ಕೆಂಪಣ್ಣ ಆಯೋಗ; ಸಲ್ಲಿಕೆಯಾಗದ ವರದಿ, ವರ್ಷದಿಂದಲೂ ಕಡತ ತೆವಳಿಕೆ, ರಾಜ್ಯಪಾಲರ ಕಡುಮೌನ

ಬೆಂಗಳೂರು;  ಅರ್ಕಾವತಿ ಬಡಾವಣೆಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಹೆಚ್‌ ಎಸ್‌ ಕೆಂಪಣ್ಣ ನೇತೃತ್ವದ  ವಿಚಾರಣೆ ಆಯೋಗದ ವರದಿ ಮತ್ತು ಇದಕ್ಕೆ ಸಂಬಂಧಿಸಿದ ಕಡತಗಳನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರವು ವರ್ಷ ಕಳೆದರೂ ರಾಜ್ಯಪಾಲರಿಗೆ ಸಲ್ಲಿಸಿಲ್ಲ. ಅಲ್ಲದೇ ರಾಜ್ಯಪಾಲರು ಬರೆದಿದ್ದ ಪತ್ರದ ಆಧಾರದ ಮೇಲೆ ಕೈಗೊಂಡಿರುವ ಕ್ರಮಗಳ ಕುರಿತಾದ ಕಡತವನ್ನು  ಸರ್ಕಾರವು ಆರ್‍‌ಟಿಐ ಅಡಿಯಲ್ಲಿಯೂ ಒದಗಿಸಿಲ್ಲ.

 

ಬದಲಿ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಚಾರಣೆಗೊಳಪಡಿಸಲು ರಾಜ್ಯಪಾಲರು  ಅನುಮತಿ ನೀಡಿದ್ದ ಹೊತ್ತಿನಲ್ಲೇ  ಅರ್ಕಾವತಿ ಬಡಾವಣೆಯ ವಿಚಾರಣೆ ಆಯೋಗದ ವರದಿಗೆ ಕೈ ಹಾಕಿದ್ದರು. ವಿಧಾನ ಪರಿಷತ್‌ ಸದಸ್ಯ ಬಿಜೆಪಿಯ ಸಿ ಟಿ ರವಿ ಅವರು ಬರೆದಿದ್ದ ಪತ್ರವನ್ನಾಧರಿಸಿ ರಾಜ್ಯಪಾಲರು ಸರ್ಕಾರಕ್ಕೆ ಪತ್ರ ಬರೆದಿದ್ದರು.

 

ಇದಕ್ಕೆ ಸಂಬಂಧಿಸಿದಂತೆ ಕಡತ ಮತ್ತು ವರದಿಯ ಸಂಪುಟಗಳನ್ನು  ನಗರಾಭಿವೃದ್ಧಿ ಇಲಾಖೆಯು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ   2024ರಲ್ಲೇ ಸಲ್ಲಿಸಿತ್ತು.

 

‘ಅರ್ಕಾವತಿ ಬಡಾವಣೆಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಹೆಚ್‌ ಎಸ್‌ ಕೆಂಪಣ್ಣ ವಿಚಾರಣೆ ಆಯೋಗದ ವರದಿ ಹಾಗೂ ಸಂಬಂಧಪಟ್ಟ ಕಡತ (ಸಂಖ್ಯೆ ನಅಇ 480 ಬೆಂಭೂಸ್ವಾ 2017) ವನ್ನು ಉಪ ಮುಖ್ಯಮಂತ್ರಿ ಅವರಿಗೆ 2024ರ ಸೆ.11ರಂದು ಸಲ್ಲಿಸಲಾಗಿದೆ. ಈ ವರದಿಯ ಸಂಪುಟಗಳನ್ನೊಳಗೊಂಡ ಮೂಲ ವರದಿಯನ್ನೂ ಸಹ ಕಳಿಸಲಾಗಿದೆ,’ ಎಂದು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ರಾಜೇಶ್‌ ಎಸ್‌ ಸೂಳಿಕೇರಿ ಅವರು 2024ರ ಸೆ. 20ರಂದು ಅನಧಿಕೃತ ಟಿಪ್ಪಣಿಯಲ್ಲಿ ವಿವರಿಸಿದ್ದರು.

 

 

 

 

 

ಈ ಕುರಿತು ‘ದಿ ಫೈಲ್‌’ ವರದಿ ಪ್ರಕಟಿಸಿತ್ತು.

 

ಅರ್ಕಾವತಿ ಡಿ ನೋಟಿಫಿಕೇಷನ್‌; ಕೆಂಪಣ್ಣ ವರದಿಗೆ ಕೈ ಹಾಕಿದ ರಾಜ್ಯಪಾಲ, ಡಿಸಿಎಂಗೆ ದಾಖಲೆ ಸಲ್ಲಿಸಿದ ಇಲಾಖೆ

 

ಆದರೆ ಈ ಕಡತವು ವರ್ಷದಿಂದಲೂ ಚಲನವಲನದಲ್ಲೇ ಇದೆ. ಹೀಗಾಗಿ ಇದರ ಮಾಹಿತಿಯನ್ನು ಒದಗಿಸಲು ಸಾಧ್ಯವಿಲ್ಲ ಎಂದು ನಗರಾಭಿವೃದ್ಧಿ ಇಲಾಖೆಯು ಆರ್‍‌ಟಿಐ ಅಡಿಯಲ್ಲಿ ಹಿಂಬರಹ ನೀಡಿದೆ.

 

 

 

 

ಅರ್ಕಾವತಿ ಬಡಾವಣೆಗಾಗಿ ಭೂ ಸ್ವಾಧೀನಪಡಿಸಿಕೊಂಡಿದ್ದ ಒಟ್ಟು ಜಮೀನಿನ ಪೈಕಿ 541 ಎಕರೆಯನ್ನು ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅಕ್ರಮವಾಗಿ ಡಿ ನೋಟಿಫಿಕೇಷನ್‌ ಮಾಡಿದ್ದರು. ಈ ಕುರಿತು ಅಂದು ಪ್ರತಿಪಕ್ಷ ಸ್ಥಾನದಲ್ಲಿದ್ದ ಬಿಜೆಪಿಯು ಇದೇ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ರಾಜೀನಾಮೆ ಒತ್ತಾಯಿಸಿತ್ತು. ಹೀಗಾಗಿ ಸಿದ್ದರಾಮಯ್ಯ ಅವರು ಈ ಕುರಿತು ತನಿಖೆ ನಡೆಸಲು ನಿವೃತ್ತ ನ್ಯಾಯಾಧೀಶ ಹೆಚ್‌ ಎಸ್‌ ಕೆಂಪಣ್ಣ ಅವರ ನೇತೃತ್ವದಲ್ಲಿ ವಿಚಾರಣೆ ಆಯೋಗ ರಚಿಸಿದ್ದರು.

 

ಕೆಂಪಣ್ಣ ನೇತೃತ್ವದ ವಿಚಾರಣೆ ಆಯೋಗವು ಸಲ್ಲಿಸಿದ್ದ ವರದಿಯಲ್ಲಿ ಬಿಡಿಎ ಹಾಗೂ ನಗರಾಭಿವೃದ್ಧಿ ಇಲಾಖೆಯಲ್ಲಿನ ಕೆಲವು ಅಧಿಕಾರಿಗಳ ಲೋಪವನ್ನು ವರದಿಯಲ್ಲಿ ಉಲ್ಲೇಖಿಸಿತ್ತು.  ವರದಿಯನ್ನಾಧರಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದು ಸರ್ಕಾರದ ವಿವೇಚನೆಗೆ ಬಿಟ್ಟ ವಿಷಯವಾಗಿದೆ ಎಂದು ಸುಮಾರು 1,861 ಪುಟಗಳ ವರದಿಯಲ್ಲಿ ಆಯೋಗ ಹೇಳಿತ್ತು.

 

ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಹಗರಣಕ್ಕೆ ಸಂಬಂಧಿಸಿದಂತೆ ಹಿಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಡುವಿನ ಮಾತಿನ ಚಕಮಕಿ ನಡೆದಿತ್ತು. 8,000 ಕೋಟಿ ರೂ.ಗಳ ಹಗರಣದ ಕುರಿತು ರಾಜ್ಯ ಸರ್ಕಾರ ತನಿಖೆಯನ್ನು ಪ್ರಾರಂಭಿಸಲಿದೆ ಎಂದು ಸುಳಿವು ಕೂಡ ನೀಡಿದ್ದರು. ಆದರೆ ಯಾವುದೇ ತನಿಖೆಯನ್ನು ನಡೆಸಿರಲಿಲ್ಲ.

 

ಅಲ್ಲದೇ ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಹಗರಣದ ಕುರಿತು ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ವರದಿಯ ಅಂತಿಮ ಭಾಗವನ್ನು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹಿರಂಗಪಡಿಸಿದ್ದರು. ಇದರಿಂದ ಸಿದ್ದರಾಮಯ್ಯ ಅವರು ಸದನದಲ್ಲೇ ಸಿಟ್ಟಿಗೆದ್ದಿದ್ದರು.

 

‘ಸಿದ್ದರಾಮಯ್ಯ ಅವರು ಡಿನೋಟಿಫಿಕೇಶನ್‌ನಲ್ಲಿ ಭಾಗಿಯಾಗಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ, ಅಧಿಕಾರಿಗಳು ತಮ್ಮ ಗಮನಕ್ಕೆ ತಂದಿದ್ದನ್ನು ಮಾತ್ರ ಅನುಮೋದಿಸಿದ್ದಾರೆ ಎಂದು ಹೇಳಿದರೆ, ಇದರ ಅರ್ಥವೇನು? ತಪ್ಪನ್ನು ಒಪ್ಪಿಕೊಳ್ಳುವುದು ಮತ್ತು ಇದಕ್ಕಿಂತ ದೊಡ್ಡ ಸಾಕ್ಷ್ಯದ ಅಗತ್ಯವಿಲ್ಲ,’ ಎಂದು ಬಸವರಾಜ ಬೊಮ್ಮಾಯಿ ಅವರು ತಿರುಗೇಟು ನೀಡಿದ್ದರು. ಅಲ್ಲದೇ ಸಾವಿರಾರು ಪುಟಗಳ ದಾಖಲೆಗಳನ್ನು ಒಟ್ಟುಗೂಡಿಸಿ ಇಡೀ ಹಗರಣದಲ್ಲಿ ಅಡಗಿರುವ ಆಯೋಗದ ಸಂಶೋಧನೆಗಳನ್ನು ಓದಿದ್ದೇನೆ. ಹಾಗಾಗಿ ನನ್ನ ಪ್ರಶ್ನೆಯೇ ಇಲ್ಲ. ಸುಳ್ಳು ಹೇಳುತ್ತಿದ್ದು, ಅವರೇ (ಸಿದ್ದರಾಮಯ್ಯ) ಸುಳ್ಳು ಹೇಳುತ್ತಿದ್ದಾರೆ,” ಎಂದು ಆರೋಪಿಸಿದ್ದರು.

 

“ಕಾಂಗ್ರೆಸ್ ಸರ್ಕಾರವು ಯಾವ ಕ್ರಮ ಕೈಗೊಂಡಿದೆ ಎಂದು ನಾವು ಈಗಾಗಲೇ ನೋಡಿದ್ದೇವೆ. ಈಗ ನಾವು ಸೂಕ್ತ ಕ್ರಮವನ್ನು ಪ್ರಾರಂಭಿಸುತ್ತೇವೆ. ಸೂಕ್ತ ಕ್ರಮ ಎಂದರೆ ಏನು, ಅದು ನಿಮಗೆ ಚೆನ್ನಾಗಿ ತಿಳಿದಿದೆ” ಎಂದು ಅವರು ಹೇಳಿದರು. ಅರ್ಕಾವತಿ ಲೇಔಟ್ ಹಗರಣದ ತನಿಖಾ ವರದಿಯು ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರದ ಆರೋಪಗಳ ಮಹಾದ್ವಾರವನ್ನು ತೆರೆದಿದೆ ಎಂದೂ ಹೇಳಿದ್ದರು.

 

40 ಪರ್ಸೆಂಟ್‌ ಕಮಿಷನ್‌ ಕುರಿತಂತೆ ಆಡಳಿತ ಪಕ್ಷವಾಗಿದ್ದ ಬಿಜೆಪಿಯ ವಿರುದ್ಧ ಜನಾಭಿಪ್ರಾಯ ರೂಪಿಸಲು ಹೊರಟಿದ್ದ ಕಾಂಗ್ರೆಸ್‌ನ್ನು ಎದುರಿಸಲು ಅರ್ಕಾವತಿ ಡಿ ನೋಟಿಫಿಕೇಷನ್‌ ಹಗರಣವನ್ನು ಮುಂದಿರಿಸಿ ಬೆದರಿಸಲು ನೋಡಿತ್ತು. ಆದರೆ ಆ ನಂತರ ಈ ಆಯೋಗವು ನೀಡಿರುವ ವರದಿಯನ್ನು ಬಹಿರಂಗಪಡಿಸಿರಲಿಲ್ಲ.

 

ಅರ್ಕಾವತಿ ಡಿನೋಟಿಫಿಕೇಷನ್​ಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಕೆಂಪಣ್ಣ ಅವರು ನೀಡಿರುವ ವರದಿಯನ್ನು ಬಹಿರಂಗಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಪತ್ರದ ಮೂಲಕ ಒತ್ತಾಯಿಸಿದ್ದರು.

 

‘ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ಹಾಗೂ ಜನಪ್ರತಿನಿಧಿಯಾಗಿ ಈ ಮೂಲಕ ತಮ್ಮ ಗಮನ ಸೆಳೆಯಬಯಸುವುದೇನೆಂದರೆ, ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಅರ್ಕಾವತಿ ಬಡಾವಣೆಗೆ ಸಂಬಂಧಿಸಿದಂತೆ ಸುಮಾರು 852 ಎಕರೆಯಷ್ಟು ಜಮೀನನ್ನು ಡಿನೋಟಿಫಿಕೇಷನ್ ಮಾಡಿದ್ದು, ಇದು ಸುಮಾರು 8,000 ಕೋಟಿ ರೂ. ಮೊತ್ತದ ಹಗರಣವಾಗಿರಬಹುದೆಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ,’ ಎಂದು ಹೇಳಿದ್ದರು.

 

2014 ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ತನಿಖೆಗಾಗಿ ನ್ಯಾಯಮೂರ್ತಿ ಕೆಂಪಣ್ಣ ಅವರ ನೇತೃತ್ವದ ವಿಚಾರಣಾ ಆಯೋಗವನ್ನು ಕಮಿಷನ್ ಆಫ್ ಎನ್​ಕ್ವೆರಿ ಆಕ್ಟ್ 1952 ರಂತೆ ರಚಿಸಿದ್ದರು. ಅದರಂತೆ ಈ ಆಯೋಗವು ವಿಚಾರಣಾ ವರದಿಯನ್ನು ಸಹ ನೀಡಿದೆ. ಆಯೋಗಗಳ ತನಿಖಾ ವರದಿಗಳು ಸಾರ್ವಜನಿಕ ದಾಖಲೆಗಳು. ಅದನ್ನು ಜನಸಾಮಾನ್ಯರಿಗೆ ದೊರಕುವ ಹಾಗೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಆದರೆ ಇದುವರೆಗೂ ಆಯೋಗದ ವರದಿಯನ್ನು ಬಿಡುಗಡೆ ಮಾಡದೇ ಇರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ಸಿ ಟಿ ರವಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು.

 

‘ರಾಜ್ಯದ ಜನಪ್ರತಿನಿಧಿಯಾಗಿ ನಾನು ಸಹ ಈ ವರದಿಯ ಬಿಡುಗಡೆಗಾಗಿ ಕಾಯುತ್ತಿದ್ದೇನೆ. ತಮ್ಮ ಸರ್ಕಾರ ಈ ವರದಿಯನ್ನು ಬಿಡುಗಡೆ ಮಾಡದೇ ಮುಚ್ಚಿಡುವ ಕಾರ್ಯ ಮಾಡುತ್ತಿರುವುದು ನಿಮ್ಮ ಮತ್ತು ನಿಮ್ಮ ಸರ್ಕಾರದ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯ ಕುರಿತು ಸಂಶಯ ಹಾಗೂ ಸಂದೇಹ ಹುಟ್ಟುವಂತೆ ಮಾಡುತ್ತಿದೆ,’ ಎಂದು ಪತ್ರದಲ್ಲಿ ಹೇಳಿರುವುದನ್ನು ಸ್ಮರಿಸಬಹುದು.

 

ಅರ್ಕಾವತಿ ರೀಡೂ; ಮಾರ್ಗಸೂಚಿ, ಆದೇಶಕ್ಕೆ ವಿರುದ್ಧವಾಗಿ 325.62 ಎಕರೆ ಕೈಬಿಟ್ಟಿದ್ದ ಸರ್ಕಾರ, ಜೈನ್‌ ಟಿಪ್ಪಣಿ ಬಹಿರಂಗ

 

 

ಅರ್ಕಾವತಿ ರೀ ಡೂ ಸಂಬಂಧಿಸಿದಂತೆ ಮಾರ್ಗಸೂಚಿ ಮತ್ತು ಆದೇಶಕ್ಕೆ ವಿರುದ್ಧವಾಗಿ 325 ಎಕರೆ 62 ಗುಂಟೆ ವಿಸ್ತೀರ್ಣದ ಜಮೀನನ್ನು ಕೈ ಬಿಟ್ಟಿತ್ತು. ಈ ಕುರಿತು ‘ದಿ ಫೈಲ್‌‘, ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

Your generous support will help us remain independent and work without fear.

Latest News

Related Posts