ಕಾಲುವೆ ದುರಸ್ತಿಗೆ ಅನುದಾನ ಒದಗಿಸದ ಸರ್ಕಾರ, ಗ್ಯಾರಂಟಿ ಸಮಾವೇಶಕ್ಕೆ 6 ಕೋಟಿ ಬಿಡುಗಡೆಗೆ ಸಹಮತಿ

ಬೆಂಗಳೂರು;  ಕಾಲುವೆಗಳ ದುರಸ್ತಿಗೆ ಕೇವಲ 15 ಲಕ್ಷ ರು ಅನುದಾನ ಒದಗಿಸಲು ಕಷ್ಟಸಾಧ್ಯವೆಂದಿರುವ ಆರ್ಥಿಕ ಇಲಾಖೆಯು ಇದೀಗ ಚನ್ನಪಟ್ಟಣದಲ್ಲಿ ನಡೆದಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕೆ ವೆಚ್ಚವಾಗಿದ್ದ 6.00 ಕೋಟಿ ರು.ಗಳನ್ನು ಬಿಡುಗಡೆ ಮಾಡಲು ಸಹಮತಿ ವ್ಯಕ್ತಪಡಿಸಿದೆ.

 

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ನಡೆಸಲು ಹೊರಟಿರುವ ಸರ್ಕಾರವು ಇದಕ್ಕಾಗಿ 6.00 ಕೋಟಿ ರು ವೆಚ್ಚವಾಗಿತ್ತು. ಈ ವೆಚ್ಚವನ್ನು ಭರಿಸಲು  ಕಂದಾಯ ಇಲಾಖೆಯು ಪ್ರಸ್ತಾವನೆ  ಸಲ್ಲಿಸಿತ್ತು. ಈ  ಪ್ರಸ್ತಾವನೆಗೆ ಆರ್ಥಿಕ ಇಲಾಖೆಯೂ ಸಹಮತಿ ಸೂಚಿಸಿದೆ. 6.00 ಕೋಟಿ ರು.ಗಳನ್ನು ವೆಚ್ಚ ಮಾಡಲು ಹಸಿರು ನಿಶಾನೆ ತೋರಿಸಿದೆ.

 

ಕಂದಾಯ ಇಲಾಖೆಯ ಪ್ರಸ್ತಾವನೆಗೆ (RD/7/AQB/2025)  ಸಹಮತಿ ವ್ಯಕ್ತಪಡಿಸಿ ಆರ್ಥಿಕ ಇಲಾಖೆಯು  ಬರೆದಿರುವ ಪತ್ರವು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಆರ್ಥಿಕ ಇಲಾಖೆಯ ಪತ್ರದಲ್ಲೇನಿದೆ?

 

ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಎಲ್ಲಾ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಮತ್ತು ಚನ್ನಪಟ್ಟಣ ನಗರದಲ್ಲಿ ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ ಎಂಬ ಶೀರ್ಷಿಕೆಯಡಿ ಜನಸ್ಪಂದನ ಹಾಗೂ ಸರ್ಕಾರದ ಐದು ಗ್ಯಾರಂಟಿ ಯೋಜನೆ ಕಾರ್ಯಕ್ರಮಗಳ ಬಗ್ಗೆ ಸಮರ್ಪಕವಾಗಿ ಮಾಹಿತಿ ನೀಡಲು ಫಲಾನುಭವಿಗಳ ಸಮಾವೇಶ ಆಯೋಜಿಸಲು ತಗುಲಿದ ವೆಚ್ಚವನ್ನು ಪಾವತಿಸಲು 600.00 ಲಕ್ಷ ರು ಗಳನ್ನು ಹೆಚ್ಚುವರಿಯಾಗಿ ಒದಗಿಸಿದೆ. ಈ ಅನುದಾನವನ್ನು ಯಾವುದೇ ವಿಳಂಬಕ್ಕೆ ಅವಕಾಶವಿರದಂತೆ ಕೂಡಲೇ ಬಿಡುಗಡೆ ಮಾಡಬೇಕು. ಮತ್ತು ಕೋರಿರುವ ಉದ್ದೇಶಕ್ಕೆ ಮಾತ್ರ ಬಳಸಬೇಕು ಎಂದು ಆಡಳಿತ ಇಲಾಖೆಗೆ ತಿಳಿಸಿದೆ.

 

ಸಿ ಪಿ ಯೋಗೇಶ್ವರ್‍‌ ಅವರು ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅತ್ಯಲ್ಪ ದಿನದಲ್ಲೇ ಫಲಾನುಭವಿಗಳ ಸಮಾವೇಶವನ್ನು ನಡೆಸಲಾಗಿತ್ತು.

 

ಬಸವ ಕಲ್ಯಾಣದ ವಿವಿಧ ಮತ ಕ್ಷೇತ್ರಗಳಲ್ಲಿ ಕಾಲುವೆ ದುರಸ್ತಿ ಕಾಮಗಾರಿಗಳಿಗೆ ಅನುದಾನ ಒದಗಿಸುವುದು ಕಷ್ಟಸಾಧ್ಯ ಎಂದು  ಹೇಳಿದ್ದ  ಆರ್ಥಿಕ ಇಲಾಖೆಯು, ಫಲಾನುಭವಿಗಳ ಸಮಾವೇಶಕ್ಕೆ 6 ಕೋಟಿ ರು ಬಿಡುಗಡೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಅನುದಾನ ಕಷ್ಟಸಾಧ್ಯ; ಬಸವಕಲ್ಯಾಣದ ಸಣ್ಣ ಕಾಮಗಾರಿ, ದುರಸ್ತಿಗೂ 3.65 ಕೋಟಿ ಇಲ್ಲವೆಂದು ‘ಕೈ’ ಎತ್ತಿದ ಸರ್ಕಾರ

 

ಜಿಲ್ಲಾ, ತಾಲೂಕು ಮತ್ತು ಹೋಬಳಿ ಮಟ್ಟದ ಸಮಾವೇಶ ನಡೆಸಲು ಮುಂದಾಗಿದೆ. ಈ ಸಮಾವೇಶಗಳಿಗೆ  ಅಂದಾಜು 46.5 ಕೋಟಿ ರು. ವೆಚ್ಚವಾಗಿದೆ ಎಂದು ಗೊತ್ತಾಗಿದೆ.   ಈ ಸಮಾವೇಶಗಳನ್ನು ನಡೆಸಲು ಪ್ರತ್ಯೇಕ ಅನುದಾನವಿರಲಿಲ್ಲ. ಹೀಗಾಗಿ ಜಿಲ್ಲಾಧಿಕಾರಿ, ತಹಶೀಲ್ದಾರ್‍‌ಗಳ ಪಿಡಿ ಖಾತೆಗೆ ರಾಜ್ಯ ಕಾಂಗ್ರೆಸ್‌ ಸರ್ಕಾರವು  ಕೈ ಹಾಕಿತ್ತು.

 

ಲೋಕಸಭೆ ಚುನಾವಣೆಗೆ ಮಾರ್ಚ್‌ನಲ್ಲಿ ಅಧಿಸೂಚನೆ ಪ್ರಕಟವಾಗುವ ನಿರೀಕ್ಷೆಯಿದೆ. ಹೀಗಾಗಿ  ಪಕ್ಷದ ಪ್ರಚಾರಕ್ಕೆ  ಗ್ಯಾರಂಟಿ ಯೋಜನೆಗಳ ಸಮಾವೇಶಗಳನ್ನೂ ಬಳಕೆ ಮಾಡಿಕೊಳ್ಳುವ ಉದ್ದೇಶವೂ ಇದರಲ್ಲಿ ಅಡಗಿತ್ತು.

 

ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್‍‌ಗಳ ಪಿಡಿ ಖಾತೆಯಲ್ಲಿ ಸದ್ಯ ಲಭ್ಯವಿರುವ 861.32 ಕೋಟಿ ರು.ನಲ್ಲಿ 46.5 ಕೋಟಿ ರು.ಗಳು ಗ್ಯಾರಂಟಿ ಸಮಾವೇಶಗಳಿಗೆ ವೆಚ್ಚವಾಗಲಿದೆ. ಉಳಿದ 818.82 ಕೋಟಿ ರು.ನಲ್ಲಿ ಬರಪರಿಹಾರ ಸೇರಿದಂತೆ ಇನ್ನಿತರೆ ತುರ್ತು ಕಾಮಗಾರಿ ನಡೆಸಲು ಬಳಸಬೇಕಿತ್ತು.

 

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ಸಾಂಸ್ಥಿಕ ಕಾರ್ಯವಿಧಾನ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಸಚಿವ ಸಂತೋಷ್‌ ಲಾಡ್‌ ಸೇರಿದಂತೆ ಹಲವು ಶಾಸಕರು, ಸಚಿವರು  ಹೆಚ್ಚುವರಿ ಅನುದಾನ ಕೋರಿದ್ದರು.  ಆದರೆ ಸಮಾವೇಶಗಳಿಗೆಂದೇ ಪ್ರತ್ಯೇಕ ಅನುದಾನವನ್ನು ಪ್ರಸಕ್ತ ಆಯವ್ಯಯದಲ್ಲಿ ನಿಗದಿಪಡಿಸಿರಲಿಲ್ಲ. ಹೀಗಾಗಿ ಜಿಲ್ಲಾಧಿಕಾರಿ, ತಹಶೀಲ್ದಾರ್‍‌ಗಳ ಪಿಡಿ ಖಾತೆಯಲ್ಲಿರುವ ಅನುದಾನವನ್ನೇ ಬಳಸಿಕೊಳ್ಳುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿರುವ ಒಟ್ಟು ಹಣದ ಪೈಕಿ   1.00 ಕೋಟಿ ರು. ಬಳಸಿಕೊಂಡು ಜಿಲ್ಲಾ ಮಟ್ಟದ ಸಮಾವೇಶ ನಡೆಸಲಿದೆ. ಅದೇ ರೀತಿ ತಾಲೂಕು, ಹೋಬಳಿ ಸಮಾವೇಶಕ್ಕೆ 50.00 ಲಕ್ಷ ರು. ಸೇರಿ ಒಟ್ಟಾರೆ 1.50 ಕೋಟಿ ರು.ಗಳನ್ನು ಹೆಚ್ಚುವರಿಯಾಗಿ ಅನುದಾನ ಒದಗಿಸಲಿದೆ. ಪಿಡಿ ಖಾತೆಯಲ್ಲಿರುವ ಹಣವನ್ನು ಬಳಸಿಕೊಂಡು ಸಮಾವೇಶ ನಡೆಸಲು ಆರ್ಥಿಕ ಇಲಾಖೆಯೂ (ಆಇ 189 ವೆಚ್ಚ-7/2024, ದಿನಾಂಕ 26.02.2024)  ಸಹಮತಿ ವ್ಯಕ್ತಪಡಿಸಿತ್ತು.

 

ಗ್ಯಾರಂಟಿ ಯೋಜನೆಗಳ ಸಮಾವೇಶಕ್ಕೆ 46.5 ಕೋಟಿ ರು. ವೆಚ್ಚ; ಪಿಡಿ ಖಾತೆಗೆ ಕೈ ಹಾಕಿದ ಸರ್ಕಾರ

 

2024ರ ಫೆ.23ರ ಅಂತ್ಯಕ್ಕೆ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 725.92 ಕೋಟಿ ರು. ಹಾಗೂ ತಾಲೂಕು ತಹಶೀಲ್ದಾರ್‍‌ಗಳ ಪಿಡಿ ಖಾತೆಯಲ್ಲಿ  135.40 ಕೋಟಿ ರು. ಸೇರಿದಂತೆ 861.32 ಕೋಟಿ ರು ಅನುದಾನವು ಬರ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಲಭ್ಯವಿತ್ತು.

 

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಫಲಾನುಭವಿಗಳ ಸಮಾವೇಶ ನಡೆದಿತ್ತು. ಇದಕ್ಕೆ ಜಲಜೀವನ್‌ ಮಿಷನ್‌ ಮತ್ತು ಜಿಲ್ಲಾಧಿಕಾರಿಗಳ ಹೆಸರಿನಲ್ಲಿದ್ದ  ನಿಧಿಯನ್ನು ಬಳಸಿಕೊಂಡಿತ್ತು.

 

ಫಲಾನುಭವಿಗಳ ಸಮಾವೇಶಕ್ಕೆ 31 ಕೋಟಿ ವೆಚ್ಚ; ಜಲಜೀವನ್‌ ಮಿಷನ್‌, ಡಿಸಿಗಳ ಖಾತೆ ಹಣ ಮಾರ್ಗಪಲ್ಲಟ

 

ಐದು ಗ್ಯಾರಂಟಿ ಯೋಜನೆಗಳನ್ನು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಮತ್ತು ಇತರೆ ಇಲಾಖೆಗಳ ಸಿಬ್ಬಂದಿಗಳ ಮೂಲಕವೂ ಸಮೀಕ್ಷೆ ನಡೆಸಿತ್ತು.  ಇದಕ್ಕಾಗಿ ಬರೋಬ್ಬರಿ 12 ಕೋಟಿ ರು. ವೆಚ್ಚ ಮಾಡಿದೆ.

 

ಎಂ2ಎಂ ಮಾಧ್ಯಮ ಸಂಸ್ಥೆಗೆ ಸಮೀಕ್ಷೆ ನಡೆಸಲು 1 ಕೋಟಿ ರು, ಮುಂಬೈ ಮೂಲದ ಎಕ್ಸ್‌ ಕೆಡಿಆರ್‍‌ ಸಂಸ್ಥೆಗೆ ಅಧ್ಯಯನದ ಹೆಸರಿನಲ್ಲಿ 1.03 ಕೋಟಿ ರು.ಗಳನ್ನು ನೀಡಿದೆ. ಈ ಎರಡೂ ಸಂಸ್ಥೆಗಳು ಈಗಾಗಲೇ ಮುಂಗಡ ಹಣ ಪಡೆದು ಸಮೀಕ್ಷೆ ನಡೆಸಿತ್ತು.

 

ಈ ಎರಡೂ ಖಾಸಗಿ ಸಂಸ್ಥೆಗಳು ಈಗಾಗಲೇ ಸಮೀಕ್ಷೆ ಮತ್ತು ಅಧ್ಯಯನ ನಡೆಸುತ್ತಿರುವಾಗಲೇ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಮೂಲಕ ನಡೆಸಲಿರುವ  ಸಮೀಕ್ಷೆಗೆ 12 ಕೋಟಿ ರು ವೆಚ್ಚ ಮಾಡುತ್ತಿರುವುದು ದುಂದುವೆಚ್ಚಕ್ಕೆ ದಾರಿಮಾಡಿಕೊಟ್ಟಂತಾಗಿತ್ತು.

 

ಅಂಗನವಾಡಿ, ಆಶಾ ಕಾರ್ಯಕರ್ತೆಯರಿಂದ ಗ್ಯಾರಂಟಿ ಸಮೀಕ್ಷೆಗೆ 12 ಕೋಟಿ; ದುಂದುವೆಚ್ಚಕ್ಕೆ ದಾರಿ

 

ಗೃಹಲಕ್ಷ್ಮಿ ಸೇರಿದಂತೆ 4 ಗ್ಯಾರಂಟಿ ಯೋಜನೆಗಳ ಸಮೀಕ್ಷೆ ನಡೆಸಲು ಎಂ2ಎಂ ಮೀಡಿಯಾ ನೆಟ್‌ ವರ್ಕ್‌ ಕಂಪನಿಗೆ  4(ಜಿ) ವಿನಾಯಿತಿ ನೀಡುವ ಮುನ್ನ ಆರ್ಥಿಕ ಇಲಾಖೆಯ ಅಧಿಕಾರಿಗಳು  ಆಡಳಿತಾತ್ಮಕ  ಪ್ರಕ್ರಿಯೆಗಳನ್ನೇ ನಡೆಸಿರಲಿಲ್ಲ.

ಕೋಟಿ ರು.ವೆಚ್ಚದ ಸಮೀಕ್ಷೆ; ಇಲಾಖೆಗಳ ಪ್ರಸ್ತಾವನೆಯಿಲ್ಲ, ಅಭಿಪ್ರಾಯವೂ ಇಲ್ಲ, ನೇರ ಮಾರ್ಗದಲ್ಲೇ 4(ಜಿ)

 

2023ರ ವಿಧಾನಸಭೆ ಚುನಾವಣೆಯಲ್ಲಿ  ಕಾಂಗ್ರೆಸ್‌ಗೆ ಪೂರ್ಣ ಬಹುಮತ ಬರಲಿದೆ ಎಂದು ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿಯ ಈದಿನ.ಕಾಮ್‌ ವೆಬ್‌ಸೈಟ್‌ ಚುನಾವಣೆ ಪೂರ್ವ ಸಮೀಕ್ಷೆ ಹೇಳಿತ್ತು. ಕಾಂಗ್ರೆಸ್‌ ಪಕ್ಷವು ಸರ್ಕಾರ ರಚಿಸಿದ ಎರಡೇ ಎರಡು ತಿಂಗಳಲ್ಲಿ ಇದೇ ಕಂಪನಿಗೇ 58 ಸಾವಿರ ಕೋಟಿ ರು. ವೆಚ್ಚದ ಗ್ಯಾರಂಟಿಗಳ ಸಮೀಕ್ಷೆ ನಡೆಸಲು 1 ಕೋಟಿ ರು. ನೀಡಿದ್ದು  ಚರ್ಚೆಗೆ ಗ್ರಾಸವಾಗಿತ್ತು.

ಗ್ಯಾರಂಟಿಗಳ ಸಮೀಕ್ಷೆ; ಮಾಧ್ಯಮ ಸಂಸ್ಥೆಗೆ ಕೋಟಿ ರು ಕೊಟ್ಟ ಸರ್ಕಾರ

 

ಗ್ಯಾರಂಟಿಗಳ ಕುರಿತಾಗಿ ಐಸೆಕ್‌, ಮೌಲ್ಯಮಾಪನ ಪ್ರಾಧಿಕಾರಗಳಿಂದ ಸಮೀಕ್ಷೆ ನಡೆಸಬೇಕಿತ್ತು ಎಂದು ಪ್ರತಿಪಾದಿಸಿರುವ ಹಲವು ಅಧಿಕಾರಿಗಳು, ಕೇವಲ ಪ್ರಕಾಶನ, ಮುದ್ರಣದಂತಹ ಸೇವೆಗಳನ್ನು ಒದಗಿಸುತ್ತಿರುವ ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿಗೆ ವಹಿಸಿರುವುದಕ್ಕೆ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದರು.

 

ಸರ್ವೆ ಕಾರ್ಯಕ್ಕೆ ಸರ್ಕಾರದ ಬೆನ್ನು ಬಿದ್ದಿದ್ದ ಎಂ2ಎಂ ಮೀಡಿಯಾ ನೆಟ್‌ವರ್ಕ್ ಕಂಪನಿ; ದಾಖಲೆ ಬಹಿರಂಗ

 

ಗ್ಯಾರಂಟಿಗಳ ಅನುಷ್ಠಾನಕ್ಕೆ ಸಂಬಂಧಿಸಿದ ಆಡಳಿತಾತ್ಮಕ ಪ್ರಕ್ರಿಯೆಗಳು ಜೂನ್‌, ಜುಲೈವರೆಗೂ ಚಾಲ್ತಿಯಲ್ಲಿದ್ದವು. ಇದಾದ ನಂತರವೂ ಯೋಜನೆ ಅನುಷ್ಠಾನದಲ್ಲಿ ಗೊಂದಲ ಮುಂದುವರೆದಿತ್ತು. ಬಹುತೇಕ ಫಲಾನುಭವಿಗಳಿಗೆ ಹಣವೂ ಇದುದವರೆಗೂ ಪಾವತಿಯಾಗಿಲ್ಲ.  ಮಾರ್ಗಸೂಚಿಗಳ ಸಂಬಂಧ ಆಗಸ್ಟ್‌ವರೆಗೂ ತಿದ್ದುಪಡಿಗಳು ಮುಂದುವರೆದಿದ್ದವು. ಕೆಎಸ್‌ಆರ್‍‌ಟಿಸಿಯು 20 ಲಕ್ಷ ರು.ಗಳನ್ನು ನೀಡಿದ್ದರೂ ಇದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನೇ ಒದಗಿಸಿರಲಿಲ್ಲ.

ಕೋಟಿ ರು. ಸಮೀಕ್ಷೆ; 20 ಲಕ್ಷರು ಮುಂಗಡ ನೀಡಿ ದಾಖಲೆಗಳನ್ನೇ ಒದಗಿಸದ ಕೆಎಸ್‌ಆರ್‍‌ಟಿಸಿ

 

ಅಲ್ಲದೇ ಬೆಸ್ಕಾಂ ಕೂಡ  ಸಮಗ್ರ ಕಡತವನ್ನೇ ಮುಚ್ಚಿಟ್ಟಿತ್ತು.

 

ಕೋಟಿ ರು. ವೆಚ್ಚದ ಸಮೀಕ್ಷೆ; ಎಂ2ಎಂ ಕಂಪನಿಗೆ ನೀಡಿರುವ ಆದೇಶದ ಸಮಗ್ರ ಕಡತವನ್ನೇ ಮುಚ್ಚಿಟ್ಟ ಬೆಸ್ಕಾಂ

 

 

ಅದೇ ರೀತಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಸಹ ಎಂ2ಎಂ ಕಂಪನಿಯೊಂದಿಗೆ ಎಂಒಯು ಸೇರಿ ಹಲವು ದಾಖಲೆಗಳೇ ಲಭ್ಯವಿಲ್ಲ ಎಂದು ಆರ್‍‌ಟಿಐ ಅಡಿಯಲ್ಲಿ ಮಾಹಿತಿ ಒದಗಿಸಿತ್ತು.

 

 

ಸಮೀಕ್ಷೆಗೆ ಕೋಟಿ ರು.; ಎಂಒಯು ಸೇರಿ ಹಲವು ವಿವರಗಳೇ ಲಭ್ಯವಿಲ್ಲವೆಂದ ಆಹಾರ ಇಲಾಖೆ

 

ಇದರ ನಡುವೆಯೇ ಸರ್ಕಾರವು ಗ್ಯಾರಂಟಿಗಳನ್ನು ಅಧ್ಯಯನ ನಡೆಸಲು ಮುಂಬೈ ಮೂಲದ ಸಂಸ್ಥೆಗೆ 1.03 ಕೋಟಿ ರು. ವೆಚ್ಚ ಮಾಡಲು 4(ಜಿ) ವಿನಾಯಿತಿ ನೀಡಿತ್ತು.

 

ಗ್ಯಾರಂಟಿ ಸಮೀಕ್ಷೆ, ಅನುಷ್ಠಾನ ಸಮಿತಿ ರಚನೆ ಬೆನ್ನಲ್ಲೇ ಈಗ ಅಧ್ಯಯನ; ಮುಂಬೈ ಸಂಸ್ಥೆಗೆ 1.03 ಕೋಟಿ ರು ನೀಡಿಕೆ

ಗ್ಯಾರಂಟಿ ಯೋಜನೆಗಳನ್ನು  ಏಕಕಾಲಕ್ಕೆ ಐದಾರು ಸಮಿತಿಗಳು ಸಮೀಕ್ಷೆ ನಡೆಸುತ್ತಿರುವುದು ಮತ್ತು ಇದಕ್ಕಾಗಿ ಕೋಟ್ಯಂತರ ರುಪಾಯಿ ವೆಚ್ಚ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆಕ್ಷೇಪಗಳು ವ್ಯಕ್ತವಾಗಿವೆ.

SUPPORT THE FILE

Latest News

Related Posts