ಕೆಐಎಡಿಬಿ ಸ್ವತ್ತು ಅಡವಿರಿಸಿ 2,500 ಕೋಟಿ ರು. ಸಾಲ; ಭೋಗ್ಯ ಕರಾರಿನ ನಿಯಮ ಉಲ್ಲಂಘಿಸಿದ್ದರೂ ಕ್ರಮವಿಲ್ಲ

ಬೆಂಗಳೂರು; ಭೋಗ್ಯ ಮತ್ತು ಮಾರಾಟದ ಕರಾರಿನ ನಿಯಮಗಳನ್ನು ಉಲ್ಲಂಘಿಸಿ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯ ಸ್ವತ್ತನ್ನು ಒತ್ತೆಯಿಟ್ಟು ಪ್ರತಿಷ್ಠಿತ ಕಂಪನಿಯೊಂದು ಖಾಸಗಿ ಬ್ಯಾಂಕ್‌ನಿಂದ ಅಂದಾಜು 2,500 ಕೋಟಿ ರು. ಸಾಲವನ್ನು ಎತ್ತಿರುವ ಪ್ರಕರಣವು ಇದೀಗ ಬಹಿರಂಗವಾಗಿದೆ.

 

ಹಿಂದಿನ ಮೈತ್ರಿ ಸರ್ಕಾರದ ಅವಧಿಯಲ್ಲಿ ಈ ಪ್ರಕ್ರಿಯೆ ನಡೆಸಿರುವ ಪ್ರತಿಷ್ಠಿತ ಕಂಪನಿಯೊಂದು, ಬಿಜೆಪಿ ಸರ್ಕಾರದ ಅವಧಿ (2021)ಯಲ್ಲಿ ಸಾಲ ಪಡೆಯುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಈ ಅವಧಿಯಲ್ಲಿ ಕೆ ಜೆ ಜಾರ್ಜ್‌, ಜಗದೀಶ್‌ ಶೆಟ್ಟರ್‌ ಕೈಗಾರಿಕೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಈ ಪ್ರಕರಣವು ಆರ್‌ಬಿಐ ಮೆಟ್ಟಿಲೇರಿದರೂ ಹಾಲಿ ಕೈಗಾರಿಕೆ ಸಚಿವ ಮುರುಗೇಶ್‌ ನಿರಾಣಿ ಅವರು ಗಂಭೀರವಾಗಿ ಪರಿಗಣಿಸಿಲ್ಲ ಎಂದು ತಿಳಿದು ಬಂದಿದೆ.

 

ಈ ಕುರಿತು ರೆಡ್ಡಿ ವೀರಣ್ಣ ಎಂಬುವರು ಭಾರತೀಯ ರಿಸರ್ವ್‌ ಬ್ಯಾಂಕ್‌ ಗೌರ್ನರ್‌, ಮುಖ್ಯಮಂತ್ರಿ, ಜಾರಿನಿರ್ದೇಶನಾಲಯ, ಸೆಬಿ, ರಿಸರ್ವ್‌ ಬ್ಯಾಂಕ್‌ನ ಪ್ರಾದೇಶಿಕ ನಿರ್ದೇಶಕರಿಗೆ 2022ರ ಏಪ್ರಿಲ್‌ 20ರಂದು ದೂರು ಸಲ್ಲಿಸಿದ್ದಾರೆ. ಈ ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ರೆಡ್ಡಿ ವೀರಣ್ಣ ಎಂಬುವರು ಸಲ್ಲಿಸಿರುವ ದೂರಿನ ಪ್ರತಿ

 

ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಕಾಡುಗೋಡಿ ಕೈಗಾರಿಕೆ ಪ್ರದೇಶದಲ್ಲಿ 28 ಎಕರೆ 2,219 ಚದುರ ಅಡಿ ವಿಸ್ತೀರ್ಣದ ಜಮೀನನ್ನು ಅಭಿವೃದ್ದಿಗೊಳಿಸುವ ಸಲುವಾಗಿ 2007ರ ಜೂನ್‌ 7ರಂದು ಕಾನ್‌ಕಾರ್ಡ್‌ ಕಂಪನಿ ಪರವಾಗಿ ಕೆಐಎಡಿಬಿಯು ಭೋಗ್ಯಕ್ಕೆ ನೀಡಿತ್ತು. ಹೀಗಾಗಿ ಈ ಭೋಗ್ಯದ ಸ್ವತ್ತು ಕಾನ್‌ಕಾರ್ಡ್‌ ಕಂಪನಿಯ ಏಕೈಕ ಸ್ವತ್ತಾಗಿತ್ತು.

 

ಭೋಗ್ಯ ಮತ್ತು ಮಾರಾಟದ ಕರಾರಿನ ಖಂಡ ೧೧(ಬಿ)ಯ ಪ್ರಕಾರ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯ ಒಪ್ಪಿಗೆ ಇಲ್ಲದೆ ಈ ಭೋಗ್ಯದ ಸ್ವತ್ತನ್ನು ಒತ್ತೆಯಿಟ್ಟು ಸಾಲದ ಹಣವನ್ನು ಪಡೆಯಲು ಸಾಧ್ಯವಿಲ್ಲ. ಆದರೆ ಕಾನ್‌ಕಾರ್ಡ್‌ ಕಂಪನಿಯು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯ ಒಪ್ಪಿಗೆ ಇಲ್ಲದೆ ಒತ್ತೆ ಇಟ್ಟು ಸಾಲದ ಹಣವನ್ನು ಪಡೆದಿದೆ ಎಂದು ರೆಡ್ಡಿ ವೀರಣ್ಣ ಎಂಬುವರು ದೂರಿನಲ್ಲಿ ಆಪಾದಿಸಿದ್ದಾರೆ.

 

ಈ ಸಂಬಂಧ ರೆಡ್ಡಿ ವೀರಣ್ಣ ಅವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ರಿಟ್‌ ಅರ್ಜಿ (ರಿಟ್ ಪೆಟಿಷನ್ ಸಂಖ್ಯೆ: 18986/2021) ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ನಮೂದಿಸಿದ ಸ್ವತ್ತಿನ ಮೇಲೆ ಇನ್ಯಾವುದೇ ಹಕ್ಕನ್ನು ಸೃಷ್ಟಿಸಬಾರದು ಎಂದು ಕರ್ನಾಟಕ ಉಚ್ಚ ನ್ಯಾಯಾಲಯವು ಮಧ್ಯಂತರ ಆದೇಶ ಹೊರಡಿಸಿತ್ತು.
ಆದರೆ ಎಂಬೆಸ್ಸಿ ಕಂಒಪನಿಯು 2017ರಲ್ಲಿ ಇದೇ ಸ್ವತ್ತನ್ನು ಅಡವಿಟ್ಟು ಯೆಸ್‌ ಬ್ಯಾಂಕ್‌ನಿಂದ 1,000 ಕೋಟಿ ರು., ಇಂಡಿಯಾ ಬುಲ್ಸ್‌ ಹೌಸಿಂಗ್‌ ಫೈನಾನ್ಸ್‌ ಲಿಮಿಟೆಡ್‌ (ಐಬಿಎಚ್‌ಎಲ್‌)ನಿಂದ 2021ರ ಜುಲೈ 31ರಂದು 840 ಕೋಟಿ ರು. ಸಾಲ ಎತ್ತಿದೆ ಎಂಬ ವಿಚಾರವು ರೆಡ್ಡಿ ವೀರಣ್ಣ ಅವರು ಸಲ್ಲಿಸಿರುವ ದೂರಿನಿಂದ ತಿಳಿದು ಬಂದಿದೆ.

 

ಯೆಸ್‌ ಬ್ಯಾಂಕ್‌ನಿಂದ ಪಡೆದಿದ್ದ 1,000 ಕೋಟಿ ರು.ಸಾಲವನ್ನು ತೀರಿಸಲು ಐಬಿಎಚ್‌ಎಲ್‌ನಿಂದ ಸಾಲ ಎತ್ತಿದೆ ಎಂದು ಆರೋಪಿಸಲಾಗಿದೆಯಲ್ಲದೆ ಸಾಲದ ಹಣವನ್ನು ಕೇವಲ ಸ್ವತ್ತಿನ ಅಭಿವೃದ್ಧಿಗಾಗಿ ಬಳಸಬೇಕು ಎಂಬ ಕಟ್ಟಳೆ ಇದ್ದರೂ ಸಹ ಅದನ್ನು ಉಲ್ಲಂಘಿಸಲಾಗಿದೆ ಎಂದು ಆಪಾದನೆಯೂ ಕೇಳಿ ಬಂದಿದೆ.

 

ಎಂಬೆಸ್ಸಿ ಕಂಪನಿಯು 2019ರ ಜೂನ್‌ 4ರಂದು ನಡೆಸಿದ್ದ ವಿಶೇಷ ಸಭೆಯಲ್ಲಿ 4 ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಎಂಬೆಸ್ಸಿ ಆಫೀಸ್‌ ಪಾರ್ಕ್ಸ್ ರಿಯಲ್ ಎಸ್ಟೇಟ್ ಇನ್ವೆಸ್ಟ್ಮೆಂಟ್ ಟ್ರಸ್ಟ್‌ ಘಟಕಗಳನ್ನು ಒತ್ತೆಯಿಟ್ಟು ಐಬಿಎಚ್‌ಎಲ್ ಮೂಲಕ 668 ಕೋಟಿ ರು., ಇಂಡಿಯಾ ಬುಲ್ಸ್‌ ಕಮರ್ಷಿಯಲ್‌ ಕ್ರೆಡಿಟ್‌ (ಐಸಿಸಿಎಲ್‌) ಮೂಲಕ 404 ಕೋಟಿ ರು.ಗಳನ್ನು ಸಾಲ ಪಡೆದಿದೆ.

 

ಆ ಹಣವನ್ನು ಇಂಡಿಯಾ ಬುಲ್ಸ್‌ ರಿಯಲ್‌ ಎಸ್ಟೇಟ್‌ ಲಿಮಿಟೆಡ್‌ (ಐಬಿಆರ್‌ಇಎಲ್‌)ನ 6,30,95,240 ಷೇರುಗಳನ್ನು ಖರೀದಿಸಲು ಉಪಯೋಗಿಸಲಾಗಿದೆ. ಇದರ ಹಿಂದೆ ಪಿತೂರಿ ಮತ್ತು ವಂಚನೆ ಅಡಗಿದೆ ಎಂದು ದೂರಿನಲ್ಲಿ ರೆಡ್ಡಿ ವೀರಣ್ಣ ಅವರು ವಿವರಿಸಿದ್ದಾರೆ.

the fil favicon

SUPPORT THE FILE

Latest News

Related Posts