ಬೆಂಗಳೂರು; ಬೆಳಗಾವಿಯಲ್ಲಿ ಭಾರತೀಯ ಜನತಾ ಪಕ್ಷದ ಕಚೇರಿ ಕಟ್ಟಡ ನಿರ್ಮಾಣಕ್ಕೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಮಂಜೂರಾಗಿದ್ದ ನಿವೇಶನಕ್ಕೆ ಶುಲ್ಕ ವಿನಾಯಿತಿ ನೀಡುವ ಪ್ರಸ್ತಾವವನ್ನು ಹಾಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ತಿರಸ್ಕರಿಸಿರುವುದು ಇದೀಗ ಬಹಿರಂಗವಾಗಿದೆ.
ನಗರಾಭಿವೃದ್ಧಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿನ ಸಿ ಎ ನಿವೇಶನ, ಕಂದಾಯ ಭೂಮಿ, ಪುರಸಭೆ, ಪಟ್ಟಣ ಪಂಚಾಯ್ತಿಯಲ್ಲಿನ ನಿವೇಶನಗಳನ್ನು ಕಾಂಗ್ರೆಸ್ ಕಚೇರಿ ಕಟ್ಟಡ ನಿರ್ಮಾಣಕ್ಕೆ ಕಾಂಗ್ರೆಸ್ ಭವನ ಟ್ರಸ್ಟ್ ಹೆಸರಿಗೆ ಶೇ.5ರ ದರದಲ್ಲಿ ಮಂಜೂರು ಮಾಡುತ್ತಿದೆ. ಆದರೆ ಬೆಳಗಾವಿ ಮಹಾನಗರಪಾಲಿಕೆಯಲ್ಲಿ ವ್ಯಾಪ್ತಿಯಲ್ಲಿನ ನಿವೇಶನಕ್ಕೆ ಶುಲ್ಕ ವಿನಾಯಿತಿ ಪ್ರಸ್ತಾವವನ್ನು ಕಾಂಗ್ರೆಸ್ ಸರ್ಕಾರವು ತಿರಸ್ಕರಿಸಿವುದು ಬಿಜೆಪಿಗೆ ಮತ್ತೊಂದು ಅಸ್ತ್ರವೊಂದನ್ನು ನೀಡಿದಂತಾಗಿದೆ.
ಕಾಂಗ್ರೆಸ್ ಪಕ್ಷದ ಕಚೇರಿಗಳ ನಿರ್ಮಾಣಕ್ಕೆ ಸರ್ಕಾರಿ ಜಾಗವನ್ನು ನಿಯಮಬಾಹಿರವಾಗಿ ಕಬಳಿಸಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದ್ದರು. ಈ ಬೆಳವಣಿಗೆ ನಡುವೆಯೇ ಭಾರತೀಯ ಜನತಾ ಪಕ್ಷಕ್ಕೂ ಬಿ ಎಸ್ ಯಡಿಯೂರಪ್ಪ ಅವರ ಅಧಿಕಾರವಾಧಿಯಲ್ಲಿ ಮಂಜೂರಾಗಿದ್ದ ನಿವೇಶನಕ್ಕೆ ಶುಲ್ಕ ವಿನಾಯಿತಿ ಪ್ರಸ್ತಾವವವನ್ನು ರಾಜ್ಯ ಕಾಂಗ್ರೆಸ್ ಸರ್ಕಾರವು ತಿರಸ್ಕರಿಸಿರುವ ಸಂಗತಿಯು ಮುನ್ನೆಲೆಗೆ ಬಂದಿದೆ.
ಸಾರ್ವಜನಿಕ ಹರಾಜು ಪ್ರಕ್ರಿಯೆ ನಡೆಸದೆಯೇ ಬಿಜೆಪಿ ಕಚೇರಿಗೆ ಸರ್ಕಾರಿ ಜಾಗ ಮಂಜೂರಾಗಿತ್ತು. ಅದರಂತೆ ಶುಲ್ಕ ವಿನಾಯಿತಿ ನೀಡಬೇಕು ಎಂದು ಬೆಳಗಾವಿ ಮಹಾನಗರ ಪಾಲಿಕೆ ಪ್ರಸ್ತಾವ ಸಲ್ಲಿಸಿತ್ತು. ಆದರೆ ಈ ಪ್ರಸ್ತಾವವನ್ನು ಒಪ್ಪಿಕೊಳ್ಳದ ನಗರಾಭಿವೃದ್ದಿ ಇಲಾಖೆಯು, ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಒಂದೇ ಒಂದು ತಿಂಗಳಲ್ಲಿ ತಿರಸ್ಕರಿಸಿದೆ.
ಇದಕ್ಕೆ ಸಂಬಂಧಿಸಿದ ಕಡತವನ್ನು 2024ರಲ್ಲೇ ಮುಕ್ತಾಯಗೊಳಿಸಿದೆ.

ಬಿಜೆಪಿ ಕಚೇರಿಗೆ 10 ಗುಂಟೆ ಜಾಗ
2020ರ ನವೆಂಬರ್ 12ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಬೆಳಗಾವಿ ನಗರದಲ್ಲಿ ಭಾರತೀಯ ಜನತಾಪಕ್ಷದ ಕಚೇರಿ ಕಟ್ಟಡ ನಿರ್ಮಾಣಕ್ಕೆ ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 10 ಗುಂಟೆ ಜಾಗವನ್ನು ಮಂಜೂರು ಮಾಡಲು ನಿರ್ಧರಿಸಿತ್ತು.
ಕಾಂಗ್ರೆಸ್ ಸರ್ಕಾರವೇ ಪೂರ್ವ ನಿದರ್ಶನ
ವಿಶೇಷವೆಂದರೇ ಬೆಳಗಾವಿ ಮಹಾನಗರಪಾಲಿಕೆಯಲ್ಲಿ ಬಿಜೆಪಿ ಕಚೇರಿ ಕಟ್ಟಡ ನಿರ್ಮಾಣಕ್ಕೆ 10 ಗುಂಟೆ ಜಾಗವನ್ನು ಮಂಜೂರು ಮಾಡಲು, 2015ರಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರವು, ಕಾಂಗ್ರೆಸ್ ಪಕ್ಷದ ಕಚೇರಿ ನಿರ್ಮಾಣಕ್ಕೆ 10 ಗುಂಟೆ ಜಾಗವನ್ನು ಮಂಜೂರು ಮಾಡಿದ್ದನ್ನೇ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರವು, ಸಮರ್ಥನೆಗೆ ಬಳಸಿಕೊಂಡಿತ್ತು.
ಮತ್ತೊಂದು ವಿಶೇಷವೆಂದರೇ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಜಲ ಸಂಪನ್ಮೂಲ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರು, ಬೆಳಗಾವಿಯಲ್ಲಿ ಬಿಜೆಪಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಯಾವುದೇ ಶುಲ್ಕವನ್ನು ಪಡೆಯದೇ ಉಚಿತವಾಗಿ ಮಂಜೂರು ಮಾಡಲು ಕೋರಿದ್ದರು ಎಂಬುದು ಸಚಿವ ಸಂಪುಟ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ನಗರ ಅಥವಾ ಪಟ್ಟಣಗಳ ಪರಿಮಿತಿಗೊಳಗಿರುವ ಯಾವುದೇ ಸರ್ಕಾರಿ ಜಮೀನನ್ನು ಯಾರೇ ವ್ಯಕ್ತಿ ಅಥವಾ ಖಾಸಗಿ ಸಂಸ್ಥೆಗೆ ಮಂಜೂರು ಮಾಡಲು ಅವಕಾಶವಿಲ್ಲ. ಅದರಲ್ಲೂ ಸ್ಥಳೀಯ ಸಂಸ್ಥೆಗಳಿಗೆ ಸೇರಿದ ಜಾಗ, ನಿವೇಶನಗಳನ್ನು ಸಾರ್ವಜನಿಕ ಹರಾಜು ಮೂಲಕವೇ ಹಂಚಿಕೆ ಮಾಡಬೇಕು ಎಂಬ ನಿಯಮವಿದೆ. ಆದರೆ ಬಿ ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿದ್ದ ಬಿಜೆಪಿ ಸರ್ಕಾರವು, ಸಾರ್ವಜನಿಕ ಹರಾಜು ಪ್ರಕ್ರಿಯೆ ನಡೆಸದೆಯೇ ಮಂಜೂರು ಮಾಡಿತ್ತು.
ಪ್ರಸ್ತಾವನೆಯಲ್ಲೇನಿತ್ತು?
ಬೆಳಗಾವಿ ಮಹಾನಗರಪಾಲಿಕೆ ವ್ಯಾಪ್ತಿಯ ಅಶೋಕ ನಗರ (ಸಿಟಿಎಸ್ ನಂ 10564/ಎ ) ರಲ್ಲಿನ ಜಾಗವನ್ನು ಭಾರತೀಯ ಜನತಾ ಪಕ್ಷದ ಕಚೇರಿ ಕಟ್ಟಡ ನಿರ್ಮಾಣ ಮಾಡಲು ಮಂಜೂರು ಮಾಡಲು ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಅಧ್ಯಕ್ಷರಾಗಿದ್ದ ಸಂಜಯ್ ಬಿ ಪಾಟೀಲ್ ಅವರು 2020ರ ಆಗಸ್ಟ್ 26ರಂದು ಪ್ರಸ್ತಾವ ಸಲ್ಲಿಸಿದ್ದರು. 10 ಗುಂಟೆ ಜಾಗವನ್ನು ರಿಯಾಯಿತಿ ದರದಲ್ಲಿ ಮಂಜೂರು ಮಾಡಬೇಕು ಎಂದು ಪ್ರಸ್ತಾವದಲ್ಲಿ ಕೋರಿದ್ದರು.

ಈ ಸಂಬಂಧ ಬೆಳಗಾವಿ ಮಹಾನಗರಪಾಲಿಕೆಯ ಆಡಳಿತಾಧಿಕಾರಿಗಳು 2020ರ ಸೆ.5ರಂದು ನಡೆದಿದ್ದ ಸಾಮಾನ್ಯ ಸಭೆಯಲ್ಲಿ ನಿರ್ಣಯ (ಗೊತ್ತುವಳಿ ಸಂಖ್ಯೆ 88) ಕೈಗೊಂಡಿದ್ದರು. ಇದರ ಪ್ರಕಾರ ಬೆಳಗಾವಿ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಅಶೋಕ ನಗರದ (ಸಿಟಿಎಸ್ ನಂ 10564/ಎ ) ದಲ್ಲಿ 10 ಗುಂಟೆ ಜಾಗವನ್ನು ಮಾರುಕಟ್ಟೆ ದರದಲ್ಲಿ ಮಂಜೂರು ಮಾಡಲು ತೀರ್ಮಾನಿಸಿತ್ತು.
30 ಗುಂಟೆ ಜಾಗ ಕೋರಿದ್ದ ರಮೇಶ್ ಜಾರಕಿಹೊಳಿ
ಆದರೆ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರೂ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರು 10 ಗುಂಟೆ ಬದಲಾಗಿ 30 ಗುಂಟೆ ಜಾಗವನ್ನು ಯಾವುದೇ ಶುಲ್ಕವನ್ನು ಪಡೆಯದೇ ಮಂಜೂರು ಮಾಡಬೇಕು ಎಂದು ಕೋರಿದ್ದರು.

ಸಮರ್ಥನೆ ಏನಿತ್ತು?
ಬೆಳಗಾವಿ ಜಿಲ್ಲೆ ಕಾಂಗ್ರೆಸ್ ಸಮಿತಿಗೆ 2015ರ ಏಪ್ರಿಲ್ 4ರಲ್ಲೇ 10 ಗುಂಟೆ ಜಾಗವನ್ನು ಪ್ರತಿ ಚದರ ಅಡಿಗೆ 500 ರು ನಂತೆ ಹಂಚಿಕೆ ಮಾಡಲಾಗಿತ್ತು. ಅದೇ ರೀತಿ ಬಿಜೆಪಿ ಕಚೇರಿ ಕಟ್ಟಡ ನಿರ್ಮಾಣಕ್ಕೂ 10 ಗುಂಟೆ ಜಾಗವನ್ನು ಮಾರುಕಟ್ಟೆ ದರದಲ್ಲಿ ಮಂಜೂರು ಮಾಡಬೇಕು ಎಂದು ಕೋರಿದ್ದರು. ಇದನ್ನೇ ಬೆಳಗಾವಿ ಮಹಾನಗರಪಾಲಿಕೆಯು ನಗರಾಭಿವೃದ್ಧಿ ಇಲಾಖೆಯ ಮುಂದಿರಿಸಿತ್ತು. ಆ ನಂತರ ಪೌರಾಡಳಿತ ನಿರ್ದೇಶಕರು ಸಹ 2020ರ ಸೆ.10ರಂದು ಸಚಿವ ಸಂಪುಟಕ್ಕೆ ಪ್ರಸ್ತಾವ ಸಲ್ಲಿಸಿದ್ದರು.

ಖಾಸಗಿ ವ್ಯಕ್ತಿಗಳಿಗೆ ಮಂಜೂರಾಗಿದ್ದ ಜಾಗ
ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಬಿಜೆಪಿ ಅಧ್ಯಕ್ಷರು ಮತ್ತು ಅಂದಿನ ಜಿಲ್ಲಾ ಉಸ್ತುವಾರಿ ಸಚಿವರು ಕೋರಿದ್ದ (ಸಿಟಿಎಸ್ ನಂ 10564/ಎ ) ಜಾಗವು ಆಗಲೇ ಇಬ್ಬರು ಖಾಸಗಿ ವ್ಯಕ್ತಿ, ಸಂಸ್ಥೆಗೆ ಮಂಜೂರಾಗಿತ್ತು. ವೆಂಕಟೇಶ್ ಎಂಬುವರಿಗೆ ಮಂಜೂರು ಮಾಡಿರುವ ಬದಲಿ ನಿವೇಶನ (ಸಂಖ್ಯೆ 10564ಎ/55, 105641ಎ/56, 10564ಎ/57ರಲ್ಲಿದ್ದ ಒಟ್ಟು 3,600 ಚದರಡಿ ಮಂಜೂರಾಗಿತ್ತು. ಈ ಆದೇಶವನ್ನು ಮಾರ್ಪಡಿಸಿ ನಿವೇಶನ ಸಂಖ್ಯೆ 11/35, 11/49, 11/50ಗಳು ಪ್ರಸ್ತುತ ಖಾಲಿ ಇವೆ. ಈ ನಿವೇಶನಗಳನ್ನು ವೆಂಕಟೇಶ್ ಎಂಬುವರಿಗೆ ಮಂಜೂರು ಮಾಡಬೇಕು ಎಂದು ಪೌರಾಡಳಿತ ನಿರ್ದೇಶಕರಿಗೆ ಪ್ರಸ್ತಾವ ಸಲ್ಲಿಕೆಯಾಗಿತ್ತು.

ಅದೇ ರೀತಿ ವೆಸ್ಟ್ ಭಾರತ ಜೈನ್ ಟ್ರಸ್ಟ್ ಸಂಸ್ಥೆಗೆ ಗುತ್ತಿಗೆ ಆಧಾರದ ಮೇಲೆ ನೀಡಿದ್ದ (ಸಿಟಿಎಸ್ ನಂ 11/28 ಒಟ್ಟು 1,200 ಚದರ ಅಡಿ) ಜಾಗವು ಪ್ರಸ್ತುತ ಖಾಲಿ ನಿವೇಶನವಾಗಿ ಉಳಿದಿದೆ. ಈ ಸಂಸ್ಥೆಯು ಪರ್ಯಾಯ ಜಾಗಕ್ಕೆ ಒಪ್ಪಿಗೆ ಸೂಚಿಸಬೇಕು. ಮತ್ತು ಸಿಟಿಎಸ್ ನಂ 10564/ಎರಲ್ಲಿ ಪಾಲಿಕೆ ಅಧೀನದಲ್ಲಿ ಪ್ರಸ್ತುತ ಖಾಲಿ ಇರುವ ಜಾಗ ಹಾಗೂ ವೆಂಕಟೇಶ್, ವೆಸ್ಟ್ ಭಾರತ ಜೈನ್ ಟ್ರಸ್ಟ್ ಸಂಸ್ಥೆಗೆ ನೀಡಿರುವ ಜಾಗದ ಪ್ರಕಾರ ಲಭ್ಯವಾಗುವ 24 ಗುಂಟೆ 893 ಚದರ ಅಡಿ ಜಾಗವನ್ನು (ಒಟ್ಟಾರೆ 27,029 ಚ ಅಡಿ) ಮಾರುಕಟ್ಟೆ ದರ ನಿಗದಿಪಡಿಸಿ ಷರತ್ತುಗಳೊಂದಿಗೆ ಮಂಜೂರು ಮಾಡಬೇಕು ಎಂದು ಕೈಗೊಂಡಿದ್ದ ಗೊತ್ತುವಳಿಯನ್ನು ಅಂಗೀಕರಿಸಿತ್ತು.
ಮಂಜೂರಿಗೆ ಅವಕಾಶವಿಲ್ಲವೇ?
ಈ ಪ್ರಸ್ತಾವದ ಕುರಿತು ಪೌರಾಡಳಿತ ನಿರ್ದೇಶನಾಲಯದಲ್ಲಿ ಚರ್ಚೆಯಾಗಿತ್ತು. ನಗರ ಅಥವಾ ಪಟ್ಟಣಗಳ ಪರಿಮಿತಿಗೊಳಗಿರುವ ಯಾವುದೇ ಸರ್ಕಾರಿ ಜಮೀನನ್ನು ಯಾರೇ ಖಾಸಗಿ ವ್ಯಕ್ತಿಗೆ ಅಥವಾ ಖಾಸಗಿ ಸಂಸ್ಥೆಗೆ ಮಂಜೂರು ಮಾಡಲು ಅವಕಾಶವಿಲ್ಲವೆಂದು 2005ರ ಏಪ್ರಿಲ್ 23ರಂದೇ ಆದೇಶ ಹೊರಡಿಸಿತ್ತು. ಹೀಗಾಗಿ ಸರ್ಕಾರದ ಹಂತದಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂದು ಪೌರಾಡಳಿತ ನಿರ್ದೇಶನಾಲಯವು ಅಭಿಪ್ರಾಯಿಸಿತ್ತು.
ಸಾರ್ವಜನಿಕ ಹರಾಜಿಗಿದೆಯೇ ಅವಕಾಶ?
ಅಲ್ಲದೇ ನಗರ ಅಥವಾ ಪಟ್ಟಣಗಳ ಪರಿಮಿತಿಗೊಳಗಿರುವ ಯಾವುದೇ ಸರ್ಕಾರಿ ಜಮೀನನ್ನು ಯಾರೇ ಖಾಸಗಿ ವ್ಯಕ್ತಿಗೆ ಅಥವಾ ಖಾಸಗಿ ಸಂಸ್ಥೆಗೆ ಮಂಜೂರು ಮಾಡಲು ಅವಕಾಶವಿಲ್ಲ ಎಂದು 2005ರ ಏಪ್ರಿಲ್ 23ರಂದೇ ಹೊರಡಿಸಿದ್ದ ಆದೇಶ ಹೇಳಿತ್ತಲ್ಲದೇ ಈ ಜಮೀನನ್ನು ಸಾರ್ವಜನಿಕ ಅಥವಾ ಸರ್ಕಾರದ ಉದ್ದೇಶಕ್ಕೆ ಮೀಸಲಿಡಬೇಕು ಎಂದು ಸ್ಷಷ್ಟವಾಗಿ ತಿಳಿಸಿತ್ತು. ಅಲ್ಲದೇ 2002ರ ಜೂನ್ಲ್ಲಿ 2ರಲ್ಲಿ ಸರ್ಕಾರವು ಹೊರಡಿಸಿದ್ದ ಆದೇಶದಂತೆ (ಸಂಖ್ಯೆ ನಅಇ 129 ಟಿಎಂಡಿ 2022) ಪ್ರಕಾರ ನಗರ ಸ್ಥಳೀಯ ಸಂಸ್ಥೆಯಗಳ ಜಮೀನುಗಳನ್ನು ಸಾರ್ವಜನಿಕ ಹರಾಜು ಮೂಲಕವೇ ಹಂಚಿಕೆ ಮಾಡಲು ಅವಕಾಶವಿದೆ ಎಂದು ಹೇಳಿತ್ತು.

ಬೆಳಗಾವಿ ಮಹಾನಗರಪಾಲಿಕೆಯಿಂದ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಸಮಿತಿಗೆ 10 ಗುಂಟೆ ಜಾಗವನ್ನು ಹಂಚಿಕೆ ಮಾಡಲು ಆರ್ಥಿಕ ಇಲಾಖೆಯು ಸಹಮತಿಸಿತ್ತು. ಹೀಗಾಗಿ ಇದೇ ಮಾದರಿಯಲ್ಲಿ ಬಿಜೆಪಿ ಕಚೇರಿ ಕಟ್ಟಡ ನಿರ್ಮಾಣಕ್ಕೂ ಜಾಗ ಮಂಜೂರು ಮಾಡಬೇಕು ಎಂದು ನಗರಾಭಿವೃದ್ದಿ ಇಲಾಖೆಯು ಸಮರ್ಥಿಸಿತ್ತು.
ಬಿಜೆಪಿ ಕಚೇರಿ ಕಟ್ಟಡ ನಿರ್ಮಾಣ ಮಾಡಲು ಜಾಗವನ್ನು ಮಾರುಕಟ್ಟೆ ದರದಂತೆ ಮಂಜೂರು ಮಾಡಿದಲ್ಲಿ ಬೆಳಗಾವಿ ಮಹಾನಗರಪಾಲಿಕೆಗೆ ಆರ್ಥಿಕವಾಗಿ ಲಾಭವಾಗಲಿದೆ ಎಂದು ಹೇಳಿತ್ತು. ಹಾಗೆಯೇ ಅಂದಿನ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರ ಕೋರಿಕೆಯಂತೆ ಯಾವುದೇ ಶುಲ್ಕವನ್ನು ಪಡೆಯದೇ ಮಂಜೂರು ಮಾಡಿದಲ್ಲಿ ಬೆಳಗಾವಿ ಮಹಾನಗರಪಾಲಿಕೆಗೆ ಅಪಾರವಾದ ಆರ್ಥಿಕ ನಷ್ಟವುಂಟಾಗುತ್ತದೆ ಎಂದು ಪೌರಾಡಳಿತ ನಿರ್ದೇಶನಾಲಯವು ವಿವರಿಸಿತ್ತು.
ಆರ್ಥಿಕ ಇಲಾಖೆಯು ಕಡೆಯಲ್ಲಿ ಮಾರುಕಟ್ಟೆ ದರದಲ್ಲಿಯೇ ಮಂಜೂರು ಮಾಡಬೇಕು ಎಂದು ತನ್ನ ಅಭಿಪ್ರಾಯ ನೀಡಿತ್ತು. ಇದಕ್ಕೆ ಕಾಂಗ್ರೆಸ್ ಪಕ್ಷ ಕಚೇರಿ ಕಟ್ಟಡ ನಿರ್ಮಾಣಕ್ಕೆ ನೀಡಿದ್ದ ಮಾದರಿಯನ್ನೇ ಮುಂದಿರಿಸಿತ್ತು. ಅಲ್ಲದೇ ವೆಂಕಟೇಶ್ ಮತ್ತು ವೆಸ್ಟ್ ಭಾರತ ಜೈನ್ ಟ್ರಸ್ಟ್ ನ್ಯಾಯಾಲಯದ ಕದ ತಟ್ಟಿದರೆ ಅದಕ್ಕೆ ಬದ್ಧವಾಗಿರಬೇಕು ಎಂದೂ ಷರತ್ತು ವಿಧಿಸಿತ್ತು. ಇದಕ್ಕೆ ಬಜೆಟ್‌ನಲ್ಲಿ ಯಾವುದೇ ಬೆಂಬಲವನ್ನೂ ನೀಡುವುದಿಲ್ಲ ಸ್ಪಷ್ಟಪಡಿಸಿತ್ತು.
ಸಚಿವ ಸಂಪುಟದ ನಿರ್ಧಾರದಲ್ಲೇನಿತ್ತು?
ಈ ಪ್ರಸ್ತಾವನೆ ಕುರಿತು 2020ರ ನವೆಂಬರ್ 12ರಂದು ನಡೆದಿದ್ದ ಸಚಿವ ಸಂಪುಟದಲ್ಲಿ ಚರ್ಚೆಯಾಗಿತ್ತು. ಚರ್ಚೆ ನಂತರ ಬೆಳಗಾವಿ ನಗರದಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಕಟ್ಟಡ ನಿರ್ಮಾಣಕ್ಕೆ 2015ರಲ್ಲಿ 10 ಗುಂಟೆ ಜಾಗವನ್ನು ಪ್ರತಿ ಚದರ ಅಡಿಗೆ 500 ರು ನಂತೆ ದರ ವಿಧಿಸಿ ಮಂಜೂರು ಮಾಡಿದಂತೆ ಆ ಜಾಗದ ಅಂದಿನ ಮಾರ್ಗಸೂಚಿ ದರದ ಅನುಪಾತದಂತೆ ಹಾಗೂ ಪ್ರಸ್ತುತ ನಿವೇಶನದ ಇಂದಿನ ಮಾರ್ಗಸೂಚಿ ದರದ ಅದೇ ಅನುಪಾತವನ್ನು ಪರಿಗಣಿಸಿ ಅದಕ್ಕನುಗುಣವಾಗಿ ದರ ನಿಗದಿಪಡಿಸಿ ಭಾರತೀಯ ಜನತಾಪಕ್ಷದ ಕಚೇರಿ ಕಟ್ಟಡ ನಿರ್ಮಾಣಕ್ಕೆ ಬೆಳಗಾವಿ ಮಹಾನಗರಪಾಲಿಕೆ ವ್ಯಾಪ್ತಿಯ ಅಶೋಕ್ ನಗರದ ಸಿಟಿಎಸ್ ನಂ 10564/ಎರಲ್ಲಿ 10 ಗುಂಟೆ ಜಾಗವನ್ನು ಮಂಜೂರು ಮಾಡಲು ಸಚಿವ ಸಂಪುಟವು ನಿರ್ಧರಿಸಿತ್ತು.

ಅಲ್ಲದೇ ವೆಂಕಟೇಶ್ ಮತ್ತು ವೆಸ್ಟ್ ಭಾರತ್ ಜೈನ್ ಟ್ರಸ್ಟ್ ಅವರ ಸ್ವಾಧೀನದಲ್ಲಿರುವ ಜಮೀನನ್ನು ಬಿಟ್ಟುಕೊಡುವ ಬಗ್ಗೆ ಲಿಖಿತ ಒಪ್ಪಿಗೆ ನೀಡಿದಲ್ಲಿ ಆರ್ಥಿಕ ಇಲಾಖೆಯು ಸಚಿವ ಸಂಪುಟ ಟಿಪ್ಪಣಿ ಕಂಡಿಕೆ 6.3ರಲ್ಲಿ ವಿಧಿಸಿರುವ ಷರತ್ತಿಗೆ ಒಳಪಟ್ಟು ಅದೇ ಸರ್ವೇ ನಂಬರ್‍ನಲ್ಲಿ ಇನ್ನು 20 ಗುಂಟೆ ಹೆಚ್ಚುವರಿ ಜಮೀನನ್ನು ಭಾರತೀಯ ಜನತಾಪಕ್ಷದ ಕಚೇರಿ ಕಟ್ಟಡಕ್ಕಾಗಿ ದರ ವಿಧಿಸಿ ಮಂಜೂರು ಮಾಡಬೇಕು ಎಂದು ಸಚಿವ ಸಂಪುಟವು ನಿರ್ಧರಿಸಿತ್ತು. ಇದನ್ನು ಅಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರೂ ಸಹ ಅನುಮೋದಿಸಿದ್ದರು.
ರಾಷ್ಟ್ರೋತ್ಥಾನ ಪರಿಷತ್‌ಗೂ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಗೋಮಾಳ ಜಮೀನುಗಳನ್ನು ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿಯೂ ಮಂಜೂರು ಮಾಡಲಾಗಿತ್ತು.
ರಾಷ್ಟ್ರೋತ್ಥಾನ ಪರಿಷತ್, ಬಿಜೆಪಿ ಕಚೇರಿಗೆ ಗೋಮಾಳ, ಜಮೀನು ಹಂಚಿಕೆ ಸುತ್ತ ‘ದಿ ಫೈಲ್’ನ 13 ವರದಿಗಳು
ಜನಸೇವಾ ಟ್ರಸ್ಟ್‌ಗೂ ಗೋಮಾಳ ಜಮೀನನ್ನು ಮಂಜೂರು ಮಾಡಲಾಗಿತ್ತು.
ಜನಸೇವಾ ಟ್ರಸ್ಟ್‌ಗೆ 35.33 ಎಕರೆ ಗೋಮಾಳ ಮಂಜೂರಾತಿ ರದ್ದು; ಇನ್ನೂ ಹೊರಬೀಳದ ಸರ್ಕಾರದ ಆದೇಶ
ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಾದರೂ ಸಹ ಜನಸೇವಾ ಟ್ರಸ್ಟ್ ಗೆ ಮಂಜೂರು ಮಾಡಿದ್ದ ಜಮೀನುಗಳನ್ನು ಹಿಂದಕ್ಕೆ ಪಡೆದಿರಲಿಲ್ಲ.
ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಮಂಕಿ ಗ್ರಾಮದಲ್ಲಿ ಗೋಮಾಳ ಮಂಜೂರು; ಶೇ.5ರ ದರ ನಿಗದಿ, ನಿಯಮ ಉಲ್ಲಂಘನೆ
ಈ ಮಧ್ಯೆ ಕಾಂಗ್ರೆಸ್ ಭವನ ಟ್ರಸ್ಟ್ ಗೂ ಶೇ.5ರ ದರದಲ್ಲಿ ರಾಜ್ಯದ ಹಲವೆಡೆ ಗೋಮಾಳ, ಸಿ ಎ ನಿವೇಶನಗಳನ್ನು ಮಂಜೂರು ಮಾಡಿರುವುದನ್ನು ಸ್ಮರಿಸಬಹುದು.









