ಆಂಬ್ಯುಲೆನ್ಸ್‌ ಸಂಖ್ಯೆ ಹೆಚ್ಚಳಕ್ಕೆ ಕೊಕ್ಕೆ; ರಾಷ್ಟ್ರೀಯ ಆರೋಗ್ಯ ಅಭಿಯಾನದ ಮಾರ್ಗಸೂಚಿ ಉಲ್ಲಂಘನೆ

ಬೆಂಗಳೂರು; ತುರ್ತು ವೈದ್ಯಕೀಯ ಪ್ರತಿಕ್ರಿಯೆ ಸೇವೆ 108- ಆರೋಗ್ಯ ಕವಚ ಸೇವೆಯಡಿ ರಾಜ್ಯದಲ್ಲಿರುವ ಅಂದಾಜು 7 ಕೋಟಿ ಜನಸಂಖ್ಯೆಗೆ ತಕ್ಕಂತೆ ಇನ್ನೂ 290 ಆಂಬುಲೆನ್ಸ್‌ಗಳು ಅವಶ್ಯಕತೆ ಇದ್ದರೂ ಕೇವಲ 40 ಆಂಬುಲೆನ್ಸ್‌ಗಳನ್ನು ಖರೀದಿಸಲು ಸಹಮತಿ ವ್ಯಕ್ತಪಡಿಸಿರುವ ಆರ್ಥಿಕ ಇಲಾಖೆಯು ರಾಷ್ಟ್ರೀಯ ಆರೋಗ್ಯ ಅಭಿಯಾನದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ.

ರಾಜ್ಯದಲ್ಲಿ 2014-15ನೇ ಸಾಲಿನಲ್ಲಿದ್ದ ಜನಸಂಖ್ಯೆ ಆಧಾರದ ಮೇಲೆ 2021-22ರವರೆಗೆ 710 ಅಂಬುಲೆನ್ಸ್‌ಗಳಿವೆ. ಆದರೆ ಕೇವಲ 489 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಅನುಮೋದಿತ ಸಂಖ್ಯೆ ಪ್ರಕಾರ ಇನ್ನೂ 221 ಆಂಬ್ಯುಲೆನ್ಸ್‌ಗಳು ಕಾರ್ಯನಿರ್ವಹಿಸಬೇಕಿತ್ತು. ಅನುಮೋದಿತ ಸಂಖ್ಯೆಗಿಂತಲೂ ಕಡಿಮೆ ಸಂಖ್ಯೆಯಲ್ಲಿ ಆಂಬ್ಯುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಅಂಬ್ಯುಲೆನ್ಸ್‌ಗಳ ಸಂಖ್ಯೆಯಲ್ಲಿ ಹೆಚ್ಚಳ ಮಾಡಲು ಅನುಮತಿ ನೀಡಬೇಕಿದ್ದ ಆರ್ಥಿಕ ಇಲಾಖೆಯು ಕೇವಲ 40 ಆಂಬ್ಯುಲೆನ್ಸ್‌ಗಳನ್ನು ಖರೀದಿಸಲು ಸಹಮತಿ ವ್ಯಕ್ತಪಡಿಸಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಮಾರ್ಗಸೂಚಿಗಳನ್ನು ಗಾಳಿಗೆ ತೂರಿದೆ.

108-ಆರೋಗ್ಯ ಕವಚ ಸೇವೆ ಒದಗಿಸುವ ಆಂಬುಲೆನ್ಸ್‌ಗಳ ಖರೀದಿ ಸಂಬಂಧ ಟೆಂಡರ್ ಪ್ರಕ್ರಿಯೆ ನಡೆಸುವ ಸಂಬಂಧ ರಾಜ್ಯ ಹೈಕೋರ್ಟ್‌ ನೀಡಿರುವ ಆದೇಶ ಪರಿಪಾಲನೆ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಚಿವ ಸಂಪುಟಕ್ಕೆ ಸಲ್ಲಿಸಿರುವ ಪ್ರಸ್ತಾವನೆ ಮತ್ತು ಈ ಸಂಬಂಧದ ಸಮಗ್ರ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

ಮಾರ್ಗಸೂಚಿಯಲ್ಲೇನಿದೆ?

ರಾಷ್ಟ್ರೀಯ ಆರೋಗ್ಯ ಅಭಿಯಾನದ ಮಾರ್ಗಸೂಚಿಗಳ ಪ್ರಕಾರ ರಾಜ್ಯದ ಒಂದು ಲಕ್ಷ ಜನಸಂಖ್ಯೆಗೆ ಒಂದು ಬಿಎಲ್‌ಎಸ್‌ ಆಂಬ್ಯುಲೆನ್ಸ್‌ ಮತ್ತು ಪ್ರತಿ ಐದು ಲಕ್ಷ ಜನಸಂಖ್ಯೆಗೆ ಒಂದು ಎಎಲ್‌ಎಸ್‌ ಆಂಬ್ಯುಲೆನ್ಸ್‌ ಒದಗಿಸಬೇಕು. ಹಾಗೆಯೇ ಯಾವುದೇ ಒಂದು ಆಂಬ್ಯಲೆನ್ಸ್‌ ದಿನದ 24 ಗಂಟೆಗಳಲ್ಲಿ ನಾಲ್ಕಕ್ಕಿಂತ ಹೆಚ್ಚಿನ ತುರ್ತು ಪ್ರಕರಣಗಳನ್ನು ಸಾಗಿಸಿದರೇ ಮತ್ತು ಯಾವುದೇ ಆಂಬ್ಯುಲೆನ್ಸ್‌ ದಿನದಲ್ಲಿದ 120 ಕಿ ಮೀ ಗಿಂತ ಹೆಚ್ಚಿನ ದೂರ ಕ್ರಮಿಸಿದ್ದಲ್ಲಿ ಅಂತಹ ಸ್ಥಳಗಳಿಗೆ ಮತ್ತೊಂದು ಆಂಬ್ಯುಲೆನ್ಸ್‌ ಒದಗಿಸಬೇಕು. ಈ ನಿಯಮಗಳ ಪ್ರಕಾರ ಸಾಕಷ್ಟು ಬದಲಿ ಆಂಬ್ಯುಲೆನ್ಸ್‌ ಅಗತ್ಯತೆ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಮರ್ಥಿಸಿಕೊಂಡಿರುವುದು ಪ್ರಸ್ತಾವನೆಯ ಪ್ರತಿಯಿಂದ ಗೊತ್ತಾಗಿದೆ.

ಪ್ರಸ್ತಾವನೆಯಲ್ಲೇನಿದೆ?

‘ಪ್ರಸ್ತುತ 108 ಆರೋಗ್ಯ ಕವಚ ಸೇವೆಯಲ್ಲಿ ಒಟ್ಟು 710 ಆಂಬುಲೆನ್ಸ್‌ಗಳು ಸೇವೆ ಒದಗಿಸುತ್ತಿವೆ. ಈ ಸಂಖ್ಯೆಯನ್ನು 2014-15ನೇ ಸಾಲಿನ ಜನಸಂಖ್ಯೆ ಆಧಾರದ ಮೇಲೆ ನಿರ್ಧರಿಸಲಾಗಿತ್ತು. ಪ್ರಸ್ತುತ ಜನಸಂಖ್ಯೆ ಆಧಾರದ ಮೇಲೆ ರಾಷ್ಟ್ರೀಯ ಆರೋಗ್ಯ ಅಭಿಯಾನ ಮಾರ್ಗಸೂಚಿಗಳನ್ವಯ ಹಾಲಿ ಇರುವ 710 ಅಂಬ್ಯುಲೆನ್ಸ್‌ಗಳ ಸಂಖ್ಯೆಯನ್ನು 1,000ಕ್ಕೆ ಹೆಚ್ಚಿಸಬೇಕಾಗಿದೆ. ಅಲ್ಲದೆ ಈಗಿರುವ ಕರೆ ಕೇಂದ್ರದ ಆಸನ ಸಂಖ್ಯೆಯನ್ನು 54ರಿಂದ 75ಕ್ಕೆ ಹೆಚ್ಚಿಸಿ ಆಂಬ್ಯುಲೆನ್ಸ್‌ 108 ಸೇವೆಯನ್ನು 1,698.44 ಕೋಟಿಗಳ ವೆಚ್ಚದಲ್ಲಿ 5 ವರ್ಷಗಳ ಅವಧಿಗೆ ಪಡೆಯಲು ಅರ್ಹ ಸೇವಾದಾರರನ್ನು ಆಯ್ಕೆ ಮಾಡಬೇಕಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪ್ರಸ್ತಾವನೆ ಸಲ್ಲಿಸಿತ್ತು.

ಈ ಪ್ರಸ್ತಾವನೆಯನ್ನು ಪರಿಶೀಲಿಸಿರುವ ಆರ್ಥಿಕ ಇಲಾಖೆಯು ‘ ಆಡಳಿತ ಇಲಾಖೆಯ ಪ್ರಸ್ತಾವನೆಗೆ ಸಂಬಂಧಿಸಿದಂತೆ 108- ಆಂಬ್ಯುಲೆನ್ಸ್‌ ಸಂಖ್ಯೆಯನ್ನು 750 ಗಳಿಗೆ ಸೀಮಿತಗೊಳಿಸಿ ಹಾಗೂ 54 ಕರೆ ಕೇಂದ್ರದ ಆಸನ ಸಂಖ್ಯೆಯನ್ನು ಪ್ರಸ್ತಾಪಿಸಿದಂತೆ 75ಕ್ಕೆ ಹೆಚ್ಚಿಸಿ 1,260 ಕೋಟಿಗಳ ವೆಚ್ಚದಲ್ಲಿ 5 ವರ್ಷಗಳ ಅವಧಿಗೆ ಸೇವೆಯನ್ನು ಟೆಂಡರ್ ಮೂಲಕ ಪಡೆಯಲು ಸಹಮತಿಸಿದೆ,’ ಎಂದು 2021ರ ಡಿಸೆಂಬರ್‌ 7ರಂದು ಆರ್ಥಿಕ ಇಲಾಖೆಯು ಆರೋಗ್ಯ ಇಲಾಖೆಗೆ ತಿಳಿಸಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

ಪ್ರಸಕ್ತ ಸಾಲಿನಲ್ಲಿರುವ ಅಂದಾಜು 7 ಕೋಟಿ ಜನಸಂಖ್ಯೆಗೆ ತಕ್ಕಂತೆ 1,000 ಅಂಬುಲೆನ್ಸ್‌ಗಳಿರಬೇಕು. ಈ ಸಂಖ್ಯೆಯನ್ನು ಹೆಚ್ಚಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಲ್ಲಿಸಿದ್ದ ಪ್ರಸ್ತಾವನೆ ಪೈಕಿ ಕೇವಲ 40 ಆಂಬುಲೆನ್ಸ್‌ಗಳನ್ನು ಹೆಚ್ಚಿಸಲು ಅನುಮತಿ ನೀಡಿರುವ ಆರ್ಥಿಕ ಇಲಾಖೆಯು ಇನ್ನು 250 ಅಂಬುಲೆನ್ಸ್‌ಗಳ ಖರೀದಿಗೆ ಅನುಮತಿ ನೀಡದಿರುವುದು ರಾಷ್ಟ್ರೀಯ ಆರೋಗ್ಯ ಅಭಿಯಾನದ ಮಾರ್ಗಸೂಚಿಗಳ ನೇರ ಉಲ್ಲಂಘನೆಯಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಅಲ್ಲದೆ ಪ್ರಸಕ್ತ 710 ಆಂಬ್ಯುಲೆನ್ಸ್‌ಗಳಿಗೆ ಎದುರಾಗಿ 489 ಆಂಬ್ಯುಲೆನ್ಸ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. 1,350 ಇಎಂಟಿ ಮತ್ತು ಪೈಲಟ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. 2020-21ನೇ ಸಾಲಿನಲ್ಲಿ 108 ಆಂಬ್ಯುಲೆನ್ಸ್‌ ಸೇವೆಗಾಗಿ ಒದಗಿಸಿದ ಮೊತ್ತದಲ್ಲಿ 86.31 ಕೋಟಿ ಮಾತ್ರ ವೆಚ್ಚವಾಗಿದೆ. ಇದು ಅಂದಾಜು ಮೊತ್ತದ ಶೇ.50ರಷ್ಟು ಮಾತ್ರ ವೆಚ್ಚವಾಗಿದೆ ಎಂಬುದು ಆರ್ಥಿಕ ಇಲಾಖೆಯ ಪತ್ರದಿಂದ ಗೊತ್ತಾಗಿದೆ.

ರಾಜ್ಯದಲ್ಲಿ ತುರ್ತು ವೈದ್ಯಕೀಯ ಪ್ರತಿಕ್ರಿಯೆ ಸೇವೆ 108- ಆರೋಗ್ಯ ಕವಚ ಸೇವೆಯನ್ನು 2008ರ ಆಗಸ್ಟ್‌ 14ರಂದು ಆರಂಭಿಸಲಾಗಿತ್ತು. ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಡಿಯಲ್ಲಿ ಟೆಂಡರ್‌ ಮೂಲಕ ಸಿಕಂದರಬಾದ್‌ ಮೂಲದ ಜಿವಿಕೆ-ಇಎಂಆರ್‌ಐ ಸಂಸ್ಥೆ ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿತ್ತು.

ಈ ಸಂಸ್ಥೆಯೊಂದಿಗೆ 10 ವರ್ಷಗಳ ಅವಧಿಗೆ ಒಡಂಬಡಿಕೆ ಮಾಡಿಕೊಂಡಿತ್ತಾದರೂ ಸಂಸ್ಥೆಯ ಸೇವಾ ನ್ಯೂನತೆಗಳಿದ್ದರಿಂದ 2017ರ ಜುಲೈ 14ರಂದು ಒಡಂಬಡಿಕೆಯನ್ನು ಅವಧಿಗೆ ಮುನ್ನವೇ ರದ್ದುಗೊಳಿಸಲಾಗಿತ್ತು. ಆದರೂ 108-ಸೇವೆಯ ಅತ್ಯಂತ ಅವಶ್ಯಕ ಸೇವೆಯಾಗಿದ್ದರಿಂದ ಮುಂದಿನ ಸೇವೆದಾರರು ಆಯ್ಕೆಯಾಗುವವರೆಗೂ ಈ ಸಂಸ್ಥೆಯ ಸೇವೆಯನ್ನು ಮುಂದುವರೆಸಲಾಗಿದೆ.

ಪ್ರಸ್ತುತ ಅನುಷ್ಠಾನಗೊಂಡಿರುವ 108-ಸೇವೆಯ ತಂತ್ರಜ್ಞಾನವು ಸುಮಾರು 13 ವರ್ಷಗಳ ಹಿಂದಿನದು. ಇದನ್ನು ಈವರೆವಿಗೂ ಮೇಲ್ದರ್ಜೆಗೇರಿಸದ ಕಾರಣ ಸಾರ್ವಜನಿಕರಿಗೆ ಸುಗಮ ಸೇವೆ ಒದಗಿಸುವುದು ಸರ್ಕಾರಕ್ಕೆ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಜನರಿಗೆ ಗುಣಾತ್ಮಕ 108-ಸೇವೆಯನ್ನು ಖಾತರಿಪಡಿಸುವ ಉದ್ದೇಶದಿಂದ ಈ ವೈದ್ಯಕೀಯ ಸೇವೆಯ ಐ.ಟಿ ತಂತ್ರಜ್ಞಾನವನ್ನು ಅಂತಾರಾಷ್ಟ್ರೀಯಮಟ್ಟಕ್ಕೆ ಸಜ್ಜುಗೊಳಿಸಲು ಸರ್ಕಾರ ಮುಂದಾಗಿದೆ.

the fil favicon

SUPPORT THE FILE

Latest News

Related Posts