ಚಿತ್ರದುರ್ಗ, ಧಾರವಾಡದಲ್ಲಿ ತೀವ್ರಗೊಂಡ ಮೇವಿನ ಕೊರತೆ; ರಾಜ್ಯದಲ್ಲಿ 20 ವಾರಗಳಿಗಷ್ಟೇ ಮೇವು ಲಭ್ಯ

ಬೆಂಗಳೂರು;ರಾಜ್ಯದ ಚಿತ್ರದುರ್ಗ ಮತ್ತು ಧಾರವಾಡ ಜಿಲ್ಲೆಯಲ್ಲಿ ತೀವ್ರ ಮೇವಿನ ಕೊರತೆಯಾಗಿದೆ. ಅಲ್ಲದೇ ರಾಜ್ಯದ 11 ಜಿಲ್ಲೆಗಳಲ್ಲಿ 20ಕ್ಕೂ ಕಡಿಮೆ ವಾರಗಳಿಗೆ ಸಾಕಾಗುವಷ್ಟು ಮೇವಿನ ಸಂಗ್ರಹಣೆ  ಇದೆ . ಈಗಿರುವ ಮೇವಿನ ಪ್ರಮಾಣವು ಮುಂದಿನ 24 ವಾರಗಳಿಗಷ್ಟೇ ಸಾಕಾಗಲಿದೆ ಎಂಬುದು ಇದೀಗ ಬಹಿರಂಗವಾಗಿದೆ.

 

ರಾಜ್ಯದಲ್ಲಿ ಬರ ಪರಿಸ್ಥಿತಿಯನ್ನು ಎದುರಿಸಲು ಕೇಂದ್ರ ಸರ್ಕಾರವು ರಾಜ್ಯಕ್ಕೆ ಆರ್ಥಿಕ ನೆರವು ನೀಡುತ್ತಿಲ್ಲ ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರವು ಸುಪ್ರೀಂಕೋರ್ಟ್‌ ಕದ ತಟ್ಟಿರುವ ಬೆನ್ನಲ್ಲೇ ಇದೀಗ ರಾಜ್ಯದ ಹಲವೆಡೆ ಮೇವಿನ ಕೊರತೆಯ ಪ್ರಮಾಣವು ಹೆಚ್ಚಾಗುತ್ತಿರುವುದು ಮುನ್ನೆಲೆಗೆ ಬಂದಿದೆ.

 

ಅಭಿವೃದ್ಧಿ ಆಯುಕ್ತರಾದ ಶಾಲಿನಿ ರಜನೀಶ್‌ ಅವರ ಅಧ್ಯಕ್ಷತೆಯಲ್ಲಿ 2024ರ ಮಾರ್ಚ್‌ 20ರಂದು ನಡೆದಿದ್ದ ರಾಜ್ಯಮಟ್ಟದ ಅವಲೋಕನ ಸಮಿತಿ ಸಭೆಯಲ್ಲಿ ಮೇವಿನ ಅಭಾವ ಕುರಿತು ಚರ್ಚೆಯಾಗಿದೆ. ಈ ಸಭೆಯ ನಡವಳಿಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಇದೇ ಸಭೆಯಲ್ಲಿ ಭಾಗವಹಿಸಿದ್ದ  ಪಶು ಸಂಗೋಪನೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ  ರಾಜ್ಯದಲ್ಲಿನ ಮೇವಿನ ಕೊರತೆ ವಿವರಗಳನ್ನು ಗಮನಕ್ಕೆ ತಂದಿರುವುದು ಗೊತ್ತಾಗಿದೆ.

 

‘ರಾಜ್ಯದಲ್ಲಿ ಸರಾಸರಿ 132 ಲಕ್ಷ ಟನ್‌ ಮೇವು ಲಭ್ಯವಿದ್ದು ಮುಂದಿನ 24 ವಾರಗಳ ಬಳಕೆಗೆ ಸಾಕಾಗುತ್ತದೆ. ಚಿತ್ರದುರ್ಗ ಮತ್ತು ಧಾರವಾಡ ಜಿಲ್ಲೆಗಳಲ್ಲಿ ತೀವ್ರ ಮೇವಿನ ಕೊರತೆಯಿದ್ದು ಒಟ್ಟಾರೆ 11 ಜಿಲ್ಲೆಗಳಲ್ಲಿ 20ಕ್ಕೂ ಕಡಿಮೆ ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದೆ. ತಾಲೂಕುವಾರು 10 ತಾಲೂಕುಗಳಲ್ಲಿ 20ಕ್ಕೂ ಕಡಿಮೆ ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದೆ,’ ಎಂದು ಇಲಾಖೆಯ ಕಾರ್ಯದರ್ಶಿಯು ಸರ್ಕಾರದ ಗಮನಕ್ಕೆ ತಂದಿರುವುದು ಗೊತ್ತಾಗಿದೆ.

 

ಮೇವು ಕಿಟ್‌ ಬಳಸಿ ಬೆಳೆಯಲಾದ ಹಸಿರು ಮೇವು ಇನ್ನೆರಡು ತಿಂಗಳಲ್ಲಿ ಲಭ್ಯವಾಗಲಿದೆ. ಮೇವು ಸಾಗಣೆಗೆ ನಿರ್ಬಂಧಿಸಲಾಗಿದೆ. ಪ್ರಸ್ತುತ ತೀವ್ರ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ 9 ಮತ್ತು ರಾಮನಗರ ಜಿಲ್ಲೆಯಲ್ಲಿ  1 ಗೋ ಶಾಲೆಗಳನ್ನು ತೆರೆಯಲಾಗಿದೆ. ಒಟ್ಟಾರೆ 3,963 ಜಾನುವಾರುಗಳಿಗೆ ಆಶ್ರಯ ನೀಡಲಾಗಿದೆ. ಧಾರವಾಡ ಮತ್ತು ಬಳ್ಳಾರಿ ಜಿಲ್ಲೆಗಳ ತಲಾ 2 ತಾಲೂಕುಗಳಲ್ಲಿ ಮೇವು ಬ್ಯಾಂಕ್‌ ಸ್ಥಾಪಿಸಿದೆ ಎಂದು ಸಭೆಯಲ್ಲಿ ವಿವರಗಳನ್ನು ನೀಡಿರುವುದು ತಿಳಿದು ಬಂದಿದೆ.

 

ರಾಜ್ಯದಲ್ಲಿ 115 ಲಕ್ಷ ದನಕರುಗಳು ಹಾಗೂ 155 ಲಕ್ಷ ಕುರಿ ಮೇಕೆಗಳಿವೆ. ಕಳೆದ ವರ್ಷದಲ್ಲಿ   150 ಲಕ್ಷ ಟನ್‌ ಮೇವು ಲಭ್ಯವಿತ್ತು.   ಇದು 28 ವಾರಗಳ ಬಳಕೆಗಿತ್ತು. ಚಿತ್ರದುರ್ಗ ಜಿಲ್ಲೆಯಲ್ಲಿ 19 ವಾರಗಳಿಗೆ ಹಾಗೂ ಬೀದರ್‍‌ ಜಿಲ್ಲೆಯಲ್ಲಿ 14 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿತ್ತು. ಆದರೂ ಮುಂದಿನ ದಿನಗಳಲ್ಲಿ ಮೇವಿನ ಕೊರತೆ ಉಂಟಾಗದಂತೆ ಮೇವಿನ ಬೀಜ ವಿತರಿಸಿ ಮೇವು ಬೆಳೆಸಲು ಕ್ರಮ ಕೈಗೊಂಡಿತ್ತು ಎಂದು ಪಶು ಸಂಗೋಪನೆ ಇಲಾಖೆ ನಿರ್ದೇಶಕರು ಹಿಂದಿನ ಸಭೆಗಳಲ್ಲಿ  ಮಾಹಿತಿ ನೀಡಿದ್ದರು.

 

ಮೇವಿನ ಕೊರತೆಗೆ ಸಂಬಂಧಿಸಿದಂತೆ ಇಲಾಖೆ ಅಧಿಕಾರಿಗಳು ಈಗಾಗಲೇ ಸಚಿವ ವೆಂಕಟೇಶ್‌ ಅವರ ಜತೆಯಲ್ಲಿಯೂ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

 

ಕಳೆದ ಆಗಸ್ಟ್‌ ತಿಂಗಳಲ್ಲಿ ಕಂಡು ಬಂದಿರುವ ಶೇ.73ರಷ್ಟು ಮಳೆ ಕೊರತೆಯು ಇಲ್ಲಿಯವರೆಗೂ ಲಭ್ಯವಿರುವ ಮಳೆ ಮಾಹಿತಿಗೆ ಹೋಲಿಸಿದರೆ ಶತಮಾನದ ದಾಖಲೆಯಾಗಿತ್ತು. ಸೆಪ್ಟಂಬರ್‍‌ಗೆ ವಾಡಿಕೆಗಿಂತಲೂ ಕಡಿಮೆ ಮಳೆಯಾಗುವ ಸಂಭವ ಹೆಚ್ಚಿತ್ತು. ಮುಂಗಾರು ಜೂನ್‌ 1ರಿಂದ ಸೆಪ್ಟಂಬರ್‍‌ 2ನೇ ಅವಧಿಯಲ್ಲಿ ಬರ ಪರಿಸ್ಥಿತಿ ಕಂಡು ಬಂದಿರುವ ಹೆಚ್ಚುವರಿ 83 ತಾಲೂಕುಗಳ ಪಟ್ಟಿ ಮಾಡಲಾಗಿತ್ತು.

 

ಬಳ್ಳಾರಿಯ ಕುರುಗೋಡು, ಬೆಂಗಳೂರು ಗ್ರಾಮಾಂತರದ ಹೊಸಕೋಟೆ,  ನೆಲಮಂಗಲ, ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ಪೂರ್ವ ತಾಲೂಕು, ಯಲಹಂಕ, ಚಾಮರಾಜನಗರದ ಕೊಳ್ಳೇಗಾಲ, ಚಿಕ್ಕಬಳ್ಳಾಪುರದ ಗುಡಿಬಂಡೆ, ಧಾರವಾಡದ ನವಲಗುಂದ, ಗದಗ್‌ ಜಿಲ್ಲೆಯ ಗದಗ ತಾಲೂಕು, ಕೋಲಾರದ ಶ್ರೀನಿವಾಸಪುರ, ಮಂಡ್ಯದ ಕೆ ಆರ್‍‌ ಪೇಟೆ, ಪಾಂಡವಪುರ, ಶ್ರೀರಂಗಪಟ್ಟಣ, ನಾಗಮಂಗಲ, ಮೈಸೂರಿನ ಪಿರಿಯಾಪಟ್ಟಣ ಸೇರಿದಂತೆ ಹಲವು ತಾಲೂಕುಗಳ ತೀವ್ರ ಬರ ಪರಿಸ್ಥಿತಿ ಅನುಭವಿಸಿವೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಸರ್ಕಾರಕ್ಕೆ ಪಟ್ಟಿ ಒದಗಿಸಿತ್ತು.

 

 

ಬಳ್ಳಾರಿಯ ಸಂಡೂರು, ಕಂಪ್ಲಿ, ಬೆಳಗಾವಿಯ ರಾಮದುರ್ಗ, ಬೀದರ್‍‌ನ ಬಸವಕಲ್ಯಾಣ, ಚಾಮರಾಜನಗರದ ಗುಂಡ್ಲುಪೇಟೆ, ಯಳಂದೂರು, ಹನೂರು, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ನರಸಿಂಹರಾಜಪುರ, ಕಳಸ, ಚಿತ್ರದುರ್ಗದ ಚಳ್ಳಕೆರೆ, ಹಿರಿಯೂರು, ದಕ್ಷಿಣ ಕನ್ನಡದ ಮೂಡಬಿದರೆ, ದಾವಣಗೆರೆ ಜಿಲ್ಲೆಯ ದಾವಣಗೆರೆ, ನ್ಯಾಮತಿ, ಹಾಸನದ ಬೇಲೂರು, ಚನ್ನರಾಯಪಟ್ಟಣ, ಹಾವೇರಿಯ ಹಾವೇರಿ, ರಾಣೆಬೆನ್ನೂರು, ಕಲ್ಬುರ್ಗಿಯ ಚಿಂಚೋಳಿ, ಜೇವರ್ಗಿ, ಸೇಡಂ, ಕಮಲಾಪುರ, ಯಡ್ರಾಮಿ, ಕೊಡಗು ಜಿಲ್ಲೆಯ ಸೋಮವಾರಪೇಟೆ, ಕೋಲಾರದ ಮುಳಬಾಗಿಲು, ಕೊಪ್ಪಳದ ಕಾರಟಗಿ, ಕೊಪ್ಪಳದ ಕೊಪ್ಪ, ಮೈಸೂರಿನ ನಂಜನಗೂಡು ತಾಲೂಕುಗಳು ಮಧ್ಯಮ ಬರ ಪರಿಸ್ಥಿತಿ ಎದುರಿಸುತ್ತಿವೆ.  ಎಂದು ವರದಿಯಲ್ಲಿ ಹೇಳಲಾಗಿದೆ.

 

 

 

ಅದೇ ರೀತಿ ರಾಜ್ಯದ ವಿದ್ಯುಚ್ಛಕ್ತಿ ಉತ್ಪಾದನಾ ಜಲಾಶಯ ಹಾಗೂ ಕಾವೇರಿ ಜಲಾಯಶಗಳಲ್ಲಿನ ನೀರಿನ ಸಂಗ್ರಹಣೆ ಕಡಿಮೆ ಇದೆ. ಬರ ಘೋಷಣೆಯನ್ನು ರಾಜ್ಯ ಸರ್ಕಾರವು ಮುಂದೂಡಿರುವ ಬೆನ್ನಲ್ಲೇ ತೀವ್ರವಾಗಿ ಮಳೆ ಕೊರತೆ ಎದುರಾಗಿರುವ ಕುರಿತಂತೆ ಆತಂಕಕಾರಿ ಮಾಹಿತಿಗಳು ಹೊರಬಿದ್ದಿವೆ. ರಾಜ್ಯದ 31 ಜಿಲ್ಲೆಗಳ ಪೈಕಿ 29 ಜಿಲ್ಲೆಗಳಲ್ಲಿ ತೀವ್ರ ಮಳೆ ಕೊರತೆ ಎದುರಾಗಿದೆ. 236 ತಾಲೂಕುಗಳ ಪೈಕಿ 231 ತಾಲೂಕುಗಳಲ್ಲಿ ಸಾಧಾರಣದಿಂದ ತೀವ್ರ ಮಳೆ ಕೊರತೆ ಕಾಣಿಸಿಕೊಂಡಿತ್ತು.

ಬರಪೀಡಿತ ಪಟ್ಟಿಗೆ ಹೊಸದಾಗಿ 7 ತಾಲೂಕು ಸೇರ್ಪಡೆ; ರಾಜ್ಯದಲ್ಲೀಗ 223 ತಾಲೂಕುಗಳಲ್ಲಿ ಬರ

 

ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಗುರುತಿಸಿ ಪಟ್ಟಿ ಮಾಡಿರುವ 113 ಬರ ಪರಿಸ್ಥಿತಿ ಉದ್ಭವಿಸಿರುವ ತಾಲೂಕುಗಳ ಕುರಿತು ಇದೇ ಸೆಪ್ಟಂಬರ್‍‌ 2ನೇ ವಾರದಲ್ಲಿ ಮೆಮೋರಾಂಡಂ ಸಲ್ಲಿಸಲು ಕ್ರಮ ಕೈಗೊಳ್ಳಬೇಕು. ಮತ್ತು ಈಗಿನಿಂದಲೇ ರೈತರಿಗೆ ಫಾಡರ್‍‌ ಕಿಟ್‌ಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದೂ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.

ಬರಪರಿಹಾರ; ಜಂಟಿ ಖಾತೆ ತೆರೆಯಲು ಕೇಂದ್ರದಿಂದ ನಿರ್ದೇಶನವೂ ಇಲ್ಲ, ಅನುದಾನವೂ ಇಲ್ಲ

ರಾಜ್ಯದಲ್ಲಿ ಜೂನ್‌ 1ರಿಂದ ಸೆಪ್ಟಂಬರ್‍‌ 2ವರೆಗೆ 512 ಮಿ ಮೀ ಮಳೆಯಾಗಿದೆ. ವಾಡಿಕೆ ಮಳೆ (701 ಮಿ ಮೀ) ಗೆ ಹೋಲಿಸಿದರೆ ಶೇ. 27ರಷ್ಟು ಮಳೆ ಕೊರತೆ ಇದೆ. ಜೂನ್‌ 1ರಿಂದ ಸೆಪ್ಟಂಬರ್‍‌ವರೆಗೆ ರಾಜ್ಯದ 31 ಜಿಲ್ಲೆಗಳ ಪೈಕಿ 16 ಜಿಲ್ಲೆಗಳಲ್ಲಿ ಸಾಧಾರಣ ಮಳೆ ಕೊರತೆ ಹಾಗೂ ಉಳಿದ 15 ಜಿಲ್ಲೆಗಳಲ್ಲಿ ವಾಡಿಕೆಯಷ್ಟು ಮಳೆಯಾಗಿತ್ತು. ಕಳೆದೆರಡು ವಾರಗಳಲ್ಲಿ ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನ ದಾಖಲಾಗಿದೆ. ಬಿಸಿ ಗಾಳಿ ತಲೆದೋರಿತ್ತು. ಮುಂಬರುವ ವಾರಗಳಲ್ಲಿ ಗರಿಷ್ಠ ತಾಪಮಾನ ಪ್ರಮಾಣವು ಇಳಿಕೆಯಾಗಲಿದ್ದು ಬಿಸಿಗಾಳಿ ಪರಿಸ್ಥಿತಿ ಕಡಿಮೆಯಾಗಲಿದೆ ಎಂಬ ಮಾಹಿತಿಯನ್ನೂ ಅಧಿಕಾರಿಗಳು ಸಭೆಗೆ ಒದಗಿಸಿದ್ದಾರೆ ಎಂದು ಗೊತ್ತಾಗಿದೆ.

 

‘ಮೂರು ವಾರಗಳ ಮುನ್ಸೂಚನೆ ಅನ್ವಯ ರಾಜ್ಯದ ಕರಾವಳಿ, ಮಲೆನಾಡಿನಲ್ಲಿ ಚದುರಿದಂತೆ ಸಾಧಾರಣ ಮಳೆ ಹಾಗೂ ಉತ್ತರ ಮತ್ತು ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಒಟ್ಟಾರೆ ರಾಜ್ಯದಲ್ಲಿ ಆಗಸ್ಟ್‌ ತಿಂಗಳ ಉಳಿದ ದಿನಗಳಿಗೆ ಹಾಗೂ ಸೆಪ್ಟಂಬರ್‍‌ಗೆ ವಾಡಿಕೆಗಿಂತಲೂ ಕಡಿಮೆ ಮಳೆಯಾಗುವ ಸಂಭವ ಹೆಚ್ಚಿದೆ,’ ಎಂದು ಹಿಂದಿನ ಸಭೆಗಳಲ್ಲಿ  ಮಾಹಿತಿ ಒದಗಿಸಿದ್ದರು.

SUPPORT THE FILE

Latest News

Related Posts