ಬೆಂಗಳೂರು; ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರತಿನಿಧಿಸಿರುವ ಚಿತ್ತಾಪೂರ ತಾಲೂಕಿನ ವಿದ್ಯಾರ್ಥಿಗಳ ಶಾಲಾ ಹಾಜರಾತಿಯು ಕನಿಷ್ಠತೆಯಿಂದ ಕೂಡಿದೆ ಎಂದು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ನಡೆಸಿರುವ ಮೌಲ್ಯಮಾಪನ ವರದಿಯಿಂದ ಬಹಿರಂಗವಾಗಿದೆ.
ರಾಷ್ಟ್ರೀಯ ಸ್ವಯಂ ಸೇವಕ್ ಸಂಘ್ (ಆರ್‍ಎಸ್‌ಎಸ್) ನಿಷೇಧಿಸಬೇಕು ಮತ್ತು ಪಥ ಸಂಚಲನದಲ್ಲಿ ಪಾಲ್ಗೊಂಡ ಸರ್ಕಾರಿ ನೌಕರರ ವಿರುದ್ಧ ಕ್ರಮ ಜರುಗಿಸಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಸಂಘ ಪರಿವಾರವು ಕಿಡಿ ಕಾರಿತ್ತು. ಈ ಬೆಳವಣಿಗೆ ನಡುವೆಯೇ ಚಿತ್ತಾಪೂರ ತಾಲೂಕಿನಲ್ಲಿ ವಿದ್ಯಾರ್ಥಿಗಳು ಕನಿಷ್ಟ ಹಾಜರಾತಿಯ ಅಗತ್ಯವನ್ನೂ ಪೂರೈಸಿಲ್ಲ ಎಂದು ವಿಶ್ಲೇಷಿಸಿರುವ ಮೌಲ್ಯಮಾಪನ ವರದಿಯು ಮುನ್ನೆಲೆಗೆ ಬಂದಿದೆ.
ಶಾಲಾ ಮತ್ತು ಸಾಕ್ಷರತಾ ಇಲಾಖೆಯಲ್ಲಿನ “ಸಮಗ್ರ ಶಿಕ್ಷಣ ಕರ್ನಾಟಕ ಕಾರ್ಯಕ್ರಮದ 2018-19 ರಿಂದ 2020-21 ರ ವರೆಗಿನ ಮೌಲ್ಯಮಾಪನʼ ನಡೆಸಿರುವ ಮೈಸೂರಿನ ಗ್ರಾಸ್ ರೂಟ್ಸ್ ರಿಸರ್ಚ್ ಅಂಡ್ ಅಡ್ವೊಕಸಿ ಮೂವ್ ಮೆಂಟ್ (ಜಿಆರ್ ಎಎಎಂ) ಕಳೆದ ಜುಲೈನಲ್ಲಿ ಅಧ್ಯಯನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
ವಿಶೇಷವೆಂದರೇ ಮೌಲ್ಯಮಾಪನ ನಡೆದ ಅವಧಿಯಲ್ಲಿಯೂ ಪ್ರಿಯಾಂಕ್ ಖರ್ಗೆ ಅವರು ಸಚಿವರಾಗಿದ್ದರು. 2020ರಿಂದ 2023ವರೆಗೆ ಶಾಸಕರೂ ಆಗಿದ್ದರು. ಸದ್ಯ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಮಗ್ರ ಶಿಕ್ಷಣ ಅನುಷ್ಠಾನದ ಕುರಿತು ಬೆಳಕು ಚೆಲ್ಲಿರುವ ಈ ಮೌಲ್ಯಮಾಪನ ವರದಿಯು, ಚಿತ್ತಾಪುರ ತಾಲೂಕು ಸೇರಿದಂತೆ ರಾಜ್ಯದ ವಿವಿಧ ತಾಲೂಕಗಳ ಸರ್ಕಾರಿ, ಖಾಸಗಿ ಅನುದಾನಿತ, ಖಾಸಗಿ ಅನುದಾನ ರಹಿತ ಶಾಲೆಗಳ ಮಕ್ಕಳ ಕನಿಷ್ಠ ಹಾಜರಾತಿ ಬಗ್ಗೆಯೂ ಮೌಲ್ಯಮಾಪನ ಮಾಡಿದೆ.
ಈ ಮೌಲ್ಯಮಾಪನ ವರದಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

ರಾಜ್ಯದ ಉಳಿದ ತಾಲೂಕುಗಳಿಗೆ ಹೋಲಿಸಿದರೇ ಚಿತ್ತಾಪುರ ತಾಲೂಕಿನಲ್ಲಿ ವಿದ್ಯಾರ್ಥಿಗಳ ಹಾಜರಾತಿಯು ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಶೇ. 28 ಫಲಾನುಭವಿ ವಿದ್ಯಾರ್ಥಿಗಳು ಕನಿಷ್ಠ ಹಾಜರಾತಿಗೆ ನಿಗದಿಪಡಿಸಿದ ದಿನಗಳಲ್ಲೂ ಶಾಲೆಗೆ ಹಾಜರಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಚಿತ್ತಾಪುರದಲ್ಲಿ ಕೇವಲ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಮಾತ್ರ ಇಂತಹ ಪರಿಸ್ಥಿತಿಯಿಲ್ಲ. ಬದಲಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲೂ ಇಂತಹ ಸ್ಥಿತಿ ಇದೆ.

ಚಿತ್ತಾಪುರದಲ್ಲಿ ಅನುದಾನ ರಹಿತ ಶಾಲೆಗಳ ಶೇ. 3ರಷ್ಟು ವಿದ್ಯಾರ್ಥಿಗಳು ಕನಿಷ್ಟ ಹಾಜರಾತಿಯನ್ನು ಪೂರೈಸಿಲ್ಲ.

ಚಿತ್ತಾಪುರ ತಾಲೂಕಿನ ಹಳಕರ್ಟಿ ಗ್ರಾಮವೂ ಸೇರಿದಂತೆ ಹಲವು ಗ್ರಾಮಗಳಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ಗೋಡೆ ಬಿರುಕು ಬಿಟ್ಟ ಶಾಲೆಗಳಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಗೋಡೆಗಳು ಶಿಥಿಲಗೊಂಡಿವೆ. ಕಟ್ಟಡದ ಮೇಲ್ಛಾವಣಿಗಳೂ ಸುರಕ್ಷತೆಯಿಲ್ಲ ಎಂದು ಈ ಹಿಂದೆ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಕಬ್ಬಿಣ ರಾಡುಗಳು ತುಕ್ಕು ಹಿಡಿದು ಅಪಾಯ ಮೂಡಿಸಿವೆ. ಒಟ್ಟಿನಲ್ಲಿ ಹಳೆಯ ಶಾಲಾ ಕಟ್ಟಡಗಳು ಮಕ್ಕಳ ಜೀವ ನುಂಗಲು ಹವಣಿಸುತ್ತಿವೆ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಬಿಸಿಯೂಟದ ವಾಸನೆ ಹಿಡಿದು ಶಾಲೆಗಳಿಗೆ ಹಂದಿಗಳ ಹಿಂಡು ಶಾಲೆಗೆ ಬರುತ್ತಿವೆ. ಕಿಟಕಿ, ಬಾಗಿಲು, ಮೇಜು, ತಿಜೋರಿ ಪೀಠೋಪಕರಣಗಳು ಓಬಿರಾಯನ ಕತೆ ಹೇಳುತ್ತವೆ. ಒಟ್ಟಿನಲ್ಲಿ ಮಕ್ಕಳು ಪ್ರಾಣ ಭೀತಿಯಿಂದಲೇ ತರಗತಿಗಳಿಗೆ ಹಾಜರಾಗುತ್ತಿದ್ದಾರೆ ಎಂದು ಗೊತ್ತಾಗಿದೆ.
ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯ ಚಿತ್ತಾಪುರ, ಶಹಾಬಾದ್, ಕಾಳಗಿ ತಾಲೂಕುಗಳ ಸರ್ಕಾರಿ ಶಾಲೆಗಳು ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ. ಇಲ್ಲಿನ ಶಾಲಾ ತರಗತಿಗಳ ಕೋಣೆಗಳು ಶಿಥಿಲಗೊಂಡಿವೆ. ಕಟ್ಟಡಗಳು ಹಳತಾಗಿವೆ. ಗ್ರಂಥಾಲಯ ಸಮಸ್ಯೆ ಇದೆ. ಶಾಲಾ ಪರಿಸರ ಹದಗೆಟ್ಟಿದೆ. ಕ್ರೀಡಾ ಚಟುವಟಿಕೆಗಳಿಗೆ ಆಟದ ಮೈದಾನ ಕೊರತೆಯಿದೆ.

ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ ಒಟ್ಟು 276 ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ, 49 ಸರ್ಕಾರಿ ಪ್ರೌಢಶಾಲೆ ಸೇರಿ ಒಟ್ಟಾರೆ 325 ಶಾಲೆಗಳಿವೆ. 2024-25ನೇ ಸಾಲಿನಲ್ಲಿ 35,369 ಮಕ್ಕಳು ದಾಖಲಾಗಿದ್ದಾರೆ. ಈ ಶಾಲೆಗಳಲ್ಲಿ 324 ತರಗತಿ ಕೋಣೆಗಳು ಶಿಥಿಲಗೊಂಡಿವೆ.

ಕ್ರೀಡಾ ಚಟುವಟಿಕೆಗಳಿಗಾಗಿ ಒಟ್ಟು 150 ಶಾಲೆಗಳಿಗೆ ಆಟದ ಮೈದಾನವಿದೆ. ಆದರೆ ನಿರ್ವಹಣೆ ಕೊರತೆ ಇದೆ. 175 ಶಾಲೆಗಲೀಗೆ ಆಟದ ಮೈದಾನವೇ ಇಲ್ಲ. ಇದರಿಂದ ಸಹ ಪಠ್ಯ ಚಟುವಟಿಕೆಗಳೇ ನಡೆಯುತ್ತಿಲ್ಲ. 295 ಶಾಲೆಗಳಲ್ಲಿ ಗ್ರಂಥಾಲಯ ಸೌಲಭ್ಯವಿದೆ. 30 ಶಾಲೆಗಳಿಗೆ ಗ್ರಂಥಾಲಯ ಸೌಲಭ್ಯವೇ ಇಲ್ಲ. ಪ್ರತಿ ಶಾಲೆಯಲ್ಲಿಯೂ ಶೌಚಾಲಯವಿದೆ. ಆದರೆ ಈ ಶೌಚಾಲಯಗಳು ಅವ್ಯವಸ್ಥೆಯಿಂದ ಕೂಡಿವೆ. ನಿರ್ವಹಣೆಯಿಲ್ಲದೇ ಸೊರಗಿ ಹೋಗಿವೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯೂ ಸಮರ್ಪಕವಾಗಿಲ್ಲ.
ಚಿತ್ತಾಪುರ ಪಟ್ಟಣದಲ್ಲಿರುವ ಸರ್ಕಾರಿ ಬಾಲಕರ ಪ್ರೌಢಶಾಲೆ ಕಟ್ಟಡವು ಸಂಪೂರ್ಣವಾಗಿ ಶಿಥಿಲಗೊಂಡಿದೆ. ಹನಿ ಮಳೆ ನೀರು ಬಿದ್ದರೇ ತರಗತಿ ಕೋಣೆಗಳು ಸೋರುತ್ತವೆ. ಅಲ್ಲದೇ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದ ಹಿರಿಯ ಪ್ರಾಥಮಿಕ ಶಾಲಯಲ್ಲಿ ಮಕ್ಕಳ ಗೋಳು ಕೇಳುವವರು ಯಾರೂ ಇಲ್ಲ ಎಂಬಂತಾಗಿದೆ. ಮಧ್ಯಾಹ್ನದ ಬಿಸಿಯೂಟಕ್ಕಾಗಿ ಬರೋಬ್ಬರಿ 2 ಕಿ.ಮೀ. ನಡೆಯಬೇಕಾದ ಪರಿಸ್ಥಿತಿ ಇದೆ.

ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಒಂದು ಹೊತ್ತಿನ ಊಟಕ್ಕಾಗಿ ಅಲೆದಾಡುತ್ತಿದ್ದಾರೆ. ಇವರ ಗೋಳು ಕೇಳುವವರು ಯಾರೂ ಇಲ್ಲ ಎಂಬಂತಾಗಿದೆ. ಮಧ್ಯಾಹ್ನದ ಬಿಸಿ ಊಟ ಮಾಡಲು ವಿದ್ಯಾರ್ಥಿಗಳು ಬರೋಬ್ಬರಿ 2 ಕಿಲೋ ಮೀಟರ್ ನಡೆದುಕೊಂಡು ಹೋಗುತ್ತಿದ್ದಾರೆ.
ಶಾಲೆಯಿಂದ ಎರಡು ಕಿ.ಮೀ. ದೂರದಲ್ಲಿರುವ ಪಾಕಶಾಲೆಗೆ ಮಕ್ಕಳು ಕೆರೆಯೇರಿ ಹತ್ತಿಕೊಂಡು ಕಲ್ಲಮುಳ್ಳು ಲೆಕ್ಕಿಸದೇ ಹೋಗುತ್ತಿದ್ದಾರೆ. ಸುಮಾರು 150ಕ್ಕೂ ಹೆಚ್ಚು ಮಕ್ಕಳು ಎಲ್ಲಿ ತಮಗೆ ಹಾವು, ಚೇಳು ಕಚ್ಚುತ್ತೋ ಎಂಬ ಭಯದಲ್ಲೇ ಪ್ರತಿನಿತ್ಯ ನಡೆದುಕೊಂಡು ಹೋಗುತ್ತಿದ್ದಾರೆ.
ಅಕ್ಷರ ದಾಸೋಹದಡಿ ಶಾಲೆಯಲ್ಲೇ ಬಿಸಿಯೂಟ ಮಾಡಬೇಕು ಎಂಬ ನಿಯಮ ಇದೆ. ಆದರೆ ಶಿಕ್ಷಣ ಇಲಾಖೆಯ ನಿಯಮಕ್ಕೂ ಕ್ಯಾರೇ ಎನ್ನದೇ ಮಕ್ಕಳನ್ನ ಅಲೆದಾಡಿಸುತ್ತಿದ್ದಾರೆ. ಇನ್ನಾದರೂ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚೆತ್ತು ಕಣ್ಣಿದ್ದು ಕುರುಡರಂತೆ ವರ್ತಿಸುವ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ ಶಾಲೆ ಬಳಿಯೇ ಊಟ ಮಾಡುವ ವ್ಯವಸ್ಥೆ ಕಲ್ಪಿಸಬೇಕಿದೆ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರರು.
ಅದೇ ರೀತಿ ಕಲ್ಬುರ್ಗಿಯಲ್ಲಿ ಶೇ. 5, ಹುಮ್ನಾಬಾದ್‌ನಲ್ಲಿ ಶೇ. 1, ಸೇಡಂನಲ್ಲಿ ಶೇ.2, ಯಾದಗಿರಿಯಲ್ಲಿ ಶೇ. 3ರಷ್ಟು ವಿದ್ಯಾರ್ಥಿಗಳು ಕನಿಷ್ಟ ಹಾಜರಾತಿ ಅಗತ್ಯವನ್ನೂ ಪೂರೈಸಿಲ್ಲ ಎಂದು ಮೌಲ್ಯಮಾಪನ ವರದಿಯಲ್ಲಿ ಹೇಳಲಾಗಿದೆ.
ಚಿತ್ತಾಪುರ ಕ್ಷೇತ್ರದಿಂದ ಪ್ರಿಯಾಂಕ್ ಖರ್ಗೆ ಅವರು 2013ರಿಂದಲೂ ಆಯ್ಕೆಯಾಗುತ್ತಿದ್ದಾರೆ. ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಐಟಿಬಿಟಿ ಸಚಿವರಾಗಿದ್ದರು. 2018ರಲ್ಲೂ ವಿಧಾನಸಭೆಗೆ ಚುನಾಯಿತರಾಗಿದ್ದ ಪ್ರಿಯಾಂಕ್ ಖರ್ಗೆ ಅವರು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದರು. 2023ರಲ್ಲಿಯೂ ಚಿತ್ತಾಪುರದಿಂದಲೇ ಆಯ್ಕೆಯಾಗಿರುವ ಪ್ರಿಯಾಂಕ್ ಖರ್ಗೆ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಮತ್ತು ಐಟಿಬಿಟಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಸ್ಮರಿಸಬಹುದು.
ಚಿಂಚೋಳಿ ತಾಲೂಕಿನಲ್ಲಿಯೂ ಸಹ ಮಕ್ಕಳು ಶಾಲೆಗೆ ಹಾಜರಾಗುತ್ತಿಲ್ಲ. ಈ ತಾಲೂಕಿನಲ್ಲಿ ಶೇ. 14ರಷ್ಟು ಮಕ್ಕಳು ಕನಿಷ್ಠ ಹಾಜರಾತಿ ಅಗತ್ಯವನ್ನೂ ಪೂರೈಸಿಲ್ಲ. ಇದಕ್ಕೆ ಮಕ್ಕಳ, ಪೋಷಕರ ಅನಾರೋಗ್ಯ, ಮನೆಕೆಲಸಗಳಿಗೆ ಹಾಜರಾಗುವುದು, ಕೃಷಿಕೆಲಸಗಳಲ್ಲಿ ತೊಡಗುವುದು ಸಹ ಇದಕ್ಕೆ ಕಾರಣವಾಗಿದೆ.

ಅಲ್ಲದೇ ಚಿಂಚೋಳಿ ತಾಲೂಕಿನಲ್ಲಿ ಶೇ. 70ರಷ್ಟು ವಿದ್ಯಾರ್ಥಿಗಳಿಗೆ ಶಿಕ್ಷಕರು ಡಿಜಿಟಲ್ ಬೋಧನಾ ವಿದಾನಗಳನ್ನು ಬಳಸುತ್ತಿಲ್ಲ ಎಂದು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.









