ಬೆಂಗಳೂರು; ಲೋಕಾಯುಕ್ತ, ಉಪ ಲೋಕಾಯುಕ್ತರು ಆಸ್ತಿ ವಿವರ ಸಲ್ಲಿಸುವ ಸಂಬಂಧ ಕಾಯ್ದೆ ತಿದ್ದುಪಡಿಗೆ ಲೋಕಾಯುಕ್ತ ಸಂಸ್ಥೆಯು 4 ವರ್ಷಗಳಾದರೂ ಸರ್ಕಾರಕ್ಕೆ ಯಾವುದೇ ಅಭಿಪ್ರಾಯವನ್ನು ನೀಡಿಲ್ಲ.
5 ಮಂದಿ ಸಚಿವರೂ ಸೇರಿದಂತೆ 93 ಮಂದಿ ಶಾಸಕರು ಆಸ್ತಿ ವಿವರವನ್ನು ಸಲ್ಲಿಸುವಲ್ಲಿ ವಿಫಲರಾಗಿದ್ದಾರೆ ಎಂದು ಲೋಕಾಯುಕ್ತ ಸಂಸ್ಥೆಯು ಪಟ್ಟಿ ಬಿಡುಗಡೆ ಮಾಡಿದ್ದರ ಬೆನ್ನಲ್ಲೇ ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರ ಆಸ್ತಿ ವಿವರ ಸಂಬಂಧ ಕಾಯ್ದೆ ತಿದ್ದುಪಡಿ ವಿಚಾರವೂ ಮುನ್ನೆಲೆಗೆ ಬಂದಿದೆ.
ಲೋಕಾಯುಕ್ತರು ಮತ್ತು ಉಪ ಲೋಕಾಯುಕ್ತರು ಸ್ಥಿರ ಮತ್ತು ಚರಾಸ್ತಿಗಳ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಲು ಕರ್ನಾಟಕ ಲೋಕಾಯುಕ್ತ ಕಾಯ್ದೆಯಲ್ಲಿ ಅವಕಾಶವಿಲ್ಲ. ಹೀಗಾಗಿ ಆಸ್ತಿ ವಿವರಗಳನ್ನು ಬಹಿರಂಗಗೊಳಿಸಲಾಗದು ಎಂದು ಹಿಂದಿನ ಲೋಕಾಯುಕ್ತ ಪಿ ವಿಶ್ವನಾಥ ಶೆಟ್ಟಿ ಮತ್ತು ಹಾಲಿ ಲೋಕಾಯುಕ್ತ ಬಿ ಎಸ್ ಪಾಟೀಲ್ ಅವರು ಆರ್‍ಟಿಐ ಅಡಿಯಲ್ಲಿ ಮಾಹಿತಿ ಒದಗಿಸಿದ್ದರು.
ಈ ಕುರಿತು ದಿ ಫೈಲ್ ಸರಣಿ ವರದಿಗಳನ್ನು ಪ್ರಕಟಿಸಿತ್ತು. ಶಾಸಕರ ಆಸ್ತಿ ವಿವರ ಕೇಳುವ ಲೋಕಾಯುಕ್ತರು, ಸರ್ಕಾರಕ್ಕೆ ವಿವರಗಳನ್ನು ಸಲ್ಲಿಸುತ್ತಿಲ್ಲ. ಆಸ್ತಿ ವಿವರಗಳನ್ನು ಸಲ್ಲಿಸದೇ ಇರಲು ಕಾರಣಗಳೇನು ಎಂಬುದನ್ನು ‘ದಿ ಫೈಲ್’, ಆರ್‍ಟಿಐ ಅಡಿ ಮಾಹಿತಿ ಪಡೆದು ವರದಿ ಪ್ರಕಟಿಸಿತ್ತು.
ಅಲ್ಲದೇ ಆಸ್ತಿ ವಿವರಗಳನ್ನು ಸಲ್ಲಿಸದೇ ಇರುವ ಶಾಸಕರ ಪಟ್ಟಿಯನ್ನು ಲೋಕಾಯುಕ್ತ ಸಂಸ್ಥೆಯು ಸಾರ್ವಜನಿಕವಾಗಿ ಪ್ರಕಟಿಸುತ್ತಿತ್ತು. ಆದರೂ ಸಹ ಯಾವೊಬ್ಬ ಶಾಸಕರೂ ಸಹ ಲೋಕಾಯುಕ್ತರು ಆಸ್ತಿ ವಿವರ ಸಲ್ಲಿಸಬೇಕು. ಒಂದೊಮ್ಮೆ ಕಾಯ್ದೆಯಲ್ಲಿ ಇರದಿದ್ದರೇ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದೂ ಸಹ ದನಿ ಎತ್ತಿರಲಿಲ್ಲ.
ಈ ಬಗ್ಗೆ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರಲ್ಲದೇ ಲೋಕಾಯುಕ್ತ, ಉಪ ಲೋಕಾಯುಕ್ತರೂ ಆಸ್ತಿ ವಿವರ ಸಲ್ಲಿಸುವ ನಿಟ್ಟಿನಲ್ಲಿ ಕಾಯ್ದೆ ತಿದ್ದುಪಡಿಗೊಳಿಸಬೇಕು ಎಂದು ಪತ್ರದಲ್ಲಿ ಸರ್ಕಾರವನ್ನು ಕೋರಿದ್ದರು.
ಲೋಕಾಯುಕ್ತರ ಆಸ್ತಿ ವಿವರ; ಕಾಯ್ದೆ ತಿದ್ದುಪಡಿಗೆ ಸರ್ಕಾರದ ಮೆಟ್ಟಿಲೇರಿದ ಪರಿಷತ್ ಮಾಜಿ ಸದಸ್ಯ
ಈ ಸಂಬಂಧ ಸ್ಪಷ್ಟ ಅಭಿಪ್ರಾಯ ನೀಡಬೇಕು ಎಂದು ಸರ್ಕಾರವು ಲೋಕಾಯುಕ್ತ ಸಂಸ್ಥೆಗೆ ಪತ್ರವನ್ನು ಬರೆದಿತ್ತು.
ಲೋಕಾಯುಕ್ತರ ಆಸ್ತಿ ವಿವರ; ಸ್ಪಷ್ಟ ಅಭಿಪ್ರಾಯ ನೀಡಲು ರಿಜಿಸ್ಟ್ರಾರ್‌ಗೆ ನಿರ್ದೇಶನ
ಕಾನೂನು ತಿದ್ದುಪಡಿ ತರುವ ಸಂಬಂಧ ಕಾನೂನು, ಸಂಸದೀಯ ವ್ಯವಹಾರಗಳ ಸಚಿವಾಲಯವು ತನ್ನ ಹೊಣೆಗಾರಿಕೆಯನ್ನು ಸಿಬ್ಬಂದಿ ಮತ್ತು ಆಡಳಿತ ಮತ್ತು ಸುಧಾರಣೆ ಇಲಾಖೆ ವರ್ಗಾಯಿಸಿತ್ತು.
ಲೋಕಾಯುಕ್ತರ ಆಸ್ತಿವಿವರ; ಕಾಯ್ದೆ ತಿದ್ದುಪಡಿ ಹೊಣೆಗಾರಿಕೆ ಸಿಎಂ ಹೆಗಲಿಗೆ ವರ್ಗಾವಣೆ
ಕರ್ನಾಟಕ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ಮಾಡಿ ಲೋಕಾಯುಕ್ತದಲ್ಲಿ ಕಾರ್ಯನಿರ್ವಹಿಸುವ ಲೋಕಾಯುಕ್ತರು ಮತ್ತು ಉಪಲೋಕಾಯುಕ್ತರು ಸಾರ್ವಜನಿಕ ಹಿತ ದೃಷ್ಟಿಯಿಂದ ತಮ್ಮ ಆಸ್ತಿ ಮತ್ತು ದಾಯಿಕ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸಲು ಕಾಯ್ದೆ ತರಬೇಕು ಎಂದು ಮನವಿ ಮಾಡಿದ್ದರು.

ಇವರ ಮನವಿಗೆ ಅನುಗುಣವಾಗಿ ಸರ್ಕಾರವು 2021ರ ಆಗಸ್ಟ್ 6ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಪತ್ರ ಬರೆದಿತ್ತಲ್ಲದೇ ಕಾಯ್ದೆ ತಿದ್ದುಪಡಿಗೆ ಮುಂದಿನ ಕ್ರಮ ಕೈಗೊಳ್ಳಲು ಸೂಚನೆಯನ್ನು ನೀಡಿತ್ತು. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 2021ರ ಅಕ್ಟೋಬರ್ 27ರಂದು ಕರ್ನಾಟಕ ಲೋಕಾಯುಕ್ತದ ನಿಬಂಧಕರಿಗೆ ಪತ್ರ ಬರೆದಿತ್ತು.

ಆದರೆ ಲೋಕಾಯುಕ್ತ ಸಂಸ್ಥೆಯು ಇದುವರೆಗೂ ಕಾನೂನು ಇಲಾಖೆಯ ಪತ್ರಕ್ಕೆ ಯಾವುದೇ ಅಭಿಪ್ರಾಯವನ್ನೂ ನೀಡಿಲ್ಲ. ಹೀಗಾಗಿ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಅವರು ಕಾನೂನು ಸಚಿವ ಎಚ್ ಕೆ ಪಾಟೀಲ್ ಅವರಿಗೆ 2025ರ ನವೆಂಬರ್ 9ರಂದು ಮತ್ತೊಂದು ಪತ್ರ ಬರೆದಿದ್ದಾರೆ.
ಈ ಪತ್ರದ ಪ್ರತಿಯು ‘ದಿ ಫೈಲ್’ ಗೆ ಲಭ್ಯವಾಗಿದೆ.

ರಮೇಶ್ ಬಾಬು ಅವರ ಬರೆದಿದ್ದ ಪತ್ರದ ಆಧಾರದ ಮೇಲೆ ಕಾಯ್ದೆ ತಿದ್ದುಪಡಿಗೆ ಅಭಿಪ್ರಾಯ ನೀಡಬೇಕು ಎಂದು ಕೇಳಿತ್ತು. ಆದರೆ ಸರ್ಕಾರದ ಪತ್ರಕ್ಕೆ ಲೋಕಾಯುಕ್ತ ನಿಬಂಧಕರಿಂದ ಯಾವುದೇ ಉತ್ತರವಾಗಲಿ ಅಥವಾ ಮಾಹಿತಿಯಾಗಲಿ ನೀಡಿಲ್ಲ. ಈ ಬಗ್ಗೆ ಇದುವರೆಗೆ ಯಾವುದೇ ಮಾಹಿತಿಯನ್ನು ಸಾರ್ವಜನಿಕವಾಗಿ ನೀಡಿಲ್ಲ ಎಂದು ರಮೇಶ್ ಬಾಬು ಅವರು ಸಚಿವ ಎಚ್ ಕೆ ಪಾಟೀಲ್ ಅವರಿಗೆ ಬರೆದಿರುವ ಪತ್ರದಲ್ಲಿ ಗಮನಸೆಳೆದಿರುವುದು ಗೊತ್ತಾಗಿದೆ.
ಲೋಕಾಯುಕ್ತ ಸಂಸ್ಥೆ ಪಾರದರ್ಶಕವಾಗಿ ನಡೆದುಕೊಳ್ಳಬೇಕಾಗಿರುವುದು ಸಾರ್ವಜನಿಕ ಹಿತ ದೃಷ್ಟಿಯಿಂದ ಮುಖ್ಯವಾಗಿದೆ. ಕರ್ನಾಟಕದಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಸ್ವಯಂ ಪ್ರೇರಿತವಾಗಿ ತಮ್ಮ ಆಸ್ತಿ ವಿವರಗಳನ್ನು ಪ್ರಕಟಿಸುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತಂದು ಲೋಕಾಯುಕ್ತರು /ಉಪಲೋಕಾಯುಕ್ತರು ತಮ್ಮ ಆಸ್ತಿಯ ವಿವರಗಳನ್ನು ಬಹಿರಂಗಗೊಳಿಸುವಂತೆ ತಿದ್ದುಪಡಿ ಮಾಡುವುದು ಅನಿವಾರ್ಯವಾಗಿದೆ ಎಂದು ರಮೇಶ್ ಬಾಬು ಅವರು ಸಚಿವ ಹೆಚ್ ಕೆ ಪಾಟೀಲ್‌ರಿಗೆ ಬರೆದಿರುವ ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ವಾರ್ಷಿಕ ವರದಿಗಳನ್ನೇ ಮಂಡಿಸದ ಲೋಕಾಯುಕ್ತ
ಕರ್ನಾಟಕ ಲೋಕಾಯುಕ್ತ ಸಂಸ್ಥೆಯು 2017 -18 ನೇ ಸಾಲಿನಿಂದ 2021-22ನೇ ಸಾಲಿನವರೆಗೆ ವಾರ್ಷಿಕ ವರದಿಗಳನ್ನು ವಿಧಾನಮಂಡಲದಲ್ಲಿ ಮಂಡಿಸಿರುವುದಿಲ್ಲ. ಕರ್ನಾಟಕ ವಿಧಾನ ಪರಿಷತ್ತಿನ 153 ನೇ ಅಧಿವೇಶನದಲ್ಲಿ ಮಂಡಿಸಲಾದ ಇಲಾಖಾ ವಾರ್ಷಿಕ ವರದಿ ಲೆಕ್ಕ ಪತ್ರಗಳ ಪಟ್ಟಿಯಲ್ಲಿ, ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ತನ್ನ 4 ವರ್ಷದ ವಾರ್ಷಿಕ ವರದಿಗಳನ್ನು ಮಂಡಿಸಿಲ್ಲ.
ಪ್ರತಿ ಸಂಸ್ಥೆಯು ತನ್ನ ವಾರ್ಷಿಕ ವರದಿಗಳನ್ನು ಮತ್ತು ಲೆಕ್ಕ ಪತ್ರಗಳನ್ನು ವಿಧಾನ ಮಂಡಲದಲ್ಲಿ ಮಂಡಿಸಬೇಕು. ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ತನ್ನ ವರದಿಗಳನ್ನು ಮಂಡಿಸದಿರುವುದು ವಿಧಾನಪರಿಷತ್ತಿನ ವರದಿಯಲ್ಲಿ ಕಂಡುಬಂದಿದೆ. ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ತನ್ನ ವಾರ್ಷಿಕ ವರದಿಯನ್ನು ಅನುಮೋದನೆಗಾಗಿ ನಿಯಮಾನುಸಾರ ವಿಧಾನ ಮಂಡಲದಲ್ಲಿ ಮಂಡಿಸಲು ಕ್ರಮ ಕೈಗೊಳ್ಳಬೇಕು ಎಂದು ರಮೇಶ್ ಬಾಬು ಅವರು ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.
ಕರ್ನಾಟಕ ಲೋಕಾಯುಕ್ತ ಕಾಯಿದೆ ಅನ್ವಯ ಪ್ರತಿ ವರ್ಷ ಕರ್ನಾಟಕ ರಾಜ್ಯ ವಿಧಾನ ಮಂಡಲದ ಸದಸ್ಯರು ತಮ್ಮ ಆಸ್ತಿಯ ವಿವರಗಳನ್ನು ಲೋಕಾಯುಕ್ತ ಸಂಸ್ಥೆಗೆ ಸಲ್ಲಿಕೆ ಮಾಡಬೇಕು. ತಮ್ಮ ಆಸ್ತಿ ವಿವರಗಳನ್ನು ಜೂನ್ 30ರ ಒಳಗೆ ಸಲ್ಲಿಸದ ಶಾಸಕರ ಪಟ್ಟಿಯನ್ನು ಲೋಕಾಯುಕ್ತ ಕಾಯಿದೆಯ ಪ್ರಕಾರ ಬಿಡುಗಡೆ ಮಾಡಿದೆ.
ಸಾರ್ವಜನಿಕ ಹಿತ ದೃಷ್ಟಿಯಿಂದ ಇದು ಅವಶ್ಯಕ. ಅದೇ ರೀತಿ ಲೋಕಾಯುಕ್ತ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಲೋಕಾಯುಕ್ತರು/ ಉಪ ಲೋಕಾಯುಕ್ತರು ತಮ್ಮ ಆಸ್ತಿ ಪಟ್ಟಿಯನ್ನು ಪ್ರಕಟಿಸುವುದು ಸಾರ್ವಜನಿಕ ಹಿತದೃಷ್ಟಿಯಿಂದ ಅವಶ್ಯಕವಾಗಿದೆ ಎಂದು ರಮೇಶ್ ಬಾಬು ಅವರು ಪತ್ರದಲ್ಲಿ ಹೇಳಿದ್ದಾರೆ.
‘ಪಾರದರ್ಶಕ ಆಡಳಿತದ ಕಾರಣಕ್ಕಾಗಿ ಲೋಕಾಯುಕ್ತ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ನ್ಯಾಯಮೂರ್ತಿಗಳು ಮತ್ತು ಸರ್ಕಾರಿ ನೌಕರರು ತಮ್ಮ ಆಸ್ತಿಯ ವಿವರಗಳನ್ನು ಬಹಿರಂಗಗೊಳಿಸುವುದು ಒಂದು ಆರೋಗ್ಯಕರ ಮತ್ತು ಅವಶ್ಯಕವಾದ ಕ್ರಮವಾಗಿದೆ. ಈ ಹಿನ್ನೆಲೆಯಲ್ಲಿ ಬರುವ ಅಧಿವೇಶನದಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಕಾಯ್ದೆಗೆ ತಿದ್ದುಪಡಿ ತಂದು ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಇರುವ ಲೋಕಾಯುಕ್ತರು, ಉಪಲೋಕಾಯುಕ್ತರು ಮತ್ತು ನೌಕರರು ಪ್ರತಿ ವಾರ್ಷಿಕ ವರ್ಷದಲ್ಲಿ ತಮ್ಮ ಆಸ್ತಿಗಳನ್ನು ಬಹಿರಂಗಗೊಳಿಸಲು ಕಾಯ್ದೆಗೆ ತಿದ್ದುಪಡಿ ತರಬೇಕು,’ ಎಂದು ರಮೇಶ್ ಬಾಬು ಅವರು ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.









