ಲಂಚದ ಆರೋಪಕ್ಕೆ ಗುರಿಯಾಗಿದ್ದ ಡಾ ನಾರಾಯಣ್‌ ವಿರುದ್ಧ ಕ್ರಮವಿಲ್ಲ, ಚುನಾವಣೆ ಕರ್ತವ್ಯ ನಿಭಾಯಿಸದ್ದಕ್ಕೆ ಅಮಾನತು

ಬೆಂಗಳೂರು;  ‘108’ ಆರೋಗ್ಯ ಕವಚದ ತುರ್ತು ಆಂಬ್ಯುಲೆನ್ಸ್ ಸೇವೆ ಒದಗಿಸುವ ಟೆಂಡರ್‌  ನೀಡುವ ಪ್ರಕ್ರಿಯೆಯಲ್ಲಿ ಕೋಟ್ಯಂತರ ರುಪಾಯಿ ಲಂಚದ ವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ  ಸಲ್ಲಿಸಿದ್ದ ದೂರಿನಲ್ಲಿ ನಾಲ್ಕನೇ ಪ್ರತಿವಾದಿ  ಡಾ ನಾರಾಯಣ್‌ ಅವರ ವಿರುದ್ಧದ ದೂರಿನ ಕುರಿತಾಗಿ  ಮೂರು ತಿಂಗಳಿನಿಂದಲೂ ಯಾವುದೇ ಕ್ರಮ ಕೈಗೊಳ್ಳದೇ ಲೋಕಾಯುಕ್ತ ಸಂಸ್ಥೆಯು ವಿಳಂಬ ಧೋರಣೆ ಪ್ರದರ್ಶಿಸಿರುವ ಬೆನ್ನಲ್ಲೇ ಬೇರೊಂದು ಪ್ರಕರಣದಲ್ಲಿ ಡಾ ನಾರಾಯಣ್‌ ಅವರನ್ನು ಅಮಾನತುಗೊಳಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಆದೇಶ ಹೊರಡಿಸಿದೆ.

 

ಆರೋಗ್ಯ ಕವಚ ಯೋಜನೆಯಡಿಯಲ್ಲಿ ಆಂಬ್ಯುಲೆನ್ಸ್‌ ವಾಹನಗಳ ಖರೀದಿಗೆ ಸಂಬಂಧಿಸಿದಂತೆ ಅಕ್ರಮ, ಅವ್ಯವಹಾರಗಳು ನಡೆದಿವೆ ಎಂದು ವಿಧಾನಪರಿಷತ್‌ನ ಮಾಜಿ ಸದಸ್ಯ ರಮೇಶ್‌ಬಾಬು ಅವರು ಲೋಕಾಯುಕ್ತಕ್ಕೆ 2023ರ ಮೇ 9ರಂದೇ ದೂರು ದಾಖಲಿಸಿದ್ದರು. ಆದರೆ ಈ ದೂರು ಜುಲೈ 24ರ ಅಂತ್ಯಕ್ಕೆ ಇದ್ದಲ್ಲೇ ಇದೆ. ವಿಚಾರಣಾಧಿಕಾರಿ (11) ಬಳಿ ಕಳೆದ ಮೂರು ತಿಂಗಳಿನಿಂದಲೂ ಇದೆಯೇ ವಿನಃ ದೂರಿನ ಕುರಿತು ಯಾವೊಬ್ಬ ಪ್ರತಿವಾದಿಗೂ ನೋಟೀಸ್‌ ಜಾರಿಗೊಳಿಸಿಲ್ಲ.

 

ಇದೇ ದೂರಿನಲ್ಲಿ ನಾಲ್ಕನೇ ಪ್ರತಿವಾದಿಯಾಗಿರುವ ಡಾ ನಾರಾಯಣ್‌ ಅವರನ್ನು ಚುನಾವಣೆ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರಲಿಲ್ಲ ಎಂಬ ಕಾರಣವನ್ನು ಮುಂದೊಡ್ಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅವರನ್ನು  ಅಮಾನತುಗೊಳಿಸಿ ಆದೇಶಿಸಿದೆ. ಈ ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಸ್ಥಳ ನಿರೀಕ್ಷೆಯಣೆಯಲ್ಲಿದ್ದ ಡಾ ನಾರಾಯಣ್‌ ಅವರಿಗೆ ಸ್ಥಳ ನಿಯುಕ್ತಿಗೊಳಿಸುವ ಸಂಬಂಧ 2023ರ ಮಾರ್ಚ್‌ 21ರಂದು ಸಮಾಲೋಚನೆಗೆ ಹಾಜರಾಗಲು ಸೂಚನಾ ಪತ್ರ ನೀಡಲಾಗಿತ್ತು. ಆದರೆ ಡಾ ನಾರಾಯಣ್‌ ಅವರು ಆ ದಿನದಂದು ಹಾಜರಾಗಿರಲಿಲ್ಲ. ಹೀಗಾಗಿ 2023ರ ಮೇ 16ರಂದು  ನಿಗದಿಯಾಗಿದ್ದ  ಸಮಾಲೋಚನೆಗೂ ಅವರು ಹಾಜರಾಗಿರಲಿಲ್ಲ. ಆದರೆ ಆ ದಿನಾಂಕದಂದೂ ಗೈರು ಹಾಜರಾಗಿದ್ದರು.

 

ಸಾರ್ವತ್ರಿಕ ಚುನಾವಣೆ ನೀತಿ ಸಂಹಿತೆ ಜಾರಿಯಾದ ಕಾರಣ ಯಾವುದೇ ಸ್ಥಳ ನಿಯುಕ್ತಿ ಆದೇಶಗಳನ್ನು ಹೊರಡಿಸಲು ನಿರ್ಬಂಧವಿದ್ದ ಕಾರಣ ಸಮಾಲೋಚನೆಯನ್ನು ಮುಂದೂಡಿ ಬಿಬಿಎಂಪಿ (ಚುನಾವಣೆ) ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಲಾಗಿತ್ತ. ಆದರೆ ಅಲ್ಲಿಯೂ ಚುನಾವಣಾ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರಲಿಲ್ಲ. ಹೀಗಾಗಿ ಇದೊಂದು ಕರ್ತವ್ಯಲೋಪ ಎಂದು ಪರಿಗಣಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಡಾ ನಾರಾಯಣ್‌ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

 

ಆದರೆ ಇದಕ್ಕಿಂತಲೂ ಬಹುದೊಡ್ಡ ಆರೋಪಕ್ಕೆ ಗುರಿಯಾಗಿ ಲೋಕಾಯುಕ್ತದಲ್ಲಿ ದಾಖಲಾಗಿರುವ ದೂರಿನಲ್ಲಿ ನಾಲ್ಕನೆ ಪ್ರತಿವಾದಿಯಾಗಿದ್ದರೂ ಸಹ ಡಾ ನಾರಾಯಣ್‌ ಅವರ ವಿರುದ್ಧ ಈಗಿನ ಕಾಂಗ್ರೆಸ್‌ ಸರ್ಕಾರವು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇಲಾಖೆಗೆ ದಿನೇಶ್‌ ಗುಂಡೂರಾವ್‌ ಅವರು ಸಚಿವರಾದ ನಂತರವೂ ಸಹ ಈ ಬಗ್ಗೆ ಮೌನ ವಹಿಸಿದ್ದರು.

 

ಕರ್ನಾಟಕ ವಿಧಾನಸಭೆಗೆ ನಡೆಯಲಿರುವ ಚುನಾವಣೆಗೆ ಇನ್ನು ಐದೇ ಐದು ದಿನಗಳು ಬಾಕಿ ಇರುವಾಗಲೇ ಶೈಕ್ಷಣಿಕ ಹಿನ್ನೆಲೆ ಹೊಂದಿರುವ ಖಾಸಗಿ ಕಂಪನಿಯೊಂದರಿಂದ ದೊಡ್ಡ ಮೊತ್ತದ ಲಂಚ ನೀಡಲಾಗಿದೆ ಎಂದು  ಇಲಾಖೆಗೆ ಸಲ್ಲಿಕೆಯಾಗಿರುವ ದೂರು ಕೂಡ  ಮುನ್ನೆಲೆಗೆ ಬಂದಿತ್ತು. ಈ ಪ್ರಕ್ರಿಯೆಯಲ್ಲಿ ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ಪ್ರಭಾವಿ ಸಚಿವರೊಬ್ಬರು ಭಾಗಿಯಾಗಿದ್ದಾರೆ ಎಂಬ ಆಪಾದನೆಯೂ ಕೇಳಿ ಬಂದಿತ್ತು.

 

 

ಅಲ್ಲದೇ ಸಚಿವರೊಬ್ಬರಿಗೆ 100 ಕೋಟಿ ರು., ಇಲಾಖೆಯ ಉನ್ನತ ಅಧಿಕಾರಿಗಳಿಗೆ 10 ಕೋಟಿ, ಉಪ ನಿರ್ದೇಶಕರೊಬ್ಬರಿಗೆ 10 ಕೋಟಿ ಮತ್ತು ಸಮಿತಿಯ ಸದಸ್ಯರುಗಳಿಗೂ 1 ಕೋಟಿ ಲಂಚ ನೀಡಲಾಗಿದೆ. ಲಂಚದ ಹಣವನ್ನು ಪಡೆಯುವಾಗ ಉಪ ನಿರ್ದೇಶಕರೊಬ್ಬರು ಸಿಕ್ಕಿಬಿದ್ದಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿತ್ತಲ್ಲದೆ ಹಣವನ್ನು ಪಡೆದು ಬ್ಯಾಗ್‌ನಲ್ಲಿ ಇರಿಸುತ್ತಿರುವ ಫೋಟೋಗಳನ್ನೂ ದೂರಿನಲ್ಲಿ ಲಗತ್ತಿಸಲಾಗಿದೆ ಎಂದು ತಿಳಿದು ಬಂದಿತ್ತು.

 

ಆರೋಗ್ಯಕವಚ ಟೆಂಡರ್‍‌ನಲ್ಲಿ ಭಾರೀ ಅಕ್ರಮ; ‘ದಿ ಫೈಲ್‌’ ವರದಿ ಬೆನ್ನಲ್ಲೇ ಫೋಟೋ ಸಹಿತ ಲೋಕಾಯುಕ್ತಕ್ಕೆ ದೂರು

 

ಸದಾಶಿವನಗರದಲ್ಲಿರುವ ಸಚಿವರೊಬ್ಬರ ನಿವಾಸದ ನೆಲಮಹಡಿಯ ಕೊಠಡಿಯಲ್ಲಿ ಲಂಚದ ಹಣವನ್ನು ಖಾಸಗಿ ಕಂಪನಿಯೊಂದರಿಂದ ಉಪ ನಿರ್ದೇಶಕರೊಬ್ಬರು ಸ್ವೀಕರಿಸಿದ್ದಾರೆ ಎಂದೂ ದೂರಿನಲ್ಲಿ ಹೇಳಲಾಗಿತ್ತು.

 

ತುರ್ತು ವೈದ್ಯಕೀಯ ಪ್ರತಿಕ್ರಿಯೆ ಸೇವೆ 108- ಆರೋಗ್ಯ ಕವಚ ಸೇವೆಯಡಿ ರಾಜ್ಯದಲ್ಲಿರುವ ಅಂದಾಜು 7 ಕೋಟಿ ಜನಸಂಖ್ಯೆಗೆ ತಕ್ಕಂತೆ ಇನ್ನೂ 290 ಆಂಬುಲೆನ್ಸ್‌ಗಳು ಅವಶ್ಯಕತೆ ಇದ್ದರೂ ಕೇವಲ 40 ಆಂಬುಲೆನ್ಸ್‌ಗಳನ್ನು ಖರೀದಿಸಲು ಸಹಮತಿ ವ್ಯಕ್ತಪಡಿಸಿದ್ದ ಆರ್ಥಿಕ ಇಲಾಖೆಯು ರಾಷ್ಟ್ರೀಯ ಆರೋಗ್ಯ ಅಭಿಯಾನದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ ಎಂಬ ಆರೋಪಕ್ಕೂ ಗುರಿಯಾಗಿತ್ತು.

 

ರಾಜ್ಯದಲ್ಲಿ 2014-15ನೇ ಸಾಲಿನಲ್ಲಿದ್ದ ಜನಸಂಖ್ಯೆ ಆಧಾರದ ಮೇಲೆ 2021-22ರವರೆಗೆ 710 ಅಂಬುಲೆನ್ಸ್‌ಗಳಿವೆ. ಆದರೆ ಕೇವಲ 489 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಅನುಮೋದಿತ ಸಂಖ್ಯೆ ಪ್ರಕಾರ ಇನ್ನೂ 221 ಆಂಬ್ಯುಲೆನ್ಸ್‌ಗಳು ಕಾರ್ಯನಿರ್ವಹಿಸಬೇಕಿತ್ತು. ಅನುಮೋದಿತ ಸಂಖ್ಯೆಗಿಂತಲೂ ಕಡಿಮೆ ಸಂಖ್ಯೆಯಲ್ಲಿ ಆಂಬ್ಯುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಅಂಬ್ಯುಲೆನ್ಸ್‌ಗಳ ಸಂಖ್ಯೆಯಲ್ಲಿ ಹೆಚ್ಚಳ ಮಾಡಲು ಅನುಮತಿ ನೀಡಬೇಕಿದ್ದ ಆರ್ಥಿಕ ಇಲಾಖೆಯು ಕೇವಲ 40 ಆಂಬ್ಯುಲೆನ್ಸ್‌ಗಳನ್ನು ಖರೀದಿಸಲು ಸಹಮತಿ ವ್ಯಕ್ತಪಡಿಸಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಮಾರ್ಗಸೂಚಿಗಳನ್ನು ಗಾಳಿಗೆ ತೂರಿತ್ತು.

 

ಪ್ರಸ್ತುತ 108 ಆರೋಗ್ಯ ಕವಚ ಸೇವೆಯಲ್ಲಿ ಒಟ್ಟು 710 ಆಂಬುಲೆನ್ಸ್‌ಗಳು ಸೇವೆ ಒದಗಿಸುತ್ತಿವೆ. ಈ ಸಂಖ್ಯೆಯನ್ನು 2014-15ನೇ ಸಾಲಿನ ಜನಸಂಖ್ಯೆ ಆಧಾರದ ಮೇಲೆ ನಿರ್ಧರಿಸಲಾಗಿತ್ತು. ಪ್ರಸ್ತುತ ಜನಸಂಖ್ಯೆ ಆಧಾರದ ಮೇಲೆ ರಾಷ್ಟ್ರೀಯ ಆರೋಗ್ಯ ಅಭಿಯಾನ ಮಾರ್ಗಸೂಚಿಗಳನ್ವಯ ಹಾಲಿ ಇರುವ 710 ಅಂಬ್ಯುಲೆನ್ಸ್‌ಗಳ ಸಂಖ್ಯೆಯನ್ನು 1,000ಕ್ಕೆ ಹೆಚ್ಚಿಸಬೇಕಾಗಿದೆ. ಅಲ್ಲದೆ ಈಗಿರುವ ಕರೆ ಕೇಂದ್ರದ ಆಸನ ಸಂಖ್ಯೆಯನ್ನು 54ರಿಂದ 75ಕ್ಕೆ ಹೆಚ್ಚಿಸಿ ಆಂಬ್ಯುಲೆನ್ಸ್‌ 108 ಸೇವೆಯನ್ನು 1,698.44 ಕೋಟಿಗಳ ವೆಚ್ಚದಲ್ಲಿ 5 ವರ್ಷಗಳ ಅವಧಿಗೆ ಪಡೆಯಲು ಅರ್ಹ ಸೇವಾದಾರರನ್ನು ಆಯ್ಕೆ ಮಾಡಬೇಕಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪ್ರಸ್ತಾವನೆ ಸಲ್ಲಿಸಿತ್ತು.

 

ಈ ಪ್ರಸ್ತಾವನೆಯನ್ನು ಪರಿಶೀಲಿಸಿರುವ ಆರ್ಥಿಕ ಇಲಾಖೆಯು ‘ ಆಡಳಿತ ಇಲಾಖೆಯ ಪ್ರಸ್ತಾವನೆಗೆ ಸಂಬಂಧಿಸಿದಂತೆ 108- ಆಂಬ್ಯುಲೆನ್ಸ್‌ ಸಂಖ್ಯೆಯನ್ನು 750 ಗಳಿಗೆ ಸೀಮಿತಗೊಳಿಸಿ ಹಾಗೂ 54 ಕರೆ ಕೇಂದ್ರದ ಆಸನ ಸಂಖ್ಯೆಯನ್ನು ಪ್ರಸ್ತಾಪಿಸಿದಂತೆ 75ಕ್ಕೆ ಹೆಚ್ಚಿಸಿ 1,260 ಕೋಟಿಗಳ ವೆಚ್ಚದಲ್ಲಿ 5 ವರ್ಷಗಳ ಅವಧಿಗೆ ಸೇವೆಯನ್ನು ಟೆಂಡರ್ ಮೂಲಕ ಪಡೆಯಲು ಸಹಮತಿಸಿದೆ,’ ಎಂದು 2021ರ ಡಿಸೆಂಬರ್‌ 7ರಂದು ಆರ್ಥಿಕ ಇಲಾಖೆಯು ಆರೋಗ್ಯ ಇಲಾಖೆಗೆ ತಿಳಿಸಿತ್ತು. ಈ ಕುರಿತು ‘ದಿ ಫೈಲ್‌’ ವರದಿಯನ್ನು ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

 

ಆಂಬ್ಯುಲೆನ್ಸ್‌ ಸಂಖ್ಯೆ ಹೆಚ್ಚಳಕ್ಕೆ ಕೊಕ್ಕೆ; ರಾಷ್ಟ್ರೀಯ ಆರೋಗ್ಯ ಅಭಿಯಾನದ ಮಾರ್ಗಸೂಚಿ ಉಲ್ಲಂಘನೆ

 

ಪ್ರಸಕ್ತ ಸಾಲಿನಲ್ಲಿರುವ ಅಂದಾಜು 7 ಕೋಟಿ ಜನಸಂಖ್ಯೆಗೆ ತಕ್ಕಂತೆ 1,000 ಅಂಬುಲೆನ್ಸ್‌ಗಳಿರಬೇಕು. ಈ ಸಂಖ್ಯೆಯನ್ನು ಹೆಚ್ಚಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಲ್ಲಿಸಿದ್ದ ಪ್ರಸ್ತಾವನೆ ಪೈಕಿ ಕೇವಲ 40 ಆಂಬುಲೆನ್ಸ್‌ಗಳನ್ನು ಹೆಚ್ಚಿಸಲು ಅನುಮತಿ ನೀಡಿರುವ ಆರ್ಥಿಕ ಇಲಾಖೆಯು ಇನ್ನು 250 ಅಂಬುಲೆನ್ಸ್‌ಗಳ ಖರೀದಿಗೆ ಅನುಮತಿ ನೀಡದಿರುವುದು ರಾಷ್ಟ್ರೀಯ ಆರೋಗ್ಯ ಅಭಿಯಾನದ ಮಾರ್ಗಸೂಚಿಗಳ ನೇರ ಉಲ್ಲಂಘನೆಯಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳುತ್ತಾರೆ.

 

ಅಲ್ಲದೆ ಪ್ರಸಕ್ತ 710 ಆಂಬ್ಯುಲೆನ್ಸ್‌ಗಳಿಗೆ ಎದುರಾಗಿ 489 ಆಂಬ್ಯುಲೆನ್ಸ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. 1,350 ಇಎಂಟಿ ಮತ್ತು ಪೈಲಟ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. 2020-21ನೇ ಸಾಲಿನಲ್ಲಿ 108 ಆಂಬ್ಯುಲೆನ್ಸ್‌ ಸೇವೆಗಾಗಿ ಒದಗಿಸಿದ ಮೊತ್ತದಲ್ಲಿ 86.31 ಕೋಟಿ ಮಾತ್ರ ವೆಚ್ಚವಾಗಿದೆ. ಇದು ಅಂದಾಜು ಮೊತ್ತದ ಶೇ.50ರಷ್ಟು ಮಾತ್ರ ವೆಚ್ಚವಾಗಿದೆ ಎಂಬುದು ಆರ್ಥಿಕ ಇಲಾಖೆಯ ಪತ್ರದಿಂದ ಗೊತ್ತಾಗಿದೆ.

the fil favicon

SUPPORT THE FILE

Latest News

Related Posts