ಬೆಂಗಳೂರು; ರಾಷ್ಟ್ರೋತ್ಥಾನ ಪರಿಷತ್ ಈಗಾಗಲೇ 74-00 ಎಕರೆ ಹೊಂದಿದ್ದರೂ ಯಲಹಂಕ ತಾಲೂಕಿನ ಹೆಸರಘಟ್ಟ ಹೋಬಳಿಯ ಹುರುಳಿಚಿಕ್ಕನಹಳ್ಳಿ ಗ್ರಾಮದಲ್ಲಿ ಪ್ರಚಲಿತ ಮಾರುಕಟ್ಟೆಯಲ್ಲಿ 7.45 ಕೋಟಿ ರು. ಬೆಲೆ ಬಾಳುವ ಗೋಮಾಳ ಜಮೀನನ್ನು ರಾಜ್ಯ ಬಿಜೆಪಿ ಸರ್ಕಾರವು ಕೇವಲ 1.86 ಕೋಟಿ ರು.ಗೆ ಮಂಜೂರು ಮಾಡಿದೆ. ಈ ಪರಿಷತ್‌ಗೆ ಜಮೀನನ್ನು ಮಂಜೂರು ಮಾಡುವ ಉದ್ದೇಶದಿಂದಲೇ ಗೋಮಾಳ ಶೀರ್ಷಿಕೆಯಿಂದಲೇ ತಗ್ಗಿಸಿ ತನ್ನ ಸಂಘ ನಿಷ್ಠೆ ಮೆರೆದಿರುವ ಸರ್ಕಾರವು 5.59 ಕೋಟಿ ರು. ನಷ್ಟಕ್ಕೆ ದಾರಿಮಾಡಿಕೊಟ್ಟಿದೆ.
ಕರ್ನಾಟಕ ಭೂ ಕಂದಾಯ ನಿಯಮಾವಳಿಗಳ ನಿಯಮ 97(1) 100 ಜಾನುವಾರುಗಳಿಗೆ 30 ಎಕರೆ ಜಮೀನನ್ನು ಕಡ್ಡಾಯವಾಗಿ ಕಾಯ್ದಿರಿಸಬೇಕು. ಇದರ ಪ್ರಕಾರ ಹುರುಳಿಚಿಕ್ಕನಹಳ್ಳಿಯಲ್ಲಿ 419 ಜಾನುವಾರುಗಳಿಗೆ 120 ಎಕರೆಯನ್ನು ಕಾಯ್ದಿರಿಸಬೇಕಿತ್ತು. ಪ್ರಸ್ತುತ ಈ ಗ್ರಾಮದಲ್ಲಿ ಈ ಅನುಪಾತದ ಪ್ರಕಾರ ನಿಗದಿಪಡಿಸಿದ್ದಕ್ಕಿಂತ ಕಡಿಮೆ ಜಮೀನು ಇದೆ. 90-00 ಎಕರೆ ವಿಸ್ತೀರ್ಣದ ಗೋಮಾಳ ಜಮೀನೂ ಲಭ್ಯವಿಲ್ಲ. ಹೀಗಿದ್ದರೂ ಶೈಕ್ಷಣಿಕ ಉದ್ದೇಶದ ಹೆಸರಿನಲ್ಲಿ ರಾಷ್ಟ್ರೋತ್ಥಾನ ಪರಿಷತ್‌ಗೆ 9-32 ಎಕರೆ ವಿಸ್ತೀರ್ಣದ ಗೋಮಾಳ ಮಂಜೂರು ಮಾಡುವ ಉದ್ದೇಶದಿಂದಲೇ ಒಟ್ಟಾರೆ ಗೋಮಾಳ ವಿಸ್ತೀರ್ಣದಲ್ಲೇ ತಗ್ಗಿಸಿರುವುದು ಬಹಿರಂಗವಾಗಿದೆ.
ರಾಷ್ಟ್ರೋತ್ಥಾನ ಪರಿಷತ್‌ಗೆ ಗೋಮಾಳ ಜಮೀನು ಮಂಜೂರು ಮಾಡುವ ಸಂಬಂಧ 2021ರ ನವೆಂಬರ್ 25ರಂದು ಸಚಿವ ಸಂಪುಟಕ್ಕೆ ಕಡತ ಮಂಡನೆಯಾಗಿತ್ತು. ಅಂದು ನಡೆದಿದ್ದ ಸಂಪುಟ ಸಭೆಯಲ್ಲಿ ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸಂಬಂಧ ತೀರ್ಮಾನ ಕೈಗೊಂಡಿರಲಿಲ್ಲ. ಗೋಮಾಳ ಮಂಜೂರು ಮಾಡಬೇಕೇ ಬೇಡವೇ ಎಂಬ ಕುರಿತು ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಸಚಿವ ಆರ್ ಅಶೋಕ್ ಅವರ ವಿವೇಚನೆಗೆ ಬಿಡಲಾಗಿತ್ತು. ಆ ಹಂತದಲ್ಲೇ ‘ದಿ ಫೈಲ್’ ಹೊರಗೆಳೆದಿತ್ತು.
ರಾಷ್ಟ್ರೋತ್ಥಾನ ಪರಿಷತ್‌ಗೆ ಗೋಮಾಳವನ್ನು ಮಂಜೂರು ಮಾಡಿರುವ ರಾಜ್ಯ ಸರ್ಕಾರವು 4 ತಿಂಗಳ ನಂತರ ಅಂದರೆ 2022ರ ಫೆ.22ರಂದು ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
‘ಈ ಗ್ರಾಮದಲ್ಲಿ ಒಟ್ಟು 419 ಜಾನುವಾರುಗಳಿದ್ದು, 90-00 ಎಕರೆ ಗೋಮಾಳ ಜಮೀನು ಲಭ್ಯವಿರುವುದಿಲ್ಲ. ಚೆಕ್‌ಲಿಸ್ಟ್, ಗ್ರಾಮನಕಾಶೆ, ಸರ್ವೇ ಮೂಲ ಟಿಪ್ಪಣಿ, ಸಂಸ್ಥೆಯವರು ಸಲ್ಲಿಸಿರುವ ನೋಂದಣಿ ಪ್ರಮಾಣ ಪತ್ರ, ನವೀಕರಣ ಪತ್ರ, ಸಂಸ್ಥೆಯು ಈಗಾಗಲೇ ಹೊಂದಿರುವ 74-00 ಎಕರೆ ಜಮೀನಿನ ವಿವರ ಮತ್ತು 5 ವರ್ಷಗಳ ಆಡಿಟ್ ವರದಿಗಳೊಂದಿಗೆ ಯಲಹಂಕ ತಾಲೂಕು ಹೆಸರಘಟ್ಟ ಹೋಬಳಿ ಹುರುಳಿಚಿಕ್ಕನಹಳ್ಳಿ ಗ್ರಾಮದ ಸರ್ವೆ ನಂಬರ್ 69ರಲ್ಲಿ 9-32 ಎಕರೆ ಸರ್ಕಾರಿ ಗೋಮಾಳ ಜಮೀನನ್ನು ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನ ಇಯಮ 97(4)ರ ಅಡಿ ಗೋಮಾಳ ಶೀರ್ಷಿಕೆಯಿಂದ ತಗ್ಗಿಸಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 21 ಮತ್ತು ನಿಯಮ 22 (ಎ)(1)(2) ರಡಿಯಲ್ಲಿ ಶಿಕ್ಷಣ (ಪ್ರಾಥಮಿಕದಿಂದ ಪ್ರೌಢಶಿಕ್ಷಣವನ್ನು ಒಳಗೊಂಡ ತಾಂತ್ರಿಕ, ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಗಳು) ಉದ್ದೇಶಕ್ಕೆ ಮಾರುಕಟ್ಟೆ ಮೌಲ್ಯ ಹಾಗೂ ಕೆಲವೊಂದು ಷರತ್ತುಗಳನ್ನು ವಿಧಿಸಿ ಶೈಕ್ಷಣಿಕ ಚಟುವಟಿಕೆಗಳಿಗಾಗಿ ರಾಷ್ಟ್ರೋತ್ಥಾನ ಪರಿಷತ್‌ಗೆ ಮಂಜೂರು ಮಾಡಬೇಕು,’ ಪ್ರಾದೇಶಿಕ ಆಯುಕ್ತರು ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿ ಪ್ರಸ್ತಾವನೆ ಸಲ್ಲಿಸಿದ್ದರು.
ಈ ಪ್ರಸ್ತಾವನೆಯನ್ನಾಧರಿಸಿ ಕಂದಾಯ ಇಲಾಖೆಯು ‘ ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 97(4)ರಂತೆ ಗೋಮಾಳ ಶೀರ್ಷಿಕೆಯಿಂದ ತಗ್ಗಿಸಿ, 1969ರ ನಿಯಮ 22ಎ(1)(i)(2) ಅಡಿ ನಿಯಮವನ್ನು ಸಡಿಸಲಿಸಿ ಶೈಕ್ಷಣಿಕ ಉದ್ದೇಶಕ್ಕಾಗಿ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಈ ಜಮೀನಿನ ಪ್ರಚಲಿತ ಮಾರುಕಟ್ಟೆ ಮೌಲ್ಯದ ಶೇ.25ರಷ್ಟು ಹಾಗೂ ಇತರೆ ಶಾಸನಬದ್ಧ ಶುಲ್ಕಗಳನ್ನು ವಿಧಿಸಿ,’ ರಾಷ್ಟ್ರೋತ್ಥಾನ ಪರಿಷತ್ ಸಂಸ್ಥೆಗೆ ಮಂಜೂರು ಮಾಡಿ 2022ರ ಫೆ.22ರಂದು ಆದೇಶ ಹೊರಡಿಸಿದೆ.
ಹುರುಳಿಚಿಕ್ಕನಹಳ್ಳಿ ಗ್ರಾಮದಲ್ಲಿ ಸರ್ವೇ ನಂಬರ್ 69ರ ಜಮೀನು ಮೂಲತಃ ಸರ್ಕಾರಿ ಗೋಮಾಳದ ಜಮೀನಾಗಿದೆ. ಆಕಾರ್‌ಬಂದ್‌ನಂತೆ ಒಟ್ಟು 23-24 ಎಕರೆ ಜಮೀನಿದೆ. ಈ ಪೈಕಿ ಸಾರ್ವಜನಿಕ ರಸ್ತೆ 2-03 ಎಕರೆ, ಸ್ಮಶಾನಕ್ಕಾಗಿ 0-13 ಗುಂಟೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ 1-20 ಎಕರೆ, ಮಂಜೂರು ಮಾಡಲಾಗಿದೆ. 9-32 ಎಕರೆ ಜಮೀಣಿಗೆ ನಮೂನೆ 50, 53 ಅಡಿ ರೈತರು ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಲಾಗಿದೆ. ಉಳಿಕೆ 19-30 ಎಕರೆ ಜಮೀನು ಲಭ್ಯವಿದೆ. ಈ ಪೈಕಿ 9-32 ಎಕರೆ ಜಮೀನನನ್ನು ರಾಷ್ಟ್ರೋತ್ಥಾನ ಪರಿಷತ್‌ಗೆ ಶೈಕ್ಷಣಿಕ ಉದ್ದೇಶಕ್ಕೆ ಮಂಜೂರು ಮಾಡಬಹುದು ಎಂದು ವರದಿ ಸಲ್ಲಿಕೆಯಾಗಿತ್ತು.
ಮಂಜೂರು ಮಾಡಿರುವ ಜಮೀನಿನ ಪ್ರಚಲಿತ ಮಾರ್ಗಸೂಚಿ ಮೌಲ್ಯ ಎಕರೆಯೊಂದಕ್ಕೆ 61,00,000 ರು., ಹಾಗೂ ಮಾರುಕಟ್ಟೆ ಮೌಲ್ಯ 80,00,000 ರು. ಇದೆ. ಗ್ರಾಮ ನಕ್ಷೆಯ ಪ್ರಕಾರ ಕುಂಬಾರಹಳ್ಳಿಗೆ ಪ್ರಸ್ತಾಪಿತ ಜಮೀನಿಗೆ ಹೊಂದಿಕೊಂಡಂತೆ ಬಂಡಿದಾರಿ ಹಾದುಹೋಗಿರುತ್ತದೆ. ಯಾವುದೇ ನ್ಯಾಯಾಲಯದಲ್ಲಿ ಪ್ರಕರಣವು ಬಾಕಿ ಇಲ್ಲ. ಯಾಔಉದೇ ಯೋಜನೆಗೆ ಭೂಸ್ವಾಧೀನ ಅಧಿಸೂಚನೆ ಹೊರಡಿಸಿಲ್ಲ. ಬೆಲೆಬಾಳುವ ಮರ ಗಿಡಗಳಿರುವುದಿಲ್ಲ. ಈ ಜಮೀನಿಗೆ ರಸ್ತೆ ಸಂಪರ್ಕವಿದ್ದು, ರಾಷ್ಟ್ರೀಯ ಹೆದ್ದಾರಿಯಿಂದ 10 ಕಿ ಮೀ ದೂರವಿದೆ ಎಂಬುದು ಆದೇಶದಿಂದ ತಿಳಿದು ಬಂದಿದೆ.
ಇದೇ ರಾಷ್ಟ್ರೋತ್ಥಾನ ಪರಿಷತ್‌ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ಹಿಂದೆ 76 ಎಕರೆ ಜಮೀನು ಮಂಜೂರು ಮಾಡಿದ್ದನ್ನು ಸಿಎಜಿ ವರದಿಯಲ್ಲಿ ಆಕ್ಷೇಪಿಸಲಾಗಿತ್ತು. ಈ ವರದಿಯನ್ನು ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಚರ್ಚೆಗೆ ಕೈಗೆತ್ತಿಕೊಂಡಿತ್ತು. ಈ ಸಮಿತಿಗೆ ಯಾವುದೇ ವರದಿಯನ್ನೂ ಸಲ್ಲಿಸದ ಕಂದಾಯ ಇಲಾಖೆಯು ಬೆಂಗಳೂರು ನಗರ ಜಿಲ್ಲೆಯ ಹೆಸರಘಟ್ಟದಲ್ಲಿ 9.32 ಎಕರೆ ಜಮೀನು ಮಂಜೂರು ಮಾಡಿರುವುದು ಮತ್ತೊಮ್ಮೆ ಸಿಎಜಿ ಆಕ್ಷೇಪಣೆಗೆ ದಾರಿಮಾಡಿಕೊಡಲಿದೆ.
ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಅವಶ್ಯಕವಾಗಿರುವುದಕ್ಕಿಂತ ಹೆಚ್ಚಿನ ಪ್ರಮಾಣದ ಗೋಮಾಳದ ವಿಸ್ತೀರ್ಣವನ್ನು ಕನಿಷ್ಠ ಪ್ರಮಾಣಕ್ಕೆ ಇಳಿಕೆ ಮಾಡುವುದಲ್ಲದೆ ಗ್ರಾಮದ ಜಾನುವಾರುಗಳು ಮೇಯುವುದಕ್ಕೆ ಅನುಕೂಲವಾಗುವಂತಹ ಸಾಕಷ್ಟು ಅರಣ್ಯ ಪ್ರದೇಶವಿದ್ದರೆ ಅದರ ವಿಸ್ತೀರ್ಣಕ್ಕನುಗುಣವಾಗಿ ಗ್ರಾಮದೊಳಗಿನ ಗೋಮಾಳದ ವಿಸ್ತೀರ್ಣ ಕಡಿಮೆ ಮಾಡಲು ರಾಜ್ಯ ಬಿಜೆಪಿ ಸರ್ಕಾರವು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 97(1) ಅನ್ವಯ ಗೋಮಾಳ ಜಮೀನನ್ನು ನಿಗದಿಪಡಿಸುವ ಬಗ್ಗೆ 2022ರ ಫೆ.24ರಂದು ಕಂದಾಯ ಇಲಾಖೆಯು ಸುತ್ತೋಲೆಯು ಹೊರಡಿಸಿದ್ದನ್ನು ಸ್ಮರಿಸಬಹುದು.