ಅದಾನಿ ಎಸಿಸಿ ಸಿಮೆಂಟ್ಸ್‌ನಿಂದ 850.21 ಕೋಟಿ ಬೇಬಾಕಿ ವಸೂಲಿಗೆ ನಿರ್ದೇಶನ; ಮುಜುಗರದಿಂದ ಪಾರಾಗಲು ಕ್ರಮ

ಬೆಂಗಳೂರು;  850.21 ಕೋಟಿಯಷ್ಟು ಬಾಕಿ ಉಳಿಸಿಕೊಂಡಿದ್ದರೂ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ ಲೆಟರ್ ಆಫ್‌ ಇಂಟೆಂಟ್‌ನ್ನು ವಿಸ್ತರಿಸಲು ನೇರವಾಗಿ ಕೇಂದ್ರ ಸರ್ಕಾರದ ಮಾರ್ಗದರ್ಶನ ಕೋರಿ ಮುಜುಗರಕ್ಕೀಡಾಗಿದ್ದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು,  ಎಸಿಸಿ ಕಂಪನಿಯು ಬಾಕಿ ಉಳಿಸಿಕೊಂಡಿರುವ 850.21 ಕೋಟಿ ರು ವಸೂಲಿ ಮಾಡಲು ಕಡೆಗೂ  ಮುಂದಡಿಯಿಟ್ಟಿದೆ.

 

ಈ ಪ್ರಕರಣದಲ್ಲಿ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌ ವಿರುದ್ಧ  ಕ್ರಿಮಿನಲ್ ಮೊಕದ್ದಮೆ  ದಾಖಲಿಸಿ, ಸಂಪೂರ್ಣವಾಗಿ 850 ಕೋಟಿ ವಸೂಲು ಮಾಡಬೇಕು ಎಂದು ಖುದ್ದು ಕಾನೂನು ಸಚಿವ ಎಚ್‌ ಕೆ ಪಾಟೀಲ್ ಅವರು ಸ್ಪಷ್ಟವಾಗಿ ಅಭಿಪ್ರಾಯ ನೀಡಿದ್ದರು. ಆದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಮುಂದಾಗದೇ 850.21 ಕೋಟಿಯನ್ನು ವಸೂಲು ಮಾಡಲು ಮುಂದಾಗಿದೆ.

 

ವಿಶೇಷವೆಂದರೇ ಕಾನೂನು ಸಚಿವರು ನೀಡಿದ್ದ  ಅಭಿಪ್ರಾಯವನ್ನೇ ಕಾನೂನು ಇಲಾಖೆ (ಅಭಿಪ್ರಾಯ) ಅಧಿಕಾರಿಗಳು ಮುಚ್ಚಿಟ್ಟಿದ್ದರು. ಇದು ಸರ್ಕಾರವನ್ನು ತೀವ್ರ ಮುಜುಗರಕ್ಕೀಡು ಮಾಡಿತ್ತು.

 

ಈ ಪ್ರಕರಣದ ಕುರಿತು ‘ದಿ ಫೈಲ್‌’ ಸರಣಿ ವರದಿಗಳನ್ನು ಪ್ರಕಟಿಸಿತ್ತು.

 

ಈ ವರದಿಗಳ ಬೆನ್ನಲ್ಲೇ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಕಡೆಗೂ ಕ್ರಮಕ್ಕೆ ಮುಂದಾಗಿದೆ. ರಾಜ್ಯ ಸರ್ಕಾರದ ಬೊಕ್ಕಸಕ್ಕೆ ರಾಜಧನ, ದಂಡ, ಬಡ್ಡಿ ಮತ್ತು ಇನ್ನಿತರೆ ಶಾಸನಬದ್ಧ ಬೇ ಬಾಕಿ ರೂಪದಲ್ಲಿ ಪಾವತಿಸಲು ಬಾಕಿ ಉಳಿಸಿಕೊಂಡಿದ್ದ 850.21 ಕೋಟಿ ರುಪಾಯಿಗಳನ್ನು ವಸೂಲಿ ಮಾಡಲು ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರಿಗೆ ನಿರ್ದೇಶನ ನೀಡಿದೆ. ನಿರ್ದೇಶನ ನೀಡಿ ಪತ್ರ ಬರೆದಿದೆ ಎಂದು ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ಖಚಿತಪಡಿಸಿದ್ದಾರೆ.

 

2026ರ ಫೆ.12ರಂದೇ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿದೆ. ಈ ಪತ್ರದ (ಸಂಖ್ಯೆ ಸಿಐ 14 ಸಿಎಂಸಿ 2024, ದಿನಾಂಕ 12.02.2026)  ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪತ್ರದಲ್ಲೇನಿದೆ?

 

ಎಸಿಸಿ ಲಿಮಿಟೆಡ್‌ ಸ್ವಾಮ್ಯದ ಗಣಿ ಗುತ್ತಿಗೆ ಸಂಖ್ಯೆ 2641ಕ್ಕೆ ಸಂಬಂಧಿಸಿದಂತೆ ಕಣ್ಣೂರು ವಾಡಿ ಸುಣ್ಣದ ಕಲ್ಲು ಬ್ಲಾಕ್‌ ಹೊಂದಿದೆ. ಈ ಕಂಪನಿಯಿಂದ ರಾಜ್ಯ ಸರ್ಕಾರಕ್ಕೆ ರಾಜಧನ, ದಂಡ, ಬಡ್ಡಿ ಮತ್ತು ಇತರೆ ಶಾಸನಬದ್ಧ ಬೇ ಬಾಕಿ ರೂಪದಲ್ಲಿ ಪಾವತಿಸಬೇಕಾಗಿರುವ ಬಾಕಿ ಮೊತ್ತ ಸುಮಾರು 850.21 ಕೋಟಿ ವಸೂಲಿಗೆ ಬಾಕಿ ಇರುವುದಾಗಿ ಸ್ಪಷ್ಟವಾಗಿ ತಿಳಿದು ಬರುತ್ತದೆ. ಈ ಸಂಬಂಧ ಕರ್ನಾಟಕ ಅಡ್ವೋಕೇಟ್ ಜನರಲ್ ಮತ್ತು ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯು ಅಭಿಪ್ರಾಯ ನೀಡಿದೆ. ಈ ಅಭಿಪ್ರಾಯದಂತೆ ಸರ್ಕಾರಕ್ಕೆ ಸಂದಾಯವಾಗಬೇಕಿರುವ ಮೊತ್ತವನ್ನು ಕಾನೂನು ರೀತಿ ಬೇ ಬಾಕಿ ವಸೂಲಿ ಮಾಡಲು ಮುಂದಿನ ಕ್ರಮವಹಿಸಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ನಿರ್ದೇಶಿಸಿದೆ.

 

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಧಿಕಾರಿಗಳು ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ ಅವರೊಂದಿಗೆ ಚರ್ಚಿಸಿದ ನಂತರ ಈ ನಿರ್ದೇಶನ ನೀಡಲಾಗಿದೆ ಎಂದು ಗೊತ್ತಾಗಿದೆ.

 

ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌  ಪ್ರೈವೈಟ್‌ ಲಿಮಿಟೆಡ್‌ಗೆ ಲೆಟರ್ ಆಫ್‌ ಇಂಟೆಂಟ್‌ನ್ನು ವಿಸ್ತರಿಸಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು (ಗಣಿ)  ಭೌತಿಕ ಕಡತವನ್ನು ಕಾನೂನು ಇಲಾಖೆಗೆ ರವಾನಿಸಿ ಅಭಿಪ್ರಾಯವನ್ನು ಕೋರಿತ್ತು.  ಈ ಕಡತವನ್ನು ಪರಿಶೀಲಿಸಿ  ಕಾನೂನು ಇಲಾಖೆಯು ನೀಡಿದ್ದ ಅಭಿಪ್ರಾಯವನ್ನು ಸ್ವತಃ ಸಚಿವ ಎಚ್‌ ಕೆ ಪಾಟೀಲ್‌ ಅವರು  ಅನುಮೋದಿಸಿದ್ದರು. ಈ ಅರ್ಜಿಗೆ ಕಾನೂನು ಇಲಾಖೆಯು (ಅಭಿಪ್ರಾಯ) 2026 ಜನವರಿ 23ರಂದು ಉತ್ತರಿಸಿದೆ. ಅಚ್ಚರಿ ಎಂದರೇ ಈ ಕಡತಕ್ಕೆ ಸಂಬಂಧಿಸಿದಂತೆ ಕಾನೂನು ಇಲಾಖೆಯ ಅಭಿಪ್ರಾಯ ಶಾಖೆಯಿಂದ ಯಾವುದೇ ಅಭಿಪ್ರಾಯ ನೀಡಲಾಗಿರುವುದಿಲ್ಲ ಎಂದು ಉತ್ತರಿಸಿತ್ತು.

 

ಅದಾನಿ ಸಮೂಹದ ಎಸಿಸಿ ಪ್ರಕರಣ; ಕಾನೂನು ಅಧಿಕಾರಿಗಳ ಕಳ್ಳಾಟ, ಅಭಿಪ್ರಾಯವನ್ನೇ ಮುಚ್ಚಿಟ್ಟಿತೇ?

 

 

 

ಆರ್‍‌ಟಿಐ ಅರ್ಜಿಗೆ ನೀಡಿದ್ದ ಉತ್ತರವನ್ನು ದಿ ಫೈಲ್‌,  ಇ-ಆಫೀಸ್‌ ತಂತ್ರಾಂಶದಲ್ಲಿ ಪುನರ್ ಪರಿಶೀಲಿಸಿತ್ತು. ಇದರ ಪ್ರಕಾರ ಈ  ಕಡತವನ್ನು  ಇ-ಆಫೀಸ್‌ನಲ್ಲಿ  2024ರ ಫೆ.3ರಂದು ತೆರೆದಿತ್ತು. 2024ರಿಂದ 2026ರ ಜನವರಿ 28ರವರೆಗೂ ಈ ಕಡತವು ಚಲನೆಯಲ್ಲಿತ್ತು.

 

2 ವರ್ಷ ಕಾನೂನುಬಾಹಿರ ಗಣಿಗಾರಿಕೆ

 

 

2020ರ ಅಕ್ಟೋಬರ್‍‌ 5ರಂದು ಹೊರಡಿಸಿದ್ದ ಅಧಿಸೂಚನೆ ಪ್ರಕಾರ ಎಸಿಸಿ ಲಿಮಿಟೆಡ್‌ ಸುಮಾರು 2 ವರ್ಷಗಳ ಕಾಲ ಕಾನೂನುಬಾಹಿರವಾಗಿ ಸುಣ್ಣದ ಕಲ್ಲು ಗಣಿಗಾರಿಕೆ ನಡೆಸಿದೆ. ದಂಡ ವಸೂಲಿ ಮಾಡುವ ಆದೇಶ ಹೊರಡಿಸಿರುವುದನ್ನು ಹೊರತುಪಡಿಸಿದರೇ ಬೇರೆ ಯಾವುದೇ ಕ್ರಮವಹಿಸಿರಲಿಲ್ಲ. ಕಾಮನ್ ಕಾಸ್‌/ ಯೂನಿಯನ್ ಆಫ್‌ ಇಂಡಿಯಾದ 2017ರ ಪ್ರಕರಣದಲ್ಲಿ ಸುಪ್ರೀಕೋರ್ಟ್‌ ನೀಡಿರುವ ತೀರ್ಪನ್ನು ಕಾನೂನು ಅಭಿಪ್ರಾಯದಲ್ಲಿ ಉಲ್ಲೇಖವಾಗಿತ್ತು.

 

ರಾಜ್ಯದ ಹಿತಾಸಕ್ತಿ ಬಲಿ ಕೊಟ್ಟು ಅದಾನಿಗೆ ರತ್ನಗಂಬಳಿ; ಕಾನೂನು ಅಭಿಪ್ರಾಯ ಕೈ ಸೇರದೆಯೇ ಕೇಂದ್ರಕ್ಕೆ ಪ್ರಸ್ತಾವ

 

ಕಾನೂನುಬದ್ಧ ಪ್ರಾಧಿಕಾರವಿಲ್ಲದೆ ಗಣಿಗಾರಿಕೆಯನ್ನು ನಡೆಸಿದರೆ ಎಂಎಂಡಿಆರ್ ಕಾಯ್ದೆಯ ಸೆಕ್ಷನ್‌ 21(5) ಅನ್ವಯವಾಗುತ್ತದೆ. ಹೀಗಾಗಿ ರಾಯಧನ, ಮತ್ತು ಕಾನೂನುಬಾಹಿರವಾಗಿ ಗಣಿಗಾರಿಕೆ ಮಾಡಿದ ಖನಿಜದ ಬೆಲೆಯ ಶೇ.100ರಷ್ಟನ್ನೂ ವಸೂಲು ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ. ಅಲ್ಲದೇ  ಅಂತಹ ವಸೂಲಾತಿಯು ಕ್ರಿಮಿನಲ್ ಮೊಕದ್ದಮೆಯಿಂದ ಸ್ವತಂತ್ರವಾಗಿದೆ ಎಂದು ಕಾನೂನು ಅಭಿಪ್ರಾಯದಲ್ಲಿ ವಿವರಿಸಿತ್ತು.

 

‘ಆದ್ದರಿಂದ, ವಸೂಲಾತಿಯನ್ನು ಕೇವಲ ದಂಡದ ಮೊತ್ತಕ್ಕೆ ಸೀಮಿತಗೊಳಿಸಲಾಗುವುದಿಲ್ಲ. ಸಂಪೂರ್ಣ ₹850.21 ಕೋಟಿ ರು.ಗಳನ್ನು  ವಸೂಲಿ ಮಾಡಬೇಕು. ಕಂಪನಿಯು ರಾಜ್ಯದ ಅನುಮತಿಯಿಲ್ಲದೆ ಸುಮಾರು ಎರಡು ವರ್ಷಗಳ ಕಾಲ ಗಣಿಗಾರಿಕೆ ಕಾರ್ಯಾಚರಣೆಯನ್ನು ಮುಂದುವರೆಸಿದೆ. ಇದು ಎಂಎಂಡಿಆರ್ ಕಾಯಿದೆಯಡಿಯಲ್ಲಿ “ಕಾನೂನುಬಾಹಿರ ಗಣಿಗಾರಿಕೆ” ಯ ವ್ಯಾಖ್ಯಾನದೊಳಗೆ ಸ್ಪಷ್ಟವಾಗಿ ಬರುತ್ತದೆ,’ ಎಂದು ‍ಹೇಳಿದ್ದರು.

 

ಜಯಂತ್‌/ ಮಧ್ಯಪ್ರದೇಶ ರಾಜ್ಯ ಸರ್ಕಾರ ಪ್ರಕರಣದಲ್ಲಿ (2020) 18 SCC 401)  ಅಪರಾಧಗಳ ಸಂಯೋಜನೆ ಅಥವಾ ದಂಡದ ಪಾವತಿಯು ಕ್ರಿಮಿನಲ್ ಮೊಕದ್ದಮೆಗೆ ಅಡ್ಡಿಯಾಗುವುದಿಲ್ಲ. ಆಡಳಿತಾತ್ಮಕ ದಂಡಗಳು ಮತ್ತು ಕ್ರಿಮಿನಲ್ ಪ್ರಕ್ರಿಯೆಗಳು ವಿಭಿನ್ನ ಕಾನೂನು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ಸುಪ್ರೀಂ ಕೋರ್ಟ್‌ ನೀಡಿರುವ ಆದೇಶವನ್ನೂ ಉಲ್ಲೇಖಿಸಿತ್ತು.

 

ಹೀಗಾಗಿ, ವಿತ್ತೀಯ ದಂಡಕ್ಕೆ ಸೀಮಿತವಾದ ಪ್ರಸ್ತುತ ಇಲಾಖಾ ಕ್ರಮವು ಕಾನೂನುಬದ್ಧವಾಗಿ ಸಾಕಷ್ಟಿಲ್ಲ.  ಮತ್ತು ಕಾನೂನುಬಾಹಿರ ಗಣಿಗಾರಿಕೆ ಮತ್ತು ಕಾನೂನಿನ ನಿಬಂಧನೆಗಳ ಪುನರಾವರ್ತಿತ ಉಲ್ಲಂಘನೆಗಳಿಗಾಗಿ ಎಂಎಂಡಿಆರ್  ಕಾಯಿದೆಯ ಸೆಕ್ಷನ್ 21(1) ಮತ್ತು (2) ರ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ಅದಕ್ಕೆ ಅನುಗುಣವಾಗಿ, ಆಡಳಿತ ಇಲಾಖೆಯು ತಕ್ಷಣವೇ ಕಾನೂನುಬಾಹಿರವಾಗಿ ಗಣಿಗಾರಿಕೆ ಮಾಡಿದ ಖನಿಜದ ಬೆಲೆ, ರಾಯಧನ, ಬಡ್ಡಿ ಮತ್ತು ದಂಡದ ಶೇ. 100ರಷ್ಟು  ವಸೂಲಿಗಾಗಿ ಬೇಡಿಕೆಗಳನ್ನು ಹೆಚ್ಚಿಸಿಬೇಕಲ್ಲದೇ ಅದನ್ನು  ಜಾರಿಗೊಳಿಸಬೇಕು ಎಂದು ಹೇಳಿತ್ತು.

 

 

 

ಹಾಗೆಯೇ ಕಾನೂನುಬಾಹಿರ  ಗಣಿಗಾರಿಕೆ ಮತ್ತು ಪುನರಾವರ್ತಿತ ಉಲ್ಲಂಘನೆಗಳಿಗಾಗಿ ಎಂಎಂಡಿಆರ್ ಕಾಯಿದೆಯ ಸೆಕ್ಷನ್‌ಗಳು 21(1) ಮತ್ತು 21(2) ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ಪ್ರಾರಂಭಿಸಬೇಕು ಎಂದು ಕಾನೂನು ಇಲಾಖೆಯು ತನ್ನ ಅಭಿಪ್ರಾಯದಲ್ಲಿ ಶಿಫಾರಸ್ಸು ಮಾಡಿತ್ತು.

 

ಎಸಿಸಿಯನ್ನು ನಿರ್ಬಂಧಿಸಿ

 

ಈ ಪ್ರಕರಣದಲ್ಲಿ ಗಮನಾರ್ಹವಾದ ಆರ್ಥಿಕ ಪರಿಣಾಮಗಳನ್ನು ಒಳಗೊಂಡಿದೆ. ಅಲ್ಲದೇ  ಬಿಡ್ಡಿಂಗ್/ಹರಾಜು ಕಾರ್ಯವಿಧಾನಗಳು ಒಳಗೊಂಡಿರುವುದರಿಂದ   ಹಣಕಾಸು ಇಲಾಖೆಯನ್ನು ಸಂಪರ್ಕಿಸಬಹುದು.  ಮತ್ತು ಕಾನೂನುಗಳ ಪರಿಪಾಲನೆಯನ್ನು  ಖಚಿತಪಡಿಸಿಕೊಳ್ಳುವವರೆಗೆ  ಎಸಿಸಿ ಲಿಮಿಟೆಡ್ ಅನ್ನು ಭವಿಷ್ಯದಲ್ಲಿ  ಸರ್ಕಾರಿ ಟೆಂಡರ್‌ಗಳು, ಹರಾಜುಗಳು ಮತ್ತು ಗಣಿಗಾರಿಕೆ-ಸಂಬಂಧಿತ ಪ್ರಕ್ರಿಯೆಗಳಲ್ಲಿ ಭಾಗವಹಿಸದಂತೆ ನಿರ್ಬಂಧಿಸಬೇಕು ಎಂದು ಕಾನೂನು ಇಲಾಖೆಯು ಶಿಫಾರಸ್ಸು ಮಾಡಿದೆ. ಇದನ್ನು ಸಚಿವ ಎಚ್‌ ಕೆ ಪಾಟೀಲ್‌ ಅವರೂ ಸಹ ಅನುಮೋದಿಸಿದ್ದರು.

 

 

 

 

ಕಾನೂನು ಇಲಾಖೆಯ ಅಭಿಪ್ರಾಯಕ್ಕೂ ಎದುರು ನೋಡದೆಯೇ  ಲೆಟರ್ ಅಫ್‌ ಇಂಟೆಂಟ್‌ನ್ನು ಒಂದು ವರ್ಷದ ಅವಧಿಯವರೆಗೆ ವಿಸ್ತರಿಸಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗಣಿ)ಯು ನೇರವಾಗಿ  ಕೇಂದ್ರ ಸರ್ಕಾರದ ನಿರ್ದೇಶನ ಕೋರಿತ್ತು.

 

ಕಾನೂನು ಅಭಿಪ್ರಾಯ ಕೈ ಸೇರುವ ಮುನ್ನವೇ ಪ್ರಸ್ತಾವ ಸಲ್ಲಿಸಿದ್ದ ಇಲಾಖೆ

 

ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ ಲೆಟರ್ ಆಫ್‌ ಇಂಟೆಂಟ್‌ನ್ನು ವಿಸ್ತರಿಸಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು (ಗಣಿ)  ಕಾನೂನು ಇಲಾಖೆಯ ಅಭಿಪ್ರಾಯವನ್ನು ಕೋರಿತ್ತು.  ಆದರೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು (ಗಣಿ)   ಈ ಅಭಿಪ್ರಾಯಕ್ಕೂ ಕಾದಿರಲಿಲ್ಲ. ಬದಲಿಗೆ ಕಾನೂನು ಅಭಿಪ್ರಾಯ ತನ್ನ ಕೈ ಸೇರುವ ಮುನ್ನವೇ  ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು.

 

ಅದಾನಿ ಅಧಿಪತ್ಯದ ಎಸಿಸಿ ಸಿಮೆಂಟ್ಸ್‌ಗೆ ಗಣಿ ಗುತ್ತಿಗೆ ಕರಾರು; ವಸೂಲಿಗೆ 850 ಕೋಟಿ ಬಾಕಿ ಇದ್ದರೂ ಕೇಂದ್ರಕ್ಕೆ ಪ್ರಸ್ತಾವ?

 

ಈ ಸಂಬಂಧ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿದೆ ಎಂದು ದಿ ಫೈಲ್‌ 2026ರ ಜನವರಿ 7ರಂದೇ ವರದಿ ಪ್ರಕಟಿಸಿತ್ತು.

Your generous support will help us remain independent and work without fear.

Latest News

Related Posts