ಎತ್ತಿನಹೊಳೆ; ಅರಣ್ಯ ಪ್ರದೇಶ ಒತ್ತುವರಿ ಮಾಡಿರುವ ರೈತರಿಂದಲೂ ಪರಿಹಾರಕ್ಕೆ ಬೇಡಿಕೆ

ಬೆಂಗಳೂರು; ಎತ್ತಿನಹೊಳೆ ನಾಲೆ ಹಾದು ಹೋಗುವ ಬೇಲೂರು ತಾಲೂಕಿನ ಐದಳ್ಳ ಅರಣ್ಯ ಪ್ರದೇಶದಲ್ಲಿ ಒತ್ತುವರಿ ಮಾಡಿರುವ ರೈತರು, ಎತ್ತಿನಹೊಳೆ ನಾಲೆ ಹೋಗುತ್ತಿರುವುದಕ್ಕೂ ಪರಿಹಾರಕ್ಕೆ ಬೇಡಿಕೆ ಇರಿಸಿದ್ದಾರೆ. ಅಲ್ಲದೇ ಅರಣ್ಯ ಇಲಾಖೆಗೆ ಸೇರಿದ ಭೂಮಿಯನ್ನು ಕಂದಾಯ ಇಲಾಖೆಯು ಮಂಜೂರು ಮಾಡುತ್ತಿದೆ ಎಂಬುದು ಇದೀಗ ಬಹಿರಂಗವಾಗಿದೆ.

 

ಎತ್ತಿನಹೊಳೆ ಯೋಜನೆ ಸಂಬಂಧ ಜಲಸಂಪನ್ಮೂಲ ಇಲಾಖೆಯು 2023ರ ಅಕ್ಟೋಬರ್‌ 4ರಂದು ನಡೆಸುತ್ತಿರುವ ಸಭೆಗೆ ಹಾಸನ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರು ಮಂಡಿಸಿರುವ ವಿವರಣೆ ಪಟ್ಟಿಯಲ್ಲಿ ಈ ಅಂಶವೂ ಇದೆ. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರು ಮಂಡಿಸಿರುವ ವಿವರಣಾತ್ಮಕ ಟಿಪ್ಪಣಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಜಲ ಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್‌ ಅವರು ಇತ್ತೀಚೆಗಷ್ಟೇ ಎತ್ತಿನಹೊಳೆ ಯೋಜನೆ ಕುರಿತು ಪ್ರಗತಿ ಪರಿಶೀಲನೆ ಸಭೆ ನಡೆಸಿದ್ದರು. ಈ ವೇಳೆ ಅರಣ್ಯ ಇಲಾಖೆಗೆ ಸೇರಿದ ಪ್ರದೇಶವನ್ನು ಒತ್ತುವರಿ ಮಾಡಿರುವ ರೈತರು ಹೆಚ್ಚಿನ ಪರಿಹಾರ ಕೇಳುತ್ತಿರುವ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದರು. ಅಲ್ಲದೇ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರೊಂದಿಗೆ ಈ ಸಂಬಂಧ ಸಮಾಲೋಚನೆ ನಡೆಸಿದ್ದರು ಎಂಬುದು ಗೊತ್ತಾಗಿದೆ. ಈ ಬೆಳವಣಿಗೆಗಳ  ನಡುವೆಯೇ ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ಇಲಾಖೆಗೆ ಸಲ್ಲಿಸಿರುವ  ವಿವರಣಾತ್ಮಕ ಟಿಪ್ಪಣಿಯು ಮುನ್ನೆಲೆಗೆ ಬಂದಿದೆ.

 

ಎತ್ತಿನ ಹೊಳೆಯು ಹಾದು ಹೋಗುವ ಗುರತ್ವಾ ಕಾಲುವೆ ಸರಪಳಿ ಕಿ ಮೀ 46.088ರಿಂದ ಸರಪಳಿ 55.00 ಕಿ ಮೀ ವರೆಗಿನ ಕಾಮಗಾರಿಯಲ್ಲಿ ಬರುವ ಅರಣ್ಯ ಪ್ರದೇಶದ ತೀರುವಳಿ ಸಂಬಂಧ ಎದುರಾಗಿರುವ ಕಗ್ಗಂಟುಗಳ ಕುರಿತಾಗಿಯೂ ಟಿಪ್ಪಣಿಯಲ್ಲಿ ವಿವರಿಸಲಾಗಿದೆ.

 

ಎತ್ತಿನಹೊಳೆ ಯೋಜನೆ ನಾಲೆಯು ಐದಳ್ಳ ಅರಣ್ಯ ಪ್ರದೇಶದಲ್ಲಿ ಹಾದು ಹೋಗುತ್ತಿದೆ. ಈ ಅರಣ್ಯ ಪ್ರದೇಶದಲ್ಲಿ ಸಾಣೇನಹಳ್ಳಿ, ಗಂಗೂರು, ಹೊಸಹಳ್ಳಿ, ಚಟ್ಟನಹಳ್ಳಿ ಸೇರಿದಂತೆ ಗಡಿ ಗ್ರಾಮಗಳ ರೈತರು, ನಾಲೆಯು ಹಾದು ಹೋಗುತ್ತಿರುವ ಅರಣ್ಯ ಪ್ರದೇಶದಲ್ಲಿ ಈ ಹಿಂದೆಯೇ ಒತ್ತುವರಿ ಮಾಡಿದ್ದಾರೆ.

 

ಒತ್ತುವರಿ ಮಾಡಿಕೊಂಡಿರುವ ಅರಣ್ಯ ಪ್ರದೇಶಕ್ಕೆ ಕಂದಾಯ ಇಲಾಖೆಯಿಂದಲೇ ಮಂಜೂರಾತಿ ಪಡೆದು ಬೆಳೆ ಬೆಳೆಯುತ್ತಿದ್ದಾರೆ. ‘ ಆದರೆ ಈ ಪ್ರದೇಶವು ಅರಣ್ಯ ಪ್ರದೇಶವಾಗಿರುತ್ತದೆ. ಅದರಂತೆ ರೈತರು ಸಹ ಈ ಪ್ರದೇಶದಲ್ಲಿ ಎತ್ತಿನ ಹೊಳೆ ನಾಲೆ ಹೋಗುತ್ತಿರುವುದಕ್ಕೆ ಪರಿಹಾರ ಕೇಳುತ್ತಿರುವುದು ಕಂಡು ಬರುತ್ತಿದೆ,’ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರು ವಿವರಣಾತ್ಮಕ ಟಿಪ್ಪಣಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

ಅಲ್ಲದೇ ಈ ಕಾಮಗಾರಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ನಡುವೆ ದಾಖಲಾತಿಗಳ ವ್ಯತ್ಯಾಸವಿದೆ. ಅರಣ್ಯ ಭೂಮಿಯನ್ನು ಕಂದಾಯ ಇಲಾಖೆಯವರು ಅನಧಿಕೃತವಾಗಿ ಮಂಜೂರು ಮಾಡಿದ್ದಾರೆ ಎಂದೂ ಟಿಪ್ಪಣಿಯಲ್ಲಿ ಬಹಿರಂಗಪಡಿಸಿದ್ದಾರೆ.

 

ಎತ್ತಿನಹೊಳೆ ಯೋಜನೆಯ ಮೊದಲನೇ ಹಂತದ ಏತ ಕಾಮಗಾರಿಗಳನ್ನು ಪ್ಯಾಕೇಜ್‌ಗಳನ್ನಾಸಿದೆ. ಇದಕ್ಕೆ ಸಂಬಂಧಿಸಿದ ವಿದ್ಯುತ್‌ ಕಾಮಗಾರಿಗಳನ್ನು 2 ಪ್ಯಾಕೇಜ್‌ಗಳನ್ನು ವಿಂಗಡಿಸಿ ಒಟ್ಟು 7 ಪ್ಯಾಕೇಜ್‌ಗಳಿಗೆ 4,115.06 ಕೋಟಿ ರು.ಗಳಿಗೆ ಟರ್ನ್‌ ಕೀ ಆಧಾರದ ಮೇಲೆ ಗುತ್ತಿಗೆ ವಹಿಸಿದೆ. ಜುಲೈ 2023ರ ಅಂತ್ಯಕ್ಕೆ 3,633.15 ಕೋಟಿ ರು ವೆಚ್ಚವಾಗಿದೆ.

 

ಒಟ್ಟು 8 ವಿಯರ್‌ ಮತ್ತು 9 ಪಂಪ್‌ ಹೌಸ್‌ ಕಾಮಗಾರಿಗಳು ಪೂರ್ಣಗೊಂಡಿವೆ. 126.80 ಕಿ ಮೀ ಉದ್ದದ ಏರು ಕೊಳವೆಯ ಪೈಕಿ ಇಲ್ಲಿಯವರೆಗೆ 125.88 ಕಿ ಮೀ ಏರು ಕೊಳವೆ ಕಾಮಗಾರಿಯು ಪೂರ್ಣಗೊಂಡಿದೆ. ಬಾಕಿ 0.92 ಕಿ ಮೀ ಉದ್ದದ ಪೈಪ್‌ಲೈನ್‌ ಕಾಮಗಾರಿ ಸಂಬಂಧ ಭೂ ಸ್ವಾಧೀನ ಪ್ರಕ್ರಿಯೆ ಶೀಘ್ರವೇ ಮುಗಿಸಿ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ವಿವರಣೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಎತ್ತಿನಹೊಳೆ; ಹತ್ತು ವರ್ಷದಲ್ಲಿ 10,783 ಕೋಟಿ ಖರ್ಚು, ಯೋಜನಾ ವೆಚ್ಚ 33 ಸಾವಿರ ಕೋಟಿಗೆ ಪರಿಷ್ಕೃತ?

 

ಎರಡನೇ ಹಂತದ ಕಾಮಗಾರಿಗಳನ್ನು 47 ಪ್ಯಾಕೇಜ್‌ಗಳನ್ನಾಗಿ ವಿಂಗಡಿಸಿ 18,084 ಕೋಟಿ ರು. ಮೊತ್ತದಲ್ಲಿ ಗುತ್ತಿಗೆ ವಹಿಸಲಾಗಿದೆ. ಇಲ್ಲಿಯವರೆಗೆ 8,636.80 ಕೋಟಿ ರು. ವೆಚ್ಚವಾಗಿದೆ. ಸಕಲೇಶಪುರ ತಾಲೂಕಿನ ಹರವನಹಳ್ಳಿ ಹತ್ತಿರ ಇರುವ ವಿತರಣಾ ತೊಟ್ಟಿ -04ರಿಂದ ಆರಂಭವಾಗುವ 261.69 ಕಿ ಮೀ ಉದ್ದದ ಗುರತ್ವಾ ಕಾಲುವೆಯು ಆಲೂರು, ಬೇಲೂರು, ಅರಸೀಕೆರೆ, ತಿಪಟೂರು,ಚಿಕ್ಕನಾಯಕನಹಳ್ಳಿ, ಗುಬ್ಬಿ, ತುಮಕೂರು ಗ್ರಾಮಾಂತರ, ಕೊರಟಗೆರೆ ಮತ್ತು ದೊಡ್ಡಬಳ್ಳಾಪುರ ತಾಲೂಕುಗಳಲ್ಲಿ ಹಾದು ಹೋಗಲಿದೆ.

 

ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಿರ್ಮಾಣವಾಗಲಿರುವ 1.88 ಟಿಎಂಸಿ ಸಾಮರ್ಥ್ಯದ ಲಕ್ಕೇನಹಳ್ಳಿ ಸಮತೋಲನ ಜಲಾಶಯಕ್ಕೆ ನೀರನ್ನು ಪೂರೈಸಲಾಗುತ್ತದೆ ಎಂದು ವಿವರಿಸಿದೆ.

 

ಎತ್ತಿನಹೊಳೆ ಯೋಜನೆಗಾಗಿ ಒಟ್ಟಾರೆ 9.023 ಎಕರೆ ಮತ್ತು 26 ಗುಂಟೆ ಜಮೀನಿನ ಅವಶ್ಯಕತೆ ಇದೆ. ಈವರೆಗೂ 5,454 ಎಕರೆ 15 ಗುಂಟೆ ಭೂ ಸ್ವಾಧೀನವಾಗಿದೆ. ಬಾಕಿ ಜಮೀನಿನ ಭೂ ಸ್ವಾಧೀನ ಪ್ರಕ್ರಿಯೆಯು ವಿವಿಧ ಹಂತಗಳಲ್ಲಿ ಇನ್ನೂ ಪ್ರಗತಿಯಲ್ಲಿದೆ. ಇಲ್ಲಿಯವರೆಗೆ ಭೂ ಸ್ವಾಧೀನಕ್ಕಾಗಿ 1,212.86 ಕೋಟಿ ರು. ವೆಚ್ಚವಾಗಿದೆ. ಈ ಯೋಜನೆಗಾಗಿ ಜುಲೈ 2023ರ ಅಂತ್ಯಕ್ಕೆ ಒಟ್ಟಾರೆ 14,076.15 ಕೋಟಿ ರು.ಸಂಚಿತ ವೆಚ್ಚವಾಗಿದೆ ಎಂದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts