ಕುರಿಗಾಹಿಗಳ ಮೇಲಿನ ದೌರ್ಜನ್ಯ, ಸಾವಿಗೆ ಕಾರಣರಾದವರಿಗೆ ಜೀವಾವಧಿ ಸೇರಿ ಕಠಿಣ ಶಿಕ್ಷೆ; ಸಿದ್ಧಗೊಂಡ ಮಸೂದೆ

ಬೆಂಗಳೂರು; ವಲಸೆ ಕುರಿಗಾಹಿಗಳ ಮತ್ತು ಅವರ ಸ್ವತ್ತುಗಳ ಮೇಲಿನ ದೌರ್ಜನ್ಯ ಮತ್ತು   ಅವರ ಸಾವಿಗೆ ಕಾರಣವಾಗುವ ಉದ್ದೇಶದಿಂದ ಅಥವಾ ಸಾವಿಗೆ ಕಾರಣವಾಗುವ ದೈಹಿಕ ಗಾಯ ಉಂಟು ಮಾಡುವುದು ಅಥವಾ ಅಂತಹ ಕೃತ್ಯದಿಂದ ಸಾವಿಗೆ ಕಾರಣವಾಗುವ ಸಾಧ್ಯತೆಯಿದೆ ಎಂದು ತಿಳಿದಿದ್ದರೂ ವಲಸೆ ಕುರಿಗಾಹಿಯ ಸಾವಿಗೆ ಕಾರಣವಾಗುವ  ವ್ಯಕ್ತಿಗೆ ಜೀವಾವಧಿ ಶಿಕ್ಷೆ ಮತ್ತು  ದಂಡ ವಿಧಿಸುವ ಕುರಿತು  ಇದೇ ಮೊದಲ ಬಾರಿಗೆ ವಿಧೇಯಕವೊಂದನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರವು ತರಲಿದೆ.

 

ರಾಜ್ಯದಲ್ಲಿನ ಕುರಿಗಾಹಿಗಳ ರಕ್ಷಣೆಗೆ ನಮ್ಮ ಸರಕಾರ ಬದ್ಧವಾಗಿದ್ದು, ವಲಸೆ ಕುರಿಗಾಹಿಗಳ ಮತ್ತು ಅವರ ಸ್ವತ್ತುಗಳ ಮೇಲಿನ ದೌರ್ಜನ್ಯ ತಡೆಯುವ ಕಾಯ್ದೆ ರೂಪಿಸಲಾಗುವುದು ಎಂದು ಕಳೆದ ವರ್ಷವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದರು. ಇದೀಗ ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಎರಡು ವರ್ಷವನ್ನು ಪೂರ್ಣಗೊಳಿಸುತ್ತಿರುವ ಹೊತ್ತಿನಲ್ಲೇ ವಲಸೆ ಕುರಿಗಾಹಿಗಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವುದು ಮತ್ತು ಅವರ ಶ್ರೇಯೋಭಿವೃದ್ಧಿಗಾಗಿ ಕಾನೂನಿನ ರಕ್ಷಣೆಯನ್ನೂ ಒದಗಿಸಲು ರೂಪಿಸಿರುವ ವಿಧೇಯಕವು ಮುನ್ನೆಲೆಗೆ ಬಂದಿದೆ.

 

ಪಶು ಸಂಗೋಪನೆ ಇಲಾಖೆಯು ಮಂಡಿಸಲಿರುವ ಈ ವಿಧೇಯಕದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ವಲಸೆ ಕುರಿಗಾಹಿಗಳಿಗೆ ಕಲ್ಯಾಣ ಕಾರ್ಯಕ್ರಮಗಳು, ಅವರ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಗಟ್ಟುವುದು, ಶೈಕ್ಷಣಿಕ ಸೌಲಭ್ಯಗಳು ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳು ಅನುಷ್ಠಾನಗೊಳಿಸುವ ಫಲಾನುಭವಿ ಆಧರಿತ ಯೋಜನೆಗಳು, ಆಹಾರ ಭದ್ರತೆ, ವಿಮೆ, ಆರೋಗ್ಯ ಸೌಲಭ್ಯಗಳು, ಮಾರುಕಟ್ಟೆ ಸೌಲಭ್ಯ, ವಲಸೆ ಕುರಿಗಾಹಿಗಳ ಕಲ್ಯಾಣ ಮಂಡಳಿ ಹೀಗೆ ಹತ್ತಾರು ಉದ್ದೇಶಗಳನ್ನು ಹೊಂದಿರುವುದು ವಿಧೇಯಕದಿಂದ ಗೊತ್ತಾಗಿದೆ.

 

 

ಸಾಂಪ್ರದಾಯಿಕ ವಲಸೆ ಕುರಿಗಾಹಿಗಳ ವಿರುದ್ಧ ನಡೆಯುತ್ತಿರುವ ದೌರ್ಜನ್ಯವನ್ನು ತಡೆಗಟ್ಟುವ ಮೂಲ ಉದ್ದೇಶವನ್ನು ಹೊಂದಿರುವ ಈ ವಿಧೇಯಕವು ವಲಸೆ ಕುರಿಗಾಹಿಗಳಿಗೆ ಸರ್ಕಾರಿ ಭೂಮಿ ಅಥವಾ ಅರಣ್ಯ ಭೂಮಿಗೆ ಪ್ರವೇಶವನ್ನು ಕಾನೂನುಬದ್ಧ ಆಧಾರವಿಲ್ಲದೆ ನಿರಾಕರಿಸಿದರೆ ಒಂದು ತಿಂಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು 2,000 ರುವರೆಗೆ ದಂಡವನ್ನು ವಿಧಿಸಲು ಅವಕಾಶ ಕಲ್ಪಿಸಿದೆ.

 

ವಲಸೆ ಕುರಿಗಾಹಿಗಳ ಸಾಂಪ್ರದಾಯಿಕ ಹಕ್ಕನ್ನು ನಿರಾಕರಿಸುವುದು ಅಥವಾ ಕುರಿಗಳನ್ನು ಮೇಯಿಸುವುದನ್ನು ತಡೆಗಟ್ಟಿದರೆ ಒಂದು ತಿಂಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು 2,000 ರುವರೆಗೆ ದಂಡ ವಿಧಿಸಬಹುದು. ಅದೇ ರೀತಿ ವಲಸೆ ಕುರಿಗಾಹಿಗಳನ್ನು ಉದ್ದೇಶಪೂರ್ವಕವಾಗಿ ಅವಮಾನಿಸಿದರೆ ಅಥವಾ ಮೌಖಿಕವಾಗಿ ನಿಂದಿಸಿದರೆ 2 ತಿಂಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು 4,000 ರುವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಿರುವುದು ವಿಧೇಯಕದಿಂದ ತಿಳಿದು ಬಂದಿದೆ.

 

 

ಈ ವಿಧೇಯಕದಲ್ಲಿ ಮತ್ತೊಂದು ಮಹತ್ವಪೂರ್ಣವಾದ ಕಲಂನ್ನೂ ಸಹ ಉಲ್ಲೇಖಿಸಲಾಗಿದೆ.  ‘ವಲಸೆ ಕುರಿಗಾಹಿಗಳ  ಸಾವಿಗೆ ಕಾರಣವಾಗುವ ಉದ್ದೇಶದಿಂದ ಅಥವಾ ಸಾವಿಗೆ ಕಾರಣವಾಗುವ ದೈಹಿಕ ಗಾಯವನ್ನು ಉಂಟುಮಾಡುವ ಉದ್ದೇಶದಿಂದ ಅಥವಾ ಅಂತಹ ಕೃತ್ಯದಿಂದ ಸಾವಿಗೆ ಕಾರಣವಾಗುವ ಸಾಧ್ಯತೆಯಿದೆ ಎಂದು ತಿಳಿದಿದ್ದರೂ ಸಹ, ಸಾಂಪ್ರದಾಯಿಕ ವಲಸೆ ಕುರುಬನ ಸಾವಿಗೆ ಕಾರಣವಾದರೆ  ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಬಹುದು,’ ಎಂದು ವಿವರಿಸಿದೆ.

 

 

 

ಅದೇ ರೀತಿ ವಲಸೆ ಕುರಿಗಾಹಿಗಳ ಮೇಲೆ ಲೈಂಗಿಕ ಕಿರುಕುಳ ನೀಡಿದರೆ ಅಥವಾ ಆ ರೀತಿಯಲ್ಲಿ ವರ್ತಿಸಿದರೇ 3 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಈ ಎರಡನ್ನು ವಿಧಿಸಬಹುದು. ಹಾಗೆಯೇ ಸಾಂಪ್ರದಾಯಿಕ ವಲಸೆ ಕುರುಬರು ನ್ಯಾಯಾಂಗ ಸಹಾಯವನ್ನು ಪಡೆಯಲು ಅವಕಾಶ ಕಲ್ಪಿಸಿದೆ. ನ್ಯಾಯಾಂಗ ಸಹಾಯವನ್ನು ಪಡೆಯವುದನ್ನು ತಡೆದಲ್ಲಿ  2 ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಗೆ ಜೈಲು ಶಿಕ್ಷೆ ಅಥವಾ 5,000 ರುವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಿದೆ.

 

 

ಅದೇ ರೀತಿ  ಕಾನೂನಿನ ಪ್ರಕ್ರಿಯೆಯನ್ನು ಉಲ್ಲಂಘಿಸಿ, ಸೂಕ್ತ ಪ್ರಾಧಿಕಾರವನ್ನು ಸಂಪರ್ಕಿಸದೆ ಸಾಂಪ್ರದಾಯಿಕ ವಲಸೆ ಕುರುಬರಿಂದ ಹಾನಿಯನ್ನು ಕೋರಿದರೆ, ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಐದು ಸಾವಿರದವರೆಗೆ ದಂಡ ವಿಧಿಸಬಹುದು.

 

 

 

ಸಾಂಪ್ರದಾಯಿಕ ವಲಸೆ ಕುರುಬರಿಗೆ ಸೇರಿದ  ಚರ  ಅಥವಾ ಇತರ ಆಸ್ತಿಗೆ ಹಾನಿಯನ್ನುಂಟುಮಾಡಿದರೆ   ಅಥವಾ ಸಾಂಪ್ರದಾಯಿಕ ವಲಸೆ ಕುರುಬರಿಗೆ ಸೇರಿದ ಆಸ್ತಿಯನ್ನು ಅವರ ಒಪ್ಪಿಗೆಯಿಲ್ಲದೆ ಸ್ಥಳಾಂತರಿಸುವುದು, ಅಥವಾ  ಸಾಂಪ್ರದಾಯಿಕ ವಲಸೆ ಕುರುಬನ ಆಸ್ತಿಯನ್ನು ಕಸಿದುಕೊಂಡರೆ, ಸಾಂಪ್ರದಾಯಿಕ ವಲಸೆ ಕುರುಬನ ಆಸ್ತಿಯ ವಿರುದ್ಧ ಅಪರಾಧ ಎಸಗಿದಂತೆ. ಇಂತಹ ಅಪರಾಧ ಎಸಗಿದವರಿಗೆ  ಒಂದು ತಿಂಗಳವರೆಗೆ ವಿಸ್ತರಿಸಬಹುದಾದ ಅವಧಿಯ ಶಿಕ್ಷೆ ಮತ್ತು ದಂಡ ವಿಧಿಸಬಹುದು ಎಂದು ವಿಧೇಯಕದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಸಾಂಪ್ರದಾಯಿಕ ವಲಸೆ ಕುರುಬನಲ್ಲದ ಯಾರೇ ಆಗಿರಲಿ  ಯಾವುದೇ ಸಾಂಪ್ರದಾಯಿಕ ವಲಸೆ ಕುರುಬನ ಸ್ವಾಧೀನದಲ್ಲಿರುವ   ಯಾವುದೇ ಜಾನುವಾರುಗಳನ್ನು ಆ ವ್ಯಕ್ತಿಯ ಒಪ್ಪಿಗೆಯಿಲ್ಲದೆ ಪಡೆಯುವಂತಿಲ್ಲ. ಅಲ್ಲದೇ  ಮೋಸದಿಂದ ತೆಗೆದುಕೊಳ್ಳಲು ಉದ್ದೇಶಿಸಿದರೆ ಅಂತಹ ಸಾಗಣೆಯನ್ನು ಕೈಗೊಳ್ಳಲು ಆ ಜಾನುವಾರುಗಳನ್ನು ಸ್ಥಳಾಂತರಿಸಿ ಅವುಗಳನ್ನು ತೆಗೆದುಕೊಂಡು ಹೋಗುವುದು ಅಥವಾ ದುರುಪಯೋಗಪಡಿಸಿಕೊಳ್ಳುವುದು ಅಪರಾಧವಾಗಲಿದೆ.

 

ಸಾಂಪ್ರದಾಯಿಕ ವಲಸೆ ಕುರುಬನ ಯಾವುದೇ ಜಾನುವಾರುಗಳಿಗೆ ಯಾವುದೇ ಸಾರ್ವಜನಿಕ ಆಸ್ತಿ, ಸರ್ಕಾರಿ ಭೂಮಿ ಅಥವಾ ಅರಣ್ಯ ಭೂಮಿಗೆ ಪ್ರವೇಶವನ್ನು ನಿರಾಕರಿಸುವ ಉದ್ದೇಶ ಹೊಂದಿದ್ದರೇ  ಸಾಂಪ್ರದಾಯಿಕ ವಲಸೆ ಕುರುಬನ ಜಾನುವಾರುಗಳಿಗೆ ಯಾವುದೇ ಹಾನಿ ಉಂಟುಮಾಡಿದರೆ,  ಸಾಂಪ್ರದಾಯಿಕ ವಲಸೆ ಕುರುಬನ ಆಸ್ತಿಯ ವಿರುದ್ಧ ಅಪರಾಧ ಎಸಗಿದಂತೆ. ಈ ಅಪರಾಧಕ್ಕಾಗಿ  ಎರಡು ತಿಂಗಳವರೆಗೆ ವಿಸ್ತರಿಸಬಹುದಾದ ಅವಧಿಗೆ ಜೈಲು ಶಿಕ್ಷೆ ಮತ್ತು ಐದು ಸಾವಿರದವರೆಗೆ ದಂಡ ವಿಧಿಸಬಹುದು ಎಂದು ವಿಧೇಯಕದಲ್ಲಿ ಹೇಳಲಾಗಿದೆ.

 

ಸಾರ್ವಜನಿಕ ಸೇವಕ ಅಥವಾ ಸರ್ಕಾರಿ ನೌಕರರಾಗಿರುವ ಯಾರಾದರೂ ಸಾಂಪ್ರದಾಯಿಕ ವಲಸೆ ಕುರುಬರಿಗೆ ಗಾಯ ಅಥವಾ ಆರ್ಥಿಕ ನಷ್ಟವನ್ನುಂಟುಮಾಡುವಂತಿಲ್ಲ. ಮತ್ತು ಈ ಉದ್ದೇಶದಿಂದ ಜಾರಿಯಲ್ಲಿರುವ  ಉದ್ದೇಶದಿಂದ ಜಾರಿಯಲ್ಲಿರುವ ಯಾವುದೇ ಕಾನೂನಿನಡಿಯಲ್ಲಿ ನಿರ್ವಹಿಸಬೇಕಾದ ಕರ್ತವ್ಯಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದರೆ, ಅವರಿಗೆ ಒಂದು ತಿಂಗಳವರೆಗೆ ವಿಸ್ತರಿಸಬಹುದಾದ ಅವಧಿಗೆ ಯಾವುದೇ ರೀತಿಯ ಜೈಲು ಶಿಕ್ಷೆ ಮತ್ತು ಐದು ಸಾವಿರದವರೆಗೆ ದಂಡ ವಿಧಿಸಲಾಗುತ್ತದೆ ಎಂದೂ ವಿವರಿಸಿದೆ.

 

ಸಾಂಪ್ರದಾಯಿಕ ವಲಸೆ ಕುರುಬರು ದಾಖಲಿಸುವ ದೂರುಗಳ ಆಧರಿಸಿ ಕ್ರಮ ಕೈಗೊಳ್ಳಲು ಉದ್ದೇಶಪೂರ್ವಕವಾಗಿ ನಿರಾಕರಿಸುವ ಯಾವುದೇ ಪೊಲೀಸ್‌ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೇ ಇದನ್ನು ಅಪರಾಧ ಎಂದೂ ಕರೆಯಲಾಗಿದೆ. ಈ ಅಪರಾಧಗಳು ಜಾಮೀನು ರಹಿತ ಎಂದು ಗುರುತಿಸಬೇಕು ಎಂದೂ ಹೇಳಿದೆ.

 

ಜಾಮೀನುರಹಿತ ಅಪರಾಧವನ್ನು ಪ್ರಶ್ನಿಸಿದಲ್ಲಿ ವಲಸೆ ಕುರಿಗಾಹಿಗಳ ಪರವಾಗಿ ವಿರೋಧಿಸಲು ಸಾರ್ವಜನಿಕ ಅಭಿಯೋಜಕರಿಗೆ ಅವಕಾಶ ನೀಡಲಾಗಿದೆ. ಒಂದೊಮ್ಮೆ ಈ ಅಪರಾಧ ಎಸಗಿರುವವರು   ತಪ್ಪಿತಸ್ಥರಲ್ಲ ಮತ್ತು ಜಾಮೀನಿನ ಮೇಲೆ ಇರುವಾಗ ಅವರು ಯಾವುದೇ ಅಪರಾಧ ಮಾಡುವ ಸಾಧ್ಯತೆಯಿಲ್ಲ ಎಂದು ನಂಬಲು ಸಮಂಜಸವಾದ ಆಧಾರಗಳಿವೆ ಎಂದು ನ್ಯಾಯಾಲಯವು ತೃಪ್ತಿ ವ್ಯಕ್ತಪಡಿಸಬೇಕು. ಮತ್ತು   ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿ, ಅಥವಾ ಮಹಿಳೆ ಅಥವಾ ಅನಾರೋಗ್ಯ ಅಥವಾ ದುರ್ಬಲ, ನ್ಯಾಯಾಲಯವು ನಿರ್ದೇಶಿಸಿದರೆ ಮಾತ್ರ  ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದು ಎಂದು ವಿವರಿಸಿರುವುದು ವಿಧೇಯಕದಿಂದ ಗೊತ್ತಾಗಿದೆ.

 

ಹಾಗೆಯೇ ಇದೇ ವಿಧೇಯಕದಲ್ಲಿ ವಲಸೆ ಕುರಿಗಾಹಿಗಳ ಶ್ರೇಯೋಭಿವೃದ್ದಿಗಾಗಿಯೂ ಹಲವು ಕ್ರಮಗಳ ಕುರಿತು ಪ್ರಸ್ತಾವಿಸಿದೆ. ವಲಸೆ ಕುರಿಗಾಹಿಗಳಿಗೆ ಗುರುತಿನ ಪತ್ರ ನೀಡಲಾಗುತ್ತದೆ. ಈ ಮೂಲಕ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಾಗಬಹುದು.

 

 

‘ಫಲಾನುಭವಿ ಎಂದರೆ ಈ ಕಾಯಿದೆಯ ಸೆಕ್ಷನ್ 4 ರ ಅಡಿಯಲ್ಲಿ ನೋಂದಾಯಿಸಲಾದ ಸಾಂಪ್ರದಾಯಿಕ ವಲಸೆ ಕುರುಬ.  ಸಾಂಪ್ರದಾಯಿಕ ವಲಸೆ ಕುರುಬ ಎಂದರೆ, ಮೇವು, ನೀರು ಮತ್ತು ಸುಸ್ಥಿರತೆಯನ್ನು ಹುಡುಕುತ್ತಾ, ಸಾಂಪ್ರದಾಯಿಕ ಮಾರ್ಗಗಳಲ್ಲಿ ಕುರಿ, ಮೇಕೆ ಅಥವಾ ಅಂತಹ ಜಾನುವಾರುಗಳ ಸಾಂಪ್ರದಾಯಿಕ, ವಲಸೆ ಅಥವಾ ಕಾಲೋಚಿತ ಪಾಲನೆಯಲ್ಲಿ ತೊಡಗಿರುವ ಯಾವುದೇ ವ್ಯಕ್ತಿಯಾಗಿರಬಹುದು,’ ಎಂದು ಹೇಳಿದೆ.

 

ಅದೇ ರೀತಿ ವಲಸೆ ಕುರಿಗಾಹಿಗಳಿಗೆ ಜೀವ ವಿಮೆ, ಪ್ರಾಣಿ ವಿಮೆ, ಆರೋಗ್ಯ ವಿಮೆ  ಸೌಲಭ್ಯವೂ ಸಿಗಲಿದೆ. ಕುರಿಗಳಿಗೆ ಲಸಿಕೆ, ಚಿಕಿತ್ಸೆ, ಹಣಕಾಸಿನ ಪರಿಹಾರ, ಮಾರುಕಟ್ಟೆ ಸೌಲಭ್ಯ, ಆಹಾರ ಭದ್ರತೆ, ಕೌಶಲ್ಯಾಭಿವೃದ್ಧಿ, ಮತ್ತು ಇದಕ್ಕಾಗಿ ಕರ್ನಾಟಕ ವಲಸೆ ಕುರಿಗಾಹಿಗಳ ಕಲ್ಯಾಣ ಮಂಡಳಿಯನ್ನು ಸ್ಥಾಪಿಸುವುದನ್ನು ವಿಧೇಯಕದಲ್ಲಿ ಪ್ರಸ್ತಾವಿಸಿರುವುದು ತಿಳಿದು ಬಂದಿದೆ.

SUPPORT THE FILE

Latest News

Related Posts