ಫಲಾನುಭವಿಗಳ ಸಮಾವೇಶಕ್ಕೆ 31 ಕೋಟಿ ವೆಚ್ಚ; ಜಲಜೀವನ್‌ ಮಿಷನ್‌, ಡಿಸಿಗಳ ಖಾತೆ ಹಣ ಮಾರ್ಗಪಲ್ಲಟ

photo credit;basavarajbommai twitter account

ಬೆಂಗಳೂರು; ಜಿಲ್ಲಾಮಟ್ಟದಲ್ಲಿ ಫಲಾನುಭವಿಗಳ ಸಮ್ಮೇಳನ ನಡೆಸಲು ಮುಂದಾಗಿರುವ ರಾಜ್ಯ ಬಿಜೆಪಿ ಸರ್ಕಾರವು ಇದಕ್ಕಾಗಿ ಜಿಲ್ಲಾಧಿಕಾರಿಗಳ ಹೆಸರಿನಲ್ಲಿನ ಮಿಸಲೇನಿಯಸ್‌ ಪಿ ಡಿ ಖಾತೆಯಲ್ಲಿ ಬಳಕೆಯಾಗದೇ ಉಳಿದಿರುವ ಹಣ ಮತ್ತು ಜಲಜೀವನ್‌ ಮಿಷನ್‌ ಯೋಜನೆಯ ನಿಧಿಗೆ ಕೈ ಹಾಕಿದೆ. ಫಲಾನುಭವಿಗಳ ಸಮ್ಮೇಳನಕ್ಕೆ ಜಿಲ್ಲೆಗೆ ಒಂದು ಕೋಟಿ ರುಪಾಯಿಯಂತೆ ಒಟ್ಟು 31 ಕೋಟಿ ರುಪಾಯಿ ಅನುದಾನ ಮಂಜೂರು ಮಾಡಿರುವುದು ಇದೀಗ ಬಹಿರಂಗವಾಗಿದೆ.

 

ಕೇಂದ್ರ ಮತ್ತು ರಾಜ್ಯ ಸರ್ಕಾರವು ಆಯವ್ಯಯದಲ್ಲಿ ಘೋಷಿಸಿದ್ದ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನದಲ್ಲಿ ಹಿಂದೆ ಬಿದ್ದಿದ್ದರೂ ಜಿಲ್ಲಾಮಟ್ಟದಲ್ಲಿ ಫಲಾನುಭವಿಗಳ ಸಮ್ಮೇಳನ ಆಯೋಜಿಸಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಸುತ್ತೋಲೆ ಹೊರಡಿಸಿದ್ದರ ಬೆನ್ನಲ್ಲೇ ಇದೀಗ ಈ ಸಮಾವೇಶ ನಡೆಸಲು ಜಿಲ್ಲಾಧಿಕಾರಿಗಳ ಪಿ ಡಿ ಖಾತೆ ಮತ್ತು ಜಲಜೀವನ್‌ ಮಿಷನ್‌ ಅನುದಾನದ ನಿಧಿಗೆ ಹಾಕಿರುವುದು ಮುನ್ನೆಲೆಗೆ ಬಂದಿದೆ.

 

ಜಿಲ್ಲಾ ಮಟ್ಟದಲ್ಲಿ ನಡೆಯುವ ಫಲಾನುಭವಿಗಳ ಸಮಾವೇಶ ಕಾರ್ಯಕ್ರಮದ ಆಯೋಜನೆಗೆ ಅನುದಾನ ಬಿಡುಗಡೆ ಸಂಬಂಧ ಕಂದಾಯ ಗ್ರಾಮಗಳ ರಚನಾ ಕೋಶದ ನಿರ್ದೇಶಕರು 2023ರ ಫೆ.28ರಂದು ಆದೇಶ ಹೊರಡಿಸಿದ್ದಾರೆ. ಈ ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಫಲಾನುಭವಿಗಳ ಸಮಾವೇಶ ಏರ್ಪಾಟು ಮಾಡಲು ಸರ್ಕಾರದಿಂದ ವಿವಿಧ ಫಲಾನುಭವಿಗಳಿಗೆ ಊಟ, ವಸತಿ, ಪೆಂಡಾಲ್‌ ಇತ್ಯಾದಿ ವೆಚ್ಚಗಳಿಗಾಗಿ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ತಲಾ 100.00 ಲಕ್ಷ ರು. ಅನುದಾನ ಅವಶ್ಯಕತೆ ಇರುತ್ತದೆ. ಈ ಪೈಕಿ 25.00 ಲಕ್ಷ ರು.ಗಳನ್ನು ಜಲಜೀವನ್‌ ಮಿಷನ್‌ ವತಿಯಿಂದ ಬಿಡುಗಡೆ ಮಾಡಲು ಒಪ್ಪಿರುತ್ತಾರೆ. ಉಳಿದ 75 ಲಕ್ಷ ರು. ಗಳನ್ನು ಜಿಲ್ಲಾಧಿಕಾರಿಗಳ ಮಿಸಲೇನಿಯಸ್‌ ಪಿ ಡಿ ಖಾತೆಯಲ್ಲಿ ವಿವಿಧ ಯೋಜನೆಗಳಿಗೆ ಬಿಡುಗಡೆಯಾದ ಅನುದಾನವನ್ನು ಹೊರತುಪಡಿಸಿ ಬಳಕೆಯಾಗದ ಉಳಿದಿರುವ ಇತರೆ ಅನುದಾನದಿಂದ ಜಿಲ್ಲಾಧಿಕಾರಿಗಳು 75.00 ಲಕ್ಷ ರು.ಗಳಿಗೆ ಮೀರದಂತೆ ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ,’ ಎಂದು ಕಂದಾಯ ಗ್ರಾಮಗಳ ರಚನಾ ಕೋಶದ ನಿರ್ದೇಶಕರು ಆದೇಶದಲ್ಲಿ ಸೂಚಿಸಿದ್ದಾರೆ.

 

ಈಗಾಗಲೇ ಕಲ್ಬುರ್ಗಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರವು ಆಯೋಜಿಸಿದ್ದ ಬೃಹತ್‌ ಸಮ್ಮೇಳನ, ಸಮಾವೇಶಕ್ಕೆ ಪ್ರಧಾನಿ ಸೇರಿದಂತೆ ಬಿಜೆಪಿಯ ರಾಷ್ಟ್ರೀಯ ಘಟಕದ ಹಲವು ಧುರೀಣರು ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ಕೋಟ್ಯಂತರ ರುಪಾಯಿ ಖರ್ಚು ಮಾಡಿ ದುಂದುವೆಚ್ಚ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ಮೇರೆಗೆ ಮುಖ್ಯ ಕಾರ್ಯದರ್ಶಿಗಳು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು ಎಂದು ಗೊತ್ತಾಗಿದೆ.

 

ಜಿಲ್ಲಾಮಟ್ಟದಲ್ಲಿ ಫಲಾನುಭವಿಗಳ ಸಮ್ಮೇಳನ ಆಯೋಜಿಸಬೇಕು ಎಂದು ಎಲ್ಲಾ ಇಲಾಖೆಗಳ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಇಲಾಖಾ ಮುಖ್ಯಸ್ಥರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು 2023ರ ಫೆ.10ರಂದು ನಿರ್ದೇಶಿಸಿ ಪತ್ರ ಬರೆದಿದ್ದರು. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಮುಖ್ಯ ಕಾರ್ಯದರ್ಶಿ ಬರೆದಿರುವ ಪತ್ರದಲ್ಲೇನಿದೆ?

 

ದೇಶದ ಪ್ರಜೆಗಳೆಲ್ಲರ ಸರ್ವತೋಮುಖ ಅಭಿವೃದ್ಧಿಗೆ ಕಂಕಣಬದ್ಧವಾಗಿ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿವೆ. ಪ್ರಸ್ತುತ ಭಾರತ ಸರ್ಕಾರದ ಪ್ರಾಯೋಜಕತ್ವದ ಯೋಜನೆಗಳು ಹಾಗೂ ಸ್ವಯಂ ರಾಜ್ಯ ಸರ್ಕಾರದ ಹಲವು ಯೋಜನೆಗಳ ಮೂಲಕ ಸಮಾಜದ ಕಟ್ಟ ಕಡೆಯ ನಾಗರೀಕರನ್ನು ತಲುಪಲು ನಮ್ಮ ಸರ್ಕಾರವು ಅವಿರತವಾಗಿ ಕ್ರಮ ವಹಿಸಿದೆ.

 

ಕೇಂದ್ರ ಸರ್ಕಾರದ ಪ್ರಾಯೋಜಿತ/ಸ್ವಯಂ ರಾಜ್ಯ ಸರ್ಕಾರದ ಫಲಾನುಭವಿ ಆಧಾರಿತ ಯಲವು ಯೋಜನೆಗಳಿಗೆ ಸಂಪೂರ್ಣವಾಗಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲು ಜಿಲ್ಲಾ ಮಟ್ಟದಲ್ಲಿ ಅಯಾ ಇಲಾಖೆಗಳ ಸಹಯೋಗದಲ್ಲಿ ಆಂದೋಲನ ರೂಪದಲ್ಲಿ ಚಾಲನೆ ನೀಡಲು ತಿಳಿಸಿದೆ. ಈ ಪ್ರಕ್ರಿಯೆಯಲ್ಲಿ ಎಲ್ಲಾ ಫಲಾನುಭವಿ ಆಧರಿತ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕ್ರಮ ವಹಿಸಬೇಕು. ಈ ಕುರಿತು ‘ದಿ ಫೈಲ್‌’ 2023ರ ಫೆ.21ರಂದು ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

ಜಿಲ್ಲಾಮಟ್ಟದಲ್ಲಿ ಫಲಾನುಭವಿಗಳ ಸಮ್ಮೇಳನ ಆಯೋಜನೆಗೆ ನಿರ್ದೇಶನ;ದುಂದುವೆಚ್ಚಕ್ಕೆ ದಾರಿ?

ಫಲಾನುಭವಿಗಳ ಆಧಾರಿತ ಯೋಜನೆಗಳ ಎಲ್ಲಾ ಅರ್ಹ ಫಲಾನುಭವಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸ್ಥಳೀಯ ಶಾಸಕರನ್ನು ಒಳಗೊಂಡಂತೆ ಫಲಾನುಭವಿಗಳ ಸಮ್ಮೇಳನವನ್ನು ಶೀಘ್ರವಾಗಿ ಆಯೋಜಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ನಿರ್ದೇಶಿಸಿದ್ದರು.

 

ಕಂದಾಯ ಗ್ರಾಮಗಳಲ್ಲಿ ವಾಸಿಸುತ್ತಿರುವ ಮಂದಿಗೆ ಹಕ್ಕುಪತ್ರಗಳನ್ನು ಸ್ಥಳೀಯ ತಹಶೀಲ್ದಾರ್‌ಗಳು ನಿಯಮಾನುಸಾರ ವಿತರಿಸುತ್ತಾರೆ. ಚುನಾವಣೆ ವರ್ಷವಾಗಿರುವ ಕಾರಣ ಹಕ್ಕುಪತ್ರಗಳ ವಿತರಣೆಯನ್ನು ರಾಜಕೀಯಕರಣಗೊಳಿಸಲಾಗುತ್ತಿದೆಯಲ್ಲದೇ ಇದರ ಹೆಸರಿನಲ್ಲಿ ಕೋಟ್ಯಂತರ ರುಪಾಯಿ ದುಂದುವೆಚ್ಚ ಮಾಡಲಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಬೊಕ್ಕಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹೀಗಿದ್ದರೂ ಜಿಲ್ಲಾಮಟ್ಟದಲ್ಲಿ ಫಲಾನುಭವಿಗಳ ಸಮಾವೇಶ ನಡೆಸಲು ಹೊರಡಿಸಿರುವ ಸುತ್ತೋಲೆಯು ಬೊಕ್ಕಸದಲ್ಲಿ ಉಳಿದಿರುವ ಹಣವನ್ನೂ ಬರಿದಾಗಿಸಲಿದೆ ಎನ್ನುತ್ತಾರೆ ಉನ್ನತ ಅಧಿಕಾರಿಯೊಬ್ಬರು.

the fil favicon

SUPPORT THE FILE

Latest News

Related Posts