Monday | July 6, 2026 |

ರಾಜಕೀಯ ಕಾರ್ಯದರ್ಶಿ, ಸಲಹೆಗಾರರ ನೇಮಕ; ಬಿಜೆಪಿ ಸರ್ಕಾರದ ಸಮರ್ಥನೆಯನ್ನೇ ಮುಂದಿರಿಸುವುದೇ ಕಾಂಗ್ರೆಸ್‌?

ಬೆಂಗಳೂರು; ರಾಜಕೀಯ ಕಾರ್ಯದರ್ಶಿ ಮತ್ತು  ಸಲಹೆಗಾರರನ್ನು ನೇಮಿಸಿಕೊಳ್ಳುವುದು ಮುಖ್ಯಮಂತ್ರಿಗಳ ವಿಶೇಷಾಧಿಕಾರವಾಗಿದೆ. ಮುಖ್ಯಮಂತ್ರಿಗಳ ಮೇಲಿನ ಕಾರ್ಯದ ಒತ್ತಡ, ರಾಜಕೀಯ ಬೆಳವಣಿಗೆಗಳು ಮತ್ತು ಸರ್ಕಾರದ ಹಿತರಕ್ಷಣೆಗಾಗಿಯೇ ಮುಖ್ಯಮಂತ್ರಿಗಳಿಗೆ ರಾಜಕೀಯ ಕಾರ್ಯದರ್ಶಿ ಮತ್ತು ಸಲಹೆಗಾರರನ್ನಾಗಿ ನೇಮಿಸಿಕೊಳ್ಳಲಾಗುತ್ತದೆ ಎಂದು ಹಿಂದಿನ ಬಿಜೆಪಿ ಸರ್ಕಾರವು ನೀಡಿದ್ದ ಸಮರ್ಥನೆಯನ್ನೇ ಈಗಿನ ಕಾಂಗ್ರೆಸ್‌ ಸರ್ಕಾರವೂ ನ್ಯಾಯಾಲಯದ ಮುಂದಿರಿಸಲು ಸಜ್ಜಾಗುತ್ತಿದೆ.

 

ಮುಖ್ಯಮಂತ್ರಿಗಳಿಗೆ ರಾಜಕೀಯ ಕಾರ್ಯದರ್ಶಿ, ಸಲಹೆಗಾರರ ಹುದ್ದೆ ಸೃಷ್ಟಿಸಿ ಸಂಪುಟ ದರ್ಜೆ ಸ್ಥಾನಮಾನ ನೀಡಿದ್ದ ಕ್ರಮದ ಸಿಂಧುತ್ವ ಪ್ರಶ್ನಿಸಿ ಸಮಾಜ ಪರಿವರ್ತನಾ ಸಮುದಾಯವು ಸಲ್ಲಿಸಿದ್ದ ರಿಟ್‌  ಅರ್ಜಿಗೆ ಸಂಬಂಧಿಸಿದಂತೆ  ಹಿಂದಿನ ಬಿಜೆಪಿ ಸರ್ಕಾರವು  ನ್ಯಾಯಾಲಯಕ್ಕೆ  ಸಲ್ಲಿಸಿದ್ದ  ವಿವರಣಾತ್ಮಕ ಟಿಪ್ಪಣಿಯಲ್ಲಿ    3 ಪುಟಗಳಲ್ಲಿ ತನ್ನ ನಿಲುವನ್ನು  ಸಮರ್ಥಿಸಿಕೊಂಡಿದೆ. ಈಗಿನ ಕಾಂಗ್ರೆಸ್‌ ಸರ್ಕಾರವು ಸಹ ಇದೇ ನಿಲುವನ್ನು ತೆಗೆದುಕೊಳ್ಳಲಿದೆ ಎಂದು ಗೊತ್ತಾಗಿದೆ.

 

ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜಕೀಯ ಕಾರ್ಯದರ್ಶಿಗಳಾದ ವಿಧಾನ ಪರಿಷತ್ ಸದಸ್ಯರಾದ ನಜೀರ್ ಅಹ್ಮದ್‌ ಮತ್ತು ಕೆ ಗೋವಿಂದರಾಜ್‌ ಹಾಗೂ ಮುಖ್ಯಮಂತ್ರಿಗಳ ಮುಖ್ಯ ಸಲಹೆಗಾರ ಸುನೀಲ್ ಕನುಗೋಳು ಹಾಗೂ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ನೇಮಕಾತಿಯನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿರುವ ಬೆನ್ನಲ್ಲೇ ಈ ಎಲ್ಲಾ ನೇಮಕಾತಿಗಳಿಗೆ ಸಂಬಂಧಿಸಿದಂತೆ ಹಿಂದಿನ ಸರ್ಕಾರವು ಸಲ್ಲಿಸಿರುವ ವಿವರಣಾತ್ಮಕ  ಟಿಪ್ಪಣಿಯು ಮುನ್ನೆಲೆಗೆ ಬಂದಿದೆ. ಈ ಟಿಪ್ಪಣಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ರಾಜಕೀಯ ಕಾಯದರ್ಶಿಗಳ ನೇಮಕದ ಹಿಂದೆ ಸಾರ್ವಜನಿಕ ಹಿತಾಸಕ್ತಿ ಇದೆ. ಮುಖ್ಯಮಂತ್ರಿಗಳ ಕಾರ್ಯಭಾರದ ಒತ್ತಡ ಕಡಿಮೆಗೊಳಿಸುವುದು, ರಾಜಕೀಯ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಸೂಕ್ತ ನಿರ್ಣಯ ಕೈಗೊಳ್ಳುವುದು ಮತ್ತು ಸರ್ಕಾರದ ಹಿತರಕ್ಷಣೆ ಉದ್ದೇಶವಿದೆ. ಮತ್ತು ಅನುಭವ ಮತ್ತು ಜ್ಞಾನ ಆಧರಿಸಿ ರಾಜಕೀಯ ಕಾರ್ಯದರ್ಶಿ ನೇಮಕ ಮಾಡಲಾಗುತ್ತಿದೆ. ಹಾಗೆಯೇ ಇಂತಹ ನೇಮಕಾತಿ ಮಾಡುವುದು ಮುಖ್ಯಮಂತ್ರಿಗಳ ವಿಶೇಷಾಧಿಕಾರ. ಹೀಗಾಗಿ ಇದರಲ್ಲಿ ಅಧಿಕಾರ ದುರ್ಬಳಕೆಯಾಗಿಲ್ಲ ಎಂದು ಸಮರ್ಥಿಸಿಕೊಂಡಿರುವುದು ಗೊತ್ತಾಗಿದೆ.

 

ಹಾಗೆಯೇ ಆಫೀಸ್‌ ಆಫ್‌ ಪ್ರಾಫಿಟ್‌, ಕರ್ನಾಟಕ ಕಾಯ್ದೆ ನಂ 7, 2019ರ ಅಡಿಯಲ್ಲಿ ರಾಜಕೀಯ ಕಾರ್ಯದರ್ಶಿಗಳು ಬರುವುದಿಲ್ಲ. ಕರ್ನಾಟಕ ವಿಧಾನಸಭೆ (ಅನರ್ಹತೆ ತಡೆಗಟ್ಟುವಿಕೆ) ಕಾಯ್ದೆ 1956 ಪ್ರಕಾರ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಕರ್ನಾಟಕ ಶಾಸಕಾಂಗ ಸಭೆಯ ಸದಸ್ಯತ್ವದ ಅನರ್ಹತೆ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಹೇಳಿರುವುದು ತಿಳಿದು ಬಂದಿದೆ.

 

ಹಿಂದಿನ ಸರ್ಕಾರಗಳ ಅವಧಿಯಿಂದಲೂ ಮುಖ್ಯಮಂತ್ರಿಗಳಿಗೆ ರಾಜಕೀಯ ಕಾರ್ಯದರ್ಶಿಗಳನ್ನು ನೇಮಿಸಿಕೊಳ್ಳುವ ಪರಿಪಾಠವಿದೆ. ಮುಖ್ಯಮಂತ್ರಿ ಕಚೇರಿ ಮತ್ತು ರಾಜಕೀಯ ವಿಷಯಗಳ ಕುರಿತು ರಾಜಕೀಯ ಕಾರ್ಯದರ್ಶಿಗಳು ವ್ಯವಹರಿಸುತ್ತಾರೆ ಮತ್ತು ಇಂತಹ ವಿಚಾರಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ನೆರವಾಗುತ್ತಾರೆ ಎಂದು ರಾಜ್ಯ ಶಿಷ್ಟಾಚಾರದ ಅಧೀನ ಕಾರ್ಯದರ್ಶಿಯು ನ್ಯಾಯಾಲಯಕ್ಕೆ ವಿವರಿಸಿದ್ದಾರೆ.

 

ಜನಸ್ಪಂದನ, ಸಾರ್ವಜನಿಕರ ದೂರುಗಳನ್ನು ಪರಿಶೀಲಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಖ್ಯಮಂತ್ರಿಗಳಿಗೆ ಸಲಹೆ ನೀಡುವುದು, ಮುಖ್ಯಮಂತ್ರಿಗಳು ನಡೆಸುವ ಜಿಲ್ಲಾ ಭೇಟಿಗಳು, ಅಲ್ಲಿನ ಸ್ಥಳೀಯ ಸಮಸ್ಯೆಗಳು, ದೂರುಗಳನ್ನು ಮುಖ್ಯಮಂತ್ರಿಗಳು ಮತ್ತು ಇಲಾಖೆ ಮುಖ್ಯಸ್ಥರ ಗಮನಕ್ಕೆ ತಂದು ಪರಿಹರಿಸುವುದು, ಶಾಸಕರು ನೀಡುವ ಪತ್ರಗಳನ್ನು ಸ್ವೀಕರಿಸಿ ಈ ಬಗ್ಗೆ ಮುಖ್ಯಮಂತ್ರಿಗಳ ಗಮನಸೆಳೆಯುವುದು, ಸಾರ್ವಜನಿಕ ದೂರುಗಳು,ಮನವಿಗಳನ್ನು ಪರಿಶೀಲಿಸುವುದು, ಜಿಲ್ಲಾ ಉಸ್ತುವಾರಿ ಸಚಿವರುಗಳೊಂದಿಗೆ ಸಮಾಲೋಚನೆ ನಡೆಸುವುದು ಸಮಸ್ಯೆಗಳಿದ್ದಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅವುಗಳನ್ನು ಪರಿಹರಿಸುವುದು , ಪಕ್ಷದ ಸಭೆಗಳನ್ನು ಆಯೋಜಿಸುವುದು, ಶಾಸಕರು, ಸಂಸದರು ಮತ್ತು ಮುಖ್ಯಮಂತ್ರಿಗಳ ಮಧ್ಯೆ ಸಂಪರ್ಕ ಸಂಹವನವಾಗಿ ಕಾರ್ಯನಿರ್ವಹಿಸುವುದು, ಮುಷ್ಕರಗಳ ಸಂದರ್ಭಗಳಲ್ಲಿ ಮುಖ್ಯಮಂತ್ರಿಗಳ ಪರವಾಗಿ ಮನವಿಗಳನ್ನು ಸ್ವೀಕರಿಸಿ ಪರಿಹರಿಸುವ ಹೊಣೆಗಾರಿಕೆಗಳು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳ ಮೇಲಿರುತ್ತದೆ ಎಂದು ಜವಾಬ್ದಾರಿಗಳ ಕುರಿತು ನ್ಯಾಯಾಲಯದ ಗಮನ ಸೆಳೆದಿದೆ.

 

ಜೆಡಿಎಸ್‌ ಕಾಂಗ್ರೆಸ್‌ ಮೈತ್ರಿ ಸರ್ಕಾರದ ಅವಧಿಯಲ್ಲಿ 9 ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿದ್ದ ಕ್ರಮವು ಅಸಂವಿಧಾನಿಕ ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಅಲ್ಲದೇ ಹಲವಾರು ವರ್ಷಗಳಿಂದ ಸಚಿವ ದರ್ಜೆಯ ಸ್ಥಾನ ನೀಡಿ ಸಂಸದೀಯ ಕಾರ್ಯದರ್ಶಿಗಳನ್ನು ನೇಮಕ ಮಾಡುತ್ತಾ ಬಂದಿದ್ದ ರಾಜ್ಯ ಸರ್ಕಾರದ ಕ್ರಮಕ್ಕೆ ಶಾಶ್ವತವಾಗಿ ಇತಿಶ್ರೀ ಹಾಡಿತ್ತು. ಸಂಸದೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಲುಅ ವಕಾಶ ನೀಡುತ್ತಿದ್ದ ಸಂಸದೀಯ ಕಾರ್ಯದರ್ಶಿಗಳ (ವೇತನ ಮತ್ತು ಉಪದಾನ ಅವಕಾಶಗಳು) ಕಾಯ್ದೆ 1963 ಹಾಗೂ ಅದಕ್ಕೆ 1999ರಲ್ಲಿ ತಂದಿದ್ದ ಏಳನೇ ತಿದ್ದುಪಡಿಯನ್ನೂ ರದ್ದುಗೊಳಿಸಿತ್ತು.

 

ಕಾಯ್ದೆಯೇ ರದ್ದಾದ ಮೇಲೆ ಇನ್ನು ಯಾವುದೇ ರೀತಿಯಲ್ಲೂ ಸಂಸದೀಯ ಕಾರ್ಯದರ್ಶಿಗಳನ್ನು ಸರ್ಕಾರ ನೇಮಕ ಮಾಡುವಂತಿಲ್ಲ. ಸಂವಿಧಾನದ ಪರಿಚ್ಛೇಧ 64 (1ಎ) ಪ್ರಕಾರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಶಾಸನಸಭೆಯ ಒಟ್ಟು ಸದಸ್ಯರ ಸಂಖ್ಗಯೆ ಶೇ.15ರಷ್ಟು ಮಾತ್ರ ಸಚಿವ ಸ್ಥಾನಗಳನ್ನು ಸೃಷ್ಟಿಸಬಹುದು ಎಂಬ ನಿಯಮವಿದೆ. ಈ ನಿಯಮ ಜಾರಿಗೆ ಬರುವುದಕ್ಕೂ ಮುನ್ನ ಮುಖ್ಯಮಂತ್ರಿಗಳು ತಮಗೆ ಬೇಕಾದಷ್ಟು ಸಚಿವರನ್ನ ನೇಮಕ ಮಾಡಬಹುದಿತ್ತು.

 

ಆಗ ರಾಜಕೀಯ ಕಾರಣಕ್ಕಾಗಿ ಸಚಿವ ಸ್ಥಾನಕಾಂಕ್ಷಿಗಳನ್ನು ತೃಪ್ತಿಪಡಿಸುವುದು ಸರ್ಕಾರಗಳಿಗೆ ಕಷ್ಟವಾಗತೊಡಗಿತು. ಆಗ ಕಂಡುಕೊಂಡ ಮಾರ್ಗವೇ ಸಂಸದೀಯ ಕಾರ್ಯೊದರ್ಶಿಗಳು ಮತ್ತು ರಾಜಕೀಯ ಕಾರ್ಯದರ್ಶಿಗಳು, ಸಚಿವರಿಗೆ ಸಲಹೆಗಾರರ ಹೀಗೆ ನಾನಾ ಹುದ್ದೆಗಳನ್ನು ಸೃಷ್ಟಿಸಿ ಸಂಪುಟ ದರ್ಜೆ ಅಥವಾ ರಾಜ್ಯ ಸಚಿವರ ದರ್ಜೆಯ ಸ್ಥಾನ ಮಾನ ನೀಡುವುದು ವಾಸ್ತವವಾಗಿ ಇಂತಹ ಹುದ್ದೆಗಳಿಗೆ ನೇಮಕವಾಗುವವರ ಹೆಚ್ಚಿನವರಿಗೆ ನಿರ್ದಿಷ್ಟ ಕೆಲಸವೇನೂ ಇರುವುದಿಲ್ಲ. ಎನ್ನುತ್ತಾರೆ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು.

 

ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಾಲಿ ಮತ್ತು ಮಾಜಿ ಶಾಸಕರಿಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಮತ್ತು ಸಲಹೆಗಾರರ ಹುದ್ದೆ ಸೃಷ್ಟಿಸಿ ಸಂಪುಟ ದರ್ಜೆಯ ಸ್ಥಾನಮಾನ ನೀಡಿರುವ ಕ್ರಮದ ಸಿಂಧುತ್ವವನ್ನು ಪ್ರಶ್ನಿಸಿದ್ದ ಸಮಾಜ ಪರಿವರ್ತನಾ ಸಮುದಾಯವು ಅರ್ಜಿ ಸಲ್ಲಿಸಿತ್ತು. ಈ ಸಂಬಂಧ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಆದೇಶಿಸಿತ್ತು.

 

ಈ ಅರ್ಜಿಯಲ್ಲಿ ಶಾಸಕರಾಗಿದ್ದ ಎಂ ಪಿ ರೇಣುಕಾಚಾರ್ಯ, ಮಾಜಿ ಶಾಸಕ ಡಿ ಎನ್ ಜೀವರಾಜ್, ಬೇಳೂರು ಸುದರ್ಶನ್ ಮತ್ತು ಕೇದಾರನಾಥ ಮುದ್ದಾ ಅವರನ್ನು ಪ್ರತಿವಾದಿಗಳನ್ನಾಗಿಸಿತ್ತು.

 

ಅದೇ ರೀತಿ ಹಾಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ವಿಧಾನ ಪರಿಷತ್ ಸದಸ್ಯರಾದ ನಜೀರ್ ಅಹ್ಮದ್‌ ಮತ್ತು ಕೆ ಗೋವಿಂದರಾಜ್‌ ಹಾಗೂ ಮುಖ್ಯಮಂತ್ರಿಗಳ ಮುಖ್ಯ ಸಲಹೆಗಾರ ಸುನೀಲ್ ಕನುಗೋಳು ಹಾಗೂ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ನೇಮಕಾತಿಯನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ವಕೀಲ ಎಸ್ ಉಮಾಪತಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

 

 

ಈ ಅರ್ಜಿಯಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಜೀರ್ ಅಹ್ಮದ್‌, ಗೋವಿಂದರಾಜ್‌, ಸುನೀಲ್‌ ಕನುಗೋಳು ಹಾಗೂ ಕೆ ವಿ ಪ್ರಭಾಕರ್ ಅವರನ್ನು ಪ್ರತಿವಾದಿಗಳನ್ನಾಗಿಸಲಾಗಿದೆ.

 

ರಾಜಕೀಯ ಕಾರ್ಯದರ್ಶಿ, ಮುಖ್ಯ ಸಲಹೆಗಾರ ಮತ್ತು ಮಾಧ್ಯಮ ಸಲಹೆಗಾರ ಎಂಬ ಹುದ್ದೆಗಳನ್ನು ನಾಲ್ಕು ಮಂದಿಗೆ ಸೃಜಿಸಿ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ. ಇವರಿಗೆ ನೀಡಲಾಗುವ ಸಂಬಳ, ಸಾರಿಗೆ, ವಸತಿ, ಭತ್ಯೆ ಇತ್ಯಾದಿ ಖರ್ಚುಗಳು ರಾಜ್ಯದ ಬೊಕ್ಕಸಕ್ಕೆ ಹೊರೆಯಾಗಿವೆ.

 

ಇವೆಲ್ಲವೂ ರಾಜಕೀಯ ನೇಮಕಾತಿ ಹಾಗೂ ಏಕಪಕ್ಷೀಯ ನಿರ್ಧಾರಗಳಾಗಿವೆ. ಮುಖ್ಯಮಂತ್ರಿಗಳ ಕಚೇರಿ ಎಂಬುದು ಸಾರ್ವಜನಿಕ ಕಚೇರಿ. ಆದರೆ, ಅಲ್ಲೀಗ ಮುಖ್ಯಮಂತ್ರಿಗಳ ಬಂಧುಗಳು, ಅವರ ಹಿಂಬಾಲಕರಿಗೆ ಆಸ್ಪದ ನೀಡಲಾಗಿದೆ. ಕಾನೂನಿನಲ್ಲಿ ಇಂತಹ ಹುದ್ದೆಗಳನ್ನು ಸೃಜಿಸಲು ಅವಕಾಶವಿಲ್ಲ. ಆದ್ದರಿಂದ, ಪ್ರತಿವಾದಿಗಳ ನೇಮಕಾತಿ ಸಂವಿಧಾನ ವಿರೋಧಿಯಾಗಿದ್ದು ಕೂಡಲೇ ರದ್ದುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Hot this week

ಖಾಸಗಿ ಮಠದ ಒಡೆತನದ ಆಸ್ತಿಯಲ್ಲಿ ಸರ್ಕಾರಿ ಕಾಮಗಾರಿ, 8.4 ಕೋಟಿ ವೆಚ್ಚ; ತನಿಖೆ ಹಾದಿ ತಪ್ಪಿಸಿದರೇ ನಿವೃತ್ತ ಐಎಎಸ್ ಅಧಿಕಾರಿ ಐಎಸ್‌ಎನ್ ಪ್ರಸಾದ್‌?

ಬೆಂಗಳೂರು;  ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಾಮಚಂದ್ರಾಪುರ ಗ್ರಾಮದ ಚಂದ್ರಮೌಳೇಶ್ವರ ದೇವಸ್ಥಾನ...

ಸಿಎಂ, ಡಿಸಿಎಂ ಸೇರಿ ಐವರು ಸಚಿವರ ವಸತಿಗೃಹ ನವೀಕರಣ, ದುರಸ್ತಿ, ಪೀಠೋಪಕರಣ, ಗೃಹಪಯೋಗಿ ವಸ್ತುಗಳ ಖರೀದಿ; 3 ವರ್ಷದಲ್ಲಿ 19.01 ಕೋಟಿ ರು ವೆಚ್ಚ

ಬೆಂಗಳೂರು; ಸರ್ಕಾರಿ ಶಾಲೆ, ಸರ್ಕಾರಿ ವಿದ್ಯಾರ್ಥಿ ನಿಲಯಗಳ ನಿರ್ಮಾಣ, ಇರುವ ಕೊಠಡಿಗಳ...

ಶಾಲಾ ಶಿಕ್ಷಣಕ್ಕಾಗಿ ಹಣಕಾಸು ಪೂರೈಕೆ; ವೆಚ್ಚ ಸಾಲದು, ಹೆಚ್ಚಿದ ಸಂಪನ್ಮೂಲ ಅಂತರ, ಬಜೆಟ್‌ನಲ್ಲಿ ಕುಸಿತ, ಖಾಸಗೀಕರಣಕ್ಕೆ ದಾರಿಯಾಗಲಿದೆಯೇ?

ಬೆಂಗಳೂರು; ರಾಜ್ಯದ ಶಾಲೆಗಳಲ್ಲಿ ದಾಖಲಾತಿ ಪ್ರಮಾಣವು ವೇಗವಾಗಿ ಹೆಚ್ಚುತ್ತಿದ್ದರೂ ಸಹ ಶಿಕ್ಷಣದ ಮೇಲಿನ...
Please Scan to make Your Contribution

Topics

ಖಾಸಗಿ ಮಠದ ಒಡೆತನದ ಆಸ್ತಿಯಲ್ಲಿ ಸರ್ಕಾರಿ ಕಾಮಗಾರಿ, 8.4 ಕೋಟಿ ವೆಚ್ಚ; ತನಿಖೆ ಹಾದಿ ತಪ್ಪಿಸಿದರೇ ನಿವೃತ್ತ ಐಎಎಸ್ ಅಧಿಕಾರಿ ಐಎಸ್‌ಎನ್ ಪ್ರಸಾದ್‌?

ಬೆಂಗಳೂರು;  ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಾಮಚಂದ್ರಾಪುರ ಗ್ರಾಮದ ಚಂದ್ರಮೌಳೇಶ್ವರ ದೇವಸ್ಥಾನ...

ಶಾಲಾ ಶಿಕ್ಷಣಕ್ಕಾಗಿ ಹಣಕಾಸು ಪೂರೈಕೆ; ವೆಚ್ಚ ಸಾಲದು, ಹೆಚ್ಚಿದ ಸಂಪನ್ಮೂಲ ಅಂತರ, ಬಜೆಟ್‌ನಲ್ಲಿ ಕುಸಿತ, ಖಾಸಗೀಕರಣಕ್ಕೆ ದಾರಿಯಾಗಲಿದೆಯೇ?

ಬೆಂಗಳೂರು; ರಾಜ್ಯದ ಶಾಲೆಗಳಲ್ಲಿ ದಾಖಲಾತಿ ಪ್ರಮಾಣವು ವೇಗವಾಗಿ ಹೆಚ್ಚುತ್ತಿದ್ದರೂ ಸಹ ಶಿಕ್ಷಣದ ಮೇಲಿನ...

ರಾಷ್ಟ್ರೀಯ ಪರೀಕ್ಷೆಗಳಿಂದಾಗಿ ಎಸ್‌ ಸಿ, ಎಸ್‌ ಟಿ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಕುಸಿತ, ನಗರ ವಿಶ್ವವಿದ್ಯಾಲಯಗಳೊಂದಿಗೆ ಗ್ರಾಮೀಣ ಕಾಲೇಜುಗಳ ವಿಲೀನಕ್ಕೆ ಆಯೋಗ ಅಸಮ್ಮತಿ

ಬೆಂಗಳೂರು;  ಸಾಮಾನ್ಯ ಶಿಕ್ಷಣ ಕೋರ್ಸ್‌ಗಳಲ್ಲಿ ರಾಷ್ಟ್ರೀಯ ಪ್ರವೇಶಗಳ ಪರೀಕ್ಷೆಗಳನ್ನು ಪರಿಚಯಿಸಿದ್ದರಿಂದಾಗಿ ಪರಿಶಿಷ್ಟ...

Related Articles

Popular Categories

error: Content is protected !!