ಬೆಂಗಳೂರು; ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿನ ಕರ್ನಾಟಕ, ಕನ್ನಡ, ಬೆಂಗಳೂರು, ಮಹಿಳಾ ವಿಶ್ವವಿದ್ಯಾಲಯ, ಇಂಜಿನಿಯರಿಂಗ್ ಕಾಲೇಜು, ಐಸೆಕ್, ಬಿ ಎಡ್, ಯುವಿಸಿಇ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕರಿಗೆ ಯುಜಿಸಿ, ಎಐಐಸಿಟಿ ವೇತ ಶ್ರೇಣಿ ಪಾವತಿಸಲು 123 ಕೋಟಿ ರು ಬಾಕಿ ಇರಿಸಿಕೊಂಡಿದೆ.
ವಿಶ್ವವಿದ್ಯಾಲಯ, ಸಂಶೋಧನೆ ಸಂಸ್ಥೆ, ಸರ್ಕಾರಿ, ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳ ನೌಕರರಿಗೂ 2006 ಮತ್ತು 2016ರ ಪರಿಷ್ಕೃತ ಯುಜಿಸಿ, ಎಐಸಿಟಿಯು ವೇತನ ಶ್ರೇಣಿಯ ವ್ಯತ್ಯಾಸದ ಬಾಕಿ ಮೊತ್ತವನ್ನು ಪಾವತಿಸಲು ಅನುದಾನವಿಲ್ಲದೇ ಸರ್ಕಾರವು ಪರದಾಡುತ್ತಿದೆ.
ಕಳೆದ 5 ವರ್ಷಗಳಿಂದಲೂ ಹಿಂಬಾಕಿ ಮೊತ್ತವು ಪಾವತಿಯಾಗಿಲ್ಲ. 2020ರಿಂದ 2025ರವರೆಗೂ ವಿಶ್ವವಿದ್ಯಾಲಯಗಳು ಈ ಹಿಂಬಾಕಿ ಮೊತ್ತವನ್ನು ಪಾವತಿಸಲು ಅನುದಾನ ಮಂಜೂರು ಮಾಡಿಸಿಕೊಳ್ಳಲು ಹೆಣಗಾಡುತ್ತಿವೆ. ಕೆಲ ವಿಶ್ವವಿದ್ಯಾಲಯಗಳು ಹಿಂಬಾಕಿ ಮೊತ್ತಕ್ಕೆ ಅನುದಾನಕ್ಕಾಗಿ 10 ವರ್ಷದ ಬಳಿಕ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿವೆ.
ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಡಿ ಬರುವ ವಿಶ್ವವಿದ್ಯಾಲಯ, ಸಂಶೋಧನೆ ಸಂಸ್ಥೆ, ಸರ್ಕಾರಿ, ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಬೋಧಕರಿಗೆ ಹಿಂಬಾಕಿ ಪಾವತಿಸಲು ಸಲ್ಲಿಕೆಯಾಗಿರುವ 123 ಕೋಟಿಗೆ ಅನುದಾನ ಮಂಜೂರು ಪ್ರಸ್ತಾವದ ಕುರಿತು ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್ ಅವರ ಬಳಿ ಅಧಿಕಾರಿಗಳು ಚರ್ಚಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಕಡತದ (ED/135/HPU/2020, COMPUTER NUMBER 365974) ಟಿಪ್ಪಣಿ ಹಾಳೆಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಹಿಂಬಾಕಿ ಪಾವತಿ ಪಟ್ಟಿ
ಕರ್ನಾಟಕ ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿಗಳಿಗೆ 2009ರ ಮಾರ್ಚ್ 1ರಿಂದ ಸೆ.30ರ 2009ರವರೆಗೆ, 2009ರ ಡಿಸೆಂಬರ್ 12ರಿಂದ 6 ತಿಂಗಳ 8 ದಿವಸ ಅವಧಿಗೆ ಯುಜಿಸಿ ಹಿಂಬಾಕಿ ಮೊತ್ತ ಪಾವತಿಸಲು 3,86,21,536 ರು ಅನುದಾನ ಬೇಕಿದೆ.
ಬೆಂಗಳೂರು ವಿಶ್ವವಿದ್ಯಾಲಯಕ್ಕೆ 7ನೇ ಪರಿಷ್ಕೃತ ಯುಜಿಸಿ, ಎಐಸಿಟಿಇ ವೇತನ ಶ್ರೇಣಿಯನುಸಾರ ಬೋಧಕ ಸಿಬ್ಬಂದಿಗೆ 2016ರ ಜನವರಿ 1ರಿಂದ 2019ರ ಮಾರ್ಚ್ 31ರವರೆಗೆ ಮತ್ತು 2019ರ ಏಪ್ರಿಲ್ 1ರಿಂದ 2020ರ 31ರವರೆಗೆ ಹಿಂಬಾಕಿ ಪಾವತಿಗೆ4 14,35,23,429 ರು ಅನುದಾನ ಒದಗಿಸಬೇಕಿದೆ.
ಹಂಪಿಯಲ್ಲಿರುವ ಕನ್ನಡ ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿಗೆ 7ನೇ ಪರಿಷ್ಕೃತ ಯುಜಿಸಿ ವೇತನ ಶ್ರೇಣಿಯಲ್ಲಿ 2016 ಜನವರಿ 1ರಿಂದ 2019ರ ಮಾರ್ಚ್ 15ರವರೆಗೆ ಅವಧಿಗೆ ವೇತನ ಬಾಕಿ ಪಾವತಿಸಲು 1,95,20,00 ರು.ಆನುದಾನ ಮಂಜೂರಾಗಬೇಕಿದೆ.
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿಗಳಿಗೆ 7ನೇ ಪರಿಷ್ಕೃತ ವೇತನ ವ್ಯತ್ಯಾಸದ ಮೊತ್ತ ಪಾವತಿಸಲು 1,43,98,260 ರು., ಸೆಂಟರ್ ಫಾರ್ ಮಲ್ಟಿ ಡಿಸಿಪ್ಲೆನರಿ ಡೆವಲೆಪ್‌ಮೆಂಟ್ ರೀಸರ್ಚ್ ಧಾರವಾಡ ಸಂಸ್ಥೆಯ ಸಿಬ್ಬಂದಿಗಳಿಗೆ 2016ರ ಜನವರಿ1ರಿಂದ 2021ರ ಮಾರ್ಚ್ 31ರವರೆಗೆ ಪಾವತಿಸಬೇಕಾದ ಹಿಂಬಾಕಿ ( ರಾಜ್ಯದ ಪಾಲು) 78,62,488 ರು., ಐಸೆಕ್ ನ 34 ಬೋಧಕ ಸಿಬ್ಬಂದಿಗಳಿಗೆ 2016ರ ಪರಿಷ್ಕೃತ ಯುಜಿಸಿ ವೇತನದ ಬಾಕಿ 2016ರ ಜನವರಿ 1ರಿಂದ 2020ರ ಮಾರ್ಚ್ 31ರವರೆಗೆ ಹಿಂಬಾಕಿ (ರಾಜ್ಯದ ಪಾಲು) 2,69,00,000 ರು ಇದೆ.
ಸರ್ಕಾರಿ ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯವರಿಗಾಗಿ 6 ಮತ್ತು 7ನೇ ವೇತನ ಶ್ರೇಣಿಯ ವೇತನ ಬಾಕಿ ಪಾವತಿಸಲು 42,00,00,000 ರು., ಖಾಸಗಿ ಅನುದಾನಿತ ಪದವಿ ಮತ್ತು ಬಿ ಎಡ್ ಕಾಲೇಜುಗಳ ಬೋಧಕರು, ಬೋಧಕೇತರರಿಗಾಗಿ ಯುಜಿಸಿ ಬಾಕಿ ಮತ್ತು ಇತರೆ ಬಾಕಿಗಳನ್ನು ಪಾವತಿಸಲು 48,76,71,000 ರು., ಯುವಿಸಿಇಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಐಸಿಟಿಇ ವೇತನ ಪಾವತಿಯ ಬೋಧಕ ಸಿಬ್ಬಂದಿಗಳಿಗೆ ನೀಡಬೇಕಾಗಿರುವ 7ನೇ ಪರಿಷ್ಕೃತ ವೇತನ ಮೊತ್ತವು 10,20,17,879 ರು ಹೊಂದಿಸಬೇಕಿದೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಯುಜಿಸಿ ಪರಿಷ್ಕೃತ 7ನೇ ವೇತನ ಶ್ರೇಣಿಯ ಹಿಂಬಾಕಿ ಮೊತ್ತವನ್ನು ಪಾವತಿಸಲು ಕುಲಸಚಿವರು ಸರ್ಕಾರಕ್ಕೆ 2020ರಲ್ಲೇ ಪ್ರಸ್ತಾವ ಸಲ್ಲಿಸಿದ್ದರು. ಇದರ ಪ್ರಕಾರ 2009ರ ಮಾರ್ಚ್ 1ರಿಂದ 2009ರ ಆಗಸ್ಟ್ 31ರವರೆಗಿನ 6 ತಿಂಗಳು, 8 ದಿವಸಗಳ ವೇತನ ಮೊತ್ತವು 2020ರ ಅಕ್ಟೋಬರ್ 22ರ ಅಂತ್ಯಕ್ಕೆ ಅಂದಾಜು 3,59,47,411 ರು ಪಾವತಿಸದೇ ಬಾಕಿ ಉಳಿದಿತ್ತು.
ಈ ಮೊತ್ತವನ್ನು ಬಿಡುಗಡೆ ಮಾಡಲು ಬಟಾವಡೆ ಮಾಡಲು 38,95,08, 000 ರು ಬಿಡುಗಡೆ ಮಾಡಲಾಗಿತ್ತು. ಈ ಪಕಿ 22,38,08,61 ರು.ಗಳನ್ನು ಪರಿಷ್ಕೃತ 7ನೇ ವೇತನ ಹಿಂಬಾಕಿ ಮೊತ್ತವನ್ನು ಪಾವತಿಸಿತ್ತು. ಇನ್ನೂ 16,56,99,386 ರು ಬಾಕಿ ಇತ್ತು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ವಿಶೇಷವೆಂದರೇ ಕರ್ನಾಟಕ ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿಗಳಿಗೆ 6ನೇ ವೇತನ ಆಯೋಗದ ವೇತನ ಶ್ರೇಣಿಯ ಹಿಂಬಾಕಿ ಮೊತ್ತವನ್ನು ಪಾವತಿಸುವ ಕುರಿತಾದ ಪ್ರಸ್ತಾವನೆಯನ್ನು ಒಂದು ದಶಕದ ನಂತರ ಸರ್ಕಾರಕ್ಕೆ ಸಲ್ಲಿಕೆಯಾಗಿತ್ತು. ಹೀಗಾಗಿ ಈ ಸಮರ್ಥನೆಯನ್ನು ಉನ್ನತ ಶಿಕ್ಷಣ ಇಲಾಖೆಯು ಪರಿಗಣಿಸಿರಲಿಲ್ಲ.
ಅಲ್ಲದೇ 10 ವರ್ಷದ ಬಳಿಕ ಪ್ರಸ್ತಾವ ಸಲ್ಲಿಸಲು ವಿಳಂಬ ಮಾಡಿದ ಅಧಿಕಾರಿಗಳಿಂದ ವಿವರಣೆ ಪಡೆಯಬೇಕು ಮತ್ತು ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು 2021ರ ಮಾರ್ಚ್ 10ರಂದೇ ಇಲಾಖೆಯು ನಿರ್ದೇಶನ ನೀಡಿತ್ತು.
ಆದರೂ ವಿಶ್ವವಿದ್ಯಾಲಯವು ಯಾವುದೇ ಕ್ರಮ ಜರುಗಿಸಿರುವ ಬಗ್ಗೆ ಸರ್ಕಾರಕ್ಕೆ ಮಾಹಿತಿಯನ್ನೇ ನೀಡಿರಲಿಲ್ಲ.
ಈ ಕುರಿತು 2021ರ ಡಿಸೆಂಬರ್ 13ರಂದು ಅಂದಿನ ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ್ ಅವರು ಸದನಕ್ಕೆ ಮಾಹಿತಿ ಒದಗಿಸಿದ್ದರು. ವೇತನ ಬಾಕಿ ಉಳಿಸಿಕೊಂಡಿರುವುದನ್ನು ಒಪ್ಪಿಕೊಂಡಿದ್ದರು.
ಕೇಂದ್ರದ ಪಾಲಿನ ಶೇ. 50ರಷ್ಟು ಅನುದಾನ ಅಂದರೇ 689.35 ಕೋಟಿ ರು., ಬಿಡುಗಡೆ ಮಾಡಲು 2019ರ ಮೇ 20, 2019ರ ಜುಲೈ 1, 2021ರ ಆಗಸ್ಟ್ 17ರಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು. 10 ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳ ಬೋಧಕ ಸಿಬ್ಬಂದಿಗಳಿಗೆ 6ನೇ ವೇತನ ಆಯೋಗದ ಶಿಫಾರಸ್ಸಿನ ಮೇರೆಗೆ 2006ರ ಜನವರಿ 1ರಿಂದ 2010ರ ಮಾರ್ಚ್ 31ವರೆಗೆ ಎಐಸಿಟಿಇ ವೇತನ ಬಾಕಿ ಸಂಬಂಧ 2021ರ ವರೆದಗೆ 46.80 ಕೋಟಿ ಬಿಡುಗಡೆ ಮಾಡಿತ್ತು.
ಇನ್ನುಳಿದ 21.67 ಕೋಟಿ ಬಿಡುಗಡೆ ಮಾಡಲು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. 2016ರ ಜನವರಿ 1ರಿಂದ 2019ರ ಮಾರ್ಚ್ 31ರವರೆಗಿನ ಬಾಕಿ ವೇತನವನ್ನು ಪಾವತಿಸುವ ಸಂಬಂಧ ಕೇಂದ್ರ ಸರ್ಕಾರದ ಪಾಲಿನ ಸಹಾಯಾನುದಾನ 73.82 ಕೋಟಿ ಬಿಡುಗಡೆ ಮಾಡಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯಕ್ಕೆ ಪತ್ರ ಬರೆದಿದ್ದರು.