ಬೆಂಗಳೂರು; ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆ ಕಲ್ಬುರ್ಗಿಯ ವಿವಿಧೆಡೆ ಜವಾಹರ್ ಲಾಲ್ ನೆಹರು, ಮಹಾತ್ಮಗಾಂಧಿ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಮೂರ್ತಿ ಸ್ಥಾಪಿಸಲು ಕಾನೂನು ಇಲಾಖೆಯು ವ್ಯಕ್ತಪಡಿಸಿದ್ದ ಅಸಮ್ಮತಿಯ ಅಭಿಪ್ರಾಯವನ್ನು ಕಸದ ಬುಟ್ಟಿಗೆ ಎಸೆದಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಮೆ, ಮೂರ್ತಿಗಳನ್ನು ಸ್ಥಾಪಿಸುವ ಸಂಬಂಧ ಸರ್ವೋಚ್ಛ ನ್ಯಾಯಾಲಯವು 2017ರಲ್ಲಿ ನೀಡಿದ್ದ ತೀರ್ಪನ್ನು ಉಲ್ಲೇಖಿಸಿರುವ ಕಾನೂನು ಇಲಾಖೆಯು, ಕಲ್ಬುರ್ಗಿ ನಗರದ ವಿವಿಧೆಡೆ ಪ್ರತಿಮೆ, ಮೂರ್ತಿಗಳನ್ನು ಸ್ಥಾಪಿಸಲು ಅವಕಾಶವಿಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು. ಆದರೆ ನಗರಾಭಿವೃದ್ದಿ ಇಲಾಖೆಯು ಇದನ್ನು ಲೆಕ್ಕಿಸದೆಯೇ ನೆಹರು, ಮಹಾತ್ಮ ಗಾಂಧಿ, ಇಂದಿರಾ, ರಾಜೀವ್ ಗಾಂಧಿ ಪ್ರತಿಮೆ ಸ್ಥಾಪಿಸಲು ಮುಂದಾಗಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಲು ರಾಜ್ಯ ಕಾಂಗ್ರೆಸ್ ಸರ್ಕಾರವು ಮುಂದಾಗಿದೆ. ಇದರ ಬೆನ್ನಲ್ಲೇ ಮಹಾತ್ಮ ಗಾಂಧಿ ಪ್ರತಿಮೆ ಸ್ಥಾಪನೆಗೂ ಕಾನೂನು ಇಲಾಖೆಯು ಅಸಮ್ಮತಿ ವ್ಯಕ್ತಪಡಿಸಿರುವ ಅಭಿಪ್ರಾಯವು ಮುನ್ನೆಲೆಗೆ ಬಂದಿದೆ.
ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮುಂಬರುವ ದಿನಗಳಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಗುವ ಸಾಧ್ಯತೆಗಳಿವೆ.
ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯು ಸಚಿವ ಸಂಪುಟಕ್ಕೆ ಕಡತ (ಸಂಖ್ಯೆ; ನಅಇ 82 ಎಸಿಜಿ (2025 (ಇ) ಮಂಡಿಸಿದೆ. ಸಚಿವ ಸಂಪುಟದ ಟಿಪ್ಪಣಿಯ ಗೌಪ್ಯ ಹಾಳೆಗಳು ‘ದಿ ಫೈಲ್’ಗೆ ಲಭ್ಯವಾಗಿದೆ.
ಸಚಿವ ಸಂಪುಟದ ಪ್ರಸ್ತಾವನೆಯಲ್ಲೇನಿದೆ?
ಕಲ್ಬುರ್ಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಹಾತ್ಮ ಗಾಂಧಿ, ಪಾಲಿಕೆಯ ಹಳೆಯ ಕಚೇರಿ ಆವರಣದಲ್ಲಿ ಇಂದಿರಾಗಾಂಧಿ, ಕಲ್ಬುರ್ಗಿ ನಗರದ ಗಂಜ ರಸ್ತೆಯಲ್ಲಿ ಜವಾಹರಲಾಲ್ ನೆಹರು, ರಿಂಗ್ ರಸ್ತೆಯಲ್ಲಿ ರಾಜೀವ್ ಗಾಂಧಿ ಪಾರ್ಕ್‌ನಲ್ಲಿ ರಾಜೀವ್ ಗಾಂಧಿ ಮೂರ್ತಿ ಸ್ಥಾಪಿಸಲು ಕಲ್ಬುರ್ಗಿ ಮಹಾನಗರ ಪಾಲಿಕೆಯು ಮುಂದಾಗಿತ್ತು. ಈ ಸಂಬಂಧ ಮಹಾನಗರಪಾಲಿಕೆಯಲ್ಲಿ 2025ರ ಜೂನ್ 26, 30 ಮತ್ತು ಜುಲೈ 16ರಂದು ನಡೆದಿದ್ದ ಸಾಮಾನ್ಯ ಸಭೆಯಲ್ಲಿಯೂ ನಿರ್ಣಯ ಕೈಗೊಂಡಿರುವುದು ಪ್ರಸ್ತಾವದಿಂದ ತಿಳಿದು ಬಂದಿದೆ.
ಸ್ಥಳ ಬದಲಾವಣೆಯ ನಿರ್ಣಯ
ಆದರೆ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷರು ಸ್ಥಳಗಳನ್ನು ಬದಲಾವಣೆ ಮಾಡಲು 2025ರ ಅಕ್ಟೋಬರ್ 29ರಂದು ಮತ್ತೊಂದು ಮನವಿ ಸಲ್ಲಿಸಿದ್ದರು. ಈ ಕೋರಿಕೆ ಪರಿಗಣಿಸಿದ್ದ ಕಲ್ಬುರ್ಗಿ ಮಹಾನಗರಪಾಲಿಕೆಯು 2025ರ ಡಿಸೆಂಬರ್ 11ರಂದು ನಡೆದಿದ್ದ ಸಾಮಾನ್ಯ ಸಭೆಯಲ್ಲಿ ಸ್ಥಳ ಬದಲಾವಣೆಗೆ ನಿರ್ಣಯ (ನಿರ್ಣಯ ಸಂಖ್ಯೆ; 124ರ ಕ್ರಮ ಸಂಖ್ಯೆ 7, 8, 9 ಮತ್ತು 10) ಕೈಗೊಂಡಿತ್ತು. ಈ ನಿರ್ಣಯಕ್ಕೆ ಕಲ್ಬುರ್ಗಿ ಮಹಾನಗರಪಾಲಿಕೆಯು ಸಾಮಾನ್ಯ ಸಭೆಯ ಮಂಜೂರಾತಿ ನಿರೀಕ್ಷಿಸಿ ಆಡಳಿತಾತ್ಮಕ ಅನುಮೋದನೆಯನ್ನು ನೀಡಿತ್ತು.
ಈ ನಿರ್ಣಯದ ಪ್ರಕಾರ ಕಲ್ಬುರ್ಗಿ ನಗರದ ಇಂದಿರಾ ಗಾಂಧಿ ಸ್ಮಾರಕ ಭವನ (ಟೌನ್ ಹಾಲ್) ದಲ್ಲಿ ಈಗಾಗಲೇ ಸ್ಥಾಪಿಸಿರುವ ಮಹಾತ್ಮ ಗಂಧಿ ಅವರ ಮೂರ್ತಿಯನ್ನು ಅಭಿವೃದ್ಧಿಗೊಳಿಸುವುದು, ಕಲ್ಬುರ್ಗಿ ಮಹಾನಗರಪಾಲಿಕೆಯ ಹಳೆಯ ಕೇಂದ್ರ ಕಚೇರಿಯ ಮುಂಭಾಗದಲ್ಲಿ ಇಂದಿರಾ ಗಾಂಧಿ ಮೂರ್ತಿ ಸ್ಥಾಪಿಸುವುದು ಮತ್ತು ಗಂಜ ರಸ್ತೆಯಲ್ಲಿರುವ ಎಪಿಎಂಸಿ ಯಾರ್ಡ್‌ನಲ್ಲಿ ಪಂಡಿತ್ ಜವಾಹರ ಲಾಲ್ ನೆಹರು ಮೂರ್ತಿ ಸ್ಥಾಪನೆ, ಇದೇ ಗಂಜ್ ರಸ್ತೆಯಲ್ಲಿರುವ ಕೆಎಂಎಫ್ ಕಾಂಪೌಂಡ್ ಬಳಿ ರಾಜೀವ್ ಗಾಂಧಿ ಮೂರ್ತಿ ಸ್ಥಾಪಿಸಲು ನಿರ್ಣಯ ಕೈಗೊಂಡಿರುವುದು ಸಚಿವ ಸಂಪುಟದ ಟಿಪ್ಪಣಿಯ ರಹಸ್ಯ ಹಾಳೆಗಳಿಂದ ತಿಳಿದು ಬಂದಿದೆ.
ಕಲ್ಬುರ್ಗಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಕೈಗೊಂಡಿದ್ದ ನಿರ್ಣಯ ಆಧರಿಸಿ ಕಲ್ಬುರ್ಗಿ ಜಿಲ್ಲಾಧಿಕಾರಿ ಅವರು ಅನುಮೋದನೆ ಪಡೆಯಲು ಪೌರಾಡಳಿತ ನಿರ್ದೇಶನಾಲಯಕ್ಕೆ 2025ರ ಡಿಸೆಂಬರ್ 16ರಂದು ಪ್ರಸ್ತಾವ ಸಲ್ಲಿಸಿದ್ದರು. ಈ ಪ್ರಸ್ತಾವವನ್ನು (DMA/DEV/STNA/38/2025 e-2010341) ಪರಿಶೀಲಿಸಿದ್ದ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು, ತಿರಸ್ಕರಿಸಿದ್ದರು.
ತಿರಸ್ಕರಿಸಲು ಕಾರಣಗಳೇನು?
2009ರ ಜುಲೈ 3ರಂದು ನಗರಾಭಿವೃದ್ಧಿ ಇಲಾಖೆಯು ಹೊರಡಿಸಿದ್ದ ಅಧಿಸೂಚನೆ (ಸಂಖ್ಯೆ; ನಅಇ 132 ಎಂಎನ್‌ಜೆ 2006, ದಿನಾಂಕ 03.07.2009) ಮತ್ತು ಉಚ್ಛ ನ್ಯಾಯಾಲಯವು (ರಿಟ್ ಅರ್ಜಿ ಸಂಖ್ಯೆ; 49960/2017) ಮತ್ತು 2021ರ ಸೆ.7ರಂದು ಪೌರಾಡಳಿತ ನಿರ್ದೇಶನಾಲಯವು ಹೊರಡಿಸಿದ್ದ ಸುತ್ತೋಲೆ (ಸಂಖ್ಯೆ ಪೌನಿ/ಜಿಪಿಎಸ್/ಪ್ರತಿಮೆ/ನಾಮ/ಸಿಆರ್/2012-13 ದಿನಾಂಕ 12.12.2012) ಅನ್ವಯ ಸಾರ್ವಜನಿಕ ಸ್ಥಳಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳನ್ನು ಸ್ಥಾಪಿಸಲು ಅವಕಾಶವಿಲ್ಲ,’ ಎಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು.
ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯು ಕಾನೂನು ಇಲಾಖೆಯು ಅಭಿಪ್ರಾಯ ಕೋರಿತ್ತು. ನಗರಾಭಿವೃದ್ಧಿ ಇಲಾಖೆಯು ಸಲ್ಲಿಸಿದ್ದ ಪ್ರಸ್ತಾವವನ್ನು ಪರಿಶೀಲಿಸಿರುವ ಕಾನೂನು ಇಲಾಖೆಯು 2026ರ ಜನವರಿ 1ರಂದು ತನ್ನ (ಲಾ/ಅಭಿಪ್ರಾಯ/907/2025- ದಿನಾಂಕ 01.01.2026) ಅಭಿಪ್ರಾಯ ನೀಡಿದೆ. ಇದರ ಪ್ರತಿಯೂ ‘ದಿ ಫೈಲ್’ಗೆ ಲಭ್ಯವಾಗಿದೆ.
ಕಾನೂನು ಅಭಿಪ್ರಾಯವೇನು?
‘ಸಾರ್ವಜನಿಕ ಸ್ಥಳಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳನ್ನು ಸ್ಥಾಪಿಸುವುದನ್ನು ಸರ್ವೋಚ್ಛ ಮತ್ತು ಉಚ್ಛ ನ್ಯಾಯಾಲಯವು ನಿರ್ಬಂಧಿಸಿ ತೀರ್ಪುಗಳನ್ನು ನೀಡಿದೆ. 2009ರ ಡಿಸೆಂಬರ್ 7ರಂದು (ಎಸ್‌ಎಲ್‌ಪಿ (ಕ್ರಿಮಿನಲ್ ) 8519/2006 ) ಆದೇಶ ನೀಡಿದೆ. ಹಾಗೆಯೇ ರಿಟ್ ಅರ್ಜಿ ಪ್ರಕರಣವೊಂದರಲ್ಲಿ ( 49960/2017) 2021ರ ಸೆ.7ರಂದು ನೀಡಿದ್ದ ಆದೇಶದ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಮೆಗಳನ್ನು ಸ್ಥಾಪಿಸುವುದನ್ನು ನಿರ್ಬಂಧಿಸಿದೆ ಎಂದು ಕಾನೂನು ಇಲಾಖೆಯು ಈ ತೀರ್ಪುಗಳನ್ನು ತನ್ನ ಅಭಿಪ್ರಾಯದಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

ಸಾರ್ವಜನಿಕ ರಸ್ತೆಗಳು, ಪಾದಚಾರಿ ಮಾರ್ಗಗಳು, ಪಕ್ಕದ ರಸ್ತೆಗಳು ಮತ್ತು ಇತರ ಸಾರ್ವಜನಿಕ ಉಪಯುಕ್ತ ಸ್ಥಳಗಳಲ್ಲಿ ಯಾವುದೇ ಪ್ರತಿಮೆ ಸ್ಥಾಪನೆ ಅಥವಾ ರಚನೆಯ ನಿರ್ಮಾಣಕ್ಕೆ ಯಾವುದೇ ಅನುಮತಿ ನೀಡಬಾರದು ಎಂದು ಸರ್ವೋಚ್ಛ ನ್ಯಾಯಾಲಯವು ವಿಶೇಷ ಅರ್ಜಿ (ಸಿವಿಲ್ ಸಂಖ್ಯೆ; 8519/2006, ದಿನಾಂಕ 18.01.2013, ಮಧ್ಯಂತರ ಅರ್ಜಿ 10/2012) ರಲ್ಲಿ ನೀಡಿರುವ ಆದೇಶವನ್ನು ಉಲ್ಲೇಖಿಸಿದೆ.

ಅಲ್ಲದೇ ಸರ್ವೋಚ್ಛ ನ್ಯಾಯಾಲಯ ಮತ್ತು ಉಚ್ಛ ನ್ಯಾಯಾಲಯದ ಆದೇಶಗಳ ಅನುಸಾರ ಕಲ್ಬುರ್ಗಿ ನಗರದ ವಿವಿಧ ಸ್ಥಳಗಳಲ್ಲಿ ಮಹಾತ್ಮ ಗಾಂಧಿ, ಇಂದಿರಾಗಾಂಧಿ, ಜವಾಹರ ಲಾಲ್ ನೆಹರು ಮತ್ತು ರಾಜೀವ್ ಗಾಂಧಿ ಅವರ ಮೂರ್ತಿಗಳನ್ನು ಸ್ಥಾಪಿಸಲು ಅವಕಾಶವಿರುವುದಿಲ್ಲ,’ ಎಂದು ಸ್ಪಷ್ಟ ಅಭಿಪ್ರಾಯ ನೀಡಿರುವುದು ಗೊತ್ತಾಗಿದೆ.
ಸರ್ಕಾರದ ಮೆಟ್ಟಿಲೇರಿದ ನಗರಾಭಿವೃದ್ಧಿ ಇಲಾಖೆ
ಕಾನೂನು ಇಲಾಖೆಯು ಸ್ಪಷ್ಟವಾಗಿ ಅಭಿಪ್ರಾಯ ನೀಡಿದ ನಂತರವೂ ನಗರಾಭಿವೃದ್ಧಿ ಇಲಾಖೆಯು ಸಚಿವ ಸಂಪುಟಕ್ಕೆ ಕಡತ ಮಂಡಿಸಿದೆ. ಸರ್ವೋಚ್ಛ ನ್ಯಾಯಾಲಯ ಮತ್ತು ಹೈಕೋರ್ಟ್ ನೀಡಿರುವ ಆದೇಶಗಳ ಪ್ರಕಾರ ಸೂಕ್ತ ನಿರ್ಣಯದಂತೆ ಈ ಪ್ರಸ್ತಾವವನ್ನು ತಿರಸ್ಕರಿಸಬಹುದು ಅಥವಾ ಕಂಡಿಕೆ 7- 7 (ಎ) ಕುರಿತು ಸೂಕ್ತ ನಿರ್ಣಯ ಕೈಗೊಳ್ಳಬಹುದು ಎಂದು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಕಡತದಲ್ಲಿ ಕೋರಿರುವುದು ತಿಳಿದು ಬಂದಿದೆ.
ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಗಳಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣಕ್ಕೆ ಸ್ಥಳ ಒದಗಿಸಲು ಅಸಮ್ಮತಿ ವ್ಯಕ್ತಪಡಿಸಿದ್ದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯು ಇದೀಗ ತುಮಕೂರು ಮಹಾನಗರಪಾಲಿಕೆ ಆವರಣದ ಕೃಷ್ಣ ರಾಜೇಂದ್ರ ಪುರಭವನದ ಮುಂಭಾಗ ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣ ಮಾಡುವ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು.
ತುಮಕೂರು ಮಹಾನಗರಪಾಲಿಕೆ ಆವರಣದ ಕೃಷ್ಣ ರಾಜೇಂದ್ರ ಪುರಭವನದ ಮುಂಭಾಗದದಲ್ಲಿ ಸಂವಿಧಾನಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ನಿರ್ಮಾಣ ಮಾಡುವ ಸಂಬಂಧ ನಗರಾಭಿವೃದ್ದಿ ಇಲಾಖೆಯು ಕಾನೂನು ಇಲಾಖೆಯ ಅಭಿಪ್ರಾಯ ಕೋರಿತ್ತು. ಆದರೀಗ ಕಾನೂನು ಇಲಾಖೆಯು ನಗರಾಭಿವೃದ್ಧಿ ಇಲಾಖೆಯ ಪ್ರಸ್ತಾವನೆಗೆ ಸಹಮತಿ ವ್ಯಕ್ತಪಡಿಸಿರಲಿಲ್ಲ.
ಮಹಾನಗರಪಾಲಿಕೆ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪನೆ; ಸಹಮತಿಸದ ಕಾನೂನು ಇಲಾಖೆ
ಆದರೂ ಸಚಿವ ಸಂಪುಟದಲ್ಲಿ ಈ ಪ್ರಸ್ತಾವನೆಯನ್ನು ಮಂಡಿಸಿದ್ದ ನಗರಾಭಿವೃದ್ಧಿ ಇಲಾಖೆಯು ಅನುಮತಿ ಪಡೆದಿತ್ತು.
ಅದೇ ರೀತಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯಲ್ಲಿನ ಶಹಾಪುರ ಗ್ರಾಮಾಂತರ ಹಳೇ ಬಸ್ ನಿಲ್ದಾಣದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣ ಮತ್ತು ಇದಕ್ಕೆ ಸ್ಥಳ ಒದಗಿಸುವ ಸಂಬಂಧ ಸಾರಿಗೆ ಇಲಾಖೆಯ ಪ್ರಸ್ತಾವನೆಯನ್ನೂ ಕಾನೂನು ಇಲಾಖೆಯು ತಿರಸ್ಕರಿಸಿತ್ತು.
ಸರ್ಕಾರಿ ಬಸ್ ನಿಲ್ದಾಣದಲ್ಲಿ ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ಕಾನೂನು ಇಲಾಖೆ ಅಸಮ್ಮತಿ
ಆದರೆ ಈ ಪ್ರಕರಣದಲ್ಲಿಯೂ ಸಾರಿಗೆ ಇಲಾಖೆಯು ಸಚಿವ ಸಂಪುಟದ ಮುಂದೆ ಪ್ರಸ್ತಾವ ಮಂಡಿಸಿ, ಅನುಮತಿ ಪಡೆದಿತ್ತು. ಈ ಕುರಿತು ‘ದಿ ಫೈಲ್’ ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.









