Saturday | April 11, 2026 |

866.59 ಕೋಟಿ ರು ಮೊತ್ತದ 399 ಬಳಕೆ ಪ್ರಮಾಣ ಪತ್ರಗಳ ಸಲ್ಲಿಕೆಗೆ ಬಾಕಿ ಉಳಿಸಿಕೊಂಡ ಇಲಾಖೆಗಳು; ಅನುದಾನ ದುರುಪಯೋಗ ಸಾಧ್ಯತೆ?

ಬೆಂಗಳೂರು; ರಾಜ್ಯದ ಹಲವು ಇಲಾಖೆಗಳು ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಕೆಯಲ್ಲಿ ತೀವ್ರ ವಿಳಂಬ ಮಾಡುತ್ತಿವೆ. ಈ ಬಗ್ಗೆ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರು ಈಚೆಗೆ ನೀಡಿರುವ ಹಲವು ವರದಿಗಳಲ್ಲಿಯೂ ಇಲಾಖೆಗಳ ವಿಳಂಬದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತಲೇ ಬಂದಿದೆ.  ಆದರೂ ಸಹ ಇಲಾಖೆಗಳು ಇನ್ನು ಸುಧಾರಿಸಿಲ್ಲ. ನಿಗದಿತ ಅವಧಿಯೊಳಗೆ ಬಳಕೆ ಪ್ರಮಾಣಪತ್ರಗಳನ್ನು ಸಲ್ಲಿಸುತ್ತಿಲ್ಲ.

2026ರ ಮಾರ್ಚ್‌ನಲ್ಲಿ ನಡೆದ ಕರ್ನಾಟಕ ವಿಧಾನಮಂಡಲದ ಅಧಿವೇಶನದಲ್ಲಿ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರು ಮಂಡಿಸಿರುವ ವರದಿಯಲ್ಲಿಯೂ ಬಳಕೆ ಪ್ರಮಾಣ ಪತ್ರ ಸಲ್ಲಿಸದೇ ಇರುವ ಬಗ್ಗೆ ಪ್ರಸ್ತಾವಿಸಿದೆ.

 

 

2024-25ನೇ ಸಾಲಿನಲ್ಲಿ 866.59 ಕೋಟಿ ರುಪಾಯಿಗಳ ಮೊತ್ತ 399 ಬಳಕೆ ಪ್ರಮಾಣ ಪತ್ರಗಳು ಬಾಕಿ ಉಳಿದಿದ್ದವು. ಈ ಬಳಕೆ ಪ್ರಮಾಣ ಪತ್ರಗಳು 2023ರ ಸೆಪ್ಟಂಬರ್‍‌ವರೆಗಿನ ಸಹಾಯಾನುದಾನ ಬಿಲ್‌ಗಳಿಗೆ ಸಂಬಂಧಿಸಿವೆ. ಇದರಲ್ಲಿ ವರ್ಷದ ಆರಂಭದಲ್ಲಿ 118.64ಕೋಟಿ ರು ಮೊತ್ತದ 92 ಬಳಕೆ ಪ್ರಮಾಣಪತ್ರಗಳು ಬಾಕಿ ಇದ್ದವು.

 

 

ವರ್ಷದ ಅವಧಿಯಲ್ಲಿ 627.15 ಕೋಟಿ ರು ಮೊತ್ತದ 257 ಬಾಕಿ ಬಳಕೆ ಪ್ರಮಾಣಪತ್ರಗಳನ್ನು ತೆರವುಗೊಳಿಸಿದೆ. 2025ರ ಮಾರ್ಚ್‌ 31ರವವರೆಗೆ 239.45 ಕೋಟಿ ರು ಮೊತತದ 142 ಬಳಕೆ ಪ್ರಮಾಣ ಪತ್ರಗಳು ಬಾಕಿ ಉಳಿದಿದ್ದವು ಎಂದು ಸಿಎಜಿ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

2021-22ಕ್ಕಿಂತ ಮೊದಲು 11.79 ಕೋಟಿ ರು ಮೊತ್ತಕ್ಕೆ ಸಂಬಂಧಿಸಿದಂತೆ 8 ಬಳಕೆ ಪ್ರಮಾಣ ಪತ್ರಗಳು ಬಾಕಿ ಇದ್ದವು. 2021-22ರ ವರ್ಷದ ಅಂತ್ಯಕ್ಕೆ 3.99 ಕೋಟಿ ರು ಮೊತ್ತಕ್ಕೆ 4 ಬಳಕೆ ಪ್ರಮಾಣ ಪತ್ರಗಳು ಬಾಕಿ ಇದ್ದವು. 2023-24ರಲ್ಲಿ 16.65 ಕೋಟಿ ರುಪಾಯಿ ಮೊತ್ತಕ್ಕೆ 18 ಬಳಕೆ ಪ್ರಮಾಣ ಪತ್ರಗಳು ಬಾಕಿ ಇದ್ದವು. 2024-25ನೇ ಸಾಲಿನಲ್ಲಿ 207.02 ಕೋಟಿ ರು ಮೊತ್ತಕ್ಕೆ 112 ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಸಿರಲಿಲ್ಲ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.

 

 

2025ರ ಮಾರ್ಚ್‌ 31ರ ಅಂತ್ಯಕ್ಕೆ ವೈದ್ಯಕೀಯ ಶಿಕ್ಷಣ ಮತ್ತು ಸಾರ್ವಜನಿಕ ಆರೋಗ್ಯ ಇಲಾಖೆಗೆ ಸಂಬಂಧಿಸಿದ್ದ 225.64 ಕೋಟಿ ರು ಮೊತ್ತಕ್ಕೆ ಬಳಕೆ ಪ್ರಮಾಣ ಪತ್ರಗಳು ಬಾಕಿ ಇದ್ದವು.

 

‘ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಸದಿರುವುದು ಅನುದಾನದ ದುರುಪಯೋಗ ಅಪಾಯದಿಂದ ಕೂಡಿದೆ. ರಾಜ್ಯ ಸರ್ಕಾರವು ಈ ಅಂಶವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಬೇಕು. ಮತ್ತು ಬಳಕೆ ಪ್ರಮಾಣ ಪತ್ರಗಳನ್ನು ಸಮಯೋಚಿತವಾಗಿ ಸಲ್ಲಿಸಬೇಕು. ಇದಕ್ಕಾಗಿ ವ್ಯಕ್ತಿಗಳನ್ನು ಜವಾಬ್ದಾರರನ್ನಾಗಿ ಮಾಡುವುದು ಅತ್ಯಂತ ಅಗತ್ಯವಾಗಿದೆ,’ ಎಂದು ಸಿಎಜಿಯು ಹೇಳಿತ್ತು.

ಇದಕ್ಕೆ ಉತ್ತರಿಸಿದ್ದ ರಾಜ್ಯ ಸರ್ಕಾರವು ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಸದೇ ಇರುವ ವ್ಯಕ್ತಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಜಿಗೆ ತಿಳಿಸಿತ್ತು.

 

ವಿಪತ್ತು ನಿರ್ವಹಣೆಗೆಂದು ಮಾಡಿದ್ದ ಖರ್ಚಿಗೆ ಸಂಬಂಧಿಸಿದಂತೆ ಏಜೆನ್ಸಿಗಳಿಂದ  ಬಳಕೆ ಪ್ರಮಾಣ ಪತ್ರಗಳನ್ನು ಪಡೆದಿರಲಿಲ್ಲ. ಹೀಗಾಗಿ ವೆಚ್ಚದ ನೈಜ ಮೊತ್ತವನ್ನು ಉಲ್ಲೆಖಿಸಿರಲಿಲ್ಲ. ವಿಪತ್ತುವಾರು ಸ್ವೀಕೃತಿಗಳು, ವೆಚ್ಚಗಳ ವಿವರಗಳು ಇರಲಿಲ್ಲ. ಕರ್ನಾಟಕ ರಾಜ್ಯ ನೈಸರ್ಗಿ ವಿಕೋಪ ಮೇಲ್ವಿಚಾರಣೆ ಕೇಂದ್ರವು ಸ್ವೀಕರಿಸಿದ್ದ ಮೊತ್ತವನ್ನು ಖರ್ಚು ಮಾಡಿದೆಯಾದರೂ ಈ ಖರ್ಚಿನ ಬಗ್ಗೆ ಬಳಕೆ ಪ್ರಮಾಣ ಪತ್ರವನ್ನು ಒದಗಿಸಿರಲಿಲ್ಲ. ಅಲ್ಲದೇ ಕಂದಾಯ ಇಲಾಖೆಯೂ ಸಹ ಬಳಕೆ ಪ್ರಮಾಣ ಪತ್ರ ಸಲ್ಲಿಸುವಂತೆ ಒತ್ತಾಯಿಸಿರಲಿಲ್ಲ.

46.99 ಕೋಟಿಗೆ ಬಳಕೆ ಪ್ರಮಾಣ ಪತ್ರಗಳೇ ಇರಲಿಲ್ಲ

ಕರ್ನಾಟಕ ರಾಜ್ಯ ನೈಸರ್ಗಿ ವಿಕೋಪ ಮೇಲ್ವಿಚಾರಣೆ ಕೇಂದ್ರಕ್ಕೆ 2017-18ರಿಂದ 2022-23ರವರೆಗೆ ಒಟ್ಟಾರೆ 46.99 ಕೋಟಿ ರು ಬಿಡುಗಡ ಮಾಡಲಾಗಿತ್ತು ಎಂದು ನೋಡಲ್ ಇಲಾಖೆಯು ಹೇಳಿತ್ತು. ಆದರೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣೆ ಕೇಂದ್ರವು 47.89 ಕೋಟಿ ರು.ಗಳನ್ನು ಸ್ವೀಕರಿಸಿತ್ತು. ಬಳಕೆ ಪ್ರಮಾಣ ಪತ್ರಗಳ ಅನುಪಸ್ಥಿತಿ ಮತ್ತು ಇಲಾಖೆ, ಏಜೆನ್ಸಿ ನಡುವೆ ಹೊಂದಾಣಿಕೆ ಇರಲಿಲ್ಲ.

ಶನಿ ಮಹಾತ್ಮ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ಕೋಟ್ಯಂತರ ರುಪಾಯಿ ಅನುದಾನ ಮಂಜೂರು ಮಾಡಲಾಗಿತ್ತು. ಕಳೆದ 5 ವರ್ಷಗಳಲ್ಲಿ 203.34 ಕೋಟಿ ರು. ಮೊತ್ತದಷ್ಟು ಸಾಮಾನ್ಯ ಅನುದಾನಗಳಿಗೆ ದೇವಸ್ಥಾನಗಳ ಆಡಳಿತ ಮಂಡಳಿಗಳು ಹಣ ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಸಿರಲಿಲ್ಲ. ಮತ್ತು ಬಹುತೇಕ ದೇವಸ್ಥಾನಗಳಿಗೆ ಶಾಸನಬದ್ಧವಾಗಿದ್ದ ನೀತಿಗಳನ್ನೂ ಉಲ್ಲಂಘಿಸಿ ಅನುದಾನ ಬಿಡುಗಡೆ ಮಾಡಿರುವುದನ್ನೂ ಮಹಾಲೇಖಪಾಲರು ಪತ್ತೆ ಹಚ್ಚಿದ್ದರು.

ಕಳೆದ 5 ವರ್ಷಗಳಲ್ಲಿ ಒಟ್ಟಾರೆ 226.53 ಕೋಟಿ ರು ಅನುದಾನ ಪೈಕಿ 203.34 ಕೋಟಿ ರು. ಮೊತ್ತದಷ್ಟು ಸಾಮಾನ್ಯ ಅನುದಾನಗಳಿಗೆ ಹಣ ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಸಿರಲಿಲ್ಲ. ಇಲಾಖೆಯು ಬಿಡುಗಡೆ ಮಾಡಿದ್ದ 226.53 ಕೋಟಿ ಮೊತ್ತದಷ್ಟು ಸಾಮಾನ್ಯ ಅನುದಾನಗಳ ಪೈಕಿ 39.45 ಕೊಟಿ ರು ಮೊತ್ತವನ್ನು ಅಂದರೇ ಶೆ.17ರಷ್ಟನ್ನು ಫಲಾನುಭವಿಗಳಿಗೆ ಬಿಡುಗಡೆ ಮಾಡಿರಲಿಲ್ಲ. ಹಾಗೂ ಜಿಲ್ಲಾ ಮಟ್ಟದಲ್ಲಿ ಬ್ಯಾಂಕ್‌ಗಳಲ್ಲಿ ಜಿಲ್ಲಾಧಿಕಾರಿಗಳ ಉಳಿತಾಯ ಖಾತೆಯಲ್ಲಿ ಕೂಡಿಟ್ಟಿತ್ತು ಎಂದು ಸಿಎಜಿ ವರದಿ ಹೇಳಿತ್ತು.

ಅಲ್ಲದೇ 2017-18ರಿಂದ 2023-24ರವರೆಗೆ 118.64 ಕೋಟಿ ರು.ಗಳಿಗೆ ಬಳಕೆ ಪ್ರಮಾಣ ಪತ್ರಗಳನ್ನು ಹಲವು ಇಲಾಖೆಗಳು ಸಲ್ಲಿಸಿರಲಿಲ್ಲ. ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಸದೇ ಇರುವುದು ಹಣ ದುರುಪಯೋಗಕ್ಕೆ ದಾರಿ ಮಾಡಿಕೊಟ್ಟಿರುವ ಸಾಧ್ಯತೆಗಳಿವೆ. 2023-24ರ ಅವಧಿಯಲ್ಲೇ ಅತೀ ಹೆಚ್ಚು ಎಂದರೇ 95.29 ಕೋಟಿ ರು ವೆಚ್ಚಕ್ಕೆ ಬಳಕೆ ಪ್ರಮಾಣ ಪತ್ರಗಳು ಸಲ್ಲಿಕೆಯಾಗಿರಲಿಲ್ಲ.  ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಸದೇ ಇರುವ ಅಧಿಕಾರಿಗಳನ್ನು ಇದುವರೆಗೂ ಹೊಣೆಗಾರರನ್ನಾಗಿ ಮಾಡಿಲ್ಲ.

ಕರ್ನಾಟಕ ಆರ್ಥಿಕ ಸಂಹಿತೆ 1958ರ ನಿಯಮ 161(5)ರ ಪ್ರಕಾರ ನಿರ್ದಿಷ್ಟ ಉದ್ದೇಶಗಳಿಗಾಗಿ ಒದಗಿಸಿದ್ದ ಅನುದಾನಗಳಿಗೆ ಸಂಬಂಧಿಸಿದಂತೆ ಮಂಜೂರಾತಿ ದಿನಾಂಕದಿಂದ 18 ತಿಂಗಳ ಒಳಗಾಗಿ ಇಲಾಖೆ ಅಧಿಕಾರಿಗಳು ಬಳಕೆ ಪ್ರಮಾಣ ಪತ್ರಗಳನ್ನು ಪಡೆಯಬೇಕು. ಮತ್ತು ಇವುಗಳನ್ನು ಪರಿಶೀಲನೆ ನಡೆಸಿದ ನಂತರ ಮಹಾಲೇಖಪಾಲರಿಗೆ ಕಳಿಸಬೇಕು.

ನಿಗದಿತ ಅವಧಿಗಳನ್ನು ಮೀರಿದ ಬಳಕೆ ಪ್ರಮಾಣ ಪತ್ರಗಳು ಉದ್ದೇಶಿತ ಕಾರ್ಯಕ್ಕಾಗಿ ಅನುದಾನದ ಬಳಕೆ ಕುರಿತು ಹೆಚ್ಚು ಅನುಮಾನಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಸಿಎಜಿಯ ಹೇಳಿದ್ದರೂ ಸಹ ಸರ್ಕಾರವು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.

118.64 ಕೋಟಿ ವೆಚ್ಚದ ಬಳಕೆ ಪ್ರಮಾಣ ಪತ್ರಗಳೆಲ್ಲಿ?

2017-18ರಿಂದ 2023-24ರವರೆಗೆ ಒಟ್ಟಾರೆ 118.64 ಕೋಟಿ ರು ವೆಚ್ಚದ ಬಳಕೆ ಪ್ರಮಾಣ ಪತ್ರಗಳನ್ನು ಸಕ್ಷಮ ಪ್ರಾಧಿಕಾರಗಳಿಂದ  ಇಲಾಖೆಗಳು ಪಡೆದುಕೊಂಡಿಲ್ಲ. 2017-18ರಲ್ಲಿ 0.76 ಕೋಟಿ, 2020-21ರಲ್ಲಿ 9.22 ಕೋಟಿ, 2021-22ರಲ್ಲಿ 8.12 ಕೋಟಿ, 2022-23ರಲ್ಲಿ 5.25 ಕೋಟಿ, 2023-24ರಲ್ಲಿ 95.29 ಕೋಟಿ ರು ವೆಚ್ಚಕ್ಕೆ ಸಂಬಂಧಿಸಿದಂತೆ ಬಳಕೆ ಪ್ರಮಾಣ ಪತ್ರಗಳು ಸಲ್ಲಿಕೆಯಾಗಿರಲಿಲ್ಲ ಎಂಬುದು ಸಿಎಜಿ ವರದಿ ಹೇಳಿತ್ತು.

ಬಳಕೆಯಾಗದ ಅನುದಾನವನ್ನು ಸರ್ಕಾರಕ್ಕೆ ವಾಪಸ್‌ ಮಾಡಬೇಕು ಅಥವಾ ನಂತರದ ವರ್ಷದಲ್ಲಿ ಪಡೆಯಬೇಕಾದ ಅನುದಾನಕ್ಕೆ ಸರಿ ಹೊಂದಿಸಬೇಕು ಎಂದು ನಿಯಮದಲ್ಲಿ ಸ್ಪಷ್ಟವಾಗಿದೆ. 2022-23ರ ಅವಧಿಯಲ್ಲಿ 48 ಬಳಕೆ ಪ್ರಮಾಣ ಪತ್ರಗಳು ಬಾಕಿ ಇದ್ದವು. ಇದರ ಮೊತ್ತ  41.67 ಕೋಟಿ ರು ಮೊತ್ತದ್ದಾಗಿತ್ತು. ನಂತರ ಈ ಸಂಖ್ಯೆಯು 92ಕ್ಕೇರಿತ್ತು. ಇದರ ಮೊತ್ತ   118.64 ಕೋಟಿ ಗಳಾಗಿತ್ತು.

2023-24ರ ಅವಧಿಯಲ್ಲಿ ಎರಡು ಇಲಾಖೆಗಳಿಗೆ ಸಂಬಂಧಿಸಿದಂತೆ   118.64 ಕೋಟಿ ರು ಮೊತ್ತಕ್ಕೆ ಬಳಕೆ ಪ್ರಮಾಣ ಪತ್ರಗಗಳು ಬಾಕಿ ಉಳಿದಿದ್ದವು.  2021-22ರ ಅವಧಿಯಲ್ಲಿ  ಕ್ರೀಡೆ ಮತ್ತು ಯುವಜನ ಸೇವೆಗಳು, ವೈದ್ಯಕೀಯ ಮತ್ತು  ಸಾರ್ವಜನಿಕ ಆರೋಗ್ಯ, ವಾರ್ತಾ ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿಯೂ ಬಳಕೆ ಪ್ರಮಾಣ ಪತ್ರಗಳು ಬಾಕಿ ಇದ್ದವು.

‘ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಸದಿರುವುದು ಹಣ ದುರುಪಯೋಗದ ಅಪಾಯದಿಂದ ಕೂಡಿದೆ. ರಾಜ್ಯ ಸರ್ಕಾರವು ಈ ಅಂಶವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲು ತನ್ನ ಪ್ರಯತ್ನವನ್ನು ಮುಂದುವರೆಸಬೇಕು. ಮತ್ತು ಬಳಕೆ ಪ್ರಮಾಣ ಪತ್ರಗಳನ್ನು ಸಕಾಲಿಕವಾಗಿ ಸಲ್ಲಿಸಲು ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು,’ ಎಂದು ವರದಿಯಲ್ಲಿ ಶಿಫಾರಸ್ಸು ಮಾಡಿತ್ತು.

ಪ್ರತೀ ವರ್ಷ ರಾಜ್ಯವು ಸ್ಥಳೀಯ ಸಂಸ್ಥೆಗಳು, ಪಂಚಾಯತ್‌ರಾಜ್‌ ಸಂಸ್ಥೆಗಳು, ಸಾರ್ವಜನಿಕ ಉದ್ಯಮಗಳು, ಎನ್‌ಜಿಒಗಳು, ಸ್ವಾಯತ್ತೆ ಸಂಸ್ಥೆಗಳು ಸಹ ಶೇ.90ರಷ್ಟು ಸಹಾಯಾನುದಾನ ಪಡೆದಿದ್ದರೂ ಸಹ ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಸಿರಲಿಲ್ಲ.

‘ರಾಜ್ಯ ಸರ್ಕಾರವು ಇಲಾಖೆಗಳು ಸ್ವೀಕರಿಸಿದ ಅನುದಾನಗಳಿಗೆ ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಸಲು ಎಲ್ಲಾ ಆಡಳಿತ ಇಲಾಖೆಗಳಿಗೆ ಸೂಚನೆಗಳನ್ನು ನೀಡಿದೆ ಎಂದು ಸಿಎಜಿಗೆ ಉತ್ತರಿಸಿತ್ತು. ಆದರೆ ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಸದೇ ಬಾಕಿ ಉಳಿಸಿಕೊಂಡಿರುವ ಪ್ರಮಾಣವು ಶೇ. 92ರಷ್ಟು ಹೆಚ್ಚಾಗಿದೆ,’ ಎಂದು ಸಿಎಜಿ ವರದಿಯು ಬಹಿರಂಗಪಡಿಸಿತ್ತು.

ವಿಪತ್ತುಗಳ ಅಪಾಯವನ್ನು ತಡೆಗಟ್ಟುವುದು ಮತ್ತು ಕಡಿಮೆ ಮಾಡುವ ಉದ್ದೇಶದಿಂದ ಕರ್ನಾಟಕ ಸೇರಿದಂತೆ ಒಟ್ಟು 12 ರಾಜ್ಯಗಳು ತಮಗೆ  ಹಂಚಿಕೆಯಾಗಿದ್ದ 1,200 ಕೋಟಿ ರುಪಾಯಿ ಅನುದಾನದ ಬಳಕೆ ಮಾಡಿರುವ ಪ್ರಮಾಣ ಪತ್ರಗಳನ್ನು ಸಲ್ಲಿಸಿರಲಿಲ್ಲ.

ಕೇಂದ್ರ ಗೃಹ ಸಚಿವಾಲಯದ ವಿಪತ್ತು ನಿರ್ವಹಣೆ ವಿಭಾಗವು ಕರ್ನಾಟಕ ಸೇರಿದಂತೆ ದೇಶದ 12 ರಾಜ್ಯ ಸರ್ಕಾರಗಳಿಗೆ 2026ರ ಫೆಬ್ರುವರಿ 6ರಂದೇ ಈ ಕುರಿತು ಪತ್ರ ಬರೆದಿದೆ. ಈ 12 ರಾಜ್ಯಗಳಿಗೆ ತಲಾ 100 ಕೋಟಿ ರು ನಂತೆ 1,200 ಕೋಟಿ ರುಪಾಯಿ ಅನುದಾನ ಹಂಚಿಕೆ ಮಾಡಿತ್ತು. ಆದರೆ ಅನುದಾನ ಬಳಕೆ ಮಾಡಿರುವ ಪ್ರಮಾಣ ಪತ್ರಗಳನ್ನು ಸಲ್ಲಿಸಿಲ್ಲ. ಹೀಗಾಗಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಪತ್ರ ಬರೆದಿತ್ತು.

Hot this week

ಸರ್ಕಾರಿ ಸೇವೆ; ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪ್ರಾತಿನಿಧ್ಯ ಎರಡು ವರ್ಷದಲ್ಲಿ ಇಳಿಕೆಯಾಗಿದೆಯೇ?

ಬೆಂಗಳೂರು; ರಾಜ್ಯ ಸರ್ಕಾರದ ಶಿಕ್ಷಣ, ಒಳಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ...

ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಕೆ; ಅಧಿಕಾರಿಗಳ ವಿರುದ್ಧ ದಾಖಲಾಗದ ಎಫ್‌ಐಆರ್, ವರದಿ ಸಲ್ಲಿಸಲು ಸೂಚನೆ

ಬೆಂಗಳೂರು; ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ತವರು ಕ್ಷೇತ್ರದಲ್ಲಿ...

13 ಪರ್ಸೆಂಟ್ ಕಮಿಷನ್‌ಗೆ ಬೇಡಿಕೆ; ಗುತ್ತಿಗೆದಾರರ ಸಂಘದಿಂದ ಮತ್ತೊಂದು ಪತ್ರ, ಕೋರ್ಟ್‌ ಕದ ತಟ್ಟಿದ ಗುತ್ತಿಗೆದಾರರು

ಬೆಂಗಳೂರು;  ಮಹಾತ್ಮಗಾಂಂಧಿ ನಗರ ವಿಕಾಸ ಯೋಜನೆ -1 ರ ಅಡಿಯಲ್ಲಿ ಕಾಮಗಾರಿ...

ಬಳಕೆಯಾಗದ ಅನುದಾನ; ಸರ್ಕಾರದ ಬೊಕ್ಕಸಕ್ಕೆ ಸಂದಾಯವಾಗಿಲ್ಲ 10,546.42 ಕೋಟಿ, ಸಿಎಜಿ ಆಕ್ಷೇಪಣೆ

ಬೆಂಗಳೂರು; ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸೇರಿದಂತೆ 2024-25ನೇ ಸಾಲಿನಲ್ಲಿ   ಒಟ್ಟು...

Topics

ಸರ್ಕಾರಿ ಸೇವೆ; ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪ್ರಾತಿನಿಧ್ಯ ಎರಡು ವರ್ಷದಲ್ಲಿ ಇಳಿಕೆಯಾಗಿದೆಯೇ?

ಬೆಂಗಳೂರು; ರಾಜ್ಯ ಸರ್ಕಾರದ ಶಿಕ್ಷಣ, ಒಳಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ...

ಬಳಕೆಯಾಗದ ಅನುದಾನ; ಸರ್ಕಾರದ ಬೊಕ್ಕಸಕ್ಕೆ ಸಂದಾಯವಾಗಿಲ್ಲ 10,546.42 ಕೋಟಿ, ಸಿಎಜಿ ಆಕ್ಷೇಪಣೆ

ಬೆಂಗಳೂರು; ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸೇರಿದಂತೆ 2024-25ನೇ ಸಾಲಿನಲ್ಲಿ   ಒಟ್ಟು...

13,646.51 ಕೋಟಿ ಹೆಚ್ಚುವರಿ ವೆಚ್ಚ; ಗೃಹ ಲಕ್ಷ್ಮಿಯದ್ದೇ ಸಿಂಹಪಾಲು, ಹೆಚ್ಚುವರಿ ಖರ್ಚಿಗೆ ಕಾರಣಗಳೇ ಇಲ್ಲ, ಸಿಎಜಿ ಆಕ್ಷೇಪ

ಬೆಂಗಳೂರು;  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯು 2024-25ನೇ ಸಾಲಿನಲ್ಲಿ ...

2,298 ಕೋಟಿ ರು ಮೊತ್ತದ ಬಿಲ್‌ ಬಾಕಿ; 276 ಕಾಮಗಾರಿ ಅಪೂರ್ಣ, ಬೊಕ್ಕಸ ಬರಿದಾಯಿತೇ?

ಬೆಂಗಳೂರು; ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಕೈಗೆತ್ತಿಕೊಂಡಿದ್ದ  ಕಾಮಗಾರಿಗಳು ನಿಗದಿತ ಅವಧಿಯಲ್ಲಿ...

Related Articles

Popular Categories

error: Content is protected !!