ಬೆಂಗಳೂರು; ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಸರ್ಕಾರವು ಬಿಡುಗಡೆ ಮಾಡಿದ್ದ ಅನುದಾನದಲ್ಲಿ ಸುಮಾರು 200 ಕೋಟಿ ರು. ಖರ್ಚು ಮಾಡಲು ಅವಕಾಶವಿದ್ದರೂ ಸಹ ಅಲ್ಪಸಂಖ್ಯಾತರ ನಿರ್ದೇಶನಾಲಯವು ಖರ್ಚು ಮಾಡಿಲ್ಲ.
ಅನುದಾನವನ್ನು ಖರ್ಚು ಮಾಡಲು ಅಲ್ಪಸಂಖ್ಯಾತರ ನಿರ್ದಶನಾಲಯವು ಯಾವುದೇ ಕ್ರಮವನ್ನೂ ವಹಿಸಿಲ್ಲ ಎಂದು ಇಲಾಖೆಯ ಸರ್ಕಾರದ ಕಾರ್ಯದರ್ಶಿ, ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
2025ರ ಜೂನ್ 23ರಂದು ನಿರ್ದೇಶಕರಿಗೆ ಬರೆದಿರುವ ಪತ್ರವು ‘ದಿ ಫೈಲ್’ಗೆ ಲಭ್ಯವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಆರ್ಥಿಕ ವರ್ಷದ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗಾಗಿ ಘೋಷಿಸಿಸದ್ದ ವಿವಿಧ ಕಲ್ಯಾಣ ಯೋಜನೆಗಳನ್ನು ಪ್ರತಿಪಕ್ಷ ಬಿಜೆಪಿಯು ಟೀಕಿಸಿತ್ತು. ಇದು ಅಲ್ಪಸಂಖ್ಯಾತರ ತುಷ್ಟೀಕರಣವೆಂದು ಜರಿದಿತ್ತು. ಇದರ ಬೆನ್ನಲ್ಲೇ ಅಲ್ಪಸಂಖ್ಯಾತರ ನಿರ್ದೇಶನಾಲಯವು 200 ಕೋಟಿ ರು ಗಳನ್ನು ಖರ್ಚು ಮಾಡಲು ಅವಕಾಶವಿದ್ದರೂ ಸಹ ಖರ್ಚೇ ಮಾಡಿಲ್ಲ ಎಂಬ ಸಂಗತಿಯು ಮುನ್ನೆಲೆಗೆ ಬಂದಿದೆ.
ಈ ಕುರಿತು ಅಧಿಕಾರಿಗಳು ಸಚಿವ ಜಮೀರ್ ಅಹ್ಮದ್ ಖಾನ್ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಲ್ಪಸಂಖ್ಯಾತರ ನಿರ್ದೇಶನಾಲಯಕ್ಕೆ ಅನುದಾನ ಮಂಜೂರು, ಬಿಡುಗಡೆ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2025ರ ಜೂನ್ 21ರಂದು ಸಭೆ ನಡೆದಿತ್ತು. ಪ್ರಸಕ್ತ ಸಾಲಿನಲ್ಲಿ ಬಿಡುಗಡೆಯಾಗಿದ್ದ ಅನುದಾನ ಖರ್ಚು ಮಾಡಲು ಹಾಗೂ ಹಿಂದಿನ ಆಯವ್ಯಯ ವರ್ಷದ ಬಾಕಿ ಇರುವ ಬಿಲ್‌ಗಳನ್ನು ಪಾವತಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಸೂಚಿಸಲಾಗಿತ್ತು.
‘ನಿರ್ದೇಶನಾಲಯದಲ್ಲಿ ಅನದಾನವನ್ನು ಖರ್ಚು ಮಾಡಲು ಯಾವುದೇ ಕ್ರಮವಹಿಸದೇ ಇರುವ ಬಗ್ಗೆ ಹಾಗೂ ಪ್ರಗತಿಯನ್ನು ಸಾಧಿಸದಿರುವ ಬಗ್ಗೆ ಮತ್ತು ಬಾಕಿಯಿರುವ ಬಿಲ್‌ಗಳ ಬಾಬ್ತುಗಳನ್ನು ಪಾವತಿಸಲು ಯಾವುದೇ ಕ್ರಮವಹಿಸದೇ ಇರುವ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗಿದೆ,’ ಎಂದು ಎಚ್ಚರಿಸಿರುವುದು ಪತ್ರದಿಂದ ಗೊತ್ತಾಗಿದೆ.
ಆದರೂ ಅಲ್ಪಸಂಖ್ಯಾತರ ನಿರ್ದೇಶನಾಲಯವು ಈ ಕುರಿತು ಕ್ರಮಗಳನ್ನು ಕೈಗೊಂಡಿಲ್ಲ. ಹೀಗಾಗಿ 2025ರ ಜೂನ್ 23ರಂದು ಮತ್ತೊಂದು ಪತ್ರವನ್ನು ಬರೆಯಲಾಗಿದೆ.
ಸಭೆಯಲ್ಲಿ ನೀಡಿದ್ದ ಸೂಚನೆಗಳೇನು?
ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಸುಮಾರು 200 ಕೋಟಿ ರು.ಗಳನ್ನು ಖರ್ಚು ಮಾಡಲು ಅವಕಾಶವಿದ್ದರೂ ಸಹ ಅನುದಾನವನ್ನು ಖರ್ಚು ಮಾಡಿರುವುದಿಲ್ಲ. ಆದ್ದರಿಂದ 15 ದಿನದೊಳಗಾಗಿ ಅನುದಾನವನ್ನು ಖರ್ಚು ಮಾಡಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸಭೆಯಲ್ಲಿ ಸೂಚಿಸಲಾಗಿತ್ತು.
ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಿದ್ದ ಅನುದಾನವನ್ನೂ ಸಹ ಕೂಡಲೇ ಖರ್ಚು ಮಾಡಲು ಅಗತ್ಯ ಕ್ರಮವಹಿಸಬೇಕು. ಮೌಲಾನಾ ಅಜಾದ್ ಶಾಲೆ, ಕಾಲೇಜುಗಳು ಹಾಗೂ ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯ ಯೋಜನೆಯ (ಲೆಕ್ಕ ಶೀರ್ಷಿಕೆಯ ಉಪ ಶೀರ್ಷಿಕೆ 051 ಮತ್ತು 059) ಯಡಿ ಅನುದಾನ ಒದಗಿಸಿತ್ತು. ಈ ಅನುದಾನಕ್ಕೆ ಸಂಬಂಧಿಸಿದಂತೆ ಕೈಗೊಂಡಿದ್ದ ನಿರ್ವಹಣಾ ಕಾಮಗಾರಿಗಳ ವಿವರಗಳನ್ನು ಪ್ರತ್ಯೇಕವಾಗಿ ಸಲ್ಲಿಸಬೇಕು ಎಂದು ಸಭೆಯಲ್ಲಿ ನಿರ್ದೇಶನ ನೀಡಲಾಗಿತ್ತು.
ಅಲ್ಲದೇ ಇದೇ ಲೆಕ್ಕ ಶೀರ್ಷಿಕೆಯ ಉಪ ಶೀರ್ಷಿಕೆಯಡಿಯಲ್ಲಿ ಬಿಡುಗಡೆ ಮಾಡಿದ್ದ ಅನುದಾನದ ಹಾಗೂ ಖರ್ಚು ಮಾಡಲಾದ ವಿವರವನ್ನು ಸಹ ಒದಗಿಸಬೇಕು ಎಂದು ಸಭೆಯು ಸೂಚಿಸಿತ್ತು ಎಂಬುದು ತಿಳಿದುಬಂದಿದೆ.
ಅಲ್ಪಸಂಖ್ಯಾತರ ಸಮುದಾಯದಲ್ಲಿ ಸರಳ ವಿವಾಹಗಳನ್ನು ಬೆಂಬಲಿಸಲು ಸರ್ಕಾರೇತರ ಸಂಸ್ಥೆಗಳಿಗೆ ಪ್ರತಿ ದಂಪತಿಗೆ 50,000 ರೂ.ಗಳು ಮತ್ತು ಮುಖ್ಯಮಂತ್ರಿಗಳ ಅಲ್ಪಸಂಖ್ಯಾತ ವಸಾಹತು ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ 1,000 ಕೋಟಿ ರೂ.ಗಳು ಸೇರಿದ್ದವು.
250 ಮೌಲಾನಾ ಆಜಾದ್ ಮಾದರಿ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕದಿಂದ ಪಿಯು ವರೆಗೆ ತರಗತಿಗಳನ್ನು ಹಂತ ಹಂತವಾಗಿ ಪರಿಚಯಿಸಿತ್ತು. ಒಟ್ಟು 500 ಕೋಟಿ ರೂ. ವೆಚ್ಚವಾಗಲಿದೆ. ಈ ಉದ್ದೇಶಕ್ಕಾಗಿ ಪ್ರಸಕ್ತ ವರ್ಷದಲ್ಲಿ 100 ಕೋಟಿ ರೂ.ಗಳನ್ನು ಹಂಚಿಕೆ ಮಾಡಿತ್ತು. ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗುವುದು ಎಂದು ಸಿದ್ದರಾಮಯ್ಯ ಅವರು ಆಯವ್ಯಯದಲ್ಲಿ ಘೋಷಿಸಿದ್ದರು.
ಹೆಚ್ಚುವರಿಯಾಗಿ, ಶಿಕ್ಷಣ ಇಲಾಖೆಯಿಂದ ನಿರ್ವಹಿಸಲ್ಪಡುವ ಅತಿ ಹೆಚ್ಚು ದಾಖಲಾತಿ ಹೊಂದಿರುವ 100 ಉರ್ದು ಮಾಧ್ಯಮ ಶಾಲೆಗಳನ್ನು ಬಲಪಡಿಸಲಾಗುವುದು. ಅಗತ್ಯ ಸೌಲಭ್ಯಗಳನ್ನು ಒದಗಿಸಲು ಒಟ್ಟು 400 ಕೋಟಿ ರೂ.ಗಳ ಮೇಲ್ದರ್ಜೆ ಯೋಜನೆಯ ಭಾಗವಾಗಿ ಈ ವರ್ಷ 100 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಬಜೆಟ್‌ನಲ್ಲಿ ಹೇಳಲಾಗಿತ್ತು.
ಹಿಂದುಳಿದ ವರ್ಗಗಳು, ಪರಿಶಿಷ್ಟ ವರ್ಗಗಳು ಮತ್ತು ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ರಾಜ್ಯ ವಿದ್ಯಾರ್ಥಿ ವೇತನ ಪಾವತಿಸಲು ಅನುದಾನ ಕೊರತೆ ಎದುರಾಗಿತ್ತು. ಹೀಗಾಗಿ 2024-25ನೇ ಸಾಲಿಗೆ ಸಂಬಂಧಿಸಿದಂತೆ ಈ ಮೂರು ಇಲಾಖೆಗಳ ವ್ಯಾಪ್ತಿಯಲ್ಲಿ 48,019 ಅರ್ಜಿಗಳಿಗೆ ಇನ್ನೂ ಅನುಮೋದನೆ ದೊರೆತಿರಲಿಲ್ಲ.
ವಿದ್ಯಾರ್ಥಿ ವೇತನಕ್ಕೆ ಅನುದಾನ ಕೊರತೆ; 48,019 ಅರ್ಜಿಗಳಿಗೆ ಇನ್ನೂ ದೊರೆಯದ ಅನುಮೋದನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ 2025ರ ಮೇ 30 ಮತ್ತು 31ರಂದು ನಡೆದಿದ್ದ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಮ್ಮೇಳನದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಅಂಕಿ ಅಂಶಗಳನ್ನು ಒದಗಿಸಿತ್ತು.
ಅಲ್ಪಸಂಖ್ಯಾತರ ‘ವಿದ್ಯಾಸಿರಿ’ಯ ಪ್ರಗತಿಯಲ್ಲಿ ಹಿನ್ನಡೆ; 24.99 ಕೋಟಿಯಲ್ಲಿ 8.62 ಕೋಟಿ ಖರ್ಚು, 16.36 ಕೋಟಿ ಬಾಕಿ
ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಉದ್ದೇಶದ ವಿದ್ಯಾಸಿರಿ ಯೋಜನೆಗೆ 24,99,00,000 ರು ಹಂಚಿಕೆಯಾಗಿತ್ತು. ಈ ಪೈಕಿ 2024ರ ಡಿಸೆಂಬರ್ 2ರ ಅಂತ್ಯಕ್ಕೆ 18,74,25,000 ರು ಅನುದಾನ ಸ್ವೀಕೃತವಾಗಿತ್ತು. ಬಿಡುಗಡೆಯಾಗಿದ್ದ ಈ ಅನುದಾನದ ಪೈಕಿ ನಯಾ ಪೈಸೆಯನ್ನೂ ಇಲಾಖೆಯು ಖರ್ಚು ಮಾಡಿರಲಿಲ್ಲ. ಬದಲಿಗೆ ತನ್ನ ಬಳಿಯೇ ಇಟ್ಟುಕೊಂಡಿತ್ತು.
ಡಿಸೆಂಬರ್ ಅಂತ್ಯಕ್ಕೆ ಶೇ.57.34ರಷ್ಟು ಮಾತ್ರ ವೆಚ್ಚ, ಕಳೆದ ಸಾಲಿಗೆ ಹೋಲಿಸಿದರೆ ಕೇವಲ ಶೇ.2.3ರಷ್ಟೇ ಪ್ರಗತಿ
ಕೇಂದ್ರ ಪುರಸ್ಕೃತ ಯೋಜನೆಗೆ ಸಂಬಂಧಿಸಿದಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ರಾಜ್ಯ ಸರ್ಕಾರವು 83.00 ಕೋಟಿ ರು.ಗಳನ್ನು ಆಯವ್ಯಯದಲ್ಲಿ ಅನುದಾನ ಒದಗಿಸಿಕೊಂಡಿದೆ. ಕೇಂದ್ರ ಸರ್ಕಾರವು 100 ಕೋಟಿ ರು. ಒದಗಿಸಿದೆ. ಒಟ್ಟಾರೆ 183 ಕೋಟಿ ರು. ಅನುದಾನವಿದ್ದರೂ ಅಕ್ಟೋಬರ್ ಅಂತ್ಯಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರವು ಬಿಡಿಗಾಸೂ ಬಿಡುಗಡೆ ಮಾಡಿರಲಿಲ್ಲ.
ಅಲ್ಪಸಂಖ್ಯಾತರಿಗೆ ಅನುದಾನ; 2,101.20 ಕೋಟಿ ರು.ನಲ್ಲಿ ಬಿಡುಗಡೆ ಮಾಡಿದ್ದು ಕೇವಲ 421.60 ಕೋಟಿ
ಇಲಾಖಾವಾರು ಫಲಾನುಭವಿ ಆಧರಿತ ಯೋಜನೆಗಳಲ್ಲಿಯೂ ಇದೇ ಸ್ಥಿತಿ ಇದೆ. ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿ ವೇತನ, ಶುಲ್ಕ ಮರುಪಾವತಿಗಾಗಿ ಆಯವ್ಯಯದಲ್ಲಿ 160 ಕೋಟಿ ರು. ಅನುದಾನ ಒದಗಿಸಿದೆ. ಅಕ್ಟೋಬರ್ ಅಂತ್ಯಕ್ಕೆ ಕೇವಲ 2.29 ಕೋಟಿ ರು ಮಾತ್ರ ಬಿಡುಗಡೆ ಮಾಡಿದೆ. ಇದರಲ್ಲಿ 0.10 ಕೋಟಿ ರು. ಮಾತ್ರ ವೆಚ್ಚವಾಗಿತ್ತು.
ಹಿಂದುಳಿದ ವರ್ಗದ 39,332 ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳಲ್ಲಿ ದೊರೆಯದ ಪ್ರವೇಶಾತಿ
ಇದೇ ಇಲಾಖೆ ವ್ಯಾಪ್ತಿಯಲ್ಲಿ ವಿವಿಧ ಸಮುದಾಯಗಳ ಅಭಿವೃದ್ಧಿಗೆಂದು 110 ಕೋಟಿ ರು.ಗಳನ್ನು ಆಯವ್ಯಯದಲ್ಲಿ ಒದಗಿಸಿಕೊಂಡಿದೆಯಾದರೂ ಅಕ್ಟೋಬರ್ ಅಂತ್ಯಕ್ಕೆ ಕೇವಲ 1.00 ಕೋಟಿ ರು ಮಾತ್ರ ಬಿಡುಗಡೆ ಮಾಡಿತ್ತು.
ದಲಿತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ, ವರ್ಷದಿಂದಲೂ ಬಾಕಿ;ಬಡಮಕ್ಕಳ ಶಿಷ್ಯ ವೇತನಕ್ಕೂ ಹಣವಿಲ್ಲವೇ?
ಅಲ್ಪಸಂಖ್ಯಾತರ ಸಮುದಾಯದ ಎಂ ಫಿಲ್, ಪಿಹೆಚ್‌ಡಿ ವಿದ್ಯಾರ್ಥಿಗಳಿಗೆ ಸಹಾಯ ಧನ ಒದಗಿಸಲು 6.0 ಕೋಟಿ ರು. ಆಯವ್ಯಯದಲ್ಲಿ ಒದಗಿಸಿಕೊಂಡಿತ್ತು. ಅಕ್ಟೋಬರ್ ಅಂತ್ಯಕ್ಕೆ 2.33 ಕೋಟಿ ರ. ಮಾತ್ರ ವೆಚ್ಚವಾಗಿತ್ತು. ಶುಲ್ಕ ಮರು ಪಾವತಿಗೆ ಸಂಬಂಧಿಸಿದಂತೆ 25 00 ಕೋಟಿ ರು. ಆಯವ್ಯಯದಲ್ಲಿ ಒದಗಿಸಿಕೊಂಡಿತ್ತು. ಆದರೂ ಅಕ್ಟೋಬರ್ ಅಂತ್ಯಕ್ಕೆ ಒಂದೇ ಒಂದು ಪೈಸೆಯನ್ನೂ ಕೊಟ್ಟಿರಲಿಲ್ಲ. 18,000 ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಮಾಡಲು ವಾರ್ಷಿಕ ಗುರಿ ನೀಡಲಾಗಿತ್ತು. 6 ತಿಂಗಳವರೆಗೂ ಬಿಡಿಗಾಸನ್ನೂ ನೀಡಿರಲಿಲ್ಲ. ಹೀಗಾಗಿ ಇಷ್ಟೂ ಸಂಖ್ಯೆಯ ವಿದ್ಯಾರ್ಥಿಗಳ ಶುಲ್ಕ ಮರುಪಾವತಿಯಾಗಿರಲಿಲ್ಲ.
ಕೆಡಿಪಿ ಪ್ರಕಾರ ಶೇ.35.41ರಷ್ಟೇ ಪ್ರಗತಿ, ಸಿಎಂ ಪ್ರಕಾರ ಶೇ.46ರಷ್ಟು ವೆಚ್ಚ; ವಾಸ್ತವ ಮರೆಮಾಚಲಾಗಿದೆಯೇ?
ಇನ್ನು ಮೌಲಾನಾ ಆಜಾದ್ ಶಾಲೆ ಕಾಲೇಜು ನಿರ್ವಹಣೆ ಮತ್ತು ನೂತನ ಹಾಸ್ಟೆಲ್‌ಗಳಿಗೆಂದು 68.29 ಕೋಟಿ ರು. ಒದಗಿಸಿದೆ. ಇದರಲ್ಲಿ 43.55 ಕೋಟಿ ರು.ಬಿಡುಗಡೆ ಮಾಡಿತ್ತು. ಇದರಲ್ಲಿ 35.38 ಕೋಟಿ ರು. ವೆಚ್ಚವಾಗಿತ್ತು. ವಿದ್ಯಾರ್ಥಿನಿಲಯಗಳು ಮತ್ತು ವಸತಿ ಶಾಲೆಗಳ ನಿರ್ವಹಣೆಗೆ 347.89 ಕೋಟಿ ರು. ಅನುದಾನ ಲಭ್ಯವಾಗಿಸಿಕೊಂಡಿತ್ತು. ಇದರಲ್ಲಿ ಅಕ್ಟೋಬರ್ ಅಂತ್ಯಕ್ಕೆ 181.42 ಕೋಟಿ ರು. ಮಾತ್ರ ಬಿಡುಗಡೆ ಮಾಡಿತ್ತು. ಈ ಪೈಕಿ 123.12 ಕೋಟಿ ರು ವೆಚ್ಚ ಮಾಡಿತ್ತು.
7 ಇಲಾಖೆಗಳಲ್ಲಿ ವೆಚ್ಚವಾಗದ 29,884 ಕೋಟಿ; ಚುರುಕಾಗದೇ ತೆವಳುತ್ತಿದೆಯೇ ಆಡಳಿತ ಯಂತ್ರ?
ಶ್ರಮ ಶಕ್ತಿ ಸಾಲ ಯೋಜನೆ (ವೈಯಕ್ತಿಕ) ಯಡಿ 1,000 ವ್ಯಕ್ತಿಗಳಿಗೆ ಆರ್ಥಿಕ ನೆರವು ನೀಡಲು 5.00 ಕೋಟಿ ರು. ನೀಡಿದೆ. ಆದರೆ ಬಿಡಿಗಾಸೂ ನೀಡಿಲ್ಲ. ಆದರೆ 11.01 ಕೋಟಿ ವೆಚ್ಚವಾಗಿದೆ ಎಂದು ತೋರಿಸಿದ್ದನ್ನು ಸ್ಮರಿಸಬಹುದು.