ವಿಪತ್ತು ಪರಿಹಾರಕ್ಕೆ 19,644.78 ಕೋಟಿ; ಹಣಕಾಸಿನ ದಾಖಲೆಗಳನ್ನೇ ನಿರ್ವಹಿಸಿಲ್ಲ, ಉಲ್ಲಂಘನೆಯೂ ತಪ್ಪಲಿಲ್ಲ

ಬೆಂಗಳೂರು; ರಾಜ್ಯದಲ್ಲಿ ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರವು  2017-18 ರಿಂದ 2022-23ರವರೆಗೆ ಬಿಡುಗಡೆಯಾಗಿದ್ದ  ಒಟ್ಟು  19,644.78 ಕೋಟಿ ರು ಗಳಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯು  ಹಣಕಾಸಿನ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ.

 

ಹೆಚ್ಚಿನ ಮೌಲ್ಯದ ಹಣಕಾಸಿನ ವಹಿವಾಟುಗಳನ್ನು ನಡೆಸುತ್ತಿದ್ದರೂ ಸಹ ಹಣಕಾಸು  ದಾಖಲೆಗಳನ್ನು ಕ್ರಮಬದ್ಧವಾಗಿ ನಿರ್ವಹಿಸಿಲ್ಲ.  ಅಲ್ಲದೇ ಹಣಕಾಸು ಔಚಿತ್ಯದ ನಿಯಮಗಳನ್ನು  ಸಂಪೂರ್ಣವಾಗಿ ಉಲ್ಲಂಘಿಸಿರುವುದನ್ನು  ಭಾರತದ ಲೆಕ್ಕ ನಿಯಂತ್ರಕರು ಮತ್ತು ಪ್ರಧಾನ ಮಹಾಲೇಖಪಾಲರು ಪತ್ತೆ ಹಚ್ಚಿದ್ದಾರೆ.

 

2025ರ ಡಿಸೆಂಬರ್‍‌ನಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆಯಾಗಿರುವ  ಸಿಎಜಿ ಲೆಕ್ಕ ಪರಿಶೋಧನೆ ವರದಿಯು, ಕರ್ನಾಟಕದ ವಿಪತ್ತು ನಿರ್ವಹಣೆಯಲ್ಲಿನ ಹಣಕಾಸಿನ ದುರಾಡಳಿತವನ್ನು ಅನಾವರಣಗೊಳಿಸಿದೆ.

 

ಸಿಎಜಿಯು ಲೆಕ್ಕ ಪರಿಶೋಧನೆ ನಡೆಸಿದ್ದ ಅವಧಿಯಲ್ಲಿ ಸಿದ್ದರಾಮಯ್ಯ, ಹೆಚ್‌ ಡಿ ಕುಮಾರಸ್ವಾಮಿ, ಬಿ ಎಸ್‌ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು.

 

ಈ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

2017-18ರಿಂದ 2022-23ರವರೆಗಿನ ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಎಸಗಿರುವ ಲೋಪ ಮತ್ತು ಉಲ್ಲಂಘನೆಗಳ ಪಟ್ಟಿಯನ್ನು ವರದಿಯಲ್ಲಿ  ಒದಗಿಸಿದೆ. ಅಲ್ಲದೇ ಈ ಆರೂ ವರ್ಷಗಳಲ್ಲಿ ವಿಪತ್ತು ನಿರ್ವಹಣೆಗೆ ಸ್ವೀಕರಿಸಿರುವ ಅನುದಾನ,  ಬಿಡುಗಡೆಯಾದ ಅನುದಾನ, ಮಾಡಿರುವ ವೆಚ್ಚದ ಕುರಿತು ಆರ್ಥಿಕ ದಾಖಲೆಗಳನ್ನು ಸಿಎಜಿಗೆ ಕಂದಾಯ ಇಲಾಖೆಯು ಒದಗಿಸಿರಲಿಲ್ಲ.

 

 

‘ನಿಗದಿತ ಆರ್ಥಿಕ ದಾಖಲೆಗಳ ಅನುಪಸ್ಥಿತಿಯಲ್ಲಿ ಲೆಕ್ಕ ಪರಿಶೋಧನೆಗೆ ಲಭ್ಯವಿರುವ ಆರ್ಥಿಕ ಹೇಳಿಕೆಗಳಲ್ಲಿ ಸ್ವೀಕೃತಿಗಳು ಮತ್ತು ಖರ್ಚುಗಳ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಲೆಕ್ಕಪರಿಶೋಧನೆಗೆ ಸಾಧ್ಯವಾಗಲಿಲ್ಲ,’ ಎಂದು ಸಿಎಜಿಯು ಅಭಿಪ್ರಾಯಿಸಿರುವುದು ವರದಿಯಿಂದ ತಿಳಿದು ಬಂದಿದೆ.

 

ವಿಪತ್ತು ನಿರ್ವಹಣೆಗೆ ಸ್ವೀಕೃತವಾದ ಅನುದಾನವೆಷ್ಟು?

 

2017-18ರಲ್ಲಿ ವಿಪತ್ತು ನಿರ್ವಹಣೆಯ ಖಾತೆಯಲ್ಲಿ ಆರಂಭಿಕ ಶಿಲ್ಕಿನ ರೂಪದಲ್ಲಿ 1235.52 ಕೋಟಿ ರು ಇತ್ತು. ಎನ್‌ಡಿಆರ್‍‌ಎಫ್‌ನಿಂದ 913.04 ಕೋಟಿ ರು, ಎಸ್‌ಡಿಆರ್‍‌ಎಫ್‌ಗೆ ಕೇಂದ್ರ ಸರ್ಕಾರವು 228.75 ಕೋಟಿ ರು, ರಾಜ್ಯ ಸರ್ಕಾರವು 76.25 ಕೋಟಿ, ರಾಜ್ಯದಿಂದ ಹೆಚ್ಚುವರಿ ಅನುದಾನದ ರೂಪದಲ್ಲಿ 37.19 ಕೋಟಿ ರು ಇತ್ತು. ಈ ಪೈಕಿ ಒಟ್ಟು 2,490.75 ಕೋಟಿ ರು ಬಿಡುಗಡೆಯಾಗಿತ್ತು. ಇದರಲ್ಲಿ ಶೇ.97ರಷ್ಟು ಅಂದರೇ 2,411.61 ಕೋಟಿ ರು ವೆಚ್ಚ ಮಾಡಿತ್ತು.

 

2018-19ರಲ್ಲಿ ಎನ್‌ಡಿಆರ್‍‌ಎಫ್‌ನಿಂದ 959.84 ಕೋಟಿ ರು ಅನುದಾನ ಸ್ವೀಕೃತವಾಗಿತ್ತು. ಕೇಂದ್ರ ಸರ್ಕಾರವು ಎಸ್‌ಡಿಆರ್‍‌ಎಫ್‌ಗೆ 288,.00 ಕೋಟಿ ರು., ರಾಜ್ಯ ಸರ್ಕಾರವು  32.00 ಕೋಟಿ ರು ಅನುದಾನ ನೀಡಿತ್ತು. ಅಲ್ಲದೇ ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ 400 ಕೋಟಿ ರು ಅನುದಾನ ಒದಗಿಸಿತ್ತು. ಇದರಲ್ಲಿ ಒಟ್ಟಾರೆ 1,679.84 ಕೋಟಿ ರು ಬಿಡುಗಡೆಯಾಗಿತ್ತು. ಈ ಪೈಕಿ 1,207.22 ಕೋಟಿ ರು ವೆಚ್ಚವಾಗಿತ್ತು.

 

2019-20ರಲ್ಲಿ ಆರಂಭಿಕ ಶಿಲ್ಕಿನಲ್ಲಿ 434.62 ಕೋಟಿ ರು ಇತ್ತು. ಎನ್‌ಡಿಆರ್‍‌ಎಫ್‌ನಿಂದ 2,744.26 ಕೋಟಿ ರು, ಎಸ್‌ಡಿಆರ್‍‌ಎಫ್‌ಗೆ ಕೇಂದ್ರ ಸರ್ಕಾರವು 204.00 ಕೋಟಿ, ರಾಜ್ಯ ಸರ್ಕಾರವು 132.00 ಕೋಟಿ ರು ನೀಡಿತ್ತು. ಅಲ್ಲದೇ ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ 1,500 ಕೋಟಿ ರು ಒದಗಿಸಿತ್ತು. ಈ ಪೈಕಿ 5,014.88 ಕೋಟಿ ರು ಬಿಡುಗಡೆಯಾಗಿದ್ದರೇ ಇದರಲ್ಲಿ 4,899.52 ಕೋಟಿ ವೆಚ್ಚವಾಗಿತ್ತು.

 

 

2020-21ರಲ್ಲಿ ಎನ್‌ಡಿಆರ್‍‌ಎಫ್‌ನಿಂದ 577.84 ಕೋಟಿ ರು ಅನುದಾನ ಸ್ವೀಕೃತವಾಗಿದ್ದರೇ ಎಸ್‌ಡಿಆರ್‍‌ಎಫ್‌ಗೆ ಕೇಂದ್ರ ಸರ್ಕಾರವು 632.40 ಕೋಟಿ ರು, ರಾಜ್ಯ ಸರ್ಕಾರವು 210.80 ಕೋಟಿ ರು ನೀಡಿತ್ತು. ಎಸ್‌ಡಿಎಂಎಫ್‌ಗೆ ಕೇಂದ್ರ ಸರ್ಕಾರವು 158.20 ಕೊಟಿ, ರಾಜ್ಯ ಸರ್ಕಾರವು 52.60 ಕೋಟಿ ರು ನೀಡಿತ್ತು. ಅಲ್ಲದೇ ರಾಜ್ಯ ಸರ್ಕಾರವು ಇದೇ ಅವಧಿಗೆ ಹೆಚ್ಚುವರಿಯಾಗಿ 608.13 ಕೋಟಿ ರು ನೀಡಿತ್ತು. ಇದರಲ್ಲಿ ಬಿಡುಗಡೆಯಾಗಿದ್ದ  2,239.97 ಕೋಟಿ ರು ಪೈಕಿ 2,238.37 ಕೋಟಿ ರು ವೆಚ್ಚವಾಗಿತ್ತು.

 

2021-22ರಲ್ಲಿ ಎನ್‌ಡಿಆರ್‍‌ಎಫ್‌ನಿಂದ 1,734.3 ಕೋಟಿ ರು ಅನುದಾನ ಸ್ವೀಕೃತವಾಗಿದ್ದರೇ ಎಸ್‌ಡಿಆರ್‍‌ಎಫ್‌ಗೆ ಭಾರತ ಸರ್ಕಾರವು 632.40 ಕೋಟಿ, ರಾಜ್ಯ ಸರ್ಕಾರವು 210.80 ಕೋಟಿ ರು., ಎಸ್‌ಡಿಎಂಎಫ್‌ಗೆ ಕೇಂದ್ರ ಸರ್ಕಾರವು 158.20 ಕೋಟಿ, ರಾಜ್ಯ ಸರ್ಕಾರವು 52.60 ಕೋಟಿ ರು ನೀಡಿತ್ತು. ಅಲ್ಲದೆ ಇದೇ ವರ್ಷಕ್ಕೆ ರಾಜ್ಯ ಸರ್ಕಾರವು 2,426.27 ಕೋಟಿ ರು ಹೆಚ್ಚುವರಿಯಾಗಿ ನೀಡಿತ್ತು. ಬಿಡುಗಡೆಯಾಗಿದ್ದ 5,214.57  ಕೋಟಿ ರು ಪೈಕಿ 5,003.75 ಕೋಟಿ ರು ವೆಚ್ಚವಾಗಿತ್ತು.

 

2022-23ರಲ್ಲಿ ಎನ್‌ಡಿಆರ್‍‌ಎಫ್‌ನಿಂದ 939.83 ಕೋಟಿ ರು, ಎಸ್‌ಡಿಆರ್‍‌ಎಫ್‌ ನಿಧಿಗೆ ಕೇಂದ್ರ ಸರ್ಕಾರವು 664.00 ಕೋಟಿ, ರಾಜ್ಯ ಸರ್ಕಾರವು 221.33 ಕೋಟಿ ರು ನೀಡಿತ್ತು.   ಎಸ್‌ಡಿಎಂಎಫ್‌ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ಹಣ ಬಿಡುಗಡೆ ಮಾಡಿರಲಿಲ್ಲ. ಬದಲಿಗೆ ಹೆಚ್ಚುವರಿಯಾಗಿ 1,179.61 ಕೋಟಿ ರು ಒದಗಿಸಿತ್ತು. ಬಿಡುಗಡೆಯಾಗಿದ್ದ 3,004.77 ಕೋಟಿ ರು ಪೈಕಿ  2,939.41 ಕೋಟಿ ರು ವೆಚ್ಚ ಮಾಡಿತ್ತು.

 

ಒಟ್ಟಾರೆಯಾಗಿ ಎನ್‌ಡಿಆರ್‍‌ಎಫ್‌ನಿಂದ ಈ ಆರೂ ವರ್ಷಗಳಲ್ಲಿ 7,869.11 ಕೋಟಿ ರು ಅನುದಾನ ಸ್ವೀಕೃತವಾಗಿತ್ತು. ಎಸ್‌ಡಿಆರ್‍‌ಎಫ್‌ ನಿಧಿಗೆ ಕೇಂದ್ರ ಸರ್ಕಾರವು 2,649.55 ಕೋಟಿ ರು., ರಾಜ್ಯ ಸರ್ಕಾರವು 883.18 ಕೊಟಿ ರು., ಎಸ್‌ಡಿಎಂಎಫ್‌ಗೆ ಕೇಂದ್ರ ಸರ್ಕಾರವು 316.40 ಕೋಟಿ, ರಾಜ್ಯ ಸರ್ಕಾರವು 105.20 ಕೋಟಿ ರು ನೀಡಿತ್ತು. ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ ಒಟ್ಟಾರೆಯಾಗಿ 6,151.20 ಕೋಟಿ ರು ಅನುದಾನ ಒದಗಿಸಿತ್ತು.  ಒಟ್ಟು ಬಿಡುಗಡೆಯಾಗಿದ್ದ  19,644.78 ಕೋಟಿ ರು ಪೈಕಿ 18,699.88 ಕೋಟಿ ರು ವೆಚ್ಚ ಮಾಡಿತ್ತು ಎಂದು ಸಿಎಜಿಯು ತನ್ನ ವರದಿಯಲ್ಲಿ ಪಟ್ಟಿ ನೀಡಿದೆ.

 

ಬಿಡುಗಡೆಯಾಗದ 210.80 ಕೋಟಿ 

 

ಎಸ್‌ಡಿಎಂಎಫ್‌ ಅಡಿಯಲ್ಲಿ ರಾಜ್ಯ ಸರ್ಕಾರವು (2020-21) ಭಾರತ ಸರ್ಕಾರದಿಂದ ಮಾರ್ಗಸೂಚಿಗಳನ್ನು ಸ್ವೀಕರಿಸುವವರೆಗೆ ಅನುದಾನ ಬಳಸದಂತೆ ಸೂಚನೆ ನೀಡಿತ್ತು. ಮತ್ತು ಜಿಲ್ಲಾ ಕಚೇರಿಗಳಿಗೆ 184.50 ಕೊಟಿ ರು.ಗಳನ್ನು (ಲಭ್ಯವಿದ್ದ 210.80 ಕೋಟಿ) ಬಿಡುಗಡೆ ಮಾಡಿತ್ತು. 2021-22ಕ್ಕೆ ಸಂಬಂಧಿಸಿದಂತೆ ಒಟ್ಟು 210.80 ಕೋಟಿ ರು.ಗಳ ನಿಧಿಯನ್ನು ಅನುಷ್ಠಾನ ಏಜೆನ್ಸಿಗಳಿಗೆ ಬಿಡುಗಡೆಯನ್ನೇ ಮಾಡಿರಲಿಲ್ಲ. ಬದಲಿಗೆ ರಾಜ್ಯ ಸರ್ಕಾರವು ತನ್ನಲ್ಲೇ ಉಳಿಸಿಕೊಂಡಿತ್ತು ಎಂಬುದನ್ನು ಲೆಕ್ಕ ಪರಿಶೋಧನೆಯು ಗಮನಿಸಿದೆ.

 

 

 

ಇದಲ್ಲದೇ 2022-23ರನೇ ಸಾಲಿನಲ್ಲಿ ಹದಿನೈದನೇ ಹಣಕಾಸು ಆಯೋಗದ ಶಿಫಾರಸ್ಸುಗಳ ಪ್ರಕಾರ ಭಾರತ ಸರ್ಕಾರದ ಪಾಲು 166.05 ಕೋಟಿ  ಮತ್ತು ರಾಜ್ಯ ಸರ್ಕಾರದ ಪಾಲು 55.35 ಕೋಟಿ ಸೇರಿ   ಒಟ್ಟು 221.40 ಕೋಟಿ ರು.ಗಳನ್ನು ಎಸ್‌ಡಿಎಂಎಫ್‌ ಅಡಿಯಲ್ಲಿ ಒದಗಿಸಬೇಕಿತ್ತು. ಆದರೂ ಭಾರತ ಸರ್ಕಾರದಿಂದ ಮೀಸಲಿಟ್ಟ ಮೊತ್ತವನ್ನು ಸ್ವೀಕರಿಸಿರಲಿಲ್ಲ. ಹೀಗಾಗಿ ರಾಜ್ಯ ಸರ್ಕಾರವೂ ಸಹ ತನ್ನ ಹೊಂದಾಣಿಕೆ ಪಾಲನ್ನು ಬಿಡುಗಡೆ ಮಾಡಿರಲಿಲ್ಲ. ಹೀಗಾಗಿ ಒಟ್ಟು 421.60 ಕೋಟಿ ರು ನಿಧಿಯ ಲಭ್ಯತೆ ಇದ್ದರೂ ಸಹ ವಿವಿಧ ವಿಪತ್ತುಗಳನ್ನು ಶಮನಗೊಳಿಸುವ ಚಟುವಟಿಕೆಗಳನ್ನು ಕಾರ್ಯಗತಗೊಳಿಸಲಿಲ್ಲ ಎಂದು ಸಿಎಜಿ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

ಖಾತೆಯಲ್ಲಿ ವ್ಯತ್ಯಾಸಗಳು ಪತ್ತೆ

 

2017-18ರಿಂದ 2022-23ರವರೆಗಿನ ಆರಂಭಿಕ ಶಿಲ್ಕು, ಎನ್‌ಡಿಆರ್‍‌ಎಫ್‌, ಎಸ್‌ಡಿಆರ್‍‌ಎಫ್‌, ಎಸ್‌ಡಿಎಂಎಫ್‌, ರಾಜ್ಯದಿಂದ ಹೆಚ್ಚುವರಿಯಾಗಿ ಒದಗಿಸಿದ್ದ ಅನುದಾನದ ರಸೀದಿಗಳು, ವೆಚ್ಚದಲ್ಲಿ ಅಂಕಿ ಅಂಶಗಳಲ್ಲಿ ವ್ಯತ್ಯಾಸಗಳನ್ನು ಸಿಎಜಿಯು ಪತ್ತೆ ಹಚ್ಚಿದೆ. ಇದರ ಪ್ರಕಾರ 2019-20ರ ಅವಧಿಯಲ್ಲಿ ಸಿಡಿಎಂ-ಎಟಿಐಗೆ 4.19 ಕೋಟಿ ರು. ವರ್ಗಾವಣೆ ಮಾಡಬೇಕಿತ್ತು. ಆದರೆ ಇಲಾಖೆಯು 0.13 ಕೋಟಿ ರು ಕಡಿಮೆ ಮಾಡಿ ಕೇವಲ 4.06 ಕೋಟಿ ವರ್ಗಾವಣೆ ಮಾಡಿತ್ತು. ಅದೇ ರೀತಿ 2021-22ರಲ್ಲಿ ಸಿಡಿಎಂ-ಎಟಿಐಗೆ 3 ಕೋಟಿ ರು ಬಿಡುಗಡೆ ಮಾಡಲಾಗಿದೆ ಎಂದು ತೋರಿಸಿದ್ದರೂ ಹಣವನ್ನು ವಾಸ್ತವಿಕವಾಗಿ ವರ್ಗಾಯಿಸಿರಲೇ ಇಲ್ಲ. ಅಲ್ಲದೇ ಹಣಕಾಸಿನ ಅಂಕಿ ಅಂಶಗಳನ್ನು ನಿಯತಕಾಲಿಕವಾಗಿ ಹೊಂದಾಣಿಕೆಯನ್ನೂ ಮಾಡಲಿಲ್ಲ.

 

 

‘ಜಿಲ್ಲೆಗಳು ಅಥವಾ ಏಜೆನ್ಸಿಗಳು ಬಿಡುಗಡೆಯಾದ ಅನುದಾನವನ್ನು ಸೆಳೆದುಕೊಳ್ಳದಿರುವುದರಿಂದ ಅಥವಾ ಕೈ ತಪ್ಪಿ ಹೋಗಿರುವುದರಿಂದ ಅಂಕಿ ಅಂಶಗಳೊಂದಿಗೆ ವ್ಯತ್ಯಾಸದ ಸಾಧ್ಯತೆಯಿದೆ,’ ಎಂದು ಸಿಎಜಿ ವರದಿಯು ಅಭಿಪ್ರಾಯಿಸಿರುವುದು ಗೊತ್ತಾಗಿದೆ.

Your generous support will help us remain independent and work without fear.

Latest News

Related Posts