ಖರ್ಗೆ ಕುಟುಂಬ ಸದಸ್ಯರಿರುವ ಸೊಸೈಟಿಗೆ 51.15 ಲಕ್ಷ ಸಹಾಯಧನ; ಹಿತಾಸಕ್ತಿ ಸಂಘರ್ಷವಲ್ಲವೇ?

ಬೆಂಗಳೂರು; ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ  ಮಲ್ಲಿಕಾರ್ಜುನ ಖರ್ಗೆ,  ಸಚಿವ ಪ್ರಿಯಾಂಕ್‌ ಖರ್ಗೆ ಅವರು  ಸದಸ್ಯರಾಗಿರುವ  ಕರ್ನಾಟಕ ಪೀಪಲ್ಸ್‌ ಎಜುಕೇಷನ್‌ ಸೊಸೈಟಿಯು ಹಣ ದುರ್ಬಳಕೆ ಮಾಡಿಕೊಂಡಿದೆ ಎಂಬ ದೂರು,  ಲೋಕಾಯುಕ್ತದಲ್ಲಿ ಇನ್ನೂ ವಿಚಾರಣೆ ಹಂತದಲ್ಲಿರುವಾಗಲೇ ಇದೇ ಸೊಸೈಟಿಗೆ ಸರ್ಕಾರವು   51.15 ಲಕ್ಷ ರು.ಗಳ ಸಹಾಯಧನವನ್ನು ಮಂಜೂರು ಮಾಡಿದೆ.

 

ಈ ಸೊಸೈಟಿಗೆ ಸಂಸ್ಥಾಪಕ  ಅಧ್ಯಕ್ಷರಾಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸದಸ್ಯ ಪ್ರಿಯಾಂಕ್‌ ಖರ್ಗೆ ಅವರ  ವಿರುದ್ಧ ಮಣಿಕಂಠ್‌ ಎಂಬುವರು ಲೋಕಾಯುಕ್ತದಲ್ಲಿ 2022ರಲ್ಲೇ ದೂರು ದಾಖಲಿಸಿದ್ದರು.  ಈ ದೂರು ಇನ್ನೂ ಇತ್ಯರ್ಥವಾಗದೇ ಇದ್ದರೂ ಸಹ ಸಮಾಜ ಕಲ್ಯಾಣ ಇಲಾಖೆಯು 2025ರ ಮಾರ್ಚ್‌ 7ರಂದು 51.15 ಲಕ್ಷ ರು.ಗಳ ಅನುದಾನವನ್ನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯು ಸಿ ಎ ನಿವೇಶನವನ್ನು ಹಂಚಿಕೆ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ವಿವಾದವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಸಿ ಎ ನಿವೇಶನವನ್ನು ಮಂಡಳಿಗೆ ಹಿಂದಿರುಗಿಸಿತ್ತು.

 

ಇದರ ಬೆನ್ನಲ್ಲೇ ಕರ್ನಾಟಕ ಪೀಪಲ್ಸ್‌ ಎಜುಕೇಷನ್‌ ಸೊಸೈಟಿಯು ಬೀದರ್‍‌ನಲ್ಲಿ  ನಡೆಸುತ್ತಿರುವ ಸಿದ್ದಾರ್ಥ ಜ್ಯೂನಿಯರ್‍‌  ಕಾಲೇಜಿನ ಕಾಂಪೌಂಡ್‌ ನಿರ್ಮಾಣ  ಕಾಮಗಾರಿಗೆ 51.15 ಲಕ್ಷ ರು.ಗಳನ್ನು ವಿಶೇಷ ಪ್ರಕರಣದಡಿಯಲ್ಲಿ ಮಂಜೂರು ಮಾಡಿರುವುದು ಮತ್ತೊಮ್ಮೆ ಹಿತಾಸಕ್ತಿ ಸಂಘರ್ಷಕ್ಕೆ  ಕಾರಣವಾಗಲಿದೆ.

 

ಕರ್ನಾಟಕ ಪೀಪಲ್ಸ್‌ ಎಜುಕೇಷನ್‌ ಸೊಸೈಟಿಗೆ ಪ್ರಸ್ತುತ ಸಂಸದ ರಾಧಾಕೃಷ್ಣ ದೊಡ್ಡಮನಿ ಅಧ್ಯಕ್ಷರಾಗಿದ್ದರೇ, ಮಲ್ಲಿಕಾರ್ಜುನ ಖರ್ಗೆ ಅವರು ಸದಸ್ಯರಾಗಿದ್ದಾರೆ.

 

 

ಅದೇ ರೀತಿ ಮಾರುತಿ ರಾವ್‌ ಡಿ ಮಾಲೇ, ಶಾಂತಪ್ಪ,  ಆರ್‍‌ ಎಲ್ ಗುಡೂರ್, ಐ ಪಿ ಚಿಪ್ಪಾರ್‍‌, ಮಹಂತಪ್ಪ ಸಾಂಗ್ವಿ, ಮರೆಪ್ಪ, ಮಾಪಣ್ಣ ಗಂಜಗೇರಿ ಮತ್ತು ಸಚಿವ ಪ್ರಿಯಾಂಕ್‌ ಖರ್ಗೆ ಅವರು ಸದಸ್ಯರಾಗಿದ್ದಾರೆ.

 

 

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಧಾರ್ಮಿಕ ಸಂಸ್ಥೆಗಳು, ಸಂಘ ಸಂಸ್ಥೆಗಳು, ಟ್ರಸ್ಟ್‌ಗಳನ್ನು ನಡೆಸುವ ವಿದ್ಯಾರ್ಥಿ ನಿಲಯಗಳು, ಶಾಲಾ ಕಾಲೇಜುಗಳು ಹಾಗೂ ಸಮುದಾಯ ಭವನಗಳ ಕಟ್ಟಡ ನಿರ್ಮಾಣಕ್ಕೆ ಸಹಾಯ ಧನ ನೀಡುವ ಕುರಿತು ಸರ್ಕಾರವು ಈಗಾಗಲೇ ಮಾರ್ಗಸೂಚಿ ಹೊರಡಿಸಿತ್ತು.

 

ಈ ಮಾರ್ಗಸೂಚಿಗಳ ಅನ್ವಯ ಕಲ್ಬುರ್ಗಿಯಲ್ಲಿರುವ  ಕರ್ನಾಟಕ ಪೀಪಲ್ಸ್‌ ಎಜುಕೇಷನ್‌ ಸೊಸೈಟಿಯು ಸಹಾಯಧನ ನೀಡುವ ಸಂಬಂಧ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿತ್ತು. ಈ ಸೊಸೈಟಿಯು ಬೀದರ್‍‌ನಲ್ಲಿ ನಡೆಸುತ್ತಿರುವ ಸಿದ್ಧಾರ್ಥ ಕಿರಿಯ ಕಾಲೇಜಿನ ಕಾಂಪೌಂಡ್‌ ಗೋಡೆ ನಿರ್ಮಾಣಕ್ಕೆ ಸಹಾಯ ಧನ ನೀಡಬೇಕು ಎಂದು ಕೋರಿತ್ತು. ಇದರ ಅನ್ವಯ ಸಮಾಜ ಕಲ್ಯಾಣ ಇಲಾಖೆಯು ಏಕ ಕಡತವನ್ನು  ತೆರೆದಿತ್ತು.

 

ಈ ಮನವಿಯನ್ನು ಪರಿಗಣಿಸಿದ್ದ ಸಮಾಜ ಕಲ್ಯಾಣ ಇಲಾಖೆಯ ಆಯಕ್ತರು ಪ್ರಸ್ತುತ ಜಾರಿಯಲ್ಲಿರುವ ಮಾರ್ಗಸೂಚಿಗಳ ಅನ್ವಯ ಅನುದಾನ ಮಂಜೂರಾತಿ ಕೋರಿ ಕಡತವನ್ನು ಸಲ್ಲಿಸಿದ್ದರು. ಈ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಸಮಾಜ ಕಲ್ಯಾಣ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿದ್ದರು. ಸೊಸೈಟಿಯ ಕೋರಿಕೆ ಮೇರೆಗೆ 51.15 ಲಕ್ಷ ರು.ಗಳ ಅನುದಾನವನ್ನು ಮಂಜೂರು ಮಾಡಿ ಆದೇಶ ಹೊರಡಿಸಿರುವುದು ಗೊತ್ತಾಗಿದೆ.

 

 

ಇದಕ್ಕೆ ತಗಲುವ ವೆಚ್ಚವನ್ನು 2024-25ನೇ ಸಾಲಿನ ಪರಿಶಿಷ್ಟ ಜಾತಿಯ ಧಾರ್ಮಿಕ, ಶಿಕ್ಷಣ ಸಂಸ್ಥೆ, ಶಾಲಾ ಕಟ್ಟಡ, ಸಮುದಾಯ ಭವನಗಳಿಗೆ ನೀಡುವ ರಾಜಸ್ವ ಲೆಕ್ಕ ಶೀರ್ಷಿಕೆಯಡಿಯಲ್ಲಿ (2225-01-796-0-02) ಭರಿಸಿರುವುದು ಆದೇಶದಿಂದ ತಿಳಿದು ಬಂದಿದೆ.

 

 

ಈ ಕಟ್ಟಡ ನಿರ್ಮಿಸಲು ಬೇಕಾಗುವ ಹೆಚ್ಚುವರಿ ಹಣವನ್ನು ಸಂಸ್ಥೆಯೇ ಭರಿಸಬೇಕು. ಮತ್ತೊಮ್ಮೆ ಸರ್ಕಾರಕ್ಕೆ ಯಾವುದೇ ಪ್ರಸ್ತಾವನೆ ಸಲ್ಲಿಸಲು ಅವಕಾಶವಿರುವುದಿಲ್ಲ. ಮತ್ತು 2014ರ ಮೇ 15ರಂದು ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕು. ಮಾರ್ಗಸೂಚಿಗಳ ಅನ್ವಯ ದಾಖಲೆಗಳು ಲಭ್ಯವಿಲ್ಲದಿದ್ದಲ್ಲಿ ದಾಖಲೆಗಳನ್ನು ಪಡೆದು ಜಿಲ್ಲಾಧಿಕಾರಿಗಳು ಅನುದಾನವನ್ನು ಬಿಡುಗಡೆ ಮಾಡಬೇಕು  ಎಂದು ಷರತ್ತನ್ನು ವಿಧಿಸಿರುವುದು ಗೊತ್ತಾಗಿದೆ.

 

 

ಕರ್ನಾಟಕ ಪೀಪಲ್ಸ್‌ ಎಜುಕೇಷನ್‌ ಸೊಸೈಟಿಯು ಬೀದರ್‍‌ನಲ್ಲಿ ಸಿದ್ದಾರ್ಥ ಕಾಂಪೋಸಿಟ್‌ ಕಾಲೇಜು, ಜ್ಯೂನಿಯರ್‍‌ ಕಾಲೇಜು, ಪ್ರಥಮ ದರ್ಜೆ ಕಾಲೇಜು, ಎಚ್‌ಪಿಎಸ್‌ ಶಾಲೆಗಳನ್ನು ನಡೆಸುತ್ತಿದೆ.

 

 

2021ರ ಅಂತ್ಯಕ್ಕೆ ಈ ಸೊಸೈಟಿಯು ಅನುದಾನ ಮತ್ತು ದೇಣಿಗೆ ರೂಪದಲ್ಲಿ ಒಟ್ಟಾರೆ 23, 93, 68,090.43 ರುಗ.ಳನ್ನು ಸ್ವೀಕರಿಸಿತ್ತು.

 

 

 

ಲೋಕಾಯುಕ್ತದಲ್ಲಿರುವ ದೂರಿನಲ್ಲೇನಿದೆ?

 

ಕಲ್ಬುರ್ಗಿ  ನಗರದ ಪೊಲೀಸ್ ಭವನ ಕಟ್ಟಡದ ಪಕ್ಕದಲ್ಲಿ ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಸ್ಮಾರಕ ಸಮಿತಿಗೆ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಎಂದು 1981 ಆಗಸ್ಟ್ 6 ರಂದು 36 ಸಾವಿರ ಚದರ ಅಡಿ ವಿಸ್ತೀರ್ಣದ ನಿವೇಶನವನ್ನು ರಾಜ್ಯ ಸರ್ಕಾರ ಮಂಜೂರು ಮಾಡಿತ್ತು. ಆಗ ಸ್ವತಃ ಕಂದಾಯ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು ಅಂದಿನ ರಾಜ್ಯ ಸರ್ಕಾರಕ್ಕೆ ನಿವೇಶನ ಕೋರಿ ಪತ್ರ ಬರೆದ ಕಾರಣಕ್ಕೆ ನಿವೇಶನ ಮಂಜೂರು ಮಾಡಲಾಗಿತ್ತು. ಅದರನ್ವಯ ಕಲ್ಯಾಣ ಮಂಟಪ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿತ್ತು ಎಂದು ದೂರಿನಲ್ಲಿ ಹೇಳಲಾಗಿದೆ.

 

 

ಆದರೆ, ಕಳೆದ 4 ವರ್ಷಗಳಿಂದ ಈ ಕಲ್ಯಾಣ ಮಂಟಪದಲ್ಲಿ ಮದುವೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಬದಲಿಗೆ, ಕರ್ನಾಟಕ ಪೀಪಲ್ಸ್ ಎಜುಕೇಷನ್ ಸೊಸೈಟಿ (ಕೆಪಿಇಎಸ್) ಕಚೇರಿಯಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಹಾಗೂ  ಮಣಿಕಂಠ ರಾಠೋಡ್ ಎಂಬುವರು  ಲೋಕಾಯುಕ್ತ ಕಚೇರಿಗೆ 2022ರ ಡಿಸೆಂಬರ್‍‌ 21ರಂದು  ಸಲ್ಲಿಸಿದ್ದ ದೂರಿನಲ್ಲಿ ವಿವರಿಸಿದ್ದರು.

 

ಈ ದೂರಿನ ಕುರಿತು  ಲೋಕಾಯುಕ್ತ ಸಂಸ್ಥೆಯು 3 ವರ್ಷಗಳಾದರೂ ತನಿಖೆಯನ್ನು ಪೂರ್ಣಗೊಳಿಸಿಲ್ಲ. ಇದೇ ಮಾರ್ಚ್‌ 25ರಂದು ಈ ದೂರಿನ ಕುರಿತು ವಿಚಾರಣೆ ನಿಗದಿಪಡಿಸಿದೆ.

 

ಮಲ್ಲಿಕಾರ್ಜುನ ಖರ್ಗೆ ಕರ್ನಾಟಕ ಪೀಪಿಲ್ಸ್ ಎಜುಕೇಶನ್ ಸೊಸೈಟಿಯ ಸ್ಥಾಪಕ ಅಧ್ಯಕ್ಷರಾಗಿದ್ದರು. ಸದ್ಯ ಅವರು ಸೊಸೈಟಿಯಲ್ಲಿ ಯಾವುದೇ ಹುದ್ದೆ ಹೊಂದಿಲ್ಲ. ಆದರೆ, ಇವರ ಮಗ ಪ್ರಿಯಾಂಕ್ ಖರ್ಗೆ ಅದರ ಸದಸ್ಯರಾಗಿದ್ದಾರೆ.‌ ಷರತ್ತಿನ ಪ್ರಕಾರ ಈ ನಿವೇಶನದಲ್ಲಿ ಕಲ್ಯಾಣ ಮಂಪಟ ಹೊರತುಪಡಿಸಿ ಬೇರೆ ಯಾವುದೇ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

 

ಆದರೆ, ತಮ್ಮ ಪ್ರಭಾವ ಮತ್ತು ಅಧಿಕಾರ ದುರುಪಯೋಗ ಮಾಡಿಕೊಂಡು ಪೀಪಲ್ಸ್ ಎಜುಕೇಷನ್ ಸೊಸೈಟಿಯ ಕಚೇರಿಯನ್ನು ತೆರೆಯಲಾಗಿದೆ. ಈ ಪ್ರದೇಶದ ಸದ್ಯದ ಮಾರುಕಟ್ಟೆ ದರ 50 ಕೋಟಿ ಇದೆ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ವಿರುದ್ಧ ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದೇನೆ ಎಂದು ರಾಠೋಡ ಹೇಳಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts