ಕೆಟಿಪಿಪಿ ಕಾಯ್ದೆ ಉಲ್ಲಂಘನೆ; ಸಚಿವ, ಕುಲಪತಿ, ರಿಜಿಸ್ಟ್ರಾರ್‌ ವಿರುದ್ಧ ಕೆಆರ್‌ಎಸ್‌ ಪಕ್ಷದಿಂದ ಲೋಕಾಯುಕ್ತಕ್ಕೆ ದೂರು

ಬೆಂಗಳೂರು; ಕರ್ನಾಟಕ ಪಾರದರ್ಶಕ ಕಾಯ್ದೆ ಉಲ್ಲಂಘನೆ ಮತ್ತು ಟೆಂಡರ್‌ ಮೊತ್ತಕ್ಕಿಂತ ಹೆಚ್ಚು ದರ ನಮೂದಿಸಿ ಕರ್ತವ್ಯಲೋಪ ಮತ್ತು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂಬ ಗುರುತರವಾದ ಆರೋಪವನ್ನು ಹೊರಿಸಿರುವ ಕರ್ನಾಟಕ ರಾಷ್ಟ್ರಸಮಿತಿ ಪಕ್ಷವು ಈ ಸಂಬಂಧ ಉನ್ನತ ಶಿಕ್ಷಣ ಸಚಿವ ಹಾಗೂ ನೃಪತುಂಗ ವಿಶ್ವವಿದ್ಯಾಲಯದ ಪ್ರೊಛಾನ್ಸಲರ್‌ ಡಾ ಸಿ ಎನ್‌ ಅಶ್ವಥ್‌ನಾರಾಯಣ್‌, ರಿಜಿಸ್ಟ್ರಾರ್‌ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದೆ.

 

ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದಡಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ನೃಪತುಂಗ ವಿಶ್ವವಿದ್ಯಾಲಯದ ಹಾಲಿ ಇರುವ ಕಟ್ಟಡ ನವೀಕರಣ ಮತ್ತು ಹೊಸ ಕಟ್ಟಡ ನಿರ್ಮಾಣ ಕಾಮಗಾರಿಗೆ ನಮೂದಿಸಿರುವುದು ಸೇರಿದಂತೆ ಹಲವು ಪ್ರಮುಖ ಅಂಶಗಳಿಗೆ ಸಚಿವ ಸಂಪುಟದ ಅನುಮೋದನೆಯಿಲ್ಲದೆಯೇ ಆದೇಶ ಹೊರಡಿಸಿರುವುದು ಭ್ರಷ್ಟಾಚಾರಕ್ಕೆ ದಾರಿಮಾಡಿಕೊಟ್ಟಿದೆ ಎಂದು ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ ಎನ್‌ ದೀಪಕ್‌ ಅವರು ಲೋಕಾಯುಕ್ತಕ್ಕೆ ದಾಖಲೆ ಸಮೇತ ದೂರು ಸಲ್ಲಿಸಿದ್ದಾರೆ. ಈ ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ರಾಜ್ಯ ಸಚಿವ ಸಂಪುಟವನ್ನೇ ಕತ್ತಲಲ್ಲಿಟ್ಟು ವಂಚಿಸಿ ಕೆಟಿಪಿಪಿ ಕಾಯ್ದೆ ಉಲ್ಲಂಘನೆ ಮಾಡಿರುವ ಗಂಭೀರ ಪ್ರಕರಣವಾಗಿರುವುದರಿಂದ ಡಾ ಸಿ ಎನ್‌ ಅಶ್ವಥ್‌ನಾರಾಯಣ್‌, ನೃಪತುಂಗ ವಿಶ್ವವಿದ್ಯಾಲಯದ ಕುಲಲಪತಿ ಡಾ ಶ್ರೀನಿವಾಸ ಎಸ್‌ ಬಳ್ಳಿ, ಕುಲಸಚಿವ (ಆಡಳಿತ) ಕೆ ಆರ್‌ ಕವಿತಾ ಅವರ ವಿರುದ್ಧ ತಕ್ಷಣವೇ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಅನ್ವಯ ಎಫ್‌ಐಆರ್‌ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಸಿ ಎನ್‌ ದೀಪಕ್‌ ಅವರು ಒತ್ತಾಯಿಸಿದ್ದಾರೆ.

 

ದೂರಿನಲ್ಲಿ ಸಚಿವ ಅಶ್ವಥ್‌ನಾರಾಯಣ್‌ ಅವರನ್ನು ಮೊದಲ ಪ್ರತಿವಾದಿಯನ್ನಾಗಿಸಲಾಗಿದೆ. ‘ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವ ಹಾಗೂ ನೃಪತುಂಗ ವಿವಿಯ ಪ್ರೋ ಛಾನಲ್ಸರ್‌ ಡಾ ಸಿ ಎನ್‌ ಅಶ್ವಥ್‌ನಾರಾಯಣ್‌ ಅವರು ತಮ್ಮ ಸಂಬಂಧಿಯೊಬ್ಬರಿಗೆ ಸೇರಿದ ಕಟ್ಟಡ ನಿರ್ಮಾಣ ಕಂಪನಿಯೊಂದಕ್ಕೆ ವಿಶ್ವವಿದ್ಯಾಲಯದ ಕಾಮಗಾರಿ ಗುತ್ತಿಗೆ ನೀಡುವ ದುರುದ್ದೇಶದಿಂದಲೇ ನಿಯಮಗಳನ್ನು ಗಾಳಿಗೆ ತೂರಲಾಗಿದೆ,’ ಎಂದು ಕರ್ನಾಟಕ ರಾಷ್ಟ್ರಸಮಿತಿಯು ದೂರಿನಲ್ಲಿ ಗುಮಾನಿ ವ್ಯಕ್ತಪಡಿಸಿದೆ.

 

ಅಂದಾಜು ಮೊತ್ತಕ್ಕಿಂತ ಶೇ 5ಕ್ಕಿಂತ ಹೆಚ್ಚಿನ ಲಾಭಾಂಶವುಳ್ಳ ಟೆಂಡರ್‌ ಪ್ರೀಮಿಯಂ ಆಗಿದ್ದಲ್ಲಿ ಆ ಟೆಂಡರ್‌ನ್ನು ಅಂಗೀಕರಿಸಬಾರದು ಎಂದು 2022ರ ಮೇ 10ರಂದೇ ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯು ಸೂಚಿಸಿದೆ. ಆದರೆ ಈ ಪ್ರಕರಣದಲ್ಲಿ ಪರಿಷ್ಕೃತ ಟೆಂಡರ್‌ಗಿಟ್ಟ ಮೊತ್ತಕ್ಕಿಂತ ಶೇ.9.9ಕ್ಕಿಂತ ಹೆಚ್ಚಾಗಿದೆ. ಆದರೂ ಇದಕ್ಕೆ ಸಕ್ಷಮ ಪ್ರಾಧಿಕಾರವು ಸೂಕ್ತ ಸಮರ್ಥನೆಯನ್ನು ಒದಗಿಸಿಲ್ಲ ಎಂದು ಪಕ್ಷವು ದೂರಿನಲ್ಲಿ ವಿವರಿಸಿದೆ.

 

‘ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಸಾರ್ವಜನಿಕವಾಗಿ ತೆರಿಗೆ ಹಣದಲ್ಲಿ ಭ್ರಷ್ಟಾಚಾರ ಮಾಡುವ ಉದ್ದೇಶದಿಂದಲೇ ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸುವಾಗ ಸಂಬಂಧಿಸಿದ ಇಲಾಖೆ ಸಚಿವ ಡಾ ಸಿ ಎನ್‌ ಅಶ್ವಥ್‌ನಾರಾಯಣ್‌ ಅವರು ಉದ್ದೇಶಪೂರ್ವಕವಾಗಿಯೇ ಪ್ರಸ್ತಾವನೆಯನ್ನು ಅಮೂಲಾಗ್ರವಾಗಿ ಪರಿಶೀಲಿಸದೇ ಕರ್ತವ್ಯಲೋಪೆಸಗಿದ್ದಾರೆ. ಇದು ಪೂರ್ವನಿರ್ಧರಿತ ಮತ್ತು ನಿರ್ದಿಷ್ಟ ಕಂಪನಿ/ಗುತ್ತಿಗೆದಾರರಿಗೆ ಕೋಟ್ಯಂತರ ರುಪಾಯಿ ಮೊತ್ತದ ಕಾಮಗಾರಿಯನ್ನು ವಹಿಸುವ ಸಂಚು ರೂಪಿಸಲಾಗಿದೆ ಎಂಬುದು ಇಲ್ಲಿ ಸ್ಪಷ್ಟವಾಗಿದೆ.. ಕೆಟಿಪಿಪಿ ಕಾಯ್ದೆ ಉಲ್ಲಂಘಿಸಲಾಗಿದೆ ಎಂದು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಮತ್ತು ಇತರೆ ಅಧಿಕಾರಿಗಳು ಇ-ಕಡತದಲ್ಲಿನ ಟಿಪ್ಪಣಿ ಹಾಳೆಗಳಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ,’ಎಂದು ಕೆಆರ್‌ಎಸ್‌ ಪಕ್ಷವು ದಾಖಲೆಯನ್ನು ಲೋಕಾಯುಕ್ತರಿಗೆ ಒದಗಿಸಿದೆ.

 

 

ಪ್ರಕರಣದ ಹಿನ್ನೆಲೆ

 

ಉನ್ನತ ಶಿಕ್ಷಣ ಇಲಾಖೆ ಅಧೀನದಲ್ಲಿ ಬರುವ ನೃಪತುಂಗ ವಿಶ್ವವಿದ್ಯಾಲಯ ಕಟ್ಟಡ ನವೀಕರಣ ಮತ್ತು ಹೊಸ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ನೇರವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರ್‌ ಘಟಕಕ್ಕೆ ವರ್ಗಾಯಿಸಿರುವುದೇ ಅಕ್ರಮ ನಡೆದಿದೆ ಎಂಬ ಶಂಕೆಗೆ ಮೂಲ ಕಾರಣ. ವಿಶ್ವವಿದ್ಯಾಲಯದ ಹಾಲಿ ಇರುವ ಕಟ್ಟಡ ನವೀಕರಣ ಮತ್ತು ಹೊಸ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರ್‌ ಘಟಕಕ್ಕೆ ವಹಿಸಿ 2022ರ ಜನವರಿ 5ರಂದೇ ಸರ್ಕಾರವು ಆದೇಶ ಹೊರಡಿಸಿತ್ತು.

 

ನೃಪತುಂಗ ವಿಶ್ವವಿದ್ಯಾಲಯದ ಕಟ್ಟಡ ನವೀಕರಣ ಮತ್ತು ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಸಂಬಂಧ ಈ ಯಾವ ಪ್ರಕ್ರಿಯೆಗಳನ್ನೂ ನಡೆಸದೆಯೇ ನೇರವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರ್‌ ಘಟಕಕ್ಕೆ ವರ್ಗಾಯಿಸಲಾಗಿದೆ.

 

‘ಕಾಮಗಾರಿಯನ್ನು ನೇರವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರ್‌ ಘಟಕಕ್ಕೆ ವಹಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ 199ರ ಕಲಂ 4(ಜಿ) ರಡಿ ವಿನಾಯಿತಿ ಪಡೆದು ಕ್ರಮವಹಿಸಬೇಕಿರುತ್ತದೆ. ತದನಂತರ ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ಪಡೆಯುವ ಸಂದರ್ಭದಲ್ಲಿ ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸುವಾಗ ಈ ಅಂಶಕ್ಕೆ ಅನುಮೋದನೆ ಕೋರಿರುವುದು ಕಂಡುಬಂದಿರುವುದಿಲ್ಲ. ಈ ಕ್ರಮವು ಕೆಟಿಪಿಪಿಯ ನಿಯಮಗಳ ಉಲ್ಲಂಘನೆಯಾಗಿದೆ,’ ಎಂದು ಲಭ್ಯ ಇರುವ ದಾಖಲೆಗಳಿಂದ ತಿಳಿದು ಬಂದಿದೆ.

 

ಅದೇ ರೀತಿ ಈ ಯೋಜನೆ ಕುರಿತು ಯೋಜನೆಯ ಅಂದಾಜು, ರೇಖಾ ನಕ್ಷೆ, ಅಂದಾಜು ಪಟ್ಟಿಗಳಿಗೆ ಯಾವುದೇ ಸಕ್ಷಮ ಅಧಿಕಾರಿ/ ಪ್ರಾಧಿಕಾರ ಸಹಿಯೊಂದಿಗೆ ದೃಢೀಕರಿಸಿರುವುದಿಲ್ಲ (ಅಸಿಸ್ಟಂಟ್‌ ಇಂಜಿನಿಯರ್‌, ಅಸಿಸ್ಟಂಟ್‌ ಎಕ್ಸಿಕ್ಯೂಟಿವ್ ಇಂಜಿನಿಯರ್‌, ಎಕ್ಸಿಕ್ಯೂಟಿವ್ ಇಂಜಿನಿಯರ್‌) ಕೇವಲ ಪದನಾಮವನ್ನು ಮಾತ್ರ ದಾಖಲಿಸಲಾಗಿದೆಯೇ ವಿನಃ ಎಲ್ಲಿಯೂ ಸಹಿ ಕಂಡುಬಂದಿರುವುದಿಲ್ಲ ಎಂದು ಅಧಿಕಾರಿಗಳು ಟಿಪ್ಪಣಿ ಹಾಳೆಯಲ್ಲಿ ದಾಖಲಿಸಿದ್ದರು.

the fil favicon

SUPPORT THE FILE

Latest News

Related Posts