1 ಲಕ್ಷ 17 ಸಾವಿರ 884 ಸರ್ಕಾರಿ ನೌಕರರಿಗೆ 3 ತಿಂಗಳಾದರೂ ಪಾವತಿಯಾಗದ ವೇತನ; 834.89 ಕೋಟಿ ಬಾಕಿ

ಬೆಂಗಳೂರು; ಸರ್ಕಾರಿ ನೌಕರರಿಗೆ ಪ್ರತಿ ತಿಂಗಳೂ ವೇತನ ಪಾವತಿಸಲು  ಆಯವ್ಯಯದಲ್ಲಿ ಅನುದಾನ ಒದಗಿಸಿದ್ದರೂ  ಸಹ 2025ರ ಏಪ್ರಿಲ್‌ರಿಂದ ಜೂನ್‌ ಅವಧಿವರೆಗೆ 1 ಲಕ್ಷ 17 ಸಾವಿರ 884 ಸಾವಿರ ಸರ್ಕಾರಿ ನೌಕರರಿಗೆ ವೇತನವನ್ನೇ ನೀಡಿಲ್ಲ ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.

 

ಗ್ಯಾರಂಟಿ ಯೋಜನೆ ಅನುಷ್ಠಾನದಿಂದ ಸರ್ಕಾರಿ ನೌಕರರ ವೇತನಕ್ಕೂ ಪರದಾಡುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ಇದೀಗ ಪ್ರಸ್ತುತ ಆರ್ಥಿಕ ವರ್ಷದ ಆರಂಭದ ಮೂರು ತಿಂಗಳವರೆಗೆ ಸರ್ಕಾರಿ ನೌಕರರಿಗೆ ವೇತನವನ್ನೇ ನೀಡಿಲ್ಲ. ಹೀಗಾಗಿ ಸರ್ಕಾರಿ ನೌಕರರು ಕುಟುಂಬ ನಿರ್ವಹಣೆಗೂ ಪರದಾಡುತ್ತಿದ್ದಾರೆ. ಅಲ್ಲದೇ ಸರ್ಕಾರಿ ನೌಕರರು ವೇತನಕ್ಕಾಗಿ ಖಜಾನೆ ಇಲಾಖೆಯ ಮೆಟ್ಟಿಲು ಹತ್ತಿಳಿದು ಬಸವಳಿದಿದ್ದಾರೆ.

 

ವಿಶೇಷವೆಂದರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರಾಗಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ 1,686 ನೌಕರರಿಗೆ ಕಳೆದ ಮೂರು ತಿಂಗಳಿನಿಂದ 15.70 ಕೋಟಿ ಮೊತ್ತದಷ್ಟು ವೇತನ ಬಾಕಿ ಇದೆ. ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರು ಸಚಿವರಾಗಿರುವ ನಗರಾಭಿವೃದ್ಧಿ ಮತ್ತು ಜಲಸಂಪನ್ಮೂಲ ಇಲಾಖೆಯ ಒಟ್ಟಾರೆ 2,555 ನೌಕರರಿಗೆ 17.17 ಕೋಟಿ ಮೊತ್ತದಷ್ಟು ವೇತನ ಬಾಕಿ ಇದೆ.

 

ತೆಲಂಗಾಣದಲ್ಲಿಯೂ ಗ್ಯಾರಂಟಿ ಅನುಷ್ಠಾನದಿಂದಾಗಿ ಸರ್ಕಾರಿ ವೇತನಕ್ಕಾಗಿ ಸಾಲ ಪಡೆಯುವ ಸ್ಥಿತಿ ಇದೆ ಎಂದು ಅಲ್ಲಿನ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಕರ್ನಾಟಕದಲ್ಲಿಯೂ 1,17,884 ಸರ್ಕಾರಿ ನೌಕರರಿಗೆ 3 ತಿಂಗಳಿನಿಂದಲೂ 834.89 ಕೋಟಿ ರು ಮೊತ್ತದಷ್ಟು ವೇತನ ಪಾವತಿಯಾಗದಿರುವುದು ಮುನ್ನೆಲೆಗೆ ಬಂದಿದೆ.

 

ಮೇಲ್ನೋಟಕ್ಕೆ ಮಾನವ ಸಂಪನ್ಮೂಲ ನಿರ್ವಹಣೆ ವ್ಯವಸ್ಥೆ (ಹೆಚ್‌ಆರ್‍ಎಂಎಸ್‌)ಯಲ್ಲಿನ ತಾಂತ್ರಿಕ ತೊಂದರೆ, ನವೀಕರಣಗೊಳ್ಳದ ಸಾಫ್ಟ್‌ವೇರ್‍‌, ಎಜಿಯಿಂದ ನಿಗದಿತ ಸಮಯದಲ್ಲಿ ಮಾಹಿತಿ ಬಂದಿಲ್ಲ ಎಂಬ ನೆಪವನ್ನೊಡ್ಡಿದೆ. ಆದರೆ ವಾಸ್ತವದಲ್ಲಿ ವೇತನಕ್ಕೂ ಹಣ ಹೊಂದಿಸಲು ಸರ್ಕಾರವು ಪರದಾಡುತ್ತಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು.

 

ಆರ್ಥಿಕ ವರ್ಷ ಆರಂಭವಾಗಿ 3 ತಿಂಗಳೂ ಕಳೆದಿದ್ದರೂ ಸಹ ವೇತನ ಬಿಲ್‌ಗಳನ್ನು ಡಿಡಿಓಗಳು ಸೆಳೆದಿರಲಿಲ್ಲ. ಈ ಸಂಗತಿಯು ಆರ್ಥಿಕ ಇಲಾಖೆಗೆ ತಡವಾಗಿ ಗಮನಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಖುದ್ದು ಆರ್ಥಿಕ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿ ಇಕ್ರಂ ಶರೀಪ್‌ ಅವರು ಸರ್ಕಾರದ ಎಲ್ಲಾ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

 

ಇಕ್ರಂ ಶರೀಫ್‌ ಅವರು 2025ರ ಜುಲೈ 23ರಂದು ಬರೆದಿರುವ ಪತ್ರವು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪತ್ರದಲ್ಲೇನಿದೆ?

 

ರಾಜ್ಯದ ವಿವಿಧ ಇಲಾಖೆಗಳಿಗೆ ಸೇರಿದ ಒಟ್ಟು 1,17,884 ರಾಜ್ಯ ಸರ್ಕಾರಿ ನೌಕರರ ಒಟ್ಟು 834.89 ಮೊತ್ತದಷ್ಟು ವೇತನ ಬಿಲ್‌ಗಳನ್ನು ಸಂಬಂಧಿಸಿದ ಡಿಡಿಓ ಗಳು ಸೆಳೆದಿಲ್ಲ. ಇದು ಆರ್ಥಿಕ ಇಲಾಖೆಯ ಗಮನಕ್ಕೆ ಬಂದಿದೆ. 2025ರ ಏಪ್ರಿಲ್‌ರಿಂದ ಜೂನ್‌ ಅವಧಿಯವರೆಗೆ ಎಚ್‌ಆರ್‍‌ಎಂಎಸ್‌ ವಿಭಾಗವು ವರದಿ ಸಲ್ಲಿಸಿದೆ ಎಂದು ಪತ್ರದಲ್ಲಿ ಇಕ್ರಂ ಶರೀಫ್‌ ಅವರು ತಿಳಿಸಿರುವುದು ಗೊತ್ತಾಗಿದೆ.

 

ಆಯವ್ಯಯದಲ್ಲಿ ವೇತನಕ್ಕೆ ಒದಗಿಸಿರುವ ಅನುದಾನವನ್ನು ಕಾಲಕಾಲಕ್ಕೆ ಸೆಳೆದು ಅಧಿಕಾರಿ, ಸಿಬ್ಬಂದಿಗೆ ಪಾವತಿ ಮಾಡದೆ  ಇದ್ದಲ್ಲಿ ರಾಜ್ಯದ ಒಟ್ಟಾರೆ ಹಣಕಾಸು ಮತ್ತು ಆಯವ್ಯಯ ನಿರ್ವಹಣೆಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇರುತ್ತದೆ. ನಿಗದಿತ ಸಮಯದಲ್ಲಿ ವೇತನ ಪಾವತಿ ಮಾಡುವುದರಿಂದ ನೌಕರರ ಕ್ಷೇಮಾಭಿವೃದ್ಧಿ, ಹಣಕಾಸು ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಅಂದಾಜು ವೆಚ್ಚಗಳಮೇಲೆ ನಿಗಾ ಇಡಲು ಸಾಧ್ಯವಾಗುತ್ತದೆ ಎಂದು ವಿವರಿಸಿರುವುದು ತಿಳಿದು ಬಂದಿದೆ.

 

 

ವೇತನ ಪಾವತಿಯ ವಿಳಂಬವಾದಲ್ಲಿ ಹಣಕಾಸು ನಿರ್ವಹಣೆ ಮತ್ತು ಆಯವ್ಯಯ ಅಂದಾಜಿಸುವುದರಲ್ಲಿ ವ್ಯತ್ಯಯ ಉಂಟಾಗಲಿದೆ. ಹೀಗಾಗಿ ತಮ್ಮ ನಿಯಂತ್ರಣದಡಿ ಬರುವ ಎಲ್ಲಾ ಡಿಡಿಒಗಳಿಗೆ ಮುಂದಿನ ಮೂರು ದಿನದೊಳಗಾಗಿ ಎಚ್‌ಆರ್‍‌ಎಂಎಸ್‌ನಲ್ಲಿ ಬಿಲ್‌ಗಳನ್ನು ತಯಾರಿಸಬೇಕು. ವೇತನ ಪಾವತಿಗಾಗಿ ಖಜಾನೆಗೆ ಸಲ್ಲಿಸಲು ಸೂಚನೆ ನೀಡಬೇಕು ಎಂದು ನಿರ್ದೇಶಿಸಿರುವುದು ಗೊತ್ತಾಗಿದೆ.

 

ವೇತನವಾಗದ ನೌಕರರ ಸಂಖ್ಯೆ-ಇಲಾಖೆಗಳ ಪಟ್ಟಿ

 

2025ರ ಏಪ್ರಿಲ್‌ನಲ್ಲಿ 23,759, ಮೇ ತಿಂಗಳಿನಲ್ಲಿ 19,053, ಜೂನ್‌ ತಿಂಗಳಿನಲ್ಲಿ 75,072 ಸೇರಿ ಒಟ್ಟಾರೆ 1,17,884 ಸಂಖ್ಯೆಯ ಸರ್ಕಾರಿ ನೌಕರರಿಗೆ ವೇತನವಾಗಿರಲಿಲ್ಲ.

 

ವೇತನವಾಗದ ಸರ್ಕಾರಿ ನೌಕರರ ಪೈಕಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಅಗ್ರ ಸ್ಥಾನದಲ್ಲಿದೆ. ಏಪ್ರಿಲ್‌ನಲ್ಲಿ 4,294, ಮೇ ನಲ್ಲಿ 3,920, ಜೂನ್‌ನಲ್ಲಿ 14,887 ಸೇರಿ ಒಟ್ಟಾರೆ 23,101 ಸಂಖ್ಯೆಯ ನೌಕರರಿಗೆ ವೇತನವಾಗಿಲ್ಲ. ಇದರ ಮೊತ್ತವೇ 171.10 ಕೋಟಿಯಷ್ಟಿದೆ.

 

ಆರೋಗ್ಯ ಇಲಾಖೆಯ ಒಟ್ಟು 13,637 ನೌಕರರಿಗೆ 96.58 ಕೋಟಿ ರು., ಕಂದಾಯ ಇಲಾಖೆಯ 12,534 ನೌಕರರಿಗೆ 70.35 ಕೋಟಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 8,075 ನೌಕರರಿಗೆ 44.53 ಕೋಟಿ, ಹಣಕಾಸು ಇಲಾಖೆಯ 7,636 ನೌಕರರಿಗೆ 58.96 ಕೋಟಿ ರು ವೇತನ ಆಗಿಲ್ಲ.

 

ಅದೇ ರೀತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ 5,974 ನೌಕರರಿಗೆ 47.64 ಕೋಟಿ, ಗೃಹ ಇಲಾಖೆಯ 5,884 ನೌಕರರಿಗೆ 35.93 ಕೋಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ 5,846 ನೌಕರರಿಗೆ 41.16 ಕೋಟಿ, ಕಾರ್ಮಿಕ ಇಲಾಖೆಯ 3,800 ನೌಕರರಿಗೆ 33.43 ಕೋಟಿ, ಲೋಕೋಪಯೋಗಿ ಇಲಾಖೆಯ 3,292 ನೌಕರರಿಗೆ 24.33 ಕೋಟಿ, ಅಲ್ಪಸಂಖ್ಯಾತರ ಇಲಾಖೆಯ 2,566 ನೌಕರರಿಗೆ ಕಳೆದ ಮೂರು ತಿಂಗಳಿನಿಂದ 20.02 ಕೋಟಿ ರು ವೇತನ ಬಾಕಿ ಇರುವುದು ಪತ್ರದಿಂದ ಗೊತ್ತಾಗಿದೆ.

 

ಪಶು ಸಂಗೋಪನೆ 2,071 ನೌಕರರಿಗೆ 14.12 ಕೋಟಿ, ಅರಣ್ಯ ಇಲಾಖೆಯ 2,054 ನೌಕರರಿಗೆ 11.87 ಕೋಟಿ, ಕೃಷಿ ಇಲಾಖೆಯ 2,040 ನೌಕರರಿಗೆ 16.25 ಕೋಟಿ, ಕಾನೂನು ಸಂಸದೀಯ ಶಾಸನ ರಚನೆ ಇಲಾಖೆಯ 1,766 ನೌಕರರಿಗೆ 9.33 ಕೋಟಿ, ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ 1,686 ನೌಕರರಿಗೆ 15.70 ಕೋಟಿ ರು ವೇತನ ನೀಡಲು ಬಾಕಿ ಇದೆ.

 

 

ಸಹಕಾರ ಇಲಾಖೆಯ 1,600 ನೌಕರರಿಗೆ 12.69 ಕೋಟಿ, ಉನ್ನತ ಶಿಕ್ಷಣ ಇಲಾಖೆಯ 1,586 ನೌಕರರಿಗೆ 14.78 ಕೋಟಿ, ನಗರಾಭಿವೃದ್ಧಿ ಇಲಾಖೆಯ 1,570 ನೌಕರರಿಗೆ 11.90 ಕೋಟಿ ರು., ರೇಷ್ಮೇ ಇಲಾಖೆಯ 1,534 ನೌಕರರಿಗೆ 12.14 ಕೋಟಿ, ಸಾರಿಗೆ ಇಲಾಖೆಯ 1,437 ನೌಕರರಿಗೆ 10.80 ಕೋಟಿ, ಪರಿಶಿಷ್ಟ ಕಲ್ಯಾಣ ಇಲಾಖೆಯ 1,030 ನೌಕರರಿಗೆ 5.36 ಕೋಟಿ, ಭಾರೀ ನೀರಾವರಿ ಇಲಾಖೆಯ 985 ನೌಕರರಿಗೆ 5.27 ಕೋಟಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ 822 ನೌಕರರಿಗೆ 6.74 ಕೋಟಿ ರು ವೇತನ ನೀಡಿಲ್ಲ.

 

ತೋಟಗಾರಿಕೆ ಇಲಾಖೆಯ 714 ನೌಕರರಿಗೆ 5.09 ಕೋಟಿ, ಮೀನುಗಾರಿಕೆ ಇಲಾಖೆಯ 663 ನೌಕರರಿಗೆ 5.09 ಕೋಟಿ, ಗಣಿಗಾರಿಕೆ ಇಲಾಖೆಯ 583 ನೌಕರರಿಗೆ 5.05 ಕೋಟಿ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ 553 ನೌಕರರಿಗೆ 4.18 ಕೋಟಿ, ಸಂಸದೀಯ ವ್ಯವಹಾರಗಳು ಇಲಾಖೆಯ 542 ನೌಕರರಿಗೆ 3.94 ಕೋಟಿ, ಭಾರೀ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಯ 458 ನೌಕರರಿಗೆ 4.77 ಕೋಟಿ, ವೈದ್ಯಕೀಯ ಶಿಕ್ಷಣ ಇಲಾಖೆಯ 449 ನೌಕರರಿಗೆ 4.56 ಕೋಟಿ, ಸಣ್ಣ ನೀರಾವರಿ ಇಲಾಖೆಯ 425 ನೌಕರರಿಗೆ 3.19 ಕೋಟಿ ರು ವೇತನ ಪಾವತಿಯಾಗಿಲ್ಲ.

 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 377 ನೌಕರರಿಗೆ 3.25 ಕೋಟಿ, ಯುವಜನ ಸೇವೆ ಇಲಾಖೆಯ 180 ನೌಕರರಿಗೆ 1.34 ಕೋಟಿ, ಕೈಮಗ್ಗ ಮತ್ತು ಜವಳಿ ಇಲಾಖೆಯ 168 ನೌಕರರಿಗೆ 1.55 ಕೋಟಿ, ಪ್ರವಾಸೋದ್ಯಮ ಇಲಾಖೆಯ 114 ನೌಕರರಿಗೆ 0.99 ಕೋಟಿ, ಯೋಜನೆ ಸಾಂಖ್ಯಿಕ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ 103 ನೌಕರರಿಗೆ 0.61 ಕೋಟಿ, ಮಾಹಿತಿ ಇಲಾಖೆಯ 16 ನೌಕರರಿಗೆ 0.20 ಕೋಟಿ, ಇ-ಆಡಳಿತ ಇಲಾಖಲೆಯ 13 ನೌಕರರಿಗೆ 0.10 ಕೋಟಿ ರು ವೇತನ ಬಾಕಿ ಇರುವುದು ಪತ್ರದಿಂದ ಗೊತ್ತಾಗಿದೆ.

 

‘ಸರ್ಕಾರಿ ನೌಕರರ ವೇತನದಲ್ಲಿ ವಿಳಂಬ ಅಥವಾ ವ್ಯತ್ಯಯ ಉಂಟಾಗುವುದು ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಈ ಸಮಸ್ಯೆಯಿಂದಾಗಿ, ನೌಕರರು ತಮ್ಮ ಮನೆ ಬಾಡಿಗೆ, ದಿನಸಿ ಮತ್ತು ಇತರ ಖರ್ಚುಗಳನ್ನು ನಿಭಾಯಿಸಲು ಕಷ್ಟಪಡಬೇಕಾಗುತ್ತದೆ,’ ಎನ್ನುತ್ತಾರೆ ಸರ್ಕಾರಿ ನೌಕರರೊಬ್ಬರು.

 

2024ರ ಅಕ್ಟೋಬರ್‍‌ನಿಂದಲೇ ಜಿಲ್ಲಾ ಹಂತದಲ್ಲಿ ವೇತನ ಅಗುತ್ತಿತ್ತು. ಆದರೆ ನಿಗದಿತ ಸಮಯದಲ್ಲಿ ವೇತನ ಆಗದ ಕಾರಣ ಬಾಡಿಗೆ ಕಟ್ಟಲು, ಸಾಲದ ಕಂತು ಪಾವತಿಸಲುಕುಟುಂಬ ನಿರ್ವಹಣೆಗೆ ಕಷ್ಟಪಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

 

ಕಳೆದ 3 ತಿಂಗಳಿನಿಂದ 1.17,884 ನೌಕರರಿಗೆ 834.89 ಕೋಟಿ ರು ಮೊತ್ತದಷ್ಟು ವೇತನ ಬಾಕಿ ಇರುವ ಬಗ್ಗೆ ಆರ್ಥಿಕ ಇಲಾಖೆಯ ಜಂಟಿ ಕಾರ್ಯದರ್ಶಿ ಇಕ್ರಂ ಶರೀಫ್‌ ಅವರನ್ನು ‘ದಿ ಫೈಲ್‌’ ಭೇಟಿ ಮಾಡಲು ಪ್ರಯತ್ನಿಸಿತು. ಆದರೆ ಭೇಟಿ ಸಾಧ್ಯವಾಗಲಿಲ್ಲ. ಇಲಾಖೆಯ ಜಂಟಿ ಕಾರ್ಯದರ್ಶಿ ಅವರು ಪ್ರತಿಕ್ರಿಯೆ ನೀಡಿದ ನಂತರ ವರದಿಯನ್ನು ನವೀಕರಿಸಲಿದೆ.

SUPPORT THE FILE

Latest News

Related Posts