ಬೆಂಗಳೂರು; 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಿದಲ್ಲಿ ಮುಂಬರುವ ವರ್ಷಗಳಲ್ಲಿ ಬದ್ಧ ವೆಚ್ಚದಲ್ಲಿ ತೀವ್ರವಾಗಿ ಹೆಚ್ಚಳವಾಗಬಹುದು. 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ಮೊದಲ ವರ್ಷದಲ್ಲಿಯೇ ಹೆಚ್ಚುವರಿಯಾಗಿ ಆರ್ಥಿಕ ಪರಿಣಾಮವಾಗಲಿದೆ. ಅನುಷ್ಠಾನದ ಮೊದಲ ವರ್ಷದಲ್ಲೇ ಅಂದಾಜು 15,000 ಕೋಟಿ ರು.ಗಳಿಂದ 20,000 ಕೋಟಿಯಷ್ಟು ಹೆಚ್ಚಾಗಲಿದೆ ಎಂದು 5ನೇ ರಾಜ್ಯ ಹಣಕಾಸು ಆಯೋಗವು ತನ್ನ ವರದಿಯಲ್ಲಿ ಅಂದಾಜಿಸಿದೆ.
ಅಲ್ಲದೇ ಗ್ಯಾರಂಟಿಗಳಿಂದಾಗಿ ರಾಜ್ಯದಲ್ಲಿ ಯೋಜನೆ ಆಧರಿತ ಬದ್ಧತಾ ವೆಚ್ಚದಲ್ಲಿ ಶೇಕಡಾವಾರು ಪ್ರಮಾಣ ಹೆಚ್ಚಾಗಿದೆ. ಅದೇ ರೀತಿ ಸ್ಥಳೀಯ ಸ್ವಯಂ ಆಡಳಿತ ಸರ್ಕಾರಗಳಿಗೆ ನಿಧಿ ಹಂಚಿಕೆಯಲ್ಲಿನ ಪ್ರಮಾಣವು ಕ್ರಮೇಣ ಇಳಿಕೆಯಾಗುತ್ತಿದೆ ಎಂದು ಆಯೋಗವು ಕಳವಳವನ್ನೂ ವ್ಯಕ್ತಪಡಿಸಿದೆ.
2026ನೇ ಮಾರ್ಚ್‌ನಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಮಂಡನೆಯಾಗಿರುವ 5ನೇ ರಾಜ್ಯ ಹಣಕಾಸು ಆಯೋಗದ ವರದಿಯು ಯೋಜನಾಧಾರಿತವಲ್ಲದ ಬದ್ಧ ವೆಚ್ಚದ ಕುರಿತು ನೀಡಿರುವ ವಿವರಣೆಯಲ್ಲಿ 7ನೇ ವೇತನ ಆಯೋಗದ ಶಿಫಾರಸ್ಸಿನಿಂದಾಗಲಿರುವ ಆರ್ಥಿಕ ಪರಿಣಾಮಗಳ ಕುರಿತು ವಿಶ್ಲೇಷಣೆ ನಡೆಸಿದೆ.

ಸಂಬಳದ ಮೇಲಿನ ವೆಚ್ಚವು ಒಟ್ಟು ಸ್ವೀಕೃತ ರಾಜಸ್ವದಲ್ಲಿ ಪ್ರಮುಖ ಪಾಲನ್ನು ಹೊಂದಿದೆ. ಇದು 2017-18ರಲ್ಲಿ ಶೇ. 21.14ರಷ್ಟಿದೆ. 2024-25ರ ಬಜೆಟ್‌ನಲ್ಲಿ ಶೆ. 30.56ಕ್ಕೇರಿದೆ. ವೇತನ ವೆಚ್ಚವು 2023-24ರ ಪರಿಷ್ಕೃತ ಅಂದಾಜಿನಲ್ಲಿ 65,003 ಕೋಟಿಗಳಿಂದ 2024-25ರಲ್ಲಿ 80,434 ಕೋಟಿಗಳಿಗೆ ಏರಿದೆ ಎಂದು 5ನೇ ರಾಜ್ಯ ಹಣಕಾಸು ಆಯೋಗವು ತನ್ನ ವರದಿಯಲ್ಲಿ ವಿವರಿಸಿದೆ.
‘ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸುಗಳ ಅನುಷ್ಠಾನವು ಮುಂದಿನ ಹಲವಾರು ವರ್ಷಗಳಲ್ಲಿ ಬದ್ಧ ವೆಚ್ಚದಲ್ಲಿ ತೀವ್ರ ಹೆಚ್ಚಳಕ್ಕೆ ಕಾರಣವಾಗಬಹುದು ಮತ್ತು ಮುಂಬರುವ ವರ್ಷಗಳಲ್ಲಿ ರಾಜ್ಯದ ವಿತ್ತೀಯ ಕೊರತಗೆಳ ಗುರಿಗಳನ್ನು ಕಾಯ್ದುಕೊಳ್ಳುವಲ್ಲಿ ತೀವ್ರ ಸವಾಲನ್ನು ಒಡ್ಡುತ್ತದೆ,’ ಎಂದು 5ನೇ ರಾಜ್ಯ ಹಣಕಾಸು ಆಯೋಗವು ಆತಂಕವನ್ನು ವ್ಯಕ್ತಪಡಿಸಿದೆ.

ಒಟ್ಟು ಯೋಜನಾಧರಿತವಲ್ಲದ ಬದ್ಧ ವೆಚ್ಚದಲ್ಲಿ ಸಂಬಳದ ಅನುಪಾತವು ಶೆ. 50.4ರಷ್ಟಿದೆ. ಬೆಳೆಯುತ್ತಿರುವ ಸಂಬಳ ವೆಚ್ಚವನ್ನು ತರ್ಕಬದ್ಧಗೊಳಿಸಬೇಕಾಗಿದೆ. ಇದರಲ್ಲಿ ಉತ್ಪಾದಕತೆ ಮತ್ತು ಕೆಲಸದ ಗುಣಮಟ್ಟಕ್ಕೆ ಸಂಬಂಧಿಸಿದ ಸಂಗತಿಗಳಿವೆ. 7ನೇ ವೇತನ ಆಯೋಗದ ಶ್ರೇಣಿಗಳ ಜಾರಿಯೊಂದಿಗೆ ಕಾರ್ಯಕ್ಷಮತೆಯ ಮೌಲ್ಯಮಾಪನವನ್ನು ಬಿಗಿಗೊಳಿಸಬೇಕಾಗಿದೆ. ಇದಲ್ಲದೇ ಕರ್ನಾಟಕದಲ್ಲಿ ಸೇವೆಗಳ ಡಿಜಲಿಟೀಕರಣವು ಉನ್ನತ ಮಟ್ಟದಲ್ಲಿದೆ. ಇಲಾಖೆಗಳು ಮಾನವ ಸಂಪನ್ಮೂಲ ನೀತಿಯನ್ನು ತುರ್ತಾಗಿ ಮರು ಮೌಲ್ಯಮಾಪನ ಮಾಡುವ ಅವಶ್ಯಕತೆ ಇದೆ ಎಂದು ಆಯೋಗವು ಸಲಹೆ ನೀಡಿದೆ.
ಪಿಂಚಣಿ ಪಾವತಿಗಳ ಹೆಚ್ಚಿನ ಹೊರೆ
ಇದಲ್ಲದೇ ರಾಜ್ಯ ಸರ್ಕಾರದ ಮೇಲೆ ಪಿಂಚಣಿ ಪಾವತಿಗಳ ಹೆಚ್ಚಿನ ಹೊರೆಯೂ ಬಿದ್ದಿದೆ. ರಾಜಸ್ವ ಸ್ವೀಕೃತಿಗಳಲ್ಲಿ ಪಿಂಚಣಿಗಳ ಪಾಲು 2017- 18ರಲ್ಲಿ ಶೇ. 7.95ರಷ್ಟಿತ್ತು. 2024-25ರಲ್ಲಿ ಶೇ.12.29ಕ್ಕೇರಿದೆ. ರಾಜಸ್ವ ಸ್ವೀಕೃತಿಗಳಲ್ಲಿ ಶೇಕಡವಾರು ಬಡ್ಡಿ ಪಾವತಿ ಪ್ರಮಾಣವು 2017-18ರಲ್ಲಿ ಶೇ. 10.19ರಷ್ಟಿತ್ತು. 2024-25ರಲ್ಲಿ ಇದು ಶೇ. 15.3ಕ್ಕೇರಿದೆ. ಬಡ್ಡಿ ಪಾವತಿಗಳು ಯೋಜನೆ ಆಧರಿತವಲ್ಲದ ಬದ್ಧ ವೆಚ್ಚದ ಸುಮಾರು ಶೇ 25ರಷ್ಟಿದೆ ಎಂದು ಆಯೋಗವು ವಿಶ್ಲೇಷಣೆ ಮಾಡಿದೆ.
ಅದೇ ರೀತಿ ಯೋಜನೆ ಆಧರಿತ ಬದ್ಧ ವೆಚ್ಚದ ಕುರಿತೂ ಆಯೋಗವು ವಿಶ್ಲೇಷಿಸಿದೆ. ಒಟ್ಟು ರಾಜಸ್ವ ಸ್ವೀಕೃತಿಗಳಲ್ಲಿ ಸಬ್ಸಿಡಿಗಳ ಪ್ರಮಾಣವು 2017-18ರಲ್ಲಿ ಶೇ. 16.95ರಷ್ಟಿತ್ತು. ಇದು 2024-25ರಲ್ಲಿ ಶೇ. 9.84ಕ್ಕೆ ಇಳಿದಿದೆ. ಯೋಜನೆ ಅಧಾರಿತ ಬದ್ಧತಾ ವೆಚ್ಚದ ಪ್ರಮಾಣವು 2017-18ರಲ್ಲಿ ಶೇ. 53.14ರಿಂದ 2024-25ರಲ್ಲಿ ಶೆ. 23.34ಕ್ಕೆ ಕುಸಿದಿದೆ. ಇದು ಸಬ್ಸಿಡಿಗಳನ್ನು ಕ್ರಮೇಣ ಕಡಿಮೆ ಮಾಡಲು ರಾಜ್ಯವು ಪ್ರಯತ್ನಿಸುತ್ತಿದೆ ಎಂದು ಸೂಚಿಸುತ್ತದೆ ಎಂದು ವಿವರಿಸಿದೆ.
ಗ್ಯಾರಂಟಿಯಿಂದ ಯೋಜನೆ ಬದ್ಧತಾ ವೆಚ್ಚ ಹೆಚ್ಚಳ
ಮತ್ತೊಂದು ವಿಶೇಷವೆಂದರೇ ರಾಜಸ್ವ ಸ್ವೀಕೃತಿಯು 2022-23ರಲ್ಲಿ ಶೇಕಡವಾರು ಯೋಜನೆ ಆಧರಿತ ಬದ್ಧತಾ ವೆಚ್ಚವು ಶೇ.31ರಷ್ಟಿತ್ತು. ಆದರೆ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ ನಂತರ ಯೋಜನೆ ಆಧರಿತ ಬದ್ಧತಾ ವೆಚ್ಚವು ಶೇ. 42.2ಕ್ಕೇರಿದೆ.

ಹಾಗೆಯೇ 2017-18ರಿಂದ 2024-25ರವರೆಗೆ ಒಟ್ಟು ಯೋಜನೆ ಅಧರಿತ ಬದ್ಧ ವೆಚ್ಚವು ವೆಚ್ಚದಲ್ಲಿ ಸ್ಥಳೀಯ ಸರ್ಕಾರಗಳಿಗೆ ಮರು ಹಂಚಿಕೆ ಪಾಲು ಶೇ. 31.35ರಿಂದ ಶೇ.18.4ಕ್ಕೆ ಇಳಿಯಿತು. ಒಟ್ಟು ಆದಾಯ ಸ್ವೀಕಾರಗಳ ಶೇಕಡವಾರು ಪ್ರಮಾಣದಲ್ಲಿ ಅದೇ ಅವಧಿಯಲ್ಲಿ ಇದು ಶೆ. 10ರಿಂದ ಶೇ. 7.76ಕ್ಕೆ ಇಳಿದಿದೆ. ಆದರೂ ಒಟ್ಟಾರೆ ಮೊತ್ತವು ಹೆಚ್ಚಾಗುತ್ತಿದೆ. ಸ್ಥಳೀಯ ಸ್ವಯಂ ಆಡಳಿತ ಸರ್ಕಾರಗಳಿಗೆ ನಿಧಿಯ ಹಂಚಿಕೆಯಲ್ಲಿನ ಶೇಕಡಾವಾರು ಇಳಿಕೆ ಬಗ್ಗೆ ಆಯೋಗವು ಕಳವಳವನ್ನು ವ್ಯಕ್ತಪಡಿಸಿದೆ.
ಸಬ್ಸಿಡಿ ಮತ್ತು ಆರ್ಥಿಕ ನೆರವಿಗೆ 2017-18ರಲ್ಲಿ 24,922 ಕೋಟಿ ರುಗಳನ್ನು ಯೋಜನೆ ಆಧರಿತ ಬದ್ಧತಾ ವೆಚ್ಚದಲ್ಲಿ ಸೇರಿಸಲಾಗಿತ್ತು. 2018-19ರಲ್ಲಿ ಇದು 40,872 ಕೋಟಿ, 2019-20ರಲ್ಲಿ 35,731 ಕೋಟಿ, 2020-21ರಲ್ಲಿ 34,689 ಕೋಟಿ, 2022-22ರಲ್ಲಿ 34,749 ಕೋಟಿ, 2023-24ರಲ್ಲಿ 27,732 ಕೋಟಿ, 2024-25ರಲ್ಲಿ 25,904 ಕೋಟಿ ರು ಯೋಜನೆ ಆಧರಿತ ಬದ್ಧತಾ ವೆಚ್ಚವಾಗಿತ್ತು.

ಸಾಮಾಜಿಕ ಭದ್ತತಾ ಪಿಂಚಣಿಗಳ ವಿಭಾಗದಲ್ಲಿ 2017-18ರಲ್ಲಿ 4,016 ಕೋಟಿ, 2018-19ರಲ್ಲಿ 5,411 ಕೋಟಿ, 2019-20ರಲ್ಲಿ 7,300 ಕೋಟಿ, 2020-21ರಲ್ಲಿ 8,049 ಕೋಟಿ, 2022-23ರಲ್ಲಿ 9,543 ಕೋಟಿ, 2023-24ರಲ್ಲಿ 10,822 ಕೋಟಿ, 2024-25ರಲ್ಲಿ 10,230 ಕೋಟಿ ಇತ್ತು.

ಜಿಐಎ-ವೇತನೇತರ ವಿಭಾಗದಲ್ಲಿ 2017-18ರಲ್ಲಿ 3,248 ಕೋಟಿ, 2018-19ರಲ್ಲಿ 2,767 ಕೋಟಿ, 2019-20ರಲ್ಲಿ 3,545 ಕೋಟಿ, 2020-21ರಲ್ಲಿ 3,853 ಕೋಟಿ, 2021-22ರಲ್ಲಿ 3,578 ಕೋಟಿ, 2022-23ರಲ್ಲಿ 3,285 ಕೋಟಿ, 2023-24ರಲ್ಲಿ 2,550 ಕೋಟಿ, 2024-25ರಲ್ಲಿ 2,367 ಕೋಟಿ ರು ಇತ್ತು.

ಸ್ಥಳೀಯ ಸ್ವಯಂ ಸರ್ಕಾರಗಳಿಗೆ ವೇತನೇತರ ವಿಭಾಗದಲ್ಲಿ ಹಂಚಿಕೆ ಮಾಡಿದ್ದ ಅನುದಾನದ ಕುರಿತೂ ಆಯೋಗವು ಅಂಕಿ ಅಂಶಗಳ ಸಮೇತ ವಿವರಿಸಿದೆ. ಇದರ ಪ್ರಕಾರ 2017-18ರಲ್ಲಿ 14,704 ಕೋಟಿ, 2018-19ರಲ್ಲಿ 18,304 ಕೋಟಿ, 2019-20ರಲ್ಲಿ 18,148 ಕೋಟಿ, 2020-221ರಲ್ಲಿ 19,581 ಕೋಟಿ, 2021-22ರಲ್ಲಿ 24,421 ಕೋಟಿ, 2022-23ರಲ್ಲಿ 23,336 ಕೋಟಿ, 2023-24ರಲ್ಲಿ 21,191 ಕೋಟಿ, 2024-25ರಲ್ಲಿ 20,447 ಕೋಟಿಯಷ್ಟು ಹಂಚಿಕೆ ಮಾಡಿತ್ತು.

ಈ 8 ವರ್ಷಗಳಲ್ಲಿ ಸ್ಥಳೀಯ ಸ್ವಯಂ ಆಡಳಿತ ಸರ್ಕಾರಗಳಿಗೆ ನಿಧಿಯ ಹಂಚಿಕೆಯಲ್ಲಿ ಇಳಿಕೆಯಾಗುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಇನ್ನು ಖಾತರಿ ಯೋಜನೆಗಳಿಗೆ ಸಂಬಂಧಿಸಿದಂತೆ 2017-18ರಿಮದ 2022-23ರವರೆಗೆ ಯೋಜನೆ ಆಧರಿತ ಬದ್ಧತಾ ವೆಚ್ಚಗಳಿಗೆ ಬಿಡಿಗಾಸೂ ಇರಲಿಲ್ಲ. ಆದರೆ 2023-24ರಲ್ಲಿ 33,468 ಕೋಟಿ, 2024-25ರಲ್ಲಿ 52,009 ಕೋಟಿಯಷ್ಟು ವೆಚ್ಚ ಮಾಡಲಾಗಿದೆ. ಇದು ಗ್ಯಾರಂಟಿ ಯೋಜನೆಗಳಿಂದಾಗಿ ಹೆಚ್ಚಳವಾಗಿರುವುದು ಕಂಡು ಬಂದಿದೆ.

ಒಟ್ಟಾರೆಯಾಗಿ ಸಬ್ಸಿಡಿ, ಆರ್ಥಿಕ ನೆರವು, ಸಾಮಾಜಿಕ ಭದ್ರತಾ ಯೋಜನೆಗಳು, ಜಿಐಎ-ವೇತನೇತರ, ಸ್ಥಳೀಯ ಸ್ವಯಂ ಸರ್ಕಾರಗಳಿಗೆ ಹಂಚಿಕೆ, ಖಾತರಿ ಯೋಜನೆಗಳಿಗೆ 2017-18ರಲ್ಲಿ 46,890 ಕೋಟಿ, 2018-19ರಲ್ಲಿ 67,354 ಕೋಟಿ, 2019-20ರಲ್ಲಿ 64,723 ಕೋಟಿ, 2020- 21ರಲ್ಲಿ 65,858 ಕೋಟಿ, 2021-22ರಲ್ಲಿ 78,823 ಕೋಟಿ, 2022-23ರಲ್ಲಿ 70, 913 ಕೋಟಿ, 2023-24ರಲ್ಲಿ 95,763 ಕೋಟಿ, 2024-25ರಲ್ಲಿ 1,10,957 ಕೋಟಿ ವೆಚ್ಚವಾಗಿತ್ತು.

ಯೋಜನಾಧರಿತವಲ್ಲದ ಬದ್ಧ ವೆಚ್ಚಗಳ ಕುರಿತಾಗಿಯೂ ಆಯೋಗವು ವಿಶ್ಲೇಷಣೆ ಮಾಡಿದೆ. ಸಂಬಳಕ್ಕೆ 2017-18ರಲ್ಲಿ 31,078 ಕೋಟಿ, 2018-19ರಲ್ಲಿ 39,514 ಕೋಟಿ, 2019-20ರಲ್ಲಿ 43,103 ಕೋಟಿ, 2020-21ರಲ್ಲಿ 43,769 ಕೋಟಿ, 2021-22ರಲ್ಲಿ 47,927 ಕೋಟಿ, 2022-23ರಲ್ಲಿ 50,661 ಕೋಟಿ, 2023-24ರಲ್ಲಿ 65,003 ಕೋಟಿ, 2024-25ರಲ್ಲಿ 80,434 ಕೋಟಿ ರು ವೆಚ್ಚವಾಗಿತ್ತು.

ಪಿಂಚಣಿ ಪಾವತಿಗೆ ಸಂಬಂಧಿಸಿದಂತೆ 2017-18ರಲ್ಲಿ 11,684 ಕೋಟಿ, 2018-19ರಲ್ಲಿ 15,109 ಕೋಟಿ, 2091-20ರಲ್ಲಿ 18,404 ಕೋಟಿ, 2020-21ರಲ್ಲಿ 18,936 ಕೋಟಿ, 2020-21ರಲ್ಲಿ 20,666 ಕೋಟಿ, 2021-22ರಲ್ಲಿ 24,020 ಕೋಟಿ, 2023-24ರಲ್ಲಿ 25,116 ಕೋಟಿ, 2024-25ರಲ್ಲಿ 32,355 ಕೋಟಿ ರು ವೆಚ್ಚವಾಗಿತ್ತು.

ಬಡ್ಡಿ ಪಾವತಿಗೆ ಸಂಬಂಧಿಸಿದಂತೆ 2017-18ರಲ್ಲಿ 14,973 ಕೋಟಿ, 2018-19ರಲ್ಲಿ 16,685 ಕೋಟಿ, 2019-20ರಲ್ಲಿ 19,919 ಕೋಟಿ, 2020-21ರಲ್ಲಿ 23,410 ಕೊಟಿ, 2021-22ರಲ್ಲಿ 26, 319 ಕೋಟಿ, 2022-23ರಲ್ಲಿ 29,629 ಕೋಟಿ, 2023-24ರಲ್ಲಿ 31,598 ಕೋಟಿ, 2024-25ರಲ್ಲಿ 40,263 ಕೋಟಿ ರು ಪಾವತಿಸಿತ್ತು.

ಒಟ್ಟಾರೆ ಸಂಬಳ, ಪಿಂಚಣಿ, ಬಡ್ಡಿ ಪಾತಿ ಮತ್ತು ಆಡಳಿತ ವೆಚ್ಚಕ್ಕೆ ಸಂಬಂಧಿಸಿದಂತೆ 2017-18ರಲ್ಲಿ 60,164 ಕೋಟಿ, 2018-19ರಲ್ಲಿ 73,660 ಕೋಟಿ, 2019-20ರಲ್ಲಿ 84,068 ಕೋಟಿ, 2020-21ರಲ್ಲಿ 90,152 ಕೋಟಿ, 2021-22ರಲ್ಲಿ 98,962 ಕೋಟಿ, 2022-23ರಲ್ಲಿ 1,10,123 ಕೋಟಿ, 2023-24ರಲ್ಲಿ 1,28,052 ಕೋಟಿ, 2024-25ರಲ್ಲಿ 1,59,526 ಕೋಟಿ ರು ವೆಚ್ಚ ಮಾಡಲಾಗಿತ್ತು.

7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನಂತೆ ರಾಜ್ಯ ಸರ್ಕಾರಿ ನೌಕರರ ವೇತನ, ಪಿಂಚಣಿ ಮತ್ತು ಕೆಲವು ನಿರ್ದಿಷ್ಟ ಭತ್ಯೆಗಳನ್ನು ಈಗಾಗಲೇ ಪರಿಷ್ಕರಿಸಿದೆ. 2024ರ ಆಗಸ್ಟ್ 1ರಿಂದಲೇ ಜಾರಿಗೆ ಬರುವಂತೆ ಶಿಫಾರಸ್ಸನ್ನು ಅನುಷ್ಟಾನಗೊಳಿಸಿದೆ. ಇದಕ್ಕಾಗಿ ರಾಜ್ಯ ಸರ್ಕಾರವು ವಾರ್ಷಿಕ 19,401 ಕೋಟಿ ರುಪಾಯಿಗಳನ್ನು ಹೆಚ್ಚುವರಿಯಾಗಿ ಭರಿಸಿದೆ.






