ಬೆಂಗಳೂರು; ಕರ್ತವ್ಯದ ಸಂದರ್ಭದಲ್ಲಿ ಮರಣ ಹೊಂದುವ ಅಧಿಕಾರಿ, ನೌಕರರಿಗೆ ಪರಿಹಾರ ನೀಡುವ ವಿಶೇಷ ಗುಂಪು ವಿಮಾ ಯೋಜನೆಯನ್ನು ಜಾರಿಗೊಳಿಸಿರುವ ಗೃಹ ಇಲಾಖೆಯು ವಿಮಾ ಕಂಪನಿಗೇ ಅತೀ ಹೆಚ್ಚಿನ ಮೊತ್ತವನ್ನು ಪಾವತಿಸುತ್ತಿರುವುದು ಇದೀಗ ಬಹಿರಂಗವಾಗಿದೆ.
ಪೊಲೀಸ್ ಗುಂಪು ವಿಮೆ ಮೊತ್ತವನ್ನು 20 ಲಕ್ಷದಿಂದ 50 ಲಕ್ಷಕ್ಕೆ ಹೆಚ್ಚಳ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಗೃಹ ಇಲಾಖೆಯು ವಿಮಾ ಕಂಪನಿಗೇ ಅತೀ ಹೆಚ್ಚಿನ ಮೊತ್ತವನ್ನು ಪಾವತಿಸುತ್ತಿರುವುದು ಮುನ್ನೆಲೆಗೆ ಬಂದಿದೆ.
ಪೊಲೀಸ್ ಇಲಾಖೆಯಲ್ಲಿ ಇ-ಟೆಂಡರ್ ಮೂಲಕ ಅನುಷ್ಠಾನಗೊಳಿಸಿರುವ ವಿಶೇಷ ಗುಂಪು ವಿಮಾ ಯೋಜನೆಯಿಂದಾಗಿ ವಿಮಾ ಕಂಪನಿಗೇ ಕೋಟ್ಯಂತರ ರುಪಾಯಿ ಹೆಚ್ಚಿನ ಮೊತ್ತವು ಪಾವತಿಯಾಗುತ್ತಿರುವ ಕಾರಣ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿದೆ. ಈ ಸಂಬಂಧ ‘ದಿ ಫೈಲ್’ಗೆ ಟಿಪ್ಪಣಿ ಹಾಳೆಗಳು ಲಭ್ಯವಾಗಿವೆ.
ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ವಿಶೇಷ ಗುಂಪು ವಿಮಾ ಮೊತ್ತವನ್ನು ಪಾವತಿಸುವ ಸಂಬಂಧ ಕೆಟಿಪಿಪಿ ಕಾಯ್ದೆ ಪ್ರಕಾರ ಇ-ಟೆಂಡರ್ ಮೂಲಕ ಯುನೈಟೆಡ್ ಇಂಡಿಯಾ ಇನ್ಸುಶ್ಯೂರೆನ್ಸ್ ಕಂಪನಿ ಲಿಮಿಟೆಡ್‌ಗೆ 2021ರ ಜುಲೈ 29ರಂದು 3 ವರ್ಷಗಳ ಅವಧಿಗೆ ಅನುಮೋದನೆ ನೀಡಲಾಗಿತ್ತು.
2019-20, 2020-21, 2021-22ರ ಅವಧಿಯಲ್ಲಿ ಒಟ್ಟಾರೆ 26.95 ಕೋಟಿ ರು.ಗಳ ವಾರ್ಷಿಕ ವಿಮಾ ಮೊತ್ತವನ್ನು ನಿಗದಿಪಡಿಸಲಾಗಿತ್ತು. ಆದರೆ ಈ ಪದ್ದತಿಯು ವಿಮಾ ಕಂಪನಿಗೇ ಅತೀ ಹೆಚ್ಚಿನ ಲಾಭವಾಗುವುದಲ್ಲದೇ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಗುತ್ತಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳೇ ಸರ್ಕಾರದ ಗಮನಕ್ಕೆ ತಂದಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಪೊಲೀಸ್ ಇಲಾಖೆಯ ಅನುಯಾಯಿ ಹುದ್ದೆಯಿಂದ ಪೊಲೀಸ್ ಇನ್ಸ್‌ಪೆಕ್ಟರ್ ಹುದ್ದೆಯವರೆಗೆ ಒಟ್ಟು ಸಂಖ್ಯಾಬಲ 90,057 ಅಧಿಕಾರಿ, ಸಿಬ್ಬಂದಿಗಳಿಗೆ ವಿಶೇಷ ಗುಂಪು ವಿಮಾ ಯೋಜನೆಯನ್ನು 2021ರ ಅಕ್ಟೋಬರ್ 10ರಿಂದ 2022ರ ಅಕ್ಟೋಬರ್ 9ರ ಅವಧಿಗೆ ಜಾರಿಗೊಳಿಸಲು 8.92 ಕೋಟಿ ರು.ಗಳನ್ನು ಮಂಜೂರು ಮಾಡಲಾಗಿತ್ತು.
ಈ ಇಲಾಖೆಯಲ್ಲಿ ಮೃತಪಟ್ಟ ಅಧಿಕಾರಿ, ನೌಕರರಿಗೆ ನೇರವಾಗಿ ಪರಿಹಾರ ಮೊತ್ತವನ್ನು ಪಾವತಿಸಲು ಸಾಕಷ್ಟು ಅವಕಾಶಗಳಿವೆ. ಮೃತಪಟ್ಟ ಅಧಿಕಾರಿ, ನೌಕರರ ಕುಟುಂಬ ಸದಸ್ಯರಿಗೆ ನೇರವಾಗಿ ಪರಿಹಾರ ಹಣವನ್ನು ನೀಡಿದಲ್ಲಿ ಸರ್ಕಾರಕ್ಕೆ ಆರ್ಥಿಕ ಹೊರೆಯಾಗುವುದಿಲ್ಲ. ಅಲ್ಲದೇ ಪ್ರತಿ ಪ್ರಕರಣದಲ್ಲಿಯೂ ಈ ಮೊತ್ತವನ್ನು ಮಂಜೂರು ಅಥವಾ ಬಿಡುಗಡೆ ಮಾಡುವ ಪ್ರಕ್ರಿಯೆಯೂ ಸುಗಮವಾಗಿರುತ್ತದೆ.
ಆದರೆ ವಿಮಾ ಕಂಪನಿ ಮೂಲಕ ಕುಟುಂಬದವರಿಗೆ ಪಾವತಿಸುವ ಪ್ರಕ್ರಿಯೆಯು ಅನಗತ್ಯವಾಗಿ ವಿಳಂಬವಾಗುತ್ತಿದೆ. ಅಲ್ಲದೇ ಸರ್ಕಾರದಿಂದ ಮಂಜೂರಾತಿ ಪಡೆದು ಇಲಾಖೆಯ ಒಟ್ಟು ಪ್ರೀಮಿಯಂ ಮೊತ್ತವನ್ನು ವಿಮಾ ಕಂಪನಿಗೆ ಪಾವತಿಸುವವರೆಗೆ ಈಗಾಗಲೇ ಉದ್ಬವಿಸಿದ ಅಥವಾ ಉದ್ಬವಿಸುವ ಪ್ರಕರಣಗಳಲ್ಲಿ ಈ ಮೊತ್ತವನ್ನು ವಿಮಾ ಕಂಪನಿಯಿಂದ ಭರಿಸಲು ಸಾಧ್ಯವಾಗುವುದಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ವಾದವನ್ನು ಮಂಡಿಸಿದ್ದಾರೆ.
‘ಪೊಲೀಸ್ ಇಲಾಖೆಯಲ್ಲಿ ಪ್ರಸ್ತುತ ಅನುಸರಿಸುತ್ತಿರುವ ವಿಧಾನದಂತೆ ಸಂಬಂಧಿಸಿದ ವಿಮಾ ಕಂಪನಿಗೇ ಅತೀ ಹೆಚ್ಚಿನ ಮೊತ್ತವನ್ನು ಪಾವತಿಸುವ ಬದಲಾಗಿ ಅರಣ್ಯ ಇಲಾಖೆಯಲ್ಲಿ ಇಂತಹ ಪ್ರಕರಣಗಳಲ್ಲಿ ಪ್ರಸ್ತುತ ಪಾವತಿಸುತ್ತಿರುವ ಅನುಗ್ರಹ ಪೂರ್ವಕ ಮೊತ್ತದ ಮಾದರಿಯಲ್ಲಿಯೇ ಅದೇ ಲೆಕ್ಕ ಶೀರ್ಷಿಕೆಯಡಿಯ ವಿಸೇಷ ಅನುಗ್ರಹ ಪೂರ್ವಕ ಮೊತ್ತದ ರೂಪದಲ್ಲಿ ಬಿಡುಗಡೆ ಮಾಡುವುದು ಸೂಕ್ತ,’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಪ್ರತಿಪಾದಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
2019-20ರಲ್ಲಿ 87, 684 ಮಂದಿ ಅಧಿಕಾರಿ, ಸಿಬ್ಬಂದಿಗಳಿಗೆ ಒಬ್ಬ ವ್ಯಕ್ತಿಗೆ 20.00 ಲಕ್ಷ ರು.ನಂತೆ ವಾರ್ಷಿಕ ವಿಮಾ ಮೊತ್ತವನ್ನು ನಿಗದಿಪಡಿಸಿದೆ. ಇದರ ಪ್ರಕಾರ ಒಬ್ಬ ವ್ಯಕ್ತಿಗೆ 840 ರು., ಸೇವಾ ತೆರಿಗೆ ಶೇ.18ರಂತೆ 151.20 ರು. ಸೇರಿ ಒಟ್ಟು 991 ರು. ನಂತೆ ಸಿಬ್ಬಂದಿಗಳಿಗೆ ಸೇವಾ ತೆರಿಗೆ ಸೇರಿ ವಾರ್ಷಿಕವಾಗಿ 8,69,12,381 ರು. ಆಗಲಿದೆ. ಅದೇ ರೀತಿ 2020-21ರಲ್ಲಿ 90,684 ಅಧಿಕಾರಿ, ಸಿಬ್ಬಂದಿಗಳಿಗೆ 991 ರು. ನಂತೆ ಒಟ್ಟಾರೆ 8,98,85,981 ರು., 2021-22ರಲ್ಲಿ 93,684 ಅಧಿಕಾರಿ, ಸಿಬ್ಬಂದಿಗಳಿಗೆ 991 ರು.ನಂತೆ 9,28,59,281 ರು. ವೆಚ್ಚವಾಗಲಿದೆ ಎಂದು ತಿಳಿದು ಬಂದಿದೆ.
ಪೊಲೀಸ್ ಇಲಾಖೆಯಲ್ಲಿ ಜಾರಿಯಲ್ಲಿರುವ ವಿಶೇಷ ಗುಂಪು ವಿಮಾ ಯೋಜನೆಯನ್ನು ಅರಣ್ಯ ಇಲಾಖೆಯಲ್ಲಿ ಜಾರಿಗೊಳಿಸಿದರೆ ವಿಮಾ ಕಂಪನಿಗೇ ಪ್ರತಿ ವರ್ಷ 1.93 ಕೋಟಿ ರು.ಗಳನ್ನು ವಿಮಾ ಕಂಪನಿಗೇ ವಿಮಾ ಪ್ರೀಮಿಯಂ ಆಗಿ ಪಾವತಿಸಬೇಕಾಗುತ್ತದೆ.
‘ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಣ್ಯ ರಕ್ಷ, ವೀಕ್ಷಕ, ಕಾವಲುಗಾರ, ಉಪ ವಲಯ ಅರಣ್ಯಾಧಿಕಾರಿ ಹಾಗೂ ವಲಯ ಅರಣ್ಯಾಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಮರಣ ಹೊಂದುವ ಪ್ರಕರಣಗಳು ಒಂದು ವರ್ಷಕ್ಕೆ ಅಂದಾಜು 1ರಿಂದ 3 ಪ್ರಕರಣಗಳು ಉದ್ಭವಿಸುವ ಸಂಭವವಿದೆ. ಅದೇ ರೀತಿ ಒಂದು ವರ್ಷಕ್ಕೆ ಕ್ಷೇಮಾಭಿವೃದ್ಧಿ ಹಾಗೂ ಹಂಗಾಮಿ ನೌಕರರ ಮರಣ ಹೊಂದುವ ಪ್ರಕರಣಗಳು ಅಂದಾಜು 2ರಿಂದ 4 ಪ್ರಕರಣಗಳು ಉದ್ಬವಿಸುವ ಸಂಭವವಿರುತ್ತದೆ.
ಗೃಹ ಇಲಾಖೆಯ ಮಾದರಿಯಲ್ಲಿ ಅನುಸರಿಸುವ ವಿಧಾನವನ್ನು ಪರಿಗಣಿಸಿದರೆ ಅರಣ್ಯ ಇಲಾಖೆಯಲ್ಲಿನ ಪ್ರಕರಣಗಳಲ್ಲಿ ಸರ್ಕಾರವು ವಿಮಾ ಕಂಪನಿಗೆ ಪ್ರತಿ ವರ್ಷ ಅಂದಾಜು 193.00 ಲಕ್ಷ ರು.ಗಳನ್ನು ವಿಮಾ ಪ್ರೀಮಿಯಂ ಆಗಿ ಪಾವತಿಸಬೇಕಾಗಿರುತ್ತದೆ,’ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ಮೇಲಾಧಿಕಾರಿಗಳಿಗೆ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.