ಬೆಂಗಳೂರು; ನೆಪ್ರೋ ಯುರಾಲಜಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ ಆರ್ ಕೇಶವಮೂರ್ತಿ ಸೇರಿದಂತೆ ಇನ್ನಿತರ 5 ವೈದ್ಯರುಗಳು ಕರ್ತವ್ಯದ ಅವಧಿಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ತೆರಳುವ ಮೂಲಕ ಸರ್ಕಾರಿ ವೈದ್ಯಕೀಯ ಸಂಸ್ಥೆಗೆ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಅನಾನುಕೂಲ ಮಾಡಿರುವುದು ಮತ್ತು ಕರ್ತವ್ಯದ ವೇಳೆಯಲ್ಲಿ ತಮ್ಮದೇ ಸ್ವಂತ ಮಾಲೀಕತ್ವದ ಖಾಸಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ತೆರಳಿರುವುದನ್ನು ಲೋಕಾಯುಕ್ತ ಸಂಸ್ಥೆಯು ತನಿಖೆಯಿಂದ ಸಾಬೀತುಪಡಿಸಿದೆ.
ಈ ಸಂಬಂಧ ಕಳೆದ 4 ವರ್ಷಗಳ ಹಿಂದೆಯೇ ಸಲ್ಲಿಕೆಯಾಗಿದ್ದ ದೂರನ್ನಾಧರಿಸಿ ತನಿಖೆ ನಡೆಸಿದ್ದ ಲೋಕಾಯುಕ್ತ ಸಂಸ್ಥೆಯು, ವೈದ್ಯರುಗಳ ವಿರುದ್ಧದ ಆರೋಪಗಳನ್ನು ಮೇಲ್ನೋಟಕ್ಕೆ ಸಾಬೀತುಪಡಿಸಿದೆ. ಲೋಕಾಯುಕ್ತ ಸಂಸ್ಥೆಯ ವರದಿಯನ್ನಾಧರಿಸಿ ಈ ವೈದ್ಯರುಗಳ ವಿರುದ್ಧ ಇಲಾಖೆ ವಿಚಾರಣೆ ಮಾಡಲು ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು ಸರ್ಕಾರವು ನೇಮಿಸಿದೆ.
ನೆಪ್ರೋ ಯುರಾಲಜಿ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್ ಅವರು 2025ರ ಅಕ್ಟೋಬರ್ 28ರಂದೇ ಆದೇಶ ಹೊರಡಿಸಿದ್ದಾರೆ. ಈ ಆದೇಶಕ್ಕೆ ಸಚಿವ ಡಾ ಶರಣ ಪ್ರಕಾಶ್ ಪಾಟೀಲ್ ಅವರು ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ.
ಈ ಆದೇಶದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಈ ಪ್ರಕರಣವು ಲೋಕಾಯುಕ್ತದ ಮುಂದೆ 2025ರ ಡಿಸೆಂಬರ್‍ನಲ್ಲಿ ವಿಚಾರಣೆಗೆ ಬರಲಿದೆ. ಹೀಗಾಗಿ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಇಂಧುದರ ಅವರನ್ನು ಜಂಟಿ ಇಲಾಖೆ ವಿಚಾರಣೆಗೆ ನೇಮಿಸಿರುವುದು ಆದೇಶದಿಂದ ಗೊತ್ತಾಗಿದೆ.
ಡಾ ಆರ್ ಕೇಶವಮೂರ್ತಿ, ಡಾ ಪ್ರದೀಪ್ ಎಂ ಎಸ್, ಡಾ ಶ್ರೀಧರ ಸಿ ಜೆ, ಡಾ ಕಿಶನ್ ಎ, ಡಾ ಶ್ರೀನಿವಾಸ ಅವರ ವಿರುದ್ಧ ಡಾ ಸುಜಾತ ಸಿದ್ದಪ್ಪ ಎಂಬುವರು ಲೋಕಾಯುಕ್ತಕ್ಕೆ 2021ರಲ್ಲಿ ದೂರು ಸಲ್ಲಿಸಿದ್ದರು.

ಈ ದೂರನ್ನಾಧರಿಸಿ ಲೋಕಾಯುಕ್ತ ಸಂಸ್ಥೆಯು 4 ವರ್ಷಗಳ ಕಾಲ ತನಿಖೆ (COMPT/LOK/BCD/1368/2021/ARE-86) ನಡೆಸಿದೆ. ತನಿಖೆ ವೇಳೆಯಲ್ಲಿ ಆರೋಪಿತ ವೈದ್ಯರುಗಳ ವಿರುದ್ಧ ಆರೋಪವು ಮೇಲ್ನೋಟಕ್ಕೆ ಸಾಬೀತಾಗಿದೆ. ಇದನ್ನಾಧರಿಸಿ ಈ ವೈದ್ಯರುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಲೋಕಾಯುಕ್ತ ಸಂಸ್ಥೆಯು 12(3) ಅಡಿಯಲ್ಲಿ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು.
ಈ ವರದಿಯನ್ನು ಪರಿಶೀಲಿಸಿದ್ದ ವೈದ್ಯಕೀಯ ಶಿಕ್ಷಣ ಇಲಾಖೆಯು ಆರೋಪಿತ ವೈದ್ಯರುಗಳ ವಿರುದ್ಧ ಜಂಟಿ ಇಲಾಖೆ ವಿಚಾರಣೆಗೆ ಮುಂದಾಗಿದೆ.

ತನಿಖೆಯಿಂದ ಕಂಡುಬಂದಿದ್ದೇನು?
ಆರೋಪಿತ ವೈದ್ಯರುಗಳು ತಮ್ಮ ಕರ್ತವ್ಯದ ಅವಧಿಯಲ್ಲಿ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಈ ಮೂಲಕ ಸರ್ಕಾರಿ ವೈದ್ಯಕೀಯ ಸಂಸ್ಥೆಗೆ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಅನಾನುಕೂಲವನ್ನು ಉಂಟು ಮಾಡಿದ್ದರು. ಸಂಸ್ಥೆಯ ಕರ್ತವ್ಯದ ವೇಳೆಯಲ್ಲಿ ಹೊರಗಡೆ ಹೋಗಿ ಮರಳಿ ಕರ್ತವ್ಯಕ್ಕೆ ಹೋಗಿದ್ದರು ಎಂದು ತನಿಖಾ ವರದಿಯಲ್ಲಿ ವಿವರಿಸಿರುವುದು ಸರ್ಕಾರಿ ಆದೇಶದಿಂದ ತಿಳಿದು ಬಂದಿದೆ.
ಅಲ್ಲದೇ ಈ ಆರೋಪಿತ ವೈದ್ಯರುಗಳು ತಮ್ಮದೇ ಆದ ಸ್ವಂತ ಮಾಲೀಕತ್ವದ ಹಾಗೂ ಖಾಸಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ತೆರಳಿದ್ದರು. ಈ ಪ್ರಕರಣದ 1ನೇ ಪ್ರತಿವಾದಿಯು ತಮ್ಮ ಅಧೀನ ವೈದ್ಯರನ್ನು ನಿಯಂತ್ರಿಸುವಲ್ಲಿ ವಿಫಲವಾಗಿದ್ದರು. ಅಲ್ಲದೇ ಈ ವೈದ್ಯರುಗಳು ಸ್ವಾಯತ್ತ ಸಂಸ್ಥೆಯ ನೌಕರರಿಗೆ ತರವಲ್ಲದ ರೀತಿಯ ದುರ್ನಡತೆ ತೋರಿದ್ದರು ಎಂದು ಲೋಕಾಯುಕ್ತ ತನಿಖಾ ವರದಿಯಲ್ಲಿ ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಆದೇಶದಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಲೋಕಾಯುಕ್ತ ತನಿಖಾ ವರದಿಯಲ್ಲಿನ ಅಂಶಗಳಿಗೆ ಸಂಬಂಧಿಸಿದಂತೆ ಸಮಜಾಯಿಷಿ ನೀಡಲು ಈ ಆರೋಪಿತ ವೈದ್ಯರುಗಳಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ದೋಷಾರೋಪಣೆ ಜಾರಿಗೊಳಿಸಿತ್ತು. ಈ ದೋಷಾರೋಪಣೆ ಪಟ್ಟಿಯಲ್ಲಿನ ಆರೋಪಗಳನ್ನು ಆರೋಪಿತ ವೈದ್ಯರುಗಳು ತಳ್ಳಿ ಹಾಕಿದ್ದರು. ಆದರೆ ವೈದ್ಯಕೀಯ ಶಿಕ್ಷಣ ಇಲಾಖೆಯು ಆರೋಪಿತ ವೈದ್ಯರುಗಳ ಸಮಜಾಯಿಷಿಯನ್ನು ಒಪ್ಪಿರಲಿಲ್ಲ.

ಆರೋಪಿತ ವೈದ್ಯರುಗಳಿಗೆ ಜಾರಿಗೊಳಿಸಿದ್ದ ದೋಷಾರೋಪಣೆಯಲ್ಲಿನ ಆರೋಪಗಳ ಅಂಶಗಳ, ವಿಷಯಕ್ಕಿಂತ ಬೇರೆ ಸಮಜಾಯಿಷಿ ನೀಡಿದ್ದರು. ಹೀಗಾಗಿ ವೈದ್ಯಕೀಯ ಶಿಕ್ಷಣ ಇಲಾಖೆಯು ಇದನ್ನು ಒಪ್ಪಿಕೊಂಡಿರಲಿಲ್ಲ. ಹೀಗಾಗಿ ಆರೋಪಿತ ವೈದ್ಯರುಗಳ ವಿರುದ್ಧ ಇಲಾಖೆ ವಿಚಾರಣೆ ನಡೆಸುವುದು ಸೂಕ್ತ ಎಂದು ವೈದ್ಯಕೀಯ ಶಿಕ್ಷಣ ಇಲಾಖೇಯು ನಿರ್ಧರಿಸಿತ್ತು.

ಮೊದಲನೇ ಪ್ರತಿವಾದಿ ಡಾ ಕೇಶವಮೂರ್ತಿ ಅವರು ಸರ್ಕಾರಿ ಹಣವನ್ನು ವೈಯಕ್ತಿಕವಾಗಿ ಬಳಸಿಕೊಂಡಿದ್ದರು. ಮತ್ತು ನಿಯಮಗಳಿಗೆ ವಿರುದ್ಧವಾಗಿ ತಮಗೆ ಬೇಕಾದವರಿಗೆ ಟೆಂಡರ್‍ಗಳನ್ನು ನೀಡಿದ್ದರು ಎಂದು ದೂರುದಾರರು ಲೋಕಾಯುಕ್ತಕ್ಕೆ ಸಲ್ಲಿಸಿದ್ದ ದೂರಿನಲ್ಲಿ ವಿವರಿಸಿದ್ದರು.

ಡಾ ಕೇಶವಮೂರ್ತಿ ಅವರ ವಿರುದ್ಧ ವಿಧಾನ ಪರಿಷತ್‌ನ ಮಾಜಿ ಸದಸ್ಯ ಪಿ ಆರ್ ರಮೇಶ್, ರಾಘವೇಂದ್ರಚಾರ್ ಅವರು ಸಹ ದೂರು ಸಲ್ಲಿಸಿದ್ದರು. ಈ ದೂರನ್ನಾಧರಿಸಿ ವರದಿ ಸಲ್ಲಿಸಲು ಬಿಬಿಎಂಪಿಯ ಹಿಂದಿನ ವಿಶೇಷ ಆಯುಕ್ತರಾದ ಡಾ ತ್ರಿಲೋಕ್ ಚಂದ್ರ ಅವರು ಮೂವರು ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿದ್ದರು. ಈ ಸಮಿತಿಯು ವಿಚಾರಣೆ ನಡೆಸುತ್ತಿದ್ದ ವೇಳೆಯಲ್ಲಿಯೇ ಅಂಜನ್ ಎಂಬುವರು ಡಾ ಶ್ರೀಧರ್ ಅವರ ವಿರುದ್ಧವೂ ದೂರಿದ್ದರು.
ಡಾ ಶ್ರೀಧರ್ ಅವರು ಕಾರ್ಯನಿರ್ವಹಿಸುತ್ತಿದ್ದ ಖಾಸಗಿ ಆಸ್ಪತ್ರೆಯಲ್ಲಿ ಭೇಟಿ ಆಗಬೇಕು ಎಂಧು ಅಂಜನ್ ಎಂಬುವರಿಗೆ ಸೂಚಿಸಿದ್ದರು. ಈ ವೈದ್ಯರ ನಿರ್ಲಕ್ಷ್ಯ ಮತ್ತು ಅನುಚಿತ ಚಿಕಿತ್ಸೆಯಿಂದ ಆರೋಗ್ಯ ಹದಗೆಟ್ಟಿದೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಂಜನ್ ಎಂಬುವರು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಗೆ ದೂರು ನೀಡಿದ್ದರು. ಈ ದೂರು ನಂತರ ವೈದ್ಯಕೀಯ ಶಿಕ್ಷಣ ಇಲಾಖೆಗೆ ವರ್ಗಾವಣೆಯಾಗಿತ್ತು. ಈ ದೂರನ್ನು ಪರಿಶೀಲಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಡಾ ಶರಣ ಪ್ರಕಾಶ್ ಪಾಟೀಲ್ ಅವರು ಸೂಚಿಸಿದ್ದರು.
ಆರ್‍ಟಿಐ ದಾಖಲೆಗಳ ಪ್ರಕಾರ ದೂರು ಸಲ್ಲಿಸಿದ್ದ ಅವಧಿಯವರೆಗೆ ನೆಪ್ರೋ ಯುರಾಲಜಿ ಸಂಸ್ಥೆಯು 3,548 ಶಸ್ತ್ರ ಚಿಕಿತ್ಸೆಗಳನ್ನು ಮಾಡಿತ್ತು. 2019ರಲ್ಲಿ 7,408 ಸಣ್ಣ ಶಸ್ತ್ರ ಚಿಕಿತ್ಸೆಗಳು, 2020ರಲ್ಲಿ 2,189 ಪ್ರಮುಖ ಶಸ್ತ್ರ ಚಿಕಿತ್ಸೆ ಮತ್ತು 3,262 ಸಣ್ಣ ಶಸ್ತ್ರ ಚಿಕಿತ್ಸೆ, 2021ರಲ್ಲಿ 2,700 ಪ್ರಮುಖ ಶಸ್ತ್ರ ಚಿಕಿತ್ಸೆ, 5,710 ಸಣ್ಣ ಶಸ್ತ್ರ ಚಿಕಿತ್ಸೆಗಳನ್ನು ಮಾಡಲಾಗಿತ್ತು. 2023ರಲ್ಲಿ 3,184 ಪ್ರಮುಖ ಶಸ್ತ್ರ ಚಿಕಿತ್ಸೆ, 7,282 ಸಣ್ಣ ಶಸ್ತ್ರ ಚಿಕಿತ್ಸೆಗಳನ್ನು ಮಾಡಿತ್ತು. ಒಟ್ಟಾರೆಯಾಗಿ ನೆಪ್ರೋ ಯುರಾಲಜಿ ಸಂಸ್ಥೆಯು 2019ರಿಂದ 2023ರವರೆಗಿನ 5 ವರ್ಷಗಳಲ್ಲಿ 14,808 ಪ್ರಮುಖ ಶಸ್ತ್ರ ಚಿಕಿತ್ಸೆಗಳು, 28,057 ಸಣ್ಣ ಶಸ್ತ್ರ ಚಿಕಿತ್ಸೆಗಳನ್ನು ಮಾಡಿತ್ತು.









