Friday | April 10, 2026 |

ಕ್ಯಾನ್ಸರ್ ರೋಗಿಗಳಗೆ ಆರ್ಥಿಕ ಹೊರೆ; ನವೀಕೃತವಾಗದ ಉಪಕರಣಗಳು, 250 ಕೋಟಿಗೆ ಮೊರೆಯಿಟ್ಟ ಕಿಮ್ಸ್

ಬೆಂಗಳೂರು;  ಉತ್ತರ ಕರ್ನಾಟಕದ ಪ್ರತಿಷ್ಠಿತ ಸಂಸ್ಥೆಯಾಗಿರುವ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ (ಕಿಮ್ಸ್) ಗೆ ಸರ್ಕಾರವು ನೀಡುತ್ತಿರುವ ಅನುದಾನವು ಸಾಕಾಗುತ್ತಿಲ್ಲ. ವಿಶೇಷವಾಗಿ ಕ್ಯಾನ್ಸರ್ ರೋಗಿಗಳಿಗೆ ಸೂಕ್ತ ಮತ್ತು ಗುಣಮಟ್ಟದ ಚಿಕಿತ್ಸೆ ನೀಡಲು ಪರದಾಡುತ್ತಿದೆ.

 

ಇದರ ಪರಿಣಾಮ, ಕ್ಯಾನ್ಸರ್ ರೋಗಿಗಳಿಗೆ ಆರ್ಥಿಕ ಹೊರೆಯುಂಟಾಗುತ್ತಿದೆ. ಅಲ್ಲದೇ ಕ್ಯಾನ್ಸರ್‍‌ ಚಿಕಿತ್ಸೆ ನಂತರ ಫಾಲೋ ಅಪ್ ಮೌಲ್ಯಮಾಪನದಲ್ಲಿ ದೊಡ್ಡ ಅಡಚಣೆಯಾಗುತ್ತಿದೆ. ಆದರೂ ಸರ್ಕಾರ ಮಾತ್ರ ಇದಕ್ಕೂ ತನಗೂ ಸಂಬಂಧವಿಲ್ಲ ಎಂಬಂತಿದೆ.

 

ಇದೇ ಮಾರ್ಚ್‌ನಲ್ಲಿ ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ ಬಜೆಟ್‌ನಲ್ಲಿ ಇದೇ ಉದ್ದೇಶಕ್ಕಾಗಿ 250 ಕೋಟಿ ರುಪಾಯಿ ಅನುದಾನ ಒದಗಿಸಬೇಕು ಎಂದು ಮೊರೆಯಿಟ್ಟಿದೆ. ಈ ಸಂಬಂಧ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯು 2024 ಮತ್ತು 2025ರಲ್ಲಿಯೇ ಆಡಳಿತ ಮಂಡಳಿ ಸಭೆಯಲ್ಲಿಯೂ ನಿರ್ಣಯ ಕೈಗೊಂಡಿತ್ತು. ಇದನ್ನಾಧರಿಸಿ ವೈದ್ಯಕೀಯ ಶಿಕ್ಷಣ ಇಲಾಖೆಯು, ಮುಖ್ಯಮಂತ್ರಿ ಮುಂದೆ ಪ್ರಸ್ತಾವ ಮಂಡಿಸಲು ಸಿದ್ಧತೆ ನಡೆಸಿದೆ.

 

ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಸಂಶೋಧನಾ ಸಂಸ್ಥೆಯ ಆಡಳಿತ ಮಂಡಳಿ ಸಭೆಯ ನಡವಳಿ ಆಧರಿಸಿ  ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣ ಪ್ರಕಾಶ್ ಪಾಟೀಲ್ ಅವರ ಜೊತೆ ಈಗಾಗಲೇ ಒಂದು ಸುತ್ತಿನ  ಚರ್ಚೆಗಳು ಆರಂಭವಾಗಿವೆ.

 

ಈ ಸಂಬಂಧ ಕೆಲವು ದಾಖಲೆಗಳು ‘ದಿ ಫೈಲ್‌’ ಗೆ ಲಭ್ಯವಾಗಿವೆ.

 

 

ಉತ್ತರ ಕರ್ನಾಟಕದ ಸುಮಾರು 12 ಜಿಲ್ಲೆಗಳಿಗೆ ಕಿಮ್ಸ್‌ ಒಂದೇ ತೃತೀಯ ಮಟ್ಟದ  ಸರ್ಕಾರಿ ಚಿಕಿತ್ಸಾ ಕೇಂದ್ರವಾಗಿದೆ. ಈ ಕೇಂದ್ರದಲ್ಲಿ ವರ್ಷಕ್ಕೆ ಸುಮಾರು 3,000 ರಿಂದ 3,500 ಸಂಖ್ಯೆಯ ಹೊಸ ಕ್ಯಾನ್ಸರ್‍‌ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೆಎಂಸಿಆರ್‍‌ಐನ ಎಕ್ಸರೇ ಚಿಕಿತ್ಸೆ ಘಟಕದಲ್ಲಿ ಪ್ರತಿ ದಿನ ಸರಾಸರಿ 100 ಸಿಟ್ಟಿಂಗ್‌ಗಳು ನಡೆಯುತ್ತಿವೆ. ಈ ಘಟಕವು ಸಂಸ್ಥೆಯ ಮೆಡಿಕಲ್ ಅಂಕಾಲಜಿ ಮತ್ತು ಸರ್ಜಿಕಲ್ ಅಂಕಾಲಜಿ ವಿಭಾಗಗಳೊಂದಿಗೆ ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಇಲ್ಲಿನ ಘಟಕಗಳಲ್ಲಿರುವ ಉಪಕರಣಗಳು ನವೀಕರಿಸುವುದು ಅತ್ಯಗತ್ಯವಾಗಿದೆ ಎಂದು ಕಿಮ್ಸ್‌ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚೆಯಾಗಿತ್ತು.

 

 

13 ವರ್ಷ ಹಳೆಯ ಉಪಕರಣ

 

ಕಿಮ್ಸ್‌ನಲ್ಲಿ ಪ್ರಸ್ತುತ ಕಾರ್ಯನಿರ್ವಹಸುತ್ತಿರುವ LINAC ಯಂತ್ರವು 13 ವರ್ಷ ತಾಂತ್ರಿಕವಾಗಿ ಹಳೆಯದಾಗಿದೆ. ಐಎಂಆರ್‍‌ಟಿ, ಐಜಿಆರ್‍‌ಟಿ, ವಿಮ್ಯಾಟ್‌, ಎಸ್‌ಆರ್‍ಎಸ್‌, ಎಸ್‌ಬಿಆರ್‍‌ಟಿ ಮುಂತಾದ ನವೀನ ಕಿರಣ ಚಿಕಿತ್ಸಾ ತಂತ್ರಜ್ಞಾನಗಳನ್ನೂ ನೀಡಲಾಗುತ್ತಿಲ್ಲ. ಅಲ್ಲದೇ ಪಿಇಟಿ-ಸಿಟಿ ಸೌಲಭ್ಯವೂ ಇಲ್ಲ. ಈ ಬಗ್ಗೆ ಸರ್ಕಾರಕ್ಕೆ ಹಲವು ಬಾರಿ ಪ್ರಸ್ತಾವಗಳನ್ನು ಸಲ್ಲಿಸಿದ್ದರೂ ಸಹ ಅನುದಾನದಲ್ಲಿ ಮಾತ್ರ ಏರಿಕೆಯಾಗಿಲ್ಲ ಎಂಬ ಸಂಗತಿಯು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

 

ಪಿಇಟಿ ಸಿಟಿ ಸೌಲಭ್ಯ ಇಲ್ಲದಿರುವ ಕಾರಣ ಕ್ಯಾನ್ಸ್‌ರ್‍‌ ರೋಗಿಗಳ ನಿರ್ಧಾರ, ಹಂತ ನಿರ್ಣಯ, ಚಿಕಿತ್ಸೆ ಯೋಜನೆ ಮತ್ತು ಚಿಕಿತ್ಸೆ ನಂತರ ಫಾಲೋ ಅಪ್‌ ಮೌಲ್ಯಮಾಪನದಲ್ಲಿ ಅಡಚಣೆಯಾಗುತ್ತಿದೆ. ಈ ಕಾರಣದಿಂದ ರೋಗಿಗಳು ಹೆಚ್ಚಿನ ಚಿಕಿತ್ಸೆಗಾಗಿ  ಈ ಸೌಲಭ್ಯವಿರುವ ಬೇರೆ ಆಸ್ಪತ್ರೆಗಳಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ಇದರಿಂದ ಬಡ ರೋಗಿಗಳಿಗೆ ಹೆಚ್ಚಿನ ಆರ್ಥಿಕ ಹೊರೆ ಉಂಟಾಗುತ್ತಿದೆ ಎಂದು ಸಭೆಯಲ್ಲಿ ಚರ್ಚಿಸಿರುವುದು ನಡವಳಿಯಿಂದ ಗೊತ್ತಾಗಿದೆ.

 

ಸಮಿತಿಯ ಶಿಫಾರಸ್ಸುಗಳೇನು?

 

ಹೊಸ ತಂತ್ರಜ್ಞಾನ LINAC  ಯಂತ್ರವನ್ನು ಖರೀದಿಸಿ ಅಳವಡಿಸಬೇಕು. ಪಿಇಟಿ ಸಿಟಿ ಘಟಕವನ್ನು ಹುಬ್ಬಳ್ಳಿಯಲ್ಲಿರುವ ಕೆಎಂಸಿಆರ್‍‌ಐ ಘಟಕದಲ್ಲಿಯೇ ಸ್ಥಾಪಿಸಬೇಕು. ಹುಬ್ಬಳ್ಳಿಯಲ್ಲಿರುವ ಕೆಎಂಸಿಆರ್‍‌ಐ ಘಟಕವನ್ನು ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ ಅಥವಾ ಕೆಎಂಐಒ ಉಪ ಕೇಂದ್ರವಾಗಿ ಘೋಷಿಸಬೇಕು ಎಂದು ಸಮಿತಿಯು ಶಿಫಾರಸ್ಸು ಮಾಡಿರುವುದು ತಿಳಿದು ಬಂದಿದೆ.

 

 

ಈ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಿದಲ್ಲಿ ಮಾತ್ರ ಕ್ಯಾನ್ಸರ್‍‌ ರೋಗಿಗಳಿಗೆ ಸ್ಥಳೀಯವಾಗಿ ಸಮಗ್ರ ಕಡಿಮೆ ವೆಚ್ಚದ ಮತ್ತು ಗುಣಮಟ್ಟದ ಚಿಕಿತ್ಸೆ ದೊರೆಯುತ್ತದೆ. ಜೊತೆಗೆ ಶೈಕ್ಷಣಿಕ ತರಬೇತಿ ಮತ್ತು ಸಂಶೋಧನೆ ಚಟುವಟಿಕೆಗಳನ್ನು ಬಲಪಡಿಸಿದಂತಾಗುತ್ತದೆ ಎಂದು ಸಮಿತಿಯು ತೀರ್ಮಾನಿಸಿತ್ತು.

 

 

250 ಕೋಟಿ ಅನುದಾನ ಸಿಗಬಹುದೇ?

 

ಕಿಮ್ಸ್‌ನ ಆಡಳಿತ ಮಂಡಳಿಯು ಕೈಗೊಂಡಿರುವ ನಿರ್ಣಯಗಳನ್ನಾಧರಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆಗಳು ನಡೆದಿವೆ. 2026-27ನೇ ಸಾಲಿನ ಆಯವ್ಯಯದಲ್ಲಿ ಈ ಯೋಜನೆಗಳನ್ನು ಘೋಷಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ವೈದ್ಯಕೀಯ ಶಿಕ್ಷಣ ಇಲಾಖೆಯು ನಿರ್ಧರಿಸಿದೆ.

 

 

ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಕ್ಯಾನ್ಸರ್‍‌ ಕೇರ್‍‌ ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ 2018ರಲ್ಲೇ 18.25 ಕೋಟಿ ರು ಅನುದಾನಕ್ಕೆ ಅನುಮೋದನೆ ನೀಡಿತ್ತು. ಆದರೂ ವೈದ್ಯಕೀಯ ಶಿಕ್ಷಣ ಇಲಾಖೆಯು 2025ರ ಜೂನ್‌ 23 ಅಂತ್ಯದವರೆಗೂ ಆಡಳಿತಾತ್ಮಕ ಅನುಮೋದನೆಯನ್ನೇ ಪಡೆದಿರಲಿಲ್ಲ. ಅಂದರೇ ಸರ್ಕಾರವು ಈ ಅನುದಾನವನ್ನು ಮಂಜೂರು ಮಾಡಿ 7 ವರ್ಷ ಕಳೆದಿದ್ದರೂ ಸಹ ವೈದ್ಯಕೀಯ ಶಿಕ್ಷಣ ಇಲಾಖೆಯು ಅನುಮೋದನೆ ಪಡೆಯುವಲ್ಲಿ ದಿವ್ಯ ನಿರ್ಲಕ್ಷ್ಯ ವಹಿಸಿತ್ತು.

 

ಅದಷ್ಟೇ ಅಲ್ಲ, ಅನುಮೋದನೆಗೂ ಮುನ್ನವೇ 5.00 ಕೋಟಿ ರು ಗಳನ್ನು ಬಿಡುಗಡೆ ಮಾಡಿ ಆದೇಶವನ್ನೂ ಹೊರಡಿಸಲಾಗಿತ್ತು. ಈ ಸಂಬಂಧ ಆರ್ಥಿಕ ಇಲಾಖೆಯು 2025ರ ಜೂನ್‌ 23ರಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿತ್ತು.

 

ರಾಜ್ಯದಲ್ಲಿ ಪ್ರತಿ ವರ್ಷ ಅಂದಾಜು 65,000 ಮಂದಿ ಕ್ಯಾನ್ಸರ್‌ ರೋಗಕ್ಕೆ ತುತ್ತಾಗುತ್ತಿದ್ದಾರೆ.ತಿ ವರ್ಷ 65,000 ಮಂದಿ ತುತ್ತಾಗುತ್ತಿದ್ಧಾರೆ ಎಂದು ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಡಾ ಕೆ ಸುಧಾಕರ್‌ ಅವರು ವಿಧಾನ ಪರಿಷತ್‌ಗೆ ಉತ್ತರ ನೀಡಿದ್ದರು.

 

ದೇಶದಲ್ಲಿ ಹೆಚ್ಚು ಕ್ಯಾನ್ಸರ್‌ ರೋಗಿಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಕರ್ನಾಟಕ 5ನೇ ಸ್ಥಾನದಲ್ಲಿದೆ. ‘2015ರ ಅಂದಾಜು ಪ್ರಕಾರ ಕರ್ನಾಟಕದಲ್ಲಿ ಸುಮಾರು 51,000 ಹೊಸ ಕ್ಯಾನ್ಸರ್‌ ರೋಗಿಗಳಿದ್ದರು. 2020ರಲ್ಲಿ ಇದು ಸುಮಾರು 70,000 ತಲುಪಬಹುದೆಂದು ಅಂದಾಜಿಸಲಾಗಿದೆ,’ಎಂದು ಡಾ ಕೆ ಸುಧಾಕರ್‌ ಅವರು 2020ರ ಮಾರ್ಚ್‌ 2ರಂದು ನಡೆದ ಅಧಿವೇಶನದಲ್ಲಿ ಉತ್ತರಿಸಿದ್ದರು.

 

ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕ್ಯಾನ್ಸರ್‌ ಕೇರ್‌ ಘಟಕ ಸ್ಥಾಪನೆಯೂ ಸೇರಿದಂತೆ ವಿವಿಧ ರೀತಿಯ ಆಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆಗೊಳಿಸಿರುವ 500 ಲಕ್ಷ ರು.ಮೊತ್ತದಲ್ಲಿ ಕೈಗೊಂಡಿರುವ ಕಾಮಗಾರಿಯು ಯಾವ ಹಂತದಲ್ಲಿದೆ ಎಂಬ ಮಾಹಿತಿಯನ್ನು ಆಡಳಿತ ಮಂಡಳಿಯು ವೈದ್ಯಕೀಯ ಶಿಕ್ಷಣ ಇಲಾಖೆಗೆ ನೀಡಿರಲಿಲ್ಲ. ಅಲ್ಲದೆ, ಬಳಕೆಯಾಗಿರುವ ಅನುದಾನದ ಪೂರ್ಣ ಮಾಹಿತಿ ನೀಡದ ಕಾರಣ ಸರ್ಕಾರದ ಸಮಯವೂ ವ್ಯರ್ಥವಾಗಿತ್ತು.

 

ಅಧಿಕಾರಿಗಳ ಈ ವಿಳಂಬ ನೀತಿಯಿಂದಾಗಿಯೇ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲು ವೈದ್ಯಕೀಯ ಶಿಕ್ಷಣ ಇಲಾಖೆಯೂ ಇನ್ನಷ್ಟು ವಿಳಂಬ ಮಾಡುತ್ತಿದೆ. ಸಕಾಲದಲ್ಲಿ ಅನುದಾನ ದೊರಕದ ಕಾರಣ ಕ್ಯಾನ್ಸರ್‌ ಘಟಕ ಕಾಮಗಾರಿಯು 3ವರ್ಷಗಳಾದರೂ ಪೂರ್ಣಗೊಳ್ಳದೇ ತೆವಳುತ್ತಿತ್ತು. ಈ ಬಗ್ಗೆ ಹಾಸನ ಶಾಸಕ ಪ್ರೀತಂ ಗೌಡ ಅವರು ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆದಿದ್ದರು.

 

ಹಿಮ್ಸ್‌ನಲ್ಲಿ ಕ್ಯಾನ್ಸರ್‌ ಕೇರ್‌ ಘಟಕ ಆರಂಭಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಇತ್ತೀಚೆಗೆ ಪತ್ರ ವ್ಯವಹಾರಗಳು ನಡೆದಿವೆ. ಲಭ್ಯವಿರುವ ಟಿಪ್ಪಣಿ ಹಾಳೆ ಮತ್ತು ದಾಖಲೆಗಳ ಪ್ರಕಾರ ಹಿಮ್ಸ್‌ನ ಆಡಳಿತ ಮಂಡಳಿಯ ಧೋರಣೆಯೇ ಅನುದಾನ ಬಿಡುಗಡೆಯಲ್ಲಿನ ವಿಳಂಬವೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿತ್ತು.

 

ಬಿಜೆಪಿ ಅವಧಿಯಲ್ಲಿ ವ್ಯರ್ಥವಾಗಿದ್ದ ಸಮಯ

 

‘1,825.00 ಲಕ್ಷದಲ್ಲಿ ಸರ್ಕಾರದಿಂದ ಭರಸಿಬೇಕಾದ 1500 ಲಕ್ಷಗಳ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ಅನುದಾನದಲ್ಲಿ 525 ಲಕ್ಷ ರು.ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಇನ್ನುಳಿದ 925 ಲಕ್ಷ ರುಗ.ಳನ್ನು ಮಾತ್ರ ಬಿಡುಗಡೆಗೊಳಿಸಲು ಬಾಕಿ ಇತ್ತು. ಆದರೆ ಈ ಅನುದಾನಕ್ಕಿಂತ ಹೆಚ್ಚುವರಿಯಾಗಿ 25 ಲಕ್ಷ ಒಳಗೊಂಡಂತೆ 1000 ಲಕ್ಷ ರು. ಬಿಡುಗಡೆ ಮಾಡಲು ಪ್ರಸ್ತಾವನೆ ಸಲ್ಲಿಸಿತ್ತು.  ಈ ರೀತಿ ಸರ್ಕಾರಕ್ಕೆ ಕೈಗೊಂಡ ಕಾಮಗಾರಿಯ ಮತ್ತು ಬಳಕೆಯಾಗಿರುವ ಅನುದಾನದ ಪೂರ್ಣ ಮಾಹಿತಿಯನ್ನು ನೀಡದೆಯೇ ಸರ್ಕಾರದ ಸಮಯವನ್ನು ವ್ಯರ್ಥ ಮಾಡುತ್ತಿರುವುದು ಸಮಂಜಸವಾಗಿರುವುದಿಲ್ಲ,’ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯು 2021ರ ಜುಲೈ 8ರಂದೇ ಅಸಮಾಧಾನ ವ್ಯಕ್ತಪಡಿಸಿತ್ತು.

 

ಕ್ಯಾನ್ಸರ್‍‌ ಕೇರ್‍‌ ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ 18.25 ಕೋಟಿ ರು ವೆಚ್ಚದ ಪ್ರಸ್ತಾವನೆಗೆ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಆಡಳಿತಾತ್ಮಕ ಅನುಮೋದನೆಯನ್ನೇ ಪಡೆದಿರಲಿಲ್ಲ. ಅಲ್ಲದೇ ಈ ಘಟಕಕ್ಕೆ ಅಗತ್ಯವಾದ ಉಪಕರಣಗಳ ಖರೀದಿಗೆ 18.25 ಕೋಟಿ ರು ಅನುದಾನ ಒದಗಿಸಿದ್ದರೂ ಸಹ 26.60 ಕೋಟಿ ರು ಮೊತ್ತದಲ್ಲಿ ಟೆಂಡರ್‍‌ ಕರೆದಿರುವುದನ್ನು  ಆರ್ಥಿಕ ಇಲಾಖೆಯು ಪತ್ತೆ ಹಚ್ಚಿತ್ತು.

Hot this week

ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಕೆ; ಅಧಿಕಾರಿಗಳ ವಿರುದ್ಧ ದಾಖಲಾಗದ ಎಫ್‌ಐಆರ್, ವರದಿ ಸಲ್ಲಿಸಲು ಸೂಚನೆ

ಬೆಂಗಳೂರು; ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ತವರು ಕ್ಷೇತ್ರದಲ್ಲಿ...

13 ಪರ್ಸೆಂಟ್ ಕಮಿಷನ್‌ಗೆ ಬೇಡಿಕೆ; ಗುತ್ತಿಗೆದಾರರ ಸಂಘದಿಂದ ಮತ್ತೊಂದು ಪತ್ರ, ಕೋರ್ಟ್‌ ಕದ ತಟ್ಟಿದ ಗುತ್ತಿಗೆದಾರರು

ಬೆಂಗಳೂರು;  ಮಹಾತ್ಮಗಾಂಂಧಿ ನಗರ ವಿಕಾಸ ಯೋಜನೆ -1 ರ ಅಡಿಯಲ್ಲಿ ಕಾಮಗಾರಿ...

ಬಳಕೆಯಾಗದ ಅನುದಾನ; ಸರ್ಕಾರದ ಬೊಕ್ಕಸಕ್ಕೆ ಸಂದಾಯವಾಗಿಲ್ಲ 10,546.42 ಕೋಟಿ, ಸಿಎಜಿ ಆಕ್ಷೇಪಣೆ

ಬೆಂಗಳೂರು; ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸೇರಿದಂತೆ 2024-25ನೇ ಸಾಲಿನಲ್ಲಿ   ಒಟ್ಟು...

ತರಕಾರಿ ಬೀಜಗಳ ಕಿಟ್ ವಿತರಣೆ; ದಾಸ್ತಾನು ಇಲ್ಲದ ಏಜೆನ್ಸಿಗೆ 4 ಜಿ ವಿನಾಯಿತಿ, ಬಹುಕೋಟಿ ಅಕ್ರಮ, ಭ್ರಷ್ಟಾಚಾರ ಸುಳಿಯಲ್ಲಿ ಸರ್ಕಾರ?

ಬೆಂಗಳೂರು; 2023-24 ಮತ್ತು 2025-26ನೇ ಸಾಲಿನವರೆಗೆ  ತೋಟಗಾರಿಕೆ ಇಲಾಖೆಯು ಜಾರಿಗೊಳಿಸಿದ್ದ  ...

Topics

ಬಳಕೆಯಾಗದ ಅನುದಾನ; ಸರ್ಕಾರದ ಬೊಕ್ಕಸಕ್ಕೆ ಸಂದಾಯವಾಗಿಲ್ಲ 10,546.42 ಕೋಟಿ, ಸಿಎಜಿ ಆಕ್ಷೇಪಣೆ

ಬೆಂಗಳೂರು; ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸೇರಿದಂತೆ 2024-25ನೇ ಸಾಲಿನಲ್ಲಿ   ಒಟ್ಟು...

13,646.51 ಕೋಟಿ ಹೆಚ್ಚುವರಿ ವೆಚ್ಚ; ಗೃಹ ಲಕ್ಷ್ಮಿಯದ್ದೇ ಸಿಂಹಪಾಲು, ಹೆಚ್ಚುವರಿ ಖರ್ಚಿಗೆ ಕಾರಣಗಳೇ ಇಲ್ಲ, ಸಿಎಜಿ ಆಕ್ಷೇಪ

ಬೆಂಗಳೂರು;  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯು 2024-25ನೇ ಸಾಲಿನಲ್ಲಿ ...

2,298 ಕೋಟಿ ರು ಮೊತ್ತದ ಬಿಲ್‌ ಬಾಕಿ; 276 ಕಾಮಗಾರಿ ಅಪೂರ್ಣ, ಬೊಕ್ಕಸ ಬರಿದಾಯಿತೇ?

ಬೆಂಗಳೂರು; ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಕೈಗೆತ್ತಿಕೊಂಡಿದ್ದ  ಕಾಮಗಾರಿಗಳು ನಿಗದಿತ ಅವಧಿಯಲ್ಲಿ...

ಪುಸ್ತಕಗಳ ಖರೀದಿಯಲ್ಲಿ ವಂಚನೆ, ಭ್ರಷ್ಟಾಚಾರ ಆರೋಪ;ಎಚ್ ಟಿ ಪೋತೆ ಅವರ ವಿರುದ್ಧ ಕ್ರಮಕ್ಕೆ ಮೀನಮೇಷ

ಬೆಂಗಳೂರು;  ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ...

Related Articles

Popular Categories

error: Content is protected !!