ಬೆಂಗಳೂರು; ಪ್ರತಿಭಾನ್ವಿತ ವಿದ್ಯಾರ್ಥಿಗಳು ಸರ್ಕಾರದ ಆರ್ಥಿಕ ಸಹಾಯದ ಕೊರತೆಯಿಂದ ಬಳಲಬಾರದು ಎಂದು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಹಲವಾರು ಪ್ರಕರಣಗಳಲ್ಲಿ ತೀರ್ಪು ನೀಡಿದ್ದರೂ ಸಹ ಸೂಕ್ತ ಪ್ರೋತ್ಸಾಹ ಧನ ದೊರಕಿಲ್ಲ ಎಂದು ವೈದ್ಯಕೀಯ ವಿದ್ಯಾರ್ಥಿನಿಯಾಗಿರುವ ದಲಿತ ಸಮುದಾಯದ ನಿವೇದಿತ ವೆಂಕಟೇಶ್ ಎಂಬುವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ನಿವೇದಿತ ವೆಂಕಟೇಶ್ ಅವರು ಸೂಕ್ತ ವಿದ್ಯಾರ್ಥಿ ವೇತನ ಪಡೆಯಲು ಇಲಾಖೆ ಮತ್ತು ಸಚಿವರುಗಳಿಗೆ ಕೋರಿಕೆ ಸಲ್ಲಿಸಿ 2-3 ವರ್ಷಗಳಾದರೂ ಸಹ ಸೂಕ್ತ ಪ್ರೋತ್ಸಾಹ ಧನ ದೊರಕಿಲ್ಲ. ಮತ್ತು ಈ ವಿಚಾರದಲ್ಲಿ ಸಮಾನವಾಗಿ ಕಾಣುತ್ತಿಲ್ಲ. ಅಲ್ಲದೇ ಪ್ರೋತ್ಸಾಹ ಧನ ಮಂಜೂರು ಮಾಡುವಲ್ಲಿಯೂ ಸರ್ಕಾರವು ತಾರತಮ್ಯ ಎಸಗಿದೆ. ಹೀಗಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪ ಯೋಜನೆಗಳಿಗೆ ಹಂಚಿಕೆ ಮಾಡಿದ್ದ ಅನುದಾನದ ಪೈಕಿ 2,892 ಕೋಟಿ ರು. ವೆಚ್ಚ ಮಾಡದೇ ಬಾಕಿ ಉಳಿಸಿಕೊಂಡಿದ್ದರೂ ಸಹ ದಲಿತ ಸಮುದಾಯದ ವಿದ್ಯಾರ್ಥಿನಿಗೆ ಪ್ರೋತ್ಸಾಹ ಧನ ದೊರಕಿಲ್ಲ. ಈ ಸಂಬಂಧ ನಿವೇದಿತಾ ವೆಂಕಟೇಶ್ ಅವರು ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ರಿಟ್ ಆಫ್ ಮ್ಯಾಂಡಮಸ್ ಅರ್ಜಿಯಲ್ಲಿ ವಿವರಿಸಿದ್ದಾರೆ.
ಇದರ ಪ್ರತಿ ಮತ್ತು ಇದಕ್ಕೆ ಸಂಬಂಧಿಸಿದ ಪೂರಕ ದಾಖಲೆಗಳು ‘ದಿ ಫೈಲ್’ಗೆ ಲಭ್ಯವಾಗಿದೆ.
ಈ ಅರ್ಜಿಯನ್ನು ಪುರಸ್ಕರಿಸಿರುವ ಹೈಕೋರ್ಟ್ ಇದೇ 27ರಂದು ವಿಚಾರಣೆ ನಡೆಸಲಿದೆ. ಈ ಸಂಬಂಧ ಪ್ರತಿವಾದಿಗಳಾದ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್, ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಮತ್ತು ಇಲಾಖೆಯ ಆಯುಕ್ತರಿಗೆ ನೋಟೀಸ್ ಜಾರಿಗೊಳಿಸಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾರ್ಹತೆ ಪಡೆಯುವ ಉದ್ದೇಶದಿಂದ ಶಿಕ್ಷಣ ನಿಧಿ ಸ್ಥಾಪಿಸಲಾಗಿದೆ. ಈ ನಿಧಿ ಮೂಲಕ ಕಾಲೇಜು ಶುಲ್ಕದ ಮೊತ್ತ 1.05 ಕೋಟಿ ರು. ಅನುದಾನ ಬಿಡುಗಡೆ ಮಾಡಬೇಕು ಎಂದು ನಿವೇದಿತ ವೆಂಕಟೇಶ್ ಅವರು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಿಂದಲೂ ಕೋರುತ್ತಲೇ ಬಂದಿದ್ದಾರೆ.
‘ಎಂಬಿಬಿಎಸ್‌ಗೆ ಸಾಲ ಮಾಡಿ ವಿದ್ಯಾಭ್ಯಾಸ ಮಾಡುತ್ತಿದ್ದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತಿದ್ದೇನೆ. ಆದ್ದರಿಂದ ನಾನು ಕಾಲೇಜಿಗೆ ಪಾವತಿಸಿರುವ ಶಿಕ್ಷಣ ಶುಲ್ಕ 1,05,00,000 ರು.ಗಳನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮಂಜೂರು ಮಾಡಬೇಕು,’ ಎಂದು ನಿವೇದಿತಾ ವೆಂಕಟೇಶ್ ಅವರು 2024ರ ಜೂನ್ 6ರಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ ಹೆಚ್ ಸಿ ಮಹದೇವಪ್ಪ ಅವರಿಗೆ ಮನವಿ ಸಲ್ಲಿಸಿದ್ದರು.
ಅಲ್ಲದೇ 2021-22ರಿಂದಲೂ ಅಂದಿನ ಮತ್ತು ಇಂದಿನ ಸಚಿವರಿಗೂ ನಿವೇದಿತಾ ವೆಂಕಟೇಶ್ ಅವರು ಮನವಿ ಸಲ್ಲಿಸಿದ್ದರು.
ಖುದ್ದು ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ 1.05 ಕೋಟಿ ರು.ಗಳ ವಿದ್ಯಾರ್ಥಿ ವೇತನವನ್ನು ಬಿಡುಗಡೆ ಮಾಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದರು.
2024ರ ಅಕ್ಟೋಬರ್ 2ರ ಆದೇಶವನ್ನು ಪೂರ್ವಾನ್ವಯವಾಗಿ ಜಾರಿ ಮಾಡಲು ಅವಕಾಶ ಇಲ್ಲ. ಹಾಗೂ ಈಗಾಗಲೇ ವಿದ್ಯಾರ್ಥಿನಿಯು ಎಂಬಿಬಿಎಸ್ ಕೋರ್ಸ್ ಪೂರ್ಣಗೊಳಿಸಿದ್ದಾರೆ. ಸರಾಸರಿ ಶೇ.60 ಅಂಕಗಳೊಂದಿಗೆ ಉತ್ತೀರ್ಣಳಾಗಿದ್ದಲ್ಲಿ 25.00 ಲಕ್ಷ ರು. ಪ್ರೋತ್ಸಾಹ ಧನವನ್ನು ಮಂಜೂರು ಮಾಡಲು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ನಿರ್ದೇಶಿಸಿದ್ದರು.
ನಿವೇದಿತ ವೆಂಕಟೇಶ್ ಅವರ ಕೋರಿಕೆಯಂತೆ 1.05 ಕೋಟಿ ರು. ಬಿಡುಗಡೆ ಮಾಡಿಲ್ಲ. ಬದಲಿಗೆ ಸಮಾಜ ಕಲ್ಯಾಣ ಇಲಾಖೆಯು 25.00 ಲಕ್ಷ ರು.ಗಳನ್ನು ಮಾತ್ರ ಮಂಜೂರು ಮಾಡಿ 2024ರ ಡಿಸೆಂಬರ್ 5ರಂದು ಆದೇಶ ಹೊರಡಿಸಿತ್ತು.
ಆದರೆ ಮತ್ತೊಂದು ವಿಶೇಷ ಪ್ರಕರಣದಡಿಯಲ್ಲಿ ಬೆಂಗಳೂರಿನ ಆಕಾಶ್ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಅಂಕಿತಾ ಎಂಬ ವಿದ್ಯಾರ್ಥಿನಿಗೆ 57,55,684 ರು.ಗಳನ್ನು 2024ರ ಫೆಬ್ರುವರಿ 29ರಂದು ಮಂಜೂರು ಮಾಡಿತ್ತು.
ಅದೇ ರೀತಿ ಮುಂಬೈನಲ್ಲಿರುವ ಆಮಿಟಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗಮಾಡುತ್ತಿರುವ ಊರ್ಮಿಳ ಎ ಎಂಬ ವಿದ್ಯಾರ್ಥಿನಿಗೆ 2022ರ ಮಾರ್ಚ್ 4ರಂದು 7.53 ಲಕ್ಷ ರು.ಗಳನ್ನು ಮಂಜೂರು ಮಾಡಿ ಆದೇಶ ಹೊರಡಿಸಿತ್ತು.
ಈ ಅಂಶವನ್ನು ಅರ್ಜಿದಾರರಾಗಿರುವ ನಿವೇದಿತಾ ವೆಂಕಟೇಶ್ ಅವರು ಅರ್ಜಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಮಂಜೂರು ಮಾಡಿರುವ ಪ್ರೋತ್ಸಾಹ ಧನ ಮಂಜೂರು ಮಾಡಿರುವುದಕ್ಕೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳನ್ನು ಪಡೆಯಬೇಕು ಮತ್ತು 2024ರ ಜೂನ್ ಮತ್ತು ಅಕ್ಟೋಬರ್ 24ರಂದು ಹೊರಡಿಸಿರುವ ಸರ್ಕಾರದ ಆದೇಶದ ಪ್ರಕಾರ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಬೇಕು ಎಂದು ಅರ್ಜಿಯಲ್ಲಿ ಕೋರಿರುವುದು ತಿಳಿದು ಬಂದಿದೆ.