಯುಕ್ತ ಹಿಂದೆ ಸರಿಯಲಿದೆ. ಉಪ-ಕುಲಪತಿ ಮತ್ತು ಪ್ರಾಧ್ಯಾಪಕರು ಪತ್ರ ರವಾನಿಸಿದ ಮಾತ್ರಕ್ಕೆ ವ್ಯಾಪ್ತಿ ವಿಸ್ತರಿಸುವುದಿಲ್ಲ. ಯಾವುದೇ ತಕರಾರಿಲ್ಲದೆ ಒಪ್ಪಿಗೆ ನೀಡುವುದು ಅಥವಾ ಒಪ್ಪಿಗೆಯಿಂದ ಮಾತ್ರವೇ ಅಧಿಕಾರ ವ್ಯಾಪ್ತಿ ವಿಸ್ತರಿಸುವುದಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.
‘ಇಂತಹ ಪರಿಸ್ಥಿತಿಗಳಲ್ಲಿ ವಿವಿ ಕಾಯ್ದೆಯ ವ್ಯಾಪ್ತಿ ಮತ್ತು ಲೋಕಾಯುಕ್ತ ಕಾಯ್ದೆಯ ಹಿಂದಿನ ಉದ್ದೇಶವನ್ನು ಗಮನಿಸಿದಾಗ ಲೋಕಾಯುಕ್ತ ಉಪಕುಲಪತಿ ವಿರುದ್ಧದ ದೂರಿನ ಕುರಿತು ತನಿಖೆ ನಡೆಸುವ ಯಾವುದೇ ಅಧಿಕಾರವನ್ನು ಹೊಂದಿರುವುದಿಲ್ಲ. ಇಂತಹ ತನಿಖಾ ಅವಕಾಶಗಳನ್ನು ವಿವಿ ಕಾಯ್ದೆ ಸೆಕ್ಷನ್ 14ರ ಅಡಿಯಲ್ಲಿ ನಿಷೇಧಿಸಲಾಗಿದೆ,’ ಎಂದು ಬಿ ಎಸ್ ಪಾಟೀಲ್ ಅವರು ವಿವರಿಸಿದ್ದಾರೆ.
ಇದಕ್ಕಿಂತಲೂ ಹೆಚ್ಚಾಗಿ ಕೆಸಿಎಸ್ (ಸಿಸಿಎ) ನಿಯಮಗಳ ಶೆಡ್ಯೂಲ್ 1 ರಾಜ್ಯ ಸಿವಿಲ್ ಸೇವೆಗಳು (ಕ್ಲಾಸ್ 1 ಮತ್ತು ಕ್ಲಾಸ್ 2) ವಿವಿ ಕಾಯ್ದೆ 1976 ಮತ್ತು 2000 ಕರ್ನಾಟಕ ರಾಜ್ಯ ವಿವಿಗಳ ಅಡಿಯಲ್ಲಿ ನೇಮಕಗೊಂಡವರನ್ನು ತನಿಖೆಯಿಂದ ಹೊರಗಿಟ್ಟಿದೆ. ವಿವಿಯ ಉಪಕುಲಪತಿ ಮತ್ತು ಪ್ರಾಧ್ಯಪಕರನ್ನು ಗ್ರೂಪ್ “ಎ” ಅಧಿಕಾರಿಗಳೊಂದಿಗೆ ಹೋಲಿಕೆ ಮಾಡುವಂತಿಲ್ಲ ಎಂದೂ ಆದೇಶದಲ್ಲಿ ಹೇಳಲಾಗಿದೆ.
ಉಪ-ಕುಲಪತಿ ಮತ್ತು ಪ್ರಾಧ್ಯಾಪಕರು ಗ್ರೂಪ್ “ಎ” ಅಧಿಕಾರಿಯಾಗಿದ್ದಾರೆ. ಹೀಗಾಗಿ ತನಿಖೆ ನಿರರ್ಥಕವಾಗಲಿದೆ. ಗ್ರೂಪ್ “ಎ” ಅಧಿಕಾರಿಗೆ ನೀಡುವ ಎಲ್ಲ ಸವಲತ್ತುಗಳನ್ನು ಉಪ-ಕುಲಪತಿಗೆ ನೀಡಲಾಗುವುದು. ಅವರನ್ನು ಗ್ರೂಪ್ “ಎ” ಅಧಿಕಾರಿಗಳಾಗಿ ಪರಿಗಣಿಸಲಾಗುವುದು. ಇವರೆಲ್ಲರನ್ನು ಆಯ್ಕೆ ಮಾಡಿದ್ದು ಕೆಲವು ನಿರ್ದಿಷ್ಟ ಅಧಿಕಾರ ವ್ಯಾಪ್ತಿಯಡಿ ಸೇವೆ ಸಲ್ಲಿಸುತ್ತಾರೆ ಎಂದು ವಿಶ್ಲೇಷಿಸಿದ್ದಾರೆ.
ವಿವಿಧ ವಿವಿಗಳ ಕುಲಪತಿಗಳು ಒಂದು ವರ್ಗವಾಗಿದ್ದಾರೆ ಎಂದು ಕಾಯ್ದೆ ಹೇಳುತ್ತದೆ. ಅದೇ ರೀತಿ ವಿವಿಗಳಲ್ಲಿ ಕಾರ್ಯನಿರ್ವಹಿಸುವ ಪ್ರಾಧ್ಯಾಪಕರು ಒಂದು ವರ್ಗವಾಗಿದ್ದಾರೆ. ಹೀಗಿರುವಾಗ ಒಂದು ವೇಳೆ ಈ ವರ್ಗದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಕ್ರಮ ಜರುಗಿಸಬಹುದು ಎಂದು ಶಾಸಕಾಂಗ ಬಯಸಿದಲ್ಲಿ ಅಧಿಸೂಚನೆಯನ್ನು ಹೊರಡಿಸಬೇಕು ಎಂದು ಹೇಳಿದ್ದಾರೆ.
ಇಂತಹ ಯಾವುದೇ ಅಧಿಸೂಚನೆ ಇಲ್ಲದಿರುವಾಗ ಉಪ-ಕುಲಪತಿ ಅಥವಾ ಪ್ರಾಧ್ಯಾಪಕರು “ಎ” ಗ್ರೂಪ್ ಅಧಿಕಾರಿಗಳಾಗುತ್ತಾರೆ. ವಾಸ್ತವದಲ್ಲಿ ಲೋಕಾಯುಕ್ತರು ಈ ದೂರುದಾರರ ವಿರುದ್ದ ತನಿಖೆ ನಡೆಸುವ ಯಾವುದೇ ವ್ಯಾಪ್ತಿಯನ್ನು ಹೊಂದಿಲ್ಲ. ಇದರಿಂದ ಅವರು ಸಲ್ಲಿಸಿರುವ ವರದಿ ಯಾವುದೇ ವ್ಯಾಪ್ತಿ ಹೊಂದಿಲ್ಲ ಎಂದು ಆದೇಶದಲ್ಲಿ ಹೇಳಿರುವುದು ಗೊತ್ತಾಗಿದೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರತಿವಾದಿ ನಂ.2 ನೃಪತುಂಗ ವಿವಿಯ ಸಹ ಕುಲಾಧಿಪತಿಯೂ ಆಗಿರುವ ಎರಡನೇ ಪ್ರತಿವಾದಿಯು ಆಗಿದ್ದಾರೆ. ನೃಪತುಂಗ ವಿವಿಯ ವೆಬ್‌ಸೈಟ್‌ನಲ್ಲಿ ಪ್ರತಿವಾದಿಯ ಹೆಸರು ಉಪ ಕುಲಪತಿ ಎಂದು ತೋರಿಸುತ್ತಿದೆಯೇ ಹೊರತು ದೂರುದಾರ ಹೇಳಿದಂತೆ ಸಹ ಕುಲಾಧಿಪತಿ ಎಂದಲ್ಲ ಎಂದು ಹೇಳಲಾಗಿದೆ.
ಈ ಎಲ್ಲ ಅಂಶಗಳನ್ನು ಆಧಾರವಾಗಿ ಹೇಳಿದಾಗ ಈ ಸಂಸ್ಥೆಗಳು ಪ್ರತಿವಾದಿ 2ರ ವಿರುದ್ಧ ತನಿಖೆ ನಡೆಸುವ ಯಾವುದೇ ವ್ಯಾಪ್ತಿ ಹೊಂದಿಲ್ಲ. ಜೊತೆಗೆ ಕರ್ನಾಟಕ ಸ್ಟೇಟ್ ವಿವಿಗಳ ಕಾಯ್ದೆ 2000ರ ಸೆಕ್ಷನ್ 13 ಈ ಕೆಳಗಿನಂತೆ ಹೇಳುತ್ತದೆ.
ಸೆಕ್ಷನ್ 13ರ ಪ್ರಕಾರ ಪ್ರೋ ಚಾನ್ಸಲರ್ (1) ರಾಜ್ಯದ ಉನ್ನತ ಶಿಕ್ಷಣ ಸಚಿವರೇ ವಿವಿಯ ಪ್ರೋ ಚಾನ್ಸಲರ್ ಆಗಿರುತ್ತಾರೆ. ಅವರು ಕುಲಾಧಿಪತಿ ಅನುಪಸ್ಥಿತಿಯಲ್ಲಿ ವಿವಿಯ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿರುತ್ತಾರೆ. ಈ ಎಲ್ಲ ಅಂಶಗಳ ಆಧಾರದಲ್ಲಿ ಉನ್ನತ ಶಿಕ್ಷಣ ಸಚಿವರು ವಿವಿಯ ಸಹ ಕುಲಾಧಿಪತಿಯಾಗಿದ್ದಾರೆ. ಕುಲಾಧಿಪತಿ ಅನುಪಸ್ಥಿತಿಯಲ್ಲಿ ಯಾವುದೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ. ಆದರೆ ಒಂದನೇ ಪ್ರತಿವಾದಿ ಸಹ ಕುಲಾಧಿಪತಿ ವಿರುದ್ಧ ಮಾಡಿರುವ ಆರೋಪಗಳು ಅವರು ತಮ್ಮ ವ್ಯಾಪ್ತಿಯನ್ನು ಮೀರಿದ್ದಾರೆ ಎಂದು ಆದೇಶದಲ್ಲಿ ಅವಲೋಕಿಸಿದ್ದಾರೆ.
ಅವರು ಸ್ವಹಿತಾಸಕ್ತಿ ಹೊಂದಿದ್ದು ತಮ್ಮ ಸಂಬಂಧಿಕರಿಗೆ ಕಟ್ಟಡ ನಿರ್ಮಾಣದ ಗುತ್ತಿಗೆಯನ್ನು ಕೊಟ್ಟಿದ್ದು ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಇದು ಎರಡನೇ ಪ್ರತಿವಾದಿ ಉಪ-ಕುಲಪತಿ ಅನುಮೋದನೆ ಅಗತ್ಯವಿದೆ. ಉಪ-ಕುಲಪತಿಯ ಅವಗಾಹನೆಗೆ ತಾರದೆ ಸಹ ಕುಲಾಧಿಪತಿ ಹೀಗೆ ಮಾಡುವಂತಿಲ್ಲ ಎಂದು ಹೇಳಿದ್ದಾರೆ.
‘ಒಂದು ವೇಳೆ ನಾವು ಸಹ ಕುಲಾಧಿಪತಿ ವಿರುದ್ಧದ ಆರೋಪ ಕುರಿತು ತನಿಖೆ ನಡೆಸಿದಲ್ಲಿ ಉಪ-ಕುಲಪತಿ ವಿರುದ್ಧವೂ ತನಿಖೆ ನಡೆಸಬೇಕಾಗುತ್ತದೆ. ಈ ಮೇಲೆ ಹೇಳಿದಂತೆ ಎಸ್.ಎನ್.ಹೆಗ್ಡೆ ಪ್ರಕರಣದಲ್ಲಿ ಆದೇಶಿಸಿದಂತೆ ಸಕ್ಷಮ ಪ್ರಾಧಿಕಾರವು ಎರಡನೇ ಪ್ರತಿವಾದಿಯಾಗಿರುವ ಉಪಕುಲಪತಿ ವಿರುದ್ಧ ತನಿಖೆ ನಡೆಸುವ ಯಾವುದೇ ಅಧಿಕಾರ ಹೊಂದಿಲ್ಲ,’ ಎಂದು ತನಿಖೆಯಿಂದ ಹಿಂದೆ ಸರಿದಿರುವುದಕ್ಕೆ ಸಮರ್ಥನೆ ಮಾಡಿಕೊಂಡಿರುವುದು ತಿಳಿದು ಬಂದಿದೆ.
ಅದೇ ರೀತಿ ಮೂರನೇ ಪ್ರತಿವಾದಿ ವಿರುದ್ಧ ಮಾಡಿರುವ ಆರೋಪಗಳು ಸಹ ಮೊದಲ ಮತ್ತು ಎರಡನೇ ಪ್ರತಿವಾದಿಗಳಂತೆಯೇ ಇವೆ. ಇವೆಲ್ಲ ಒಂದಕ್ಕೊಂದು ಸಮ್ಮಿಳಿತಗೊಂಡಿರುವುದರಿಂದ ತನಿಖೆ ನಡೆಸಲಾಗದು ಎಂಬ ಅಂಶಗಳನ್ನು ಮುಂದಿರಿಸಿದ್ದಾರೆ.
ಪ್ರಕರಣದ ವಿವರ
ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದಡಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ನೃಪತುಂಗ ವಿಶ್ವವಿದ್ಯಾಲಯದ ಹಾಲಿ ಇರುವ ಕಟ್ಟಡ ನವೀಕರಣ ಮತ್ತು ಹೊಸ ಕಟ್ಟಡ ನಿರ್ಮಾಣ ಕಾಮಗಾರಿಗೆ ಟೆಂಡರಿಗಿಟ್ಟ ಮೊತ್ತಕ್ಕಿಂತ ಹೆಚ್ಚಿನ ಮೊತ್ತ ನಮೂದಿಸಿರುವುದು ಸೇರಿದಂತೆ ಹಲವು ಪ್ರಮುಖ ಅಂಶಗಳಿಗೆ ಸಚಿವ ಸಂಪುಟದ ಅನುಮೋದನೆಯಿಲ್ಲದೆಯೇ ಆದೇಶ ಹೊರಡಿಸಿತ್ತು. ಈ ಕುರಿತು ದಿ ಫೈಲ್ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
ನೃಪತುಂಗ ವಿವಿ ಕಾಮಗಾರಿ; ಕೆಟಿಪಿಪಿ ಕಾಯ್ದೆ ಉಲ್ಲಂಘನೆ, ಟೆಂಡರ್ ಮೊತ್ತಕ್ಕಿಂತ ಹೆಚ್ಚಳ ನಮೂದು
ದಿ ಫೈಲ್ ವರದಿಯನ್ನಾಧರಿಸಿ ಕರ್ನಾಟಕ ರಾಷ್ಟ್ರಸಮಿತಿಯು ಲೋಕಾಯುಕ್ತಕ್ಕೆ ದೂರು ಸಲ್ಲಿಸಿತ್ತು.
ಕೆಟಿಪಿಪಿ ಕಾಯ್ದೆ ಉಲ್ಲಂಘನೆ; ಸಚಿವ, ಕುಲಪತಿ, ರಿಜಿಸ್ಟ್ರಾರ್ ವಿರುದ್ಧ ಕೆಆರ್‌ಎಸ್ ಪಕ್ಷದಿಂದ ಲೋಕಾಯುಕ್ತಕ್ಕೆ ದೂರು
ಟೆಂಡರಿಗಿಟ್ಟ ಮೊತ್ತಕ್ಕಿಂತ ಶೇಕಡವಾರು ಪ್ರಮಾಣದಲ್ಲಿ ಹೆಚ್ಚಿದ್ದರೂ ಅದಕ್ಕೆ ಉನ್ನತ ಶಿಕ್ಷಣ ಇಲಾಖೆಯು ಯಾವುದೇ ಸೂಕ್ತ ಸಮರ್ಥನೆಯನ್ನೂ ನೀಡಿಲ್ಲ. ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸುವಾಗ ಪ್ರಮುಖ ಅಂಶಗಳಿಗೆ ಅನುಮೋದನೆಯನ್ನೂ ಕೋರಿಲ್ಲ. ಅಂದಾಜು ಪಟ್ಟಿಗಳಿಗೆ ಸಕ್ಷಮ ಅಧಿಕಾರಿಯ ಸಹಿಯೊಂದಿಗೆ ದೃಢೀಕರಣವೂ ಆಗಿಲ್ಲ. ಒಟ್ಟಾರೆ ಇಡೀ ಕಾಮಗಾರಿ ಸಂಬಂಧ ನಡೆದಿರುವ ಮೂಲ ಪ್ರಕ್ರಿಯೆಗಳಲ್ಲಿಯೇ ಅಕ್ರಮಗಳು ನಡೆದಿವೆ ಎಂದು ಕರ್ನಾಟಕ ರಾಷ್ಟ್ರಸಮಿತಿಯು ದೂರಿನಲ್ಲಿ ವಿವರಿಸಿತ್ತು.
4(ಜಿ) ಅನುಮೋದನೆ ಪಡೆದಿರಲಿಲ್ಲ
ಆದರೆ ನೃಪತುಂಗ ವಿಶ್ವವಿದ್ಯಾಲಯದ ಕಟ್ಟಡ ನವೀಕರಣ ಮತ್ತು ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಸಂಬಂಧ ಈ ಯಾವ ಪ್ರಕ್ರಿಯೆಗಳನ್ನೂ ನಡೆಸದೆಯೇ ನೇರವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರ್ ಘಟಕಕ್ಕೆ ವರ್ಗಾಯಿಸಲಾಗಿತ್ತು.
‘ಕಾಮಗಾರಿಯನ್ನು ನೇರವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರ್ ಘಟಕಕ್ಕೆ ವಹಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ 199ರ ಕಲಂ 4(ಜಿ) ರಡಿ ವಿನಾಯಿತಿ ಪಡೆದು ಕ್ರಮವಹಿಸಬೇಕಿರುತ್ತದೆ. ತದನಂತರ ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ಪಡೆಯುವ ಸಂದರ್ಭದಲ್ಲಿ ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸುವಾಗ ಈ ಅಂಶಕ್ಕೆ ಅನುಮೋದನೆ ಕೋರಿರುವುದು ಕಂಡುಬಂದಿರುವುದಿಲ್ಲ. ಈ ಕ್ರಮವು ಕೆಟಿಪಿಪಿಯ ನಿಯಮಗಳ ಉಲ್ಲಂಘನೆಯಾಗಿದೆ,’ ಎಂದು ಅಧಿಕಾರಿಯೊಬ್ಬರು ಟಿಪ್ಪಣಿಯಲ್ಲಿ ವಿವರಿಸಿದ್ದರು. ಲಭ್ಯ ಇರುವ ದಾಖಲೆಗಳಿಂದ ತಿಳಿದು ಬಂದಿದೆ.
ಅದೇ ರೀತಿ ಈ ಯೋಜನೆ ಕುರಿತು ಯೋಜನೆಯ ಅಂದಾಜು, ರೇಖಾ ನಕ್ಷೆ, ಅಂದಾಜು ಪಟ್ಟಿಗಳಿಗೆ ಯಾವುದೇ ಸಕ್ಷಮ ಅಧಿಕಾರಿ/ ಪ್ರಾಧಿಕಾರ ಸಹಿಯೊಂದಿಗೆ ದೃಢೀಕರಿಸಿರುವುದಿಲ್ಲ (ಅಸಿಸ್ಟಂಟ್ ಇಂಜಿನಿಯರ್, ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್, ಎಕ್ಸಿಕ್ಯೂಟಿವ್ ಇಂಜಿನಿಯರ್) ಕೇವಲ ಪದನಾಮವನ್ನು ಮಾತ್ರ ದಾಖಲಿಸಲಾಗಿದೆಯೇ ವಿನಃ ಎಲ್ಲಿಯೂ ಸಹಿ ಕಂಡುಬಂದಿರುವುದಿಲ್ಲ ಎಂದು ಗೊತ್ತಾಗಿದೆ.
ಹಾಗೆಯೇ ಟೆಂಡರ್‌ನಲ್ಲಿ ಸ್ವೀಕೃತವಾದ ಮೊತ್ತವು ಅಂದಾಜು ಮೊತ್ತಕ್ಕಿಂತ ಶೇ.5ಕ್ಕಿಂತ ಹೆಚ್ಚಿನ ಲಾಭಾಂಶವುಳ್ಳ ಟೆಂಡರ್ ಪ್ರೀಮಿಯಂ ಅಗಿದ್ದಲ್ಲಿ ಅಂಗೀಕರಿಸಬಾರದು ಎಂದು 2022ರ ಮೇ 10ರಂದೇ ಆರ್ಥಿಕ ಇಲಾಖೆಯು ಸೂಚಿಸಿತ್ತು. ಆದರೆ ಈ ಪ್ರಕರಣದಲ್ಲಿ ಪರಿಷ್ಕೃತ ಟೆಂಡರ್‌ಗಿಟ್ಟ ಮೊತ್ತಕ್ಕಿಂತ ಶೇ. 9.95ಕ್ಕಿಂತ ಹೆಚ್ಚಾಗಿದೆ. ಆದರೂ ಇದಕ್ಕೆ ಸಕ್ಷಮ ಪ್ರಾಧಿಕಾರವು ಸೂಕ್ತ ಸಮರ್ಥನೆಯನ್ನು ಸಲ್ಲಿಸಿಲ್ಲ ಎಂದು ತಿಳಿದು ಬಂದಿದೆ.