ಬೆಂಗಳೂರು; ಲೋಕೋಪಯೋಗಿ ಇಲಾಖೆಯಲ್ಲಿ ವಿವಿಧ ಲೆಕ್ಕ ಶೀರ್ಷಿಕೆಗಳಡಿಯಲ್ಲಿ ಗುತ್ತಿಗೆದಾರರಿಗೆ ಪಾವತಿಸಲು ಒಟ್ಟಾರೆ 8,804.45 ಕೋಟಿ ಮೊತ್ತದ ಬಿಲ್ ಬಾಕಿ ಇದೆ. ಕಳೆದ ಮಾರ್ಚ್‌ನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಅಧಿವೇಶನದಲ್ಲಿಯೂ ಇಷ್ಟೇ ಮೊತ್ತದ ಬಿಲ್‌ಗಳನ್ನು ಪಾವತಿಸಲು ಬಾಕಿ ಇದೆ, ಈ ಮೊತ್ತವನ್ನು ಅನುದಾನ ಲಭ್ಯತೆ ಆಧರಿಸಿ ಪಾವತಿಸಲಾಗುವುದು ಎಂದು ಸಚಿವ ಸತೀಶ್ ಜಾರಕಿ ಹೊಳಿ ಅವರು ಹೇಳಿಕೆ ನೀಡಿದ್ದರು.
ಈ ಹೇಳಿಕೆ ನೀಡಿ 10 ತಿಂಗಳಾದ ನಂತರ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿಯೂ 8,804.45 ಕೊಟಿ ಮೊತ್ತದ ಬಿಲ್ ಬಾಕಿ ಇದೆ ಎಂದು ಪುನರುಚ್ಛರಿಸಿದ್ದಾರೆ. ಅಂದರೇ 10 ತಿಂಗಳಾದರೂ ಗುತ್ತಿಗೆದಾರರ ಬಿಲ್ ಪಾವತಿಸಲು ಅನುದಾನ ಲಭ್ಯವಾಗಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ವಿಧಾನ ಪರಿಷತ್ ಸದಸ್ಯ ಡಿ ಎಸ್ ಅರುಣ್ ಅವರು ಕೇಳಿದ್ದ ಪ್ರಶ್ನೆಗೆ 2025ರ ಡಿಸೆಂಬರ್ 10ರಂದು ಉತ್ತರಿಸಿರುವ ಸತೀಶ್ ಜಾರಕಿಹೊಳಿ ಅವರು ಜಿಲ್ಲಾವಾರು 8,804.45 ಕೋಟಿ ಬಿಲ್ ಬಾಕಿ ಇದೆ ಎಂದು ಮಾಹಿತಿ ಒದಗಿಸಿದ್ದಾರೆ.
ವಿಶೇಷವೆಂದರೇ ಸತೀಶ್ ಜಾರಕಿಹೊಳಿ ಅವರ ಉಸ್ತುವಾರಿ ಜಿಲ್ಲೆ ಬೆಳಗಾವಿ, ಚಿಕ್ಕೋಡಿಯಲ್ಲಿಯೇ 709 ಕೋಟಿಯಷ್ಟು ಬಾಕಿ ಇದೆ.
ಬಾಕಿ ಇರುವ ಮೊತ್ತವನ್ನು ಪಾವತಿಸದೇ ಇದ್ದಲ್ಲಿ ರಾಜ್ಯಪಾಲರಿಗೆ ಡಿಸೆಂಬರ್‍ನಲ್ಲಿ ದೂರು ನೀಡಲಾಗುವುದು ಎಂದು ಗುತ್ತಿಗೆದಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಈ ಎಚ್ಚರಿಕೆ ನಡುವೆಯೇ ವಿಧಾನಮಂಡಲದಲ್ಲಿ ಸರ್ಕಾರವು ನೀಡಿರುವ ಉತ್ತರವು ಮುನ್ನೆಲೆಗೆ ಬಂದಿದೆ.

‘ಈ ಬಿಲ್‌ಗಳನ್ನು ಅನುದಾನ ಲಭ್ಯತೆ ಆಧರಿಸಿ ಪಾವತಿಸಲಾಗುವುದು,‘ ಎಂದು ಸತೀಶ್ ಜಾರಕಿಹೊಳಿ ಉತ್ತರಿಸಿದ್ದಾರೆ.
ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಬಾಕಿ?
ಬೆಂಗಳೂರು ಕಟ್ಟಡ ವಿಭಾಗ (ನಂ 1) 433 ಕಾಮಗಾರಿಗಳಲ್ಲಿ 135.56 ಕೋಟಿ ರು., ನಂ 2 ಕಟ್ಟಡಲ ವಿಭಾಗದಲ್ಲಿ 297 ಕಾಮಗಾರಿಗಳಲ್ಲಿ 124 ಕೋಟಿ, ವಿದ್ಯುತ್ ವಿಭಾಗದಲ್ಲಿ 822 ಕಾಮಗಾರಿಗಳಲ್ಲಿ 114.66 ಕೋಟಿ, ಬೆಂಗಳೂರು ವಿಭಾಗದಲ್ಲಿ 434 ಕಾಮಗಾರಿಗಳಲ್ಲಿ 423 ಕೋಟಿ, ರಾಮನಗರ ಜಿಲ್ಲೆಯಲ್ಲಿ 97 ಕಾಮಗಾರಿಗಳಲ್ಲಿ 94.72 ಕೋಟಿ , ರಾಮನಗರ ವಿಶೇಷ ವಿಭಾಗದಲ್ಲಿ 150 ಕಾಮಗಾರಿಗಳಲ್ಲಿ 168 ಕೋಟಿ, ಕೋಲಾರದಲ್ಲಿ 561 ಕಾಮಗಾರಿಗಳಿಗೆ 194 ಕೋಟಿ, ಚಿಕ್ಕಬಳ್ಳಾಪುರದಲ್ಲಿ 247 ಕಾಮಗಾರಿಗಳಿಗೆ 163 ಕೋಟಿ, ತುಮಕೂರಿನಲ್ಲಿ 904 ಕಾಮಗಾರಿಗಳಿಗೆ 312 ಕೋಟಿ ರು ಬಾಕಿ ಇದೆ.

ಮಧುಗಿರಿಯಲ್ಲಿ 618 ಕಾಮಗಾರಿಗಳಿಗೆ 134 ಕೋಟಿ, ಮೈಸೂರು ಜಿಲ್ಲೆಯಲ್ಲಿ 285 ಕಾಮಗಾರಿಗಳಿಗೆ 266.55 ಕೋಟಿ, ಮೈಸೂರು ವಿಶೇಷ ವಿಭಾಗದಲ್ಲಿ 199 ಕಾಮಗಾರಿಗಳಿಗೆ 862 ಕೋಟಿ, ಚಾಮರಾಜನಗರದಲ್ಲಿ 320 ಕಾಮಗಾರಿಗಳಿಗೆ 155 ಕೋಟಿ, ಮಂಡ್ಯದಲ್ಲಿ 940 ಕಾಮಗಾರಿಗಳಿಗೆ 351 ಕೋಟಿ, ಹಾಸನದಲ್ಲಿ 817 ಕಾಮಗಾರಿಗಳಿಗೆ 331 ಕೋಟಿ, ಕೊಡಗು ವಿಭಾಗದ ಮಡಿಕೇರಿಯಲ್ಲಿ 820 ಕಾಮಗಾರಿಗಳಿಗೆ 147 ಕೋಟಿ, ಧಾರವಾಡದಲ್ಲಿ 508 ಕಾಮಗಾರಿಗಳಿಗೆ 315 ಕೋಟಿ, ಗದಗ್ ಜಿಲ್ಲೆಯಲ್ಲಿನ 383 ಕಾಮಗಾರಿಗಳಿಗೆ 155 ಕೋಟಿ ಬಾಕಿ ಇದೆ.
ಕಾರವಾರದಲ್ಲಿ 427 ಕಾಮಗಾರಿಗಳಿಗೆ 141 ಕೋಟಿ, ಶಿರಸಿಯಲ್ಲಿ 424 ಕಾಮಗಾರಿಗಳಿಗೆ 154 ಕೋಟಿ, ಬೆಳಗಾವಿ ಜಿಲ್ಲೆ 577 ಕಾಮಗಾರಿಗಳಿಗೆ 350 ಕೋಟಿ, ಚಿಕ್ಕೋಡಿಯಲ್ಲಿ 642 ಕಾಮಗಾರಿಗಳಿಗೆ 359 ಕೋಟಿ, ವಿಜಯಪುರದಲ್ಲಿ 578 ಕಾಮಗಾರಿಗಳಿಗೆ 382 ಕೋಟಿ ರು ಬಾಕಿ ಪಾವತಿಸಲು ಬಾಕಿ ಉಳಿಸಿಕೊಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ ನಂತರ ಗುತ್ತಿಗೆದಾರರ ಬಾಕಿ ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು 2025ರ ಮಾರ್ಚ್‌ನಲ್ಲಿ ವಿಧಾನ ಪರಿಷತ್ತಿಗೆ ತಿಳಿಸಿದ್ದರು.
ಈ ಕುರಿತು ಜೆಡಿಎಸ್ ಎಂಎಲ್‌ಸಿ ಟಿಎ ಶರವಣ ಅವರು ಪ್ರಶ್ನೆ ಕೇಳಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಹಣ ಬಿಡುಗಡೆ ಮಾಡುವ ಬಗ್ಗೆ ಚರ್ಚಿಸಿರುವ ಗುತ್ತಿಗೆದಾರರಿಗೆ ಸುಮಾರು 9,000 ಕೋಟಿ ರೂ. ಪಾವತಿಸಬೇಕಾಗಿದೆ ಎಂದು ಹೇಳಿದ್ದರು. ಈ ಉತ್ತರದ ಪ್ರಕಾರ ಮಾರ್ಚ್‌ನಿಂದ ಡಿಸೆಂಬರ್‍ವರೆಗೆ ಕೇವಲ 196 ಕೋಟಿ ಮಾತ್ರ ಪಾವತಿಸಿದೆ.
ಲೋಕೋಪಯೋಗಿ ಇಲಾಖೆಗೆ ಬಜೆಟ್‌ನಲ್ಲಿ 10,023 ಕೋಟಿ ರೂ.ಗಳ ಹಂಚಿಕೆಯಾಗಿದೆ. ಇದರಲ್ಲಿ 8,392 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿತ್ತು. ಉಳಿದ ಮೊತ್ತವಾದ ಸುಮಾರು 1,400 ಕೋಟಿ ರೂ.ಗಳನ್ನು ಮಾರ್ಚ್ ಅಂತ್ಯದ ವೇಳೆಗೆ ಬಿಡುಗಡೆ ಮಾಡಲಾಗುವುದು. ಆದಾಗ್ಯೂ, 2021 ಮತ್ತು 2022 ರ ವರ್ಷಗಳಿಗೆ 8,925 ಕೋಟಿ ರೂ.ಗಳ ಬಿಲ್‌ಗಳು ಬಾಕಿ ಉಳಿದಿವೆ ಮತ್ತು ಈ ಕಾಮಗಾರಿಗಳಿಗೆ ಯಾವುದೇ ಬಜೆಟ್ ಹಂಚಿಕೆಯಾಗಿಲ್ಲ ಎಂದು ವಿವರಿಸಿದ್ದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಬಾಕಿ ಉಳಿದಿರುವ ದೊಡ್ಡ ಪ್ರಮಾಣದ ಹಣದ ಸಮಸ್ಯೆ ಇದೆ. ಆದಾಗ್ಯೂ, ಸರ್ಕಾರವು ಬಾಕಿ ಇರುವ ಮೊತ್ತವನ್ನು ಆದ್ಯತೆಯ ಮೇಲೆ ಬಿಡುಗಡೆ ಮಾಡುತ್ತದೆ ಎಂದು ಹೇಳಿದ್ದರು.
ರಾಜ್ಯ ಸರ್ಕಾರ ಡಿ. 1 ರೊಳಗೆ ರೂ. 33,000 ಕೋಟಿ ಮೊತ್ತದ ಬಾಕಿ ಮೊತ್ತವನ್ನು ಪಾವತಿಸಲು ರಾಜ್ಯ ಗುತ್ತಿಗೆದಾರರ ಸಂಘ ಗಡುವನ್ನು ನೀಡಿದೆ. ಇಲ್ಲದಿದ್ದರೆ ಎಲ್ಲಾ ಕಾಮಗಾರಿಗಳನ್ನು ನಿಲ್ಲಿಸುವುದಾಗಿ ಸಂಘ ಬೆದರಿಕೆ ಹಾಕಿತ್ತು.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಂಘವು ಭೇಟಿ ಮಾಡಿತ್ತು. ‘ನಾವು ಎರಡೂವರೆ ವರ್ಷದಿಂದ ಕಾಯುತ್ತಿದ್ದೇವೆ. ಇನ್ನೂ 44 ದಿನ ಕಾಯುತ್ತೇವೆ. ಆ ನಂತರ ನಾವು ಕಾಮಗಾರಿ ಸ್ಥಗಿತಗೊಳಿಸುವುದು ಮಾತ್ರವಲ್ಲದೇ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ಮಧ್ಯಸ್ಥಿಕೆಗೆ ಮನವಿ ಮಾಡುತ್ತೇವೆ,’ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಹೇಳಿದ್ದರು.
ಡಿಸೆಂಬರ್ ನಲ್ಲಿ ರಾಜ್ಯಪಾಲರಿಗೆ ದೂರು
ಗೌರಿ-ಗಣೇಶ ಹಬ್ಬ, ದಸರಾ ಮತ್ತು ದೀಪಾವಳಿ ಸಂದರ್ಭದಲ್ಲಿ ಕಾರ್ಮಿಕರು ತಮ್ಮ ಬಾಕಿ ಹಣ ಹಾಗೂ ಬೋನಸ್‌ಗೆ ಬೇಡಿಕೆ ಇಡುವುದರಿಂದ ಗುತ್ತಿಗೆದಾರರು ತಮ್ಮ ಫೋನ್‌ಗಳನ್ನು ಸ್ವಿಚ್ ಆಫ್ ಮಾಡುವಷ್ಟು ಪರಿಸ್ಥಿತಿ ಭೀಕರವಾಗಿದೆ ಎಂದು ಸಂಘ ಹೇಳಿಕೊಂಡಿತ್ತು. ಹಬ್ಬದ ನಂತರ ಸಭೆ ನಡೆಸುತ್ತೇವೆ ಎಂದು ಹೇಳಿದ್ದ ಸಿಎಂ ಸಿದ್ದರಾಮಯ್ಯ, ಸಭೆ ಕರೆದು ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಡಿಸೆಂಬರ್‌ನಲ್ಲಿ ರಾಜ್ಯಪಾಲರಿಗೆ ದೂರು ನೀಡುತ್ತೇವೆ ಎಂದು ಮಂಜುನಾಥ್ ಎಚ್ಚರಿಸಿದ್ದರು.
‘ಹಣ ಬಿಡುಗಡೆ ವಿಚಾರದಲ್ಲಿ ಕಮಿಷನ್ ದುಪ್ಪಟ್ಟಾಗಿದೆ ಎಂದು ಪತ್ರದಲ್ಲಿ ಹೇಳಿದ್ದೇನೆ, ಶೇ. 40, ಶೇ. 60, ಶೇ. 80 ಅಂತಾ ಹೇಳಿಲ್ಲ. ಸಣ್ಣ ಗುತ್ತಿಗೆದಾರರು ವಿಷ ಕುಡಿಯುವ ಸ್ಥಿತಿಗೆ ಬಂದಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಲಂಚವಿಲ್ಲ ಎಂದು ನಾನು ಹೇಳುತ್ತಿಲ್ಲ, ಎಲ್ಲಾ ವಿಚಾರಗಳನ್ನು ಡಿಸೆಂಬರ್ ನಲ್ಲಿ ಬಹಿರಂಗಪಡಿಸುತ್ತೇವೆ,’ ಎಂದು ಮಂಜುನಾಥ್ ಹೇಳಿದ್ದರು.
ಪಿಡಬ್ಲ್ಯುಡಿ ಇಲಾಖೆಯಲ್ಲಿ ₹ 9,000 ಕೋಟಿ ಬಾಕಿ ಇದೆ. ಸೀನಿಯರಿಟಿ ಆಧಾರದ ಮೇಲೆ ಹಣ ನೀಡುತ್ತಿದ್ದಾರೆ. ಉಳಿದ ಇಲಾಖೆಗಳಲ್ಲಿ ಆಗುತ್ತಿಲ್ಲ, ನೀರಾವರಿ ಇಲಾಖೆಯಿಂದ ₹ 12,000 ಕೋಟಿ ಬಾಕಿ ಇದೆ. ಒಟ್ಟಾರೆ ₹ 33,000 ಕೋಟಿ ಬಾಕಿ ಇದೆ. ಲೋಕೋಪಯೋಗಿ ಇಲಾಖೆ ಹೊರತುಪಡಿಸಿದರೆ ಬೇರೆ ಯಾವುದೇ ಇಲಾಖೆಯಿಂದ ಬಾಕಿ ಹಣ ಬಿಡುಗಡೆಯಾಗಿಲ್ಲ. ಇದನ್ನು ಸಿಎಂ ಮತ್ತು ಸಚಿವರ ಗಮನಕ್ಕೆ ತರಲಾಗಿದೆ ಎಂದು ಅವರು ತಿಳಿಸಿದ್ದನ್ನು ಸ್ಮರಿಸಬಹುದು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್‌ಡಿಪಿಆರ್) ಇಲಾಖೆಯು ಗುರುವಾರದಿಂದ ಹಂತ ಹಂತವಾಗಿ ಬಾಕಿ ಬಿಡುಗಡೆಯನ್ನು ಪ್ರಾರಂಭಿಸಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ₹ 50 ಕೋಟಿ ಮೊತ್ತದ ಒಂದು ಬಿಲ್ ಅನ್ನು ಸಿಎಂ ಕ್ಲಿಯರ್ ಮಾಡಬೇಕಿದೆ ಎಂದು ಮಂಜುನಾಥ್ ಪತ್ರದಲ್ಲಿ ವಿವರಿಸಿದ್ದರು.
ಲೋಕಾಯುಕ್ತದಿಂದ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ನಿವೃತ್ತ ಅಧಿಕಾರಿ ಬಾಲರಾಜ್ ಅವರನ್ನು ವಸತಿ ಇಲಾಖೆಗೆ ನೇಮಕ ಮಾಡಲಾಗಿದೆ ಎಂದು ಸಂಘ ಆರೋಪಿಸಿತ್ತು. ಭ್ರಷ್ಟ ಅಧಿಕಾರಿಯನ್ನು ವಜಾಗೊಳಿಸುವಂತೆ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಮನವಿ ಮಾಡಿದ್ದರೂ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಸಂಘ ದೂರಿತ್ತು.
ಪಕ್ಷ ಬೇಧವಿಲ್ಲದೆ ಸುಮಾರು 70 ಶಾಸಕರು ಸಿವಿಲ್ ಕಾಮಗಾರಿ ಗುತ್ತಿಗೆಗೆ ಕಡಿವಾಣ ಹಾಕಲು ಅಧಿಕಾರಿಗಳನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ಸಂಘದ ಗೌರವಾಧ್ಯಕ್ಷ ಜಗನ್ನಾಥ ಸೇಠಜಿ ಗಂಭೀರ ಆರೋಪಿಸಿದ್ದರು. ಕಲ್ಯಾಣ ಕರ್ನಾಟಕದಲ್ಲಿ ಪ್ಯಾಕೇಜ್ ಒಪ್ಪಂದಗಳಲ್ಲಿ ಶೇ. 15, ಶೇ. 20 ರಷ್ಟು ಕಮಿಷನ್ ಒಳಗೊಂಡಿರುವ ಭ್ರಷ್ಟಾಚಾರವಿದೆ. ಯಾವುದೇ ಸಚಿವರು ಭಾಗಿಯಾಗಿಲ್ಲ, ಮತ್ತು ಎಲ್ಲಾ ಶಾಸಕರು ಅದರ ಭಾಗವಾಗಿಲ್ಲ ಎಂದಿದ್ದರು.
ಹೈಕಮಾಂಡ್‌ಗೆ ಪತ್ರ ಬರೆದಾಗ ಆ ಎಲ್ಲಾ ಶಾಸಕರ ಹೆಸರನ್ನು ನಾವು ಉಲ್ಲೇಖಿಸುತ್ತೇವೆ. ಗುತ್ತಿಗೆದಾರರನ್ನು ಒಳಗೊಂಡ ಗಂಭೀರ ಅಕ್ರಮಗಳಿವೆ ಮತ್ತು ಗುಲ್ಬರ್ಗ ಡಿಎಂಎ ಪ್ಯಾಕೇಜ್ ಸೇರಿದಂತೆ ಎಲ್ಲಾ ನಾಲ್ಕು ಪ್ಯಾಕೇಜ್ ಯೋಜನೆಗಳನ್ನು ಸರ್ಕಾರ ತನಿಖೆ ಮಾಡಬೇಕು ಎಂದು ಹೇಳಿದ್ದನ್ನು ಸ್ಮರಿಸಬಹುದು.









