ಬೆಂಗಳೂರು; ಬೆಂಗಳೂರು ನಗರದ ದಿನ್ನೂರು ಕಾಲೋನಿ ಮತ್ತು ಗೋಪಾಲಕೃಷ್ಣ ಬಡಾವಣೆ (ಗುಲ್ಜಾರ್ ಖಾನ್ ಬಡಾವಣೆ) ಹಾಗೂ ಇತರೆ ಖಾಸಗಿ ವ್ಯಕ್ತಿಗಳು, ಪಟ್ಟಭದ್ರ ಹಿತಾಸಕ್ತಿಗಳು ಅನೇಕ ಜನರಿಗೆ ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಕಾಡುಗೋಡಿ ಪ್ಲಾಂಟೇಷನ್‌ನ ಸರ್ವೆ ನಂ 1ರಲ್ಲಿರುವ ಅರಣ್ಯ ಪ್ರದೇಶವನ್ನು ಕಾನೂನುಬಾಹಿರವಾಗಿ ದಿನೇ ದಿನೇ ಮಾರಾಟ ಮಾಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರವೇ ಅಧಿಕೃತವಾಗಿ ಒಪ್ಪಿಕೊಂಡಿದೆ.
ಬಿದರಹಳ್ಳಿ ಹೋಬಳಿಯ ಕಾಡುಗೋಡಿ ಪ್ಲಾಂಟೇಷನ್‌ನ ಸರ್ವೆ ನಂ 1ರಲ್ಲಿರುವ 120-00 ಎಕರೆ ಜಮೀನು ಕಾಯ್ದಿಟ್ಟ ಅರಣ್ಯ ಪ್ರದೇಶವಾಗಿದ್ದರೂ ಹೈಟೆಕ್ ಕೈಗಾರಿಕೆ ಪ್ರದೇಶವನ್ನಾಗಿ ಅಭಿವೃದ್ಧಿಪಡಿಸಲು ಸಲ್ಲಿಕೆಯಾಗಿರುವ ಪ್ರಸ್ತಾವದ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆದಿರುವ ಬೆನ್ನಲ್ಲೇ, ಇದೇ ಕಾಡುಗೋಡಿ ಪ್ಲಾಂಟೇಷನ್ ಸರ್ವೇ ನಂಬರ್ 1ರಲ್ಲಿರುವ ಅರಣ್ಯ ಪ್ರದೇಶವನ್ನು ಕಾನೂನುಬಾಹಿರವಾಗಿ ಮಾರಾಟ ಮಾಡುತ್ತಿದ್ದಾರೆ ಎಂದು ಸರ್ಕಾರವೇ ಒಪ್ಪಿಕೊಂಡಿರುವುದು ಮುನ್ನೆಲೆಗೆ ಬಂದಿದೆ.
ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ-1 ಹೋಬಳಿಯ ಕಾಡುಗೋಡಿ ಪ್ಲಾಂಟೇಷನ್ ಗ್ರಾಮದಲ್ಲಿನ ಅರಣ್ಯ ಪ್ರದೇಶವನ್ನು ಕಾನೂನುಬಾಹಿರವಾಗಿ ಕೆಐಎಡಿಬಿಯು ಖಾಸಗಿ ಕಂಪನಿಗಳಿಗೆ ಭೂ ಸ್ವಾಧೀನಪಡಿಸಿಕೊಂಡು ಅರಣ್ಯೇತರ ಚಟುವಟಿಕೆಗಳಿಗೆ ಬಳಸಲಾಗುತ್ತಿರುವುದು ಮತ್ತು ಈ ಪ್ರದೇಶವನ್ನು ಮರು ಅರಣ್ಯೀಕರಣಗೊಳಿಸುವ ಕುರಿತು ಬಿಜೆಪಿ ಸದಸ್ಯ ಡಾ ಅಶ್ವಥ್ ನಾರಾಯಣ್ ಅವರು ನಿಯಮ 73ರಡಿ ಮಂಡಿಸಿದ್ದ ವಿಷಯಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ನೀಡಿರುವ ಉತ್ತರದಲ್ಲಿ ಈ ಮಾಹಿತಿ ಇದೆ.

ಕಾನೂನುಬಾಹಿರವಾಗಿ ಮಾರಾಟ
ದಿನ್ನೂರು ಕಾಲೋನಿ ಮತ್ತು ಗೋಪಾಲಕೃಷ್ಣ ಬಡಾವಣೆ (ಗುಲಜಾರ್ ಖಾನ್ ಬಡಾವಣೆ) ಹಾಗೂ ಇತರೆ ಖಾಸಗಿ ವ್ಯಕ್ತಿಗಳು ಹಾಗೂ ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಅನೇಕ ಜನರಿಗೆ ಜನರಲ್ ಪವರ್ ಅಫ್ ಅಟಾರ್ನಿಯನ್ನು ಅನಧಿಕೃತವಾಗಿ ಮಾಡಿಕೊಟ್ಟಿದ್ದಾರೆ. ಅಲ್ಲದೇ ಕಾನೂನುಬಾಹಿರವಾಗಿ ಕಾಡುಗೋಡಿ ಪ್ಲಾಂಟೇಷನ್ ಸರ್ವೆ ನಂಬರ್ 1ರ ಅರಣ್ಯ ಪ್ರದೇಶವನ್ನು ದಿನೇ ದಿನೇ ಮಾರಾಟ ಮಾಡುತ್ತಿದ್ದಾರೆ.

ಈ ಪ್ರದೇಶದಲ್ಲಿ ಯಾವುದೇ ಕೃಷಿ ಚಟುವಟಿಕೆಗಳಾಗಲೀ ಜೀವನ ಅಧಾರಿತ ಚಟುವಟಿಕೆಗಳು ನಡೆಯುತ್ತಿರಲಿಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ಅವರು ಉತ್ತರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಆದರೆ ಖಾಸಗಿ ವ್ಯಕ್ತಿಗಳು ಮತ್ತು ಪಟ್ಟ ಭದ್ರ ಹಿತಾಸಕ್ತಿಗಳ್ಯಾವುವು ಎಂಬುದನ್ನು ಈಗಿನ ಸರ್ಕಾರವೂ ಪತ್ತೆ ಹಚ್ಚುವ ಗೋಜಿಗೆ ಹೋಗಿಲ್ಲ. ಹೀಗಾಗಿ ಕಾನೂನುಬಾಹಿರವಾಗಿ ನಡೆಯುತ್ತಿರುವ ಮಾರಾಟ ಪ್ರಕ್ರಿಯೆಗಳು ಈಗಲೂ ಮುಂದುವರೆದಿವೆ.

ಅಕ್ರಮ ಭೂ- ವ್ಯವಹಾರ
ಇದೇ ಪ್ರದೇಶದಲ್ಲಿ ದಿನೇ ದಿನೇ ಅನಧಿಕೃತ ಚಟುವಟಿಕೆಗಳಾದ ವಾಹನ ನಿಲುಗಡೆ ಹ ಆಗೂ ಅನಧಿಕೃತ ಕಟ್ಟಡಗಳು ತಲೆ ಎತ್ತುತ್ತಿವೆ. ಹಾಗೂ ತ್ಯಾಜ್ಯ ವಿಲೇವಾರಿ ಸ್ಥಳವಾಗಿದೆ. ಅಂಗಡಿ ಮುಂಗಟ್ಟುಗಳೂ ಅನಧಿಕೃತವಾಗಿ ತಲೆ ಎತ್ತುತ್ತಿವೆ. ಅಕ್ರಮ ಭೂ ವ್ಯವಹಾರಗಳೂ ನಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಯಾವ ಕ್ರಮಗಳೂ ಕಾನೂನಾತ್ಮಕ ಕ್ರಮಗಳಾಗಿಲ್ಲ. ಕರ್ನಾಟಕ ಅರಣ್ಯ ಕಾಯ್ದೆ 1963 ಮತ್ತು ವನ್ ಸಂರಕ್ಷಣ್ ಸಂವರ್ಧನ್ ಅಧಿನಿಯಮ 1980 2003ರ ಉಲ್ಲಂಘನೆಯಾಗಿದೆ ಎಂದು ಉತ್ತರದಲ್ಲಿ ಈಶ್ವರ್ ಖಂಡ್ರೆ ಅವರು ತಿಳಿಸಿದ್ದಾರೆ.

ಸದ್ಯ ಅರಣ್ಯ ಇಲಾಖೆಯು 120 ಎಕರೆ ತೆರೆದ ಪ್ರದೇಶವನ್ನು ಗುರುತಿಸಿದೆ. ಈ ಪ್ರದೇಶದಲ್ಲಿ ಯಾವುದೇ ಕಟ್ಟಡಗಳಿಗಾಗಲೀ ವಾಸದ ಮನೆಗಳಿಗಾಗಲಿ ಅಥವಾ ಸ್ಥಳೀಯ ಕಾಲೋನಿಯ ನಿವಾಸಿಗಳಿಗಾಗಲಿ ತೊಂದರೆಯಾಗದಂತೆ 2026ರ ಜೂನ್ 23ರಂದು ಇಲಾಖೆ ವಶಕ್ಕೆ ಪಡೆದಿದೆ. ಈ ಪ್ರದೇಶದಲ್ಲಿ ಅರಣ್ಯೀಕರಣಕ್ಕಾಗಿ ಗಿಡ ನೆಡುವ ಕಾರ್ಯವನ್ನು ಪೂರ್ಣಗೊಳಿಸಿದೆ. ಈ ಪ್ರದೇಶವು ಒತ್ತುವರಿಯಾಗದಂತೆ ಸಂರಕ್ಷಿಸಲು ತಾತ್ಕಾಲಿಕ ತಡೆಗೋಡೆ ಹಾಗೂ ತಂತಿ ಬೇಲಿಯನ್ನು ನಿರ್ಮಿಸಲಾಗಿದೆ ಎಂಬ ಮಾಹಿತಿಯನ್ನು ಉತ್ತರದಲ್ಲಿ ಒದಗಿಸಿರುವುದು ತಿಳಿದು ಬಂದಿದೆ.

ಈ ಪ್ರದೇಶವನ್ನು ತೆರವುಗೊಳಿಸಿರುವ ಕಾರಣ ಸ್ಥಳೀಯರು 31 ಪ್ರಕರಣಗಳನ್ನು ಹೈಕೋರ್ಟ್‌ನಲ್ಲಿ ದಾಖಲಿಸಿದ್ದಾರೆ. ಈ ಹಿಂದೆ ದಾಖಲಾಗಿದ್ದ 3 ಪ್ರಕರಣಗಳೂ ಸಹ ಒಟ್ಟಾರೆ 34 ಪ್ರಕರಣಗಳನ್ನು ಇಲಾಖೆ ವಿರುದ್ಧ ದಾಖಲಾಗಿವೆ. 2026ರ ಮಾರ್ಚ್ 30ರಂದು ವಿಚಾರಣೆಗೆ ನಿಗದಿಪಡಿಸಿದೆ ಎಂದು ಉತ್ತರಿಸಿದ್ದಾರೆ.
ಕಾಡುಗೋಡಿಯಲ್ಲಿದೆ 711 ಎಕರೆ ಅರಣ್ಯ ಪ್ರದೇಶ
ಬೆಂಗಳೂರು ಪೂರ್ವ ತಾಲೂಕು ಬಿದರಹಳ್ಳಿ ಹೋಬಳಿ ಕಾಡುಗೋಡಿ ಪ್ಲಾಂಟೇಷನ್ ಸರ್ವೆ ನಂಬರ್ 1ರಲ್ಲಿ ಒಟ್ಟಾರೆ 711 ಎಕರೆ ಪ್ರದೇಶವಿದೆ. ಇದನ್ನು ಅಂದಿನ ಮೈಸೂರು ಸರ್ಕಾರವು (ಸಂಖ್ಯೆ; 10407-ಎಫ್‌ಟಿಎಫ್ 153-95- 29 ಮೇ 18960 422 ಎಫ್‌ಟಿಎಫ್ 156-1900- 07 ಜನವರಿ 1901) ರಾಜ್ಯ ಅರಣ್ಯ ಎಂದು ಘೋಷಿಸಿದೆ.

ಅರಣ್ಯ ಪ್ರದೇಶವನ್ನೇ ಕೈಗಾರಿಕೆ ಪ್ರದೇಶವನ್ನಾಗಿಸಿದ್ದ ಕೆಐಎಡಿಬಿ
ಮೈಸೂರು ಸರ್ಕಾರವೇ ಈ ಪ್ರದೇಶವನ್ನು ರಾಜ್ಯ ಅರಣ್ಯ ಮತ್ತು ಕಾಯ್ದಿಟ್ಟ ಅರಣ್ಯ ಎಂದು ಘೋಷಿಸಿದ್ದರೂ ಸಹ ಇದನ್ನು ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯು ಗಮನಿಸಿರಲಿಲ್ಲ. ಕೆಐಎಡಿಬಿಯು 1970ರಲ್ಲೇ 711 ಎಕರೆ ಪೈಕಿ 148 ಎಕರೆ 20 ಗುಂಟೆ ಪ್ರದೇಶವನ್ನು ಕೈಗಾರಿಕೆ ಪ್ರದೇಶವೆಂದು ಅಧಿಸೂಚನೆ ಹೊರಡಿಸಿತ್ತು. ಆದರೆ ಅಧಿನಿಯಮ ಸೆಕ್ಷನ್ 28(4) ಅಡಿಯಲ್ಲಿ ಯಾವುದೇ ಭೂ ಸ್ವಾಧೀನಪಡಿಸಿಕೊಂಡಿಲ್ಲ. ಬ್ರಿಟಿಷ್ ಮಿಲಿಟರಿ ವಶದಲ್ಲಿದ್ದ ಕಾಡುಗೋಡಿ ಪ್ಲಾಂಟೇಷನ್‌ನ್ನು 141 ಎಕರೆ ಪ್ರದೇಶವನ್ನು ಮೈಸೂರು ರಾಜ್ಯ ರಿಸರ್ವ್ ಪೊಲೀಸ್ ವತಿಯಿಂದ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಗೆ ಹಸ್ತಾಂತರಿಸಲಾಗಿತ್ತು ಎಂದು ಸಚಿವರು ಉತ್ತರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

572 ಎಕರೆ ಜಂಟಿ ಕೃಷಿಗೆ ನೀಡಿದ್ದ ಸರ್ಕಾರ
1953ರಲ್ಲಿ ಇದೇ ಪ್ರದೇಶದಲ್ಲಿ ಒಟ್ಟು ಜಮೀನಿನ ಪೈಕಿ 572.06 ಎಕರೆ ವಿಸ್ತೀರ್ಣದ ಜಮೀನನ್ನುಕಾಡುಗೋಡಿ ಸಾಮೂಹಿಕ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ಜಂಟಿ ಸಹಕಾರ ಕೃಷಿಗೆ ತಾತ್ಕಾಲಿಕವಾಗಿ ನೀಡಿತ್ತು. ಆದರೆ ಈ ಜಮೀನಿನ ಮೇಲೆ ಯಾವುದೇ ಹಕ್ಕಾಗಲೀ ಅಥವಾ ಮಾಲೀಕತ್ವ ಆಗಲೀ ಸಂಘಕ್ಕಾಗಲೀ ಅಥವಾ ಅದರ ಸದಸ್ಯರಿಗಾಗಲಿ ನೀಡಿರಲಿಲ್ಲ. ಈ ಸಂಘದ ಸದಸ್ಯರುಗಳಿಂದ ಕೆಐಎಡಿಬಿಯು 1985ರ ಆಗಸ್ಟ್ 13ರಂದು ಹೊರಡಿಸಿದ್ದ ಅಧಿಸೂಚನೆ ಪ್ರಕಾರ ಪ್ರತಿ ಎಕರೆಗೆ 30,000 ರುನಂತೆ 108 ಸದಸ್ಯರಿಗೆ ಪರಿಹಾರ ಧನ ನೀಡಲಾಗಿತ್ತು.
ಕಾನೂನು ಉಲ್ಲಂಘಿಸಿ 440 ಎಕರೆ ಸ್ವಾಧೀನ
ಪರಿಹಾರ ಧನ ಪಡೆದಿದ್ದ 108 ಸದಸ್ಯರ ವಶದಲ್ಲಿ 303 ಎಕರೆ 34 ಗುಂಟೆ ಜಮೀನಿತ್ತು. ಆದರೆ ವಾಸ್ತವದಲ್ಲಿ ಒಟ್ಟಾರೆ 209 ಎಕರೆ 4 ಗುಂಟೆ ಮಾತ್ರ ಸ್ವಾಧೀನಪಡಿಸಿಕೊಂಡಿದ್ದರು. ಅಂಧರೆ 1980ರ ಅರಣ್ಯ (ಸಂರಕ್ಷಣಾ) ಕಾಯ್ದೆ ಜಾರಿಗೆ ಬಂದ ನಂತರವೂ ಕೆಐಎಡಿಬಿಯು ಕಾನೂನು ಉಲ್ಲಂಘನೆ ಮಾಡಿ 449.20 ಎಕರೆ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆಗಾಗಿ ಸ್ವಾಧೀನಪಡಿಸಿಕೊಂಡಿತ್ತು.
ಸಂಘದ ಲೆಕ್ಕ ಪರಿಶೋಧನಾ ವರದಿಗಳೇ ಇಲ್ಲ
ಕಾಡುಗೋಡಿ ಸಾಮೂಹಿಕ ವ್ಯವಸಾಯ ಸೇವಾ ಸಹಕಾರ ಸಂಘವು ಸರಿಯಾಗಿ ಕಾರ್ಯನಿರ್ವಹಿಸಿರಲಿಲ್ಲ. ಹೀಗಾಗಿ ಸಂಘದ ಪದಾಧಿಕಾರಿಗಳು, ದಾಖಲಾತಿಗಳು ಮತ್ತು ಲೆಕ್ಕ ಪರಿಶೋಧನಾ ವರದಿಗಳೇ ಲಭ್ಯವಿರಲಿಲ್ಲ. ಹೀಗಾಗಿ ಈ ಸಂಘವನ್ನು 1983ರ ಡಿಸೆಂಬರ್ 31ರಂದೇ ರದ್ದುಗೊಳಿಸಿ ಆದೇಶಿಸಿತ್ತು. ನಂತರ ಲಿಕ್ವಿಡೇಷನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆದೇಶಿಸಲಾಗಿತ್ತು.
ಇದಾದ ನಂತರ ಕಾಡುಗೋಡಿ ಸಾಮೂಹಿಕ ವ್ಯವಸಾಯ ಸೇವಾ ಸಹಕಾರ ಸಂಘದ ಸುಮಾರು 201 ಸದಸ್ಯರು ಬೆಂಗಳೂರಿನ ವಿಶೇಷ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ದಾವೆ ( ಕೇಸ್ ನಂಬರ್ ಎಲ್‌ಎನ್‌ಡಿ (ಎಸ್) ಸಿಆರ್ 237(1)ರಿಂದ (201) 1990-91 ದಿನಾಂಕ 29 ಸೆಪ್ಟಂಬರ್ 2006) ಹೂಡಿದ್ದರು. ಈ ಪ್ರಕರಣದಲ್ಲಿ ಒಟ್ಟು 572 ಎಕರೆ ಪ್ರದೇಶವನ್ನು ಸರ್ಕಾರದ ಪ್ರದೇಶ ಎಂದು ಆದೇಶ ಹೊರಡಿಸಿತ್ತು. ಹೀಗಾಗಿ ಈ ಎಲ್ಲಾ ಕಂದಾಯ ದಾಖಲಾತಿಗಳಲ್ಲಿ ಆರ್‍ಟಿಸಿಗಳಲ್ಲಿ ನಮೂದಿಸಲಾಗಿತ್ತು. ಸಂಘದ ಪ್ರತಿನಿಧಿಗಳ ಹೆಸರುಗಳನ್ನು ರದ್ದುಪಡಿಸಿ ಕಂದಾಯ ದಾಖಲಾತಿಗಳಲ್ಲಿ ಇವರುಗಳ ವಿವರಗಳನ್ನು ತೆಗೆದುಹಾಕಿ ಸರ್ಕಾರ ಎಂದು ನಮೂದಿಸಲಾಗಿತ್ತು.

ಈ ಆದೇಶದಲ್ಲಿ ಸಂಘದ ಯಾವುದೇ ವ್ಯಕ್ತಿಗಳಿಗೆ ಯಾವುದೇ ಸಾಗುವಳೀ ಚೀಟಿಯಾಗಲೀ ಅಥವಾ ಗ್ರಾಂಟ್ ಸರ್ಟಿಫಿಕೇಟ್ ಅಗಲೀ ಇರಲಿಲ್ಲ. ಹೀಗಾಗಿ ಇವರುಗಳಿಗೆ ಯಾವುದೇ ರೀತಿಯ ಮಾಲೀಕತ್ವ ದಾಖಲಾತಿ ಇರಲಿಲ್ಲ. ಹಾಗಾಗಿ ಎಲ್ಲಾ ಪಹಣಿಗಳೂ ಅಸಿಂಧು ಎಂದು ಆದೇಶದಲ್ಲಿ ಘೋಷಿಸಲಾಗಿತ್ತು.
ವಿಶೇಷ ಜಿಲ್ಲಾಧಿಕಾರಿಗಳ ಈ ಆದೇಶವನ್ನು ಸಂಘದ ಸದಸ್ಯರು ಕೆಎಟಿಯಲ್ಲಿ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ಕೆಎಟಿಯೂ ಸಹ ವಿಶೇಷ ಜಿಲ್ಲಾಧಿಕಾರಿಗಳ ಆದೇಶವನ್ನು ಎತ್ತಿ ಹಿಡಿದಿತ್ತು. ನಂತರ ಕೆಎಟಿ ಆದೇಶವನ್ನೂ ಪ್ರಶ್ನಿಸಿದ್ದ ಸಂಘದ ಪದಾಧಿಕಾರಿಗಳು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಕೂಡ ಕೆಎಟಿ ಮತ್ತು ವಿಶೇಷ ಜಿಲ್ಲಾಧಿಕಾರಿಗಳ ಆದೇಶವನ್ನು ಎತ್ತಿ ಹಿಡಿದಿತ್ತು. ಸಂಘದ ಪದಾಧಿಕಾರಿಗಳ ಎಲ್ಲಾ ಅರ್ಜಿಗಳನ್ನೂ ವಜಾಗೊಳಿಸಿತ್ತು. ಈ ಆದೇಶವನ್ನು ಯಾವುದೇ ವ್ಯಕ್ತಿಗಳು ಇದುವರೆಗೂ ಪ್ರಶ್ನಿಸಿಲ್ಲ ಮತ್ತು ಮೇಲ್ಮನವಿ ಸಲ್ಲಿಸಿಲ್ಲ. ಹೀಗಾಗಿ ಈ ಆದೇಶವು ಅಂತಿಮತೆ ತಲುಪಿದೆ.

ಕಾಡುಗೋಡಿ ಪ್ಲಾಂಟೇಷನ್ ಸರ್ವೆ ನಂಬರ್ 01 ರ ಪಹಣಿಯಲ್ಲಿ ಕಾಲಂ ನಂ 3ರಲ್ಲಿ 711 ಎಕರೆ ಎಂದು ನಮೂದಿಸಲಾಗಿದೆ. ಕಾಲಂ ನಂ 9ರಲ್ಲಿ ಕರ್ನಾಟಕ ಅರಣ್ಯ ಇಲಾಖೆ ಎಂದು (ಎಂಆರ್‍ನಂ ಹೆಚ್ 1/15-16) 711 ಎಕರೆ ಎಂದು ನಮೂದಾಗಿದೆ. ಇದು ಇಂದಿಗೂ ಸಹ ಕಂದಾಯ ದಾಖಲಾತಿಯಾಗಿಯೇ ಮುಂದುವರೆದಿದೆ. ಅಲ್ಲದೇ ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 28ರ ಅಡಿಯಲ್ಲಿ ಡಿ-ನೋಟಿಫಿಕೇಷನ್ ಮಾಡಿರುವುದಿಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ಅವರು ಉತ್ತರದಲ್ಲಿ ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.
449 ಎಕರೆ ಮಾರಾಟ ಮಾಡಿದ್ದ ಕೆಐಎಡಿಬಿ
ಆದರೂ ಸಹ ಕಾಡುಗೋಡಿ ಸರ್ವೆ ನಂಬರ್ 1ರಲ್ಲಿದ್ದ ಜಮೀನು ಕೆಐಎಡಿಬಿಯ ಸ್ವಾಧೀನದಲ್ಲೇ ಇತ್ತು. ಸರ್ವೆ ನಂಬರ್ 1ರ ಪೈಕಿ 449 ಎಕರೆ 20 ಗುಂಟೆ ವಿಸ್ತೀರ್ಣದ ಪ್ರದೇಶವನ್ನು ಕೈಗಾರಿಕೆ ಪ್ರದೇಶಕ್ಕಾಗಿ ಕನ್‌ಕಾರ್ಡ್ ಇಂಡಿಯಾ ಪ್ರೈವೈಟ್ ಲಿಮಿಟೆಡ್ ಸೇರಿದಂತೆ ಒಟ್ಟಾರೆ 37 ಕಂಪನಿಗಳಿಗೆ ಮಾರಾಟ ಮಾಡಿತ್ತು. ಈ ಅರಣ್ಯ ಪ್ರದೇಶದ ಕುರಿತು ಸರ್ವೋಚ್ಛ ನ್ಯಾಯಾಲಯದಲ್ಲಿ ಕ್ಯೂರೇಟೀವ್ ಪಿಟಿಷನ್/ ಮಧ್ಯಂತರ ಅರ್ಜಿ ದಾಖಲಿಸುವ ಪ್ರಕ್ರಿಯೆಯು ಇನ್ನೂ ಪ್ರಗತಿಯಲ್ಲೇ ಇದೆ.
711 ಎಕರೆ ಪ್ರದೇಶದಲ್ಲಿ ಉಳಿದ 262.12 ಎಕರೆ ಪ್ರದೇಶವು ಇಂದಿಗೂ ಕಾಯ್ದಿಟ್ಟ ಅರಣ್ಯ ಪ್ರದೇಶವಾಗಿಯೇ ಉಳಿದುಕೊಂಡಿದೆ. ಪ್ರಸ್ತುತ 69 ಎಕರೆ ಅರಣ್ಯ ಪ್ರದೇಶವು ಅರಣ್ಯ ತರಬೇತಿ ಕೇಂದ್ರ ಮತ್ತು ಒಂದು ವೃಕ್ಷೋದ್ಯಾನವಿದೆ. 50 ಎಕರೆ 30 ಗುಂಟೆಯನ್ನು ಬಿಎಂಆರ್‍ಸಿಎಲ್‌ಗೆ ಮತ್ತು 6 ಎಕರೆಯನ್ನು ಬಿಡಬ್ಲ್ಯೂಎಸ್‌ಎಸ್‌ಬಿಗೆ 2026ರಲ್ಲಿ ಬಿಡುಗಡೆ ಮಾಡಿದೆ. ಹೀಗಾಗಿ ಈಗ 239 ಎಕರೆ 30 ಗುಂಟೆ ಮಾತ್ರ ಅರಣ್ಯ ಇಲಾಖೆ ವಶದಲ್ಲಿದೆ.
ಅರಣ್ಯೇತರ ಉದ್ದೇಶಕ್ಕೆ ಮಂಜೂರಾಗಲಿದೆಯೇ?
ಅರಣ್ಯವನ್ನು ಅರಣ್ಯೇತರ ಉದ್ದೇಶಕ್ಕೆ ಉಪಯೋಗಿಸಲು ಅಥವಾ ಮಂಜೂರು ಮಾಡುವುದು ಅರಣ್ಯ ಸಂರಕ್ಷಣಾ ಕಾಯ್ದೆ (1980ರ) ಅನ್ವಯ ಉಲ್ಲಂಘನೆಯಾಗಲಿದೆ ಎಂದು ಗೊತ್ತಿದ್ದರೂ ಸಹ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಇಂತಹದೊಂದು ಪ್ರಸ್ತಾವವನ್ನು ಸಲ್ಲಿಸಿತ್ತು. ಈ ಸಂಬಂಧ ಅಧಿಕಾರಿಗಳು ಸಚಿವ ಎಂ ಬಿ ಪಾಟೀಲ್ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಸಚಿವ ಈಶ್ವರ್ ಖಂಡ್ರೆ ಅವರೊಂದಿಗೆ ಚರ್ಚಿಸಿದ್ದರು.
ಈ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ ಎ ದಯಾನಂದ ಅವರು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಈ ಸರ್ವೇ ನಂಬರ್‌ನಲ್ಲಿರುವ ಅರಣ್ಯ ಪ್ರದೇಶದ ಕುರಿತಾಗಿ 2024ರ ಫೆ.9ರಂದೇ ವಾಸ್ತವಾಂಶದ ವರದಿ ಸಲ್ಲಿಸಿದ್ದರು. ಆದರೆ ಈ ಸಂಗತಿಯನ್ನು 2026ರ ಜನವರಿಯಲ್ಲಿ ನಡೆದಿದ್ದ ಅಧಿವೇಶನದಲ್ಲಿ ಯಾವುದೇ ಮಾಹಿತಿಯನ್ನೂ ಸಚಿವ ಈಶ್ವರ್ ಖಂಡ್ರೆ ಅವರು ಹಂಚಿಕೊಂಡಿಲ್ಲ.

120 ಎಕರೆ ಮೀಸಲು ಅರಣ್ಯ ಪ್ರದೇಶವನ್ನು ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಗೆ ಮಂಜೂರು ಮಾಡುವ ಕುರಿತು ಸಚಿವ ಕೃಷ್ಣ ಬೈರೇಗೌಡ ಅವರ ಸೂಚನೆ ಮೇರೆಗೆ ಇಲಾಖೆಯ ಅಧಿಕಾರಿಗಳು 2024ರ ಮಾರ್ಚ್ 28ರಂದು ಸಭೆ ನಡೆಸಿದ್ದರು.
ಮತ್ತೊಂದು ವಿಶೇಷವೆಂದರೇ ಇದೇ ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಕಾಡುಗೋಡಿ ಕೈಗಾರಿಕೆ ಪ್ರದೇಶದಲ್ಲಿ 28 ಎಕರೆ 2,219 ಚದುರ ಅಡಿ ವಿಸ್ತೀರ್ಣದ ಜಮೀನನ್ನು ಅಭಿವೃದ್ದಿಗೊಳಿಸುವ ಸಲುವಾಗಿ 2007ರ ಜೂನ್ 7ರಂದು ಕಾನ್‌ಕಾರ್ಡ್ ಕಂಪನಿ ಪರವಾಗಿ ಕೆಐಎಡಿಬಿಯು ಭೋಗ್ಯಕ್ಕೆ ನೀಡಿತ್ತು. ಅಲ್ಲದೇ ಭೋಗ್ಯ ಮತ್ತು ಮಾರಾಟದ ಕರಾರಿನ ನಿಯಮಗಳನ್ನು ಉಲ್ಲಂಘಿಸಿ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯ ಸ್ವತ್ತನ್ನು ಒತ್ತೆಯಿಟ್ಟು ಪ್ರತಿಷ್ಠಿತ ಕಂಪನಿಯೊಂದು ಖಾಸಗಿ ಬ್ಯಾಂಕ್‌ನಿಂದ ಅಂದಾಜು 2,500 ಕೋಟಿ ರು. ಸಾಲವನ್ನು ಎತ್ತಿತ್ತು.
ಕೆಐಎಡಿಬಿ ಸ್ವತ್ತು ಅಡವಿರಿಸಿ 2,500 ಕೋಟಿ ರು. ಸಾಲ; ಭೋಗ್ಯ ಕರಾರಿನ ನಿಯಮ ಉಲ್ಲಂಘಿಸಿದ್ದರೂ ಕ್ರಮವಿಲ್ಲ
ಹೀಗಿದ್ದರೂ ಸಹ ಕೈಗಾರಿಕೆ ಪ್ರದೇಶಾಭಿವೃದ್ದಿ ಮಂಡಳಿಯು ಇದೇ ಜಾಗದಲ್ಲಿ ಹೈಟೆಕ್ ಕೈಗಾರಿಕೆ ಪ್ರದೇಶವನ್ನು ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು.
ಜಿಲ್ಲಾಧಿಕಾರಿ ವರದಿಯಲ್ಲೇನಿದೆ?
ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಕಾಡುಗೋಡಿ ಪ್ಲಾಂಟೇಷನ್ ಗ್ರಾಮದ ಸರ್ವೆ ನಂಬರ್ 1ರಲ್ಲಿ ಹಾಲಿ ಪಹಣಿಯಂತೆ ಒಟ್ಟು 711 ಎಕರೆ ಇದೆ. ಇದರ ಕಾಲಂ 9ರಲ್ಲಿ ಕರ್ನಾಟಕ ಅರಣ್ಯ ಇಲಾಖೆ ಹೆಸರಿಗೆ 711 ಎಕರೆ ಮತ್ತು ಸರ್ಕಾರದ ಹೆಸರಿಗೆ 120 ಎಕರೆ ಖಾತೆ ನಮೂದಾಗಿದೆ. ಹಾಲಿ ಜಮೀನಿನ ಸ್ಥಿತಿಯಂತೆ ಅಂದಾಜು ಸುಮಾರು ಮನೆಗಳೂ (ದಿಣ್ಣೂರು ಮತ್ತು ಗೋಪಾಲಕೃಷ್ಣ ಬಡಾವಣೆ) 40 ಎಕರೆ, 12 ಎಕರೆ ಪೊಲೀಸ್ ಠಾಣೆ ಮತ್ತು ವಸತಿ ಗೃಹಕ್ಕೆ 4 ಕೆರೆ, ಅರಣ್ಯ ಇಲಾಖೆಗೆ ಸುಮಾರು 62 ಎಕರೆ, ದೇವಸ್ಥಾನಕ್ಕೆ 2.32 ಎಕರೆ, ಕೆಇಬಿಗೆ 1.19 ಎಕರೆ, ಸ್ಮಸಾನಕ್ಕೆ 2.20 ಎಕರೆ, ಪಶು ಆಸ್ಪತ್ರೆಗೆ 0.09 ಗುಂಟೆ, ರೈಲ್ವೇ ಇಲಾಖೆಗೆ 225 ಎಕರೆ, ಮೆಟ್ರೋಗೆ 44.36 ಎಕರೆ ಮತ್ತು ಇತರೆ ಕಂಪನಿಗಳಿಗೆ 175 ಎಕರೆ ಇರುವುದು ಕಂಡು ಬಂದಿದೆ.
ಅಲ್ಲದೇ ಗ್ರಾಮಸ್ಥರಿಗೆ ಈ ಹಿಂದೆಯೇ ತಲಾ 5 ಎಕರೆಯಂತೆ ಮಂಜೂರಾಗಿದೆ. ಈ ಜಮೀನಿಗೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯದಲ್ಲಿ (ಡಬ್ಲ್ಯೂಪಿ 7200/2008, 29765-66/2009) ಕಾನ್‌ಕಾರ್ಡ್ ಇಂಡಿಯಾಲಿ ಪ್ರೈ ಲಿ ಅವರು ಅರಣ್ಯ ಇಲಾಖೆ ಮತ್ತು ಇತರೆ 36 ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು.
ಈ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಅರಣ್ಯ ಇಲಾಖೆಯು (ಡಬ್ಲ್ಯೂಪಿ 4283/2012, 8578/2012, 4205/2012) ಪ್ರಕರಣ ದಾಖಲಿಸಿದೆ. ಈ ಪ್ರಕರಣಗಳು ವಿಚಾರಣೆ ನಡೆದು ವಜಾಗೊಂಡಿದೆ. ಈ ಆದೇಶಗಳಲ್ಲಿ ಇದು ಕಾಯ್ದಿಟ್ಟ ಅರಣ್ಯ ಜಮೀನಾಗಿರುವುದಿಲ್ಲ ಎಂದು ಉಲ್ಲೇಖಿಸಿರುವುದನ್ನು ಜಿಲ್ಲಾಧಿಕಾರಿ ಅವರು ತಮ್ಮ ವರದಿಯಲ್ಲಿ ಪ್ರಸ್ತಾಪಿಸಿದ್ದರು.
ಕೆ ಆರ್ ಪುರ ವಲಯ ಅರಣ್ಯಾಧಿಕಾರಿಗಳು ಸರ್ವೆ ನಂಬರ್ 1ರಲ್ಲಿನ ಜಮೀನು ಮೀಸಲು ಅರಣ್ಯ ಭೂಮಿ ಎಂದು ಪ್ರತಿಪಾದಿಸಿದ್ದರು. ಹೀಗಾಗಿ ಈ ಅರಣ್ಯ ಭೂಮಿಯಲ್ಲಿ ಅರಣ್ಯೇತರ ಚಟುವಟಿಕೆಗಳನ್ನು ಮಾಡುವುದು ಅರಣ್ಯ ಕಾಯ್ದೆ ಮತ್ತು ಕಾನೂನು ಉಲ್ಲಂಘನೆಯಾಗಲಿದೆ. ಹೀಗಾಗಿ ಈ ಭೂಮಿಯ ಮೋಜಣಿ ಮಾಡುವುದು, ಸ್ವಾಧೀನಪಡಿಸಿಕೊಳ್ಳುವುದು, ಹಸ್ತಾಂತರಿಸುವ ಮುನ್ನ ಅರಣ್ಯ ಸಂರಕ್ಷಣ ಕಾಯ್ದೆ 1980ರ ಅನ್ವಯ ಕೇಂದ್ರ ಸರ್ಕಾರದ ಪೂರ್ವಾನುಮತಿ ಪಡೆಯಬೇಕು. ಹೀಗಾಗಿ 120 ಎಕರೆ ಮೀಸಲು ಅರಣ್ಯ ಭೂಮಿಯನ್ನು ಕೆಐಎಡಿಬಿಗೆ ಹಸ್ತಾಂತರಿಸುವ ಮುನ್ನ ಉಪ ಅರಣ್ಯ ಸಂರಕ್ಷಣಾಧಿಕಾರಿಗಳೊಂದಿಗೆ ಸಮಾಲೋಚಿಸಬೇಕು ಎಂದು ವರದಿಯಲ್ಲಿ ಹೇಳಲಾಗಿತ್ತು.
ಹಾಗೆಯೇ ಕಾಡುಗೋಡಿ ಪ್ಲಾಂಟೇಷನ್ ಸರ್ವೆ ನಂಬರ್ 1ರಲ್ಲಿನ ಪ್ರದೇಶಕ್ಕೆ ಸಂಬಂಧಿಸಿದಂತೆ ಅರಣ್ಯವಲ್ಲ ಎಂದು ಮತ್ತೊಂದು ಅಧಿಸೂಚನೆಯಾಗಲೀ ಅಥವಾ ಆದೇಶವಾಗಲೀ ಹೊರಡಿಸಿಲ್ಲ. ಈ ಪ್ರದೇಶವೂ ಇಂದಿಗೂ ಕಾಡುಗೋಡಿ ಕಾಯ್ದಿಟ್ಟ ಅರಣ್ಯ ಪ್ರದೇಶವಾಗಿದೆ. ಅಲ್ಲದೇ 1896ರ ಮತ್ತು 1901 ಅಧಿಸೂಚನೆ ಪ್ರಕಾರ ಈಗಲೂ ಇದು ಅರಣ್ಯವಾಗಿದೆ. ಹೀಗಾಗಿ ರಾಜ್ಯದ/ಕೇಂದ್ರದ ಈ ಹಿಂದೆ ಇದ್ದ ಹಾಗೂ ಪ್ರಸ್ತುತ ಇರುವ ಎಲ್ಲಾ ಅರಣ್ಯ ಕಾಯ್ದೆಗಳಡಿಯಲ್ಲಿ ಬರುತ್ತದೆ. ಈ ಅರಣ್ಯವನ್ನು ಅರಣ್ಯೇತರ ಉದ್ದೇಶಕ್ಕೆ ಉಪಯೋಗಿಸಲು ಅರಣ್ಯ (ಸಂರಕ್ಷಣಾ ಕಾಯ್ದೆ) ಕಾಯ್ದೆ 1980ರಂತೆ ಕೇಂದ್ರ ಸರ್ಕಾರದ ಪೂರ್ವಾನುಮತಿ ಅಗತ್ಯ.
ಈ ಆದೇಶಕ್ಕೆ ವ್ಯತರಿಕ್ತವಾಗಿ ಯಾವುದೇ ನ್ಯಾಯಮಂಡಳಿ ಅಥವಾ ಉಚ್ಛ ನ್ಯಾಯಾಲಯ ಸೇರಿದಂತೆ ಯಾವುದೇ ನ್ಯಾಯಾಲಯಗಳು ಆದೇಶ ಹೊರಡಿಸಬಾರದು ಎಂದು ಉಚ್ಛರಿಸಲಾಗಿದೆ ಎಂಬ ಅಂಶವನ್ನು ವರದಿಯಲ್ಲಿ ಪ್ರತಿಪಾದಿಸಲಾಗಿತ್ತು. ಕಂದಾಯ ಅಧಿಕಾರಿಗಳಿಗೆ ಅರಣ್ಯ ಭೂಮಿಯನ್ನು ಮಂಜೂರು ಮಾಡಲು ಯಾವುದೇ ಅಧಿಕಾರವಿಲ್ಲ. ಒಂದೊಮ್ಮೆ ಮಾಡಿದ್ದರೂ ಅದು ಊರ್ಜಿತವಲ್ಲ ಹಾಗೂ ಅದು ಅಸಿಂಧು ಆಗಲಿದೆ ಎಂದು ವರದಿಯಲ್ಲಿ ಹೇಳಲಾಗಿತ್ತು.

ಕಾಡುಗೋಡಿ ಅರಣ್ಯ ಪ್ರದೇಶವನ್ನು ಸಂರಕ್ಷಿಸಬೇಕು ಎಂದು ಹಲವು ಸರ್ಕಾರೇತರ ಸಂಸ್ಥೆಗಳು ಸಹ ಆಂದೋಲನ ನಡೆಸಿದ್ದನ್ನು ಸ್ಮರಿಸಬಹುದು.









