1.50 ಕೋಟಿ ವಂಚನೆ ಆರೋಪ; ಅನಂತ್‌ ನಾಯಕ್‌ಗೆ ಲೀಗಲ್ ನೋಟೀಸ್‌ ಜಾರಿಗೊಳಿಸಿದ ವಕೀಲ ಬಾಲನ್

ಬೆಂಗಳೂರು; 1.50 ಕೋಟಿ ರು ವಂಚನೆ ಮಾಡಿದ್ದಾರೆ ಎಂಬ ಆರೋಪಿತ ಪ್ರಕರಣಕ್ಕೆ ಸಂಬಂಧಿಸಿದಂತೆ  ಅನಂತ್‌ ನಾಯಕ್‌ ಎಂಬುವರಿಗೆ  ಹಿರಿಯ ವಕೀಲ ಎಸ್‌ ಬಾಲನ್‌ ಅವರು ಲೀಗಲ್‌ ನೋಟೀಸ್‌ ಜಾರಿಗೊಳಿಸಿದ್ದಾರೆ.

 

ಅನಂತ್‌ ನಾಯಕ್‌  ಅವರು  ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಸೇರಿದಂತೆ ರಾಜ್ಯದ ಹಲವು ಸಚಿವರು, ಕಾಂಗ್ರೆಸ್‌ ಮುಖಂಡರೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ. ಹಿಂದುಳಿದ ವರ್ಗಗಳ ಅನೇಕ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ವಿರುದ್ಧ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು  ವರ್ಷದ ಹಿಂದೆಯೇ  ಎಫ್‌ಐಆರ್‍‌ ಕೂಡ ದಾಖಲಾಗಿತ್ತು. ಈ ಪ್ರಕರಣದ ತನಿಖೆಯು ತೆವಳುತ್ತಿದೆ.

 

ಈ ಪ್ರಕರಣದಲ್ಲಿ ಹಣ ಕಳೆದುಕೊಂಡಿರುವ ಕಕ್ಷಿದಾರ ಪರ ವಕೀಲ ಎಸ್‌ ಬಾಲನ್‌ ಅವರು ಅನಂತ್‌ ನಾಯಕ್‌ ಅವರಿಗೆ  ಲೀಗಲ್ ನೋಟೀಸ್‌ ಜಾರಿಗೊಳಿಸಿರುವುದು ಪ್ರಗತಿಪರರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

 

ಸರ್ಕಾರಿ ಟೆಂಡರ್‌ಗಳು, ಹಿಂದುಳಿದ ವರ್ಗ, ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿನ ವಸತಿ ನಿಲಯಗಳಿಗೆ ಬೆಡ್‌ಶೀಟ್‌ಗಳು, ಕಂಬಳಿ, ಇನ್ನಿತರೆ ಪರಿಕರಗಳನ್ನು ಒದಗಿಸುವ ಗುತ್ತಿಗೆ ಕೊಡಿಸುವುದಾಗಿ ನಂಬಿಸಿ ಹಣ ವಂಚಿಸುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ ಎಂದು ನೋಟೀಸ್‌ನಲ್ಲಿ  ವಿವರಿಸಿದ್ದಾರೆ.

 

ವಕೀಲರಾದ ಎಸ್ ಬಾಲನ್‌ ಅವರು 2025ರ ಸೆ.23ರಂದು  ಅನಂತ್‌ ನಾಯಕ್‌ ಅವರಿಗೆ ಜಾರಿಗೊಳಿಸಿರುವ  ನೋಟೀಸ್‌ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ನೋಟೀಸ್ ಜಾರಿಗೊಳಿಸಿರುವುದನ್ನು ವಕೀಲ ಎಸ್‌ ಬಾಲನ್‌ ಅವರು ‘ದಿ ಫೈಲ್‌’ಗೆ ಖಚಿತಪಡಿಸಿದ್ದಾರೆ. ವಕೀಲ  ಎಸ್‌ ಬಾಲನ್‌ ಅವರು ಅನೇಕ ಪ್ರಗತಿಪರ ಚಳವಳಿಗಳೊಂದಿಗೆ ಮತ್ತು   ಹಲವು ನಾಗರೀಕ ಸಂಘಟನೆಗಳೊಂದಿಗೆ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.

 

ಬಾಲನ್‌ ನೀಡಿರುವ ನೋಟೀಸ್‌ನಲ್ಲೇನಿದೆ?

 

ಸಿದ್ದರಾಮಯ್ಯ, ಸತೀಶ್‌ ಜಾರಕಿಹೊಳಿ ಮತ್ತು ಕಾಂಗ್ರೆಸ್ ಪಕ್ಷದ ಇತರ ಪ್ರಮುಖ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿದ್ದೀರಿ ಎಂದು ನಮ್ಮ ಕಕ್ಷಿದಾರರೊಂದಿಗೆ ಪರಿಚಯಿಸಿಕೊಂಡಿದ್ದೀರಿ. ಅಲ್ಲದೇ ಮುಖ್ಯ ಕಾರ್ಯದರ್ಶಿ, ಪೊಲೀಸ್‌ ಆಯುಕ್ತರು ಮತ್ತು ಇತರರೊಂದಿಗೆ ನೀವು ಆಪ್ತರು ಎಂದು ಬಿಂಬಿಸಿಕೊಂಡಿದ್ದೀರಿ. ಡಿಸೆಂಬರ್ 2021 ರಲ್ಲಿ ಆಕಸ್ಮಿಕವಾಗಿ ನೀವು ಯು.ಬಿ. ಸಿಟಿಯಲ್ಲಿ ನಮ್ಮ ಕಕ್ಷಿದಾರರನ್ನು ಭೇಟಿಯಾಗಿ ಸರ್ಕಾರಿ ಒಪ್ಪಂದ, ಟೆಂಡರ್‌ಗಳು, ಬೆಡ್‌ಶೀಟ್‌ಗಳು, ಕಂಬಳಿ ಮತ್ತು ಸರ್ಕಾರ ನಡೆಸುವ ಹಾಸ್ಟೆಲ್‌ಗಳಿಗೆ ಮತ್ತು ಇತರ ಯೋಜನೆಗಳಿಗೆ ಇತರ ಪರಿಕರಗಳನ್ನು ಪಡೆಯಬಹುದು ಎಂದು ಹೇಳುವ ಮೂಲಕ ಅವರನ್ನು ಪ್ರೇರೇಪಿಸಿದ್ದೀರಿ. ಸರ್ಕಾರಿ ಇಲಾಖೆಯಲ್ಲಿ 17 ಕೋಟಿ ಮೌಲ್ಯದ ಟೆಂಡರ್‌ಗಳನ್ನು ಪಡೆಯುವುದಾಗಿಯೂ ನೀವು ಭರವಸೆ ನೀಡಿದ್ದೀರಿ ಎಂದು ತಿಳಿಸಿರುವುದು ನೋಟೀಸ್‌ನಿಂದ ಗೊತ್ತಾಗಿದೆ.

 

ವಕೀಲ ಬಾಲನ್‌ ಅವರು ಜಾರಿಗೊಳಿಸಿರುವ ನೋಟೀಸ್‌ನ ಪ್ರತಿ

 

ಜೂನ್ 2022 ರಲ್ಲಿ ನೀವು ವೈಯಕ್ತಿಕವಾಗಿ ನಮ್ಮ ಕಕ್ಷಿದಾರರ ವಸತಿ ಗೃಹಕ್ಕೆ ಭೇಟಿ ನೀಡಿದ್ದೀರಿ. ಚುನಾವಣೆಯ ಸಮಯದಲ್ಲಿ ಅವರ ಪತ್ನಿಯ ಉಮೇದುವಾರಿಕೆಯನ್ನು ಬೆಂಬಲಿಸುವುದಾಗಿ ಹೇಳಿದ್ದೀರಿ. ಮತ್ತು ಬಡ್ಡಿರಹಿತ ಸಾಲವನ್ನು ನೀಡುವ ಮೂಲಕ ಆರ್ಥಿಕವಾಗಿ ಬೆಂಬಲಿಸುವುದಾಗಿ ಭರವಸೆ ನೀಡಿ ಪ್ರೇರೇಪಿಸಿದ್ದೀರಿ ಎಂದು ಹೇಳಿರುವುದು ನೋಟೀಸ್‌ನಿಂದ ತಿಳಿದು ಬಂದಿದೆ.

 

ಜುಲೈ 2022 ರಲ್ಲಿ ನೀವು ನಮ್ಮ ಕಕ್ಷಿದಾರರನ್ನು ಅವರ ಮನೆಯಲ್ಲಿ ಸಂಪರ್ಕಿಸಿದ್ದೀರಿ. ಟೆಂಡರ್‌ಗಳು ಮತ್ತು ಒಪ್ಪಂದಗಳನ್ನು ಪಡೆಯಲು 1.5 ಕೋಟಿ ರೂ.ಗಳನ್ನು ಕೇಳಿದ್ದೀರಿ. ಮತ್ತು ಆ ಹಣವನ್ನು ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರ ವೆಚ್ಚಗಳನ್ನು ಪೂರೈಸಲು ಬಳಸಲಾಗುತ್ತದೆ ಎಂದು ತಿಳಿಸಿದ್ದೀರಿ. ಈ ಬಗ್ಗೆ ನಮ್ಮ ಕಕ್ಷಿದಾರರೊಂದಿಗೆ ಪದೇ ಪದೇ ಮಾತನಾಡಿದ ನಂತರ ಆರ್‌ಟಿಜಿಎಸ್ ಅಥವಾ ಖಾತೆ ವರ್ಗಾವಣೆ ಅಥವಾ ಡಿಡಿ ಮೂಲಕ 1.5 ಕೋಟಿ ರೂ.ಗಳನ್ನು ವರ್ಗಾಯಿಸಬಹುದು ಎಂದು ಸೂಚಿಸಿದ್ದೀರಿ. ಆದರೆ ನೀವು ನಗದು ರೂಪದಲ್ಲಿ ಪಾವತಿಸಬೇಕೆಂದು ಒತ್ತಾಯಿಸಿದ್ದೀರಿ ಎಂದು ನೋಟೀಸ್‌ನಲ್ಲಿ ಹೇಳಿರುವುದು ಗೊತ್ತಾಗಿದೆ.

 

 

ಸೆಪ್ಟೆಂಬರ್ 19, 2022 ರಂದು ನಮ್ಮ ಕಕ್ಷಿದಾರರು ನಿಮಗೆ 1.5 ಕೋಟಿ ರೂ.ಗಳನ್ನು ನೀಡಲು ತಮ್ಮ ಸ್ವಂತ ಮೂಲ ಮತ್ತು ಸಾಲ ಎತ್ತುವ ಮೂಲಕ ಪಾವತಿಸಿದ್ದಾರೆ. ಮತ್ತು ಅವರ ಪತ್ನಿ, ಮಧುಸೂಧನ್ ಮತ್ತು ದಿಲೀಪ್ ಅವರ ಸಮ್ಮುಖದಲ್ಲಿ ಅವರ ನಿವಾಸದಲ್ಲಿ ನಿಮಗೆ 50 ಲಕ್ಷ ರೂ.ಗಳನ್ನು ಪಾವತಿಸಿದ್ದಾರೆ.

 

ನೀವು ನಗದು ಪಡೆದ ನಂತರ,  ನಾನ್‌ ಜ್ಯುಡಿಯಷಿಯಲ್ ಪೇಪರ್‍‌ನಲ್ಲಿ ಹಣದ ಸ್ವೀಕೃತಿಯನ್ನು ಅನುಮೋದಿಸಿದ್ದೀರಿ. ಯಾವುದೇ ಸಂದರ್ಭದಲ್ಲಿ ಒಪ್ಪಂದ ಮತ್ತು ಟೆಂಡರ್‌ಗಳು ಕಾರ್ಯರೂಪಕ್ಕೆ ಬರದಿದ್ದರೆ ನೀವು ಸಮಯದೊಳಗೆ ಮೊತ್ತವನ್ನು ಹಿಂದಿರುಗಿಸುತ್ತೀರಿ ಎಂದು ನಮೂದಿಸಿದ್ದೀರಿ. ನೀವು ಸಹಿ ಮಾಡಿರುವ ದಾಖಲೆಯು ನಮ್ಮ ಕಕ್ಷಿದಾರರ ಬಳಿಯಿದೆ. ಅದರ ಪ್ರತಿಯೂ ನಿಮ್ಮ ಬಳಿ ಇದೆ ಎಂದು ನೋಟೀಸ್‌ನಲ್ಲಿ ಗಮನಸೆಳೆದಿರುವುದು ಗೊತ್ತಾಗಿದೆ.

 

ಆದರೆ ನೀವು ಹಣವನ್ನು ಸ್ವೀಕರಿಸಿದ ನಂತರ ಎರಡು ವರ್ಷಗಳ ಅವಧಿಯಲ್ಲಿ ಟೆಂಡರ್‌ಗಳು ಮತ್ತು ಗುತ್ತಿಗೆ ಕೊಡಿಸಿಲ್ಲ. ಒಂದಲ್ಲ ಒಂದು ನೆಪದಲ್ಲಿ ಕಾಲಹರಣ ಮಾಡಿದ್ದೀರಿ. ಇದೇ ರೀತಿ ನೀವು ಹಲವಾರು ವ್ಯಕ್ತಿಗಳನ್ನು ವಂಚಿಸಿದ್ದೀರಿ ಮತ್ತು ನಿಮ್ಮ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ನಮ್ಮ ಕಕ್ಷಿದಾರರಿಗೆ ತಿಳಿದುಬಂದಿದೆ.

 

 

ನಮ್ಮ ಕಕ್ಷಿದಾರರು ನಿಮಗೆ 1.5 ಕೋಟಿ ರೂಪಾಯಿಗಳ ಪಾವತಿಯ ಕುರಿತು ವಾಟ್ಸಾಪ್ ಮತ್ತು ಎಸ್‌ಎಂಎಸ್ ಮೂಲಕ ಕಳುಹಿಸಿದ ಸಂದೇಶಗಳಿವೆ. ಮತ್ತು ನಿಮಗೆ ಗುತ್ತಿಗೆ, ಟೆಂಡರ್‌ಗಳು ಇತ್ಯಾದಿಗಳನ್ನು ನೀಡುವುದಾಗಿ ಭರವಸೆ ನೀಡುತ್ತಾ ತಿರುಗಾಡುತ್ತಿದ್ದೀರಿ. ಜೊತೆಗೆ ಧ್ವನಿ ಸಂದೇಶದ ಜೊತೆಗೆ ಅವರು ದೂರವಾಣಿ ಸಂಭಾಷಣೆಯನ್ನು ಸಹ ರೆಕಾರ್ಡ್ ಮಾಡಿದ್ದಾರೆ ಎಂದು ವಕೀಲ ಬಾಲನ್‌ ಅವರು ಗಮನ ಸೆಳೆದಿರುವುದು ಗೊತ್ತಾಗಿದೆ.

 

ಬೆಂಗಳೂರು ಮತ್ತು ಇತರ ಸ್ಥಳಗಳಲ್ಲಿ ಉದ್ಯೋಗಗಳನ್ನು ಕೊಡಿಸುವುದಾಗಿ, ಟೆಂಡರ್‌ಗಳು ಮತ್ತು ಗುತ್ತಿಗೆಗಳನ್ನು ಕೊಡಿಸುವುದಾಗಿ ಭರವಸೆ ನೀಡಿ ಹಲವರನ್ನು ವಂಚಿಸಿದ್ದೀರಿ. ವಂಚನೆ, ಮೋಸ ಮಾಡುವುದನ್ನೇ ನೀವು ಅಭ್ಯಾಸ ಮಾಡಿಕೊಂಡಿದ್ದೀರಿ ಎಂದು ನೋಟೀಸ್‌ನಲ್ಲಿ ಹೇಳಲಾಗಿದೆ.

 

ನೀವು ನಮ್ಮ ಕಕ್ಷಿದಾರರ ಮುಗ್ಧತೆಯನ್ನು ಬಳಸಿಕೊಂಡು, ಪದೇ ಪದೇ ಪ್ರೇರೇಪಿಸಿ 1.5 ಕೋಟಿ ರೂಪಾಯಿಗಳನ್ನು ಸ್ವೀಕರಿಸಿದ್ದೀರಿ, ಅದು ವಂಚನೆ ಮತ್ತು ಸುಲಿಗೆಯಾಗಿದೆ. ಆದ್ದರಿಂದ, ಏಳು ದಿನಗಳಲ್ಲಿ ಬಡ್ಡಿಯೊಂದಿಗೆ 1.5 ಕೋಟಿ ರೂಪಾಯಿಗಳನ್ನು ಪಾವತಿಸಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ನಾಗರಿಕ ಮತ್ತು ಕ್ರಿಮಿನಲ್ ಕಾನೂನುಗಳ ಅಡಿಯಲ್ಲಿ ಮೊಕದ್ದಮೆ ಹೂಡಲಾಗುವುದು. ಇದರಿಂದಾಗಿ ಉಂಟಾಗುವ ಎಲ್ಲಾ ವೆಚ್ಚ ಮತ್ತು ಪರಿಣಾಮಗಳಿಗೆ ನೀವೇ ಜವಾಬ್ದಾರರಾಗಿರುತ್ತೀರಿ ಎಂದು ನೋಟೀಸ್‌ನಲ್ಲಿ ಎಚ್ಚರಿಸಿರುವುದು ತಿಳಿದು ಬಂದಿದೆ.

 

 

 

ವಕೀಲ ಬಾಲನ್‌ ಅವರು ನೀಡಿರುವ ನೋಟೀಸ್‌ ಕುರಿತು ‘ದಿ ಫೈಲ್’, ಪ್ರತಿವಾದಿ ಅನಂತ್‌ ನಾಯಕ್‌ ಅವರನ್ನು ಸಂಪರ್ಕಿಸಿತ್ತು.

 

‘ರಾಮಮೂರ್ತಿ ನಗರದ ಕೃಷ್ಣಮೂರ್ತಿ, ಪುಣ್ಯಭೂಮಿ ಪ್ರಾಪರ್ಟಿಸ್ ಮತ್ತು ದೀಪಕ್ ಕುಮಾರ್ ಪಾಟೀಲ್ ಎಂಬುವವರಿಗೆ 2022 ನೇ ಇಸ್ವಿಯಲ್ಲಿ ನಾನೊಬ್ಬ ವಕೀಲನಾಗಿ ಅಗ್ರಿಮೆಂಟ್ ಮಾಡಿಕೊಟ್ಟ ಪ್ರಕರಣವಿದು. ಈಗಾಗಲೇ ಈ ಪ್ರಕರಣ ನ್ಯಾಯಾಲಯದಲ್ಲಿ ಇದೆ. ಕೆಲವರು ನನ್ನನ್ನು ತೇಜೋವಧೆ ಮಾಡಲು ಈ ಪ್ರಕರಣಕ್ಕೆ ಈಗ ಮತ್ತಷ್ಟು ರೆಕ್ಕೆಪುಕ್ಕ ಕಟ್ಟುವ ಷಡ್ಯಂತ್ರ  ಮಾಡುತ್ತಿದ್ದಾರೆ. ಈ ಲೀಗಲ್ ನೋಟೀಸ್ ಸಿಕ್ಕ ನಂತರ ಸೂಕ್ತವಾಗಿ ಉತ್ತರಿಸಲಾಗುವುದು,’ ಎಂದು ಅನಂತ್‌ ನಾಯಕ್‌ ಅವರು ‘ದಿ ಫೈಲ್‌’ ಗೆ ಪ್ರತಿಕ್ರಿಯೆ ನೀಡಿದ್ದಾರೆ.

 

ಏನಿದು ಪ್ರಕರಣ?

 

ಅನಂತ್‌ ನಾಯಕ್‌ ಅವರ ವಿರುದ್ಧ ಇದೇ ಪ್ರಕರಣದಲ್ಲಿ ರಾಮಮೂರ್ತಿ ನಗರದ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‍‌ ಕೂಡ ದಾಖಲಾಗಿತ್ತು.  ಸಮಾಜ ಕಲ್ಯಾಣ ಇಲಾಖೆ  ಅಧೀನದ ಹಾಸ್ಟೆಲ್‌ಗಳಿಗೆ ಹಾಸಿಗೆ ಮತ್ತು ಕಂಬಳಿ   ಸರಬರಾಜು ಟೆಂಡರ್‌ ಕೊಡಿಸುವುದಾಗಿ ನಂಬಿಸಿ 50 ಲಕ್ಷ ಪಡೆದು ವಂಚಿಸಿದ್ದಾರೆ ಎಂಬ ಗುರುತರ ಆರೋಪಕ್ಕೆ ಗುರಿಯಾಗಿರುವ ಅನಂತ್‌ನಾಯಕ್‌ ಮತ್ತಿತರರ ವಿರುದ್ಧ 2023ರ ಜುಲೈ  13ರಂದು  ಎಫ್‌ಐಆರ್‌ ದಾಖಲಾಗಿತ್ತು.

 

‘ಮುಖ್ಯ ಕಾರ್ಯದರ್ಶಿ, ಸಹಾಯಕ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿ ತನಗೆ ಆತ್ಮೀಯರು ಎಂದು ನಂಬಿಸಿ ಎರಡು ಕಂತುಗಳಲ್ಲಿ 50 ಲಕ್ಷ ರು.ಗಳನ್ನು ಪಡೆದಿದ್ದರು. ಮಾತುಕತೆಯಂತೆ ಟೆಂಡರ್‌ ಕೊಡಿಸಿರಲಿಲ್ಲ ಮತ್ತು ಪಡೆದಿದ್ದ 50 ಲಕ್ಷ ರು.ಗಳನ್ನು ವಾಪಸ್‌ ನೀಡಿರಲಿಲ್ಲ,’  ಎಂದು ಗೊಲ್ಲ ಸಮುದಾಯಕ್ಕೆ ಸೇರಿದ ವಿಜಯ್‌ ಸುಹಾಸ್‌ ಎಂಬುವರು ದೂರರ್ಜಿ ನೀಡಿದ್ದರು.

 

ಆರೋಪಿಗಳ ವಿರುದ್ಧ ರಾಮಮೂರ್ತಿ ನಗರ ಪೊಲೀಸ್‌ ಠಾಣೆಯಲ್ಲಿ ಐಪಿಸಿ 1860, ಸೆಕ್ಷನ್‌ 420, 417, 419, 406, 34 ಅಡಿಯಲ್ಲಿ 2023ರ ಜುಲೈ 13ರಂದೇ ಎಫ್‌ಐಆರ್‌ ದಾಖಲಾಗಿತ್ತು.

 

 

ಅನಂತ್‌ ನಾಯಕ್‌ ಅವರನ್ನು ಮೊದಲ ಆರೋಪಿಯನ್ನಾಗಿಸಲಾಗಿದೆ. ಉಳಿದಂತೆ ದೀಪಕ್‌ ಕುಮಾರ್‌ ಪಾಟೀಲ್‌ (ಎ 2), ವಿಜಯ್‌ ರಾಠೋಡ್‌ (ಎ 3), ಅಭಿಷೇಕ್‌ ಗೌಡ ( ಎ 4) ಅವರನ್ನು ಆರೋಪಿಯನ್ನಾಗಿಸಲಾಗಿತ್ತು.

 

 

 

ಎಫ್‌ಐಆರ್‌ನಲ್ಲೇನಿದೆ?

 

ದೂರುದಾರ ವಿಜಯ್‌ ಸುಹಾಸ್‌ ಎಂಬುವರಿಗೆ ವಸಂತ್‌ ಅವರ ಮುಖಾಂತರ ಪರಿಚಯವಾಗಿದ್ದ ಅನಂತ್‌ ನಾಯಕ್‌ ಎಂಬುವರು ತಾನು ವಿಧಾನಸೌಧದಲ್ಲಿ ಸಮಾಜ ಕಲ್ಯಾಣ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದರು.  ತನ್ನ ಸ್ನೇಹಿತ ದೀಪಕ್‌ ಕುಮಾರ್‌ ಪಾಟೀಲ್‌ ಅವರ ಮೂಲಕ ಹಾಸ್ಟೆಲ್‌ಗಳಿಗೆ ಹಾಸಿಗೆ, ಕಂಬಳಿ ಸರಬರಾಜು ಮಾಡುವ ಟೆಂಡರ್‌ ಕೊಡಿಸುತ್ತೇನೆ. ಇದಕ್ಕಾಗಿ 50 ಲಕ್ಷ ರು.ಗಳನ್ನು ಕೊಡಬೇಕು ಎಂದು ತಿಳಿಸಿದ್ದರು ಎಂದು ದೂರಿನಲ್ಲಿ ಹೇಳಲಾಗಿತ್ತು. ಇದೇ ಅಂಶವನ್ನು  ಎಫ್‌ಐಆರ್‍‌ನಲ್ಲಿ  ಉಲ್ಲೇಖಿಸಿತ್ತು.

 

ಮುಖ್ಯಮಂತ್ರಿಗಳು ಆತ್ಮೀಯರು ಎಂದಿದ್ದ ಆರೋಪಿ

 

ಅನಂತ್‌ನಾಯಕ್‌ ಅವರು  50 ಲಕ್ಷ ರು.ಗಳನ್ನು ಕೇಳಿದ್ದರು ಎಂದು ಆರೋಪಿಸಿರುವ  ವಿಜಯ್‌ ಸುಹಾಸ್‌ ಯಾದವ್‌ ಅವರು,  ಆ ಹಣವನ್ನು ನೀಡಲು  ನಿರಾಕರಿಸಿದ್ದರು ಎಂಬ ಅಂಶವನ್ನು ಎಫ್‌ಐಆರ್‍‌ನಲ್ಲಿ ಉಲ್ಲೇಖಿಸಿದೆ.  ಆ ಸಂದರ್ಭದಲ್ಲಿ ‘ನನ್ನ ಮೇಲೆ ನೀನು ಅನುಮಾನಪಡಬೇಡ. ನನಗೆ ವಿಧಾನಸೌಧದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಹಾಯಕ ಕಾರ್ಯದರ್ಶಿ, ಮುಖ್ಯಮಂತ್ರಿಗಳು ಬಹಳ ಆತ್ಮೀಯರಾಗಿದ್ದಾರೆ. ನೀನು ಏನು ಭಯಪಡಬೇಡ. ನಿನಗೆ ಇದರಿಂದ ಒಳ್ಳೆ ಸಂಭಾವನೆ ಬರುತ್ತದೆ. ಹೆಚ್ಚು ಲಾಭ ಸಿಗುತ್ತದೆ,’ ಎಂದು ತಿಳಿಸಿದ್ದರು ಎಂದು ಎಫ್‌ಐಆರ್‍‌ನಲ್ಲಿ  ಹೇಳಲಾಗಿತ್ತು.

 

50 ಲಕ್ಷ ಕೊಡಲೇಬೇಕು ಎಂದಿದ್ದ ಆರೋಪಿ

 

ಅನಂತ್‌ ನಾಯಕ್‌ ಅವರ ಮಾತನ್ನು ನಂಬಿದ್ದ ವಿಜಯ್‌ ಸುಹಾಸ್‌ ಎಂಬುವರು 50 ಲಕ್ಷ ರು.ಗಳನ್ನು ಎರಡು ಕಂತುಗಳಲ್ಲಿ ನೀಡಿದ್ದರು.  ‘ನಿನ್ನ ಕೆಲಸ ಮಾಡಿಕೊಡುತ್ತೇನೆ, ನಿನ್ನ ಹಣಕ್ಕೆ ಭದ್ರತೆಗಾಗಿ ನಾವು ಚೆಕ್‌ ಅಥವಾ ಬಾಂಡ್‌ ಬರೆದು ಕೊಡುತ್ತೇನೆ ಎಂದು ಹೇಳಿದ್ದರು. ಹಾಗೂ ಅನಂತ್‌ ನಾಯಕ್‌ ಅವರ ಸ್ನೇಹಿತರಾದ ವಿಜಯ್‌ ರಾಥೋಡ್‌, ಅಭಿಷೇಕ್‌ ಗೌಡ ಅವರು ದೀಪಕ್‌ ಕುಮಾರ್‌ ಪಾಟೀಲ್‌ ಅವರ ಮೇಲೆ ನನಗೆ ಒಳ್ಳೆಯ ರೀತಿಯಲ್ಲಿ ಹೇಳಿ ನಂಬಿಕೆ ಬರುವಂತೆ ಮಾತನಾಡಿದ್ದರು. ಇದರಿಂದ ನಾನು ಇವರ ಮಾತನ್ನು ನಂಬಿ ವಿವಿಧ ದಿನಾಂಕಗಳಂದು ಅನಂತ್‌ ನಾಯಕ್‌ ಮತ್ತು ದೀಪಕ್‌ ಕುಮಾರ್‌ ಪಾಟೀಲ್‌ ಅವರಿಗೆ 25 ಲಕ್ಷ ರು.ಗಳನ್ನು ನನ್ನ ಸ್ನೇಹಿತರಾದ ಕೆ ನಾಗೇಶ್‌ ಮತ್ತು ಕೆ ಎನ್‌ ವಸಂತ್‌ಕುಮಾರ್‌ ಸಮಕ್ಷಮದಲ್ಲಿ ನೀಡಿರುತ್ತೇವೆ,’ ಎಂದು  ವಿಜಯ್‌ ಸುಹಾಸ್‌ ಅವರು ದೂರಿನಲ್ಲಿ ವಿವರಿಸಿದ್ದರು.

 

 

 

ಆದರೆ ಅನಂತ್‌ ನಾಯಕ್‌ ಅವರು 50 ಲಕ್ಷ ರು. ಕೊಡಲೇಬೇಕು ಎಂದು ಕೇಳಿದ್ದರು ಎಂದು ದೂರಿನಲ್ಲಿ ಆರೋಪಿಸಿರುವುದು ಗೊತ್ತಾಗಿದೆ.  ಈ ಮೊತ್ತವನ್ನು ನೀಡದಿದ್ದಲ್ಲಿ ಕೆಲಸ ಆಗುವುದಿಲ್ಲ ಎಂದು ಹೇಳಿದ್ದರು ಎಂಬ ಅಂಶವನ್ನು ದೂರಿನಲ್ಲಿ ಉಲ್ಲೇಖಿಸಿತ್ತು.

 

‘ಅನಂತ್‌ ನಾಯಕ್‌ ಅವರು 50 ಲಕ್ಷ ರು. ಕೊಡಲೇಬೇಕು ಎಂದಿದ್ದರು. ಇಲ್ಲವಾದಲ್ಲಿ ನಿನ್ನ ಕೆಲಸ ಆಗುವುದಿಲ್ಲವೆಂದು ಹೇಳಿದಾಗ ನಾನು ಈ ವಿಚಾರವನ್ನು ನನ್ನ ಸ್ನೇಹಿತ ಶ್ರೀನಿವಾಸಮೂರ್ತಿ ಅವರಿಗೆ ತಿಳಿಸಿದ್ದೆ. ನನ್ನ ಸ್ನೇಹಿತ ಶ್ರೀನಿವಾಸಮೂರ್ತಿ ಅವರ ಕಡೆಯಿಂದ 25 ಲಕ್ಷ ರು.ಗಳನ್ನು ದೀಪಕ್‌ ಕುಮಾರ್‌ ಪಾಟೀಲ್‌ ಮತ್ತು ಅನಂತ್‌ನಾಯಕ್‌ ಅವರಿಗೆ ನಗದಾಗಿ ಒಟ್ಟು 50 ಲಕ್ಷ ರು.ಗಳನ್ನು ನನ್ನ ಸ್ನೇಹಿತರಾದ ಕೆ ನಾಗೇಶ್‌ ಮತ್ತು ಕೆ ಎನ್‌ ವಸಂತ್‌ಕುಮಾರ್‌ ಸಮಕ್ಷಮ ನೀಡಿರುತ್ತೇವೆ.,’ ಎಂದು ದೂರಿನಲ್ಲಿ ವಿವರಿಸಿತ್ತು.

 

ಚೆಕ್‌, ಬಾಂಡ್‌ ಬರೆದುಕೊಟ್ಟಿದ್ದ ಆರೋಪಿ

 

ವಿಜಯ್‌ ಸುಹಾಸ್‌ ಅವರಿಂದ ಹಣ ಪಡೆದಿದ್ದರು ಎಂಬ ಆರೋಪಕ್ಕೆ ಗುರಿಯಾಗಿರುವ ಆರೋಪಿಗಳು ಚೆಕ್‌ ಮತ್ತು ಬಾಂಡ್‌ ಬರೆದುಕೊಟ್ಟಿದ್ದರು ಎಂಬುದು ಎಫ್‌ಐಆರ್‍‌ನಲ್ಲಿ ಉಲ್ಲೇಖಿಸಲಾಗಿತ್ತು. ‘ಈ ಸಮಯದಲ್ಲಿ ದೀಪಕ್‌ಕುಮಾರ್‌ ಪಾಟೀಲ್‌ ಅವರು ಈ ಹಣದ ಭದ್ರತೆಗಾಗಿ yes bank current account NO 05136340000462 ಚೆಕ್‌ ನಂ 920302ರಲ್ಲಿ 25 ಲಕ್ಷ,  920303  ಸಂಖ್ಯೆಯ ಚೆಕ್‌ ನಲ್ಲಿ 25 ಲಕ್ಷ ರು.ಗಳನ್ನು ನಮೂದು ಮಾಡಿ ನಮಗೆ ಕೊಟ್ಟಿರುತ್ತಾನೆ. ಹಾಗೂ ಇದಕ್ಕೆ 2023ರ ಫೆ. .2ರಂದು ನಮೂದಿಸಿ ಬಾಂಡ್‌ ಸಹ ಬರೆದುಕೊಟ್ಟಿರುತ್ತಾನೆ,’ ಎಂದು ದೂರುದಾರ  ವಿವರಿಸಿದ್ದರು.

 

ಈ ಚೆಕ್‌ನ್ನು ಬ್ಯಾಂಕ್‌ಗೆ ಹಾಕಲು ವಿಜಯ್‌ ಸುಹಾಸ್‌ ಮುಂದಾಗಿದ್ದರು. ‘ಆಗ ದೀಪಕ್‌ಕುಮಾರ್‌ ಪಾಟೀಲ್‌ ಅವರು ನೀವು ಚೆಕ್‌ಗಳನ್ನು ಬ್ಯಾಂಕ್‌ಗೆ ಹಾಕಬೇಡಿ. ನನಗೆ ಒಂದು ವಾರದಲ್ಲಿ ಯಾವುದೋ ಹಣ ಬರಬೇಕು, ಹಣ ಬಂದ ನಂತರ ಹಣ ನೀಡಿ ಚೆಕ್‌ಗಳನ್ನು ವಾಪಡ್‌ ಪಡೆಯುತ್ತೇನೆ ಎಂದು ತಿಳಿಸಿದ್ದರು. ಹೀಗಾಗಿ ನಾವು ಬ್ಯಾಂಕ್‌ಗೆ ಚೆಕ್‌ ಹಾಕಿರುವುದಿಲ್ಲ,’ ಎಂದು ದೂರಲಾಗಿತ್ತು.

 

ಹಣ ನೀಡಲು ಸಬೂಬು ಹೇಳಿದ್ದ ಆರೋಪಿಗಳು

 

ದೀಪಕ್‌ ಕುಮಾರ್‌ ಪಾಟೀಲ್‌ ಅವರು ನಮ್ಮಿಂದ 50 ಲಕ್ಷ ರು.ಗಳನ್ನು ನಗದಾಗಿ ಪಡೆದುಕೊಂಡು ನಂತರ ಯಾವುದೇ ಟೆಂಡರ್‌ ಕೊಡಿಸದೇ ಇದ್ದ ಕಾರಣ ನಾನು ಹಲವಾರು ಬಾರಿ ದೀಪಕ್‌ ಕುಮಾರ್‌ ಪಾಟೀಲ್‌, ಅನಂತ್‌ ನಾಯಕ್‌ ಅವರ ಬಳಿ ಹೋಗಿ ಟೆಂಡರ್‌ ಕೊಡಿಸುವಂತೆ ಕೇಳಿದ್ದೆವು. ಇಲ್ಲವಾದಲ್ಲಿ ನಮ್ಮ ಹಣವನ್ನು ವಾಪಸ್‌ ಕೊಡಿಸುವಂತೆ ಕೇಳಿದಾಗ ಅವರು ಇಂದು, ನಾಳೆ ಹಣ ಕೊಡುವುದಾಗಿ ಹೇಳಿಕೊಂಡು ಸಬೂಬು ಹೇಳಿಕೊಂಡು ದಿನಗಳನ್ನು ಮುಂದೂಡಿರುತ್ತಾರೆ,’ ಎಂದು ವಿವರಿಸಲಾಗಿತ್ತು.

 

ಹಣ ಕೊಡುವುದಿಲ್ಲ, ನಿಮಗೊಂದು ಗತಿ ಕಾಣಿಸುತ್ತೇನೆ

 

ಅಷ್ಟೇ ಅಲ್ಲ ‘ಅವರು ನಾವು ಹಣ ಕೊಡುವುದಿಲ್ಲ, ನಿಮ್ಮಿಂದ ಏನು ಆಗುತ್ತೋ ಅದನ್ನು ಮಾಡಿಕೊಳ್ಳಿ, ನಾನು ಯಾವುದಕ್ಕೂ ಹೆದರುವುದಿಲ್ಲ. ಪುನಃ ನೀವು ನನ್ನ ಬಳಿ ಹಣ ಕೇಳಿಕೊಂಡು ಬಂದರೆ ನನಗೆ ಇರುವ ಅಧಿಕಾರವನ್ನು ಉಪಯೋಗಿಸಿಕೊಂಡು ನಿಮಗೆ ಒಂದು ಗತಿ ಕಾಣಿಸುತ್ತೇನೆಂದು ಬೆದರಿಕೆ ಹಾಕಿರುತ್ತಾರೆ,’ ಎಂದೂ  ದೂರಲಾಗಿತ್ತು.

 

ಅನಂತ್‌ ನಾಯಕ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ,

 

 

 

 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಡಾ ನಿವೇಶನ ಹಗರಣದಲ್ಲಿ ಸಿಲುಕಿಕೊಂಡಿದ್ದಾಗ ಅಹಿಂದ ನಾಯಕನ ವಿರುದ್ಧ ಷಡ್ಯಂತ್ರ ಎಂದು ಆರೋಪಿಸಿದ್ದರು.

 

 

ಅಲ್ಲದೇ  ಸಚಿವ ಸತೀಶ್‌ ಜಾರಕಿಹೊಳಿ ಅವರೊಂದಿಗೆ ನಿಕಟವಾಗಿ ಗುರುತಿಸಿಕೊಂಡಿದ್ದಾರೆ.

 

 

ಸಚಿವ ಮಧು ಬಂಗಾರಪ್ಪ,

 

 

ಸಚಿವ ಡಾ ಹೆಚ್‌ ಸಿ ಮಹದೇವಪ್ಪ

 

 

ಸಚಿವ ಜಮೀರ್‍‌

 

 

ಸಚಿವ ಶಿವರಾಜ್ ತಂಗಡಗಿ

 

 

ಸ್ಪೀಕರ್‍‌ ಯು ಟಿ ಖಾದರ್‍‌,

 

 

ಸಚಿವ ಡಾ ಜಿ ಪರಮೇಶ್ವರ್‍‌,

 

 

ನಿವೃತ್ತ ನ್ಯಾಯಮೂರ್ತಿ ಎಚ್‌ ಎನ್‌ ನಾಗಮೋಹನ್ ದಾಸ್‌

 

 

 

ಸಚಿವ ಸಂತೋಷ್‌ ಲಾಡ್‌  ಸೇರಿದಂತೆ ಹಲವರನ್ನು ವಿವಿಧ ಸಂದರ್ಭಗಳಲ್ಲಿ ಭೇಟಿಯಾಗುತ್ತಲೇ ಬಂದಿದ್ದಾರೆ.

 

 

ಹಿಂದುಳಿದ ವರ್ಗಗಳಿಗೆ ಸೇರಿರುವ ಹಲವು ಸಂಘಟನೆಗಳ ಮುಖಂಡರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗಾಗ್ಗೆ ಭೇಟಿ ಮಾಡಿ ಸಮಾಲೋಚನೆ ನಡೆಸುತ್ತ ಬಂದಿರುವುದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts