ಅವ್ಯವಹಾರ ಸಾಬೀತು; ಕಾರ್ಯದರ್ಶಿ ಹುದ್ದೆಯಿಂದ ಅಧೀನ ಕಾರ್ಯದರ್ಶಿ ಹುದ್ದೆಗೆ ಹಿಂಬಡ್ತಿ

photo credit;tv9

ಬೆಂಗಳೂರು; ಬೆಳಗಾವಿಯಲ್ಲಿ 2016 ಹಾಗೂ 17ನೇ ಸಾಲಿನಲ್ಲಿ ನಡೆದ ವಿಧಾನಮಂಡಲ ಚಳಿಗಾಲ ಅಧಿವೇಶನದ ವೇಳೆ ದುಂದು ವೆಚ್ಚ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸದ್ಯ ಅಮಾನತಿನಲ್ಲಿರುವ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಸ್‌ ಮೂರ್ತಿ ಅವರ ವಿರುದ್ಧದ ಎಲ್ಲಾ ಆರೋಪಗಳು ನಿಸ್ಸಂದೇಹವಾಗಿ ಸಾಬೀತಾಗಿದೆ ಎಂದು ಹಿರಿಯ ಐಎಎಸ್‌ ಅಧಿಕಾರಿ ಹರ್ಷ ಗುಪ್ತ ಅವರು ನೀಡಿದ್ದ ವಿಚಾರಣೆ ವರದಿ ಆಧರಿಸಿ ಅವರನ್ನು ಕಾರ್ಯದರ್ಶಿ ಹುದ್ದೆಯಿಂದ ಕೆಳಗಿರುವ ಅಧೀನ ಕಾರ್ಯದರ್ಶಿ ಹುದ್ದೆಗೆ ಹಿಂಬಡ್ತಿ ನೀಡಿ ಆದೇಶ ಹೊರಡಿಸಿದೆ.

 

ಅಲ್ಲದೆ ಅಧೀನ ಕಾರ್ಯದರ್ಶಿ ಹುದ್ದೆಯಲ್ಲಿ ಕಾರ್ಯವರದಿಮಾಡಿಕೊಂಡ ನಂತರ ಅವರಿಗೆ ಸಚಿವಾಲಯದ ಯಾವುದೇ ಜವಾಬ್ದಾರಿಯುತ ಕಾರ್ಯವನ್ನೂ ವಹಿಸತಕ್ಕದ್ದಲ್ಲ ಎಂದೂ ವಿಶೇಷ ಮಂಡಳಿಯು ಸೂಚಿಸಿದೆ. ಈ ಸಂಬಂಧ 2022ರ ಏಪ್ರಿಲ್‌ 21ರಂದು ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಈ ವರದಿಯಲ್ಲಿ ಆರೋಪಿತ ಅಧಿಕಾರಿಯವರ ವಿರುದ್ಧ ಮಾಡಲಾದ ಎಲ್ಲಾ ಆರೋಪಗಳು ನಿಸ್ಸಂದೇಹವಾಗಿ ಸಾಬೀತಾಗಿರುತ್ತದೆಂದು ಹರ್ಷಗುಪ್ತ ಅವರು ತಿಳಿಸಿದ್ದಾರೆ. ವಿಚಾರಣೆ ವರದಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಮತ್ತು ಹೇಳಿಕೆಗಳನ್ನು ಎಸ್‌ ಮೂರ್ತಿ ಅವರು ಸಲ್ಲಿಸಿದ್ದರು. ಆದರೆ ಆರೋಪಗಳ ನಿರಾಕರಣೆಗೆ ಪೂರಕವಾದ ಯಾವುದೇ ಅಗತ್ಯ ದಾಖಲೆಗಳನ್ನು ಒದಗಿಸಿರುವುದಿಲ್ಲ ಹಾಗೂ ದೋಷಾರೋಪಣೆಗೆ ಸಂಬಂಧಿಸಿದಂತೆ ಹೊಸದಾಗಿ ಯಾವುದೇ ಕಾನೂನಾತ್ಮಕ ಅಂಶಗಳನ್ನು ಪ್ರಸ್ತಾಪಿಸಿರುವುದಿಲ್ಲ ಎಂಬುದು ವರದಿಯಿಂದ ತಿಳಿದು ಬಂದಿದೆ.

 

ಎಸ್‌ ಮೂರ್ತಿ ಅವರಿಗೆ ಕಾರ್ಯದರ್ಶಿ ಹುದ್ದೆಯಿಂದ ಅಧೀನ ಕಾರ್ಯದರ್ಶಿ ಹುದ್ದೆಗೆ ಹಿಂಬಡ್ತಿ ನೀಡಿರುವ ಆದೇಶದ ಪ್ರತಿ

 

‘ವಿಚಾರಣೆ ವರದಿಯಲ್ಲಿನ ಎಲ್ಲಾ ಅಂಶಗಳನ್ನುಪರಿಶೀಲಿಸಿದ ಶಿಸ್ತು ಪ್ರಾಧಿಕಾರವಾದ ವಿಶೇಷ ಮಂಡಳಿಯು ಆರೋಪಿತ ಅಧಿಕಾರಿಯವರ ವಿರುದ್ಧ ಹೊರಿಸಲಾದ ಎಲ್ಲಾ ಅರೋಪಗಳೂ ನಿಸ್ಸಂದೇಹವಾಗಿ ಸಾಬೀತಾಗಿರುವುದರಿಂದ ಹಾಗೂ ಅವರು ವಿಚಾರಣೆ ವರದಿ ಕುರಿತು ಸಲ್ಲಿಸಿರುವ ಆಕ್ಷೇಪಣೆಗಳು, ಹೇಳಿಕೆಗಳು ಸಮರ್ಥನೀಯವಾಗಿಲ್ಲದಿರುವುದರಿಂದ ಅದನ್ನು ಒಪ್ಪಿಲ್ಲ,’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

 

 

ಅಲ್ಲದೆ ಕೆಳಗಿಳಿಸಿರುವ ಹುದ್ದೆಯಲ್ಲಿ ಅಧೀನ ಕಾರ್ಯದರ್ಶಿ ಹುದ್ದೆಯಲ್ಲಿನ ಜೇಷ್ಠತಾ ಪಟ್ಟಿಯಲ್ಲಿರುವ ಎಲ್ಲಾ ಅಧಿಕಾರಿಗಳ ಜೇಷ್ಠತೆಗಿಂತ ಕಿರಿಯರನ್ನಾಗಿಸಲು ಹಾಗೂ ಅವರಿಗೆ ಅಧೀನ ಕಾರ್ಯದರ್ಶಿ ವೇತನ ಶ್ರೇಣಿಯ ಮೂಲವೇತನವನ್ನು ನಿಗದಿಪಡಿಸಲು ಸಹ ಆದೇಶಿಸಲಾಗಿದೆ.

 

ಅಕ್ರಮ ಹಿನ್ನೆಲೆ ಪರಿಶೀಲನೆ ನಡೆಸಲು ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಹೆಚ್ಚುವರಿ ನಿರ್ದೇಶಕ ಎನ್‌.ಬಿ. ಶಿವರುದ್ರಪ್ಪ ನೇತೃತ್ವದ ಐವರು ಅಧಿಕಾರಿಗಳ ತಂಡವನ್ನು ರಚಿಸಲಾಗಿತ್ತು. ಈ ತಂಡ ಸಲ್ಲಿಸಿರುವ ವರದಿ ಅಧರಿಸಿ ಕ್ರಮ ಜರುಗಿಸಲಾಗಿತ್ತು.

 

ಲೆಕ್ಕಪರಿಶೋಧನೆ ತಂಡ ಸಲ್ಲಿಸಿದ್ದ 40 ಪುಟಗಳ ವರದಿಯನ್ನು ರಾಜ್ಯ ಸರ್ಕಾರದ ಹಿಂದಿನ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ ಅವರು ವಿಧಾನಸಭೆ ಸ್ಪೀಕರ್‌ ಕೆ.ಆರ್‌.ರಮೇಶ್‌ ಕುಮಾರ್‌ ಅವರಿಗೆ ಸಲ್ಲಿಸಿದ್ದರು.

 

ಕೆಲವೊಂದು ಸೇವೆಗಳಿಗೆ ಎರಡೆರಡು ಸಲ ಬಿಲ್‌ ಪಾವತಿ ಮಾಡಲಾಗಿದೆ ಎಂದೂ ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು.ಬೆಳಗಾವಿಯಲ್ಲಿ 2016 ಹಾಗೂ 17ನೇ ಸಾಲಿನಲ್ಲಿ ನಡೆದ ವಿಧಾನಮಂಡಲ ಚಳಿಗಾಲ ಅಧಿವೇಶನದ ವೇಳೆ ಮಾಡಲಾದ ಖರ್ಚುವೆಚ್ಚಗಳು ಸಂಶಯಾಸ್ಪದವಾಗಿದ್ದು, ಇದರಿಂದ ರಾಜ್ಯದ ಬೊಕ್ಕಸಕ್ಕೆ 10ರಿಂದ 12ಕೋಟಿ ಅನಗತ್ಯ ಹೊರೆಯಾಗಿದೆ ಎಂದಿದ್ದ  ಹಣಕಾಸು ಇಲಾಖೆ, ಈ ಬಗ್ಗೆ ಉನ್ನತ ಮಟ್ಟದ ವಿಚಾರಣೆ ನಡೆಸುವಂತೆ ಶಿಫಾರಸು ಮಾಡಿತ್ತು.

 

ಈ ಅವಧಿಯ ಅಧಿವೇಶನಗಳ ಖರ್ಚುವೆಚ್ಚಗಳನ್ನು ಪರಿಶೀಲಿಸಿದ್ದ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಹೆಚ್ಚುವರಿ ನಿರ್ದೇಶಕ ಎನ್‌ ಬಿ  ಶಿವರುದ್ರಪ್ಪ ನೇತೃತ್ವದ ಐವರು ಅಧಿಕಾರಿಗಳ ತಂಡ ಅಧಿವೇಶನದ ವೇಳೆ ಮಾಡಲಾದ ಊಟೋಪಚಾರ, ಪೆಂಡಾಲ್‌ ನಿರ್ಮಾಣ, ಸುವರ್ಣಸೌಧದ ಸುಣ್ಣ– ಬಣ್ಣ, ಕಿಟಕಿ– ಬಾಗಿಲುಗಳಿಗೆ ಮೆಲಾಮೈನ್‌ ಪಾಲೀಶ್‌, ಕೆಮಿಕಲ್‌ ಶೌಚಾಲಯ ಹಾಗೂ ಸೊಳ್ಳೆ ಪರದೆಗಳಿಗೆ ಪಾವತಿಸಿರುವ ಬಿಲ್‌ಗಳು ಸಂದೇಹಕ್ಕೆ ಕಾರಣವಾಗಿದೆ ಎಂದೂ ಹೇಳಿತ್ತು.

 

ಕೆಲವೊಂದು ಸೇವೆಗಳಿಗೆ ಎರಡೆರಡು ಸಲ ಬಿಲ್‌ ಪಾವತಿ ಮಾಡಲಾಗಿದೆ ಎಂದೂ ಪ್ರಸ್ತಾಪಿಸಲಾಗಿತ್ತು. 2016ರ ನವೆಂಬರ್‌ 21ರಿಂದ ಡಿಸೆಂಬರ್‌ 3ರವರೆಗೆ ನಡೆದ ಚಳಿಗಾಲದ ಅಧಿವೇಶನಕ್ಕೆ ಸರ್ಕಾರ ಬಜೆಟ್‌ನಲ್ಲಿ 20.55ಕೋಟಿ ಅನುದಾನ ಒದಗಿಸಿತ್ತು. 2017ರ ನವೆಂಬರ್‌ 13ರಿಂದ 24ರವರೆಗೆ ಸೇರಿದ್ದ ಅಧಿವೇಶನಕ್ಕೆ 29.39 ಕೋಟಿ ಅನುದಾನ ನೀಡಿತ್ತು. ಎರಡೂ ಅಧಿವೇಶನಗಳಿಗೆ ಹಣಕಾಸು ಇಲಾಖೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪಾರದರ್ಶಕತೆ ಅಧಿನಿಯಮ 1999ರ ಕಲಂ 4 (ಜಿ) ಅಡಿ ಕ್ರಮವಾಗಿ  20 ಕೋಟಿಹಾಗೂ  21.57 ಕೋಟಿಗೆ ವಿನಾಯ್ತಿ ನೀಡಿತ್ತು. ಈ ಮೊತ್ತಕ್ಕಿಂತ 8.60 ಕೋಟಿ ಹೆಚ್ಚುವರಿಯಾಗಿ ಖರ್ಚು ಮಾಡಲಾಗಿದೆ ಎಂದು ವರದಿ ಆಕ್ಷೇಪಿಸಿತ್ತು.

 

2017ರ ಅನುದಾನದಲ್ಲಿ ಅದರ ಹಿಂದಿನ ವರ್ಷದ (2016) ಬಾಕಿ ಬಿಲ್‌ಗಳನ್ನು ಪಾವತಿಸಲು 3.68 ಕೋಟಿ ಬಳಸಿರುವುದು ಬಜೆಟ್‌ ಕೈಪಿಡಿಯ ಸೂಚನೆಗಳಿಗೆ ವಿರುದ್ಧವಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಯಾವುದೇ ನೀತಿ– ನಿಯಮ ಪಾಲಿಸದೆ ಕೊಟೇಷನ್‌ಗಳನ್ನು ಕರೆಯಲಾಗಿದೆ. ಗುತ್ತಿಗೆದಾರರು, ತೆರಿಗೆ, ಜಿಎಸ್‌ಟಿ ಹಾಗೂ ಸೇವಾ ತೆರಿಗೆಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಸಂದಾಯ ಮಾಡದಿರುವ ಕುರಿತು ಸಮಗ್ರ ಪರಿಶೀಲನೆ ನಡೆಸಿತ್ತು.

 

ಕೆಲವು ಏಜೆನ್ಸಿಗಳು ಕಂಪ್ಯೂಟರ್‌ ಜನರೇಟೆಡ್‌ ಲೆಟರ್‌ಹೆಡ್‌ನಲ್ಲಿ ಕೊಟೇಷನ್‌ ನೀಡಿದ್ದಾರೆ. ಎಸ್‌.ಆರ್‌ ಮಾರುಕಟ್ಟೆ ದರವನ್ನು ಯಾವ ದರದ ಜೊತೆ ಹೋಲಿಕೆ ಮಾಡಲಾಗಿದೆ ಎಂಬ ವಿವರಗಳಿರಲಿಲ್ಲ. ಕೆಲವು ಕೊಟೇಷನ್‌ ದರಗಳು ಅಸಹಜ ರೀತಿಯಲ್ಲಿ ಹೆಚ್ಚಳವಾಗಿರುವುದು ಕಂಡು ಬರುತ್ತದೆ. ಲೀಟರ್‌ ಫಿನಾಯಿಲ್‌  500, ಪೆಂಡಾಲ್‌ ಚದರಡಿಗೆ ದಿನಕ್ಕೆ  15 ಮತ್ತು ಸೊಳ್ಳೆ ಪರದೆ ಬಾಡಿಗೆಗೆ ಪಡೆದಿರುವುದನ್ನು ಉದಾಹರಿಸಲಾಗಿತ್ತು.

 

ಪೆಂಡಾಲ್‌ಗೆ 9.32 ಕೋಟಿ, ಸುವರ್ಣವಿಧಾನಸೌಧ ಸುಣ್ಣಬಣ್ಣಕ್ಕೆ 2.48 ಕೋಟಿ, ಮೆಲಾಮೈನ್ ಪಾಲೀಶ್‌ಗೆ 1.21 ಕೋಟಿ, ಸೊಳ್ಳೆ ಪರದೆ ಬಾಡಿಗೆಗೆ 1.84 ಕೋಟಿ, ಕೆಮಿಕಲ್‌ ಶೌಚಾಲಯಕ್ಕೆ 2.42 ಕೋಟಿ ಮತ್ತು ಗಣ್ಯರು ಹಾಗೂ ಊಟದ ಬಿಲ್‌ಗೆ 45.48 ಲಕ್ಷ ರು  ವೆಚ್ಚವಾಗಿತ್ತು ಎಂದು ಲೆಕ್ಕದಲ್ಲಿ ತೋರಿಸಲಾಗಿತ್ತು. ಇದು ಅನುಮಾನಸ್ಪದ ಬಿಲ್‌ಗಳು ಎಂದು ವರದಿಯಲ್ಲಿ ಹೇಳಲಾಗಿತ್ತು.

 

ಈ ಎಲ್ಲಾ ಆರೋಪಗಳ ಕುರಿತಂತೆ ಕರ್ತವ್ಯಲೋಪ ಹಾಗೂ ನಡತೆ ನಿಯಮಾವಳಿಗಳ ನಿಯಮ 3 ನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದ ಹಿನ್ನೆಲೆಯಲ್ಲಿ ಶಿಸ್ತು ಹಾಗೂ ನೇಮಕಾತಿ ಪ್ರಾಧಿಕಾರವಾದ ವಿಧಾನಸಭೆಯ ವಿಶೇಷ ಮಂಡಳಿಯು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳು 1957ರ ನಿಯಮ 10ರ ಅನ್ವಯ ಎಸ್‌ ಮೂರ್ತಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದನ್ನು ಸ್ಮರಿಸಬಹುದು.

 

ಆರಂಭದಲ್ಲಿ ಆರೋಪಿತ ಅಧಿಕಾರಿ ಎಸ್‌ ಮೂರ್ತಿ ಅವರ ವಿರುದ್ಧ  ದೋಷಾರೋಪಣೆ ಪಟ್ಟಿಯನ್ನು ಜಾರಿಗೊಳಿಸಲಾಗಿತ್ತು. ಪ್ರಕರಣದ ಸತ್ಯಾಸತ್ಯತೆಗಳನ್ನು ಕಂಡುಕೊಳ್ಳುವ ದೃಷ್ಟಿಯಿಂದ 1957ರ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 11ರ ಉಪ ನಿಯಮ 5(ಸಿ) ಅಡಿಯಲ್ಲಿ ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಅಜಯ್‌ ಸೇಠ್‌ ಅವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮೀಸಲಾಗಿತ್ತು. ಆ ನಂತರ ಇವರು ಕೇಂದ್ರ ಸೇವೆ ಮೇಲೆ ತೆರಳಿದ್ದರಿಂದಾಗಿ ಮತ್ತೊಬ್ಬ ಹಿರಿಯ ಐಎಎಸ್‌ ಅಧಿಕಾರಿ ಹರ್ಷ ಗುಪ್ತ ಅವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಲಾಗಿತ್ತು.

the fil favicon

SUPPORT THE FILE

Latest News

Related Posts