ಬೆಂಗಳೂರು; ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್ ಲಿಮಿಟೆಡ್‌ಗೆ ನಿಯಮಬಾಹಿರವಾಗಿ ಲೆಟರ್ ಆಫ್ ಇಂಟೆಂಟ್ ಅನುಷ್ಠಾನಗೊಳಿಸಲು ಮುಂದಾಗಿದ್ದರ ಬಗ್ಗೆ ದಿ ಫೈಲ್ ಸರಣಿ ವರದಿಗಳನ್ನು ಪ್ರಕಟಿಸಿರುವ ಬೆನ್ನಲ್ಲೇ ಇದೀಗ ವಕೀಲ ಉಮಾಪತಿ ಮತ್ತಿತರರು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಲೀಗಲ್ ನೋಟೀಸ್ ಜಾರಿಗೊಳಿಸಿದ್ದಾರೆ.
ಈ ಲೀಗಲ್ ನೋಟಿಸ್‌ಗೆ ಉತ್ತರಿಸಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಲೆಟರ್ ಅಫ್ ಇಂಟೆಂಟ್, ಕಂಪನಿಯು ಉಳಿಸಿಕೊಂಡಿರುವ ದಂಡದ ಮೊತ್ತ, ಮತ್ತು ದಂಡ ಪಾವತಿಸುವ ಸಂಬಂಧ ಎಸಿಸಿ ಲಿಮಿಟೆಡ್ ನೀಡಿರುವ ಉತ್ತರ ಹಾಗೂ ಈ ಉತ್ತರವನ್ನು ಇಲಾಖೆಯು ಅಂಗೀಕರಿಸಿಲ್ಲ ಎಂಬ ಮಾಹಿತಿಯನ್ನು ಲೀಗಲ್ ನೋಟಿಸ್ ನೀಡಿದ್ದ ವಕೀಲ ಉಮಾಪತಿ ಅವರಿಗೆ ತಿಳಿಸಿದೆ.
ಕಲ್ಬುರ್ಗಿಯ ಕಣ್ಣೂರು ವಾಡಿಯಲ್ಲಿನ ಸುಣ್ಣದ ಕಲ್ಲು ಗಣಿಗಾರಿಕೆಗೆ ಗುತ್ತಿಗೆ ಪಡೆದಿದ್ದ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್ ಲಿಮಿಟೆಡ್ ಅಕ್ರಮವಾಗಿ ಗಣಿಗಾರಿಕೆ ನಡೆಸಿತ್ತು. ಮತ್ತು ಶಾಸನಬದ್ಧವಾಗಿ ರಾಜ್ಯ ಸರ್ಕಾರಕ್ಕೆ ಸಂದಾಯ ಮಾಡಬೇಕಿದ್ದ ರಾಜಧನ ಪಾವತಿಸಿರಲಿಲ್ಲ. ಅಲ್ಲದೇ ಅಕ್ರಮವಾಗಿ ಗಣಿಗಾರಿಕೆ ನಡೆಸಿದ್ದರಿಂದಾಗಿ ರಾಜ್ಯ ಸರ್ಕಾರವು ವಿಧಿಸಿದ್ದ ದಂಡದ ಮೊತ್ತವನ್ನೂ ಪಾವತಿಸಿರಲಿಲ್ಲ. ಆದರೂ ಈ ಕಂಪನಿಗೆ ಲೆಟರ್ ಆಫ್ ಇಂಟೆಂಟ್‌ನ್ನು ಅನುಷ್ಠಾನಗೊಳಿಸುತ್ತಿರುವುದು ಸರಿಯಲ್ಲ ಎಂದು ವಕೀಲ ಉಮಾಪತಿ ಅವರು 2026ರ ಮಾರ್ಚ್ 3ರಂದೇ ಲೀಗಲ್ ನೋಟೀಸ್ ಜಾರಿಗೊಳಿಸಿದ್ದರು.
ವಕೀಲ ಉಮಾಪತಿ ಅವರು ಜಾರಿಗೊಳಿಸಿದ್ದ ಲೀಗಲ್ ನೋಟೀಸ್ ಮತ್ತು ಇಲಾಖೆಯು ನೀಡಿರುವ ಉತ್ತರದ ಪ್ರತಿಯು ‘ದಿ ಫೈಲ್’ ಗೆ ಲಭ್ಯವಾಗಿದೆ.
ಲೀಗಲ್ ನೋಟೀಸ್‌ನಲ್ಲೇನಿದೆ?
ಕಣ್ಣೂರು ವಾಡಿಯಲ್ಲಿನ ಸುಣ್ಣದ ಕಲ್ಲು ಗಣಿ ಗುತ್ತಿಗೆ ಪ್ರದೇಶಕ್ಕೆ ಸಂಬಂಧಿಸಿದಂತೆ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್ ಲಿಮಿಟೆಡ್, ಒಟ್ಟಾರೆ 850.21 ಕೋಟಿಯಷ್ಟು ಮೊತ್ತವನ್ನು ಬಾಕಿ ಇರಿಸಿಕೊಂಡಿದೆ. ಇದರಲ್ಲಿ ರೂ. 492.51 ಕೋಟಿ ರು ಮೊತ್ತವು ರಾಜಧನ ಮತ್ತು ಬಡ್ಡಿಗೆ ಸಂಬಂಧಿಸಿದೆ. 125.00 ಕೋಟಿ ರು ಗಳನ್ನು ಠೇವಣಿ ಇರಿಸಿದೆ. ಇದಲ್ಲದೆ, ರೂ. 482.69 ಕೋಟಿಗಳ ದಂಡ ವಿಧಿಸಲಾಗಿದೆ (ಅಧಿಕೃತವಾಗಿ ರೂ. 482.59 ಕೋಟಿಗಳು ಎಂದು ಪರಿಗಣಿಸಲಾಗಿದೆ). ಮತ್ತು ಕಾನೂನು ಇಲಾಖೆಯ ಟಿಪ್ಪಣಿಯ ಪ್ರಕಾರ, ಅಕ್ರಮ ಗಣಿಗಾರಿಕೆಗಾಗಿ ಎಂಎಂಡಿಆರ್ ಕಾಯ್ದೆಯ ಕಲಂ 21(5) ಅಡಿಯಲ್ಲಿ ದಂಡ ವಿಧಿಸಲಾಗಿದೆ ಎಂದು ಲೀಗಲ್ ನೋಟೀಸ್‌ನಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಧೈರ್ಯದಿಂದ ನಡೆದಿದೆ ಅಕ್ರಮ ಗಣಿಗಾರಿಕೆ
ಎಸಿಸಿ ಲಿಮಿಟೆಡ್ ಕಂಪನಿಯು ಮಾನ್ಯತೆ ಮತ್ತು ನೋಂದಾಯಿತ ಲೀಸ್ ಇಲ್ಲದೆ ಸುಮಾರು ಎರಡು ವರ್ಷಗಳ ಕಾಲ, ಅಂದರೆ 2023ರ ಫೆ.19 ರಿಂದ 2024ರ ಆಗಸ್ಟ್ 14ರವರೆಗೆ ಗಣಿಗಾರಿಕೆ ನಡೆಸಿದೆ. ಈ ಅವಧಿಯಲ್ಲಿ ಕಂಪನಿಯು ಸುಮಾರು 78,33,415 ಮೆಟ್ರಿಕ್ ಟನ್ ಸುಣ್ಣದ ಕಲ್ಲನ್ನು ಅಕ್ರಮವಾಗಿ ತೆಗೆದಿದೆ. ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರಕಾರ, ಇಂತಹ ಕ್ರಮಗಳು “ಅಕ್ರಮ ಗಣಿಗಾರಿಕೆ” ಎಂಬ ವ್ಯಾಖ್ಯಾನದ ಒಳಗೆ ಬರುತ್ತವೆ ಎಂದು ಲೀಗಲ್ ನೋಟೀಸ್‌ನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನ ಸೆಳೆದಿರುವುದು ತಿಳಿದು ಬಂದಿದೆ.

ಟೆಂಡರ್ ಷರತ್ತುಗಳ ನೇರ ಉಲ್ಲಂಘನೆ
ಎಸಿಸಿ ಲಿಮಿಟೆಡ್ ಕಂಪನಿಯು 2020ರ ಅಕ್ಟೋಬರ್ 5 ರಂದು ಕಣ್ಣೂರು ವಾಡಿ ಸುಣ್ಣದ ಕಲ್ಲು ಬ್ಲಾಕ್ ಹರಾಜಿನಲ್ಲಿ ಭಾಗವಹಿಸಿ, ಪ್ರಾಥಮಿಕ ಬಿಡ್ಡರ್ ಎಂದು ಘೋಷಿಸಲ್ಪಟ್ಟಿದೆ. ಆದರೆ, ಟೆಂಡರ್ ಅಧಿಸೂಚನೆಯ ಕಲಂ 10(f) ಪ್ರಕಾರ, ಪ್ರಾಥಮಿಕ ಬಿಡ್ಡರ್ ರಾಜ್ಯ ಸರ್ಕಾರಕ್ಕೆ ಹಿಂದಿನ ಗಣಿಗಾರಿಕೆ ಚಟುವಟಿಕೆಗಳಿಂದ ಉಂಟಾದ ಎಲ್ಲಾ ಬಾಕಿಗಳನ್ನು ತೆರವುಗೊಳಿಸಿರಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಈ ಎಲ್ಲಾ ಬಾಕಿಗಳನ್ನು ಪಾವತಿಸಲಾಗುವುದು ಎಂದು 2021ರ ಸೆ. 27ರಂದು ಪ್ರಮಾಣಪತ್ರ ಸಲ್ಲಿಸಿದ್ದರೂ ಕಂಪನಿಯು 850.21 ಕೋಟಿ ಬಾಕಿಯನ್ನು ಪಾವತಿಸಲು ವಿಫಲವಾಗಿದೆ ಎಂದು ಲೀಗಲ್ ನೋಟೀಸ್‌ನಲ್ಲಿ ವಿವರಿಸಿರುವುದು ಗೊತ್ತಾಗಿದೆ.
ರಾಜ್ಯದ ಕಾನೂನು ಇಲಾಖೆಯ ವಿರೋಧ
ಕಾನೂನು ಇಲಾಖೆಯ ಪ್ರಧಾನ ಕಾನೂನು ಕಾರ್ಯದರ್ಶಿಯವರು, ಈ ಕಂಪನಿಗೆ ಮತ್ತೊಂದು 50 ವರ್ಷದ ಲೀಸ್ ನೀಡುವುದು “ರಾಜ್ಯದ ಹಿತದಲ್ಲಿಯೂ ಅಲ್ಲ ಮತ್ತು ವಿವೇಕಪೂರ್ಣವೂ ಅಲ್ಲ” ಎಂದು ಸ್ಪಷ್ಟವಾಗಿ ದಾಖಲಿಸಿದ್ದಾರೆ. ಇದಕ್ಕೆ ಕಾರಣವಾಗಿ, ಟೆಂಡರ್ ಕಲಂ 10(f) ಉಲ್ಲಂಘನೆ ಹಾಗೂ ಕಂಪನಿಯ ಅಕ್ರಮ ಗಣಿಗಾರಿಕೆ ಇತಿಹಾಸವನ್ನು ಉಲ್ಲೇಖಿಸಿದ್ದಾರೆ. ಪ್ರಸ್ತುತ ಇಲಾಖೆಯು ಕೈಗೊಂಡಿರುವ ಕ್ರಮವು ಕೇವಲ ಹಣದ ದಂಡಕ್ಕೆ ಸೀಮಿತವಾಗಿದೆ. ಅದು “ಕಾನೂನುಬದ್ಧವಾಗಿ ಸಮರ್ಪಕವಲ್ಲ” ಎಂದು ಸ್ಪಷ್ಟವಾಗಿ ಹೇಳಿದೆ.

ಪಾಲನೆಯಾಗದ ಸುಪ್ರೀಂ ಕೋರ್ಟ್ ಆದೇಶ
ಕಾನೂನು ಕಾರ್ಯದರ್ಶಿಯ ಟಿಪ್ಪಣಿಯಲ್ಲಿ ಉಲ್ಲೇಖಿಸಿರುವಂತೆ, Common Cause v. Union of India (2017) ತೀರ್ಪಿನ ಪ್ರಕಾರ, ಅಕ್ರಮವಾಗಿ ತೆಗೆದ ಖನಿಜದ ಸಂಪೂರ್ಣ (100%) ಮೌಲ್ಯವನ್ನು ದಂಡ ಮತ್ತು ರಾಯಲ್ಟಿಯೊಂದಿಗೆ ರಾಜ್ಯವು ವಸೂಲಿಸಬೇಕು ಎಂದು ಸೂಚಿಸಲಾಗಿದೆ. ಇದಲ್ಲದೆ, Jayant v. State of Madhya Pradesh (2020) ತೀರ್ಪಿನ ಪ್ರಕಾರ, ದಂಡವನ್ನು ಪಾವತಿಸಿದರೂ ಅಪರಾಧ ಪ್ರಕರಣಗಳನ್ನು ಮುಂದುವರಿಸಲು ಅಡ್ಡಿಯಾಗುವುದಿಲ್ಲ ಎಂದು ಹೇಳಿದೆ.
ಅದ್ದರಿಂದ ಕಾನೂನು ಇಲಾಖೆ ಎಂಎಂಡಿಆರ್ ಕಾಯ್ದೆಯ ಕಲಂ 21(1) ಮತ್ತು 21(2) ಅಡಿಯಲ್ಲಿ ಅಪರಾಧ ಕ್ರಮ ಆರಂಭಿಸಲು ನಿರ್ದೇಶನ ನೀಡಿದೆ. ಆದರೆ, ಗಣಿಗಾರಿಕೆ ಇಲಾಖೆ ಇದುವರೆಗೆ ಅದನ್ನು ಅನುಷ್ಠಾನಗೊಳಿಸಿಲ್ಲ.

2026ರ ಜನವರಿ 3ಕ್ಕೇ ಲೆಟರ್ ಆಫ್ ಇಂಟೆಂಟ್ ಅವಧಿ ಮುಗಿದಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಗತ್ಯವಾದ Consent for Establishment (CFE) ಅನುಮತಿಯೂ ಇಲ್ಲ. ಮತ್ತು ಕಂಪನಿಯ ಸ್ಪಷ್ಟವಾಗಿ ಉಲ್ಲಂಘನೆ ಮಾಡಿದ್ದರೂ ಸಹ ಲೆಟರ್ ಆಫ್ ಇಂಟೆಂಟ್ ಅನುಷ್ಠಾನಗೊಳಿಸುವ ಸಂಬಂಧ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು 2026ರ ಜನವರಿ 7ರಂದು ಕೇಂದ್ರ ಸರ್ಕಾರದ ಗಣಿಗಾರಿಕೆ ಸಚಿವಾಲಯಕ್ಕೆ ಪತ್ರ ಬರೆದಿದೆ.
ಈ ಪತ್ರವು ಎಂಎಂಡಿಆರ್ ಕಾಯ್ದೆಯ ಕಲಂ 31 ಅಡಿಯಲ್ಲಿ ಇರುವ ಸಡಿಲಿಕೆ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ. ಎಸಿಸಿ ಲಿಮಿಟೆಡ್‌ಗೆ ಒಂದು ವರ್ಷದ ವಿಸ್ತರಣೆ ನೀಡಲು ಪ್ರಯತ್ನಿಸುತ್ತಿದೆ. ಸಾಮಾನ್ಯವಾಗಿ ಪದೇ ಪದೇ ತಪ್ಪುಗಳನ್ನು ಮಾಡುವ ಸಂಸ್ಥೆಗೆ ತುರ್ತು ಸಡಿಲಿಕೆ ಅಧಿಕಾರವನ್ನು ಬಳಸುವುದು ಅನ್ಯಾಯ, ಅಸಂಗತ ಮತ್ತು ಸಾರ್ವಜನಿಕ ಖಜಾನೆಗೆ ಮೋಸ ಮಾಡುವಂತದ್ದಾಗಿದೆ ಎಂದು ಲೀಗಲ್ ನೋಟೀಸ್‌ನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಎಸಿಸಿ ಸಿಮೆಂಟ್ಸ್ ಪರವಾಗಿ ಲೆಟರ್ ಆಫ್ ಇಂಟೆಂಟ್‌ನ್ನು ವಿಸ್ತರಿಸಲು ಕರ್ನಾಟಕ ಸರ್ಕಾರವು 2026ರ ಜನವರಿ 7ರಂದು ಸಲ್ಲಿಸಿರುವ ಪ್ರಸ್ತಾವನೆಯನ್ನು ತಿರಸ್ಕರಿಸಬೇಕು. ಈ ಪ್ರಸ್ತಾವನೆ ಎಂಎಂಡಿಆರ್ ಕಾಯ್ದೆಯ ಕಲಂ 31 ಅಡಿಯಲ್ಲಿ ಎಸಿಸಿ ಲಿಮಿಟೆಡ್‌ಗೆ ಒಂದು ವರ್ಷದ ಅವಧಿಗೆ ಲೆಟರ್ ಆಫ್ ಇಂಟೆಂಟ್ ವಿಸ್ತರಿಸಲು ಕೋರಿದೆ. ಅದೇ ರೀತಿ ರಾಜ್ಯ ಸರ್ಕಾರವು ಎಸಿಸಿ ಸಿಮೆಂಟ್ಸ್ ಲಿಮಿಟೆಡ್ ಗೆ ಲೆಟರ್ ಆಫ್ ಇಂಟೆಂಟ್‌ನ್ನು ವಿಸ್ತರಿಸಲು ಸಲ್ಲಿಸಲಾದ ಪ್ರಸ್ತಾವನೆಯನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು. ಮತ್ತು ಟೆಂಡರ್ ಕಲಂ 10(f) ಉಲ್ಲಂಘನೆಯ ಕಾರಣದಿಂದ ಕಣ್ಣೂರು ವಾಡಿಯಲ್ಲಿನ ಸುಣ್ಣದ ಕಲ್ಲು ಬ್ಲಾಕ್ ಗೆ ನಿಡಿರುವ ಲೆಟರ್ ಆಫ್ ಇಂಟೆಂಟ್‌ನ್ನು ರದ್ದುಗೊಳಿಸಬೇಕು ಎಂದು ಲೀಗಲ್ ನೋಟೀಸ್‌ನಲ್ಲಿ ತಿಳಿಸಿರುವುದು ಗೊತ್ತಾಗಿದೆ.
ಅದೇ ರೀತಿ ಕಾನೂನು ಇಲಾಖೆಯ ಕಾನೂನು ಕಾರ್ಯದರ್ಶಿ ನೀಡಿರುವ ಸಲಹೆಯಂತೆ ಕ್ರಮ ಕೈಗೊಳ್ಳಬೇಕು. ಎಸಿಸಿ ಲಿಮಿಟೆಡ್ ಕಂಪನಿಯನ್ನು ಎಲ್ಲಾ ಕಾನೂನುಬದ್ಧ ಬಾಧ್ಯತೆಗಳನ್ನು ಪೂರ್ಣಗೊಳಿಸುವವರೆಗೆ ಭವಿಷ್ಯದಲ್ಲಿ ಸರ್ಕಾರಿ ಟೆಂಡರ್ ಮತ್ತು ಹರಾಜುಗಳಲ್ಲಿ ಭಾಗವಹಿಸುವುದರಿಂದ ತಕ್ಷಣ ನಿಷೇಧಿಸಬೇಕು ಎಂದು ಒತ್ತಾಯಿಸಿರುವುದು ತಿಳಿದು ಬಂದಿದೆ.
ಹಾಗೆಯೇ ಕಾನೂನು ಇಲಾಖೆಯ ನಿರ್ದೇಶನದಂತೆ ಎಂಎಂಡಿಆರ್ ಕಾಯ್ದೆಯ ಕಲಂ 21(1) ಮತ್ತು 21(2) ಅಡಿಯಲ್ಲಿ ಅಕ್ರಮ ಗಣಿಗಾರಿಕೆ ಸಂಬಂಧವಾಗಿ ಮಿ/ಸ್ ACC ಲಿಮಿಟೆಡ್ ಮತ್ತು ಅದರ ಹೊಣೆಗಾರ ಅಧಿಕಾರಿಗಳ ವಿರುದ್ಧ ಅಪರಾಧ ಮೊಕದ್ದಮೆ ಪ್ರಕರಣಗಳನ್ನು ದಾಖಲಿಸಬೇಕು. ರೂ. 850.21 ಕೋಟಿಗಳಷ್ಟು ಬಾಕಿ ಇರುವ ಸರ್ಕಾರದ ಹಣವನ್ನು ಯಾವುದೇ ವಿಳಂಬವಿಲ್ಲದೆ ಅಥವಾ ಅನಗತ್ಯ ನ್ಯಾಯಾಂಗ ವ್ಯಾಜ್ಯವಿಲ್ಲದೆ ತಕ್ಷಣ ರಾಜ್ಯ ಖಜಾನೆಗೆ ಪಾವತಿಸಬೇಕು.
ಲೀಗಲ್ ನೋಟೀಸ್‌ನಲ್ಲಿ ತಿಳಿಸಿರುವಂತೆ ಕ್ರಮ ಕೈಗೊಳ್ಳದೇ ಅಕ್ರಮವಾಗಿ ಲೆಟರ್ ಆಫ್ ಇಂಟೆಂಟ್‌ನ್ನು ವಿಸ್ತರಣೆ ಮಂಜೂರು ಮಾಡಿದಲ್ಲಿ, ಅಥವಾ ಕಾನೂನುಬದ್ಧ ಬಾಕಿಗಳನ್ನು ತಕ್ಷಣ ವಸೂಲು ಮಾಡದಿದ್ದಲ್ಲಿ ಈ ಮನವಿಯನ್ನು ಸ್ವೀಕರಿಸಿದ ದಿನದಿಂದ ಹದಿನೈದು (15) ದಿನಗಳೊಳಗೆ ಕ್ರಮ ಕೈಗೊಳ್ಳದಿದ್ದರೆ, ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ರಾಜ್ಯ ಖಜಾನೆಗೆ ನಷ್ಟ ಉಂಟುಮಾಡುವ ಕರ್ತವ್ಯಲೋಪ ಎಸಗಿರುವವರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಲು ಮುಂದಾಗಲಾಗುವುದು. ಹೀಗಾಗಿ ಲೀಗಲ್ ನೋಟೀಸ್‌ನ್ನು ತುರ್ತಾಗಿ ಪರಿಗಣಿಸಬೇಕು ಎಂದು ಹೇಳಿರುವುದು ತಿಳಿದು ಬಂದಿದೆ.
ಸರ್ಕಾರದ ಉತ್ತರವೇನು?
ಎಸಿಸಿ ಕಂಪನಿಯು ಕಣ್ಣೂರು ವಾಡಿಯಲ್ಲಿನ ಸುಣ್ಣದ ಕಲ್ಲು ಬ್ಲಾಕ್ ಅನ್ನು ಹರಾಜಿನಲ್ಲಿ ಪಡೆದಿದೆ. ಆದರೆ, ನಿಯಮಾನುಸಾರ ನಿರ್ಧರಿಸಲಾದ ಅವಧಿಯೊಳಗೆ ಗಣಿಗಾರಿಕೆ ಲೀಸ್ ಡೀಡ್ ಅನ್ನು ಅನುಷ್ಠಾನಗೊಳಿಸಲು ಕಂಪನಿ ವಿಫಲವಾಗಿದೆ. ಲೆಟರ್ ಆಫ್ ಇಂಟೆಂಟ್ ಅನ್ನು ಅನುಮತಿಸಲಾದ ಅವಧಿಯನ್ನು ಮೀರಿ ವಿಸ್ತರಿಸಲಾಗಿಲ್ಲ. ಮತ್ತು ಪ್ರಸ್ತುತ ಅವಧಿ ಮೀರಿದೆ. ಆದ್ದರಿಂದ ಕಣ್ಣೂರು ವಾಡಿಯಲ್ಲಿನ ಲೈಮ್‌ಸ್ಟೋನ್ ಬ್ಲಾಕ್‌ಗೆ ಸಂಬಂಧಿಸಿದಂತೆ ಯಾವುದೇ ಗಣಿಗಾರಿಕೆ ಲೀಸ್ ಅನುಷ್ಠಾನಗೊಂಡಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕ ಎಸ್ ರಂಗಪ್ಪ ಅವರು 2026ರ ಮಾರ್ಚ್ 27ರಂದು ಸಮಜಾಯಿಷಿ ನೀಡಿದ್ದಾರೆ.

1963ರಲ್ಲಿ ಎಸಿಸಿ ಲಿಮಿಟೆಡ್ ಪರವಾಗಿ ಈಗಾಗಲೇ ಮಂಜೂರಾದ ಗಣಿ ಗುತ್ತಿಗೆ (ಲೀಸ್ ಸಂಖ್ಯೆ 2641 ) ಕುರಿತು, ಗುತ್ತಿಗೆ ಅವಧಿಯನ್ನು 2030ರ ಮಾರ್ಚ್ 31ರವರೆಗೆ ವಿಸ್ತರಿಸಲು ಅಗತ್ಯವಿರುವ ಪೂರಕ ಲೀಸ್ ಡೀಡ್ ಇನ್ನೂ ಅನುಷ್ಠಾನಗೊಂಡಿಲ್ಲ. ಉನ್ನತ ಮಟ್ಟದ ಸಮಿತಿ ವರದಿ ಹಾಗೂ ಸರ್ಕಾರದ ನಿರ್ದೇಶನಗಳ ಪ್ರಕಾರ, ಈ ಕಚೇರಿಯಿಂದ ಎಸಿಸಿ ಕಂಪನಿಗೆ ನೋಟಿಸ್ ನೀಡಲಾಗಿದೆ ಎಂದು ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.
ಗಣಿ ಗುತ್ತಿಗೆ ಸಂಖ್ಯೆ 2641 ಸಂಬಂಧಿಸಿದಂತೆ ರಾಯಲ್ಟಿ ಬಾಕಿಗಳು ಹಾಗೂ ಬಡ್ಡಿ ಸೇರಿ ರೂ. 367,51,43,385/- ಮೊತ್ತವನ್ನು ಪಾವತಿಸಲು ಸೂಚಿಸಲಾಗಿದೆ. ಇದರಲ್ಲಿ, ಹೈಕೋರ್ಟ್ (W.P ಸಂಖ್ಯೆ 25298/2024) ನಲ್ಲಿಲ ದಾಖಲಿಸಿರುವ ರಿಟ್ ಅರ್ಜಿ ಪ್ರಕರಣದಲ್ಲಿ ನೀಡಿರುವ ಮಧ್ಯಂತರ ಆದೇಶದ ಪ್ರಕಾರ ಕಂಪನಿಯಿಂದ ಈಗಾಗಲೇ ಪಾವತಿಸಿದ ಮೊತ್ತವನ್ನು ಕಡಿತಗೊಳಿಸಲಾಗಿದೆ. ಹೈಕೋರ್ಟ್, ಕಂಪನಿಗೆ ಮುಂದುವರೆಯಲು ಅನುಮತಿ ನೀಡಿದೆ ಎಂದು ವಿವರಿಸಿರುವುದು ಗೊತ್ತಾಗಿದೆ.
ಹೈಕೋರ್ಟ್ ಮುಂದೆ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ 2024ರ ಅಕ್ಟೋಬರ್ 20ರಂದು ವಿಚಾರಣೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಈ ವಿಷಯ ಇನ್ನೂ ಬಾಕಿಯಿದೆ. ಪ್ರಾರಂಭಿಕವಾಗಿ ರಿವಿಷನ್ ಅರ್ಜಿ ರಿವಿಷನರಿ ಪ್ರಾಧಿಕಾರ ಮುಂದೆ ಬಾಕಿಯಿದೆ. 2025ರ ಫೆ.3ರ ಆದೇಶದ ಮೂಲಕ ಅದನ್ನು ವಿಲೇವಾರಿ ಮಾಡಲಾಗಿದೆ ಎಂಬ ವಿವರಗಳನ್ನು ಒದಗಿಸಿರುವುದು ತಿಳಿದು ಬಂದಿದೆ.

ಉಭಯ ಪಕ್ಷಕಾರರಿಂದ ಸಲ್ಲಿಸಲಾದ ಮಾಹಿತಿಗಳ ಆಧಾರದ ಮೇಲೆ, 2009ರಿಂದ ತೂಕದ (weighment) ಮಾಹಿತಿಯನ್ನು ಪ್ರಶ್ನಿಸುವ ಯಾವುದೇ ಸಂವಹನ ಇಲ್ಲವೆಂದು ಗಮನಿಸಲಾಗಿದೆ. ವಾಸ್ತವವಾಗಿ, ಗಣಿ ಮತ್ತು ಭೂ ವಿಜ್ಙಾನ ಇಲಾಖೆಯು 2020ರ ಸೆ.18 ರ ಪತ್ರದ ಮೂಲಕ ತೂಕದ ವಿವರಗಳನ್ನು ಪರಿಶೀಲಿಸಿ ಮಾನ್ಯಗೊಳಿಸಿದೆ. ರಾಜ್ಯ ಸರ್ಕಾರವು ರಿವಿಷನಿಸ್ಟ್ ನಿರ್ವಹಿಸಿದ ದಾಖಲೆಗಳನ್ನು ತಿರಸ್ಕರಿಸಲು ಯಾವುದೇ ದೃಢವಾದ ಆಧಾರವನ್ನು ಒದಗಿಸದಿದ್ದಲ್ಲಿ, ನಿಜವಾದ ತೂಕದ ಮಾಹಿತಿಯನ್ನು ತಿರಸ್ಕರಿಸಿ ಕಲ್ಪಿತ ಬಳಕೆ (notional consumption) ಅಂಶವನ್ನು ಪರಿಗಣಿಸುವುದು ಸಮಂಜಸವಲ್ಲ ಎಂದು ಹೇಳಿದೆ.
ಉನ್ನತಾಧಿಕಾರ ಸಮಿತಿ ವರದಿ ಪ್ರಕಾರ, ವಿವಾದದಲ್ಲಿರುವ ಅವಧಿಯ ಬಹುತೇಕ ಸಮಯದಲ್ಲಿ ರಿವಿಷನಿಸ್ಟ್‌ನ ಮಾಹಿತಿಗಳು ಗಣಿ ಮತ್ತು ಭೂ ವಿಜ್ಞಾನದ ಮಾಹಿತಿಗಳೊಂದಿಗೆ ಹೊಂದಿಕೆಯಾಗುತ್ತವೆ. 2009ಕ್ಕೂ ಮುಂಚಿನ ಅವಧಿಯನ್ನೂ ಎಚ್‌ಎಲ್‌ಸಿ ಪರಿಶೀಲಿಸಿದೆ. ಈ ಮಾಪನದಲ್ಲಿ ಯಾವುದೇ ಅನುಮಾನ ಅಥವಾ ಮಹತ್ತರ ವ್ಯತ್ಯಾಸವನ್ನು ಕಂಡುಹಿಡಿದಿಲ್ಲ. ರಿವಿಷನಿಸ್ಟ್ ನಿರ್ವಹಿಸಿದ ದಾಖಲೆಗಳನ್ನು ತಿರಸ್ಕರಿಸಲು ಸಮರ್ಪಕ ಕಾರಣಗಳನ್ನು ವರದಿಯಲ್ಲಿ ನೀಡಲಾಗಿಲ್ಲ. ಇದರಲ್ಲೂ ತೂಕದ ಮಾಹಿತಿಗೆ ಸಂಬಂಧಿಸಿದಂತೆ ಯಾವುದೇ ವಿವಾದ ಇಲ್ಲದಿದ್ದರೂ, ಕಲ್ಪಿತ ಬಳಕೆ ಅಂಶವನ್ನು ಅವಲಂಬಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ತೂಕದ ಮಾಹಿತಿಯಲ್ಲಿ ವಿವಾದವಿದೆ ಎಂಬುದನ್ನು ಸೂಚಿಸುವ ಯಾವುದೇ ದಾಖಲೆ ಆಧಾರಗಳಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ನಿಜವಾದ ತೂಕದ ಮಾಹಿತಿಯ ಬದಲು ಕಲ್ಪಿತ ಬಳಕೆ ಅಂಶವನ್ನು ಬಳಸುವುದು, ಲೈಮ್‌ಸ್ಟೋನ್ ಪ್ರಮಾಣದ ಅಂದಾಜಿನಲ್ಲಿ ನ್ಯಾಯಸಮ್ಮತವಲ್ಲ. ನೈಸರ್ಗಿಕ ನ್ಯಾಯತತ್ತ್ವದ ಹಿತದೃಷ್ಟಿಯಿಂದ, ಸಂಬಂಧಿಸಿದವರಿಗೆ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಲು ಸಮರ್ಪಕ ಅವಕಾಶ ನೀಡಲಾಗಿದೆ.
ನ್ಯಾಯದ ಹಿತದೃಷ್ಟಿಯಿಂದ ಹಾಗೂ ಕಾನೂನಿನ ಪ್ರಕಾರ, ಮತ್ತು ಬಾಕಿಯಿರುವ ನ್ಯಾಯಾಲಯದ ಪ್ರಕರಣಗಳಿಗೆ ಒಳಪಟ್ಟಂತೆ, ಎಂಎಂಡಿಆರ್ ಕಾಯ್ದೆ, 1957ರ ಕಲಂ 30 ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಬಳಸಿಕೊಳ್ಳಲಿದೆ. ಈ ಪ್ರಕರಣವನ್ನು ರಾಜ್ಯ ಸರ್ಕಾರಕ್ಕೆ ಹಿಂತಿರುಗಿಸಿ, ಮೇಲ್ಕಂಡ ಸೂಚನೆಗಳಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ.
ಆದರೂ ಈ ವಿಷಯವನ್ನು ರಾಜ್ಯ ಸರ್ಕಾರ ಮರುಪರಿಶೀಲಿಸುವ ಸಂದರ್ಭದಲ್ಲಿ, ಸ್ವತಂತ್ರ ಸಂಸ್ಥೆಯಾದ ಇಂಡಿಯನ್ ಬ್ಯೂರೋ ಆಫ್ ಮೈನ್ಸ್ (IBM) ಅಭಿಪ್ರಾಯಗಳನ್ನು ಪರಿಗಣಿಸುವುದು ಸೂಕ್ತವಾಗಿದೆ. ನೈಸರ್ಗಿಕ ನ್ಯಾಯತತ್ತ್ವದ ಹಿತದೃಷ್ಟಿಯಿಂದ ಸಂಬಂಧಿಸಿದ ಪಕ್ಷಗಳಿಗೆ ಸಮರ್ಪಕ ಅವಕಾಶವನ್ನು ಒದಗಿಸುವುದು ಅವಶ್ಯಕವಾಗಿದೆ.ಈ ರಿವಿಷನರಿ ಪ್ರಾಧಿಕಾರದ ಆದೇಶವನ್ನು ಕರ್ನಾಟಕ ರಾಜ್ಯವು ಗೌರವಾನ್ವಿತ ಹೈಕೋರ್ಟ್‌ನಲ್ಲಿ (W.P No. 36580/2025 ) ಪ್ರಶ್ನಿಸಿದ್ದು ಈ ವಿಷಯವು ಹೈಕೋರ್ಟ್‌ನಲ್ಲಿ ಬಾಕಿಯಾಗಿದೆ.
ದಂಡದ ವಿಷಯದಲ್ಲಿ, ಈ ಕಚೇರಿಯಿಂದ ನೀಡಲಾದ ನೋಟಿಸ್‌ನ್ನು ಕಂಪನಿಯು (W.P No. 18655/2025 ) ಮೂಲಕ ಪ್ರಶ್ನಿಸಿದೆ. ಈ ವಿಷಯವೂ ಕರ್ನಾಟಕ ಹೈಕೋರ್ಟ್ ಮುಂದೆ ಬಾಕಿಯಾಗಿದೆ. ಸರ್ಕಾರದ ನಿರ್ದೇಶನದಂತೆ, 2026ರ ಫೆ.12ರ ಪತ್ರದ ಆಧಾರದ ಮೇಲೆ, ಕಂಪನಿಗೆ 2026ರ ಫೆ.24ರಂದು ಅಂತಿಮ ನೋಟಿಸ್ ನೀಡಲಾಗಿದೆ. ರೂ. 482,69,65,137/- ದಂಡ ಮೊತ್ತವನ್ನು 15 ದಿನಗಳೊಳಗೆ ಪಾವತಿಸಲು ಸೂಚಿಸಲಾಗಿದೆ. ಪಾವತಿಸದಿದ್ದಲ್ಲಿ ವಸೂಲಾತಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ಎಸಿಸಿ ನೀಡಿರುವ ಉತ್ತರವೇನು?
ಈ ಸಂಬಂಧ 2026ರ ಮಾರ್ಚ್ 7ರಂದು ಎಸಿಸಿ ಲಿಮಿಟೆಡ ಉತ್ತರವನ್ನು ಸಲ್ಲಿಸಿದೆ. ಕಂಪನಿಯ ಉತ್ತರವನ್ನು ಇಲಾಖೆಯು ಅಂಗೀಕರಿಸಿಲ್ಲ. ಮತ್ತು 2026ರ ಮಾರ್ಚ್ ಆದೇಶದ ಮೂಲಕ ವಸೂಲಾತಿ ಕ್ರಮ ಆರಂಭಿಸಲಾಗಿದೆ. ಜೊತೆಗೆ ಎಂಎಂಡಿಆರ್ ಕಾಯ್ದೆ ಕಲಂ 4(1), 4(1-A) ಜೊತೆಗೆ 21(1) ಮತ್ತು (2) ಅನ್ವಯ ಕ್ರಮ ಕೈಗೊಳ್ಳಲು ಕಲಬುರಗಿ ಉಪನಿರ್ದೇಶಕರಿಗೆ ನಿರ್ದೇಶಿಸಲಾಗಿದೆ ಎಂಬ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.
ರಾಜ್ಯದ ಹಿತಾಸಕ್ತಿ ಬದಿಗೊತ್ತಿ ರಾಜ್ಯ ಸರ್ಕಾರವು ಅದಾನಿ ಸಮೂಹದ ಪರವಾಗಿ ಲೆಟರ್ ಆಫ್ ಇಂಟೆಂಟ್‌ನ್ನು ಅನುಷ್ಠಾನಗೊಳಿಸುವ ಸಂಬಂಧ ಕೇಂದ್ರದ ಮಾರ್ಗದರ್ಶನ ಕೋರಿತ್ತು. ಈ ಕುರಿತು ದಿ ಫೈಲ್ ವರದಿ ಪ್ರಕಟಿಸಿತ್ತು.
ಈ ಪ್ರಕರಣದಲ್ಲಿ ದಿ ಫೈಲ್ ಆರ್‍ಟಿಐ ಅಡಿಯಲ್ಲಿ ಕೋರಿದ್ದ ಅರ್ಜಿಗೆ ಕಾನೂನು ಇಲಾಖೆಯು ಮಾಹಿತಿಯನ್ನೇ ನೀಡಿರಲಿಲ್ಲ. ಬದಲಿಗೆ ಸಚಿವ ಎಚ್ ಕೆ ಪಾಟೀಲ್ ಅವರು ಯಾವುದೇ ಅಭಿಪ್ರಾಯವನ್ನೂ ನೀಡಿಲ್ಲ ಸುಳ್ಳು ಮಾಹಿತಿ ನೀಡಿತ್ತು.
ಅದಾನಿ ಸಮೂಹದ ಎಸಿಸಿ ಪ್ರಕರಣ; ಕಾನೂನು ಅಧಿಕಾರಿಗಳ ಕಳ್ಳಾಟ, ಅಭಿಪ್ರಾಯವನ್ನೇ ಮುಚ್ಚಿಟ್ಟಿತೇ?
ಈ ಬೆಳವಣಿಗೆಗಳ ನಡುವೆಯೇ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರ್ಕಾರದ ಕಾರ್ಯದರ್ಶಿ (ಗಣಿ) ರೋಹಿಣಿ ಸಿಂಧೂರಿ ಅವರನ್ನು ಎತ್ತಂಗಡಿ ಮಾಡಿತ್ತು.
ಅದಾನಿ ಎಸಿಸಿಗೆ ಲೆಟರ್ ಆಫ್ ಇಂಟೆಂಟ್; ದಿ ಫೈಲ್ ವರದಿ ಬೆನ್ನಲ್ಲೇ ಗಣಿ ವಿಭಾಗದಿಂದ ರೋಹಿಣಿ ಸಿಂಧೂರಿ ಎತ್ತಂಗಡಿ
ಈ ಮಧ್ಯೆ ಅದಾನಿ ಎಸಿಸಿ ಪ್ರಕರಣದಲ್ಲಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು (ಗಣಿ) ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರಿಗೆ ಶಿಫಾರಸ್ಸು ಮಾಡಿತ್ತು.
ಈ ಕುರಿತು ದಿ ಫೈಲ್ ಪ್ರಕಟಿಸಿದ್ದ ಎಲ್ಲಾ ವರದಿಗಳನ್ನಾಧರಿಸಿ ಜೆಪಿ ಶಾಸಕ ಸುರೇಶ್ ಕುಮಾರ್ ಅವರು ಸರ್ಕಾರವನ್ನು ಪ್ರಶ್ನಿಸಿದ್ದರು. ಅಲ್ಲದೇ ವಿಧಾನಪರಿಷತ್‌ನಲ್ಲಿ ಸಿ ಟಿ ರವಿ ಮತ್ತು ಆರತಿ ಕೃಷ್ಣ ಅವರು ಅಧಿವೇಶನದಲ್ಲಿ ಪ್ರಶ್ನಿಸಿದ್ದನ್ನು ಸ್ಮರಿಸಬಹುದು.







