ಬೆಂಗಳೂರು; ಕೊಪ್ಪಳ ಗಂಗಾವತಿ ಬಳಿ ಪೌರಾಣಿಕ ಮತ್ತು ಐತಿಹಾಸಿಕ ಮಹತ್ವ ಹೊಂದಿದೆ ಎಂದು ಹೇಳಲಾಗಿರುವ ಅಂಜನಾದ್ರಿ ಬೆಟ್ಟದಲ್ಲಿ ಪ್ರವಾಸಿಗರನ್ನು ಸೆಳೆಯುವುದು ಮತ್ತು ಪ್ರವಾಸೋದ್ಯಮ ಮೂಲಸೌಕರ್ಯಗಳಿಗಾಗಿ 100 ಕೋಟಿ ರು ನೀಡಲಾಗುವುದು ಎಂದು ಘೋಷಿಸಿ ಒಂದು ವರ್ಷವಾದರೂ ನಿರೀಕ್ಷಿತ ಪ್ರಮಾಣದಲ್ಲಿ ಹಣವನ್ನು ಬಿಡುಗಡೆ ಮಾಡಿಲ್ಲ.
2024-25ನೇ ಸಾಲಿನ ಆಯವ್ಯಯದಲ್ಲಿ ಈ ಘೋಷಣೆ ಮಾಡಲಾಗಿತ್ತು. ಈ ಘೋಷಣೆ ಹೊರಬಿದ್ದ ಕೆಲವೇ ಕೆಲವು ತಿಂಗಳಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪ್ರವಾಸೋದ್ಯಮ ಸಮಿತಿಯು 100 ಕೋಟಿ ರು ವೆಚ್ಚದಲ್ಲಿ 12 ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಕ್ರಿಯಾ ಯೋಜನೆಗಳನ್ನು ಸಲ್ಲಿಸಿತ್ತು. ಈ ಕ್ರಿಯಾ ಯೋಜನೆಗಳು ಸಲ್ಲಿಕೆಯಾಗಿ ಹಲವು ತಿಂಗಳುಗಳೇ ಕಳೆದರೂ ಸಹ ಇದುವರೆಗೂ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಕಂಡು ಬಂದಿಲ್ಲ.
ಪ್ರವಾಸೋದ್ಯಮ ಇಲಾಖೆಯ ಈ ನಿರ್ಲಕ್ಷ್ಯ ಮತ್ತು ಯೋಜನೆಯ ಮೇಲ್ವಿಚಾರಣೆಯಲ್ಲಿನ ಕೊರತೆಗಳ ಕುರಿತು ಇಂಡಿಯನ್ ಆಡಿಟ್ ಅಂಡ್ ಅಕೌಂಟೆಂಟ್ ಜನರಲ್ ಅವರು 2025ರ ಆಗಸ್ಟ್ 21ರಂದು ಪ್ರವಾಸೋದ್ಯಮ ಇಲಾಖೆಯ ಆಯುಕ್ತರಿಗೆ ಆಕ್ಷೇಪಣೆ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಬಿಡುಗಡೆಯಾಗದ 29.51 ಕೋಟಿ
ಅಂದಾಜು 100 ಕೋಟಿ ರೂ.ಗಳ ವೆಚ್ಚದಲ್ಲಿ ಮೂಲಸೌಕರ್ಯ ಒದಗಿಸಲು 12 ಘಟಕಗಳ ಕಾಮಗಾರಿ ಪ್ರಸ್ತಾವ ಸಲ್ಲಿಕೆಯಾಗಿತ್ತು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ 40 ಕೋಟಿ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ 60 ಕೋಟಿ ರು ಪಾಲುದಾರಿಕೆ ಹೊಂದಿತ್ತು. ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಭೂ ಸ್ವಾಧೀನಪಡಿಸಿಕೊಳ್ಳಲು ಆರಂಭಿಕ ಮೊತ್ತವಾಗಿ 29,51,62,996 ಮೊತ್ತವನ್ನು ಬಿಡುಗಡೆ ಮಾಡುವ ಆದೇಶವನ್ನು ಹೊರಡಿಸಿತ್ತು. ಆದರೆ ಇಂಡಿಯನ್ ಆಡಿಟ್ ಅಕೌಂಟೆಂಟ್ ಜನರಲ್ ಪತ್ರ ಬರೆಯುವ ಹೊತ್ತಿಗೂ ಹಣವು ಬಿಡುಗಡೆಯಾಗಿರಲಿಲ್ಲ ಎಂಬುದು ಪತ್ರದಿಂದ ತಿಳಿದು ಬಂದಿದೆ.
ಈ ಭೂಸ್ವಾಧೀನ ವೆಚ್ಚವನ್ನು ಯಾವ ಲೆಕ್ಕಪತ್ರ ಶೀರ್ಷಿಕೆಯಡಿಯಲ್ಲಿ ಭರಿಸಲಾಗುವುದು ಎಂಬುದರ ಕುರಿತು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. ಈ ಯೋಜನೆಯ 2ನೇ ಹಂತದ ಕಾಮಗಾರಿಯೂ ಪ್ರಾರಂಭವಾಗಿಲ್ಲ.

ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಅಂಜನಾದ್ರಿ ಬೆಟ್ಟದಲ್ಲಿ ಮೂಲ ಮೂಲಸೌಕರ್ಯ ಕಾಮಗಾರಿಗೆ ಸಂಬಂಧಿಸಿದ ಕೆಲಸಗಳಿಗಾಗಿ 78.46 ಕೋಟಿ , 7.24 ಕೋಟಿ ವೆಚ್ಚದಲ್ಲಿ ಪ್ರದಕ್ಷಿಣ ಪಥ ನಿರ್ಮಾಣಕ್ಕೂ 2022 ರಲ್ಲಿ ಮಂಜೂರಾದ ಆಡಳಿತಾತ್ಮಕ ಅನುಮೋದನೆ ನೀಡಿದೆ. ಆದರೆ ಈ ಯೋಜನೆಗೆ ಕಗ್ಗಂಟಾಗಿರು ಅರಣ್ಯ ತೆರವುಗೊಳಿಸುವಿಕೆ ಮತ್ತು ಭೂ ಸ್ವಾಧೀನಕ್ಕೆ ಹಣ ಬಿಡುಗಡೆ ಮಾಡದ ಕಾರಣ ಈ ಯಾವ ಕಾಮಗಾರಿಯೂ ಪ್ರಾರಂಭವಾಗಿಲ್ಲ ಎಂದು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.
2 ಹಂತವನ್ನು ಘೋಷಿಸಿದ್ದೇಕೆ?
ಅರಣ್ಯ ಇಲಾಖೆಯಿಂದ ಅನುಮೋದನೆ ಮತ್ತು ಎನ್‌ಒಸಿ ಪಡೆಯುವಲ್ಲಿ ಪ್ರವಾಸೋಸದ್ಯಮ ಇಲಾಖೆಯು ನಿರ್ಲಕ್ಷ್ಯ ವಹಿಸಿತ್ತು. ಹೀಗಾಗಿ ಮೊದಲನೇ ಹಂತದ ಕಾಮಗಾರಿಯೇ ನಡೆದಿಲ್ಲ. ಆದರೂ ಸಹ ಸರ್ಕಾರವು 2ನೇ ಹಂತದ ಕಾರ್ಯಕ್ರಮವನ್ನು ಘೋಷಿಸಿತು. ಇದು ಯೋಜನೆಯ ನಿರ್ವಹಣೆಯಲ್ಲಿ ಇಲಾಖೆಯ ಕೊರತೆಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಪತ್ರದಲ್ಲಿ ಹೇಳಿದೆ.
ಅದೇ ರೀತಿ 2022ರ ಜೂನ್ 21ರಂದು ಹೊರಡಿಸಿದ್ದ ಸರ್ಕಾರದ ಆದೇಶದ ಪ್ರಕಾರ ಶ್ರೀ ಪ್ರಸನ್ನ ಪಂಪಾ ವಿರೂಪಾಕ್ಷ ದೇವಸ್ಥಾನ, ಜಂತಗಲ್, ಗಂಗಾವತಿ ಕೊಪ್ಪಳ ಬಳಿ ಅಂದಾಜು 1 ಕೋಟಿ ಮೊತ್ತದಲ್ಲಿ ಯಾತ್ರಿನಿವಾಸ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಇದಕ್ಕಾಗಿ ಅನುಷ್ಠಾನ ಏಜೆನ್ಸಿಯನ್ನಾಗಿ ಕರ್ನಾಟಕ ಪ್ರವಾಸೋದ್ಯಮ ಮೂಲಸೌಕರ್ಯ ಲಿಮಿಟೆಡ್ ಅನ್ನು ಅನುಷ್ಠಾನಗೊಳಿಸಿದ ಸಂಸ್ಥೆಯಾಗಿ ನೇಮಿಸಿತ್ತು.

ಆದರೆ ದಿಢೀರ್ ಬೆಳವಣಿಗೆಯಲ್ಲಿ ಈ ಕಾಮಗಾರಿ ಕುರಿತು ಸರ್ಕಾರದಿಂದ ಮುಂದಿನ ಸೂಚನೆ ಬರುವವರೆಗೂ ಯೋಜನೆಯನ್ನು ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು 2025ರ ಜೂನ್ 10ರಂದು ಸರ್ಕಾರವು ಆದೇಶ ಹೊರಡಿಸಿತು. ಈ ಯೋಜನೆಗೆ 3 ವರ್ಷಗಳ ಹಿಂದೆಯೇ ಅನುಮೋದನೆ ನೀಡಿದೆ. ಆದರೆ ಯೋಜನೆ ಅನುಷ್ಠಾನದ ಬಗ್ಗೆ ಪ್ರವಾಸೋದ್ಯಮ ಇಲಾಖೆಯು ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ. ಇಲಾಖೆಯು ರೂಪಿಸುವ ಯೋಜನೆಗಳು ಕ್ರಮಬದ್ಧವಾಗಿರುವುದಿಲ್ಲ ಎನ್ನುವುದನ್ನು ಇದು ಸೂಚಿಸುತ್ತದೆ ಎಂದು ಎ ಜಿ ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಅಂಜನಾದ್ರಿ ಬೆಟ್ಟದಲ್ಲಿ 600 ಕೊಠಡಿಗಳ ಯಾತ್ರಿ ನಿವಾಸ ನಿರ್ಮಾಣದ ಯೋಜನೆ ಇದಾಗಿದೆ. ಇಲಾಖೆಯ ಮಂದಗತಿಯಿಂದಾಗಿ ಯೋಜನೆಯ ಹಳೆಯ ಪ್ರಸ್ತಾವನೆಗಳು ಕಾಗದದಲ್ಲೇ ಉಳಿದಿವೆ ಮತ್ತು ಕಾಮಗಾರಿಗಳಿಗೆ ಚುರುಕು ಬಂದಿಲ್ಲ. ಈ ಕಾರ್ಯವನ್ನು ಎಂಟು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚನೆ ನೀಡಿದ್ದರು.

2022ರ ಆಗಸ್ಟ್ 2ರಂದು ಸ್ಥಳಕ್ಕೆ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಿದ್ದರು. ಅಂಜನಾದ್ರಿ ಬೆಟ್ಟಕ್ಕೆ ಬರುವ ಯಾತ್ರಿಕರಿಗೆ ಮೂಲಸೌಕರ್ಯಗಳನ್ನು ಕಲ್ಪಿಸಬೇಕು. 600 ಕೊಠಡಿಗಳ ಯಾತ್ರಿ ನಿವಾಸ ನಿರ್ಮಾಣ ಮಾಡಬೇಕು. ಈ ಉದ್ದೇಶಕ್ಕಾಗಿ ವಾಸ್ತುಶಿಲ್ಪಿಗಳನ್ನು ನೇಮಿಸಿಕೊಂಡು 2 ತಿಂಗಳಲ್ಲಿ ಕಾಮಗಾರಿ ವಿನ್ಯಾಸ ಸಿದ್ಧಪಡಿಸಬೇಕು. ವಾಹನ ನಿಲುಗಡೆಗೆ ಕನಿಷ್ಠ 35 ಎಕರೆ ಪ್ರದೇಶ ಅಗತ್ಯವಿದೆ. ಮೊದಲನೇ ಹಂತದಲ್ಲಿ ಕನಿಷ್ಠ 20 ಎಕರೆ ಜಾಗವನ್ನು ಪಾರ್ಕಿಂಗ್ ವ್ಯವಸ್ಥೆಗೆ ಮಾಡಿಕೊಳ್ಳಬೇಕು ಎಂದು ಸೂಚಿಸಿದ್ದರು.
ಅಲ್ಲದೇ ಅಂಜನಾದ್ರಿಗೆ ರಾಷ್ಟ್ರೀಯ ಹೆದ್ದಾರಿಯಿಂದ ಹಾಗೂ ಗಂಗಾವತಿಯಿಂದ ರಸ್ತೆ ಸಂಪರ್ಕ ಕಲ್ಪಿಸಬೆಕು. ರಸ್ತೆ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಬೇಕು. ಯಾತ್ರಿ ನಿವಾಸ ನಿರ್ಮಾಣದ ಜತೆಯಲ್ಲಿಯೇ ರಸ್ತೆ ನಿರ್ಮಾಣ ಕಾಮಗಾರಿಯೂ 7-8 ತಿಂಗಳಲ್ಲಿ ಪೂರ್ಣಗೊಳ್ಳಬೇಕು. ಮುಂದಿನ 2 ತಿಂಗಳಲ್ಲಿ ಭೂ ಸ್ವಾಧೀನ ಕಾರ್ಯಗಳು ಮುಗಿದು ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಬೇಕು. 4 ತಿಂಗಳೊಳಗಾಗಿ ನಿರ್ಮಾಣ ಕಾಮಗಾರಿ ಆರಂಭವಾಗಬೇಕು ಎಂದು ಬಸವರಾಜ ಬೊಮ್ಮಾಯಿ ಸೂಚಿಸಿದ್ದರು.
ಜಿಲ್ಲಾಧಿಕಾರಿ ಹೇಳಿದ್ದೇನು?
ಅಂಜನಾದ್ರಿ ಅಭಿವೃದ್ಧಿಗೆ 2 ಹಂತಗಳಲ್ಲಿಲ 72 ಎಕರೆ ಭೂಮಿ ಬೇಕು. ಇದರಲ್ಲಿ 62 ಎಕರೆ ಖಾಸಗಿಯದ್ದಾಗಿದೆ. 14 ಎಕರೆ ಮುಜುರಾಯಿ ಮತ್ತು ಅರಣ್ಯ ಇಲಾಖೆಗೆ ಸೇರಿದೆ. ದೇವಸ್ಥಾನ ಇರುವ ಬೆಟ್ಟ ಪ್ರದೇಶ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿದೆ. ಆದರೂ ಕಾಮಗಾರಿ ವಿನ್ಯಾಸ ಸಿದ್ಧಪಡಿಸುವುದು ಮತ್ತು ಸ್ವಚ್ಛತೆಗೆ ಆದ್ಯತೆ ನೀಡುವಂತಹ ಕೆಲಸಗಳಿಗೆ ಚುರುಕು ಸಿಕ್ಕಿಲ್ಲ.









